ಈಗ ಹುಟ್ಟಬೇಕಿತ್ತಂತೆ

ಆಕೆಗೊಂದು ಕೊರಗು
ಈ ಕಾಲದಲ್ಲಿ ಹುಟ್ಟಬೇಕಂತೆ
ರೇಡಿಯೋ, ಟಿವಿ ಅಷ್ಟೇ ನೋಡಿದ ಜೀವ
ಮೊಬೈಲ್, ಕಂಪ್ಯೂಟರ್, ನೆಟ್,
ಆಪ್, ಆನ್ಲೈನ್‌ಗಳ ಕೆಲಸಕ್ಕೆ
ದಂಗಾಗಿದೆ, ಕಾರ್ಯವೈಕರಿ
ಸೊಬಗ ಸೃಷ್ಟಿಸಿದೆ

ಮೊಬೈಲ್ ಮೇಲೆ ಬೆರಳಾಡಿಸುತ್ತ
ಕುಳಿತವರ ನೋಡಿ ತನಗೆ ಕಷ್ಟ
ಬೇಸರವ ಹೊತ್ತು ಮಂದಗಣ್ಣು ಶಪಿಸುತ್ತ
ಹುಟ್ಟಿದ್ದರೆ ಈಗ ಬರುತ್ತಿತ್ತು
ಎಲ್ಲ ನನಗೂ ನನ್ನ ಕೈಲೊಂದು
ಸ್ಮಾರ್ಟ್ ಫೋನ್, ಬಟನ್ ಫೋನ್ ಬದಲಾಗಿ

ಅವಳಿಗೊಂದು ತಿಕ್ಕುವ ಫೋನ್
ಬರುವುದು ಕಷ್ಟವಲ್ಲ, ಪಿಂಚಣಿ ಸೌಲಭ್ಯದವಳು
ಆಕೆ ಬೆರಳನ್ನು ತೇಲಾಡಿಸಿಲೂಬಹುದು
ನಾವೇ ತಡೆದಿದ್ದೇವೆ, ನಮಗಾದ
ಚಟ, ಆಕೆಗೆ ಬೇಡವೆಂದು

ರೇಡಿಯೋ ಹಾಡು
ಕೇಳಿದಾಕೆ, ಈಗ ಧಾರಾವಾಹಿ
ಹೆಚ್ಚು ನೋಡುತ್ತಿದ್ದಾಳೆ
ಹಳೆಯ ಹಾಡು ನೆನಪಿಸಿದಾಗ
ತೋರಿಸುತ್ತೇನೆ ಯೂಟ್ಯೂಬ್ ನಲ್ಲಿ
ಅವಾಗವಾಗ

ತಂತ್ರಜ್ಞಾನದ ಮಂಗವೇ ಚಂದ
‘ಹುಟ್ಟಬೇಕಿತ್ತು ನಾನು ಈಗ’
ಸದಾ ಜಪಿಸುತ್ತಾಳೆ
ನನ್ನ ಅವಳಿಗೆ ಗೊತ್ತಿಲ್ಲ
ಆಕೆಯದು ಗುಪ್ತರ ಯುಗ

ಚಂದ ಕಾಣುವಲ್ಲಿ
ತುಂಬಿದೆ ಹುಳುಕು
ಸಂಕಟ ಹೊತ್ತಿದ್ದರೂ
ಸೆಲ್ಫಿ ಮುಖ ಹೊತ್ತು
ತಿರುಗುತ್ತಿದ್ದೇವೆ ಸದಾ ನಗು
ಮನಸ್ಸಿನ ಹೊಯ್ದಾಟಗಳ
ಮರೆಮಾಚುತ್ತ

ಅವ್ವಳಿಗೆ ಹೇಳಬೇಕಾಗಿದೆ
ಸುವರ್ಣ ಕಾಲದ ಸೌಭಾಗ್ಯ
ಈಗ ಹುಟ್ಟಬೇಕೆಂಬ
ಕೊರಗ ನಿವಾರಿಸಿ