ಆದರ್ಶಗಳ ಹೂಗುಚ್ಛ ಹಿಡಿದು
ಆದರ್ಶಗಳ ಹೂಗುಚ್ಛ ಕೈಯಲ್ಲೇ
ಹಿಡಿದು ಕಥೆ, ಕವನ, ಲೇಖನಗಳ
ಉಪದೇಶ ಸಾರುವ ನಾವು
ಕೋಪ ಬೇಡ, ಪ್ರೀತಿಸಿ, ಸಹಕರಿಸಿ,
ಮೋಸ- ವಂಚನೆ ಬೇಡ, ಹಿಂಸೆ ಬೇಡ,
ಸಹಾಯ, ಸಹಬಾಳ್ವೆ… ಬ್ಲಾ.. ಬ್ಲಾ.. ಬ್ಲಾ..
ಬರೆಯುವ ಕಲಾಕಾರಿಕೆಯ ಕುಸುರಿಯಲಿ
ವ್ಯಸ್ತ ನಮಗೆ ಪ್ರತಿಕ್ಷಣ ಬಂಗಾರವೇ
ಆತ್ಮೀಯರ ಮಾತು ಕಾಲಹರಣ, ಮತ್ತೊಂದು
ಕವನವೋ, ಲೇಖನವೋ ಬರಿಯಬಹುದು
ಮತ್ತದೇ ಆದರ್ಶಗಳ ಹೊತ್ತು
ಮನುಷ್ಯ ಪ್ರೀತಿ ಆತ್ಮೀಯತೆಗಳ
ಟೊಳ್ಳು ಭಂಡಾರ ಬಿಚ್ಚುವವರು
ಮಾತನಾಡಬಹುದಲ್ವಾ ನಮ್ಮದೇ
ಗಂಡ/ಹೆಂಡತಿ, ಮಕ್ಕಳ ಜೊತೆ
ದಿನದಲ್ಲಿ ಒಮ್ಮೆಯಾದರೂ
ಬರೆದು ಯಾವ ಪಟ್ಟಕ್ಕೇರಬೇಕಿದೆ
ಹೊಳೆಯುವ ವಜ್ರದ ಕಿರೀಟ ತೊಟ್ಟು
ಕನ್ನಡದ ಮುತ್ತು ರತ್ನಗಳು
ಉಳಿಸಿಲ್ಲ ಯಾವ ವಿಷಯವನ್ನೂ
ಹೀಗೆಂದಾಗ ‘ನಕಾರಾತ್ಮಕತೆ’ಯೆಂದು ಟೀಕಿಸದಿರಿ
ಬದುಕಿದ್ದಾಗಲೇ ಜೀವಗಳೊಂದಿಗೆ
ಮಾತಾಡಿ ತುಸು ಹೊತ್ತು
ಕಾಲಹರಣ ಎಂದು ತಿಳಿಯದೇ
ಮತ್ತೆ ಓದಿ ಓದಿ
ಮತ್ತೆ ಬರೆಯಿರಿ ಬರೆಯಿರಿ
ಯಾಕಂದ್ರೆ ನಮ್ಮ ಸುತ್ತಲಿರುವ
ಆತ್ಮೀಯರು ಜೀವಂತ
ಭಾವನೆಗಳ ಸರದಾರರು
ಇದನ್ನರಿಯದ ನಾವು….
ನಮ್ಮದೇ ಕಥೆ, ಕವನ, ಲೇಖನಗಳು
ಗಹಗಹಿಸಿ ನಗುತ್ತಿವೆ ಎಲ್ಲೋ ಕುಳಿತು
ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ
Liked this poem … you’ve put it across so well, but it ‘had’ to be said through a ‘poem’ … that is the interesting part … 🙂👍🌼
Thanks a lot sir.