ಮೂಲನಿವಾಸಿ ಜನಸಮುದಾಯಗಳ ಬೆಂಬಿಡದ ಪ್ರಯತ್ನಗಳಿಂದ ಅವರ ಸಂಸ್ಕೃತಿಗಳು, ಭಾಷೆಗಳ ಬಗ್ಗೆ ಗೌರವ ಹೆಚ್ಚುತ್ತಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಬಹುಸಂಸ್ಕೃತಿಗಳ ಪ್ರಭಾವ, ವಲಸಿಗರ ಸಂಖ್ಯೆ ಜನರ ಮನೋಭಾವನೆಯನ್ನು ಬದಲಿಸುತ್ತಿದೆಯೇನೋ. ಇವರುಗಳ ಬಹುಸಂಸ್ಕೃತಿ ಆಚಾರ-ವಿಚಾರಗಳ, ಆಹಾರಪದ್ಧತಿಗಳ ವೈವಿಧ್ಯತೆಗಳಿಂದ, ಸಾಮ್ಯತೆಗಳಿಂದ ಪರಸ್ಪರರನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ವಿಸ್ತರಿಸುತ್ತಿವೆ. ಇದೆಲ್ಲದರ ಜೊತೆಗೆ ಹಿನ್ನೆಲೆಯಲ್ಲಿ ರೆಫೆರೆಂಡಮ್ ವಿಷಯ ಇನ್ನೂ ಜೀವಂತವಾಗಿದೆ ಎನ್ನುವುದು ಸಮಾಧಾನದ ವಿಷಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ನೆನ್ನೆ ಜನವರಿ ೨೬ ರಂದು ಆಸ್ಟ್ರೇಲಿಯಾ ಡೇ ಅನ್ನೋ ವಿಪರ್ಯಾಸದ ದಿನ ಬಂತು, ಹೋಯ್ತು. ಪ್ರತಿವರ್ಷದಂತೆ ಈ ಬಾರಿಯೂ ಅದರ ಆಚರಣೆಯ ಕುರಿತು ಎಲ್ಲಾ ರೀತಿಯ ಚರ್ಚೆಗಳಾಯ್ತು. ನಾನು ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದಂತೆ ಆಸ್ಟ್ರೇಲಿಯಾದ ಮೂಲನಿವಾಸಿಗಳಿಗೆ ಈ ದಿನಾಂಕ ದುಃಖ, ನೋವು ತರುವ ದಿನ. ದಾಖಲೆಗಳ ಪ್ರಕಾರ ಜನವರಿ ೨೬, ೧೭೮೮ ರಂದು ಬ್ರಿಟಿಷ್ ಕ್ಯಾಪ್ಟನ್ ಆರ್ಥರ್ ಫಿಲಿಪ್ ತನ್ನ ಹಡಗಿನೊಂದಿಗೆ ಈಗಿನ ಸಿಡ್ನಿ ಪ್ರದೇಶದಲ್ಲಿರುವ ಕೊಲ್ಲಿಯನ್ನು (Sydney Cove) ಪ್ರವೇಶಿಸಿ ಅವನ ಸೈನಿಕರ ತುಕಡಿಯೊಂದಿಗೆ ಬ್ರಿಟನ್ನಿನ ಯೂನಿಯನ್ ಜಾಕ್ ಧ್ವಜವನ್ನು ಹಾರಿಸಿ, ಈ ನಾಡನ್ನು ನಾವು ಆಕ್ರಮಿಸಿದ್ದೀವಿ (occupation), ಇದು ನಮಗೆ (ಬ್ರಿಟಿಷರಿಗೆ) ಸೇರಿದ ನಾಡು, ಎಂದು ಘೋಷಿಸಿದ ದಿನ. ಇದು ಹೊಸ ಆಸ್ಟ್ರೇಲಿಯಾ ಚರಿತ್ರೆಯ ಭವಿಷ್ಯವಾಣಿಯಾಯ್ತು. ಹೊಸ ಭಾಷ್ಯವನ್ನು ಬರೆಯಿತು. ಹೀಗಾಗಿ ಆಸ್ಟ್ರೇಲಿಯಾ ಡೇ ಆಚರಣೆ ಅನೇಕ ವಸಾಹತುಶಾಹಿ-ಮೂಲವುಳ್ಳ ಬಿಳಿಯರಿಗೆ ಹರ್ಷ ತರುತ್ತದೆ. ಹಲವರಿಗೆ ಅಂದು ಸಿಗುವ ಸಾರ್ವಜನಿಕ ರಜೆಯತ್ತ ಧ್ಯಾನ! ಹೇಳಿಕೇಳಿ, ಬೇಸಿಗೆಯ ತೀವ್ರತೆಯ ಜನವರಿಯಲ್ಲಿ ಮತ್ತೊಂದು ದಿನ ಬೀಚ್, ನದಿ, ಸರೋವರಗಳಿಗೆ ಹೋಗಿ ಮೈ ತಂಪಾಗಿಸಿಕೊಂಡು BBQ ಊಟ ಸವಿಯುತ್ತಾ ತಮ್ಮವರ ಜೊತೆ ಕಾಲ ಕಳೆಯುವ ಅವಕಾಶಕ್ಕೆ ಯಾರು ಬೇಡ ಎನ್ನುತ್ತಾರೆ!

ಹೊಸದಾಗಿ ಆಸ್ಟ್ರೇಲಿಯನ್ ಪೌರತ್ವವನ್ನು ಸ್ವೀಕರಿಸುವವರಿಗೆ ಆಸ್ಟ್ರೇಲಿಯಾ ಡೇ ಬಹಳ ಪ್ರಿಯವಾದದ್ದು. ನಿನ್ನೆ ದೇಶದಾದ್ಯಂತ ನಡೆದ ಸಮಾರಂಭಗಳಲ್ಲಿ ಸಂಭ್ರಮದಿಂದ ಇಪ್ಪತ್ತೆರಡು ಸಾವಿರ ಜನರು ಆಸ್ಟ್ರೇಲಿಯನ್ ಸಿಟಿಜನ್ಸ್ ಆದರು. ಸುಮಾರು ನೂರೈವತ್ತು ದೇಶಗಳನ್ನು ಪ್ರತಿನಿಧಿಸಿದ್ದವರಲ್ಲಿ ಅವರ ಉಡುಗೆ-ತೊಡುಗೆ, ಮಾತನಾಡುವ ಶೈಲಿಗಳಲ್ಲಿದ್ದ ವೈವಿಧ್ಯತೆ ಖುಷಿ ತಂದಿತ್ತು.

ಪ್ರತಿವರ್ಷದಂತೆ ನಿನ್ನೆಯೂ ಹಲವಾರು ಆಸ್ಟ್ರೇಲಿಯನ್ನರ ಸಾಧನೆಗಳಿಗಾಗಿ ಅವರಿಗೆ ಬಿರುದುಗಳು, ಗೌರವ-ಸಮ್ಮಾನಗಳು ಸಂದಿವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಗಮನ ಸೆಳೆದಿದ್ದು ಸಿಡ್ನಿ ನಗರದ Opera House ಹಾಯಿಗಳ ಮೇಲೆ ಬಿಂಬಿಸಿದ ಸುಂದರವಾದ ಆಸ್ಟ್ರೇಲಿಯನ್ ಇಂಡೀಜಿನಸ್ ಡಿಜಿಟಲ್ ಕಲೆ. ಶುಕ್ರವಾರ ಮುಂಜಾನೆಯೇ ಕೂಮ ಅಬೊರಿಜಿನಲ್ ಜನಸಂಕುಲದ ಡಿಜಿಟಲ್ ಆರ್ಟಿಸ್ಟ್ ಬ್ರೆಟ್ ಲೀವಿ ಅವರ ನಾಲ್ಕು ಇಂಡೀಜಿನಸ್ ಹೆಂಗಸು ಮತ್ತು ಗಂಡಸು ಕಲಾ ಚಿತ್ರಗಳನ್ನು ಬಿಂಬಿಸಿದ್ದರು. ತಮ್ಮ ಧೀರ ನಡೆಯಿಂದ ಅಬೊರಿಜಿನಲ್ ಜನರಿಗೆ ಮಾದರಿಯಾದ Nanbarry, Barangaroo, Pemulwuy ಮತ್ತು Patyegarang ನಾಯಕರ ಕಲಾತ್ಮಕ ಮುಖಚಿತ್ರವನ್ನು ಪ್ರದರ್ಶಿಸಿದ್ದು ಗೌರವ ಮತ್ತು ಹೆಮ್ಮೆ ತಂದಿದೆ. ಇದು ಸಾಧ್ಯವಾಗಿದ್ದು ಅಲ್ಲಿನ ಮೆಟ್ರೊಪಾಲಿಟನ್ ಅಬೊರಿಜಿನಲ್ ಲ್ಯಾಂಡ್ ಕೌನ್ಸಿಲ್ ತೋರಿದ ಆಸಕ್ತಿ ಮತ್ತು ಪ್ರಯತ್ನದಿಂದ. ಏಕೆಂದರೆ, Opera House ಹಾಯಿಗಳ ಮೇಲೆ ಬಿಂಬಿಸುವ ಆರ್ಟ್ ವರ್ಕ್ ಬಗ್ಗೆ ವಿಪರೀತ ಅಭಿಪ್ರಾಯಗಳಿವೆ, ಧೋರಣೆಗಳಿವೆ. ಯಾವುದು ಆಯ್ಕೆಯಾಗಬೇಕು ಎನ್ನುವ ನಿರ್ಧಾರದ ಹಿಂದೆ ಜಗಳಗಳೂ, ಭಿನ್ನಾಭಿಪ್ರಾಯಗಳೂ, ರಾಜಕೀಯವೂ ನಡೆಯುತ್ತವೆ. ನಿನ್ನೆ ಬಿಂಬಿಸಿದ ಅಬೊರಿಜಿನಲ್ ಆರ್ಟ್ ವರ್ಕ್ ಬಗ್ಗೆಯೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅಂದ ಹಾಗೆ ಅಬೊರಿಜಿನಲ್ ಡಿಜಿಟಲ್ ಆರ್ಟಿಸ್ಟ್ ಬ್ರೆಟ್ ಲೀವಿ ಅವರು ದಶಕಗಳಿಂದ ಅಬೊರಿಜಿನಲ್ ಜನರ ಚರಿತ್ರೆ, ಸಂಸ್ಕೃತಿ, ಭಾಷೆ, ಪ್ರಕೃತಿಯೊಂದಿಗೆ ಅವರಿಗಿರುವ ಆಳ ಸಂಬಂಧ ಮುಂದಾದ ವಿಷಯಗಳಲ್ಲಿ ಅಧ್ಯಯನ ನಡೆಸುತ್ತಾ ಪ್ರಾಪಂಚಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅದೇಕೋ ಏನೋ ಬ್ರೆಟ್ ಲೀವಿ ಅವರ ಬಗ್ಗೆ ಮಾಧ್ಯಮಗಳು ಅಷ್ಟೊಂದು ಆಸಕ್ತಿ ತೋರಲಿಲ್ಲ.

ಜನವರಿ ೨೬ ದಿನಾಂಕವನ್ನು ಆಸ್ಟ್ರೇಲಿಯಾದ ಬಹುತೇಕ ಮೂಲನಿವಾಸಿಗಳು Occupation ಡೇ, Invasion ಡೇ, Survival ಡೇ ಎಂದು ಗುರುತಿಸುತ್ತಾರೆ. ಪರಕೀಯರು ಬಂದು ತಮ್ಮ ನಾಡನ್ನು ಆಕ್ರಮಿಸಿ ವಶಕ್ಕೆ ತೆಗೆದುಕೊಂಡಿದ್ದನ್ನು ಅವರು ಹೇಗೆ ತಾನೇ ಸಂಭ್ರಮಿಸುತ್ತಾರೆ? ಅವರ ನೋವು, ಪ್ರತಿಭಟನೆಯನ್ನು ಪ್ರತಿಫಲಿಸಿ ದೇಶದ ಮುಖ್ಯ ನಗರಗಳಲ್ಲಿ ಜನವರಿ ೨೬ರಂದು ಪ್ರತಿರೋಧ ಪ್ರದರ್ಶನ, ನಡಿಗೆ ಸಮಾವೇಶಗಳು ನಡೆಯುತ್ತವೆ.

ನಿನ್ನೆ ಸಂಜೆ ಮತ್ತು ರಾತ್ರಿ ನಾನು ಆಸ್ಟ್ರೇಲಿಯಾ ಡೇ ಆಚರಣೆ ಮತ್ತು ಪ್ರತಿರೋಧ ಪ್ರದರ್ಶನಗಳ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದ ಸುದ್ದಿಸಮಾಚಾರ, ವಿಶ್ಲೇಷಣೆಗಳನ್ನು ಗಮನಿಸುತ್ತಿದ್ದೆ. ಜನಸಾಮಾನ್ಯರ ಅಭಿಪ್ರಾಯಗಳು, ಸಮುದಾಯದ ಹಿರಿಯರು, ಸರಕಾರಗಳು ತಮ್ಮ ಮಟ್ಟದಲ್ಲಿ, ದೃಷ್ಟಿಕೋನದಲ್ಲಿ ಮಾತನಾಡಿದ್ದರು. ಅತ್ಯಂತ ಗಮನೀಯ ವಿಷಯವೆಂದರೆ ಹಿಂದಿನ ವರ್ಷಗಳಿಗಿಂತಲೂ ನಿನ್ನೆಯ ಪ್ರತಿರೋಧ ಪ್ರದರ್ಶನ, ನಡಿಗೆಗಳಲ್ಲಿ ಇನ್ನೂ ಹೆಚ್ಚಿನ ಜನ ಭಾಗವಹಿಸಿದ್ದರು. ರಾಜಧಾನಿ ನಗರಗಳಲ್ಲಿ ಸಾವಿರಸಾವಿರ ಜನ ಜನವರಿ ೨೬ ರಂದು ಆಸ್ಟ್ರೇಲಿಯಾ ಡೇ ಆಚರಣೆ ಬೇಡ, ದಿನಾಂಕವನ್ನು ಬದಲಿಸಿ ಎಂದೆಲ್ಲಾ ಹೇಳುತ್ತಾ ಸೇರಿದ್ದರು.

ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳಲ್ಲದೆ ಪ್ರತಿರೋಧವನ್ನು ಬೆಂಬಲಿಸುವ, ಬಿಳಿಯರು, ವಲಸಿಗರು ಇದ್ದರು. ಪ್ರತಿವರ್ಷದ ಪ್ರತಿರೋಧ ಪ್ರದರ್ಶನದಲ್ಲಿ ಇವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದು ಒಂದು ಸಮಾಜದ ಬೆಳವಣಿಗೆಯ ಗುರುತು. ಮಾಧ್ಯಮಗಳ ಜೊತೆ ಮಾತನಾಡಿದ ಕೆಲವರು ತಮಗೆ ಮೂಲನಿವಾಸಿಗಳಿಗೆ ಸಲ್ಲಬೇಕಿರುವ ನ್ಯಾಯದ ಬಗ್ಗೆ ಕಾಳಜಿ ಇದೆ, ಈ ದೇಶದಲ್ಲಿ ಅವಶ್ಯವಾಗಿ ‘ಸತ್ಯ ಹೇಳಿಕೆ’ (truth telling) ಆಗಬೇಕಿದೆ, ಎಂದರು.

ಇಂತಹುದೇ ಮತ್ತೊಂದು ‘ನ್ಯಾಯ ಕೇಳುವಿಕೆ’ ಪ್ರದರ್ಶನವೂ ನಿನ್ನೆ ನಡೆದು ಪ್ರದರ್ಶನಕಾರರು Invasion ಡೇ / Survival ಡೇ ಪ್ರತಿರೋಧಿಗಳ ಜೊತೆ ಒಟ್ಟಾಗಿ ಕೈ ಸೇರಿಸಿದ್ದು ನೆನ್ನೆಯ ಮತ್ತೊಂದು ವಿಶೇಷ. ರಾಜಧಾನಿ ನಗರಗಳಲ್ಲಿ ಪ್ಯಾಲೆಸ್ಟೈನ್ ಪರ ಮತ್ತು ಗಾಝಾದಲ್ಲಿ ಶಾಂತಿ ಘೋಷಣೆಯಾಗಬೇಕು ಎಂದು ಕೇಳುತ್ತಾ ನೂರಾರು ಮಂದಿ ಒತ್ತಾಯ ಪ್ರದರ್ಶನದಲ್ಲಿದ್ದರು. ಎರಡೂ ಪ್ರದರ್ಶನಕಾರರ ಗುಂಪುಗಳು ಪರಸ್ಪರ ಬೆಂಬಲ ಕೊಟ್ಟುಕೊಂಡು ಮಾತನಾಡಿ ಶಾಂತಿ ಸಂದೇಶದ ಕಡೆ ಗಮನ ಸೆಳೆದರು.

ಕಳೆದ ವರ್ಷ ಅಕ್ಟೋಬರಿನಲ್ಲಿ ನಡೆದ Indigenous Voice to Parliament Referendum ಜನಮತ ಸಿಗದೇ ಸೋತಿತ್ತು. ಆದರೆ, ನಿನ್ನೆಯ ಆಸ್ಟ್ರೇಲಿಯಾ ಡೇ ಆಗುಹೋಗುಗಳನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗಿದೆ. ಎಲ್ಲರೂ ೨೦೨೩ರಲ್ಲಿ ರೆಫೆರೆಂಡಮ್ ಪರ-ವಿರೋಧಗಳನ್ನು ತಿಂಗಳಾನುಗಟ್ಟಲೆ ಚರ್ಚಿಸಿದ ಫಲ ಈಗ ಕಾಣುತ್ತಿದೆ. ಕಡೇ ಪಕ್ಷ ಜನಸಾಮಾನ್ಯರಲ್ಲಿ ಆಸ್ಟ್ರೇಲಿಯಾದ ಇನ್ನೂರ ಮೂವತ್ತೈದು ವರ್ಷಗಳ ಇತಿಹಾಸದ ಬಗ್ಗೆ ಹೊಸ ಅರಿವು ಹುಟ್ಟಿದೆ. ತಾವಿರುವುದು ವಸಾಹತುಶಾಹಿ-ನೆಲೆನಿಂತ (colonial-settler) ಸಮಾಜವೆನ್ನುವುದು ಅವರ ಗಮನಕ್ಕೆ ಬರುತ್ತಿದೆ. ಬ್ರಿಟಿಷ್ ಆಕ್ರಮಣಕ್ಕೂ ಮುನ್ನ ಅರವತ್ತು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಈ ನಾಡಿನಲ್ಲಿ ಬದುಕಿಬಾಳಿದ್ದ ಅಬೊರಿಜಿನಲ್ ಜನರ ಅಸ್ಮಿತೆಯನ್ನು ಗುರುತಿಸಬೇಕು, ಅನ್ಯಾಯಗಳನ್ನು ಅನುಭವಿಸುತ್ತಿರುವ ಅವರ ದನಿಗೆ ತಮ್ಮದನ್ನು ಸೇರಿಸಬೇಕು ಎನ್ನುವ ನೇರನುಡಿಯ ಕಾಳಜಿ ನಿಲುವು ಕಾಣುತ್ತಿದೆ.

ಅವರು ಅನುಭವಿಸುತ್ತಿರುವ ಶೋಷಣೆ, ಅನ್ಯಾಯಗಳ ನಡುವೆಯೂ ಅಬೊರಿಜಿನಲ್ ಜನರು ತಮ್ಮ ಆಂತರಿಕ ಚೈತನ್ಯ, ಸಾಂಘಿಕ-ಸಮಷ್ಟಿ ಪ್ರಜ್ಞೆ ಇರುವ ಸಾಮರ್ಥ್ಯಗಳಿಂದ ಮುನ್ನಡೆದಿದ್ದಾರೆ. ಕಳೆದ ವರ್ಷಾಂತ್ಯದ ರೆಫೆರೆಂಡಮ್ ಸೋಲಿನ ನಿರಾಸೆಯ ಹಿನ್ನೆಲೆಯಲ್ಲಿ ಇದನ್ನು ಗುರುತಿಸುತ್ತಾ ನಿನ್ನೆ ತಮ್ಮ ಆಂತರಿಕ ಚೈತನ್ಯದ (ರೆಸಿಲಿಯೆನ್ಸ್) ಬಗ್ಗೆ ಹಲವು ಹಿರಿಯರು ಮಾತನಾಡಿದರು. ಇನ್ನು ಮುಂದೆ ತಮ್ಮ ಜನರ ಚೈತನ್ಯವನ್ನು ಗುರಿಯಾಗಿಟ್ಟುಕೊಂಡು ಒಗ್ಗಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ, ಇದಕ್ಕೆ ಸಮಾಜದ ಇತರರ ಸಹಕಾರವೂ ಬೇಕಿದೆ, ಎನ್ನುವುದನ್ನು ಅವರು ಸರಿಯಾಗಿಯೇ ಗುರುತಿಸಿದರು.

ಮೂಲನಿವಾಸಿ ಜನಸಮುದಾಯಗಳ ಬೆಂಬಿಡದ ಪ್ರಯತ್ನಗಳಿಂದ ಅವರ ಸಂಸ್ಕೃತಿಗಳು, ಭಾಷೆಗಳ ಬಗ್ಗೆ ಗೌರವ ಹೆಚ್ಚುತ್ತಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಬಹುಸಂಸ್ಕೃತಿಗಳ ಪ್ರಭಾವ, ವಲಸಿಗರ ಸಂಖ್ಯೆ ಜನರ ಮನೋಭಾವನೆಯನ್ನು ಬದಲಿಸುತ್ತಿದೆಯೇನೋ. ಇವರುಗಳ ಬಹುಸಂಸ್ಕೃತಿ ಆಚಾರ-ವಿಚಾರಗಳ, ಆಹಾರಪದ್ಧತಿಗಳ ವೈವಿಧ್ಯತೆಗಳಿಂದ, ಸಾಮ್ಯತೆಗಳಿಂದ ಪರಸ್ಪರರನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ವಿಸ್ತರಿಸುತ್ತಿವೆ. ಇದೆಲ್ಲದರ ಜೊತೆಗೆ ಹಿನ್ನೆಲೆಯಲ್ಲಿ ರೆಫೆರೆಂಡಮ್ ವಿಷಯ ಇನ್ನೂ ಜೀವಂತವಾಗಿದೆ ಎನ್ನುವುದು ಸಮಾಧಾನದ ವಿಷಯ.

ಇಲ್ಲಿ ಒಂದು ಸಣ್ಣ ಉದಾಹರಣೆಯನ್ನು ಹಂಚಿಕೊಳ್ಳುತ್ತೀನಿ. ಹೋದವರ್ಷ ಜನವರಿಯಲ್ಲಿ ನಾನು ಬನ್ಯಾ ಹಬ್ಬಕ್ಕೆ ಹೋಗಿದ್ದು, ಅಲ್ಲಿ ಬನ್ಯಾ ನಟ್ ಸಂಗ್ರಹಿಸಿ ತಂದು ಅವನ್ನು ಬೇಯಿಸಿ ಸವಿದಿದ್ದನ್ನು ನನ್ನ ಪತ್ರದಲ್ಲಿ ಹೇಳಿದ್ದೆ. ಈ ವರ್ಷವೂ ಬನ್ಯಾ ಹಬ್ಬ ನಡೆದಿದೆ. ವಿಷಯ ಅದಲ್ಲ. ನಮ್ಮ ಕೈತೋಟಿಗರ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಬನ್ಯಾ ನಟ್ ಸ್ಫೂರ್ತಿ ಹುಟ್ಟಿಸಿದೆ. ಒಬ್ಬರು ಇಬ್ಬರಲ್ಲ, ಆರು ಸದಸ್ಯರು ತಮ್ಮಲ್ಲಿ ಬನ್ಯಾ ನಟ್ ಇವೆ (ಸ್ನೇಹಿತರು ಕೊಟ್ಟಿದ್ದೋ, ಇವರೇ ಹೋಗಿ ಹುಡುಕಿದರೋ), ಅವನ್ನು ಹೇಗೆ ತಿನ್ನುವುದು, ಎಂದು ಕೇಳುತ್ತಾ ಬನ್ಯಾ ನಟ್ ಬಗ್ಗೆ ವಿಷಯ, ಅಡುಗೆ ವಿಧಾನಗಳನ್ನ ಹಂಚಿಕೊಂಡಿದ್ದಾರೆ. ಅವರಲ್ಲಿ ನಾಲ್ವರು ವಲಸಿಗರು. ಅಂದರೆ ಇಬ್ಬರು ಹುಟ್ಟಾ ಆಸ್ಟ್ರೇಲಿಯನ್ನರಿಗೆ ನಾಲ್ಕು ಜನ ವಲಸಿಗರು – ಎಲ್ಲರಿಗೂ ಈ ಹೊಸ ಸ್ಥಳೀಯ, ಅಪ್ಪಟ ನೇಟಿವ್, ನಾಟಿ, ದೇಸೀ ಆಹಾರದ ಬಗ್ಗೆ ಸಮಾನವಾದ ಆಸಕ್ತಿ ಹುಟ್ಟಿದೆ. ಆಹಾ, ನಮ್ಮ ಮನೋಭಾವಗಳಲ್ಲಿ ಎಂತಹ ಒಳ್ಳೆಯ ಬೆಳವಣಿಗೆ. ಈ ಬದಲಾವಣೆಯ ಹೊಸ ಗಾಳಿ ಕಾಡುತ್ತಿರುವ ಕಡು ಬೇಸಿಗೆಯ ಬಿಸಿಯನ್ನು ಅರೆ ಕ್ಷಣವಾದರೂ ತಂಪಾಗಿಸಿತು!