ಇತ್ತೀಚೆಗೆ ಸೀರಿಗೆ ಹೊಂದೊ ಬಣ್ಣದ ಹೂ ಇಟ್ಕೊಳೊದು ಒಂದ್ ಫ್ಯಾಷನ್ ಆಗ್ಯದ. ನಾನು ಕಾರ್ಯಕ್ರಮಗಳಿಗೆ ಹೋಗೋದೆ ಕಮ್ಮಿ. ಆದ್ರಿಂದ ಹೋದಾಗ ಒಂದ್ ಸ್ವಲ್ಪ ನೋಡಿದ್ದೆ, ಏನೊ ವಿಶೇಷ ಹೊತ್ನಾಗ ಇಟ್ಕೊತಾರ ಬಿಡು ಅನ್ಕೊಂಡು ಸುಮ್ನಾಗಿದ್ದೆ. ಆದ್ರ ಇಲ್ಲಿ ನೋಡಿದ್ರೆ ಊರಿಗೆ ಊರೆ ಅಂಥಾ ಹೂ ಇಟ್ಕೊಂಡು ಮೆರಿಲಿಕತ್ತದ. ಅವುಗಳಲ್ಲಿ ಅನೇಕವು ಖರೆ ಹೂವೆನೊ ಅನ್ನೊ ಹಂಗೆ ಇದ್ದವು. ಆದ್ರ ಇಲ್ಲಿ ವಿಷಯ ಬರೀ ಹೂವಿಂದಲ್ಲ. ನಮ್ಮ ಜನ ಎಷ್ಟು ಬೇಗ ಕೃತಕತೆ ಅನ್ನೊದಕ್ಕೆ ಆಕರ್ಷಿತರಾಗ್ತರ ಅನ್ನೋದು.
ಪರಿಸರ ಕಾಳಜಿ ಕುರಿತ ಶಾಲಿನಿ ನೂತನ್ ಬರಹ ನಿಮ್ಮ ಓದಿಗೆ
ಒಂದು ತಿಂಗಳ ಹಿಂದ ನಮ್ಮೂರಿನಾಗ ಗವಿಸಿದ್ದಪ್ಪನ ಜಾತ್ರಿ ಇತ್ತು. ಹಳ್ಳಿ ಊರ ಜಾತ್ರಿ ಅಂದ್ರ ಇಡೀ ಊರೇ ಗದ್ದಲದಾಗ ಇರ್ತೆತಿ, ಹಂಗ ನಮ್ಮೂರಾಗು ನಾಕು ದಿನ ಮದ್ಲಿಂದಾನ ಗದ್ದಲ ಶುರು ಆಗಿತ್ತು. ಜಾತ್ರಿಗಂತ ಬಳಿ ಅಂಗಡಿ, ಬಟ್ಟಿ ಅಂಗಡಿ, ಜೋಗೆರ ಅಂಗಡಿ, ಆಟ ಸಾಮಾನಂಗಡಿ, ಇನ್ನ ತಿಂಡಿ ಅಂಗಡಿ ಬಗ್ಗೆ ಹೆಳೋದೆ ಬ್ಯಾಡ, ಎಲ್ಲ ಅಂಗಡೀನು ಬಂದಿದ್ವು. ಜಾತ್ರಿ ಒಳಗ ಒಂದೆರಡು ಸಲ ಅಡ್ಡಾಡಿಕೊಂಡು ಬಂದಾಗ ಒಂದ್ ನಾಲ್ಕೈದು ಅಂಗಡಿನಾಗ ಕೃತಕವಾದ ಮಲ್ಲಿಗಿ, ಕನಕಾಂಬರ ಹೂಗಳ ಮಾಲೆಗಳನ್ನ ಮಾರಕ್ಕ ಹಾಕಿದ್ರು. ನಾನು ಇವು ಹಳ್ಳಿ ಊರಿಗೂ ಬಂದ್ವಾ? ಇಲ್ಲೆಲ್ಲ ಇವನ್ನ ಯಾರ್ ತಗೋತಾರೊ ಅಂತ ಅನ್ಕೊಂಡಿದ್ದೆ. ಆಮೆಲೆ ತೇರಿನ ದಿನ ನಾವು ತಯಾರಾಗಿ ಹೋದ್ವಿ, ಊರಿನ ಹೆಣ್ ಮಕ್ಕಳೆಲ್ಲ ಚಂದ ಚಂದದ ಹೊಸ ಬಟ್ಟಿ ಹಾಕ್ಕೊಂಡು ಮಿಂಚ್ತಿದ್ರು. ಆದ್ರೆ ನಂಗ ಭಾಳ ವಿಚಿತ್ರ ಅನ್ಸಿದ್ದು ಅರ್ಧಕ್ಕಿಂತೂ ಜಾಸ್ತಿ ಜನರ ಜಡೆ ಏರಿ ಕುತ್ಕೊಂಡಿದ್ದ ಅವೇ ಕೃತಕ ಮಲ್ಲಿಗಿ ಹೂ ಮತ್ತ ಕನಕಾಂಬರ ಹೂಗಳು.
ಇತ್ತೀಚೆಗೆ ಸೀರಿಗೆ ಹೊಂದೊ ಬಣ್ಣದ ಹೂ ಇಟ್ಕೊಳೊದು ಒಂದ್ ಫ್ಯಾಷನ್ ಆಗ್ಯದ. ನಾನು ಕಾರ್ಯಕ್ರಮಗಳಿಗೆ ಹೋಗೋದೆ ಕಮ್ಮಿ ಆದ್ರಿಂದ ಹೋದಾಗ ಒಂದ್ ಸ್ವಲ್ಪ ನೋಡಿದ್ದೆ, ಏನೊ ವಿಶೇಷ ಹೊತ್ನಾಗ ಇಟ್ಕೊತಾರ ಬಿಡು ಅನ್ಕೊಂಡು ಸುಮ್ನಾಗಿದ್ದೆ. ಆದ್ರ ಇಲ್ಲಿ ನೋಡಿದ್ರೆ ಊರಿಗೆ ಊರೆ ಅಂಥಾ ಹೂ ಇಟ್ಕೊಂಡು ಮೆರಿಲಿಕತ್ತದ. ಅವುಗಳಲ್ಲಿ ಅನೇಕವು ಖರೆ ಹೂವೆನೊ ಅನ್ನೊ ಹಂಗೆ ಇದ್ದವು. ಆದ್ರ ಇಲ್ಲಿ ವಿಷಯ ಬರೀ ಹೂವಿಂದಲ್ಲ. ನಮ್ಮ ಜನ ಎಷ್ಟು ಬೇಗ ಕೃತಕತೆ ಅನ್ನೊದಕ್ಕೆ ಆಕರ್ಷಿತರಾಗ್ತರ ಅನ್ನೋದು.
ನೀವೆ ಯೊಚನೆ ಮಾಡಿ ಯಾವ್ದೊ ಮದುವೆನಾಗೊ ಮತ್ತೆಲ್ಲೊ ಸಮಯಕ್ಕ ಹೂ ಸಿಗದ ಅಥವ ಸೀರೆಗೆ ಮ್ಯಾಚಿಂಗ್ ಇಟ್ಕೊಳೊದು ಸರಿ. ಆದ್ರ ಒಳ್ಳೆ ಹೂವ ಸಿಗೊ ನಮ್ಮಂತ ಹಳ್ಳಿ ಊರಾಗೂ ಈ ರೆಡಿಮೇಡ್ ಹೂವು ಎಷ್ಟ್ ಮೆರೀತು ಅಂದ್ರ ನಂಗ್ ಜಿಗುಪ್ಸೆನೆ ಬಂದ್ ಹೋಯ್ತು. ಮಾಮೂಲಾಗಿ ಜಲ್ದಿ ಆಕರ್ಷಣೆಗೆ ಒಳಗಾಗೊ ಸಣ್ಣ ವಯಸ್ಸಿನ ಹುಡುಗಿಯರಷ್ಟೆ ಅಲ್ಲದೆ ದೊಡ್ಡವರು ಕೂಡ ಅಂಥ ಕೃತಕ ಹೂಗಳನ್ನು ಇಟ್ಕೊಂಡು ಮೆರೆಸಿದ್ದು ಇನ್ನೂ ಆಶ್ಚರ್ಯ ಅನ್ನುಸ್ತು. ಕಾಲೇಜು ಹುಡುಗಿಯರು ಹೊಸಾದೇನೊ ಥರದ್ದು ಮಾಡಿದ್ರ ಮಾಮೂಲಾಗಿ ಮನ್ಯಾಗ ದೊಡ್ಡೊರು ಬೈತಾರ, ಅಂಥಾ ಬಟ್ಟಿ ಹಾಕ್ಕೊಬ್ಯಾಡ, ಅಂಥ ಬ್ಯಾಗು ಚಲೊ ಕಾಣಂಗಿಲ್ಲ ಅಂತೆಲ್ಲ ಹೇಳ್ತಾನ ಇರ್ತಾರ. ಆದ್ರ ಈ ಹೂವಿನ ವಿಷ್ಯದಾಗ ಮಾತ್ರ ಯಾಕ್ ಹಿಂಗೋ ಗೊತ್ತಾಗ್ತಿಲ್ಲ. ಅಥವಾ ಹೂ ಇಟ್ಕೊಳೊದು ನಮ್ ಸಂಸ್ಕೃತಿ ಅಂತ ಇದ್ರ ಬಗ್ಗೆ ‘ಸಾಫ್ಟ್ ಕಾರ್ನರ್’ ಬಂತೋ ಏನೊ. ಆದ್ರ ಈ ಬಾಡಲಾರದ ಹೂವು ಅದೆಂಗ ಹೂವಿನ ಸ್ಥಾನ ತುಂಬ್ತೇತಿ ಅನ್ನೋದೆ ಪ್ರಶ್ನೆ.
ಇದು ಹೂವಿನ ವಿಷಯದಲ್ಲಷ್ಟೇ ಅಲ್ಲ ಒಂದು ಹಲ್ಲುಜ್ಜೊ ಪುಡಿಯಿಂದ ಹಿಡ್ದು ದಿನಾ ಬಳ್ಸೊ ಎಷ್ಟೊ ಸಾಮಾನು ಹಿಂಗ ಆಗ್ಯಾವ. ಬೇವಿನ ಕಡ್ಡಿಯಿಂದ ಹಲ್ಲುಜ್ಜೊ ಬದ್ಲು ನೀಮ್ ಪೇಸ್ಟ್ ಬೇಕಂತ, ಮನ್ಯಾಗ ಬಜ್ಜಿ ಮಾಡೊಕೆ ಕಡ್ಲಿ ಹಿಟ್ಟು ಇದ್ದ ಇರ್ತೇತಿ ಆದ್ರು ಸ್ನಾನಕ್ಕ ‘ಗ್ರಾಮ್‍ಫ್ಲೋರ್ ಸೋಪ್’ ಬೇಕು, ಎಷ್ಟೋ ಮನ್ಯಾಗ ಆಕಳ-ಎಮ್ಮಿ ಇದ್ರೂ ಹಾಲೆಲ್ಲ ಡೈರಿಗ್ ಹಾಕಿ ಸಂಜಿ ಚಾ ಮಾಡಕ ಅಂಗಡಿಯಿಂದ ಗುಡ್‌ಲೈಫ್ ಹಾಲೆ ತರ್ಬೇಕು, ಹಿಂಗ ಪಟ್ಟಿ ಬೆಳ್ಕೊತಾನೆ ಹೊಗ್ತದ. ಸಿಟಿಗಳಲ್ಲಾದ್ರೆ ಎನೊ ಸಿಗಂಗಿಲ್ಲ ಅನ್ಕೊಬಹುದು ಆದ್ರೆ ಹಳ್ಳಿನಾಗು ಅದೇ ಸ್ಥಿತಿ ಅಂದ್ರೆ ಅದೊಂಥರಾ ಅಸಮಾಧಾನ.
ಜಾತ್ರಿ ಒಳಗ ಒಂದೆರಡು ಸಲ ಅಡ್ಡಾಡಿಕೊಂಡು ಬಂದಾಗ ಒಂದ್ ನಾಲ್ಕೈದು ಅಂಗಡಿನಾಗ ಕೃತಕವಾದ ಮಲ್ಲಿಗಿ, ಕನಕಾಂಬರ ಹೂಗಳ ಮಾಲೆಗಳನ್ನ ಮಾರಕ್ಕ ಹಾಕಿದ್ರು. ನಾನು ಇವು ಹಳ್ಳಿ ಊರಿಗೂ ಬಂದ್ವಾ? ಇಲ್ಲೆಲ್ಲ ಇವನ್ನ ಯಾರ್ ತಗೋತಾರೊ ಅಂತ ಅನ್ಕೊಂಡಿದ್ದೆ.
ಇನ್ನು ಮನೆಯ ಅಲಂಕಾರಿಕ ವಸ್ತುಗಳ ವಿಷಯದಾಗು ಅಷ್ಟ, ಹಳ್ಳಿ ಹಳ್ಳಿಗೂ ಗಾಡಿ, ಆಟೊದಾಗ ಬಂದು ಇಂಥ ಸಾಮಾನೆಲ್ಲ ಮಾರ್ತಿರ್ತಾರ. ಅದ್ರಾಗು ಅಷ್ಟ ಬಾಗ್ಲಕ್ಕ ಹಾಕೊ ಕೃತಕ ಹೂವಿನ ಮಾಲೆಗಳು, ಕೃತಕ ಮಾವಿನ ಎಲೆ ತೋರಣಗಳು, ಬಾಳೆ ಕಂಬದಂಗೇ ಕಾಣೊ ಪ್ಲಾಸ್ಟಿಕ್ ಬಾಳೆಕಂಬಗಳು ಹಿಂಗ. ಅಲ್ಲ ನಮ್ಮೊರು ಹಬ್ಬ-ಹರಿದಿನ ಅಂದ್ರ ಮಾವಿನ್ ತೋರಣ ಕಟ್ಟೊಕೆ ಕಾರಣ ಅವು ಮರದಿಂದ ಕಿತ್ತಿದ ಮ್ಯಾಲು ಭಾಳ ಹೊತ್ತು ಆಮ್ಲಜನಕ ಹೊರಗಬಿಡ್ತಾವ. ಹಂಗಾಗಿ ಭಾಳ ಜನ ಕೂಡಿ ಓಡಾಡೊ ದಿನ ಮನ್ಯಾಗ ಕಟ್ಟಿದ್ರ ಒಳ್ಳೆದು ಅಂತ. ಇವ್ರು ಇರೊ ಬರೊ ಪದ್ಧತಿಗಳ್ನೆಲ್ಲ ಚಂದ ಕಾಣ್ಲಿ ಅಂತೇಳಿ ಪ್ಲಾಸ್ಟಿಕ್ ತೋರಣ ಕಟ್ಟಿದ್ರ ಅದ್ರಾಗೇನ್ ಅರ್ಥ ಐತಿ?
ಇಂಥದ್ದ ಇನ್ನೊಂದು ವಿಷ್ಯ ಅಂದ್ರ ಹೋಮ-ಹವನ ನಡೀಬೇಕಾದ್ರ ಪೂರ್ಣಾಹುತಿ ಹೊತ್ನಾಗ ರೊಕ್ಕ (ನಾಣ್ಯ) ಹಾಕೋದು. ಅಲ್ಲ ಅವಾಗಿನ ಕಾಲದಾಗ ತಾಮ್ರದ ನಾಣ್ಯ ಇರ್ತಿದ್ವು ಅವನ್ನ ಬೆಂಕಿಗ್ ಹಾಕಿದ್ರ ಅವು ಸುಟ್ಟು ಅದ್ರಿಂದ ಬರೊ ಹೊಗಿ ವಾಯು ಶುದ್ಧಿ ಮಾಡ್ತಿತ್ತು ಹಂಗಾಗಿ ಹಾಕ್ತಿದ್ರು. ಈಗ ಸ್ಟೀಲ್ ನಾಣ್ಯ ಅದಾವ ಅವನ್ನ ಹಾಕೊದು ಒಳ್ಳೆದಲ್ಲ. ಜೊತಿಗೆ ನದಿಗೆ ಪೂಜೆ ಮಾಡಿದಾಗೂ ರೊಕ್ಕ ಹಾಕೋದು ಇದ ಕಾರಣಕ್ಕ, ತಾಮ್ರದ ಗುಣಗಳು ನೀರಿಗೆ ಸೇರಿ ನೀರು ಶುದ್ಧಿ ಆಗ್ತದ ಅಂತ. ಈಗ ಇವ್ರು ಹಾಕೋದು ಸ್ಟೀಲ್ ನಾಣ್ಯ.
ಆದ್ರ ಇದನ್ನೆಲ್ಲ ಹೇಳಿದ್ರ ದೊಡ್ಡೋರೆಲ್ಲ ನಮ್ಮನ್ನ ವಿಲನ್‌ಗಳನ್ನ ನೋಡ್ದಂಗ ನೋಡ್ತಾರ. ಇವ್ರಿಗೆ ನಮ್ ಆಚರಣೆಗಳ ಮೇಲೆ ಗೌರವಾನೆ ಇಲ್ಲ ಅಂತ ಅನ್ಕೊತಾರ. ಆದ್ರ ನಾವು ನಿಜವಾದ ಆಚರಣೆಗಳು ನಡೀಬೇಕು ಅಂತ ಅನ್ಕೊತೀವಿ. ಹಂಗಂತ ನಾವು ಹಳೇ ಪದ್ಧತಿನೆಲ್ಲ ಹಂಗ ನಡೆಸ್ಕೊಂಡು ಹೋಗ್ತೀವಿ ಅಂತಲ್ಲ. ಅದರ ಆಚರಣೆಗೆ ಇರೊ ಅರ್ಥ ಗೊತ್ತಾದಮ್ಯಾಲಾದ್ರು ಅದು ಹೆಂಗ್ ಇತ್ತೊ ಹಂಗ ಮಾಡೋದು ಒಳ್ಳೇದು ಅನ್ನೊದು ನಮ್ಮ ವಾದ. ಯಾವುದೊ ಒಂದು ಆಚರಣೆಗೆ ಒಂದು ಹಿನ್ನೆಲೆ ಇರ್ತದ, ನಾವು ಆಧುನಿಕತೆ ಕಡೆ ಹೋಗ್ತಾ ಹೋಗ್ತಾ ಆ ಆಚರಣೆಯ ರೂಪಾನು ಬದಲಾಯಿಸಿ ಬಿಟ್ಟಿರ್ತಿವಿ. ಹಂಗಾಗಿ ಈ ಗೊಂದಲಗಳೆಲ್ಲ ಹುಟ್ಕೊತಾವ. ಬದಲಾಗೊದಾದ್ರ ಪೂರ್ತಿ ಬದಲಾಗ್ರಿ ಹಿಂಗ್ ಅರ್ಧಂಬರ್ಧ ಬದಲಾಗಿ ಆಚರಣೆಗಳ ಮೂಲ ರೂಪ ಮತ್ತ ಅರ್ಥ ಹಾಳು ಮಾಡಬ್ಯಾಡ್ರಿ.
ಇವು ಆಚರಣೆಗಳ ವಿಷಯ ಆದ್ರ ಇನ್ನು ನಾ ಮೊದ್ಲು ಹೇಳಿದ ಕೃತಕತೆಯ ವಿಷಯವೂ ಅಷ್ಟೆ… ಸಂಪ್ರದಾಯ ಅಂತ ಹೆಂಗೆಂಗೋ ಮಾಡೋದಲ್ಲ, ಮಾಡೊದಾದ್ರ ಸರೀಯಾಗಿ ಮಾಡ್ಬೇಕು. ನಾವು ಹೊಸದನ್ನ ಒಪ್ಕೊಳೊ ಅವಸರದಾಗ ನಮ್ಮ ತನಾನೆ ಮರಿತಿದಿವೇನೊ ಅನ್ನಿಸ್ತದ. ಬದಲಾವಣೆ ಸಹಜ, ಕಾಲ ಬದಲಾದಂಗೆ ಎಲ್ಲವೂ ಬದಲಾಗ್ತದೆ ಆದರೆ ಬದಲಾಗ್ಲೇ ಬೇಕು ಅನ್ನೊ ಅವಸರ ಯಾಕೊ ಗೊತ್ತಿಲ್ಲ. ಹೊಸಾದು ಎನೊ ಒಪ್ಕೊಳೊ ಮದ್ಲು ಅದ್ರ ಅವಶ್ಯಕತೆ ಎಷ್ಟ್ ಅದ ಅಂತ ಒಮ್ಮೆ ಯೊಚ್ನೆ ಯಾಕ್ ಮಾಡಂಗಿಲ್ಲ. ಅವ್ರು ಮಾಡಿದ್ರು ಅಂತ ನಾವು ಮಾಡೋದು, ಅವ್ರು ಅಂಥದ್ದು ಹಾಕ್ಕೊಂಡರ ಅಂತ ನಾವು ಹಾಕ್ಕೊಳೊದು ಅಭಿವೃದ್ಧಿ ಅಲ್ಲ.
ಹೂ ಮುಡಿಯೋದು ನಿಮಗಿಷ್ಟ ಇದ್ದರೆ ಘಮ್ಮನೆ ವಾಸನೆ ಹರಡಿ ಮನಸ್ಸನ್ನು ತಾಜಾ ಆಗ್ಸೊಂತ ನಿಜವಾದ ಹೂವಾನೆ ಮುಡೀರಿ. ಇಲ್ಲ ಅಂದ್ರ ಮುಡಿಯೋದೆ ಬ್ಯಾಡ. ಆದ್ರ ಬಾಡಲಾರದ, ಘಮವಿರಲಾರದ, ಮುಟ್ಟಿದರೆ ಮೃದುತ್ವವಿಲ್ಲದ ಇಂತಹ ಕೃತಕ ಹೂಗಳು ಬೇಡ. ಹೂವಂದ್ರ ನಮ್ಮನ್ನ ನೋಡಿ ನಕ್ಕಂಗ ಇರಬೇಕು. ನಗು ನಿಜವಾಗಿರಬೇಕು, ಸ್ಟಿಲ್ ಫೋಟೊ ಥರ ಯಾವಾಗ್ಲು ಒಂದೆ ಮುಖ ಇಟ್ಕೊಂಡು ಕೂತ್ಕೊತೀವಾ ನಾವು? ಇಲ್ಲಲ… ನಗು ಬಂದಾಗ ನಗು, ಅಳು ಬಂದಾಗ ಅಳು. ಹಂಗೆ ಹೂವು ಚಂದವಾಗಿ ತೋರಿ ಬಾಡೋದು ಅದರ ಗುಣ. ಅದು ಹಂಗಿದ್ದರೆ ಚಂದ, ನಿಜವಾದ ಹೂವು ನಮ್ಮ ಭಾವನೆಗಳನ್ನ ನಿಜವಾಗಿರಿಸತ್ತೆ, ಕೃತಕತೆ ಯಾವತ್ತಿದ್ರೂ ಕೃತಕವೆ ಅನ್ನೋದು ನನ್ನ ಅನಿಸಿಕೆ.
ಶಾಲಿನಿ ಬಳ್ಳಾರಿ ಜಿಲ್ಲೆಯ ಹಂಪಾಪಟ್ಟಣದವರು. ಪ್ರಸ್ತುತ ಕೃಷಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶಾಲಿನಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ಹವ್ಯಾಸಗಳು.
ಅಂಕಣದಲ್ಲಿ ಪ್ರಕಟವಾದ ಲೇಖನದ ಭಾಷೆಯ ಸೊಗಡು ಸುಂದರ.ಲೇಖನದ ಉದ್ದೇಶ ಮತ್ತು ಸಾಮಾಜಿಕ ಕಳಕಳಿ ಇಷ್ಟ ಆಯ್ತು.
ಅಸಲಿ ಮತ್ತು ಕೃತಕಕ್ಕಿರುವ ವ್ಯತ್ಯಾಸವನ್ನು ಬರವಣಿಗಯಲ್ಲಿ ಪದಗಳ ಮೂಲಕ ಬಳಕೆ ಮಾಡಿರುವ ನಿಮ್ಮ ಪದಗಳ ಬಳಕೆ ಅದ್ಬುತ.
ವಿಚಾರ ಕೇವಲ ಹೋವಿನಲ್ಲಸ್ಟೆ ಇಲ್ಲ, ಹಳ್ಳಿಯ ಎಲ್ಲಾ ದಿನಬಳಕೆಯ ವಸ್ತುಗಳಲ್ಲಿ ಇರುವುದು ದುರದೃಷ್ಟಕರ. ಹಳ್ಳಿ ಸೊಗಡನ್ನು ಪರಿಚಯಿಸುವ ನಿಮ್ಮ ಪ್ರಯತ್ನ ಸುಂದರ?.
Sariyage heliddiyavva. Nangu i Plastic hoo mudkondu odadado nodi asahya agbittitu.