ಏನೊ ಆತಂಕ. ಒಂಟಿತನ. ಈ ಓದು ಕೂಡ ಉಪಯೋಗ ಇಲ್ಲ. ಬುದ್ದಿಗೆ ಬೆಲೆ ಇಲ್ಲ. ದಡ್ಡರಿಗೇ ಎಲ್ಲೆಡೆ ದೊಡ್ಡ ದೊಡ್ಡ ಪದವಿ. ಮೂರ್ಖರು ಮೂರ್ಖರನ್ನೆ ಬೆಳೆಸುತ್ತಾರೆ. ಈ ಜಾತಿ ಕೂಪದಲ್ಲಿ ನಾನು ಏನೇ ಆಗಿದ್ದರೂ ಅದೇ ಆಗಿರುತ್ತೇನೆ. ಅದಕ್ಕಾಗಿ ಯಾಕೆ ಇಷ್ಟೆಲ್ಲ ಹೋರಾಟ? ವಿದ್ವತ್ತು? ಮನುಷ್ಯತ್ವ… ಕೊನೆಗೂ ನನಗೇನು ಉನ್ನತ ಕೆಲಸ ಸಿಗುವುದಿಲ್ಲವಲ್ಲಾ ಎಂದು ಮಂಕಾಗಿದ್ದೆ. ವಿಶ್ವಾಸ ಕುಗ್ಗುತ್ತಿತ್ತು. ಅವನು ನನ್ನ ಅಪ್ಪ ನಾಲ್ಕನೆ ಬಾರಿಗೆ ಯಾವುದೊ ಒಂದು ಹೆಂಗಸ ಒಪ್ಪಿಸಿ ಕರೆತಂದು ಮನೆಯಲ್ಲಿ ಇಟ್ಟುಕೊಂಡಿದ್ದನಂತೆ. ನನ್ನ ತಾತನಿಗೂ ವಿವೇಕ ಕಡಿಮೆ ಆಗಿತ್ತು. ಮಗ ಮಾಡಿದ್ದನ್ನೆಲ್ಲ ಸಹಿಸಿಕೊಂಡಿದ್ದ. ಅವಳು ಚಿಲುಮೆ
ಮೊಗಳ್ಳಿ ಗಣೇಶ್ ಬರೆದ ಕಥೆ “ಅವಳು ಚಿಲುಮೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಏನೊ ಆತಂಕ. ಒಂಟಿತನ. ಈ ಓದು ಕೂಡ ಉಪಯೋಗ ಇಲ್ಲ. ಬುದ್ದಿಗೆ ಬೆಲೆ ಇಲ್ಲ. ದಡ್ಡರಿಗೇ ಎಲ್ಲೆಡೆ ದೊಡ್ಡ ದೊಡ್ಡ ಪದವಿ. ಮೂರ್ಖರು ಮೂರ್ಖರನ್ನೆ ಬೆಳೆಸುತ್ತಾರೆ. ಈ ಜಾತಿ ಕೂಪದಲ್ಲಿ ನಾನು ಏನೇ ಆಗಿದ್ದರೂ ಅದೇ ಆಗಿರುತ್ತೇನೆ. ಅದಕ್ಕಾಗಿ ಯಾಕೆ ಇಷ್ಟೆಲ್ಲ ಹೋರಾಟ? ವಿದ್ವತ್ತು? ಮನುಷ್ಯತ್ವ… ಕೊನೆಗೂ ನನಗೇನು ಉನ್ನತ ಕೆಲಸ ಸಿಗುವುದಿಲ್ಲವಲ್ಲಾ ಎಂದು ಮಂಕಾಗಿದ್ದೆ. ವಿಶ್ವಾಸ ಕುಗ್ಗುತ್ತಿತ್ತು. ಅವನು ನನ್ನ ಅಪ್ಪ ನಾಲ್ಕನೆ ಬಾರಿಗೆ ಯಾವುದೊ ಒಂದು ಹೆಂಗಸ ಒಪ್ಪಿಸಿ ಕರೆತಂದು ಮನೆಯಲ್ಲಿ ಇಟ್ಟುಕೊಂಡಿದ್ದನಂತೆ. ನನ್ನ ತಾತನಿಗೂ ವಿವೇಕ ಕಡಿಮೆ ಆಗಿತ್ತು. ಮಗ ಮಾಡಿದ್ದನ್ನೆಲ್ಲ ಸಹಿಸಿಕೊಂಡಿದ್ದ. ನಿನ್ನ ಮಗ ಮೈಸೂರಲ್ಲಿ ಇದ್ದಾನಂತಲ್ಲಾ ಅವನ ಕರೆಸು! ನೋಡಬೇಕು. ಮಾತಾಡಬೇಕು. ಒಪ್ಪಂದ ಮಾಡ್ಕಬೇಕು. ನಾಳೆ ದಿನ ನಿನ್ನ ಮಗ ಬಂದು ಕಿತಾಪತಿ ಮಾಡಿದ್ರೆ ನನಗೆ ಯಾರು ಗತಿ ಎಂದು ಕೇಳಿದ್ದಳಂತೆ ಅವಳು. ಆಕೆ ವಯಸ್ಸಾಗಿದ್ದ ವೇಶ್ಯೆ. ಸುದ್ದಿ ತಿಳಿದು ಬೇಸರ ಆಗಲಿಲ್ಲ. ನೋಡಬೇಕು ಅವಳ ಎನಿಸಿತ್ತು. ಅಲ್ಲವ್ವ ತಾಯೀ… ಈತ ಈ ಕೊಲೆ ಪಾತಕಿ ಮೂವರು ಹೆಂಡಿರ ಕೊಂದಾದ ಮೇಲೆ ನಿನ್ನ ಕರಕೊಂಡು ಬಂದಿದ್ದಾನೇ… ನಿನ್ನನ್ನೂ ಮುಗಿಸುತ್ತಾನೆ ಎಂಬ ಭಯ ನನಗೆ… ನೀನು ಅದ್ಯಾವ ಧೈರ್ಯದಲ್ಲಿ ಈ ದೆವ್ವದ ಜೊತೆ ಕೊನೆಗಾಲದ ಸಂಸಾರ ಮಾಡಲು ಬಂದೆ ಎಂದು ಕೇಳಬೇಕು ಎಂಬ ತೀವ್ರತೆ ಉಂಟಾಗಿತ್ತು. ಜೊತೆಯಲ್ಲೆ ಹಿಂಸೆ ಅಸಹ್ಯ ಎರಡೂ ಬೆರೆತಂತಾಗಿ; ಛೀ ನಾನಲ್ಲಿಗೆ ಹೋಗಬಾರದು ಎನಿಸಿತು. ಇದೆಂತಹ ಲುಚ್ಚಾ ಮಾತುಕಥೆ! ನನಗೂ ಅವಳಿಗೂ ಸಂಬಂಧ ಏನು ಎಂದು ವಿಚಾರಿಸಿದ್ದೆ. ಆ ಹೆಂಗಸಿನ ಕಡೆ ಒಂದು ಹೆಣ್ಣು ಇತ್ತಂತೆ. ಅದನ್ನು ನನಗೆ ತಗುಲಿಹಾಕಲು ಅವಳು ಪ್ಲಾನು ಮಾಡಿದ್ದಾಳೆ ಎಂಬ ಸಂಗತಿ ತಿಳಿಯಿತು. ಆ ಸಾವಿತ್ರಿ ಇದ್ದಾಳಲ್ಲಾ… ಅವಳು ನನಗೆ ಪತ್ರ ಬರೆದಿದ್ದಳು. ಈ ಹೆಂಗಸು ಬಹಳ ಅಪಾಯಕಾರಿ ಊರತ್ತ ಕಾಲಿಡಬೇಡಿ ಎಂದಿದ್ದಳು. ಸಾವಿತ್ರಿಯನ್ನು ಮನಸಾರೆ ನೆನೆದೆ. ಎಷ್ಟು ಸೂಕ್ಷ್ಮವತಿ ಇವಳು ಎನಿಸಿತ್ತು.
ಪುಟ್ಟ ಪುಟ್ಟ ಸಾಲುಗಳ ಪತ್ರ. ಹಳ್ಳಿಯ ಪಕ್ಕದ ಮನೆಯ ಹುಡುಗಿ. ಅತ್ತೆ ಮಗಳು. ಕಾಲೇಜು ಓದುತ್ತಿದ್ದಳು. ಗುಟ್ಟಾಗಿ ನನ್ನ ಮೇಲೆ ಅವಳಿಗೆ ಒಲವು ಮೂಡಿದೆ ಎಂಬುದು ಗಮನಕ್ಕೆ ಬಂದಿತ್ತು. ನನಗೂ ಹೆಣ್ಣ ಮೋಹದ ಕಾಮನ ಬಿಲ್ಲಿನ ಬಗ್ಗೆ ಏನೊ ಭಯ. ಬೀಳಿಸಿ ಬಿಡುತ್ತದೆ ಎಂದು ಅಂತರ ಕಾಯ್ದುಕೊಳ್ಳುತ್ತಿದ್ದೆ. ಆ ಕ್ರಾಂತಿಕನ್ನೆಯ ಗುರುಗಳು ಎದುರು ಸಿಕ್ಕರು. ‘ಏನ್ರೀ… ಏನಾಗಿದೆ ನಿಮಗೇ… ಒಂದು ಕ್ರಾಂತಿ ಇಲ್ಲ ಕಳೆ ಇಲ್ಲ ಲವಲವಿಕೆ ಇಲ್ಲಾ… ಒಂದು ಹೆಣ್ಣಿನ ಕಡೆಗೆ ನೋಡುವ ಯಾವ ಆಸಕ್ತಿಗಳು ಇಲ್ಲಾ… ಬರೀ ಪುಸ್ತಕದ ಹುಳು ಆಗಿದ್ದೀರಲ್ರೀ… ಜೀವನದಲ್ಲಿ ಯಾರಿಗೆ ಅತಿ ಹೆಚ್ಚು ಕಷ್ಟ ಬರ್ತವೊ ಅವರೇ ಲೋಕವನ್ನು ನಡೆಸಲು ಅರ್ಹತೆ ಉಳ್ಳವರು ರೀ… ಬನ್ರಿ ಜೊತೆಗೆ ಜಾಗಿಂಗ್ ಹೋಗುವ ಎಂದರೂ ಬರೋದಿಲ್ಲಲ್ಲಾರೀ… ಪ್ರಾಯದಲ್ಲಿ ಪ್ರಾಯವಾಗಿಯೇ ಇರ್ರೀ… ಮುದುಕರಾದ ನಂತರ ಇದ್ದೇ ಇದೆ ನರಳೋದು ಕೊರಗೋದು ಕಲ್ಪಿಸಿಕೊಳ್ಳುತ್ತಲೆ ತೂಕಡಿಸೋದೂ’ ಎಂದು ಹುರಿದುಂಬಿಸಿದರು. ಎಷ್ಟೇ ಆಗಲಿ ಸಮಾಜವಾದಿ ಚಿಂತಕರು. ಹೌದಲ್ಲವೇ… ಪ್ರಾಯ ಹೋದ ಮೇಲೆ ಮತ್ತೆ ಅದು ಬರುವುದಿಲ್ಲ ಎನಿಸಿತು. ಪ್ರೇಮಕವಿತೆಗಳ ಪ್ರೇಮಿಸಿ ಓದಿ ಆನಂದಿಸಿ ಗುರುಗಳಿಗೆ ಪಶ್ಚಿಮದ ಕಾಮನೆಯ ಕವಿಗಳ ಸಾಲುಗಳ ಪುಂಕಾನು ಪುಂಕವಾಗಿ ವಿವರಿಸಿದೆ. ಸಿಟ್ಟಾದರು. ‘ಯೇತಿ ಅಂದ್ರೆ ಪ್ರೇತಿ ಕಣಯ್ಯ ನೀನು. ಆ ಕಾವ್ಯವನ್ನ ಅತ್ತ ಇಡೂ… ಹುಡುಗಿಯರ ಮುಂಗೈಯ ಹಿಡದು ಮಂಡಿಯೂರಿ ಪ್ರೇಮ ಭಿಕ್ಷೆ ಬೇಡು. ಆಗಲಾದರು ನಿನ್ನ ಪ್ರಾಯ ಎದ್ದು ಕುಣಿಯುತ್ತದೆʼ ಎಂದು ಚುಚ್ಚಿದರು. ಓಕೇ ಸಾರ್… ಪ್ರಣಯ ಕಾವ್ಯ ಕಲಿತಿದ್ದರೆ ಒಳ್ಳೆಯದು ಎಂದು ಹಾಗೆ ಓದಿದ್ದೆ. ಈಗ ಗೊತ್ತಾಯ್ತು. ಹೆಣ್ಣೇ ಕಾವ್ಯ. ಅವಳೇ ಪ್ರಾಯ ಕಾಯ ಮೋಹ ಮಿಡಿತ ಎಂದೆ. ‘ಹ್ಹಹಹ್ಹಾ ವೆಲ್ ಸೆಡ್; ಇದೇ ರೀತಿ ಇರಬೇಕು… ಮುಂದಿನವಾರ ಮೇಲುಕೋಟೆಯಲ್ಲಿ ಪ್ರಗತಿರಂಗದ ಎರಡು ದಿನಗಳ ಪರ್ಯಾಯ ರಾಜಕೀಯ ಸಮಾಲೋಚನೆ ಎಂಬ ವಿಚಾರ ಸಂಕಿರಣ ಇದೆ. ಅಲ್ಲಿಗೆ ಬಾ… ಕ್ರಾಂತಿ ಕನ್ನೆಯ ಬಗ್ಗೆ ಪದ್ಯ ಬರೆದರೆ ಪ್ರಯೋನಜವಿಲ್ಲ. ಕ್ರಾಂತಿ ಕನ್ನೆಯನ್ನೇ ಮೈದುಂಬಿ ವಿಚಾರಗಳಲ್ಲಿ ಅಪ್ಪಿಕೊಳ್ಳಬೇಕು ಕತ್ತಲ ಬೀದಿಗಳಲ್ಲಿ ಪಂಜಾಗಿ ಉರಿದು ಮಲಗಿರುವವರು ಎದ್ದುಬರುವಂತೆ ಕ್ರಾಂತಿಗೀತೆಯ ಹಾಡಬೇಕು… ಹಿರಿಯರೆಲ್ಲ ಬರ್ತಾ ಇದ್ದಾರೆ. ಅಂತವರ ಮಾತ ಆಲಿಸಿ ಒಡನಾಡಿ ಕಲೀಬೇಕ್ರೀ… ರೆಡಿಯಾಗಿರ್ರೀ… ಕರ್ಕೊಂಡು ಹೋಗ್ತಿನಿ…’ ಎಂದು ಹೆಗಲ ಮೇಲೆ ಕೈ ಇಟ್ಟು ಮುಟ್ಟಿ ಪ್ರೀತಿ ತೋರಿದರು.
ಆ ಮೇಲುಕೋಟೆಯ ನೋಡಿರಲೇ ಇಲ್ಲ. ಇಷ್ಟವಾಗಿದ್ದ ಕವಿ ಪುತಿನ ಅವರ ಕಾವ್ಯದ ಪರಿಸರ ಅದಾಗಿತ್ತು. ಗೋಕುಲ ನಿರ್ಗಮನ ನಾಟಕವನ್ನು ಆ ಮೇಲುಕೋಟೆಯ ಬ್ರಾಹ್ಮಣರ ಮಧ್ಯಕಾಲೀನ ನಗರದ ಕಲ್ಪನೆಯಲ್ಲಿ ಸೃಷ್ಟಿಸಿದ್ದ ಆ ನಾಟಕ ಆಪ್ತವಾಗಿತ್ತು. ಗೋಪಿಕೆಯರ ವಿರಹದ ನರಳಾಟ ನನ್ನ ಕಿವಿಗೆ ತಟ್ಟಿದಂತಿತ್ತು. ಆ ದಿನ ಬಂದಿತ್ತು. ಹೇಳಿದ್ದಂತೆ ಬಸ್ ನಿಲ್ದಾಣಕ್ಕೆ ಹೋಗಿದ್ದೆ. ಬಡಪಾಯಿ ಆಗಿದ್ದೆ. ಯಾವ ಆಕರ್ಷಣೆಗಳು ಇರಲಿಲ್ಲ. ಕಡಿಮೆ ಬೆಲೆಯ ಲಿಡ್ಕರ್ ಚಪ್ಪಲಿ ಹಾಕಿದ್ದೆ. ಹಳೆಯ ಜೀನ್ಸ್ ಪ್ಯಾಂಟ್ ಸವೆದಿತ್ತು. ಮೇಲುಕೋಟೆಗೆ ಒಂದು ಲಡಾಸ್ ಬಸ್ ಇತ್ತು. ಭಕ್ತಾದಿಗಳೇ ಅದರ ಗಿರಾಕಿಗಳು. ಅಲ್ಲಲ್ಲಿನ ತುಂಡು ಹಳ್ಳಿಗಳ ಬಡ ಜನರೇ ಪ್ರವಾಸಿಗರು. ಬಸ್ ನಿಲ್ದಾಣದಲ್ಲಿ ಸುತ್ತ ನೋಡಿದೆ. ಗುರುಗಳು ಎಲ್ಲೂ ಕಾಣಲಿಲ್ಲ. ಪ್ರೋಗ್ರಾಂ ಕ್ಯಾನ್ಸಲ್ ಆಗಿರಬಹುದು; ವಾಪಸ್ಸು ಹೋಗುವ ಎಂದು ಲೆಕ್ಕಿಸುತ್ತಿದ್ದೆ. ಜನ ದಟ್ಟಣೆ ವಿಪರೀತವಾಗಿತ್ತು. ಆಗ ಕ್ರಾಂತಿಯ ಬಗ್ಗೆಯೇ ಅಂತಹ ಆಸಕ್ತಿ ಇರಲಿಲ್ಲ. ಯಾವಾಗ ಯಾರನ್ನೂ ಎಲ್ಲಿ ಯಾವ ಕಾರಣಕ್ಕೆ ಬೆಟ್ಟಿ ಆಗುತ್ತೇವೊ… ಯಾರು ಅದಕ್ಕೆಲ್ಲ ವೇದಿಕೆ ಸಿದ್ಧಪಡಿಸಿರುತ್ತಾರೊ… ಕನ್ನಡ ಸಾಹಿತ್ಯವನ್ನೆ ಸರಿಯಾಗಿ ಓದಿಕೊಂಡಿರಲಿಲ್ಲ. ಇವರೆಲ್ಲ ಒರಿಜಿನಲ್ ಅಲ್ಲ ಎನಿಸುತ್ತಿತ್ತು. ಪರರ ಹಂಗು ತುಂಬಿಕೊಂಡು ಬರೆಯುವ ಬಡಪಾಯಿ ಕವಿಗಳು ಎಂದು ಉದಾಸೀನ ಮಾಡಿದ್ದೆ. ಯಾರೊ ಆ ಗದ್ದಲದಲ್ಲಿ ಕರೆದರು. ಸುತ್ತ ನೋಡಿದೆ. ಅಲ್ಲಿ ಕಲ್ಲು ಬೆಂಚಿನ ಮೇಲೆ ಆ ಹುಡುಗಿ ಜೂನಿಯರ್ ಕೂತಿದ್ದಳು. ಮನಸ್ಸು ಜುಂ ಎಂದಿತು. ತಲಕಾಡಿಗೆ ನಾವೆಲ್ಲ ವಿದ್ಯಾರ್ಥಿಗಳು ಟ್ರಿಪ್ ಹೋಗಿದ್ದಾಗ ಮರಳು ತುಂಬಿದ ಆ ಕಾವೇರಿ ನದಿಯ ನೀರಲ್ಲಿ ನೀರೆರೆಚಿಕೊಂಡು ಆಟ ಆಡಿದ್ದು ನೆತ್ತಿಯಲ್ಲಿ ಚಿಲುಮೆಯಂತೆ ಬಂತು. ಅಹಾ! ಅವಳೇ… ನೀರಲ್ಲಿ ಕೈಕೈ ಹಿಡಿದುಕೊಂಡು ಸರಸವಾಡುತ್ತಿದ್ದಾಗ ಮಂಡಿ ಮೇಲಿನ ತನಕ ಎತ್ತಿದ್ದ ಅವಳ ಲಂಗ ದಾವಣಿಯ ಮರೆಯಲ್ಲಿ ನನ್ನ ಕೈ ಅವಳ ತೊಡೆಗಳನ್ನು ಸ್ಪರ್ಷಿಸಿತ್ತಲ್ಲವೇ… ಅಹಾ! ದೇವರೇ ಮತ್ತೆ ಇವಳೇಕೆ ಇಲ್ಲಿ ಸಿಕ್ಕಳು ಎಂದು ಆಕೆಯ ಮುಂದೆ ವಿನಮ್ರನಾಗಿ ನಿಂತೆ. ಅವತ್ತು ನನ್ನ ಕೈ ಮೀರಿ ಆಗಿದ್ದ ಆಕಸ್ಮಿಕ ಎಂಬಂತೆ ಕಣ್ಣಲ್ಲೆ ಕ್ಷಮೆ ಕೋರಿದೆ. ಹಾಗೇನಿಲ್ಲಾ… ಬೆದೆಗಾಲದಲ್ಲಿ ಅದೆಲ್ಲ ಸಹಜ ಎಂಬಂತೆ ಮೋಹಕವಾಗಿ ಪಕ್ಕ ಕೂರಿಸಿಕೊಂಡಳು. ನನ್ನ ನೆತ್ತಿಯಲ್ಲಿ ಬೆವರು ಕಿತ್ತು ಬಂದಿತ್ತು.
ನನ್ನ ಪಾಡೇ ಹಾಗಿತ್ತು. ಕರೆದರೂ ಬೇಡ ಎನ್ನುತ್ತಿದ್ದೆ. ಆಸೆಯನ್ನೆಲ್ಲ ಮುದುರಿ ಬಿಸಾಡಿ ನನಗ್ಯಾಕಪ್ಪ ದೇವರೇ; ಈ ವ್ಯವಸ್ಥೆಯಲ್ಲಿ ಇಲ್ಲಿ ತನಕ ಬದುಕಿ ಉಳಿದು ಬಂದಿರುವುದೇ ಸಾಕು… ಕಾಲ ಕೂಡಿ ಬಂದಾಗ ನೋಡೋಣ… ಕೈಯಲ್ಲಿ ಗನ್ನು ಹಿಡಿಯುವುದೊ ಪೆನ್ನು ಹಿಡಿಯುವುದೊ ಎಂದು ತೀರ್ಮಾನಿಸಲು ಇನ್ನೂ ಸಮಯ ಇದೆ ಎಂದು ನನ್ನ ಪಾಡಿಗೆ ನಾನಿದ್ದೆ, ಈ ಗೊಂದಲದಲ್ಲಿ ಈ ಹುಡುಗಿ, ಈ ಗುರುಗಳ ಕೈಗೆ ಸಿಕ್ಕಿಬಿದ್ದೆನಲ್ಲಾ ಎಂದು ಮನಸ್ಸು ಇಟ್ಟಾಡಿತು. ಅವಳ ದೃಷ್ಟಿಯೋ ವಿಪರೀತ ನನ್ನ ಮೇಲೆ ಹರಿದಾಡುತಿತ್ತು. ಅವಳ ದಿಟ್ಟಿಸಲಾರದೆ ಅತ್ತಿತ್ತ ನೋಡುತ್ತಿದ್ದೆ. ತುಂಬ ಚೆನ್ನಾಗಿ ಗಡ್ಡ ಬೆಳೆಸಿದ್ದೀರಿ ಎಂದಳು. ಉತ್ಸಾಹ ತೋರಲಿಲ್ಲ. ಘಮ್ಮೆನ್ನುತ್ತಿದ್ದಳು.
ಅವಳು ಯಾವ ಸಂಕೋಚವನ್ನೂ ಇಟ್ಟುಕೊಂಡಿರಲಿಲ್ಲ. ‘ನಗುವಾಗ ನಕ್ಕುಬಿಡಬೇಕು; ಅಳುವಾಗ ಅತ್ತುಬಿಡಬೇಕುʼ ಎಂದು ವಾರೆಗಣ್ಣಲ್ಲಿ ನಕ್ಕಳು. ಹೂ ಎಂದು ನಾನೂ ನಕ್ಕೆ. ‘ನೀವು ಆ ತಲಕಾಡನ್ನು ಮರೆತುಬಿಟ್ಟಿರಾ…’ ಎಂದು ತಿನ್ನುವಂತೆ ನೋಡಿದಳು. ‘ನೆನಪಿದೆ’ ಎಂದೆ. ಅವತ್ತು ತಲಕಾಡಿನ ಆ ನರಸಿಂಹ ದೇವಾಲಯ ಗರ್ಭಗುಡಿಗೆ ಕಂಬಿಗಳ ಸಂದಿಯ ಇಕ್ಕಟ್ಟಿನ ಸರದಿ ಸಾಲಲ್ಲಿ ಹೋಗುವಾಗ ಅವಳ ಹಿಂದೆಯೆ ನಿಂತಿದ್ದೆ. ಅವಳ ಜೊತೆ ಬೆರೆತಂತೆ ಬೆವೆತಿದ್ದೆ. ತ್ರಿವೇಣಿ ಸಂಗಮದ ಜಾತ್ರೆಯಕಾಲ. ದೇವರ ದರ್ಶನ ಮಾಡಲು ಹೋಗಿ ನಾನವಳ ದರ್ಶನವ ಕಂಡಂತಾಗಿತ್ತು. ಇಷ್ಟಾಗಿದ್ದರೂ ಏನೂ ಆಗಿಲ್ಲ ಎಂಬಂತೆ ದೂರ ದೂರವೆ ಇದ್ದೆವು. ಅವಳು ಅಲ್ಲಿ ಇಲ್ಲಿ ಕಾಣುತ್ತಿದ್ದಳು. ಹುಡುಗಿಯರ ನಡುವೆ ಖಾಸಗಿಯಾಗಿ ಕಣ್ಣುಗಳು ಮಾತನಾಡುವಂತಿರಲಿಲ್ಲ. ಅವೆಲ್ಲ ಯಾಕೀಗ… ಈಗ ಇಲ್ಲಿ ಮತ್ತೆ ಸಿಕ್ಕಿದ್ದಾಳಲ್ಲಾ… ಹಾಯಾಗಿರು ಎಂದಿತು ಪ್ರಾಯದ ದುರಾಸೆ. ಮೇಲುಕೋಟೆಗೆ ಇದ್ದದ್ದು ಕೆಲವೇ ಬಸ್ಸುಗಳು. ಬರಬೇಕಾಗಿದ್ದು ಬಂದೇ ಇರಲಿಲ್ಲ. ವಿಪರೀತ ಜನ ಕಾಯುತ್ತಿದ್ದರು. ಗುರುಗಳು ಇನ್ನೂ ಬಂದಿಲ್ಲವಲ್ಲಾ ಎಂದು ಕೇಳಿದೆ. ಅವರು ಹೇಗಾದರು ಬರುತ್ತಾರೆ. ಬಂದರೆ ಜೊತೆಗೆ ಹೋಗುವ; ಇಲ್ಲದಿದ್ದರೆ ನಾವೆ ಬಸ್ಸೇರಿ ಹೊರಡುವ ನಿಧಾನಕ್ಕೆ ಬಂದು ಸೇರಿಕೊಳ್ಳುವರು ಎಂದಳು. ಸರಿ ಎನಿಸಿತು.
ಗಿಜಿಗುಟ್ಟುವ ನಿಲ್ದಾಣ. ಜನಾಜನಾ. ಅವರವರ ಊರ ದಾರಿಯ ದಾವಂತ. ಪುಂಡು ಪೋಕರಿ ಕಳ್ಳರು ಹೊಂಚು ಹಾಕುತಿದ್ದರು. ಅಂತಲ್ಲೂ ಬೆಂಚಿನ ಕೆಳಗೆ ಹಲವು ನಾಯಿಗಳು ವಸತಿ ಹೀನರಂತೆ ಮಲಗಿಕೊಂಡಿದ್ದವು. ಚಿಲ್ಲರೆ ವ್ಯಾಪಾರಿಗಳು ಏನೇನೊ ಮಾರುತ್ತಿದ್ದರು. ಗದ್ದಲ ಕೂಗಾಟ… ರೇಜಿಗೆ. ಮೇಲುಕೋಟೆಗೆ ನಾವು ಹೋಗುವುದು ದಿಟವೇ ಎನಿಸುತ್ತಿತ್ತು. ವಿಚಾರಿಸಿದೆ. ಹತ್ತು ನಿಮಿಷ ತಾಳಿ ಎಂದರು. ಗುರುಗಳು ಬಂದರು. ಸಲಾಮು ಹಾಕಿದೆ. ನನ್ನ ನಮಸ್ಕಾರದತ್ತ ಅವರಿಗೆ ಗಮನ ಇರಲಿಲ್ಲ. ಅವಳೂ ಎದ್ದು ನಿಂತು ವಂದಿಸಿದ್ದಳು. ಆಕೆಯ ಜೊತೆ ಆನಂದವಾಗಿ ನಗಾಡಿದರು. ಒಂದು ಅಂತರ ಕಾಯ್ದುಕೊಂಡಿದ್ದಳು. ಒಂದಿಷ್ಟು ಸ್ನ್ಯಾಕ್ಸ್, ವಾಟರ್ ಬಾಟಲ್ ತನ್ರೀ ಎಂದು ದುಡ್ಡುಕೊಟ್ಟರು. ತಂದೆ. ಬಸ್ಸು ಬಂದ ಕೂಡಲೆ ನೀವು ನುಗ್ಗಿ ಹೋಗಿ ಟವೆಲ್ ಹಾಕಿ ಸೀಟು ಹಿಡಿಯಬೇಕು. ಪ್ರಾಣಿಗಳ ರೀತಿ ಬೀಳುತ್ತಾರೆ ಈ ಜನಾ… ಪಿಕ್ ಪಾಕೆಟರ್ಸ್ ಇರ್ತಾರೆ… ಉಷಾರು. ಚಂಗನೆ ನೆಗೆದು ಕಿಟಕಿಯಲ್ಲಿ ತೂರಿಯಾದರೂ ಸೀಟು ಹಿಡಿಯಬೇಕು ಎಂದು ಗುರುಗಳು ಆಜ್ಞೆ ಮಾಡಿದರು. ನನಗದೇನು ಕಷ್ಟ ಅನಿಸಿರಲಿಲ್ಲ. ಬಂತು ಬಂತು ಬಸ್ಸು ಬಂತು ಎಂದು ಆ ಜನ ಕೂಗಾಡಿದರು. ಪ್ಲಾಟ್ ಫಾರಂಗೆ ಬರುವ ಮುನ್ನವೇ ಕೆಲವರು ಅತ್ತ ನೆಗೆದು ಬಾಗಿಲು ತೆಗೆದು ನುಗ್ಗತೊಡಗಿದರು. ಕಿಟಕಿಗಳನ್ನು ಒಬ್ಬೊಬ್ಬರೂ ಹಿಡಿದು ನೇತಾಡಿಕೊಂಡೇ ಒಳಗೆ ಟವೆಲ್ ಎಸೆದು ಹಕ್ಕು ಚಲಾಯಿಸುತ್ತಿದ್ದರು.
ಅದೊಂದು ಬಲಾಢ್ಯ ರಗ್ಬಿ ಪಂದ್ಯಾವಳಿಯಂತಿತ್ತು. ಬಡಪಾಯಿಗಳು ಕೂಗಾಡುತ್ತ ನುಗ್ಗಲು ಯಮ ಪ್ರಯತ್ನ ಪಡುತ್ತಿದ್ದರು. ನುಗ್ರೀ… ಹೇಗಾದ್ರು ಮಾಡ್ರಿ ಎಂದು ಗುರುಗಳು ದೂರ ನಿಂತೇ ಗದರಿದರು. ಆ ಪರಿ ಜನರ ಕೂಗಾಟದ ಸದ್ದಿನಲ್ಲು ಅವರ ಕಹಳೆಯಂತಹ ಸದ್ದು ಎದೆಗೆ ಬಡಿದಿತ್ತು. ಗುರುಗಳಿಗೆ ಸೀಟು ಹಿಡಿದುಕೊಡಲೇಬೇಕೆಂದು ಶತಪ್ರಯತ್ನ ಮಾಡಿ ಒಳ ತೂರಿದೆ. ಯಾವಳೊ ದಢೂತಿ ಹೆಂಗಸು ನನ್ನ ಪ್ಯಾಂಟಿನ ಬೆಲ್ಟನ್ನೆ ಆಸರೆಯಾಗಿ ಹಿಡಿದು ಮೆಟ್ಟಿಲು ಹತ್ತುತ್ತಿದ್ದಳು. ಇನ್ನಾವನೊ ಮೊಳಸಂದಿನಿಂದ ಪಕ್ಕೆಗೆ ತಿವಿದು ನುಗ್ಗಿದ್ದ. ನಾನು ತೊಡರಿ ಬಿದ್ದು; ಆ ಹೆಂಗಸೂ ಉರುಳಿ; ದೊಡ್ಡಗದ್ದಲವೇ ಆಗಿ; ಇನ್ಸರ್ಟ್ ಬಿಚ್ಚಿಹೋಗಿ ಪ್ಯಾಂಟಿನ ಗುಂಡಿಯು ಪಟ್ಟೆಂದು ಕಿತ್ತು ಹೋಗಿತ್ತು. ಸದ್ಯ ಬೆಲ್ಟು ಬಿಚ್ಚಿ ಹೋಗಿರಲಿಲ್ಲ. ಬಿದ್ದ ಹೆಂಗಸಿನ ಮೇಲೆಯೆ ಕೆಲವರು ತುಳಿದು ನುಗ್ಗಿದರು. ಬೆವರು ಕಿತ್ತು ಬಂದಿತ್ತು. ಕೂಗಾಡಿದೆ. ಥತ್ ಯಾವ ಮೇಲುಕೋಟೆಯೊ ಏನೊ ಎಂದು ಯಾರನ್ನೊ ಹಿಡಿದು ಮುಂದೆ ಬಂದರೆ ಆ ದರಿದ್ರ ದಡೂತಿ ಹೆಂಗಸು ನನ್ನ ಬೆನ್ನುಬಿಟ್ಟಿರಲಿಲ್ಲ. ಹಡಗಿನಿಂದ ಇಂತವರ ಜೊತೆ ನೀರಿಗೆ ಬಿದ್ದರೆ ಏನುಗತಿ ಎಂದು ಸಿಟ್ಟಾಗಿ ಆ ಹೆಂಗಸಿಗೆ ಗದರಿದೆ. ಐನಾತಿ ಹೆಣ್ಣು ಅದುಮಿಬಿಡುವಂತೆ ಮುಂದೆ ನಡೆಯಯ್ಯೋ ಎಂದು ಉಪೇಕ್ಷಿಸಿದ್ದಳು. ಸುತ್ತ ಮುತ್ತ ನೋಡಿದರೆ ಆಗಲೆ ಬಸ್ಸು ತುಂಬಿದೆ! ಆ ಹುಡುಗಿ ಅದಾವ ಮಾಯದಲ್ಲಿ ನುಗ್ಗಿದ್ದಳೊ ಏನೊ ಕಿಟಕಿ ಬಳಿ ಕೂತು ಸೀಟು ಇಲ್ಲಿದೆ ಬಾ ಎಂದು ಜೋರಾಗಿ ಕರೆದಳು. ದಬಕ್ಕನೆ ಅವಳತ್ತ ನುಗ್ಗಿದೆ. ಮೂರು ಜನ ಕೂರುವ ಸೀಟು. ಆ ದಡೂತಿ ರಗಳೆ ಹೆಂಗಸು ನನ್ನನ್ನು ಅವಳತ್ತ ನೂಕಿ ಕೂತುಕೊಳ್ಳಲು ಜಗಳ ತೆಗೆದಿದ್ದಳು.
ಯುದ್ಧೋಪಾದಿಯ ಆ ನೂಕಾಟದಲ್ಲಿ ಗುರುಗಳು ಒಂದು ಹೆಜ್ಜೆಯನ್ನೂ ಒಳಗೆ ಇಡಲು ಸಾಧ್ಯವಿರಲಿಲ್ಲ. ‘ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ನಡತೆಯೇ ಬಂದಿಲ್ಲವಲ್ಲಾ… ಕಲ್ಚರ್ ಲೆಸ್ ಪೀಪಲ್’ ಎಂದೇನೊ ಹಳಿಯುತ್ತಿದ್ದರು. ಸೀಟಿಗಾಗಿ… ಬೈಯ್ದಾಟ… ಕೈಕೈ ಮಿಲಾಯಿಸುತ್ತಿದ್ದರು. ಯಾವ ರೀತಿಯಲ್ಲು ಗುರುಗಳು ಒಳಗೆ ಬರಲು ಸಾಧ್ಯ ಇಲ್ಲ ಎನಿಸಿ; ಇಳಿದು ನುಗ್ಗಿಸಿಕೊಂಡು ಬರೋಣ ಎಂದು ಬಸ್ಸಿಳಿಯಲು ಯತ್ನಿಸಿದೆ. ಆಕೆ ಕೈ ಹಿಡಿದೆಳೆದು ಕೂರಿಸಿದಳು. ಇಳಿಯಲು ಸಾಧ್ಯವಾಗಲಿಲ್ಲ. ಅವರು ಒಳಬಂದಾಗ ಸೀಟು ಬಿಟ್ಟುಕೊಡುವ ಎಂದು ಸೆಕೆಯಿಂದ ಬೆವರು ಒರೆಸಿಕೊಂಡೆ. ಡವ ಡವ ಎದೆ ಬಡಿತ. ಏನೊ ತಪ್ಪಿತಸ್ಥ ಭಾವನೆ ಸುತ್ತಿ ಬರುತ್ತಿತ್ತು. ಎಲ್ಲೆಡೆ ಸೀಟುಗಳು ಭರ್ತಿ ಆಗಿದ್ದವು. ಕಾಯ್ದಿರಿಸಿಕೊಂಡಿದ್ದ ಸೀಟನ್ನು ಧಡೂತಿ ಹೆಂಗಸು ಆವರಿಸಿಕೊಂಡಳು. ನಮ್ಮಿಬ್ಬರನ್ನು ಗುಬ್ಬಿಗಳನ್ನಾಗಿ ಮಾಡಿ ನೂಕಿ ಒತ್ತರಿಸಿ ತನ್ನ ದೇಹಕ್ಕೆ ಎಷ್ಟು ಜಾಗ ಬೇಕೊ ಅಷ್ಟನ್ನೂ ಆಕ್ರಮಿಸಿಕೊಂಡಳು. ಘಾಟಿ ಹೆಂಗಸು. ಜನ ಅವಳ ಪರವಾಗಿಯೇ ಇದ್ದರು. ಗುರುಗಳು ಬಾಗಿಲಲ್ಲೇ ನಿಂತು ನುಗ್ಗಲು ಹೆಣಗಾಡುತ್ತಿದ್ದರು. ಸಿಟ್ಟಾಗಿದ್ದರು. ಹೇಯ್; ಕಂಡಕ್ಟರ್, ಬಾರಯ್ಯ ಇಲ್ಲಿ ಜಾಗ ಬಿಡಿಸೂ… ಸೀಟು ಕಾಯ್ದಿರಿಸಿದೆ ಒಳ ಹೋಗುವೆ ಜಾಗ ಬಿಡ್ರಿ ಎಂದರೂ ಜನ ಕೇರು ಮಾಡಿರಲಿಲ್ಲ. ಈ ವ್ಯವಸ್ಥೆ ಸರ್ಕಾರಗಳ ಮೇಲೆ ಗುರುಗಳು ಕಾಗಾಡಿದಂತೆ ಟೀಕಿಸುತ್ತಿದ್ದರು. ಅಲ್ಲೆಲ್ಲು ನಮ್ಮ ವಿಚಾರ ಕ್ರಾಂತಿಗಳಿಗೆ ಅರ್ಥ ಇರಲಿಲ್ಲ. ಆದರೆ ಹೋಗುತ್ತಿರುವುದು ಮಾತ್ರ ಪರ್ಯಾಯ ವಿಚಾರ ಕ್ರಾಂತಿಯ ಮಂಥನಕ್ಕೆ. ವಿಚಿತ್ರ ಸಮಾಜ; ಅಸಂಗತ ಎನಿಸಿತು. ಆಕೆ ನಿರಾಳವಾಗಿದ್ದಳು. ಗುರುಗಳ ಬದಲಿಗೆ ನಾನು ಆಕೆಗೆ ಅಂಟಿಕೊಂಡಂತೆ ಕೂತಿರುವುದು ಹಿತವಾಗಿತ್ತು. ಆಳದಲ್ಲಿ ನನಗೂ ಪುಳಕವಾಗಿತ್ತು. ಕಂಡಕ್ಟರ್ ಪತ್ತೆಯೇ ಇರಲಿಲ್ಲ. ಅಷ್ಟರಲ್ಲಾಗಲೆ ಸೀಟಿಗಾಗಿ ಮಿನಿವಾರ್‌ಗಳು ನಡೆದು; ಈಗ ಅವರ ಸಿಟ್ಟು ಡ್ರೈವರ್ ಕಂಡಕ್ಟರ್‌ಗಳತ್ತ ತಿರುಗಿತ್ತು. ಡ್ರೈವರ್ ಬಂದು ಗಾಡಿ ಆನ್ ಮಾಡಿದ.
ಗುರುಗಳು ಹೇಗೊ ಹತ್ತಿರ ಬಂದಿದ್ದರು. ಯಾವುದೊ ಹೆಂಗಸು ಗುರುಗಳ ಮೇಲೆ ರೇಗಿತು. ‘ಅಯೋ ಅತ್ತಾಗಿ ಸುಮ್ನೆ ನಿಂತ್ಕೋ. ಇದೇನು ಇಂಗೆ ಒತ್ತಿಕತಾ ಬತ್ತಿದ್ದೀಯಲ್ಲಾ’ ಎಂದಳು. ಗುರುಗಳು ಅಲ್ಲೆ ಸ್ಟ್ರಕ್ ಆದರು. ಅವರನ್ನು ಕರೆವ ಧೈರ್ಯ ಬರಲಿಲ್ಲ. ವಿನಯವಂತನಂತೆ ಕೊಕ್ಕರಿಸಿಕೊಂಡು ಕೂತಿದ್ದೆ. ಅವಳೇ ಆಗಾಗ ವಾಲಾಡಿ ನನ್ನತ್ತ ಬೀಳುತ್ತಿದ್ದಳು. ಅವಳ ಎದೆ ಆಗಾಗ ಒತ್ತುತ್ತಿತ್ತು. ಅತ್ತ ಗುರುಗಳು, ಇತ್ತ ತರುಣಿ… ಬಹಳ ಕಷ್ಟವಾಗುತ್ತಿತ್ತು. ಕಿವಿಯತ್ತ ಬಾಯಿಟ್ಟು ಏನೊ ಪಿಸುಗುಟ್ಟಿದಳು. ತಲಕಾಡು ನೆನಪಾಯಿತು. ಅವಳ ಪ್ರಾಯದ ಬೆವರು ಗಂಧಮಯವಾಗಿತ್ತು. ಬಿಸಿಯಾಗಿದ್ದೆ. ತೀವ್ರತೆಯಲ್ಲಿ ಆಗ ಅವಳು ನಾನೆಂದೂ ನಿನ್ನ ಬಿಡಲಾರೆ ಎಂದು ಹಿಡಿದುಕೊಂಡಿದ್ದಳು. ಕಾಮದಿಂದಲೆ ಪ್ರೇಮ ಹುಟ್ಟಿದೆ… ಸ್ಪರ್ಷದಿಂದಲೆ ಕಾಮ ಸಾರ್ಥಕತೆಯ ಅನುಭವಿಸಿದೆ. ಅನುರಾಗ, ಒಲವು, ಮೋಹ ಇವೆಲ್ಲ ಪ್ರಾಯ ಕಾಮದ ಅತೀಂದ್ರಿಯ ಶಕ್ತಯೇ ಆಗಿವೆ ಎಂದುಕೊಂಡಿದ್ದೆ. ಬಸ್ಸಿಂದಿಳಿದೆವು. ಆ ಬೆಟ್ಟಸಾಲು ಕಣಿವೆಯ ಮರೆಗೆ ಹಾರಿಹೋಗಬೇಕು ಎನಿಸುತಿತ್ತು. ಹೆಜ್ಜೆ ಇಡಲೇ ಆಗುತ್ತಿರಲಿಲ್ಲ. ಗುರುಗಳ ಪ್ರೀತಿಗೆ ಶರಣು… ‘ಇರಲಿ ಬನ್ನೀ… ಜೀವನದಲ್ಲಿ ಇನ್ನೂ ಮುಂದೆ ನೀವು ಹೀಗೆಯೆ ಬಹಳ ದೂರ ಸಾಗಬೇಕಾದವರು… ನಾನು ನಿಮಿತ್ತ ಮಾತ್ರ’ ಎಂದು ಪ್ರಗತಿ ರಂಗದ ಕಾರ್ಯಕ್ರಮದತ್ತ ಕರೆತಂದು ಇಲ್ಲೆ ಕೂರಿ ಎಂದು ಹೇಳಿ ಗಣ್ಯರ ಸಾಲಿನತ್ತ ಹೊರಟರು.
ತಡವಾಗಿ ಹೋಗಿದ್ದೆವು. ನಮಗಿಂತಲೂ ಮೊದಲೆ ಇನ್ನಿಬ್ಬರು ಹುಡುಗಿಯರು ಅಲ್ಲಿದ್ದರು. ನಮ್ಮನ್ನು ಕಂಡು ಬಂದು ಮಾತಾಡಿದರು. ಅವರಿಗು ಕಂಪನಿ ಬೇಕಿತ್ತು. ಖುಷಿ ತುಂಬಿತ್ತು ಅವರ ಮುಖದಲ್ಲಿ. ಲೇಖಕರ ದಂಡೇ ಸೇರಿತ್ತು. ಅವರೇ, ಅವರೇ ಲಂಕೇಶ್ ಎಂದು ನೋಡುತ್ತ ಬೆರಗಾಗುತ್ತಿದ್ದರು. ಅವರ ಸಾಹಿತ್ಯವನ್ನು ಅಷ್ಟಾಗಿ ಓದಿರಲಿಲ್ಲ. ಸೆಮಿನಾರ್ ಹಾಲ್ ತುಂಬಿತ್ತು. ಎಲ್ಲಿಯ ಮೇಲುಕೋಟೆ ಇದೆಲ್ಲಿಯ ಕ್ರಾಂತಿಕಾರಿ ಪ್ರಗತಿ ಪರ ಚಿಂತಕರ ಸಭೆ ಎಂದು ನನಗೆ ನಿರಾಸಕ್ತಿ ಉಂಟಾಯಿತು. ಅವಳಿಗೂ ಅದೇ ಭಾವನೆ. ಎದ್ದು ಹೊರಗೆ ಹೋಗಿ ಬಚ್ಚಿಟ್ಟುಕೊಂಡು ಮುದ್ದು ಮಾಡುವ ಉತ್ಕಟ ದಾಹ! ಆ ಇನ್ನಿಬ್ಬರು ಹುಡುಗಿಯರೂ ಗುರುಗಳ ಶಿಷ್ಯೆಯರೇ ಆಗಿದ್ದರು. ಅವರಿಗೂ ಗುರುಗಳೆ ಕರೆದಿದ್ದರು. ಒಟ್ಟಿನಲ್ಲಿ ಕನ್ನೆಯರು ಇರಬೇಕು ಎಂಬುದು ಅವರ ಸಿದ್ಧಾಂತ. ಅದರಿಂದ ಅವರಿಗೆ ಬಹಳ ಉಪಕಾರ ಆಗಿದೆ ಎಂದು ನನಗಂತು ಎಂದೂ ಅನಿಸಿರಲಿಲ್ಲ. ನಷ್ಟವೇ ಆಗಿರಬೇಕನಿಸಿತ್ತು. ಗಣ್ಯ ಸಾಹಿತಿಗಳ ಪರಿಚಯ ಮಾಡಿಕೊಳ್ಳುವ ಯೋಗ್ಯತೆಯೆ ಆಗ ನನಗಿರಲಿಲ್ಲ. ನಿಸ್ಸಂದೇಹವಾಗಿ ಅಲ್ಲಿದ್ದವರೆಲ್ಲ ಜಾತ್ಯಾತೀತ ಚಿಂತಕರು ಎಂದು ತಕ್ಷಣ ಗೊತ್ತಾಗಿತ್ತು. ಅಷ್ಟೊತ್ತಿಗಾಗಲೆ ನಾನು ಸಾಹಿತ್ಯೇತರ ಸಮಾಜ ವಿಜ್ಞಾನಗಳ ಮೈಲುಗಲ್ಲುಗಳ ಎಣಿಸಿದ್ದೆ. ಬರೆದಿರಲಿಲ್ಲ.; ಎಲ್ಲೂ ಮಾತೂ ಆಡಿರಲಿಲ್ಲ. ಸಂಜೆ ಬಂದೇ ಬಿಟ್ಟಿತು. ಬನ್ನಿ ಗಿರಿಸಾಲುಗಳ ಮೇಲೆ ಇಳಿಸೂರ್ಯನ ಬೆಳಕಿನ ಮಾಟವ ನೋಡಿ ಬರುವ ಎಂದು ಗುರುಗಳು ಕರೆದರು. ಆ ಇಬ್ಬರು ಮತ್ತು ಇವಳು ಹಾಗು ಗುರುಗಳು ಮುಂದೆ ಹೊರಟರು. ನಾನು ಅವರ ಹಿಂದೆ ನಡೆದೆ. ಅಕ್ಕತಂಗಿಯರ ಕೊಳಗಳ ನೋಡಿದೆವು. ಪುತಿನ ಅವರ ಕಾವ್ಯದ ರಮ್ಯಲೋಕವೆ ಆ ಮೇಲುಕೋಟೆಯ ಸುಂದರ ಪರಿಸರವಾಗಿತ್ತು. ದೇಗುಲಗಳ ಸುತ್ತಿದೆವು. ಕತ್ತಲಾಗುತ್ತಿದ್ದಂತೆಲ್ಲ ಎದೆ ಬಡಿತ ಏರಿಳಿಯುತ್ತಿತ್ತು. ಅಲ್ಲೊಂದು ಹುಲ್ಲು ಹಾಸಿನಲ್ಲಿ ಕೂತೆವು. ಹಾಡು ಹೇಳಲೇಬೇಕೆಂದರು ಗುರುಗಳು. ‘ಇನ್ನೂ ಯಾಕೆ ನಿಮಗೆ ನಾಚಿಕೆ… ಹತ್ತಿರ ಕೂತುಕೊಳ್ಳೀ… ಅಯ್ಯೋ ಕೈಕೈ ಹಿಡಿದುಕೊಳ್ಳಿ! ಅದನ್ನೂ ಹೇಳಿಕೊಡಬೇಕೇ’ ಎಂದು ಸಂಕೋಚ ಬಿಡಿಸಿದರು. ಉಳಿದ ಆ ಇಬ್ಬರು ಹುಡುಗಿಯರು ಸಖತ್ ಜಾಣೆಯರು. ನಮ್ಮಿಬ್ಬರಿಗೆ ಗುರುಗಳು ಪ್ರೋತ್ಸಾಹಿಸುವುದ ಕಂಡು ಕೊಂಚ ಅಂತರ ನಿರ್ಮಿಸಿದರು. ಆಕೆ ಒಂದು ಸಿನಿಮಾ ಹಾಡು ಹೇಳಿದಳು. ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’ ಎಂಬ ಆ ಹಾಡನ್ನು ನನಗಾಗಿಯೆ ಹಾಡಿದಂತಿತ್ತು. ನೀನೊಂದು ಹೇಳೂ ಎಂದರು ನನ್ನತ್ತ ನೋಡಿ. ಆ ಹಾಡನ್ನು ನಾನು ಹಳ್ಳಿಯಲ್ಲಿ ಕಲಿತಿದ್ದೆ. ಎಂತಹ ಚೋದ್ಯ… ‘ಏನೆಂದು ಹಾಡಲಿ ಏನೆಂದು ಕರೆಯಲಿ ಶಿವನಾsss ತಾನಾಗಿ ಬರದವನಾ… ನಾನೊಂದು ವೃಕ್ಷವಾಗೀ; ನೀನೊಂದು ರೆಂಬೆಯಾಗೀ; ಈ ರೆಂಬೀ ಇಲ್ಲಾದ ವೃಕ್ಷಾsss; ಈ ವೃಕ್ಷಾsss ವಿಲ್ಲಾದ ರೆಂಬೀsss ಹಾಳಾಗಿ ಹೋಯಿತಲ್ಲೊ’ ಎಂದು ರಾಗ ಬದ್ಧವಾಗಿ ಲಯ ತಪ್ಪದೆ ಆ ತತ್ವಪದವ ಹಾಡಿದ್ದೆ. ನನಗೆ ತಂತಾನೆ ಲಯ ನಾದ ಶೃತಿ ತಾಳ ಮೇಳ ಸ್ವರ ಕೂಡಿ ಬಂದಿವೆ ಎಂಬುದು ಯಾರಿಗೂ ಗೊತ್ತೇ ಇರಲಿಲ್ಲ. ನನ್ನ ಬಾಲ್ಯದಲ್ಲಿ ಅಂತಹ ನೂರಾರು ಪದಕಾರರು ತಾತನ ಹೋಟೆಲಿಗೆ ಬಂದು ಉಳಿದು ರಾತ್ರಿಪೂರ ಹಾಡುತ್ತಿದ್ದರು. ಹಾಗಾಗಿ ಆ ನಾಭಿಯಾಳದ ಶೃತಿಯನ್ನು ಹಿಡಿದೆತ್ತಿ ಹಾಡಬಲ್ಲವನಾಗಿದ್ದೆ.
ಗುರುಗಳು ಮಾರ್ಮಿಕವಾಗಿ ಆಲಿಸಿ ನೋಡಿ; ಯಾಕೆ ಇಬ್ಬರೂ ಒಬ್ಬರಿಗೊಬ್ಬರು ವಿದಾಯದ ಹಾಡು ಹಾಡಿಕೊಂಡಿರಿ ಎಂದು ಮೌನವಾದರು. ಗೂಡು ಸೇರಲು ಬೆಳ್ಳಕ್ಕಿಗಳು ಗಿಳಿಗಳು ನಮ್ಮ ತಲೆಯ ಮೇಲೆಯೇ ಸಾಗುತ್ತಿದ್ದವು. ಕತ್ತಲು ನಮ್ಮಿಬ್ಬರನ್ನು ಒತ್ತರಿಸಿಕೊಂಡು ಬರುತ್ತಿತ್ತು. ಗಿರಿಸಾಲುಗಳಿಂದ ತಂಗಾಳಿ ಬೀಸುತ್ತಿದ್ದರೂ ನಮಗದರ ಗಮನವೆ ಇರಲಿಲ್ಲ. ದೊಡ್ಡವರೆಲ್ಲ ಒಂದೆಡೆ ಇದ್ದರು. ಲಂಕೇಶರ ಬಳಗ ಎಂದರೆ ಅಲ್ಲಿ ಎಲ್ಲ ಸುಖ ಸಂತೋಷಗಳೂ ಇಟ್ಟಾಡುವಷ್ಟಿರುತ್ತಿದ್ದವು. ಗುರುಗಳಿಗೆ ಜವಾಬ್ದಾರಿ ಇತ್ತು. ಮೇಲುಕೋಟೆಯಲ್ಲಿ ಹಿರಿಯರಾದ ಒಬ್ಬರು ಗಾಂಧಿವಾದಿ ಇದ್ದರು. ಉಪ್ಪರಿಗೆ ಮನೆ. ಸಭ್ಯ ಬ್ರಾಹ್ಮಣರು. ಅವರ ಮನೆಗೆ ಕರೆತಂದರು. ಹುಡುಗಿಯರನ್ನು ಇಲ್ಲೇ ಮಲಗಿಸುವುದು ಸೂಕ್ತ ಎಂದು ಹಾಗೆ ಮಾಡಿದ್ದರು. ಗುರುಗಳ ವಾಂಚೆ ಏನಿತ್ತೊ ಏನೊ… ಸಭ್ಯರಾಗಿ ಹಿಂದೆ ಸರಿದಿದ್ದರು. ಅಲ್ಲೆ ಊಟ ಆಯಿತು. ಉಪ್ಪರಿಗೆಯಲ್ಲಿ ನಾನು ಮತ್ತು ಆ ಮೂವರು ಹುಡುಗಿಯರು ಮಲಗುವುದಾಗಿತ್ತು. ಹತ್ತು ಗಂಟೆ ಆದರೂ ಆ ಇಬ್ಬರು ಹುಡುಗಿಯರು ವ್ಯರ್ಥವಾದ ಹಳೆಗನ್ನಡವನ್ನೊ ಛಂದಸ್ಸನ್ನೊ ಕುರಿತು ಅನವಶ್ಯಕವಾಗಿ ತಡ ಮಾಡುತ್ತಿದ್ದರು. ಅವರ ಆ ರಗಳೆಗೆ ನಾನು ಕಿವಿಗೊಟ್ಟಿರಲಿಲ್ಲ. ಅವಳು ಆ ಮಂದ ಬೆಳಕಲ್ಲಿ ನನ್ನನ್ನೇ ಒಂದು ಕಂಬದ ಮರೆಯಲ್ಲಿ ಬಾಯಾರಿ ನೋಡುತ್ತಿದ್ದಳು. ನನಗಂತು ಜವ್ವನದ ಜ್ವರ ಬಂದು ಬಿಟ್ಟಿತ್ತು. ಮಲಗೋಣ… ಸುತ್ತಾಡಿ ಸುಸ್ತಾಗಿದ್ದೀವಿ ಎಂದಳು ನನ್ನ ಚೆಲುವೆ. ಹೇ; ಸುಮ್ನೆ ಇರೇ… ಫ್ರೀಯಾಗಿ ಇಲ್ಲಾದರೂ ಇರಬಾದರೇನೇ… ಏನಾದರೂ ಜೋಕು ಹೇಳೆ ಎಂದು ಅವಳ ಮನೋ ಪ್ರಾಯದ ಮೇಲೆ ಕಣ್ಣೀರು ಎರಚುತ್ತಿದ್ದರು. ನಾನು ನಿದ್ದೆ ಬಂದವನಂತೆ ತೂಗಾಡಿ ತಲೆ ಆಡಿಸಿದೆ. ‘ಹೇ; ಕಳ್ಳಾ! ಇಡೀ ರಾತ್ರಿಯೆಲ್ಲ ಓದುತ್ತಾ ಇರ್ತೀನಿ ಅಂತಿಯೇ; ಈಗ ನೋಡಿದ್ರೆ ನಾಟಕ ಮಾಡ್ತೀಯಾ… ನಮಗೆ ಗೊತ್ತು! ನಮ್ಮ ಜೊತೆ ಹರಟೆ ಹೊಡಿ ನೀನು… ‘ಹೆಯ್ ನೀನು ಈ ಗೋಡೆ ಪಕ್ಕ ಮಲಗಿಕೊಳ್ಳೆ’ ಎಂದು ಮೂಲೆಗೆ ಸೇರಿಸಿ ಅವಳನ್ನೂ ಕಾಯುವಂತೆ ಅಡ್ಡ ಮಲಗಿದರು. ಆಗ ತಾನೆ ನೈಟಿ ಹಾಕುವ ರೂಢಿಬಂದಿತ್ತು. ಅವರ ದೇಹದ ಅಂಗಾಂಗಗಳ ಆ ಬಟ್ಟೆಯಲ್ಲಿ ಅಂದಾಜಿಸಬಹುದಿತ್ತು. ಬೇಕೆಂತಲೆ ನನ್ನ ಮನಸ್ಸನ್ನು ಕೆಡಿಸಿ ಫೂಲ್ ಮಾಡಲು ಈ ಇವರು ಪ್ಲಾನು ಮಾಡುತ್ತಿದ್ದಾರೆ ಎಂಬುದು ಖಚಿತವಾಯಿತು. ನನಗೆ ಆ ಚೆಲುವೆಯದೇ ಚಿಂತೆ. ಅವಳು ಏನೂ ಮಾಡುವಂತಿರಲಿಲ್ಲ. ಮಾತಾಡಲು ಬಿಡುತ್ತಿರಲಿಲ್ಲ. ಗೊರಕೆಯ ಸದ್ದಿನ ಆಯುಧ ಬಳಸಿದೆ. ‘ಹಹಹಾsss; ನೋಡೇ! ಇವ್ನಿಗೆ ಆಗ್ಲೆ ಗೊರ್ಕೆ ಬಂದ್ಬಿಡ್ತು… ಮಧ್ಯ ರಾತ್ರಿಗೆ ಏನ್ಬರುತ್ತೊ ಏನೊ’ ಎಂದು ಕುಲುಕುಲು ನಗಾಡಿದರು. ಮಗ್ಗಲು ಬದಲಿಸಿದ್ದರಿಂದ ಗೊರಕೆ ನಿಂತಿತು ಎಂಬಂತೆ ದೀರ್ಘವಾಗಿ ಉಸಿರಾಡಿದೆ. ಅದು ಕಷ್ಟವಾಗುತ್ತಿತ್ತು. ಸುಮಾರು ಹೊತ್ತು ಅವರು ಪಿಸಪಿಸನೆ ಮಾತಾಡುವುದು; ನನ್ನನ್ನು ಕರೆದು ‘ನಿದ್ದೆಬಂತಾ… ಹೆಂಗೆ ಬರುತ್ತೇ ಹೊಸ ಜಾಗ… ನಿನಗೆ ಬಂತೇನೇ… ನಿನಗೂ ಬರಲ್ಲ ಬಿಡು’ ಕಾಟ ಕೊಡುತ್ತಲೆ ಇದ್ದರು.
ಅದೊಂದು ಬಲಾಢ್ಯ ರಗ್ಬಿ ಪಂದ್ಯಾವಳಿಯಂತಿತ್ತು. ಬಡಪಾಯಿಗಳು ಕೂಗಾಡುತ್ತ ನುಗ್ಗಲು ಯಮ ಪ್ರಯತ್ನ ಪಡುತ್ತಿದ್ದರು. ನುಗ್ರೀ… ಹೇಗಾದ್ರು ಮಾಡ್ರಿ ಎಂದು ಗುರುಗಳು ದೂರ ನಿಂತೇ ಗದರಿದರು. ಆ ಪರಿ ಜನರ ಕೂಗಾಟದ ಸದ್ದಿನಲ್ಲು ಅವರ ಕಹಳೆಯಂತಹ ಸದ್ದು ಎದೆಗೆ ಬಡಿದಿತ್ತು. ಗುರುಗಳಿಗೆ ಸೀಟು ಹಿಡಿದುಕೊಡಲೇಬೇಕೆಂದು ಶತಪ್ರಯತ್ನ ಮಾಡಿ ಒಳ ತೂರಿದೆ. ಯಾವಳೊ ದಢೂತಿ ಹೆಂಗಸು ನನ್ನ ಪ್ಯಾಂಟಿನ ಬೆಲ್ಟನ್ನೆ ಆಸರೆಯಾಗಿ ಹಿಡಿದು ಮೆಟ್ಟಿಲು ಹತ್ತುತ್ತಿದ್ದಳು.
ಅಹಾ ಇದೆಂತಹ ಚೋದ್ಯ! ಮೇಲುಕೋಟೆಯ ಚಲುವನಾರಾಯಣನೇ; ನಿನ್ನ ಸನ್ನಿಧಿಯಲ್ಲು ನನಗೆ ಮೋಸವೇ… ಉಪ್ಪು ಹುಳಿಕಾರ ತಿನ್ನದ ಸಭ್ಯ ಈ ಸಸ್ಯಾಹಾರಿ ಮನೆಯಲ್ಲಿ ಯಾರ ಅಡ್ಡಿಯೂ ಇಲ್ಲದೆ ಮಲಗಲು ಅವಕಾಶ ಬಂದಿದ್ದರೂ ಈ ಚಿನಾಲಿಯರು ಸಂಗಮಿಸಲು ಬಿಡುತ್ತಿಲ್ಲವಲ್ಲಾ ಎಂದು ಸಿಕ್ಕಾಪಟ್ಟೆ ಬೇಜಾರಾಯಿತು. ಒಂದಷ್ಟು ಹೊತ್ತು ಎಲ್ಲರು ಮೌನದಲ್ಲಿ ಮುಳುಗಿದರು. ಬೆರಳಿನ ನಟಿಕೆ ಮುರಿದೆ. ಅದು ಅವಳಿಗೆ ಕೊಟ್ಟಿದ್ದ ಸಿಕ್ನಲ್. ಅವಳೂ ಆ ಕೂಡಲೆ ಇನ್ನೊಂದು ನಟಿಕೆ ತೆಗೆದಳು. ಡವಗುಟ್ಟುತ್ತಿತ್ತು. ಸದ್ದೇ ಮಾಡುವಂತಿರಲಿಲ್ಲ. ಅವಳೇ ಎದ್ದು ನನ್ನ ಬಳಿಬರಬೇಕಿತ್ತು. ಕೆಮ್ಮಿದೆ ಮೆಲ್ಲಗೆ. ಕಿಸಕ್ಕನೆ ನಗಾಡಿದ ಅವರಿಬ್ಬರು ಅವ್ನು ಇನ್ನೂ ಎಚ್ಚರವಾಗಿ ಕಾಯ್ತಾನೆ ಇದ್ದಾನೆ… ಸಿಗ್ನಲ್ ಕೊಡ್ತಾ ಇದ್ದಾನೆ ಕಣೇ ಎಂದು ಪಿಸುಗುಟ್ಟಿದರು. ಇಲ್ಲಾ ಇನ್ನಿದು ಇಷ್ಟಯೇ ಬೆಳಗಾನ ಈ ಬಡ್ಡಿರು ನನ್ನ ಕಾಯ್ತರೆ. ಬಿಟ್ಟುಕೊಡೋದಿಲ್ಲಾ… ಮುಂದೆ ಗಂಗೋತ್ರಿಗೆ ಹೋಗುವ. ಅಲ್ಲಿ ಮಡಿಕೇರಿ ಬಳಿ ಕಾವೇರಿ ನಿಸರ್ಗಧಾಮ ಇದೆ. ಅಲ್ಲಿಗೆ ಅವಳ ಕರೆದೊಯ್ಯುವೆ ಎಂದು ನಿದ್ದೆಗೆ ಹೋದೆ. ನಿದ್ದೆ ಬಂದು ಬಂದು ಜಾರುತಿತ್ತು. ಕೋಳಿ ಕೂಗಿದ್ದವು. ಆ ಹುಡುಗಿಯರಾಗಲೆ ಎದ್ದು ಸ್ನಾನ ಮಾಡಿದ್ದರು. ನಿದ್ದೆ ಬಂತಾ ಚೆನ್ನಾಗಿ ಎಂದು ಕೇಳಿದರು. ಇಲ್ಲಾ ಎಂದೆ. ಯಾಕೆ? ಎಲ್ಲ ನಿಮ್ಮಿಂದ ಎಂದು ಬಂದ ಮಾತ ತಡೆದುಕೊಂಡೆ. ‘ನಿಮ್ಮ ಸಾರ್ ಕರೀತಿದ್ದಾರೆ’ ಎಂದು ಆ ಮನೆಯವರು ಹೇಳಿದರೆ, ಆಲಸ್ಯದ ಮಂಪರಲ್ಲಿ ತೂರಾಡುವಂತೆ ಅವರ ಮುಂದೆ ಹೋಗಿ ನಿಂತಿದ್ದೆ. ‘ಒಹೊಹೋ… ಇಡೀ ರಾತ್ರಿ ಎಚ್ಚರವಾ… ಆನಂದವಾ… ಬಿಡುವೇ ಕೊಡಲಿಲ್ಲವೇ’ ಎಂದು ಉತ್ಸಾಹದಿ ಕೇಳಿದರು. ನನ್ನ ಕಷ್ಟ ನನಗಾಗಿತ್ತು. ಸ್ಕಲನವಾಗಿತ್ತು. ಸ್ನಾನ ಮಾಡಲು ಅಲ್ಲಿ ಅವಕಾಶ ಇರಲಿಲ್ಲ.
ಮುಖತೊಳೆದುಕೊಂಡಿದ್ದೆ. ‘ಆಯ್ತೇನ್ರಿ ರಾತ್ರಿ ಪೂರಾ’ ಕೇಳಿದರು ಗುರುಗಳು. ‘ಇಲ್ಲಾ’ ಎಂದೆ. ‘ಯಾಕೆ ಏನಾಯ್ತು’ ಎಂದು ನಿಲ್ಲಿಸಿಕೊಂಡು ಹೆಗಲ ಮೇಲೆ ಕೈ ಇಟ್ಟು ವಿಚಾರಿಸಿದರು. ರಮಣೀಯ ಎಳೆ ಬಿಸಿಲು… ಇನ್ನೂ ಇಬ್ಬನಿ ಕರಗಿರಲಿಲ್ಲ. ತೆಳು ಮೋಡಗಳು ಕಣಿವೆಯಲ್ಲಿ ತೇಲುತ್ತಿದ್ದವು. ‘ಹೇಳ್ರೀ ಬೇಗ ಏನಾಯ್ತೆಂದು’ ಎಂದು ಭುಜವ ಅಲುಗಾಡಿಸಿದರು. ‘ಆ ಇಬ್ಬರು ಹುಡುಗಿಯರು ಬಿಡಲಿಲ್ಲ ಸಾರ್… ಬೆಳಗಾನ ಕಾದಿದ್ರು… ಅವಳನ್ನು ಮಧ್ಯದಲ್ಲಿ ಮಲಗಿಸಿಕೊಂಡಿದ್ದರು… ಅಂತಲ್ಲಿ ನಾನು ಎಂಗೆ ಕೈಹಾಕಲಿ ಸಾರ್…’ ಎನ್ನುತ್ತಿದ್ದಂತೆಯೇ; ಕೋಪಾವಿಷ್ಟರಾಗಿ ‘ಛೀ ಎಂತಹ ಹೇಡಿ ಹೇತ್ಲಾಂಡಿ ಹೆಬ್ಬಂಕನೊ ನೀನೂ… ಅವರಿಬ್ಬರನ್ನೂ ಒಟ್ಟಿಗೆ ಸೇರಿಸಿಕೊಂಡು ಮಲಗಬೇಕಿತ್ತು. ಅವರು ಎಚ್ಚರವಾಗಿದ್ದು ನಿನಗೆ ತೊಂದರೆ ಕೊಡಲು ಅಲ್ಲಾ… ಆನಂದಾ ಆನಂದಾ ರಸಾನಂದ ಹಂಚಿಕೊಳ್ಳಲು ಕಾತರಿಸಿ ಕಾದಿದ್ದರು… ಮುಟ್ಟಾಳಾ, ಗಂಡಸಲ್ಲವೇನೊ ನೀನೂ… ಇನ್ನಾವ ಶತಮಾನಕ್ಕೆ ಎಚ್ಚರವಾಗುವೆಯೊ! ಬಾಳೆ ಹಣ್ಣ ಸುಲಿದು ಕೊಟ್ಟರೂ ತಿನ್ನದೆ ಬಿಟ್ಟುಬಂದಿದ್ದೀಯಲ್ಲೊ… ಇನ್ನೆಂದೂ ಜೀವನದಲ್ಲಿ ಇಂತಾ ಒಂದು ಅವಕಾಶ ಸಿಗೋದಿಲ್ಲ. ಏನೋ ಕಿಸಿದು ದಬ್ಬಾಕುಬುಡ್ತನೆ ಅಂತಾ ರೆಡಿ ಮಾಡಿ ಕಳ್ಸಿದ್ನಲ್ಲೊ’ ಎಂದು ಬಲವಾಗಿ ಬೆನ್ನಿನ ಮೇಲೆ ಹೊಡೆದಿದ್ದರು. ನಾನು ಕಮಕ್ ಕಿಮಕ್ ಎನ್ನಲಿಲ್ಲ. ಬಿಟ್ಟು ಹೊರಟು ಹೋದರು. ಅಪಮಾನವಾಗಿತ್ತು. ಆ ಗಣ್ಯ ಸಾಹಿತಿಗಳನ್ನು ಖುದ್ದಾಗಿ ಕಾಣುವ ಯಾವ ಆಸೆಯು ಇರಲಿಲ್ಲ. ಆ ಹುಡುಗಿಯ ಮುಖ ನೋಡಲು ಧೈರ್ಯ ಬರಲಿಲ್ಲ. ‘ಒಹ್! ಗಾಂಧಿವಾದಿ ಬಂದ’ ಎಂದರು ಆ ಇಬ್ಬರು. ಅರ್ಥವಾಗಿತ್ತು ಅವರ ವ್ಯಂಗ್ಯ. ಬಸ್ಸೇರಿ ಒಬ್ಬನೆ ಬಂದುಬಿಟ್ಟಿದ್ದೆ.
ನೆನ್ನೆ ಬರುವಾಗ ಅವಳ ಬೆಚ್ಚನೆಯ ಎದೆ… ಸುಗಂಧ ಕಾಮ… ಈಗ ನಾನೊಬ್ಬ ಹೇಡಿ… ಬೇವರ್ಸಿ… ಒಬ್ಬಂಟಿ. ಸಂಕಟವಾಗಿತ್ತು. ಮರುದಿನ ಗೊತ್ತಾಗಿತ್ತು. ಹುಡುಗಿಯರು ಹಾಸ್ಟಲಲ್ಲಿ ಮಾತಾಡಿಕೊಂಡಿದ್ದರು. ಗುರುಗಳಿಗೆ ಆಗದ ಸ್ವಜಾತಿ ಪ್ರಾಧ್ಯಾಪಕರು ಒಟ್ಟಾಗಿ ಗೂಂಡಾ ಹುಡುಗರನ್ನು ಎತ್ತಿಕಟ್ಟಿ ಆ ಗುರುಗಳ ಕೈಕಾಲು ಮುರಿದು ಬನ್ನಿ… ನಮ್ಮ ಜಾತಿಯವಳ ಆ ಹೊಲೆಯವನಿಗೆ ತಲೆ ಹಿಡಿದು ಮದುವೆ ಮಾಡಿಸಲು ಮುಂದಾಗಿದ್ದಾನೆ ಎಂದು ಕೆಂಡಾಮಂಡಲವಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಬಾಯಿ ಬಿಟ್ಟು ಆಡುವ ಮಾತಾಗಿರಲಿಲ್ಲ. ಆದ್ದರಿಂದ ಆ ಹುಡುಗಿಯ ಭವಿಷ್ಯಕ್ಕೆ ತೊಡಕಾಗುತ್ತಿತ್ತು. ನನಗೆ ಹೊಡೆದರೆ ಅದು ಜಾತಿ ಗಲಭೆಯಾಗಿ ಏನೇನೊ ತಿರುವು ಪಡೆದುಕೊಳ್ಳುತ್ತಿತ್ತು. ಗುರುಗಳು ಜಾಗೃತರಾಗಿ ದಾಳಿಯಿಂದ ತಪ್ಪಿಸಿಕೊಂಡಿದ್ದರು. ಸೂಕ್ಷ್ಮ ವಿಷಯ ಆಗಿದ್ದರಿಂದ ಅದು ಅಲ್ಲಿಗೆ ಮುಚ್ಚಿ ಹೋಗಿತ್ತು. ಮತ್ತೆಂದೂ ಆಕೆ ನನ್ನತ್ತ ನೋಡಲಿಲ್ಲ. ಅಷ್ಟು ಭಯ ಹುಟ್ಟಿಸಿದ್ದರು. ಪಾಪ ಪ್ರಜ್ಞೆಯಿಂದ ನರಳಿದ್ದೆ. ಗುರುಗಳ ಕ್ಷಮೆ ಕೇಳಿದ್ದೆ. ಬಾ ಎಂದು ಪಬ್‌ಹೌಸಿಗೆ ಕರೆದುಕೊಂಡು ಹೋಗಿದ್ದರು. ತಡವಾಗಿ ಬಿಯರ್ ನಿಶೆ ಏರಿತ್ತು. ಹಾಗೆ ಬಿಯರ್ ಕುಡಿಸುವುದು ಸಮಾಧಾನ ಪಡಿಸುವ ಒಂದು ಕ್ರಮವಾಗಿತ್ತು. ಅವರೇ ಆ ವಿಷಯ ತೆಗೆದರು.
‘ಅಲ್ರೀ ಯೀ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ, ಒಬ್ಬ ದಲಿತ ಹುಡುಗನಿಗೆ ಒಂದು ಚೆಂದದ ಹುಡುಗಿಯ ಮುಟ್ಟಲು ಈಗಲೂ ಇಷ್ಟೊಂದು ಭಯ ಇದೇಯಲ್ರೀ… ಅವರು ದಲಿತ ಹೆಣ್ಣು ಮಕ್ಕಳ ಕೇರಿಗೆ ನುಗ್ಗಿ ಬಂದು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಬಿಸಾಡಿ ಹೋಗ್ತಿದ್ರಲ್ರೀ… ಎಂತಾ ಸಮಾಜಾ ರೀ ಇದೂ… ಇದು ಈಗ್ಲೂ ನಡೀತಾನೆ ಇದೆಯಲ್ಲಾ…
ಅಂತಾದ್ರಲ್ಲಿ ಆ ಹೆಣ್ಣು ಮಗಳೆ ಒಪ್ಪಿ ನಿನ್ನ ಅಪ್ಪಿಕೊಳ್ಳಲು ಬಂದಾಗಲೂ ಹೆದರಿ ಬೇಡಾ ಎಂಬ ಪ್ರಾಣ ಭೀತಿ ಈ ದೇಶದಲ್ಲಿದೆಯಲ್ಲಾರೀ.. ನನಗೆ ತಡವಾಗಿ ಅರ್ಥವಾಯ್ತು. ನಮ್ಮ ಆದರ್ಶಗಳೆ ಕೆಲವೊಮ್ಮೆ ಅಮಾಯಕರನ್ನು ಕೊಂದುಬಿಡುತ್ತವೆ. ಒಂದು ವೇಳೆ ಅವಳ ಜೊತೆ ಕುವೆಂಪು ಮಂತ್ರ ಮಾಂಗಲ್ಯವ ನಿನಗೆ ಮಾಡಿಸಿ ಬಿಟ್ಟಿದಿದ್ದರೆ ಈ ಖೂಳ ರಾಕ್ಷಸರು ನಿನ್ನನ್ನು ಬಿಡ್ತಿದ್ರೇನ್ರೀ… ಕೊಂದು ಬಿಡ್ತಿದ್ದರು. ನಿಜವಾದ ಕನ್ನೆಗೆ ಯಾವ ಜಾತಿ ಧರ್ಮ ಭಾಷೆ ಇತ್ಯಾದಿ ಅವೇನೂ ಇಲ್ಲಾರೀ… ಹದವಾಗಿ ಬೆದೆಯಾದ ಭೂಮಿಗೆ ಒಂದು ಮಳೆಯಾದರೆ ಸಾಕು ರೀ… ಇಡೀ ಮಣ್ಣ ಮೈ ಹೇಗೆ ಪಲ್ಲವಿಸಿ ಹಸಿರಾಗುತ್ತದೊ ಹಾಗೆಯೇ ಒಬ್ಬ ಕನ್ನೆ. ಈ ನಿಸರ್ಗದ ಮುಂದೆ ಈ ನೀಚ ಗಂಡಸು ಮಹಾ ಕ್ರೂರಿ… ಅದರ ಸಲುವಾಗಿಯೇ ಅವನು ಜಾತಿ ಜನಾಂಗ ಬೇಧಗಳ ಕಂಡುಕೊಂಡಿರುವುದು’
ಗುರುಗಳು ಗಾಢವಾಗಿ ಏನೆಲ್ಲ ಹೇಳುತ್ತಿದ್ದರು. ಸಮಯ ಮೀರಿತ್ತು. ನಮ್ಮ ನಮ್ಮ ನೆಲೆಗಳಿಗೆ ಬಂದಿದ್ದೆವು. ಕಾಲ ಸಾಗಿತ್ತು. ಸಂಬಂಧ ತುಂಡಾಗಿತ್ತು. ಮೂಗುದಾರ ಹಾಕಿದಂತೆ ಅಲ್ಲೆ ಒಬ್ಬ ಗಂಡು ಹುಡುಕಿ ಅವಳಿಗೆ ಮದುವೆಯನ್ನು ಮಾಡಿಸಿ ಬಿಟ್ಟಿದ್ದರು. ಯಾವುದೋ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇರಿಕೊಂಡಿದ್ದಳು. ನಾನು ಆವತ್ತು ಸತ್ತಂತಿದ್ದೆ. ಕೆಲವೊಮ್ಮೆ ಕಾರಣವೇ ಹೊಳೆಯುತ್ತಿರಲಿಲ್ಲ. ಅವಳು ಲೈಬ್ರರಿ ಬಳಿ ಕಂಡಳು. ಅವಳ ಗಂಡ ಸ್ಕೂಟರಲ್ಲಿ ಬಿಟ್ಟು ಹೊರಟು ಹೋದ. ನಾನು ಒಳ ಹೋದೆ. ರೆಫೆರೆನ್ಸ್ ಸೆಕ್ಷನ್ ನನ್ನ ಅಚ್ಚು ಮೆಚ್ಚಿನ ಲೈಬ್ರರಿಯ ಓದುವ ಸ್ಥಳ. ಕನ್ನಡ ಪುಸ್ತಕಗಳ ವಿಭಾಗದತ್ತ ಆಕೆ ಹೋಗಿದ್ದಳು. ಒಂದು ತಾಸಾಯಿತು. ಅವಳೇ ತಲೆಯೊಳಗೆ ಕೂತಿದ್ದಳು. ರೆಫರೆನ್ಸ್ ಸೆಕ್ಷನ್ ಗಂಭೀರ ಓದಿನವರ ಜಾಗ. ನೋಡುವ ಆಸಕ್ತಿಯೇ ಇರಲಿಲ್ಲ. ಮನಸ್ಸಿಗೆ ಗಾಯವಾಗಿತ್ತು. ಅದು ಯಾವತ್ತೂ ಹಸಿಯಾಗಿಯೆ ಇರುತ್ತಿತ್ತು. ವಾಸಿಯಾಗುತ್ತಿದೆ ಎಂದುಕೊಳ್ಳುವಾಗಲೇ ಯಾರೊ ಗಾಯದ ಮೇಲೆ ತಿವಿದು ಮಾಯಾವಾಗುತ್ತಿದ್ದರು. ಖಿನ್ನತೆ ತುಂಬಿಕೊಳ್ಳುತ್ತಿತ್ತು. ನೆತ್ತರು ಬಹಳ ಸೂಕ್ಷ್ಮ. ಹೆಪ್ಪುಗಟ್ಟಿರುತ್ತದೆ ನಿಜಾ… ಕೆದಕಿದರೆ ಮನದ ನರಮಂಡಲ ರಕ್ತ ಬಸಿದು ಹೋಗಲು ಹೇಳಿ ಬಿಡುತ್ತದೆ. ಹೆಣ್ಣಿಗಾಗಿ ರಕ್ತ ಹರಿಸಿದ್ದು ಎಷ್ಟೋ… ಅದಿರಲೀ… ಪ್ರತಿ ತಿಂಗಳು ಈ ಹುಡುಗಿಯರು ಹೆಣ್ಣುಗಳು ತಾಯಂದಿರು ಮುಟ್ಟಾಗಿ ರಕ್ತ ಹರಿಸುತ್ತಲೇ ಇರುತ್ತಾರಲ್ಲ… ಅಹಾ! ದೇವರೇ ಸಹಜ ನಿಸರ್ಗದ ಒತ್ತಡದಿಂದಲೂ ಇಷ್ಟೊಂದು ನೆತ್ತರು ಬಸಿದು ಹೋಗುತ್ತದಲ್ಲಾ… ಯಾರ ಉದ್ಧಾರಕ್ಕಾಗಿ… ಈ ಗಂಡಸರ ಆಹ್ವಾನಕ್ಕಾಗಿಯೇ… ಅವಳು ಮಕ್ಕಳ ಹೆತ್ತುಕೊಳ್ಳಲು ಇಷ್ಟೊಂದು ಗರ್ಭ ಸ್ರಾವವೇ… ಏನೆನ್ನುವುದು ಇದನೆಲ್ಲ… ನನ್ನ ತಾಯಿ ಎಷ್ಟೊಂದು ರಕ್ತ ಬಸಿದಿದ್ದಳೊ ನನ್ನ ಹುಟ್ಟಿಗೆ… ನೀನು ನನ್ನ ರಕ್ತಕ್ಕೆ ಹುಟ್ಟಿಲ್ಲ ಎನ್ನುತ್ತಿದ್ದನಲ್ಲ ಅವನು… ಯಾರೂ ರಕ್ತಕ್ಕೆ ಹುಟ್ಟುವುದಿಲ್ಲ. ರಕ್ತ ಹರಿಸುವವರು ಏನನ್ನೂ ಹುಟ್ಟಿಸಲಾರರು…
ಯಾರೊ ಬಂದು ಪಕ್ಕದ ಟೇಬಲ್‌ನಲ್ಲಿ ಗಮನಸೆಳೆಯುತ್ತಿದ್ದಾಳೆಂದು ತಿಳಿಯಿತು. ಬಿಗಿದ ಮೈಕಟ್ಟಿನವಳು. ‘ಯಾಂಟಿ ಸೆಮೆಟಿಕ್’ ವಿಚಾರಗಳ ಓದುತ್ತಿದ್ದೆ. ಯಹೂದಿಗಳ ಮುಗಿಸಿಬಿಡುವ ನೀಲ ನಕ್ಷೆಯ ಜರ್ಮನಿಯ ಆಲೋಚನೆಗಳು ಅವಾಗಿದ್ದವು. ಎಲ್ಲಿಂದ ಎಲ್ಲಿಗೆ ಸಂಬಂಧ! ಹಿಟ್ಲರ್‌ನ ‘ಮೇಯ್ನ ಕ್ಯಾಂಪ್…’ ನನ್ನ ಹೋರಾಟ… ಕೃತಿ ಬೆಚ್ಚಿ ಬೀಳಿಸಿತ್ತು… ಆಕೆ ಗಮನ ಸೆಳೆಯುತ್ತಿದ್ದಳು. ಅದೆಲ್ಲ ಮಾಮೂಲು ಅನುಭವ. ಮಂಗನನ್ನು ಮಾಡುವ ಹುಡುಗಿಯರೂ ಇರುತ್ತಾರೆಂದು ಅವಳನ್ನು ಪರಿಗಣಿಸಲಿಲ್ಲ.. ಒಂದೆರೆಡು ಬಾರಿ ನೆಗಡಿಯಾದಂತೆ ಸದ್ದು ಮಾಡಿದಳು. ಕೆಮ್ಮಿದಳು ಮೆಲ್ಲಗೆ, ಗಂಟಲು ಸರಿಪಡಿಸಿಕೊಂಡಳು. ಪೆನ್ನುನ್ನು ಕೆಳಗೆ ಬೀಳಿಸಿ ಎತ್ತಿಕೊಂಡಳು. ಪಟಪಟನೆ ಪುಸ್ತಕದ ಹಾಳೆಗಳ ತೆಗೆದಳು. ಅತ್ತ ಹೋಗಿ ಇತ್ತ ಬಂದಳು. ಅಲ್ಲೇ ಕೂತು ಎರಡು ಮುಂಗೈಗಳ ಜೋಡಿಸಿ ಗಲ್ಲಕ್ಕೆ ಆಸರೆಯಾಗಿ ಕೊಟ್ಟುಕೊಂಡು ನನ್ನತ್ತಲೆ ನೋಡುತ್ತಿದ್ದಳು. ಅಯ್ಯೋ ಈ ಪಾಪಿ ಬಾಲ್ಡಿಯಲ್ಲಿ ಏನಿದೆ ಎಂದು ಹೀಗೆ ಈಕೆ ಎವೆಯಿಕ್ಕದೆ ನೋಡುತ್ತಿದ್ದಾಳೆಂದು ಅವಳತ್ತ ಕೊನೆಗೂ ನೋಡಿದೆ. ಎದೆಗೆ ಗುದ್ದಿದವು ಅವಳ ಮೀನ ಕಣ್ಣುಗಳು. ಕಂಪಿಸಿದೆ, ಬೆವೆತೆ, ಸಂಕಟದಿಂದ ಚಡಪಡಿಸಿದೆ. ಅತ್ತ ತಿರುಗಿ ಮುಂಗೈ ಬೆರಳುಗಳ ನಟಿಕೆ ಮುರಿದಳು. ಅಹಾ! ದೇವರೇ; ಆ ಮೇಲುಕೋಟೆಯ ಆ ನೆಟ್ಟಿರುಳಲ್ಲಿ ಈಕೆ ಹೀಗೆಯೇ ನಟಿಕೆ ತೆಗೆದು ಮೈ ಮುರಿದು ವಿರಹದ ಸದ್ದ ಹೊರಡಿಸಿದ್ದಳಲ್ಲವೇ… ದೂರದ ನಕ್ಷತ್ರ ಮಿನುಗಿದಂತೆ ತುಟಿ ಅರಳಿಸಿದಳು. ಪಶ್ಚಾತ್ತಾಪಕ್ಕೂ ನಗು ಇರುತ್ತದೆ. ಪಾಪಿ ನಕ್ಕಂತೆ ಕಣ್ಣುಗಳಲ್ಲಿ ನಕ್ಕಿದೆ. ಅದು ನನ್ನ ಸುಖ. ಸದ್ದಿಲ್ಲದ ಮಾಯದ ನಗೆ. ವಿಸ್ಮಯದ ನಗೆ. ತಲೆ ತಗ್ಗಿಸಿ ಸೀರಿಯಸ್ಸಾಗಿ ಏನೊ ಟಿಪ್ಪಣಿ ಮಾಡಿಕೊಳ್ಳುವಂತೆ ನಟಿಸುತ್ತಿದ್ದಳು. ಆ ಮೇಲುಕೋಟೆಯ ಇಳಿಸಂಜೆಯೇ ತಲೆ ಮೇಲೆ ಇಳಿಬಿದ್ದಂತಾಗಿತ್ತು. ಏನೇನೊ ರಗಳೆ ನೆನಪಾಗಿ ಹೆದರಿಕೆಯೂ ಆಯಿತು.
ಎದೆಬಡಿತ ಜೋರಾಗಿತ್ತು. ಕ್ಷಮೆ ಕೇಳಲು ಮನಸ್ಸು ಚಂಡಿ ಹಿಡಿದಿತ್ತು. ನನ್ನ ಕ್ಷಮೆಯಿಂದ ಏನೂ ಬದಲಾಗಲಿಲ್ಲಾ… ಅಕಸ್ಮಾತ್ ಅವಳ ಒಳಮನಸ್ಸಿಗಾದರೂ ಸಮಾಧಾನ ಆಗಲಿ ಎನಿಸುತ್ತಿತ್ತು. ಹಾಗೆ ನಾವು ಎಂದೂ ಮಾತೇ ಆಡಿರಲಿಲ್ಲ. ಅವಳ ಮನಸ್ಸನ್ನಂತು ಖಂಡಿತ ಮುಟ್ಟಿದ್ದೆ; ಅವಳು ಕೂಡ ಬೆಚ್ಚಗೆ ಸ್ಪರ್ಶಿಸಿದ್ದಳು. ಈಗ ಏನು ಮಾಡಲೀ… ಚಡಪಡಿಸಿದೆ. ಅತ್ಯಂತ ಸಿಶ್ಯಬ್ದ ರೆಫರೆನ್ಸ್ ಸೆಕ್ಷನ್. ಉಸಿರಾಡಿದರೂ ಕೇಳಿಸಿಕೊಳ್ಳುವಂತಿತ್ತು. ಸೈಲೆಂಟ್ ಜೋನ್ ಎಂದು ಚೀಟಿ ಅಂಟಿಸಿದ್ದರು. ಕಣ್ಣಲ್ಲೇ ಮಾತನಾಡುತ್ತಿದ್ದೆವು. ಕತ್ಷಣ ಆ ನನ್ನ ತಬ್ಬಲಿ ಹಾಡು ನೆನಪಾಯಿತು. ‘ಮೇರಾ ಜೀವನ್ ಕೋರಾಕಾಗಜ್’ ಎಂಬ ನಾದ ತಲೆಯಲ್ಲಿ ರಿಂಗಣಿಸಿತು. ನೋಡುತ್ತಲೇ ಇದ್ದೆ. ಮಾತಿನ ಹಂಗೇಕೆ… ಭಾಷೆಯ ಹುಸಿಯೇಕೆ… ಮನಸ್ಸು ಮನಸ್ಸುಗಳು ಮಾತನಾಡಿಕೊಳ್ಳುತ್ತವೆ! ಕಿಬ್ಬೊಟ್ಟೆಯ ಟೇಬಲಿಗೆ ಒತ್ತಿಕೊಂಡು ಎದೆಯ ಮೇಲಿರಿಸಿ ಅರಿವು ಮರೆತಂತೆ ನೋಡನೋಡುತ್ತಲೇ ಕಣ್ಣಲ್ಲಿ ನೀರ ತುಂಬಿಕೊಂಡಳು. ಜೀವವ ಹಿಡಿದು ಎಳೆದಂತಾಯಿತು. ಆತನ ಜೊತೆ ಅವಳಿಗೆ ಮದುವೆ ಸಮ್ಮತ ಇತ್ತೊ ಏನೊ; ನಿಗೂಢವಾಗಿತ್ತು. ಅವಳ ಗಂಡ ಒಳ್ಳೆಯವನೆಂದು ಹೇಳುತ್ತಿದ್ದರು. ತಕ್ಕ ಜೋಡಿ ಮನಸ್ಸಿಗೆ ಹೊಂದುವಂತಿರಬೇಕು. ಅವಳ ಪಕ್ಕ ಕೂರಬೇಕೆನಿಸಿತು. ಅಸಭ್ಯ ಅನಿಸಿಬಿಟ್ಟರೆ… ಬೇಡ; ಅವಳೀಗ ಇನ್ನೊಬ್ಬರ ಮಡದಿ ಎಂದು ಹಿಂದೆ ಸರಿದೆ. ಕಂಬನಿ ಒರೆಸಿಕೊಂಡಳು. ಎದ್ದು ಎಲ್ಲಿಗಾದರು ಹುಚ್ಚನಂತೆ ಓಡಿ ಹೋಗಬೇಕನಿಸಿತು. ನನ್ನ ಗಂಟಲು ಕಟ್ಟಿತ್ತು. ನಾನೆಂದೂ ಅಂತಹ ಪರಿಸ್ಥಿತಿಗೆ ಒಳಗಾಗಿರಲಿಲ್ಲ. ಎದ್ದು ಹೊರಟಳು. ಸೌಂದರ್ಯದ ದೇವತೆಯಂತೆ ಕಂಡಳು.
ಆಗತಾನೆ ಮದುವೆ ಆಗಿದ್ದಳು. ಪಿಎಚ್‌ಡಿ ಅಧ್ಯಯನಕ್ಕಾಗಿ ಮುಂದಾಗಿದ್ದಳೇನೊ. ನಮ್ಮ ಹುಡುಗಿಗೆ ಕಣ್ಣು ಹಾಕಿದ್ದನೇನು ಇವನೂ… ಇವನ ಕಣ್ಣು ಕಿತ್ತು ಹಾಕಿಬಿಡಬೇಕು ಎಂದು ಜಾತಿವಾದಿಗಳು ಹಿಂದೆ ಬೈಯ್ದಿದ್ದರು. ಹಾಗೆ ಆಕೆ ಹೋಗುವುದನ್ನೆ ಅಸಹಾಯಕತೆಯಲ್ಲಿ ನೋಡುತ್ತಿದ್ದೆ. ಹಿಂತಿರುಗಿ ನೋಡಿದಳು ಕರೆದಂತೆ ತಲೆ ಆಡಿಸಿದಳು. ಎದ್ದು ಹಿಂಬಾಲಿಸಿದೆ. ಹಾರಿ ಹೋಗಿ ಹಕ್ಕಿಯಾಗಿ ಗಗನದ ಮರೆಯಲ್ಲಿ ಗೂಡು ಕಟ್ಟಿಕೊಳ್ಳಬೇಕು ಎನಿಸಿತು. ಹೆಜ್ಜೆ ಸಪ್ಪಳವಾಗದಂತೆ ನಿಶ್ಯಬ್ದ ವಲಯದಲ್ಲಿ ಅವಳ ಹಿಂಬಾಲಿಸಿದೆ. ಬೇಗ ಬೇಗ ಹೋಗುತಿದ್ದಳು. ಕಳೆದು ಹೋಗುವಂತೆ… ಇಲ್ಲ ಇಲ್ಲಾ… ನನ್ನನ್ನು ಈ ನರಕದಿಂದ ಪಾರು ಮಾಡಲು ಮಾಯಾವಿಯಾಗಿ ಬಂದು ಕರೆದೊಯ್ಯುತ್ತಿರುವಳು ಎಂದುಕೊಂಡೆ. ಅಲ್ಲೊಂದು ಮೆಟ್ಟಿಲಲ್ಲಿ ಎಡವಿದಳು. ತೇಲಿ ಹೋಗಿ ಹಿಡಿದುಕೊಳ್ಳುವಂತೆ ಬಗ್ಗಿ ಕೈ ನೀಡಿದ್ದೆ. ಜಾರಲಿಲ್ಲ… ಆಗಲೇ ಆ ವಿಶಾಲ ಲೈಬ್ರರಿಯ ಒಳದಾರಿಗಳ ದಾಟಿ ಅಷ್ಟು ದೂರದಲ್ಲಿ ಮರೀಚಿಕೆಯಾಗುವಂತೆ ಮಿರುಗುತ್ತ ಕ್ರಮಿಸುತ್ತಿದ್ದಳು. ಕೂಗಿ ನಿಲ್ಲು ಎನ್ನಲು ಬಾಯಿ ಬರಲಿಲ್ಲ. ಮುಂಬಾಗಿಲತ್ತ ನಡೆದಿದ್ದಳು… ಸೊಯ್ಯನೆ ಹತ್ತಿರ ಹೋಗಿದ್ದೆ. ಬಾಗಿಲ ದಾಟಿದಳು. ಹೊರಗೆ ಅವಳ ಗಂಡ ಕರೆದೂಯ್ಯಲು ಮುಂಗಡವಾಗಿ ಬೈಕಲ್ಲಿ ಬಂದು ಕೂತಿದ್ದ. ಸ್ಮಾರ್ಟ್ ಫೆಲೊ… ಇಬ್ಬರಿಗೂ ತಕ್ಕ ಜೋಡಿ ಎನಿಸಿತು. ಸ್ಕೂಟರ್ ಸೀಟಿಗೆ ನೆಗೆದಂತೆ ಕೂತಳು. ಎಲ್ಲಾ ನೆನಪಾಯಿತು. ಎದೆಯ ಗೂಡಲ್ಲಿ ರಕ್ತ ಚೆಲ್ಲಾಡಿದಂತಾಯಿತು. ವರ್ರೋ ಎಂದು ಸದ್ದು ಮಾಡಿಕೊಂಡು ಅವಳ ಹಾರಿಸಿಕೊಂಡು ಅವನು ಹೊರಟು ಹೋದ. ತಿರುಗಿ ನೋಡುವಳೆ ಎಂದು ಮರೆಯಾಗುವ ತನಕ ಲೈಬ್ರರಿ ಮುಂದೆಯೇ ನಿಂತಿದ್ದೆ. ತಲೆ ಮೇಲೆ ಬಂಡೆಯನ್ನು ಯಾರೊ ಇಟ್ಟಂತಾಗಿತ್ತು.
ಆ ನನ್ನ ಸಂಕಟದ ಹಾಡು ತೇಲಿ ಬಂತು… ಮೊಹಮದ್ ರಫೀ ಹಾಡಿದ್ದು… ‘ದಿಲ್ ಕೇ ಜರೋಕೇ ಮೆಯಿನ್ ತುಜ್‍ಕೊ ಬಿತಕರ್’ ಅದೊಂದು ವಿರಹಿಗಳ ಸರ್ವಕಾಲಿಕ ಹಾಡು… ‘ನಿನ್ನನ್ನು ನನ್ನದೆಗೂಡ ಮರೆಯಲಿ ಬಚ್ಚಿಟ್ಟುಕೂಂಡು ಮೋಹಿಸುವೆ ಅನಗಾಲವೂ ನಿನ್ನ ನೆನಪುಗಳಲ್ಲಿ ಓ ನನ್ನ ನಿತ್ಯ ಮದುವಣಗಿತ್ತಿಯೇ… ನಾಳೆ ನೀನು ಇನ್ನಾರದೊ ಚೆಲುವೆ… ಅಲಂಕರಿಸಿ ಕರೆದೊಯ್ಯುವರು ಅವರ ಮನೆಗೆ … ನಾನೊ ನಿನ್ನನೆಂದಿಗೂ ಬಿಡಲಾರೆ… ನನ್ನ ದಮನಿಗಳ ಎದೆ ಗೂಡಲ್ಲಿಟ್ಟು ಆರಾಧಿಸಿ ಪ್ರೇಮಿಸುವೆ’ ಎಂಬಂತಿದ್ದ ಆ ಪ್ರಖ್ಯಾತ ಹಾಡನ್ನು ನನಗೆ ಬೇಕಾದಂತೆ ರೂಪಾಂತರಿಸಿಕೊಂಡಿದ್ದೆ. ಮತ್ತೆ ಅವಳು ಕಂಡಿರಲಿಲ್ಲ. ಮಾಯವಾಗಿದ್ದಳು. ಯಾರಲ್ಲು ಅವಳ ಬಗ್ಗೆ ವಿಚಾರಿಸುವಂತಿರಲಿಲ್ಲಿ. ಎಲ್ಲೊ ದಿನ ತುಂಬಿರಬೇಕು… ತಾಯಿಯಾಗುತಿದ್ದಾಳೇನೊ… ಗುರುಗಳು ಅದೊಂದು ವಿಫಲ ಯತ್ನ… ಬೇರೆ ಇನ್ನೂಂದು ದಾರಿಯಲ್ಲಿ ಯತ್ನಿಸು ಎಂದು ಹೇಳಿ ಅವರ ಜಂಜಡಗಳಲ್ಲಿ ಮುಳುಗಿದ್ದರು. ಈ ಕ್ರಾಂತಿ ಕಾರಿ ಬಂಡಾಯಗಾರರ ಸಹವಾಸ ಸಾಕಪ್ಪ ಎನಿಸಿ ಹತಾಶೆ ಬೆನ್ನ ಹಿಂದೆ ಹಿಂಬಾಲಿಸುತಿತ್ತು. ಎಷ್ಟೇ ಆಗಲಿ ಇದು ಅವರ ಜಾಗ… ಬಹಿಷ್ಕೃತನಂತಿರುವ ನನಗೆ ಇಲ್ಲಿ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಟ್ಟು ಹೋಗಬೇಕಾದ ಈ ಕ್ಯಾಂಪಸ್ಸಿನಲ್ಲಿ ಕಟ್ಟಿ ಹಾಕಿಕೊಳ್ಳಲು ಎನಿದೆ ಎಂದು ಪಿಎಚ್‌ಡಿ ಬರಹದಲ್ಲಿ ಲೀನನಾಗಿದ್ದೆ. ಅವಳು ಬೇಡ ಎಂದು ಮನಸ್ಸಿಗೆ ಬೀಗ ಹಾಕಿಕೊಂಡೆಂತೆಲ್ಲ ಅವಳ ನೆನಪು ಬಂದು ಬೀಗ ಮುರಿದು ಎದೆಗೂಡಿಗೆ ನುಗ್ಗಿ ಬರುತಿತ್ತು. ಸುಧಾರಿಸಿಕೊಳ್ಳುತಿದ್ದೆ. ಒಂದು ದಿನ ಕ್ಯಾಂಟೀನಲಿ ಚಹಾ ಕುಡಿಯುತಿದ್ದೆ. ಅವನು ಬಂದ. ನನ್ನ ಮುಂದೆಯೇ ಕೂತ. ದಿಟ್ಟಿಸಿ ನೋಡಿದೆ. ಎದೆ ಕಂಪಿಸಿತು. ನಿಧಾನವಾಗಿ ತುಟಿ ಅರಳಿಸಿದ. ಅಚ್ಚರಿಯಾಯಿತು. ಸೌಜನ್ಯಕ್ಕೆ ತುಟಿ ಬಿಚ್ಚಿದೆ. ‘ನಮ್ಮನೆಯವಳು ನಿಮ್ಮ ಬಗೆ ಎಲ್ಲಾ ಹೇಳಿದ್ದಾಳೆ’ ಎಂದ. ಬಿಸಿಯಾದ ಚಹಾವ ಗುಟುಕರಿಸಲು ಹಿಂದು ಮುಂದಾಗಿ ಬಟ್ಟೆ ಮೇಲೆ ಚಲ್ಲಿಕೂಂಡೆ… ಒಹ್ ನೀರಲ್ಲಿ ತೊಳ್ಕೊಳ್ಳೀ… ಕಲೆ ಹಿಡ್ಕಂಡು ಬಿಡುತ್ತೆ ಎಂದು ಗ್ಲಾಸಿನನೀರ ಮುಂದಿಟ್ಟ. ಕರವಸ್ತ್ರ ಇರಲಿಲ್ಲ. ಆತನೆ ನೀರಿನಲ್ಲಿ ಒದ್ದೆ ಮಾಡಿ ಕೊಟ್ಟ. ಯಾಕೆ ಗಾಭರಿಯಾದ್ರಿ… ಬೇಗ ಒದ್ದೆ ಮಾಡಿ ಎಂದು ಆತನೇ ಒರಸಿದ. ಬಿಡಿ ಬಿಡಿ, ಹೋಗುತ್ತೆ ಎಂದು ನೀರು ಅಜ್ಜಿದೆ. ಹೊರಟು ಹೋದ ಇದೇನು ಹೀಗಾಯಿತಲ್ಲಾ… ಎಲ್ಲಾ ಹೇಳಿದ್ದಾಳೆ ಎಂದರೆ ಏನು ಹೇಳಿದ್ದಾಳೆಂದು ಚಿಂತೆಯಾಯಿತು. ಪಿಎಚ್‌ಡಿ ಮುಗಿಯುತಿತ್ತು. ಸಲ್ಲಿಸುವುದಷ್ಟೇ ಬಾಕಿ ಇತ್ತು. ಮಾರ್ಗದರ್ಶಕ ಎಂಬ ಕಮಂಗಿ ಸಹಿ ಮಾಡದೆ ಸತಾಯಿಸುತಿದ್ದ. ಇದನೆಲ್ಲ ಬಿಟ್ಟು ಎಲ್ಲಿಯಾದರು ದೂರ ಹೋಗಲು ದಾರಿ ಹುಡುಕುತಿದ್ದೆ. ಆತ ಮತ್ತೆ ಸಿಕ್ಕಿದ. ಈ ಬಾರಿ ಉದ್ದೇಶ ಪೂರ್ವಕವಾಗಿ ಹುಡಿಕಿಕೊಂಡು ಬಂದಿದ್ದ.
ಏನ್ಸಾರ್ ಎಂದೆ. ‘ನನ್ನ ಕಂಡ್ರೆ ಯಾಕೆ ನಿಮ್ಗೆ ಗಾಬ್ರಿ… ಕೂಲಾಗಿರಿ ಸಾರ್ ನಿಮ್ಮ ಬಗ್ಗೆ ಗೌರವ ಇದೇ… ನನ್ನ ಹೆಂಡತಿಗೆ ಬಯಕೆ… ಒಂಬತ್ತು ತಿಂಗಳು ತುಂಬುತ್ತಿವೆ. ನಿಮ್ಮನ್ನು ಒಂದ್ಸಲ ನೋಡಿ ಮಾತಾಡಿಸ್ಬೇಕಂತೇ… ಬನ್ನಿ ಹೋಗೋಣ ಮನೆಗೆ’ ಎಂದ. ಓಹ್! ಏನೋ ಸ್ಕೆಚ್ ಹಾಕವನೇ… ಎಸ್ಕೇಪ್ ಆಗ್ಲೇಬೇಕು ಎಂದು ಆಗಲ್ಲ ಸಾರ್… ಅವುರ್ಗೂ ನನಗೂ ಏನ್ಸಂಬಂಧ… ಅವರ ಮಾತ ಕೇಳ್ಸ್ಕಂಡು ಕರೆಯಕೆ ಬಂದಿದ್ದೀರಲ್ಲಾ… ಗದರಿ ಹೇಳಬೇಕಿತ್ತು… ಇವೆಲ್ಲ ಬೇಡ ಎಂದು ಮುಖ ಮುರಿದೆ. ಅಂಗನ್ನಕ್ಕಾಗಲ್ಲ ಸಾರ್… ತುಂಬು ಗರ್ಭಿಣಿ ಮನಸ್ಸು ನೋಯಿಸಬಾರದು. ಅವಳು ನಿಮ್ಮನ್ನ ಎಷ್ಟು ಪ್ರೀತಿಸ್ತಾಳಂತ ಅವಳ ಗಂಡನಾಗಿ ನನಗೆ ಚೆನ್ನಾಗಿ ಗೂತ್ತಿದೆ ಸಾರ್… ಇಲ್ಲ ಅನ್ನಬೇಡಿ… ಪ್ಲೀಸ್ ಬನ್ನಿ’ ಎಂದು ಕೈ ಹಿಡಿದ. ಅವನ ಬಿಸಿ ನೆತ್ತರ ಕೈಗಳು ಥಂಡಿಯಾಗಿ ಮೃದುವಾದ ನನ್ನ ಕೈಗಳನ್ನು ಬೆಚ್ಚಗೆ ಹಿಡಿದುಕೊಂಡವು. ಹೋಗೋದೊ ಬೇಡವೊ ಎಂದು ಮನಸ್ಸು ಎಳೆದಾಡುತಿತ್ತು. ‘ಹೆರಿಗೆ ಆದಮೇಲೆ ಮಗು ನೋಡಲು ಬರುವೆ’ ಎಂದೆ. ‘ನೋಡ್ರಿ; ಇದೆಂತ ವಿಚಿತ್ರ… ಹೆರಿಗೆಗೆ ಮೊದಲು ನಾನವರ ಮುಖ ನೋಡಲೇಬೇಕು ಅಂತಾಳೆ; ನೀವು ನೋಡಿದ್ರೆ ಮಗು ನೋಡಲು ಬರುವೆ ಎನ್ನುತ್ತೀರಿ… ಏನು ಇಬ್ಬರೂ ಮಾತಾಡಿಕೊಂಡಿದ್ದೀರಾ… ನಿಮ್ಮಿಬ್ಬರ ಮಧ್ಯೆ ನಿಂತಿರುವ ನಾನು ಯಾರ ಮುಖ ನೋಡಲಿ’ ಎಂದು ಕಣ್ಣುಗಳ ಕಿರಿದು ಮಾಡಿಕೊಂಡ. ಮನಸ್ಸು ಚುರ್ ಎಂದಿತು. ಬರ್ತೀನಿ ನಡೀರಿ ಎಂದೆ. ಗಾಡಿ ಕಿಕ್ ಮಾಡಿದ. ಕೂತೆ. ಮನೆ ಮುಂದೆ ನಿಲ್ಲಿಸಿ ಹಾರ್ನ್ ಮಾಡಿದ. ಬನ್ನಿ ಬನ್ನಿ ಎಂದು ಒಳಗೆ ಕರೆವ ರೀತಿಯಲ್ಲೇ ಹೆಂಡತಿಗೆ ಸೂಚನೆ ಕೊಟ್ಟ… ‘ಬಾರೇ… ಬಂದ್ರೂ… ನಿನ್ನ ಅದೃಷ್ಟ’ ಎಂದು ಕರೆದ. ಬಹಳ ಭಾವುಕನಾಗಿದ್ದೆ.
ಮೆಲ್ಲಗೆ ಬಂದಳು. ತುಂಬು ದೇಹ. ‘ಚೆನ್ನಾಗಿದ್ದೀರಾ’ ಎಂದು ಹತ್ತಿರ ಬಂದು ಕೂತಳು. ಎಲ್ಲಾ ನೆನಪಾಗುತಿತ್ತು. ‘ನಿಮ್ಮ ಸ್ಮರಣೆ ಇಲ್ಲದೆ ಇವಳು ಮಲಗೋದಿಲ್ಲ ಸಾರ್… ನೀವು ಅವಳಿಗೆ ಆಶೀರ್ವಾದ ಮಾಡಬೇಕು ಸಾರ್’ ಎಂದ ‘ಹಾಂ… ಆಶೀರ್ವಾದವೇ… ನನಗೆ ಆ ಯೋಗ್ಯತೆ ಇದೆಯೇʼ ಎಂದು ವಿಚಲಿತನಾದೆ. ‘ಹೌದು. ನೀವು ಒಮ್ಮೆ ನನ್ನ ತಲೆಯ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ನುಡಿಯಬೇಕುʼ ಎಂದು ಕೈ ಹಿಡಿದುಕೊಂಡಳು… ನನ್ನ ನಂಬಿಕೆಗಳೆಲ್ಲ ತಲೆಕೆಳಗಾದವು. ‘ಹೌದು ಸಾರ್… ಏನಾದರೂ ಒಳ್ಳೆಯದನ್ನು ಹಾರೈಸಿʼ ಎಂದು ವಿನಂತಿಸಿದ. ತಂತಾನೆ ನನ್ನ ಕೈಗಳು ಅವಳ ತಲೆಯ ಮೇಲಿದ್ದವು… ಕಾಲು ಮುಟ್ಟಿಸಿಕೊಳ್ಳಲು ಮುಂದಾದಳು. ಬಗ್ಗಲು ಆಗುತ್ತಿರಲಿಲ್ಲ. ಹಿಂದೆ ಸರಿದು ನಾನೇ ಅವಳ ಪಾದಗಳಿಗೆ ನಮಸ್ಕರಿಸಿದಂತೆ ನೆಲವನ್ನು ಮುಟ್ಟಿ ಶರಣು ಮಾಡಿಕೊಂಡೆ. ‘ಇದೆಲ್ಲ ಏನು ಗೌಡ್ರೆ’ ಎಂದೆ. ‘ಕೆಲವಕ್ಕೆಲ್ಲ ವಿವರ ಇರಲ್ಲ… ಕಾರಣನೂ ಬೇಕಿಲ್ಲ. ಅವಳಿಗೆ ಒಳ್ಳೆಯದಾದರೆ ಸಾಕು. ಗಂಡನಾಗಿ ಇಷ್ಟಾದರೂ ಮಾಡದಿದ್ದರೆ ಹೇಗೆ ಸಾರ್’ ಎಂದು ಕೈ ಹಿಡಿದುಕೊಂಡ. ನಾನೆ ಸಣ್ಣವನು ಎನಿಸಿತು. ಇನ್ನೊಮ್ಮೆ ಬರುವೆ ಎಂದು ತಪ್ಪಿಸಿಕೊಂಡು ಅಲ್ಲಿಂದ ಹಿಂತಿರುಗಿದ್ದೆ. ಮನಸ್ಸು ಭಾರವಾಗಿತ್ತು.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.