Advertisement
ಮೌನ ಮಾತಾಡಿದಾಗ ಹೊತ್ತಾಗಿತ್ತು: “ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ

ಮೌನ ಮಾತಾಡಿದಾಗ ಹೊತ್ತಾಗಿತ್ತು: “ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ

ಇದ್ದಕ್ಕಿದ್ದಂತೆ ರಾಮಕೃಷ್ಣ ನನ್ನನ್ನು ಹುಡುಕಿಕೊಂಡು ಬಂದ, ಅಳುತ್ತಿದ್ದ, ಏನಾಯ್ತು ಎಂದರೆ “ಸುಮಾಳ ಮದುವೆ ಫಿಕ್ಸ್ ಆಯಿತು.. ಹುಡುಗ ದೆಹಲಿಯಲ್ಲಿದ್ದಾನೆ. ಸಿಕ್ಕಾಪಟ್ಟೆ ದೊಡ್ಡ ಉದ್ಯೋಗವಂತೆ” ಎಂದವನೇ “ನನ್ನನ್ನು ಕ್ಷಮಿಸು, ನಿನಗೂ ಅನ್ಯಾಯ ಮಾಡಿದೆ. ನಿನಗೆ ಅಶ್ವಿನಿಯ ಮೇಲೆ ಮನಸ್ಸಾದರೆ ಸುಮಾ ನನ್ನನ್ನು ಒಲಿಯಬಹುದು ಅಂದುಕೊಂಡೆ” ಎಂದವನೇ ಅಪ್ಪಿ ಅಳತೊಡಗಿದ. ನಾನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮದುವೆಗೆ ಆಮಂತ್ರಣವೂ ಬರಲಿಲ್ಲ. ಮುಕೇಶ್‌ ನೆನಪಾದ. ಹಾಡಬೇಕೆಂದರೆ ಕೇಳುವವರು ಯಾರು ಎಂದೆನಿಸಿತು. ಆದರೂ ಮನಸ್ಸಿನಲ್ಲಿಯೇ ಹಾಡಿದೆ.
“ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

ಸಂಜೆಯಾಗುತ್ತಿದ್ದಂತೆ ತಲೆ ಸಿಡಿಯುತ್ತಿತ್ತು. ಬೆಳಿಗ್ಗೆಯಿಂದ ಮೀಟಿಂಗೂ ಅದೂ ಇದು ಎಂದುಕೊಂಡು ಸುಸ್ತಾಗಿಹೋಗಿದ್ದೆ. ನಡುವೆ ‘ಟಿಂಟಿಣಾಂಟನ್’ ಎಂದು ವಾಟ್ಸ್ಯಾಪಿನಲ್ಲಿ ಮೆಸೇಜೊಂದು ಬಂತು. ಸುಮ್ಮನಿದ್ದೆ, ಯಾಕೋ ಮನಸ್ಸು ಒಮ್ಮೆ ಯಾರದ್ದೆಂದು ನೋಡು ಎನ್ನುತ್ತಿತ್ತು. ಮಹತ್ವದ ಮೀಟಿಂಗ್ ಆಗಿದ್ದರಿಂದ ಆಮೇಲೆ ನೋಡಿದರಾಯಿತೆಂದುಕೊಂಡೆ. ಮತ್ತೊಮ್ಮೆ ಸದ್ದಾಯಿತು. ಇದ್ದಕ್ಕಿದ್ದಂತೆ ಎದೆಯೊಳಗೆ ಏನೋ ಕಳವಳ, ವಿವರಣೆಗೆ ಸಿಲುಕುತ್ತಿರಲಿಲ್ಲ. ಹೆಂಡತಿಯ ರಿಂಗ್ ಟೋನ್ ಬೇರೆಯೇ ಇತ್ತು. ಇನ್ನೊಮ್ಮೆ ಅದೇ ಸದ್ದಾದಾಗ ಮ್ಯಾನೇಜರರಿಗೆ ಮುಂದುವರೆಸಿ ಎಂದು ವಾಶ್‌ರೂಮಿಗೆ ಹೋಗಿ ಬಾಗಿಲು ಹಾಕಿ ಕಮೋಡ್ ಹತ್ತಿರ ನಿಂತೆ. ಹೊರಬರುತ್ತಿರಲಿಲ್ಲ. ಮೊಬೈಲ್ ತೆಗೆದು ನೋಡಿದರೆ ಯಾವುದೋ ಅಪರಿಚಿತ ನಂಬರ್ ಅದು. ವಾಯ್ಸ್‌ ಮೆಸೇಜ್ ನಾಲ್ಕು ಸಲ ಬಂದಿತ್ತು. ಒಂದು ವಿಡಿಯೋ, ನನ್ನ ಒಂದು ಕಾಲದಲ್ಲಿ ನನ್ನ ನೆಚ್ಚಿನ ಗೀತೆ “ಪೂರಬ್ ಔರ್ ಪಶ್ಚಿಮ್” ಚಿತ್ರದಲ್ಲಿ ಮುಕೇಶ್ ಹಾಡಿದ “ಕೋಹಿ ಜಬ್ ತುಮಾರಾ ಹೃದಯ್ ತೋಡ್ ದೆ…” ವಿಡಿಯೋ ಕೆಳಗೆ ವಾಯ್ಸ್ ಮೆಸೇಜ್. ಒಮ್ಮೆಲೆ ಎದೆ ಬಾಯಿಗೆ ಬಂದಂತಾಯಿತು. ಹೊರಗಡೇ ಯಾರಿಗೂ ಕೇಳುತ್ತಿಲ್ಲವೆಂದು ಮತ್ತೊಮ್ಮೆ ಖಾತ್ರಿ ಮಾಡಿಕೊಂಡು ಒಪನ್ ಮಾಡಿದೆ. “ಈ…. ಹಾ..ಡು… ನೆ..ನ..ಪಿ..ದೆ..ಯೊ… ನೋಡು..” ಸಣ್ಣ ಪಿಸುಧ್ವನಿ. ಮತ್ತೊಂದು ಮೆಸೇಜ್ ತೆರೆದು ನೋಡಿದರೆ ಅದೇ ಧ್ವನಿ ಸಂದೇಶ, ಮೂರು ನಾಲ್ಕರಲ್ಲಿಯೂ ಅದೇ ಇರಬೇಕೆನಿಸಿತು. ತೆರೆದು ನೋಡಲಿಲ್ಲ. ಹೊರಗೆ ಬಂದು ಆಫೀಸಿನ ಮೀಟಿಂಗ್‌ನಲ್ಲಿ ಕುಳಿತೆ. ಮ್ಯಾನೇಜರ್ ಯಾವುದೋ ಫೈಲ್ ತೋರಿಸುವ ನೆವದಲ್ಲಿ ನನ್ನ ಕಿವಿಯ ಹತ್ತಿರ ಬಗ್ಗಿ “ಸರ್. ಪ್ಯಾಂಟಿನ ಜಿಪ್ ಒಪನ್ ಇದೆ..” ಎಂದು ಪಿಸುಗುಟ್ಟಿದ. ‘ಥಾಂಕ್ಸ್’ ಎಂದು ಅಲ್ಲೇ ಸರಿಮಾಡಿಕೊಂಡೆ. ಇದ್ದಕ್ಕಿದ್ದಂತೆ ತಲೆ ನೋಯತೊಡಗಿತು. ಮೀಟಿಂಗ್ ಮುಂದುವರಿಸಲು ಹೇಳಿ ನನ್ನ ಕ್ಯಾಬಿನ್ನಿಗೆ ಬಂದು ಕುಳಿತೆ. ಫೋನ್ ರಿಂಗ್‌ ಆದಾಗ ಬೆದರಿದೆ, ರಿಂಗ್ ಟೋನ್ ಹೆಂಡತಿಯದ್ದು; ಬರುವಾಗ ಯಾವುದೋ ತರಕಾರಿ ತರಲು ಹೇಳಿದಳು. ಆಯಿತು ಎಂದು ಕಟ್ ಮಾಡಿದೆ. ಆಫೀಸಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎನಿಸಿತು. ಮನೆಗೆ ಹೊರಡುತ್ತೇನೆಂದು ಹೊರಟೆ. ಮ್ಯಾನೇಜರ್ ಅವಸರದಿಂದ ಓಡಿಬಂದು “ಸರ್, ಆರಾಮ ಇಲ್ಲವೋ, ಟೇಕ್ ರೆಸ್ಟ್” ಎಂದ. “ನಥಿಂಗ್”, ಎಂದವನೇ ಹೊರಟೆ. ಹಿಂದಿನ ಸೀಟಿನಲ್ಲಿ ಕುಳಿತವನೇ ಮುಕೇಶ ಮನೋಜ್ ಕುಮಾರನಿಗಾಗಿ ಹಾಡಿದ, ಆಕೆ ಕಳುಹಿಸಿದ ವಿಡಿಯೋ ಕೇಳಲು ಪ್ರಾರಂಭಿಸಿದೆ. ಹಾಡು ಅಲೆಯಲೆಯಾಗಿ ಬರುತ್ತಿದ್ದಂತೆ ಮನಸ್ಸಿನಲ್ಲಿಯೂ ವಿಧವಿಧವಾದ ಭಾವನೆಗಳು ಮೂಡತೊಡಗಿದವು. ಡ್ರೈವರ್ ಒಮ್ಮೆ ಹಿಂದೆತಿರುಗಿ ನೋಡಿದ. ಯಾವ ಭಾವನೆಯಿಂದ ಎಂದು ಅರ್ಥವಾಗಲಿಲ್ಲ. ಆದರೂ ಆತನಿಗೆ ಏನಾದರೂ ಸಂಶಯ ಬಂದಿರಬಹುದಾ ಎನಿಸಿ ಸುಮ್ಮನಾದೆ. ‘ಸರ್’ ಮೇಡಂ ನಿಮ್ಗೆ ಏನೋ ತರಲು ಹೇಳಿದ್ದಾರಂತಲ್ಲ, ನನಗೆ ಫೋನ್‌ ಮಾಡಿ ನೆನಪಿಸಲು ಹೇಳಿದ್ದರು’ ಎಂದ. ಏನು ಹೇಳಿದ್ದಾಳೆ ಎನ್ನುವುದು ಮರೆತುಹೋಗಿತ್ತು. ಫೋನಿನಲ್ಲಿ ಕೇಳಿ ತೆಗೆದುಕೊಂಡು ಬಾ ಎಂದೆ. ಕೆಳಗಿಳಿದು ಹೋದವ ಏನೋ ಒಂದಿಷ್ಟು ಸಾಮಾನು, ತರಕಾರಿ ತಂದ. ನಾನೂ ಆ ಹಾಡನ್ನು ನಿಲ್ಲಿಸಿ ಮೌನವಾದೆ.

ಮನೆಮುಟ್ಟಿದಾಗಲೇ ಗಂಟೆ ಎಂಟು. ರಾತ್ರಿ, ಊಟ ಮಾಡಿ ಎಂದ ಹೆಂಡತಿಗೆ ಹಸಿವಿಲ್ಲ ಎಂದು ಸುಳ್ಳು ಹೇಳಿದೆ. ಬಾಲ್ಕನಿಗೆ ಹೋಗಿ ಮತ್ತೊಮ್ಮೆ ಮುಕೇಶನ ಆ ಹಾಡನ್ನು ಸುಮ್ಮನೆ ಕೇಳುತ್ತಿದ್ದಂತೆ, ಈ ಹಾಡನ್ನು ನಾನು ಕೇಳದೆ ಎಷ್ಟು ವರ್ಷಗಳಾದವು ಅನಿಸಿತು. ಸುಮಾರು ಇಪ್ಪತ್ತಾರೋ ಇಪ್ಪತ್ತೇಳೋ ವರ್ಷಗಳ ನಂತರ ಹಿಂದೆ ಕೊನೆಯದಾಗಿ ಕೇಳಿದ್ದೆ. ನಂತರ ಕೇಳಬಾರದು ಎಂದು ಇದ್ದ ನನಗೆ ಈ ಹಾಡು ಮತ್ತೊಮ್ಮೆ ಗುಂಗು ಹಿಡಿಸಿತು. ನೆನಪು ಜಾರುತ್ತಾ ಹೋಯಿತು.

ಪಿಯುಸಿಯಲ್ಲಿ ಉತ್ತಮ ಅಂಕ ತೆಗೆದು ಮುಂದೆ ಓದಲು ಸಾಧ್ಯವಿಲ್ಲದೇ ನಿಲ್ಲಿಸಬೇಕು ಅಂದುಕೊಂಡವನಿಗೆ ಪುಣ್ಯಾತ್ಮರೊಬ್ಬರು ನೆರವಾಗಿ ಬಂದಿದ್ದರು. ಹುಬ್ಬಳ್ಳಿಯೋ, ಬೆಂಗಳೂರೋ ಎಲ್ಲಿಯಾದರೂ ಕಾಮತ ಹೊಟೇಲಿಗೆ ಹೋಗಿ ಗಲ್ಲದ ಮೇಲೆ ಕುಳಿತು ರಾತ್ರಿ ಕಾಲೇಜಿನಲ್ಲಿಯಾದರೂ ಓದನ್ನು ಮುಂದುವರಿಸಬೇಕು ಎನ್ನುವ ಅಭಿಲಾಶೆಯಲ್ಲಿದ್ದೆ. ಆ ಹೋಟೇಲಿನ ಮಾಲಿಕರು ಊರಿಗೆ ಬಂದ ಸಮಯ ನೋಡಿ ಅವರನ್ನು ಭೇಟಿಯಾಗಲು ಹೊರಟಿದ್ದೆ. ಅವರ ಮನೆಯಲ್ಲೊಂದು ಯಾವುದೋ ಧಾರ್ಮಿಕ ಹೋಮವಿತ್ತು. ಪುರೋಹಿತರಾದ ಚಿದಂಬರ ಜೋಶಿಯವರು ನಮಗೆ ಹತ್ತಿರದ ಬಂಧು. ಯುವಕ. ಒಳ್ಳೆಯ ವಿದ್ವತ್ ಇದ್ದವ ಎಂದು ಹೆಸರಾದವರು. “ಯಾಕೆ ಬಂದೆ” ಎಂದು ಕೇಳಿದರು. “ಪರಿಸ್ಥಿತಿ ಹೀಗೀಗಿದೆ, ಸ್ವಲ್ಪ ನನ್ನ ಸಲುವಾಗಿ ಕಾಮತರ ಹತ್ತಿರ ಉದ್ಯೋಗಕ್ಕೆ ಶಿಫಾರಸ್ಸು ಮಾಡಬಹುದಾ, ಸಂಬಳ ಎಷ್ಟು ಎಂದು ಕೇಳುವುದಿಲ್ಲ, ಉಳಿಯಲು ಜಾಗ ಫೀಸಿಗಾಗುವಷ್ಟು ಹಣ ಮತ್ತೆ ಕಾಲೇಜಿಗೆ ಹೋಗಲು ಕೆಲವೊಂದಿಷ್ಟು ಸಮಯ ಕೊಟ್ಟರೆ ಸಾಕು. ಇಡೀ ದಿನದ ಕೆಲಸವನ್ನು ಉಳಿದ ಹೊತ್ತಿನಲ್ಲಿ ಮಾಡಿಕೊಡುವೆ” ಎಂದು ಹೇಳುವಷ್ಟರಲ್ಲಿ ಗಂಟಲು ತುಂಬಿ ಬಂದಿತ್ತು. ಕೈ ಹಿಡಿದು ಹತ್ತಿರ ಕುಳಿಸಿಕೊಂಡರು ಮಾತಾಡಲಿಲ್ಲ. ಕಾಮತರು ಬಂದಾಗ ನನ್ನ ಮನೆತನದ ವಿಷಯ ಹೇಳಿದರು. ವೈದಿಕರ ಸಂಗಡ ನನ್ನನ್ನೂ ಕುಳ್ಳಿರಿಸಿ ದಕ್ಷಿಣೆಯನ್ನೂ ಕೊಡಿಸಿದರು. ಶಾಲು ಹೊದೆಸಿ ಕೈತುಂಬಾ ದಕ್ಷಿಣೆಯನ್ನು ಕೊಟ್ಟಾಗ ಏನಾದರೂ ಕೇಳಲೇ, ಎಂದು ಅವರ ಮುಖ ನೋಡಿದೆ. ಸುಮ್ಮನಿರು ಎಂದು ಗಂಭೀರ ಮುಖದಿಂದ ಆಶೀರ್ವಚನ ಮಂತ್ರವನ್ನು ಹೇಳಲು ಪ್ರಾರಂಭಿಸಿದರು. ಎಲ್ಲಾ ಮುಗಿದು “ಬೇಗ ಮನೆಗೆ ಹೋಗು, ನಿನ್ನ ಕೆಲಸ ನಾನು ಮಾತಾಡಿ ಬರುವೆ” ಎಂದು ಬೇರೆ ಮಾತಾಡಲು ಅವಕಾಶ ಕೊಡದೇ ಮನೆಗೆ ಕಳಿಸಿಬಿಟ್ಟರು.

ಮಾರನೆಯ ದಿನ ಮನೆಗೆ ಬಂದವರೇ ‘ಏಳು ಹೋಗುವಾʼ ಎಂದು ನನ್ನನು ಹೊರಡಿಸಿ ಕರೆತಂದಿದ್ದು ನಮ್ಮ ಕಾಲೇಜಿಗೆ. ಪ್ರಿನ್ಸಿಪಾಲರ ಹತ್ತಿರ ಒಬ್ಬರೇ ಒಳಗೆ ಹೋಗಿ ಏನು ಮಾತನಾಡಿದರೋ ಗೊತ್ತಿಲ್ಲ. ಹೊರಬಂದವರೆ, ಫಾರ್ಮ್‌ ಎಲ್ಲಾ ತುಂಬಿಸಿ ಎಡ್ಮಿಷನ್ ಮಾಡಿಸಿ ದೊಡ್ಡ ಜವಳಿ ಅಂಗಡಿಗೆ ಕರೆತಂದು ಎರಡು ಜೊತೆ ಪ್ಯಾಂಟ್ ಶರ್ಟ್ ಪೀಸ್ ತೆಗೆಯಿಸಿ ಅಲ್ಲೇ ಇರುವ ದರ್ಜಿಯ ಹತ್ತಿರ ನನ್ನ ಅಳತೆಗೆ ಹೊಲಿಯಲು ಕೊಟ್ಟು ಬಂದರು. ಹೆಚ್ಚು ಮಾತಾಡುತ್ತಿರಲಿಲ್ಲ. ಸುಮ್ಮನೇ ಅವರ ಹಿಂದೆ ತಲೆಯಾಡಿಸಿ ಬರುತ್ತಿದ್ದೆ. ಟೆಂಪೊ ಹತ್ತಿ ಊರಿಗೆ ಬಂದು ಇಳಿದವರೆ, “ನೋಡು, ನಿನ್ನ ವಿದ್ಯಾಭ್ಯಾಸದ ವ್ಯವಸ್ಥೆ ಆಗಿದೆ. ಕಾಲೇಜಿನಲ್ಲಿ ನಿನಗೆ ಬೇಕಾದ ಪುಸ್ತಕ ಎಲ್ಲಾ ಕೊಡುತ್ತಾರೆ. ಹೋಟೆಲ್ ಕೆಲಸಾ ಎಂದೆಲ್ಲಾ ವಿಚಾರ ಮಾಡಬೇಡ” ಎಂದಾಗ ಅವರ ಕಾಲಿಗೆ ಬಿದ್ದಿದ್ದೆ. “ನನಗೊಂದು ಭಾಷೆ ಕೊಡು, ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ತೆಗೆದು ಪಾಸಾಗಬೇಕು, ಲವ್ವು ಗಿವ್ವು ಎನ್ನುವ, ಸಿನೆಮಾ ಥೇಟರ್ ಸುತ್ತುವ ಕೆಲಸ ಮಾಡಕೂಡದು. ಸಂಕೋಚವನ್ನು ಬಿಟ್ಟು ಭಾಷಣ, ಚರ್ಚಾಕೂಟಕ್ಕೆ ಭಾಗವಹಿಸು. ಓದಿ ಆದ ಮೇಲೆ ಮನೆಯಲಿರುವ ಅಪ್ಪ, ಅಮ್ಮ ತಮ್ಮಂದಿರನ್ನು ಮರೆಯಬೇಡ. ನಾನು ಸಹಾಯ ಮಾಡಿರುವ ಸಂಗತಿ ಯಾರಲ್ಲಿಯೂ ಹೇಳಬಾರದು” ಎಂದು ಮನೆದೇವರ ಆಣೆ ಹಾಕಿಸಿ ಭಾಷೆ ತೆಗೆದುಕೊಂಡರು. ಅವರ ಮನೆಯಲ್ಲಿದ್ದ ಹಳೆಯ ಸೈಕಲ್ ಸಹ ಕೊಟ್ಟು ಉಪಕರಿಸಿದ್ದರು.

ಎಡ್ಮಿಷನ್ ಮಾಡುವಾಗ ತಡವಾದ ಕಾರಣದಿಂದ ಕಾಲೇಜಿನ ಪಾಠಗಳು ಸುರುವಾಗಿಬಿಟ್ಟಿದ್ದವು. ಮೊದಲ ಬಾರಿಗೆ ಪ್ಯಾಂಟ್ ಹಾಕಿ ಕಾಲೇಜಿಗೆ ಹೋಗಿದ್ದೆ. ಸಂತಸವಾಗಿತ್ತು. ಬೆಲ್ ಬಾಟಮ್ ಪ್ಯಾಷನ್ ಇದ್ದ ಕಾಲ. ದರ್ಜಿ ಇತ್ತ ಬೆಲ್ಲ್ ಅಲ್ಲದ ಅತ್ತ ಟೈಟ್ ಸಹ ಅಲ್ಲದ ರೀತಿಯಲ್ಲಿ ಹೊಲಿದಿದ್ದ. ಮನಸ್ಸು ಪಿಚ್ಚಗಾಗಿತ್ತು. ಗತಿಯಿಲ್ಲವಾಗಿತ್ತು. ಅಪ್ಪ ಅಮ್ಮನ ಮುಖದಲ್ಲಿ ಏನೋ ಒಂದು ನಿರೀಕ್ಷೆ, ಆಶಾಕಿರಣ. ಹಾಗೆ ಬಂದವನಿಗೆ ತರಗತಿಗೆ ಹೋಗುವಾಗ ಅವರಿಬ್ಬರು ಎದುರು ಕಾಣಿಸಿದರು. ಏಕಕಾಲಕ್ಕೆ ಕ್ಲಾಸ್ ರೂಮಿಗೆ ಹೊಕ್ಕುವಾಗ ಇಬ್ಬರೂ ಮುಗುಳುನಗೆ ನಕ್ಕರು. ನನಗೆ ನನ್ನ ಪ್ಯಾಂಟ್ ನೋಡಿ ನಕ್ಕರೆನೋ ಅಂದುಕೊಂಡು ಬೇಸರದಿಂದ ಕ್ಲಾಸಿನಲ್ಲಿ ಕುಳಿತೆ. ಅರ್ಥಶಾಸ್ತ್ರದ ತರಗತಿಯಾಗಿತ್ತು. Money is what money does” ಎನ್ನುವ ವಿಷಯದ ಮೇಲೆ ವಿವರಣೆಯನ್ನು ನಾಯರ್ ಸರ್ ವಿವರಿಸುತ್ತಿದ್ದರು. ನನ್ನನ್ನು ನೊಡಿದವರೇ “Good, You have decided to continue your education, Now explain it” ಎಂದು ನೇರವಾಗಿ ಕರೆದು ಹೇಳಿದರು. ಇಂಗ್ಲೀಷಿನಲ್ಲಿಯೇ ಮಾತಾಡುವವರು. ಕನ್ನಡದಲ್ಲಿ ಪ್ರಶ್ನೆ ಕೇಳಿದರೂ ಅವರು ಮಾತ್ರ ಇಂಗ್ಲೀಷಿನಲ್ಲಿಯೇ ಉತ್ತರಿಸುತ್ತಿದ್ದರು. ಇಂಗ್ಲೀಷ್ ನನಗೆ ಇಷ್ಟ, ಆದರೆ ಸರಿಯಾಗಿ ಮಾತಾಡಲು ಬರುತ್ತಿರಲಿಲ್ಲ. ಆದರೂ ಉತ್ತರಿಸಿದ್ದೆ. ಅವರಿಗೆ ಖುಷಿಯಾಯಿತು. ಕ್ಲಾಸ್ ಮುಗಿದಮೇಲೆ ಕೆಲ ಹುಡುಗರು ’ಇಂಗ್ಲೀಷ್ ಮೆನ್’ ಎಂದು ಟೀಕೆ ಮಾಡಿದರು.

ತಲೆಕೆಡಿಸಿಕೊಳ್ಳಲಿಲ್ಲ. ಅವರಿಬ್ಬರು ಮಾತ್ರ ನನ್ನನ್ನು ಅಚ್ಚರಿಯಿಂದ ನೋಡಿದರು. ಮೆಚ್ಚುಗೆಯೂ ಇತ್ತು. ಅವರು ಅಪರಿಚತರೇನೂ ಅಲ್ಲ, ಅಡಿಕೆ ತೋಟದ ದೊಡ್ಡ ಕುಳಕ್ಕೆ ಸೇರಿದವರು. ಅವರ ಅಪ್ಪಂದಿರು ಸೀಮೆಯಲ್ಲಿಯೇ ಗೌರವಕ್ಕೆ ಪಾತ್ರರಾದವರು. ಸುಮಾಳ ಅಪ್ಪ ದೀಕ್ಷಿತರು ಗಂಭೀರ ಆದರೆ ಸರಳ ವ್ಯಕ್ತಿತ್ವ. ಅಮ್ಮ ಮಾತ್ರ ಮುಖ ನೋಡಿ ಮಣೆಹಾಕುವವಳು. ಅಶ್ವಿನಿಯ ಅಪ್ಪ ದೊಡ್ಡ ಹೆಗಡೆ, ಹೆಸರಿಗೆ ತಕ್ಕಂತೆ ದೊಡ್ಡ ಕುಳವೇ. ಜನರನ್ನು ಮಾತಾಡಿಸುವವನಲ್ಲ. ಅಮ್ಮ ಸರಳಸ್ವಭಾವದವಳಾದರೂ ಹೆಣ್ಣುಗಳನ್ನು ಹಡೆದು ಸೋತುಹೋಗಿ ಕೊನೆಗೊಬ್ಬ ಗಂಡು ಮಗುವಿನ ತಾಯಿಯಾಗಿ ಸಂಸಾರದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಳು. ದೀಕ್ಷಿತರ ಸುಮಾ ಎತ್ತರದ ಚಂದದ ಹುಡುಗಿ. ಸ್ವಲ್ಪ ಗತ್ತಿದ್ದಂತೆ ಕಂಡೂ ಬಂತು. ಅಶ್ವಿನಿ ಸ್ವಲ್ಪ ಕುಳ್ಳಗೆ ಇದ್ದರೂ ಚಂದಕ್ಕೇನೂ ಕಡಿಮೆ ಇರಲಿಲ್ಲ. ನಿಮ್ಮಮ್ಮ ನಮ್ಮ ಅಮ್ಮನಿಗೆ ಸಂಬಂಧ ಎಂದು ಅವಳೇ ಮಾತಾಡಿಸಿದಳು. ನಾನೂ ನಕ್ಕು ಹೌದು ಎಂದೆ. ಮತ್ತೊಂದು ಎರಡು ಮೂರು ದಿನ ಬಿಟ್ಟು ಲೈಬ್ರರಿಯಲ್ಲಿ ಎದುರು ಸಿಕ್ಕಾಗ ಸುಮಾ “ನಿನ್ನ ಅಮ್ಮ ಚನ್ನಾಗಿ ಹಾಡನ್ನು ಹಾಡುತ್ತಾಳಂತೆ, ಅಮ್ಮ ಹೇಳಿದಳು” ಎಂದು ನಕ್ಕಳು. ಹೌದು ಎಂದೆ. ಮನಸ್ಸಿನಲ್ಲಿ ಸುಮಾಳನ್ನು ನೋಡುತ್ತಿರಬೇಕು ಎನಿಸಿತು. ಅಶ್ವಿನಿ ನನ್ನನ್ನೇ ನೋಡುತ್ತಿದ್ದಳು.

ಕಾಲೇಜಿನ ನೋಟಿಸ್ ಬೋರ್ಡಿನಲ್ಲಿ ಆಗಾಗ ನನ್ನ ಕವನಗಳು ಪ್ರಕಟವಾಗುತ್ತಿದ್ದವು. ಪ್ರಿನ್ಸಿಪಾಲರು ಭಾಷಣ, ಕ್ವಿಜ್ ಮೊದಲಾದವುಗಳಿಗೆ ನನ್ನನ್ನೇ ಕಳುಹಿಸುತ್ತಿದ್ದರು. ಕಾಲೇಜಿಗೆ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಬಹುಮಾನ ಬರುತ್ತಿತ್ತು. ಬಹುಮಾನ ಗಳಿಸಿದ ಮೇಲೆ ಕಾಲೇಜಿನ ನೋಟಿಸ್ ಬೋರ್ಡಿನಲ್ಲಿ ನನ್ನ ಹೆಸರಿಗೆ ಅಭಿನಂದನೆ ಇರುತ್ತಿತ್ತು. ಅದನ್ನು ಸುಮಾ ನೋಡಲಿ ಎಂದು ನಾನು ಬಯಸುತ್ತಿದ್ದೆ. ಇಬ್ಬರ ಮೆಚ್ಚುಗೆಯೂ ಇರುತ್ತಿತ್ತು. ಈ ಇಬ್ಬರೂ ಕಾಲೇಜಿನ ಹುಡುಗರ ಕನಸಾಗಿದ್ದರು. ಸುಮಾಳ ಊರಿನ ಹತ್ತಿರದವ ರಾಮಕೃಷ್ಣ ಆತನದ್ದು ಬೇರೆ ಸೆಕ್ಷೆನ್ ಒಳ್ಳೆಯ ಹುಡುಗ. ತುಂಬಾ ಅನುಕೂಲವಂತ. ನನ್ನೊಡನೆ ಯಾವಾಗಲೂ ಸಲಿಗೆಯಿಂದ ಇದ್ದ. ಕಾಲೇಜಿಗೆ ಬಂದ ನಾನು ಸಂಜೆ ಮನೆಗೆ ಹೋಗಿಯೇ ಊಟಮಾಡಬೇಕಾಗಿತ್ತು. ಹಸಿವೆಯಾದರೆ ತಣ್ಣೀರು. ಅದೇ ರೂಢಿಯಾಗಿತ್ತು. ಒಮ್ಮೆ ರಾಮಕೃಷ್ಣ ನನ್ನನ್ನು ಕ್ಯಾಂಟಿನಿಗೆ ಕರೆದುಕೊಂಡು ಒತ್ತಾಯದಿಂದ ಕರೆದೊಯ್ದ. ಆತನ ಋಣದಲ್ಲಿ ಬೀಳಬಾರದು ಎನಿಸಿ ಬರುವುದಿಲ್ಲ ಎಂದರೆ ನಿನ್ನ ಗೆಳೆತನ ನನಗಿಷ್ಟ ಎಂದು ಒತ್ತಾಯಿಸುತ್ತಿದ್ದ.

ಹಸಿವೆ ಇರುವಾಗ ಸ್ವಾಭಿಮಾನ ಮರೆಯಾಗುತ್ತದೆ. ವಾರಕ್ಕೆ ಎರಡು ಮೂರು ದಿನವಾದರೂ ಹೋಗುತ್ತಿದ್ದೆ. ಕ್ಯಾಂಟಿನಿನಲ್ಲಿ ಸುಮಾ ಮತ್ತು ಅಶ್ವಿನಿ ಇಬ್ಬರೂ ಲೇಡಿಸ್ ರೂಮಿನಲ್ಲಿ ಅದೇ ಹೊತ್ತಿಗೆ ಇರುತ್ತಿದ್ದರು. ಅದೂ ಒಂದು ಆಕರ್ಷಣೆ ನನಗಿತ್ತು. ಆಗಾಗ ನನಗೆ ಹಣದ ನೆರವು ನೀಡಿದ ಚಿದಂಬರ ಜೋಶಿಯವರಿಗೆ ಕೊಟ್ಟ ಮಾತಿನ ನೆನಪಾಗುತ್ತಿತ್ತು. ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ಅವರು ಸಿಕ್ಕಾಗ ನಾನೇ ಅವರಿಗೆ ನನ್ನ ಪ್ರಗತಿಯ ವಿಷಯ ಹೇಳಲು ಹೋದರೆ “ನಿನ್ನ ಮೇಲೆ ವಿಶ್ವಾಸವಿದೆ. ನೀನು ದೊಡ್ಡ ವ್ಯಕ್ತಿಯಾಗಬೇಕು. ನಂಬಿಕೆ ಉಳಿಸಿಕೊ” ಎಂದು ಹೇಳಿಬಿಡುತ್ತಿದ್ದರು. ಆಗ ನನ್ನ ಮನಸ್ಸಿನ ಮೇಲೆ ನಿಯಂತ್ರಣ ಹೇರಿ ಓದಬೇಕು ಎಂದು ಹೇಳಿ ಲೈಬ್ರರಿಗೆ ಹೋಗಿ ಪುಸ್ತಕ ಓದುತ್ತಾ ಕುಳಿತಿರುತ್ತಿದ್ದೆ. ಒಂದೆರಡು ದಿವಸ ಹೀಗೆ ನಡೆಯುತ್ತಿತ್ತು, ಮತ್ತೆ ಯಾಕೋ ಅವಳ ಸೆಳೆತ ಕಾಡುತ್ತಿತ್ತು. ಅಶ್ವಿನಿ ನನ್ನಲ್ಲಿ ಸಲಿಗೆಯಿಂದ ಮಾತಾಡುತ್ತಿದ್ದಳು, ಸುಮಾ ಕಣ್ಣಿನಲ್ಲಿಯೇ ಮಾತಾಡುತ್ತಿದ್ದಳು ಅನಿಸುತ್ತಿತ್ತು. ಕ್ಲಾಸಿನ ಕೆಲವರು “ಎನೋ ಡಬಲ್ಲಾsss” ಎಂದು ರಾಗ ಎಳೆಯಲು ಸುರುಮಾಡಿದರು. ಒಮ್ಮೆಲೇ ಹೆದರಿಬಿಟ್ಟೆ. ಅಯ್ಯೋ ಈ ಸಂಗತಿ ಮನೆಯಲ್ಲಿ, ವಿಶೇಷವಾಗಿ ಜೋಶಿಯವರಿಗೆ ತಿಳಿದರೆ ಎನ್ನುವ ಹೆದರಿಕೆ ಬೇರೆ. ಸುಮ್ಮನೆ ಲೈಬ್ರರಿಗೆ ಹೋಗಿ ಯಾರಿಗೂ ಕಾಣಿಸದಂತೆ ಕುಳಿತುಬಿಡುತ್ತಿದ್ದೆ. ರಾಮಕೃಷ್ಣ ಬಂದು ಕ್ಯಾಂಟೀನಿಗೆ ಕರೆದೊಯ್ಯುತ್ತಿದ್ದ. ಆಗ ಅಲ್ಲಿ ಅವರನ್ನು ನೋಡಿದಾಗ ಮತ್ತೆ ಮನಸ್ಸು ಹಾರುತ್ತಿತ್ತು. ಡಿಗ್ರಿಯ ಮೂರನೆಯ ವರ್ಷ ನಡೆಯುತ್ತಿತ್ತು. ನನ್ನ ಅವಳ ನಡುವಿನ ಸಂವೇದನೆ ಇದಕ್ಕಿಂತ ಮುಂದೆ ಸಾಗಿರಲಿಲ್ಲ.

ರಾಮಕೃಷ್ಣನಿಗೆ ಕ್ಲಾಸು ಮೂರು ಗಂಟೆಗೆ ಮುಗಿದರೂ ಆತ ಮನೆಗೆ ಹೋಗುವುದು ಐದು ಗಂಟೆಯ ಬಸ್ಸಿಗಾಗಿತ್ತು. ಸುಮಾ, ಅಶ್ವಿನಿ ಇಬ್ಬರೂ ಅದೇ ಬಸ್ಸಿಗೆ ಹೋಗುತ್ತಿದ್ದರು. ಒಂದು ದಿನ ರಾಮಕೃಷ್ಣ ನನ್ನನ್ನು “ಹೀಗೆ ತಿರುಗಾಡಿ ಬರೋಣ ಬಾ” ಸುಮ್ಮನೆ ಕಾಲೇಜಿನ ಹಿಂದಿರುವ ಗಾಳಿಮರದ ತೋಪಿನಲ್ಲಿ ಕರೆದುಕೊಂಡು ಹೋದ. ಕೈ ಹಿಡಿದು ಕುಸಿದು ಕುಳಿತ. “ಯಾಕೋ ಏನಾಯಿತು” ಎಂದೆ. “ಕೈ ಬಿಡಬೇಡ” ಎಂದ. ಆತನ ಪಕ್ಕದಲ್ಲಿ ಕುಳಿತೆ, “ನಾನ್ ಸುಮಾಳನ್ನು ಪ್ರೀತಿಸುತ್ತೇನೆ, I can’t live without her” ಎಂದ. ಏನಾಯಿತು ಎಂದು ನನಗೆ ತಿಳಿಯಲಿಲ್ಲ. ಸಾವರಿಸಿಕೊಂಡು “ಆಕೆ ನಿನ್ನನ್ನು ಇಷ್ಟ ಪಡುತ್ತಾಳೋ ಹೇಗೆ” ಎಂದು ಕೇಳಿದೆ. “I think so…”, ಖಂಡಿತವಾಗಿ ಆಕೆ ನನ್ನನ್ನು ಪ್ರೀತಿಸುವಂತೆ ಮಾಡುತ್ತೇನೆ. ನಿನ್ನ ಸಹಕಾರ ಬೇಕು” ಎಂದ. ನಾನೇಗೆ ಸಹಾಯಮಾಡಲು ಸಾಧ್ಯ, ನೀನೆ ಆಕೆಯಲ್ಲಿ ಕೇಳು” ಎಂದೆ. ಹಾಗಲ್ಲ, “ನಿನ್ನ ವಿಷಯದಲ್ಲಿ ಆಕೆಗೆ ಅಪಾರವಾದ ಗೌರವವಿದೆ. ಬಸ್ಸಿನಲ್ಲಿ ಅವರಿಬ್ಬರೂ ನಿನ್ನ ಭಾಷಣ, ಬುದ್ಧಿವಂತಿಕೆಯ ಕುರಿತು ಅಭಿಮಾನದಿಂದ ಮಾತಾಡಿಕೊಳ್ಳುತ್ತಾರೆ. ನೀನು ಜೊತೆಗಿದ್ದರೆ ನನ್ನನ್ನೂ ಅವರು ಇಷ್ಟಪಡುತ್ತಾರೆ, ಪ್ಲೀಸ್, ಬಿಡುವಾದಾಗ ನಿನ್ನ ಸಂಗಡ ನಾನಿರುತ್ತೇನೆ, ದೂರ ಹೋಗಬೇಡ” ಎಂದ. ಒಮ್ಮೆಲೇ ನನಗೆ ಶಾಕ್ ಹೊಡೆದ ಅನುಭವ. ನನ್ನ ನೋಡುವಾಗಿನ ಆಕೆಯ ಕಣ್ಣು ನನ್ನನ್ನು ಸೆಳೆಯುತ್ತಿತ್ತು. ಆತನಿಗೆ ಹೇಳಬೇಕೆನ್ನುವಷ್ಟರಲ್ಲಿ “ಅಶ್ವಿನಿ ನಿನ್ನನ್ನು ತುಂಬಾ ಇಷ್ಟ ಪಡುತ್ತಾಳೆ, ಗೊತ್ತಾ, ನಿನ್ನ ವಿಷಯ ಬಂದಾಗ ಆಕೆಯ ಮುಖ ಇಷ್ಟಗಲವಾಗುತ್ತದೆ. ಆಕೆಯ ಮನೆಯಲ್ಲಿ ನಿನ್ನ ಬಗ್ಗೆ ಗೊತ್ತು, ಅವಳಕ್ಕ ಎಲ್ಲಾ ನಿನ್ನ ವಿಷಯ ಹೇಳೀ ಅವಳನ್ನು ಚುಡಾಯಿಸುತ್ತಾರೆ” ಎಂದಾಗ ಇನ್ನಷ್ಟು ಶಾಕ್ ಆದೆ. ಚಿದಂಬರ ಜೋಶಿಯವರು, ಅಪ್ಪನ ಆರ್ದ್ರ ಮುಖ, ಅಮ್ಮನ ಮೌನ, ತಮ್ಮಂದಿರ ನಿರೀಕ್ಷೆ ಎಲ್ಲ ನನ್ನ ಸುತ್ತಲೂ ಗಿರಕಿ ಹೊಡೆಯಿತು. ಹಸಿವಿನ ಹೊಟ್ಟೆಗೆ ರಾಮಕೃಷ್ಣ ಕೊಡಿಸುತ್ತಿದ್ದ ಮಿಸ್ಸಳ್ ಬಾಜಿ ನೆನಪಾಯಿತು. “ಮನೆಗೆ ಹೋಗುವೆ ನಾಳೆ ಸಿಗೋಣ” ಎಂದು ಅರ್ಜೆಂಟ್ ಆಗಿ ಸೈಕಲ್ ಸ್ಟ್ಯಾಂಡಿಗೆ ಬಂದೆ.

ಕೊಟ್ಟಿಗೆಯಲ್ಲಿ ಅಮ್ಮ ಹಾಲು ಕರೆಯುವಾಗ ಆಕಳು ಒದ್ದು ಕೈಗೆ ಪೆಟ್ಟಾಗಿತ್ತು. ಡಾಕ್ಟರ್ ಹತ್ತಿರ ಕರೆದುಕೊಂಡು ಹೋದೆ. ಚಿದಂಬರ ಜೋಶಿಯವರು ಡಾಕ್ಟರ್ ಮನೆಯಲ್ಲಿ ಜಾತಕ ನೋಡುತ್ತಿದ್ದರು. ಡಾಕ್ಟರ್ ಅಮ್ಮನನ್ನು ಪರೀಕ್ಷಿಸಿ ತೊಂದರೆ ಏನಿಲ್ಲ, ಎಂದು ಗುಳಿಗೆ ಕೊಟ್ಟರು. ಹಣ ತೆಗೆದುಕೊಳ್ಳಲಿಲ್ಲ. ಜೋಶಿಯವರು ಅಲ್ಲಿಂದಲೇ ನಗುತ್ತಿದ್ದರು. ಅರ್ಥವಾಯಿತು. ಜೋಶಿಯವರ ಬಗ್ಗೆ ಅಮ್ಮನಲ್ಲಿ “ಸಣ್ಣ ಪ್ರಾಯದಲ್ಲಿಯೇ ಬಹಳಷ್ಟು ಕಲಿತಿದ್ದಾರೆ, ಕೇರಳದ ಕಡೆ ಹೋಗಿ ಜ್ಯೋತಿಷ್ಯ ಕಲಿತವರು ಅವರು, ಕುಳಿತಲ್ಲಿಂದಲೇ ತೆಂಗಿನಮರವನ್ನು ಬಗ್ಗಿಸಿ ಎಳೆನೀರು ತೆಗೆಯಬಲ್ಲರು” ಎಂದು ಹೊಗಳುತ್ತಿದ್ದರು. ಅಮ್ಮ “ಅವರಿಗೆ ಒಳ್ಳೆಯ ಹೆಣ್ಣು ಸಿಕ್ಕರೆ ಸಾಕು” ಎಂದಳು. ಅಮ್ಮನನ್ನು ಕರೆದುಕೊಂಡು ಹೊರಡುವಾಗ “ಮಾಣಿ, ಮನೆಗೆ ಹೋಗಿ ಅಮ್ಮನನ್ನು ಬಿಟ್ಟು ಬಾ, ನಿನ್ನ ಸಂಗಡ ಮಾತಾಡಬೇಕು” ಎಂದರು. ಹೋಗಿ ಬರುವಷ್ಟರಲ್ಲಿ ಡಾಕ್ಟರ್ ಮನೆಯವರ ಜಾತಕವನ್ನೆಲ್ಲಾ ನೋಡಿ ಆಗಿತ್ತು. ನನ್ನ ಸೈಕಲ್ ಹಿಂದೆ ಕುಳಿತುಕೊಂಡು ಬರುವಾಗ ಕಾಲೇಜಿನ ವಿವರ ಎಲ್ಲಾ ಕೇಳಿದರು. ವರದಿ ಒಪ್ಪಿಸಿದೆ. ದುಡ್ಡು ಬೇಕಾ ಎಂದು ಕೇಳಿದರು. ಬೇಡ ಇದೆ ಎಂದೆ. ಅವರ ಮನೆಯ ಹತ್ತಿರ ಬಿಡುವಾಗ ಮನೆಗೆ ಕರೆದುಕೊಂಡು ಹೋಗಿ ಅವರ ಅಮ್ಮನ ಹತ್ತಿರ ಹೇಳಿ ಉಪ್ಪಿಟ್ಟು ಅದರ ಮೇಲೆ ತುಪ್ಪ ಹಾಕಿ ಇಬ್ಬರೂ ತಿಂದೆವು. ಹೊರಡುವಾಗ ಮೇಲೆ ಅವರ ಮನೆಯ ಮೇಲೆ ನನ್ನ ಸಂಗಡ ಬಂದವರೆ, “ಮಾಣಿ, ನಿನ್ನೆ ನಿಮ್ಮ ಪ್ರಿನ್ಸಿಪಾಲರು ಸಿಕ್ಕಿದ್ದರು. ನಿನ್ನ ವಿಷಯದಲ್ಲಿ ಹೆಮ್ಮೆ ಪಟ್ಟರು. ಕಾಲೇಜಿಗೆ ಆಸ್ತಿ ಎಂದರು. ಖುಷಿ ಆಯಿತು” ಎಂದರು. ಮುಂದುವರಿಸುತ್ತಾ ಮಾಳದ ಮಂಜುನಾಥ ಹೆಗಡೆಯವರ ಮಗ ಸಿಕ್ಕಿದ್ದ, ಅವನ ಹೆಸರು ರಾಮಕೃಷ್ಣ, ನಿನ್ನ ಕುರಿತು ಎಲ್ಲಾ ಹೇಳಿದ. ನಿನ್ನ ಬೆಸ್ಟ್ ಫ್ರೆಂಡಂತೆ ಹೌದಾ” ಎಂದರು. ಹಾಗೇ ಸುಮ್ಮನಾದವರು “ಮಾಣಿ…..” ಅವರ ಮುಖ ನೋಡಿದೆ, “ನಿನ್ನ ಪ್ರತಿಭೆಗೆ ಕಾಲೇಜಿನಲ್ಲಿ ಎಲ್ಲರ ಮೆಚ್ಚುಗೆ ಇದೆಯಂತೆ, ಕಾಲೇಜಿನ ಇಲೆಕ್ಷನ್ನಿಗೆ ನಿಲ್ಲುವೆಯಂತೆ ಹೌದಾ, ಎಂದರು. “ಇಲ್ಲೆ, ಸುಳ್ಳು.. ಓದು ಬಿಟ್ಟರೆ ಬೇರೆ ಏನೂ ಬೇಡಾ ನನಗೆ” ಎಂದೆ. “ಸರಿ, ಎಚ್ಚರದಿಂದ ಇರು, ಕೆಲ ಹೆಣ್ಣು ಮಕ್ಕಳೂ ನಿನ್ನ ಹಿಂದೆ ಬೀಳಬಹುದು, ಈಗ ಓದು ನಂತರ ಒಳ್ಳೆ ಉದ್ಯೋಗ ಇವಷ್ಟು ಬಿಟ್ಟರೆ ಮತ್ತೇನೋ ಲಕ್ಷ ಹಾಕಬೇಡ” ಎಂದವರೆ, “ನಿನ್ನ ಮೇಲೆ ಅನುಮಾನ ಇಲ್ಲ, ಆದರೂ ಒಂದು ಮಾತು.. ಜವಾಬ್ದಾರಿ ಅರಿತುಕೊ” ಎಂದರು. ಒಂದಿಷ್ಟು ನೋಟನನ್ನು ಕಿಸೆಗೆ ತುರುಕಿ “ಕತ್ತಲಾಗುವ ಮೊದಲು ಮನೆಗೆ ಹೋಗು” ಎಂದರು. ರಾತ್ರಿ ನಿದ್ರೆ ಬರಲಿಲ್ಲ. ನನ್ನ ಸುತ್ತ ಕದಂಬ ಬಾಹು ಸುತ್ತುತ್ತಿದೆ ಅನಿಸಿತು. ಬೆಳಿಗ್ಗೆ ಅಮ್ಮನಿಗೆ ಕೈ ನೋವು ಕಡಿಮೆ ಆದರೂ ಹಾಲು ಕರೆಯಲು ಆಗುತ್ತಿರಲಿಲ್ಲ. ನಾನೇ ಕರೆಯಲು ಹೋದೆ. ರಾಮಕೃಷ್ಣ, ಆತನ ಸಿರಿತನ, ಸುಮಾ, ಅವಳ ಅಮ್ಮನ ಗತ್ತು, ಅಶ್ವಿನಿ ಎಲ್ಲಾ ನೆನಪಾದರು. ಅಭದ್ರತೆಯ ನನ್ನ ಮನೆ ನೆನಪಾಯಿತು.

ಕಾಲೇಜಿಗೆ ಬಂದೆ, ರಾಮಕೃಷ್ಣ ಮಧ್ಯಾಹ್ನದ ಹೊತ್ತಿಗೆ ಕ್ಯಾಂಟಿನಿಗೆ ಕರೆದ. ಬೇಡ ಎಂದೆ. ಮಾತಾಡಲಿಲ್ಲ. ನಿನ್ನ ಅಶ್ವಿನಿ ಅಲ್ಲಿ ಇರುತ್ತಾಳೆ ಬಾರೋ ಹೋಗೋಣ ಎಂದ. ಇವತ್ತು ಸ್ವಲ್ಪ ಕೆಲಸ ಇದೆ, ನಾಳೆ ಬರುವೆ ಎಂದೆ. ನಾಲ್ಕು ದಿನ ಹಾಗೇ ಕಳೆಯಿತು. ಸಂಜೆ ಕೊನೆಯ ಕ್ಲಾಸ್ ಮುಗಿಯುವಾಗ ಅಶ್ವಿನಿ “ಯಾಕೋ ತಪ್ಪಿಸಿಕೊಂಡೆ, ಸಿಗಲಿಲ್ಲ. ರಾಮಕೃಷ್ಣ ಬೇಸರ ಮಾಡಿಕೊಂಡ” ಎಂದಳು. “ನನಗೇನು ಅದರಿಂದ” ಎನ್ನಬೇಕೆಂದರೂ ಮಾತು ಬರಲಿಲ್ಲ. “ನಾಳೆ ಬರುವೆ” ಎಂದೆ ನಕ್ಕಳು. ಆಕರ್ಷಕವಾಗಿ ಕಂಡಳು. ಆದರೂ ಅಳಕು ಮೂಡಿತು. ಅಷ್ಟರಲ್ಲಿ ಸುಮಾ ಅಲ್ಲಿಗೆ ಬಂದವಳೆ, “ಕ್ಯಾಂಟಿನಿಗೆ ಬಾರೋ, ನೀನಿದ್ದರೆ ನಮಗೆ ಧೈರ್ಯ” ಎಂದಳು. ಆಕೆಯ ಕಣ್ಣು ಹೊಳೆಯುತ್ತಿತ್ತು. ಅಶ್ವಿನಿ ಇಲ್ಲದ ಸಮಯ ನೋಡಿ “ಎಲ್ಲಿ ವಿದೂಷಕ..” ಎಂದು ನಕ್ಕಳು. ರಾಮಕೃಷ್ಣನ ಕುರಿತು ಎಂದು ಅರ್ಥವಾಯಿತು.

ಆ ರಾತ್ರಿಯೂ ನಿದ್ರೆ ಬರದೇ ಹೊರಳಾಡಿದೆ. ನನ್ನ ಕಾಲ ಮೇಲೆ ನಿಂತ ಹೊರತೂ ಯಾವ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲವೆನಿಸಿತು. ಆದರೂ ಸುಮಾ ಮನಸ್ಸಿನಲ್ಲಿ ಕುಳಿತು ಬಿಟ್ಟಿದ್ದಳು. ಅಶ್ವಿನಿಯಿಂದ ತಪ್ಪಿಸಿಕೊಳ್ಳಬೇಕೆನಿಸಿದರೂ ಸುಮಾ ಅವಳ ಸಂಗಡ ಇರುವುದರಿಂದ ಅವಳ ಸಂಗಡ ಮಾತಾಡಲೇ ಬೇಕಾಗುತ್ತಿತ್ತು. ಸುಮಾಳ ಕಣ್ಣು ಮಾತ್ರ ನನ್ನನ್ನೇ ನೋಡುತ್ತಿತ್ತು. ಸುಮಾ ನನ್ನ ಸಲುವಾಗಿ ಕಾಯಬಹುದೇ, ಅವಳ ಸಲುವಾಗಿಯಾದರೂ ಒಂದು ಒಳ್ಳೆಯ ಉದ್ಯೋಗವನ್ನು ಹಿಡಿಯಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡತೊಡಗಿದೆ. ಜೋಶಿಯವರ ಸದಾ ಪ್ರೋತ್ಸಾಹ ಇತ್ತು. ಸುಮಾಳಿಗೆ ನನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎನ್ನುವುದರ ಪರೀಕ್ಷೆ ಮಾಡಬೇಕಿತ್ತು. ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲವನ್ನು ಹುಡುಗಿಯರು ಹಂಚುವುದು, ಹುಡುಗರು ಅದಕ್ಕಾಗಿ ದುಂಬಾಲು ಬೀಳುವುದು ನಡೆಯುತ್ತಿತ್ತು. ಆ ದಿನ ಬೇಕೆಂದೇ ಕಾಲೇಜಿಗೆ ತಡಮಾಡಿ ಬಂದೆ, ಇವರಿಬ್ಬರೂ ನನಗಾಗಿ ಕಾಯುತ್ತಿದ್ದರು. ಗಮನಿಸದಂತೆ ಅವರು ಬರುವ ಹೊತ್ತಿನಲ್ಲಿ ಪ್ರಿನ್ಸಿಪಾಲರ ಛೇಂಬರಿಗೆ ಹೊಕ್ಕೆ, ನನ್ನ ಪರೀಕ್ಷೆಯ ಸಿದ್ಧತೆ ಕೇಳಿದರು. ನಿನ್ನಿಂದ ರ್‍ಯಾಂಕ್ ನಿರೀಕ್ಷಿಸುತ್ತಿರುವೆ ಎಂದರು. “ಪ್ರಯತ್ನಿಸುವೆ ಸರ್” ಎಂದವ ಹೊರಬಂದೆ, ಸ್ವಲ್ಪ ಆಚೆ ಅವರಿಬ್ಬರೂ ಕಾಯುತ್ತಿದ್ದರು. ಅವಸರವಿದ್ದಂತೆ ನಟಿಸಿ ಲೆಕ್ಚರರ ಹಾಲಿಗೆ ಹೋಗಲು ನೋಡಿದಾಗ ಸುಮಾ ನನ್ನ ಹೆಸರಿಟ್ಟು ಸ್ವಲ್ಪ ಜೋರಾಗಿಯೇ ಕರೆದಳು. ತಿರುಗಿ ಹೋದೆ ಬಾ ಎಂದು ಸನ್ನೆ ಮಾಡಿದಳು. ಇಬ್ಬರೂ ಎಳ್ಳು ಬೆಲ್ಲ ಕೊಟ್ಟರು, ಲೈಬ್ರರಿಯಿಂದ ರಾಮಕೃಷ್ಣ ನೋಡುತ್ತಿದ್ದ. ಅವನೂ ಬರುವಷ್ಟರಲ್ಲಿ ಇವರು ಲೇಡಿಸ್ ರೂಮಿನಲ್ಲಿ ಮಾಯವಾಗಿಬಿಟ್ಟರು.

ಪರೀಕ್ಷೆ ಚನ್ನಾಗಿ ಆಗಿತ್ತು. ರಿಸಲ್ಟಿಗಾಗಿ ಕಾಯುತ್ತಿದ್ದೆ. ಕೊನೆಯ ದಿನ ಎಲ್ಲರೂ ಹಾಡಬೇಕೆಂದು ಒತ್ತಾಯ ಬಂತು. ನಾನೇನೂ ಹಾಡುಗಾರನಾಗಿರಲಿಲ್ಲ. ಮುಕೇಶ್ ನನ್ನ ಇಷ್ಟದ ಗಾಯಕ, ಆತನ ಹಾಡು “ಕೋಹಿ ಜಬ್ ತುಮಾರಾ ಹೃದಯ್ ತೋಡ್ ದೆ…” ಹಾಡಿದೆ. ಸುಮಾಳ ಕಣ್ಣಿನಲ್ಲಿ ನೀರಿತ್ತು. ಅಶ್ವಿನಿ ನಗುತ್ತಿದ್ದಳು. ಮಾತಿಲ್ಲ, ಒಬ್ಬರಿಗೊಬ್ಬರು ವಿದಾಯ ಹೇಳುತ್ತಿದ್ದೆವು. ರಿಸಲ್ಟ್ ಬಂದಾಗ ಸಿಗೋಣ ಎಂದು ಹೇಳಿ ಹೊರಟೆವು. ಮನದಮಾತನ್ನು ಸುಮಾಳಲ್ಲಿ ಹೇಳಬೇಕೆಂದಿದ್ದೆ. ಆಗಲಿಲ್ಲ. ಉದ್ಯೋಗವೊಂದು ಸಿಗಲಿ, ಆಮೇಲೆ ನೋಡಿದರಾಯಿತು ಎಂದುಕೊಂಡೆ.

ಇದ್ದಕ್ಕಿದ್ದಂತೆ ರಾಮಕೃಷ್ಣ ನನ್ನನ್ನು ಹುಡುಕಿಕೊಂಡು ಬಂದ, ಅಳುತ್ತಿದ್ದ, ಏನಾಯ್ತು ಎಂದರೆ “ಸುಮಾಳ ಮದುವೆ ಫಿಕ್ಸ್ ಆಯಿತು.. ಹುಡುಗ ದೆಹಲಿಯಲ್ಲಿದ್ದಾನೆ. ಸಿಕ್ಕಾಪಟ್ಟೆ ದೊಡ್ಡ ಉದ್ಯೋಗವಂತೆ” ಎಂದವನೇ “ನನ್ನನ್ನು ಕ್ಷಮಿಸು, ನಿನಗೂ ಅನ್ಯಾಯ ಮಾಡಿದೆ. ನಿನಗೆ ಅಶ್ವಿನಿಯ ಮೇಲೆ ಮನಸ್ಸಾದರೆ ಸುಮಾ ನನ್ನನ್ನು ಒಲಿಯಬಹುದು ಅಂದುಕೊಂಡೆ” ಎಂದವನೇ ಅಪ್ಪಿ ಅಳತೊಡಗಿದ. ನಾನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮದುವೆಗೆ ಆಮಂತ್ರಣವೂ ಬರಲಿಲ್ಲ. ಮುಕೇಶ್‌ ನೆನಪಾದ. ಹಾಡಬೇಕೆಂದರೆ ಕೇಳುವವರು ಯಾರು ಎಂದೆನಿಸಿತು. ಆದರೂ ಮನಸ್ಸಿನಲ್ಲಿಯೇ ಹಾಡಿದೆ.

ನಿರೀಕ್ಷೆಯಂತೆ ರ್‍ಯಾಂಕ್ ಬಂತು. ರಿಸಲ್ಟ್‌ ಬಂದದಿನ ಅಶ್ವಿನಿ ನನಗಾಗಿ ಕಾಯುತ್ತಿದ್ದಳು. ಮಾತಾಡಿಸಬೇಕೆಂದರೆ ಪ್ರಿನ್ಸಿಪಾಲ್ ಮತ್ತು ಲೆಕ್ಚರರುಗಳು ನನ್ನನ್ನು ತಮ್ಮ ಛೇಂಬರಿಗೆ ಕರೆಸಿ ಹೆಮ್ಮೆ ಪಡುತ್ತಿದ್ದರು. ಹೊರಗೆ ಬಂದಾಗ ಅಶ್ವಿನಿಯನ್ನು ಕರೆದೊಯ್ಯಲು ಅವಳ ಅಪ್ಪ ಬಂದಿದ್ದ. ದೊಡ್ಡ ಹೆಗಡೆಯವರು ನನ್ನ ಕುರಿತು ಅಭಿಮಾನದಿಂದ ಮಾತಾಡಿದರು. ಅಶ್ವಿನಿ ಹೊರಡುವಾಗ “ಬದುಕಲು ಕಲಿಯಿರಿ” ಪುಸ್ತಕ ಕೊಟ್ಟಳು. ಹೆಗಡೆಯವರು ಅಶ್ವಿನಿಗೂ ಒಂದು ಸಂಬಂಧ ಬಂದಿದೆ. ನೀನು ಮುದ್ದಾಂ ಬಾ ಎಂದು ಹೇಳಿದರು. ಆಕೆಯ ಮುಖ ನೋಡಿದೆ. ಕಣ್ಣಲ್ಲಿ ನೀರು ತುಂಬಿದ್ದು ಕಾಣಿಸುತ್ತಿತ್ತು. ಅವರು ಹೊರಟ ಮೇಲೆ ತೆಗೆದು ನೋಡಿದರೆ “ಕೋಹಿ ಜಬ್ ತುಮಾರಾ ಹೃದಯ್ ತೋಡ್ ದೆ…” ಬರೆದಿತ್ತು. ಆಕೆಯ ಕಣ್ಣೀರು ಬಿದ್ದ ಕುರುಹು ಅಲ್ಲಿತ್ತು. ರ್‍ಯಾಂಕ್‌ ಪಡೆದ ಆನಂದ ಮಾಯವಾಯಿತು.

ಚಿದಂಬರ ಜೋಶಿಯವರ ಉಪಕಾರ ಮರೆಯುವಂತಿಲ್ಲವಲ್ಲ. ಆಶೀರ್ವದಿಸುತ್ತಾ “ಇನ್ನೊಬ್ಬ ಅಗತ್ಯ ಇರುವವನಿಗೆ ಸಹಾಯ ಮಾಡು” ಎಂದರು. ಸ್ಕಾಲರ್ ಶಿಪ್ ಸಿಕ್ಕು ಪ್ರತಿಷ್ಠಿತ ಕಾಲೇಜಿನಲ್ಲಿ ಉನ್ನತ ವ್ಯಾಸಂಗಕ್ಕೆ ಹೊರಟೆ. ಉತ್ತಮ ಉದ್ಯೋಗ, ಮದುವೆ, ಮಕ್ಕಳು ಮರಿ ಎಲ್ಲಾ ಆಯಿತು. ವಿಷಯವೆಲ್ಲವೂ ಮರೆಯಾಗಿತ್ತು. ಮಗನೂ ಉನ್ನತ ಶಿಕ್ಷಣ ಓದುತ್ತಿದ್ದ. ದೆಹಲಿಗೆ ಒಂದು ಸೆಮಿನಾರಿಗೆ ಹೋಗಿದ್ದ. ಅಲ್ಲಿಂದ ನನ್ನ ವಾಟ್ಸ್ಯಾಪಿಗೆ ಚಿತ್ರವೊಂದನ್ನು ಕಳಿಸಿ “ಇವರು ನಮ್ಮೂರಿನವರಂತೆ, ಇಲ್ಲಿಯ ದೊಡ್ಡ ಕಂಪನಿಯ ಸಿಇಒ ಅವರ ಪತ್ನಿ, ನಿನ್ನ ಕ್ಲಾಸ್ ಮೇಟ್ ಅಂತೆ. ಅವರ ಗಂಡನಿಗೆ ಪರಿಚಯ ಮಾಡಿಕೊಟ್ಟರು. ಸೆಲ್ಫಿ ತೆಗೆಸಿಕೊಂಡು ನಿನಗೆ ಕಳುಹಿಸಲು ಹೇಳಿದರು. ನಿನ್ನ ಅಪ್ಪನಿಗೆ ಪರಿಚಯ ನನ್ನ ಪರಿಚಯ ಇದೆಯೋ, ಮರೆತಿದ್ದಾನೋ ಕೇಳು ಎಂದರು” ಎಂದ. ನೋಡಿದೆ. ಸುಮಾ, ಮಗನ ಭುಜ ಹಿಡಿದು ನಗುತ್ತಿರುವ ಫೋಟೊ. ಕಣ್ಣು ಮಂಜಾಯಿತು.

ಊರಿಗೆ ಬಂದಾಗ ಯಾವುದೋ ಮದುವೆ ಮನೆಯಲ್ಲಿ ಅಶ್ವಿನಿಯ ಅಪ್ಪ ಸಿಕ್ಕರು. ಆಕೆಯ ವಿಷಯ ಕೇಳಿದೆ. ಕಣ್ಣೀರು ಬಂತು. ಗಂಡ ತೀರಿಹೋಗಿ ಬಹಳ ಕಷ್ಟ ಪಟ್ಟಳಂತೆ. ಓರ್ವ ಮಗಳು ಉತ್ತಮ ಉದ್ಯೋಗದಲ್ಲಿ ಇದ್ದಾಳೆ. ಮದುವೆಯಾಗಲು ಮಗಳು ಒಪ್ಪುತ್ತಿಲ್ಲ. ಅಮ್ಮನ ನೋಡಿಕೊಳ್ಳುವೆ ಎನ್ನುತ್ತಿದ್ದಾಳೆ. ಈಗ ಸ್ವಲ್ಪ ನೆಮ್ಮದಿ ಆಕೆಗೆ ಎಂದರು. ಮುಂದುವರೆಸಿ “ಅಶ್ವಿನಿ ಮದುವೆಗೆ ಒಪ್ಪಿರಲಿಲ್ಲ. ಎರಡು ವರ್ಷ ಓದುವೆ ಎಂದಿದ್ದಳು. ನಾವೇ ಆಕೆಗೆ ತೊಂದರೆಗೆ ಸಿಲುಕಿಸಿದೆವು” ಎಂದರು. ವಿಷಾದವಾಯಿತು. ನನ್ನ ನಂಬರ್ ತೆಗೆದುಕೊಂಡರು. ಮಗಳಿಗೆ ನಿನ್ನ ವಿಷಯ ಹೇಳುವೆ ಎಂದರು.
ಇಂದು ಅಶ್ವಿನಿಯೇ ವಾಯ್ಸ್ ಮೆಸೇಜ್ ಕಳುಹಿಸಿದ್ದಳು. ಆಕೆ ಕೊಟ್ಟ ಬದುಕಲು ಕಲಿಯಿರಿ ಪುಸ್ತಕ ಹುಡುಕಿ ಓದಲು ತೊಡಗಿದೆ.

About The Author

ನಾರಾಯಣ ಯಾಜಿ

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ