Advertisement
ಮೌಲ್ಯಗಳು ಹಿಂದುಮುಂದಾಗುವ ಸಮಯದಲ್ಲಿ…: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಮೌಲ್ಯಗಳು ಹಿಂದುಮುಂದಾಗುವ ಸಮಯದಲ್ಲಿ…: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಬ್ಯಾಗ್ ತೆರೆದಾಗ ಅದರೊಳಗೆ ಕಂಡ ಕಂತೆ ಕಂತೆ ನೋಟುಗಳು ಒಂದು ಕ್ಷಣಕ್ಕೆ ಯೂಸುಫ್‌ನ ಅಂತರಂಗದ ನೈತಿಕತೆಯ ಪರೀಕ್ಷಾರಂಗವಾಗುತ್ತದೆ. ಈ ಹಣವನ್ನಿಟ್ಟುಕೊಂಡು ಮಗಳ ಮದುವೆ ಮಾಡಿಮುಗಿಸಬಹುದು ಎಂಬ ಯೋಚನೆ ಬಂದರೂ ಅದನ್ನು ಹತ್ತಿಕ್ಕಿಕೊಂಡು ಬ್ಯಾಗನ್ನು ಆ ಶ್ರೀಮಂತನಿಗೆ ಹಿಂದಿರುಗಿಸುವ ನಿರ್ಧಾರ ಮಾಡುತ್ತಾನೆ ಯೂಸುಫ್. ಅಂತೆಯೇ ಸಿರಿವಂತನ ಮನೆಯನ್ನು ಹುಡುಕಿಹೋಗಿ ಆ ಬ್ಯಾಗನ್ನು ಕೊಟ್ಟುಬರುತ್ತಾನೆ. ಯೂಸುಫ್‌ನ ಪ್ರಾಮಾಣಿಕತೆಯನ್ನು ಮೆಚ್ಚಿದ ಆ ಶ್ರೀಮಂತ ಯೂಸುಫ್‌ನ ಮಗಳನ್ನು ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳುತ್ತಾನೆ.
ಬದುಕಿನ ಮೌಲ್ಯಗಳ ಸುತ್ತ ಹೆಣೆದ ಕತೆಗಳ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

ಇನ್ನೊಂದು ಘಾತ ಸಾಕಿತ್ತು ಭೀಮಕಾಯ ನಿಸ್ತೇಜವಾಗಲು. ಆದರೆ ಆ ಗಳಿಗೆಯಲ್ಲಿ ಕೌರವನೊಳಗಲ್ಲಿ ಉದ್ಭವಿಸಿದ್ದು ನೈತಿಕತೆಯ ಪ್ರಜ್ಞೆ. ಯುದ್ಧ ನಿಯಮವಿದ್ದುದೇ ಹಾಗೆ. ನಿಶ್ಶಸ್ತ್ರನಾದವನ ಮೇಲೆ ಬಲಪ್ರಯೋಗ ಮಾಡುವಂತಿಲ್ಲ; ವಧಿಸುವಂತಿಲ್ಲ. ಕ್ಷಣಮೊದಲು ದುರ್ಯೋಧನನ ದೈತ್ಯಗದೆ ಭೀಮನ ಶಿರದ ಮೇಲೆ ಅಪ್ಪಳಿಸಿತ್ತು. ಪ್ರಜ್ಞೆಯನ್ನೇ ಕಳೆದುಕೊಂಡ ಭೀಮ ಗದಾಯುದ್ಧದ ಛಲವನ್ನೇ ಇನ್ನಿಲ್ಲವಾಗಿಸಿಕೊಂಡು ನೆಲದ ಮೇಲೊರಗಿದ್ದ. ಹೀಗಿದ್ದ ಸಮಯದಲ್ಲಿ ದುರ್ಯೋಧನನ ಗದೆ ಇನ್ನೊಂದೇ ಒಂದು ಸಲ ಕೂಗು ಹಾಕಿದ್ದರೆ ಭೀಮಪ್ರಾಣ ನಿರ್ನಾಮ. ಆದರೆ ದುರ್ಯೋಧನ ಕಾದುಕುಳಿತ, ಭೀಮ ಮತ್ತೆ ಪ್ರಜ್ಞೆ ಪಡೆದು ಎದ್ದುನಿಲ್ಲುವ ಸಮಯಕ್ಕಾಗಿ. ನಿಯಮ ಮೀರಲಾರೆನೆಂಬ ಹಠ ದುರ್ಯೋಧನನೊಳಗಿತ್ತು. ಇಡೀ ಬದುಕಿನುದ್ದಕ್ಕೂ ಅಧರ್ಮವನ್ನೇ ಉಸಿರಾಡಿದವನೆಂಬ ಹಣೆಪಟ್ಟಿ ಕಟ್ಟಿಕೊಂಡವನು ಈಗ ಧರ್ಮಿಷ್ಟನೆನಿಸಿಕೊಂಡ. ಅವನ ನಿರೀಕ್ಷೆಯಂತೆಯೇ ಭೀಮ ಎದ್ದುನಿಂತ. ಮತ್ತೆ ಗದೆಗಳ ಕಾದಾಟ. ನಡೆಯುತ್ತಲೇ ಇತ್ತು. ಸೋಲದವನಾದ ಕೌರವ. ಶ್ರೀಕೃಷ್ಣ ಹುರುಪಿನಲ್ಲಿ ತೊಡೆ ತಟ್ಟಿದಂತೆ ನಟಿಸುತ್ತಾ ಭೀಮನಿಗೆ ಸರಿಯಾದ ಸೂಚನೆಯನ್ನೇ ಇತ್ತ. ಭೀಮನ ಗದೆ ಆ ಕ್ಷಣವೇ ಅಪ್ಪಳಿಸಿದ್ದು ಕೌರವ ತೊಡೆಗೆ. ತೊಡೆ ಮುರಿಸಿಕೊಂಡ ದುರ್ಯೋಧನ ಅಳಿದುಳಿದಿದ್ದ ಶಕ್ತಿಯನ್ನೂ ಕಳೆದುಕೊಂಡು ಧರಾಶಾಯಿಯಾದ. ದ್ವಂದ್ವಯುದ್ಧದಲ್ಲಿ ಕೃಷ್ಣನ ಸೂಚನೆ ಪಡೆದು ಭೀಮ ಕೌರವನನ್ನು ಗೆದ್ದದ್ದು ಧರ್ಮಬದ್ಧವಾದದ್ದೇ? ಗಮನಿಸಬೇಕಾದ ಪ್ರಶ್ನೆಯಿದು. ಅಧರ್ಮಿಯೆನಿಸಿಕೊಂಡ ದುರ್ಯೋಧನ ಪ್ರಜ್ಞಾಶೂನ್ಯ ಭೀಮನ ಮೇಲೆ ಗದಾಪ್ರಹಾರ ಮಾಡದೇ ಉಳಿದ. ಕೃಷ್ಣಸುಳುಹಿಗೆ ಕಣ್ಣಿಕ್ಕಿದ ಭೀಮ ಅದನ್ನು ಮರುಕ್ಷಣವೇ ಕಾರ್ಯಗತಗೊಳಿಸಿದ. ಇಲ್ಲಿ ಧರ್ಮ ಯಾವುದು? ಅಧರ್ಮ ಯಾವುದು? ಧರ್ಮ ಅಧರ್ಮಗಳು ಅದಲುಬದಲಾದವೇ?

ಶ್ರೀಮತಿ ಡಿ. ಬಿ. ರಜಿ಼ಯಾ ಅವರು ಬರೆದ ‘ಗೃಹಪ್ರವೇಶ’ ಎನ್ನುವ ಸಣ್ಣಕಥೆಯಿದೆ. ಇದರಲ್ಲಿ ಬರುವ ಪ್ರಭಾಕರ್ ಅವರು ತಿಳುವಳಿಕೆಯಿದ್ದ ವ್ಯಕ್ತಿಯಾಗಿ ಗುರುತಿಸಿಕೊಂಡವರು. ಸಮಾಜದಲ್ಲಿ ಮರ್ಯಾದೆಯ ಸ್ಥಾನಮಾನ ಅವರಿಗಿತ್ತು. ಹೆಂಡತಿಯ ಜೊತೆಗೂ ಸಹ ಸುಮಧುರ ದಾಂಪತ್ಯ. ಆದರೆ ಅದಾವುದೋ ಗಳಿಗೆಯಲ್ಲಿ ದುರ್ಮಾರ್ಗದಿಂದ ಹಣ ಮಾಡಿಕೊಳ್ಳುವ ದುರಾಸೆ ಅವರ ತಲೆ ಹತ್ತಿ ಕುಳಿತುಬಿಡುತ್ತದೆ. ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ. ಜೊತೆಗೆ ಸಿಕ್ಕಿಬೀಳುತ್ತಾರೆ. ನೀತಿ ಅನೀತಿಗಳ ಬಗೆಗೆ ಯುವಜನತೆಗೆ ಮಾರ್ಗದರ್ಶನ ಮಾಡಬೇಕಾದವರೇ ಹೀಗಾದಾಗ ವ್ಯವಸ್ಥೆ ಏನಾದೀತು ಎನ್ನುವುದು ಚಿಂತನಾರ್ಹವಾದ ವಿಚಾರ.

ಶ್ರೀಯುತ ಅಬ್ಬಾಸ್ ಮೇಲಿನಮನಿಯವರ ‘ಉರಿದು ಆರಿದ ಬೆಂಕಿ’ ಎನ್ನುವ ಕಥೆಯಲ್ಲಿಯೂ ಪ್ರಾಧ್ಯಾಪಕನೊಬ್ಬ ಅನೈತಿಕತೆಯ ಹಾದಿಯನ್ನು ತುಳಿಯುವ ಕಥಾನಕವಿದೆ. ಇಲ್ಲಿ ಕೃಷ್ಣ ಎಂಬ ಪ್ರಾಧ್ಯಾಪಕ ತಾನು ವಿದ್ಯಾರ್ಥಿಗಳ ಪಾಲಿಗೆ ಆದರ್ಶನಾಗಿರಬೇಕು ಎನ್ನುವುದನ್ನೂ ಮರೆತು ದುರಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಾನೆ. ಮನಬಂದಂತೆ ಕುಡಿಯುತ್ತಾನೆ. ಕಂಡ ಕಂಡ ಹುಡುಗಿಯರ ಸಹವಾಸ ಬೆಳೆಸುತ್ತಾನೆ. ಹುಡುಗಿಯೊಬ್ಬಳನ್ನು ಮನೆಗೇ ಕರೆತಂದು ಅವಳ ಜೊತೆಗೆ ಸರಸವಾಡುತ್ತಾನೆ. ಇದನ್ನು ತಡೆಯಲು ಬಂದ ಹೆಂಡತಿಯನ್ನು ಮನಸೋ ಇಚ್ಛೆ ಹೊಡೆಯುತ್ತಾನೆ. ಕೊನೆಗೆ ಇದೇ ಕಾರಣಕ್ಕೆ ತನ್ನ ತಂದೆಯಿಂದಲೇ ಹತ್ಯೆಗೀಡಾಗುತ್ತಾನೆ.

ಅವನೊಬ್ಬ ಸರ್ಕಾರಿ ನೌಕರ. ಪ್ರಾಮಾಣಿಕತೆಯೇ ಅವನ ಬಂಡವಾಳ. ಆಸ್ತಿಕತೆಯೇ ಅವನ ಪಾಲಿಗೆ ಬಹುದೊಡ್ಡ ಆಸ್ತಿ. ಎಂದಿಗೂ ಸರಿದಾರಿಯನ್ನು ತಪ್ಪಿ ನಡೆಯಲಾರೆನೆಂಬ ಹಠ ಅವನೊಳಗೆ. ಅವನಲ್ಲಿದ್ದ ಒಂದೇ ಒಂದು ಕೆಟ್ಟ ಗುಣವೆಂದರೆ ಅವನ ಮುಂಗೋಪ. ಅನ್ಯಾಯವನ್ನು ಕಂಡರೆ ಸಿಟ್ಟಿಗೇಳುವ ಸ್ವಭಾವ ಅವನದ್ದು. ತನ್ನಂತೆಯೇ ಎಲ್ಲರೂ ಇರಬೇಕೆಂದು ಬಯಸುವ ಭಾವ ಅವನಲ್ಲಿದೆ. ಈ ಕಾರಣಕ್ಕಾಗಿಯೇ ಅದೊಂದು ಸಂದರ್ಭದಲ್ಲಿ ತನ್ನ ಮೇಲಧಿಕಾರಿಯ ವಿರುದ್ಧ ಜೋರಾಗಿ ದನಿ ಹೊರಡಿಸುತ್ತಾನೆ. ಇದನ್ನು ಸಹಿಸದಾದ ಆ ಅಧಿಕಾರಿ ಇವನನ್ನು ಬೇರೆ ಕಡೆಗೆ ವರ್ಗಾವಣೆ ಮಾಡುತ್ತಾನೆ. ಆ ಮೂಲಕ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ. ಇದು ಶ್ರೀಮತಿ ಸಾರಾ ಅಬೂಬಕ್ಕರ್ ಅವರ ‘ನಾವು ನಮ್ಮವರು’ ಕಥೆಯಲ್ಲಿ ಬರುವ ಸನ್ನಿವೇಶ. ವ್ಯವಸ್ಥೆಯೊಂದು ಸೇಡಿನ ಆಡುಂಬೊಲವಾದಾಗ ಯಾವುದೇ ಮಹತ್ತರ ಉದ್ದೇಶವನ್ನು ಸಾಧಿಸಲಾಗದೆ ದ್ವೇಷದ ಬೆಂಕಿಯಲ್ಲಿಯೇ ಸರ್ವನಾಶ ಕಾಣುತ್ತದೆ ಎನ್ನುವುದು ಅಂತಿಮ ಸತ್ಯ.

ನೈತಿಕತೆಯನ್ನೇ ಮುಂದುಮಾಡಿಕೊಂಡು ಬದುಕಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುವುದು ಕೆಲವು ಸಂದರ್ಭಗಳಲ್ಲಾದರೂ ಸಾಧಿತವಾಗಬಹುದಾದ ವಿಚಾರ. ಶ್ರೀಮತಿ ಮುಮ್ತಾಜ್ ರೆಹಮಾನ್ ಅವರ ರಚನೆಯ ‘ರಿಕ್ಷಾವಾಲಾ’ ಎನ್ನುವ ಕಥೆಯೊಂದಿದೆ. ಯೂಸುಫ್ ಎಂಬ ಪ್ರಾಮಾಣಿಕ ರಿಕ್ಷಾ ಚಾಲಕನ ಕಥಾನಕವಿದು. ಬಡತನದ ಬದುಕೇ ಆದರೂ ಅವನು ಎಂದಿಗೂ ಅನ್ಯಾಯದ ಹಾದಿಯನ್ನು ತುಳಿದವನಲ್ಲ. ಹಿರಿಯ ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ. ಆದರೆ ಮದುವೆ ಮಾಡಲು ಬೇಕಾದಷ್ಟು ಹಣ ಯೂಸುಫ್‌ನಲ್ಲಿಲ್ಲ. ಹೀಗಿದ್ದಾಗಲೇ ಇವನ ರಿಕ್ಷಾದಲ್ಲಿ ಆಕಸ್ಮಿಕವಾಗಿ ಪ್ರಯಾಣಿಸಿದ ಶ್ರೀಮಂತ ವ್ಯಕ್ತಿಯೊಬ್ಬ ತನ್ನ ಬ್ಯಾಗನ್ನು ಮರೆತು ಸೀಟ್‌ನಲ್ಲಿಯೇ ಬಿಟ್ಟುಹೋಗುತ್ತಾನೆ. ಬ್ಯಾಗ್ ತೆರೆದಾಗ ಅದರೊಳಗೆ ಕಂಡ ಕಂತೆ ಕಂತೆ ನೋಟುಗಳು ಒಂದು ಕ್ಷಣಕ್ಕೆ ಯೂಸುಫ್‌ನ ಅಂತರಂಗದ ನೈತಿಕತೆಯ ಪರೀಕ್ಷಾರಂಗವಾಗುತ್ತದೆ. ಈ ಹಣವನ್ನಿಟ್ಟುಕೊಂಡು ಮಗಳ ಮದುವೆ ಮಾಡಿಮುಗಿಸಬಹುದು ಎಂಬ ಯೋಚನೆ ಬಂದರೂ ಅದನ್ನು ಹತ್ತಿಕ್ಕಿಕೊಂಡು ಬ್ಯಾಗನ್ನು ಆ ಶ್ರೀಮಂತನಿಗೆ ಹಿಂದಿರುಗಿಸುವ ನಿರ್ಧಾರ ಮಾಡುತ್ತಾನೆ ಯೂಸುಫ್. ಅಂತೆಯೇ ಸಿರಿವಂತನ ಮನೆಯನ್ನು ಹುಡುಕಿಹೋಗಿ ಆ ಬ್ಯಾಗನ್ನು ಕೊಟ್ಟುಬರುತ್ತಾನೆ. ಯೂಸುಫ್‌ನ ಪ್ರಾಮಾಣಿಕತೆಯನ್ನು ಮೆಚ್ಚಿದ ಆ ಶ್ರೀಮಂತ ಯೂಸುಫ್‌ನ ಮಗಳನ್ನು ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳುತ್ತಾನೆ.

ಹಿಂದಿನ ಕಾಲದಲ್ಲಿ ಆರೋಗ್ಯ ಎನ್ನುವುದು ಸೇವೆಯೆಂದು ಪರಿಗಣಿಸಲ್ಪಟ್ಟಿತ್ತು. ಖಾಯಿಲೆಯಿಂದ ನರಳುತ್ತಿದ್ದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗುಣಮುಖರಾಗಿಸುವುದರಲ್ಲಿ ಸೊಗ ಕಂಡುಕೊಂಡ ಹಲವು ಜನರಿದ್ದರು. ಆದರೆ ಇಂದು ಜನರ ಅಸೌಖ್ಯವೇ ಅದೆಷ್ಟೋ ವೈದ್ಯರಿಗೆ ಹಣದ ಸುಖಕ್ಕೆ ದಾರಿ ತೋರಿಸುತ್ತಿದೆ. ‘ಅಮಾನುಷರು’ ಎನ್ನುವ ಸಣ್ಣಕಥೆಯೊಂದರಲ್ಲಿ ಇದೇ ಬಗೆಯ ಚಿತ್ರಣವಿದೆ. ಇದರಲ್ಲಿ ಬರುವ ಒಬ್ಬ ವೈದ್ಯನಿಗೆ ರೋಗಿಗಳ ಬಗೆಗೆ ಯಾವುದೇ ರೀತಿಯ ಕಾಳಜಿಯಿಲ್ಲ. ಹಣ ಕೊಟ್ಟವರಿಗೆ ಸರಿಯಾದ ಚಿಕಿತ್ಸೆ ಕೊಡುತ್ತೇನೆ ಎಂಬ ಸಿದ್ಧಾಂತ ಅವನದ್ದು. ಬಡವರನ್ನು ಉಳಿಸುವ ಆಸ್ಥೆ ಅವನಿಗಿಲ್ಲ. ಈ ಕಾರಣದಿಂದಲೇ ಅಸಹಾಯಕರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶವನ್ನು ಕಥೆ ಹೇಳುತ್ತದೆ.

ಶ್ರೀಯುತ ಅಬ್ದುಲ್ ಮಜೀ಼ದ್ ಖಾನ್ ಅವರು ಬರೆದ ‘ಅಳತೆಗೋಲು’ ಎನ್ನುವ ಕಥೆಯಲ್ಲಿ ಕಾಲೇಜುಗಳಲ್ಲಿ ನಡೆಯುವ ಉದ್ಯೋಗ ಸಂದರ್ಶನದ ವಿಡಂಬನೆಯಿದೆ. ಕಾಲೇಜೊಂದರಲ್ಲಿ ಬೇರೆ ಬೇರೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಯೋಗ್ಯತೆಗೆ ಪ್ರಾಮುಖ್ಯತೆ ಕೊಡದೆ ಶಿಫಾರಸ್ಸಿಗೆ, ಪ್ರಭಾವಕ್ಕೆ ಒತ್ತು ನೀಡಲಾಗಿರುತ್ತದೆ. ಇದು ಪ್ರಾಧ್ಯಾಪಕರಾಗಿದ್ದ ಇಸ್ಮತ್ ಅವರ ಅರಿವಿಗೆ ಬಂದಾಗ ಅವರ ಮನಸ್ಸು ಚಿಂತನೆಗೆ ತೊಡಗುತ್ತದೆ. ಇಂತಹ ಸನ್ನಿವೇಶಗಳನ್ನು ಇವತ್ತಿನ ಕಾಲದಲ್ಲಿ ಅತಿಯಾಗಿ ಕಾಣುತ್ತಿದ್ದೇವೆ. ಸಮಾಜಕ್ಕೆ ಬುದ್ಧಿವಾದ ಹೇಳಬೇಕಾದ ಸ್ಥಾನದಲ್ಲಿರುವ ಶಿಕ್ಷಣ ವ್ಯವಸ್ಥೆಯೇ ನೈತಿಕತೆಯನ್ನು ಕಳೆದುಕೊಂಡರೆ ಮೌಲ್ಯಗಳಿಗೆ ಖಂಡಿತವಾಗಿಯೂ ಉಳಿಗಾಲವಿರಲಾರದು.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ