ಕಾಗುಣಿತ, ಎರಡು ಅಕ್ಷರದ ಪದ, ಮೂರು ಅಕ್ಷರದ ಪದ, ಚಿಕ್ಕ ಚಿಕ್ಕ ವಾಕ್ಯ ….. ಹೀಗೆ ಮುಂದುವರಿಯಿತು ಪಾಠ. ಈಗಲೂ ವಿಘ್ನಗಳು ಬರುತ್ತಿದ್ದವು. ಆದರೆ ಅದರ ನಡುವೆಯೂ ಯಲ್ಲಮ್ಮ ಒದು, ಬರಹ ಮುಂದುವರಿಸಿದರು. ಸಾವಿರ ರೂಪಾಯಿ ಕರಾರು ನನಗೂ ತುಸು ಧೈರ್ಯ ಕೊಡುತ್ತಿತ್ತು. ನಾನು ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತು, ದೀರ್ಘ, ಉಚ್ಚಾರ, ಉಕ್ತ ಲೇಖನ ಅಂತ ತಲೆ ತಿನ್ನುತ್ತಿದ್ದರೆ…. `ಅಯ್ಯೋ, ಈ ಕನ್ನಡ ಮೇಡಂ ಹತ್ರ ಸಿಕ್ಕಿ ಬಿದ್ನಲ್ಲಪ್ಪಾ, ಬೇಕಿತ್ತ ನಂಗೆ ಇದು’ ಅಂತ ಯಲ್ಲಮಂಗೆ ಅನ್ನಿಸ್ತಿತ್ತೋ ಏನೋ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐದನೆಯ ಬರಹ

ದಿನವೆಲ್ಲ ಪಾತ್ರೆ ತೊಳಿ, ಬಟ್ಟೆ ಒಗಿ ಕಸ ಗುಡಿಸು, ಮನೆ ಒರೆಸು ಎಂಬಿತ್ಯಾದಿ ಕೆಲಸದಲ್ಲಿ ಮುಳುಗಿರುವ ಯಲ್ಲಮ್ಮನಿಗೆ ಹೆಚ್ಚುಕಮ್ಮಿ ನನ್ನದೇ ವಯಸ್ಸು. ಅನೇಕ ವರ್ಷಗಳಿಂದ ನಮ್ಮ ಮನೆಯ ಕೆಲಸ ಮಾಡುತ್ತಾ ಮನೆವಾಳ್ತೆ, ಅಡಿಗೆ, ಅತಿಥಿಗಳ ದೇಖರೇಖಿಗಳಲ್ಲಿ ನನಗೆ ಸಹಾಯ ಮಾಡುವ ಪರಿಶ್ರಮೀ ವ್ಯಕ್ತಿ ಅವರು. ಸುಮಾರು ಐದಡಿ ಒಂದಿಂಚು ಎತ್ತರ ಇರುವ ಎಣ್ಣೆಗಪ್ಪು ಬಣ್ಣದ, ಸ್ವಲ್ಪ ಸ್ಥೂಲಕಾಯದ ಪ್ರಶಾಂತಮೊಗದ ವ್ಯಕ್ತಿ. ಯಾವ ಕೆಲಸ ಹೇಳಿದರೂ, ಎಷ್ಟು ಕೆಲಸ ಹೇಳಿದರೂ ಮುಖ ಕೆಡಿಸಿಕೊಳ್ಳದೆ `ಆಯ್ತಮ್ಮ’ ಎಂದು ಹೇಳುತ್ತಾ ಛಕಛಕನೆ ಅದನ್ನು ಮಾಡಿ ಮುಗಿಸಿಬಿಡುವ ಅವರು ನನ್ನ ಬದುಕಿನ ಅತಿ ದೊಡ್ಡ ಬೆಂಬಲ. ಕೈಬಾಯಿ ಶುದ್ಧ ಇರುವ, ಎಂದೂ ಒರಟಾಗಿ ಮಾತಾಡದ ಒಳ್ಳೆಯ ಮನಸ್ಸಿವನರು. ಹದಿನಾಲ್ಕು ವಯಸ್ಸಿಗೇ ಮದುವೆ ಆಗಿ, ಬೇಗ ಬೇಗ ಎರಡು ಮಕ್ಕಳಾಗಿ, ಗಂಡ ಬಿಟ್ಟು ಎಲ್ಲೋ ಹೊರಟುಹೋಗಿ ಬದುಕಿನ ಭಾರಕ್ಕೆ ಹೆಗಲುಗೊಟ್ಟ ಒಂಟಿಯಾಗಿ ಹೆಗಲುಗೊಟ್ಟ ಏಕಪೋಷಕಿ(ಸಿಂಗಲ್ ಪೇರೆಂಟ್)ಈಕೆ. ಅಣ್ಣತಮ್ಮಂದಿರ ನೈತಿಕ ಬೆಂಬಲವೊಂದೇ ಪಾಪ ಈಕೆಗೊಂದಿಷ್ಟು ಸಮಾಧಾನ ಕೊಟ್ಟಿರುವುದು!

ವಯಸ್ಸಾದ ತಂದೆ, ಗಂಡ, ಎರಡು ಹೆಣ್ಣುಮಕ್ಕಳಿರುವ ಕುಟುಂಬದ ಜವಾಬ್ದಾರಿ, ಮಧ್ಯಮವರ್ಗದ ಮನೆಯಲ್ಲಿರುವಂತಹ ಅಡಿಗೆಮನೆಯ ನಿರಂತರ ಕೆಲಸಗಳು, ಬರವಣಿಗೆ, ದಿನವಿಡೀ ಕಾಲೇಜಿನಲ್ಲಿರಬೇಕಾದ ಪೂರ್ಣಕಾಲಿಕ ಅಧ್ಯಾಪನದ ಕೆಲಸ, ಜೊತೆಗೆ ಚಿತ್ರನಾಟ್ಯ ಎಂಬ ಹೆಸರಿನ ನಾಟ್ಯಸಂಸ್ಥೆಯನ್ನು ಕಳೆದ 33 ವರ್ಷಗಳಿಂದ ನಡೆಸುತ್ತಿರುವ ನಡೆಸಿಕೊಂಡು ಬರುತ್ತಿರುವುದು… ಇವನ್ನೆಲ್ಲ ಈ ಯಲ್ಲಮ್ಮ ಎಂಬ ಹೆಣ್ಣುಮಗಳ ಸಹಾಯ, ಬೆಂಬಲ ಇಲ್ಲದೆ ಮೀರಮ್ಮನೆಂಬ ನಾನು ಖಂಡಿತವಾಗಿಯೂ ನಿರ್ವಹಿಸಲು ಸಾಧ್ಯ ಇರಲಿಲ್ಲ!

ಯಲ್ಲಮ್ಮನಿಂದ ನನಗೆ ಆಗುವ ಒಂದೇ ಒಂದು ತೊಂದರೆ ಅಂದರೆ ಅವರ ಅಗಣಿತ `ಮದ್ವೆ, ಬರ್ತಡೇ, ದಾಸಪ್ಪನನ್ನ ತರ‍್ಸೋದು, ತಿಥಿ, ಪಕ್ಷ, ಪೂಜೆ, ದೇವರು ಕೂರಿಸೋದು, ಅಣ್ಣ ಶಬರಿಮಲೆಗೆ ಹೊರಟಿದ್ದಾರೆ …..”ಗಳಿಂದ ಅವರು ಕೆಲಸಕ್ಕೆ ಬರದೆ ಆಗಾಗ ರಜೆ ತೆಗೆದುಕೊಳ್ಳುವುದು. ನಾವು ಅವರಿಗೆ ಭಾನುವಾರದ ರಜೆ ಕೊಟ್ಟಿದ್ದರೂ ಹದಿನೈದು ದಿವಸಕ್ಕೆ ಮೂರು – ನಾಲ್ಕು ದಿನ ಗೈರುಹಾಜರಾಗುತ್ತಲೇ ಇರುತ್ತಾರೆ. ಕಳೆದ ಮೂವತ್ತು-ಮೂವತ್ತೆರಡು ವರ್ಷಗಳಿಂದ ಅವರು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಅಚ್ಚುಕಟ್ಟಾದ ಕೆಲಸವು ನಮಗೆ ಅಭ್ಯಾಸವಾದಂತೆ ಅವರ ಗೈರುಹಾಜರಿಯ ಅನಾನುಕೂಲವೂ ಅಭ್ಯಾಸವಾಗಿಬಿಟ್ಟಿದೆ! ನಾವೇ ಒಂದಿಷ್ಟು ಜಾಸ್ತಿ ಕೆಲಸ ಮಾಡಿಕೊಳ್ಳುವುದು, ಒಂದು ಹೊತ್ತಿಗೆ ದೋಸೆ ಹಿಟ್ಟನ್ನೋ, ಜೋಳದ ರೊಟ್ಟಯನ್ನೋ ತಂದು ನಿರ್ವಹಿಸುವುದು, ಒಂದೆರಡು ದಿನದ ಮಟ್ಟಿಗೆ ಇನ್ಯಾರನ್ನಾದರೂ ಕರೆಸಿಕೊಂಡು ಕೆಲಸ ಮಾಡಿಸಿಕೊಳ್ಳುವುದು ….. ಹೀಗೆ ಅಂತೂ ಇಂತೂ ಮನೆಯ ಬಂಡಿಯನ್ನು ಓಡಿಸುವುದಾಗುತ್ತದೆ. ಆದರೆ ಅವರು ನಮ್ಮ ಮನೆಗೆ ಕೆಲಸಕ್ಕೆ ಬಂದಾಗ ಮಾತ್ರ ನಾಲ್ಕು ಜನರ ಕೆಲಸವನ್ನು ಒಬ್ಬರೇ ಪಟಪಟನೆ, ತಳುವದೆ, ಬೇಸರವಿಲ್ಲದೆ ಮಾಡಿ ಮುಗಿಸುವ ಯಲ್ಲಮ್ಮನನ್ನು ನೋಡುವಾಗ ಅವರು ಮಧ್ಯ ಮಧ್ಯ ತಪ್ಪಿಸಿದ್ದು ಮರೆತೇ ಹೋಗುತ್ತದೆ.

*****

ಇನ್ನು ಯಲ್ಲಮ್ಮನಿಗೆ ನಾನು ಕನ್ನಡ ಕಲಿಸಿದ ಪ್ರಸಂಗ ಬಹಳ ಸ್ವಾರಸ್ಯಕರವಾಗಿದೆ.

ಒಂದು ದಿನ(ಸುಮಾರು ಹದಿನೆಂಟು ವರ್ಷಗಳ ಹಿಂದೆ) ಹೀಗೇ ಕೇಳಿದೆ “ಯಲ್ಲಮ್ಮ, ನಿಮ್ಗೆ ಓದಕ್ಕೆ, ಬರಿಯಕ್ಕೆ ಬರುತ್ತಾ?”

“ಅಯ್ಯೋ, ಇಲ್ಲ. ಬರಲ್ಲಮ್ಮ ನಂಗೆ. ಚಿಕ್ಕುಡ್ಗಿ ಇದ್ದಾಗ ನಮ್ಮಮ್ಮ ಎರಡ್ನೇ ಕ್ಲಾಸ್ ತಂಕಾನೋ ಏನೋ ಇಸ್ಕೂಲಿಗ್ ಕಳ್ಸಿದ್ರು. ಆಮೇಲೆ, ಮನೆ ಕೆಲ್ಸ, ಹಸು ನೋಡ್ಕೋ, ಸೆಗಣಿ ಬಳಿ, ಹಾಲು ಹಾಕು ಇಂಥವು ಮಾಡ್ಕೊಂಡು ಶಾಲೆಗೆ ಹೋಗಕ್ಕೆ ಆಗ್ಲೇ ಇಲ್ಲ. ಆವಾಗೆಲ್ಲ ಹಳ್ಳಿ ಕಡೆ ಹಂಗೇ ಅಲ್ವರಾ?”

ಸದಾ ನಗುಮೊಗದಿಂದ ಛಕಛಕನೆ ಕೆಲಸ ಮಾಡುವ, ಹೇಳಿದ್ದನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಯಲ್ಲಮ್ಮನಿಗೆ ಓದಕ್ಕೆ ಬರಲ್ಲ ಅಂತ ನನಗೆ ಬೇಸರವಾಯಿತು. ಆದರೆ ಆಕೆ ತನ್ನ ಮೂವತ್ತೆಂಟನೇ ವಯಸ್ಸಿನಲ್ಲಿ ಓದು ಬರಹ ಕಲಿಯುವುದು ಸಾಧ್ಯವೇ? ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಅಂತಾರೆ. ನಾನೇ ಈಕೆಗೆ ಕನ್ನಡ ಕಲಿಸಿದರೆ ಹೇಗೆ? ಹೇಗೂ ನನಗೆ ಕಾಲೇಜಿನಲ್ಲಿ ಹದಿನೆಂಟು ಹತ್ತೊಂಬತ್ತು ವಯಸ್ಸಿನ ಪದವಿ ಮಕ್ಕಳಿಗೆ, ಅಂದರೆ ಸ್ವಲ್ಪ ದೊಡ್ಡವರಿಗೆ ಪಾಠ ಮಾಡಿ ಅಭ್ಯಾಸ ಇರುವುದರಿಂದ ಇವರಿಗೂ ಹೇಳಿಕೊಡಬಹುದು, ಅಆಇಈಯಿಂದ ಶುರು ಮಾಡ್ಬೇಕು ಅಷ್ಟೆ ಅಂತ ಅನ್ನಿಸ್ತು. ಕೇಳಿದೆ.

“ನಾನು ಕನ್ನಡ ಓದಕ್ಕೆ, ಬರಿಯಕ್ಕೆ ಹೇಳ್ಕೊಡ್ತೀನಿ. ಕಲೀತೀರಾ ಯಲ್ಲಮ್ಮ?”

ಸಾಮಾನ್ಯ ಯಾವುದಕ್ಕೂ ತಕ್ಷಣ ಇಲ್ಲ ಅನ್ನದ ಯಲ್ಲಮ್ಮ “ಆಯ್ತಮ್ಮ, ಕಲೀತೀನಿ” ಅಂದ್ರು.

ಇನ್ನೂರು ಪುಟದ ಒಂದು ಬರೆಯುವ ಗೆರೆಯುತ(ರೂಲ್ಡ್ ಪದಕ್ಕೆ ನಾನು ಬಳಕೆ ಮಾಡಲು ಪ್ರಯತ್ನಿಸಿದ ಕನ್ನಡ ಪದ! ಹೀಗೆ ಇಂಗ್ಲಿಷ್ ಪದಗಳಿಗೆ ಏನೇನೋ ಕಸರತ್ತಿನ ಮೂಲಕ ಹುಡುಕಿದ ಕನ್ನಡ ಸಂವಾದಿ ಪದ ಬಳಸಿ ಮನೆಮಂದಿಯನ್ನು ಸಹೋದ್ಯೋಗಿಗಳನ್ನು `ಇದಾಗುತ್ತಾ ನೋಡಿ, ಬಳಸ್ಬಹುದಾ ನೋಡಿ’ ಎಂದು ಆಗಾಗ ತಲೆ ತಿನ್ನುವುದು ನನ್ನ ಅಭ್ಯಾಸ!) ಪುಸ್ತಕ, `ಮುದ್ದು ಕನ್ನಡ’ ಎಂಬ ಬಾಲಪಾಠದ ಕನ್ನಡ ಪುಸ್ತಕ ತಂದು ನಾನು ಯಲ್ಲಮ್ಮನಿಗೆ ಕೊಡುವುದರಿಂದ ಈ ಕಲಿಕಾ ಪ್ರಸಂಗ ಪ್ರಾರಂಭವಾಯಿತು. ಅ, ಆ, ಎಂದು ಒಂದು ಅಥವಾ ಎರಡು ಅಕ್ಷರ ಬರೆದು ತಿದ್ದಿಸಿ, ತಿದ್ದಿಸಿ ಪಾಠ ಪ್ರಾರಂಭಿಸಿದೆ. ಮೊದಮೊದಲು ಯಲ್ಲಮ್ಮ ಉತ್ಸಾಹದಿಂದಲೇ ಬರೆದರು. ಒಂದು ಹದಿನೈದು ಇಪ್ಪತ್ತು ಅಕ್ಷರ ಆಗುವ ತನಕ ಎಲ್ಲ ಚೆನ್ನಾಗಿ ನಡೆಯುತ್ತಿದೆ ಅನ್ನಿಸ್ತು. ಆದರೆ ಆಮೇಲೆ ಶುರುವಾಯಿತು ನೋಡಿ ಅಡ್ಡಿ, ಆತಂಕ, ವಿವಿಧ ವಿಘ್ನಗಳ ಸರಮಾಲೆ.

“ಅಮ್ಮ, ಯುಗಾದಿಗೆ ತನಿ ಎರೆಯಕ್ಕೆ ಊರ್‌ಗೋಗ್ತೀನಿ. ಎರಡು ದಿನ ಬರಕ್ಕಾಗಲ್ಲಮ್ಮ”.

“ಅಮ್ಮ, ಅದೂ ……… ತುಂಬ ತಲೆ ನೋವು ಬಂದ್ಬಿಟ್ಟಿತ್ತು, ಅದಕ್ಕೇ ನೆನ್ನೆ ಬರ್ಲಿಲ್ಲ”.

“ಅಮ್ಮ, ನಮ್ ಚಿಕ್ಕಪ್ಪನ ತಂಗೀ ಮಗ್‌ಳ್ ನಾದ್ನೀ ಮದ್ವೆ ಇದೆ. ಚಾಮರಾಜನಗರದಲ್ಲಿ. ಹೋಗ್ಬೇಕು. ಮೂರು ದಿನ ಬಿಟ್ಟು ಬರ್ತೀನಿ”.

“ನಮ್ ತಾಯೀಗ್ ಉಷಾರಿಲ್ಲ. ಆಸ್ಪತ್ರೇಗೋಗ್ಬೇಕು. ನಾಡಿದ್ದ್ ಕೆಲ್ಸಕ್ಕ್ ಬರ್ತೀನಿ”.

ಓಹ್, ಇಂತಹ ಚಿಕ್ಕಪುಟ್ಟ(!) ಕಲಿಕಾವಿಘ್ನಗಳು ಸಾಲದು ಎಂಬಂತೆ, ಮಧ್ಯೆ ಮಧ್ಯೆ `ದೊಡ್ಡ ಮಗಳ ಬಾಣಂತನ’, `ಚಿಕ್ಕ ಮಗಳ ಮದ್ವೆ’, `ಅಣ್ಣನ ಸೊಸೆ ಬಾಣಂತನ’, `ಮನೆಯಲ್ಲಿ ಸುಣ್ಣಬಣ್ಣ ಆಗ್ತಿದೆ’ – ಇಂತಹ ದೀರ್ಘಾವಧಿ ರಜೆಗಳೂ ಸೇರಿ ನಮ್ಮ ಕನ್ನಡ ಪಾಠದ ಕಥೆ ಶಟ್ಲು ಟ್ರೈನಿಗೂ ಕಡೆ ಅನ್ನಿಸಿಬಿಟ್ಟಿತು. ಏನು ಮಾಡುವುದು, ಹೀಗಾದರೆ ಹೇಗೆ? ಎರಡಕ್ಷರ ಕಲಿಯುವುದು, ನಾಲ್ಕು ದಿನ ರಜೆ ಮೇಲೆ ಹೋಗುವುದು, ಮತ್ತೆ ಒಂದು ಅಕ್ಷರ ಕಲಿ, ಮತ್ತೆ ನಿಲ್ಲಿಸು…… ಹೀಗೆ ಮಾಡುತ್ತಾ ಮಾಡುತ್ತಾ ಕಲಿತದ್ದು ಮರೆತಂತೆ ಬೇರೆ ಆಗುತ್ತಿತ್ತು. ನನಗಂತೂ ಯಾಕೋ ಈ ಪ್ರಯಾಣ ಸರಿಯಾಗಿ ಸಾಗಬಹುದು ಎಂಬ ಧೈರ್ಯವೇ ಬರಲಿಲ್ಲ. ಏನು ಮಾಡುವುದು ಎಂದು ಚಿಂತೆಯಾಯಿತು.

ಹೀಗೇ ತಲೆ ಕೆಡಿಸಿಕೊಂಡಿದ್ದಾಗ ಒಂದು ದಿನ ಒಂದು ವಿಚಾರ ಹೊಳೆಯಿತು. ಯಲ್ಲಮ್ಮನನ್ನು ಒಂದು ಕರಾರಿಗೆ ಸಿಕ್ಕಿಸಿದರೆ ಹೇಗೆ! ಎಂಬ ಯೋಚನೆ ಬಂತು. ಮಾರನೆಯ ದಿನ ವಿಜಯದಶಮಿ ಇತ್ತು.

ಸರಿ, ವಿಜಯ ದಶಮಿಯ ದಿನ ಯಲ್ಲಮ್ಮನನ್ನ ದೇವರ ಮನೆ ಮುಂದೆ ಕೂರಿಸಿಕೊಂಡು ಹೇಳಿದೆ – “ಯಲ್ಲಮ್ಮ, ಕಳೆದ ಒಂದೂವರೆ ವರ್ಷದಿಂದ ಕನ್ನಡ ಪಾಠ ಶುರು ಮಾಡೋದು, ನಿಲ್ಸೋದು, ಶುರು ಮಾಡೋದು, ನಿಲ್ಸೋದು ಆಗ್ತಾ ಇದೆ. ಹೀಗಾದ್ರೆ ನಾವು ಎಲ್ಲೂ ತಲುಪಲ್ಲ. ಇವತ್ತು ವಿಜಯದಶ್ಮಿ. ವಿದ್ಯಾರಂಭಕ್ಕೆ ಶುಭದಿನ, ಮುಹೂರ್ತ ನೋಡ್ಬೇಕಿಲ್ಲ ಅಂತಾರೆ. ಇವತ್ತಿನ್ ದಿನ ಮತ್ತೆ ಕನ್ನಡ ಪಾಠ ಶುರು ಮಾಡೋಣ. ಹ್‌ಂ……. ಅಕ್ಟೋಬರ್ ಹದಿನೇಳು ಅಲ್ವಾ ಇವತ್ತು? ನೋಡಿ, ನಿಮಗೆ ಕನ್ನಡ ಕಲ್ತು ಮುಗಿಸಕ್ಕೆ ಡಿಸೆಂಬರ್ ಮೂವತ್ತೊಂದು ಕೊನೇ ದಿನ. ಜನವರಿ ಒಂದಕ್ಕೆ ಹೊಸ ವರ್ಷ. ಅವತ್ತು ಬೆಳಿಗ್ಗೆ ಬರೋ ಪ್ರಜಾವಾಣಿ ಪೇಪರ್‌ನ ನೀವು ಗಟ್ಟಿಯಾಗಿ ಓದ್ಬೇಕು. ನೀವು ಓದಿದ್ರೆ ನಾನು ನಿಮ್ಗೆ ಸಾವಿರ ರೂಪಾಯಿ ಬೆಲೇದು ಸೀರೆ ಕೊಡಿಸ್ತೀನಿ. ಓದದೇ ಇದ್ರೆ ನೀವು ನಂಗೆ ಸಾವಿರ ರೂಪಾಯಿ ಕೊಡ್ಬೇಕು, ಸರೀನಾ?’’

ಯಲ್ಲಮ್ಮನ ಮುಖದಲ್ಲಿ ತುಸು ಆಶ್ಚರ್ಯ ಕಾಣಿಸಿತು. ಯಾಕೋ ವಿಷ್ಯ ಸ್ವಲ್ಪ ಗಂಭೀರ ಆಗ್ತಾ ಇದೆ ಅನ್ನಿಸ್ತೇನೋ ಅವರಿಗೆ. ಆದ್ರೆ ಆಕೆ `ಆಯ್ತಮ್ಮ’ ಎಂದು ಒಪ್ಪಿದ್ರು.

ಸರಿ. ಮತ್ತೆ ನಮ್ಮ ರೈಲು ಹೊರಡ್ತು. ಈ ಸಲ ಯಲ್ಲಮ್ಮನಲ್ಲಿ ಹೆಚ್ಚು ಬದ್ಧತೆ ಕಾಣಿಸ್ತು ಅಂತ ನನಗೆ ಅನ್ನಿಸ್ತು. ಪಾಠಪುಸ್ತಕ ಮನೆಗೂ ತಗೊಂಡು ಹೋಗಕ್ಕೆ ಶುರು ಮಾಡಿದ್ರು. ಇವರು ಅಕ್ಷರ ತಿದ್ದುತ್ತಾ ಕೂತರೆ `ನಮ್ಮ್ ಯಲ್ಲಮ್ಮ ಈ ವಯಸ್ಸಲ್ಲಿ ಬರಿಯಕ್ಕೆ, ಓದಕ್ಕೆ ಶುರು ಮಾಡ್ತು, ಮಕ್ಳು, ಮೊಮ್ಮಕ್ಳು ಎಲ್ಲ ಆದ್ಮೇಲೆ’ ಎಂದು ಅವರ ಮನೆ ಮಂದಿ ನಗೆಯಾಡಿದರಂತೆ.

ಕಾಗುಣಿತ, ಎರಡು ಅಕ್ಷರದ ಪದ, ಮೂರು ಅಕ್ಷರದ ಪದ, ಚಿಕ್ಕ ಚಿಕ್ಕ ವಾಕ್ಯ ….. ಹೀಗೆ ಮುಂದುವರಿಯಿತು ಪಾಠ. ಈಗಲೂ ವಿಘ್ನಗಳು ಬರುತ್ತಿದ್ದವು. ಆದರೆ ಅದರ ನಡುವೆಯೂ ಯಲ್ಲಮ್ಮ ಒದು, ಬರಹ ಮುಂದುವರಿಸಿದರು. ಸಾವಿರ ರೂಪಾಯಿ ಕರಾರು ನನಗೂ ತುಸು ಧೈರ್ಯ ಕೊಡುತ್ತಿತ್ತು. ನಾನು ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತು, ದೀರ್ಘ, ಉಚ್ಚಾರ, ಉಕ್ತ ಲೇಖನ ಅಂತ ತಲೆ ತಿನ್ನುತ್ತಿದ್ದರೆ…. `ಅಯ್ಯೋ, ಈ ಕನ್ನಡ ಮೇಡಂ ಹತ್ರ ಸಿಕ್ಕಿ ಬಿದ್ನಲ್ಲಪ್ಪಾ, ಬೇಕಿತ್ತ ನಂಗೆ ಇದು’ ಅಂತ ಯಲ್ಲಮಂಗೆ ಅನ್ನಿಸ್ತಿತ್ತೋ ಏನೋ!

ಹಾಂ. ಬಂದುಬಿಡ್ತು ನಾವು ಕಾಯುತ್ತಿದ್ದ ದಿನ. ಜನವರಿ 1. ಅವತ್ತು ಬೆಳಿಗ್ಗೆ ಯಲ್ಲಮ್ಮ ನಮ್ಮ ಮನೆಗೆ ಬಂದ ತಕ್ಷಣ ನಾನು ಅವರ ಕೈಲಿ ಪ್ರಜಾವಾಣಿ ಕೊಟ್ಟೆ. ಅಕ್ಷರ ಕೂಡಿಸಿಕೊಂಡು ಅವರು ಓದಿಬಿಟ್ಟರು.

ಹುರ‍್ರೇ. ನನಗೆ ನಿಜಕ್ಕೂ ಖುಷಿ ಆಯಿತು. ಅವತ್ತು ಸಂಜೆ ನಾನು ನಮ್ಮ ಮನೆ ಹತ್ತಿರದ ಬಾಲಾಜಿ ಅಂಗಡಿಗೆ ಹೋಗಿ ತಿಳಿಹಸಿರು ಒಡಲು, ನೀಲಿ ಬಣ್ಣದ ಅಂಚು ಸೆರಗು ಇದ್ದ ಒಂದು ಗದ್ವಾಲ್ ಸೀರೆ (ಸಾವಿರದ ಹತ್ತಿರ ಬೆಲೆಯದು) ಕೊಡಿಸುವುದರೊಂದಿಗೆ ಈ ಪ್ರಸಂಗ ಸುಖಾಂತ್ಯಗೊಂಡಿತು.

ನಾನು ಬಯಸಿದ್ದಂತೆ ಗ್ರಂಥಾಲಯದಿಂದ ಕಥೆ, ಕಾದಂಬರಿ ಓದುವಷ್ಟರ ಮಟ್ಟಿಗೆ ಯಲ್ಲಮ್ಮ ಪ್ರವೀಣರಾಗಿಲ್ಲ ಎಂಬುದು ವಾಸ್ತವಾಂಶವಾದರೂ, ಓಡಾಡುವಾಗ ಬಸ್ಸುಗಳ ನಾಮಫಲಕ ಓದುವಷ್ಟರ ಮಟ್ಟಿಗೆ ಸಮರ್ಥರಾಗಿದ್ದಾರೆ ಅನ್ನಿಸಿ ತುಸು ಸಂತೋಷ ಆಗುತ್ತೆ. ಬಿಡುವಾಗಿದ್ದಾಗ ನಮ್ಮ ಮನೆಯ ಮೆಟ್ಟಲಿನಲ್ಲೋ, ಅಂಗಳದ ಬೆಂಚಿನಲ್ಲೋ ಅವರು ಕುಳಿತು ಮಯೂರ, ತರಂಗ ತಿರುವಿ ಹಾಕುವುದನ್ನು ನೋಡಲು ಸಂತೋಷ ಆಗುತ್ತೆ. ಯಾವುದೇ ವಯಸ್ಸಿನಲ್ಲಾಗಲೀ, ಅನಕ್ಷರಸ್ಥ ಸ್ಥಿತಿಯಿಂದ ಅಕ್ಷರಸ್ಥ ಸ್ಥಿತಿಗೆ ಪರಿವರ್ತಿತವಾಗುವುದು ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಅನ್ನಬಹುದು.

*******

ಇನ್ನೊಂದು ವಿಷಯ ಅಂದರೆ ಜಾತಿ, ಅಂತಸ್ತು, ವಿದ್ಯಾಭ್ಯಾಸದ ಮಟ್ಟ, ಸಾಮಾಜಿಕ ಸ್ಥಾನಮಾನ ಇವೆಲ್ಲವನ್ನೂ ಮೀರಿದ ಗಾಢವಾದ ಆತ್ಮೀಯತೆಯೊಂದು ಇಬ್ಬರು ಹೆಂಗಸರಲ್ಲಿ ಮೂಡಬಹುದು ಅನ್ನುವುದಕ್ಕೆ ಯಲ್ಲಮ್ಮ ಮತ್ತು ಈ ಮೀರಮ್ಮನೇ ಸಾಕ್ಷಿ. ಉಟ್ಟ ಸೀರೆಗೆ ಹಾಕಿರುವ ರವಿಕೆ ಹೊಂದುತ್ತಾ ಎಂಬ ಮೇಲು ಮೇಲಿನ ವಿಷಯಗಳಿಂದ ಹಿಡಿದು ಮಕ್ಕಳ ಜೀವನವನ್ನು ಕುರಿತ ಗಂಭೀರ ವಿಷಯಗಳ ತನಕ ಏನನ್ನು ಬೇಕಾದರೂ ಮುಕ್ತವಾಗಿ ನಾನು ಅವರೊಂದಿಗೆ ಚರ್ಚಿಸಬಹುದು, ಅವರು ಸಹ ತಮ್ಮ ಮನೆ, ಮಕ್ಕಳು, ಕುಟುಂಬದ ಕಷ್ಟಸುಖಗಳನ್ನು ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಬಹುದು. ನನಗೆ ಇಷ್ಟವೆಂದು ಅವರು ಮಲ್ಲಿಗೆ ಹೂವು ತಂದು ಕೊಡುವುದು, ನನ್ನ ಹುಟ್ಟಿದ ಹಬ್ಬಕ್ಕೆ ಕಿವಿಗೆ ಹಾಕುವ ಲೋಲಾಕಿನಂತಹ ಚಂದದ ಓಲೆಗಳನ್ನು ತಂದುಕೊಡುವುದು, ಸೀರೆಯ ಉಡುಗೊರೆ ಕೊಡುವುದು ಇದನ್ನೆಲ್ಲ ಮಾಡುವಾಗ ನನ್ನ ಮನಸ್ಸು ತುಂಬಿ ಬರುತ್ತದೆ. ಬೆಲೆ ಕಟ್ಟಲಾರದ ಪ್ರೀತಿ ಅದು.

ಒಂದಂತೂ ನಿಜ. ನಮ್ಮ ಸೂಕ್ಷ್ಮ ಗಂಡಾಳಿಕೆಯ ಲೋಕದಲ್ಲಿ `ಮೀರಮ್ಮ ಮತ್ತು ಯಲ್ಲಮ್ಮಂದಿರು’ ಪರಸ್ಪರ ಸಹಕಾರ ಕೊಟ್ಟುಕೊಂಡು ಬದುಕನ್ನು ನಡೆಸಿಕೊಂಡು ಹೋಗುವುದು ಒಂದು ಅನಿವಾರ್ಯವೂ ಹೌದು, ಅದ್ಭುತವೂ ಹೌದು. ಇದು ಒಂದು ರೀತಿಯ ಪರಸ್ಪರಾವಲಂಬನೆಯ ಸಂಬಂಧ. ಅದಕ್ಕೇ ಮನಸ್ಸು ಉದ್ಗರಿಸುತ್ತೆ … ಏನೀ ಬಂಧ, ಅನುಬಂಧ..!