Advertisement
ಯೇಸುವಿನ ಪ್ರೀತಿ ಔದಾರ್ಯಕ್ಕೆ ಮಿಡಿದ ಕಾವ್ಯಲೋಕ: ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ

ಯೇಸುವಿನ ಪ್ರೀತಿ ಔದಾರ್ಯಕ್ಕೆ ಮಿಡಿದ ಕಾವ್ಯಲೋಕ: ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ

ವಾಕ್ಯವೇ ದೇವರು ಎನ್ನುವ ಕ್ರಿಸ್ತನ ಅನುಯಾಯಿಗಳು ವಾಕ್ಯದ ಮುಖಾಂತರ ನಡೆಯುತ್ತೇವೆ ಎಂಬ ಭ್ರಮೆಯಲ್ಲಿ ಇರುತ್ತಾರೆ ಅದು ಅವರ ಅರಿವಿಗೆ ಬರುವಷ್ಟರಲ್ಲಿ ಪಾಪದ ಕೊಡ ತುಂಬುತ್ತಲಿರುತ್ತದೆ. ಅಂದು ಏಸುವನ್ನು ದೈಹಿಕವಾಗಿ ಶಿಲುಬೆಗೆ ಏರಿಸಿದರೆ, ಇಂದಿನ ಅನುಯಾಯಿಗಳೆಂಬ ಅಂಧ ಭಕ್ತರ ದಂಡು ಮಾನಸಿಕವಾಗಿ ಯೇಸುವನ್ನು ಶಿಲುಬೆಗೇರಿಸಿದ್ದಾರೆ ಎಂಬ ಭಾವ ಕವಿತೆಯದ್ದಾಗಿದೆ. ವಚನಕಾರರು ಅಂತರಂಗ ಶುದ್ದಿ ಬಹಿರಂಗ ಶುದ್ದಿಯನ್ನು ಇಲ್ಲಿ ವಾಕ್ಯದ ಮೂಲಕ ನೆನಪಿಸಿಕೊಳ್ಳಬಹುದು.
ಕನ್ನಡ ಸಾಹಿತ್ಯದಲ್ಲಿ ಏಸು ಕ್ರಿಸ್ತನ ಬದುಕಿನ ಕುರಿತು ರಚಿತವಾದ ಕವಿತೆಗಳ ಕುರಿತು ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ ನಿಮ್ಮ ಓದಿಗೆ

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರತಿಯೊಬ್ಬ ಮಹನೀಯರ ಹೆಜ್ಜೆ ಗುರುತುಗಳನ್ನು ಕಾವ್ಯ, ಕಥನ, ಮಹಾಕಾವ್ಯಗಳ ಮೂಲಕ ದಾಖಲಿಸುತ್ತಾ ಬಂದಿದ್ದೇವೆ. ಎಂ ಗೋವಿಂದ ಪೈ ‘ಗೋಲ್ಗಥಾ’ ಖಂಡ ಕಾವ್ಯ ರಚಿಸುವುದರ ಮೂಲಕ ಯೇಸುವಿನ ಕೊನೆಯ ದಿನಗಳನ್ನು ದಾಖಲಿಸುತ್ತಾರೆ. ‘ಮರಿಜಿಂಕೆ ಜಿಗಿಯುವಂತೆ ಯೇಸುವಿನ ಪ್ರಾಣವು ಹಾರಿತು’ ಎಂಬ ಹೋಲಿಕೆಗೆ ಮನ ಸೋಲದವರೇ ಇಲ್ಲ. ಶುಭ ಶುಕ್ರವಾರ ಹಾಗೂ ಪುನರುತ್ಥಾನ ದಿನಗಳ ಹಿನ್ನೆಲೆಯಲ್ಲಿ ಕನ್ನಡ ಕವಿಗಳು ಕ್ರಿಸ್ತ ಯೇಸುವಿನ ಒಲುಮೆಯನ್ನು ಹಂಚಿಕೊಂಡ ರೀತಿಯನ್ನು ವಿಶ್ಲೇಷಿಸುವುದು ಲೇಖನದ ಮೂಲ ಉದ್ದೇಶ.

ತನ್ನ ಶಿಲುಬೆಯ ತಾನೇ ಹೊತ್ತ ನೆಲ ಗುರು ಏಸು
ನಿನ್ನ ಕರ್ಮದ ಹೊರೆಯ ಬಿಡದೆ ನೀನೇ ಹೊರು
ಖಿನ್ನ ನಾಗದೆ ತುಟಿಯ ಬಿಗಿದು ಶವಭೌರವವನು
ಬೆನ್ನಿನಲೆ ಹೊತ್ತು ನಡೆಯ ಮಂಕುತಿಮ್ಮ

ಡಿ.ವಿ.ಗುಂಡಪ್ಪನವರು ಯೇಸುವಿನ ಕುರಿತಾಗಿ ರಚಿಸಿರುವ ಚೌಪದಿ. ಯೇಸು ಯಾವುದೇ ತಪ್ಪನ್ನು ಮಾಡದಿದ್ದರೂ ಕೂಡ ಅಂದಿನ ಕಾಲದ ಆಡಳಿತ ವ್ಯವಸ್ಥೆ ಶಿಲುಬೆಗೇರಿಸಿತು. ಶಿಲುಬೆಯಲ್ಲಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರು ಯೇಸು ತನ್ನ ಶಾಂತ ಚಿತ್ತವನ್ನು ಕದಲಿಸಲಿಲ್ಲ. ಅಹಿಂಸಾ ಸ್ವರೂಪಕ್ಕೆ ತನ್ನನ್ನು ತಾನು ಪ್ರಯೋಗಕ್ಕೆ ಒಳಪಡಿಸಿಕೊಂಡ ವ್ಯಕ್ತಿತ್ವ ಯೇಸುವಿನದು. ತನ್ನ ತಪ್ಪಿಲ್ಲದಿದ್ದರೂ ತನ್ನ ಶಿಲುಬೆಯ ಭಾರವನ್ನು ತಾನೇ ಹೊತ್ತ ಯೇಸುವಿನ ಮುಂದೆ ನಾವೆಲ್ಲ ನಗಣ್ಯರು. ಏಕೆಂದರೆ ತಪ್ಪು ಮಾಡಿದ್ದರೂ ತಪ್ಪನ್ನು ಒಪ್ಪಿಕೊಳ್ಳದೆ ಇರುವ ಸಜ್ಜನರು ನಾವು! ನಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವ ಸೌಜನ್ಯವಂತರು ನಾವು! ಇನ್ನೊಬ್ಬರ ತಪ್ಪನ್ನು ಹುಡುಕುವ ಶ್ರೇಯೋಭಿಲಾಷಿಗಳು ನಾವು! ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವಲ್ಲಿ ನಿಸ್ಸೀಮರು. ಈ ಅಂಧಕಾರ ಭ್ರಮೆಯಿಂದ ಮಾನವ ಜನಾಂಗ ಹೊರಬರಬೇಕೆಂದು ಯೇಸು ತನ್ನನ್ನು ತಾನು ಶಿಕ್ಷೆಗೊಳಪಡಿಸಿಕೊಂಡರೆ? ಯಾವ ಅತವಾ ಯಾರ ಪಾಪಕ್ಕಾಗಿ ಯೇಸು ತನ್ನನ್ನು ಶಿಲುಬೆಗೇರಿಸಿಕೊಂಡ? ಎಂಬುದನ್ನು ಗ್ರಹಿಸೋಣ.

ಯೇಸು ಜನರನ್ನು ಉದ್ದೇಶಿಸಿ,
ಆತ್ಮದಲ್ಲಿ ಬಡವರಾಗಿರುವವರು ಧನ್ಯರು, ಪರಲೋಕರಾಜ್ಯವು ಅವರದು.
ದುಃಖಪಡುವವರು ಧನ್ಯರು; ಅವರು ಸಮಾಧಾನ ಹೊಂದುವರು.
ಶಾಂತರು ಧನ್ಯರು; ಅವರು ಭೂವಿುಗೆ ಬಾಧ್ಯರಾಗುವರು.
ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರಿಗೆ ತೃಪ್ತಿಯಾಗುವದು.
ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು.
ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.
ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು.

ನೀತಿಯ ನಿವಿುತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕರಾಜ್ಯವು ಅವರದು. (ಮತ್ತಾಯ 5:3-10)ಎಂದು ತಿಳಿಸಿದರು. ಒಳ್ಳೆಯವರಿಗೆ ಕಷ್ಟಗಳು ಹೆಚ್ಚು ಬರುವುದು ಅವುಗಳನ್ನು ತಾಳಿಕೊಳ್ಳುವ ಶಕ್ತಿ ಇದ್ದದ್ದರಿಂದಲೇ ಅವರಿಗೆ ಸಮಸ್ಯೆಗಳು ಹೆಚ್ಚು, ಅವುಗಳನ್ನು ಎದುರಿಸುವ ಧೈರ್ಯವು ಹೆಚ್ಚಿರುತ್ತದೆ ಎಂಬ ಭಾವನೆ ಈ ಸಾಲುಗಳಲ್ಲಿದೆ. ಅಂಥವರೇ ಪರಲೋಕ ರಾಜ್ಯಕ್ಕೆ ರಾಯಭಾರಿಗಳಾಗುವರು ಎಂಬ ಮಾತನ್ನು ಏಸು ಸೂಚ್ಯವಾಗಿ ಸೂಚಿಸುತ್ತಾರೆ.

ಜಿ ವರದರಾಜ್ ರು ‘ಹುತಾತ್ಮ ‘ಕವಿತೆಯಲ್ಲಿ
“ನೊಂದವರ ಬೆಂದವರ ಸಂತೈಸಿ ದೊಡೆಯನಿಗೆ ಕಡೆಗೆ ಮುಳ್ಳಿನ ಕಿರೀಟ
ಶಾಂತಿ ಸಹನೆಯ ಕಲಿಸಿ ಕೊಟ್ಟಾತನಿಗೆ
ತುಚ್ಛನಿಂದೆಗಳ ಊಟ” ಎಂದು ಒಳ್ಳೆಯದನ್ನು ಬಯಸಿದ ವ್ಯಕ್ತಿಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ. ಅಂಥವರು ಈ ಲೋಕಕ್ಕೆ ಗುರುವಾಗುತ್ತಾರೆ ಎಂಬ ಭಾವನೆ ಈ ಸಾಲುಗಳಲ್ಲಿದೆ.

ಬೈಬಲಿನಲ್ಲಿ “ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ; ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು” (1ನೇ ಪೇತ್ರ 2 : 22 – 24 ) ಎಂಬ ವಾಕ್ಯವಿದೆ. ಮನುಷ್ಯನ ಪಾಪ ನಿವಾರಣೆಗಾಗಿ ಯೇಸು ಯಜ್ಞ ಪಶುವಾಗಿ ಲೋಕಕ್ಕೆ ಬಂದನು. ಯೇಸುವಿನ ಮರಣದಲ್ಲಿ ನಮ್ಮ ಪಾಪಗಳು ಸತ್ತು ಹೋಗಿವೆ, ಪುನರುತ್ಥಾನದ ದಿನದಲ್ಲಿ ಪುಣ್ಯದ ಕಾರ್ಯಗಳನ್ನು ಮಾಡಬೇಕಾದ ಕರ್ತವ್ಯ ನಮ್ಮದಾಗಿದೆ ಎಂಬ ಆಲೋಚನೆ ಇದೆ.

ಯೇಸು ಶಿಲುಬೆಯ ಮೇಲಿರುವಾಗ ತನಗಾದ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ, ಪ್ರೀತಿ ಪ್ರೇಮವನ್ನು ಮಾತ್ರ ಹಂಚಿದ. ಕವಿ ಸು. ರಂ. ಎಕ್ಕುಂಡಿ ‘ಕರುಣೆಯ ಕುರುಬ’ ಎಂಬ ಕವಿತೆಯಲ್ಲಿ ಅಹಿಂಸಾವಾದಿ ಯೇಸುವನ್ನು,
“ಮರುಕ ತುಂಬಿದ ಹೃದಯದಲ್ಲಿ ಮೊಳೆ ಹೊಡೆದವರು
ಇತಿಹಾಸದಲ್ಲಿ ಕಸವಾಗಿ ನಡೆದವರು
ಎಲ್ಲರನ್ನೂ ಕ್ಷಮಿಸಿ, ಎಲ್ಲವನ್ನು ಸಹಿಸಿ
ಜಗದ ನೋವಿಗೆ ನೋಂದ ನೀ ಮಹಾತ್ಮ
ಕೊಂದರು ಕರುಣೆ ತೋರಿದ ಹುತಾತ್ಮ “ ಎನ್ನುತ್ತಾರೆ. ಸತ್ಯವೇದದಲ್ಲಿ,”ತಂದೆಯೇ, ಅವರನ್ನು ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು” (ಲೂಕ 23- 34 )ಎಂದು ಯೇಸು ತನ್ನ ತಂದೆಯಾದ ದೇವರಲ್ಲಿ ಪ್ರಾರ್ಥಿಸುತ್ತಾರೆ. ಯಾವ ವ್ಯಕ್ತಿಯು ಕೂಡ ನಾಶವಾಗಬಾರದು ಎಂಬ ಆಲೋಚನೆ ಏಸುವಿನದಾಗಿತ್ತು. ತನ್ನ ತಂದೆ ತನ್ನ ಮಗನಿಗೆ ಶಿಕ್ಷೆ ನೀಡುತ್ತಿದ್ದಾರೆಂದು ಕೋಪಗೊಂಡು ಏನು ಅರಿಯದ ಮಾನವರಿಗೆ ಶಿಕ್ಷೆ ನೀಡಬಾರದೆಂದು ತನ್ನ ತಂದೆಯಲ್ಲಿ ಏಸು ಪ್ರಾರ್ಥಿಸುತ್ತಾರೆ. ಏಕೆಂದರೆ

ಸತ್ಯ ವೇದದಲ್ಲಿ “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ. ಆತನನ್ನು ನಂಬುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬದವನಿಗೆ ದೇವರ ಒಬ್ಬನೇ ಮಗನ ಹೆಸರನ್ನು ನಂಬದೆಹೋದದರಿಂದ ಆಗಲೇ ತೀರ್ಪು ಆಗಿಹೋಯಿತು”.(ಯೋಹಾನ 3:16-18)
ಹಾಗಾಗಿ ಯಾರೊಬ್ಬರೂ ನಾಶವಾಗಬಾರದೆಂಬ ತನ್ನ ತಂದೆಯ ಚಿತ್ತ ನೆರವೇರಬೇಕೆಂಬುದು ಯೇಸುವಿನದಾಗಿತ್ತು. ಈ ವಾಕ್ಯದ ಹಿನ್ನೆಲೆಯಲ್ಲಿ ಕವಿ ರಾಘವರು ‘ಅಭಯ ಹಸ್ತ’ ಕವಿತೆಯಲ್ಲಿ

“ಲೋಕದ ಕಷ್ಟದ ಕಾಷ್ಟದ ಶಿಲುಬೆಗೆ
ಹೆಗಲನಿತ್ತೆ ಅದನ್ನೇರಿದೆ ಕೊನೆಗೆ
ನಾಕದ ಬಾಗಿಲು ತೆರೆದೆ, ಪಾಪಿಗೆ
ಮರಳಲು ತೆರಳಿದೆ ತಂದೆಯ ಮನೆಗೆ
ಸಾವಿನ ತಟ್ಟೆಯಲಿ ಅಮೃತವಕುಡಿದೆ
ಅದರ ಮರ್ಮವನ್ನು ಲೋಕಕರುಹಿದೆ” ಎಂಬ ಸಾಲುಗಳಲ್ಲಿ ಯೇಸುವಿನ ವ್ಯಕ್ತಿತವನು ದರ್ಶಿಸುತ್ತಾರೆ.

ಫರ್ಡಿನಂಡ್ ಕಿಟ್ಟಲ್ ಕ್ರಿಸ್ತನ ಚರಿತೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚನೆ ಮಾಡಿದ್ದಾರೆ.
ವಿನಾಯಕರು ‘ಶಿಲುಬೆ ‘ಎಂಬ ಕವಿತೆಯಲ್ಲಿ ಶಿಲುಬೆ ಮತ್ತು ಯೇಸು ನಡುವಿನ ಸಂವಾದವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಯಾಕೆ ನನಗೆ ಈ ತರಹದ ಶಿಕ್ಷೆ ನನಗೇಕೆ ಎಂದು ಯೇಸು ಶಿಲುಬೆಯನ್ನು ಕೇಳಿದಾಗ ಶಿಲುಬೆ ಹೀಗೆನ್ನುತ್ತದೆ,

“ಚಿನ್ನ ಚೊಕ್ಕ ಚಿನ್ನ ವಾಗಬೇಕಂತೆ ಕುಲುಮೆಯೊಳಗಿಂದ ಹಾಯ್ದಾಗ
ಅಪ್ಪಟ ಚಿನ್ನವಾಗಬಲ್ಲದು ನನ್ನ ಮೇಲಿದ್ದ ನಿನ್ನ ಮೂಳೆಗಳಲ್ಲಿ ಮೊಳೆ ಜಡಿದಾಗ
ಪರಿಪರಿ ಯಾತನೆಯನ್ನು ನೀ ಅನುಭವಿಸಿದಾಗ ಪರಿಶುದ್ಧ ಸುವರ್ಣವಾಗುವಂತೆ ದೇವಪುತ್ರನಾಗುವೆಯಂತೆ” ಎಂದು ನುಡಿಯುತ್ತದೆ. ನಮ್ಮ ಜೀವನದಲ್ಲಿ ಬರುವ ಅದೆಷ್ಟು ಕಷ್ಟಗಳಿಗೆ ನಾವು ದೇವರಿಗೆ ಶಾಪ ಹಾಕುತ್ತೇವೆ. ಕಷ್ಟವನ್ನು ಕೊಡದೆ ಬರೀ ಸಂತೋಷವನ್ನು ಕೊಡು ಎಂದು ಕೇಳುತ್ತೇವೆ. ಹುಳಿ ಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದೆಂಬುದನ್ನು ನಾವು ಮರೆತುಬಿಟ್ಟಿರುತ್ತೇವೆ. ಹಾಗಾಗಿ ಯೇಸು ಒಂದು ಕಡೆ ಹೇಳುತ್ತಾರೆ, “ನಾನು ಲೋಕವನ್ನು ಜಯಿಸಿದ್ದೇನೆ, ನೀವು ಕೂಡ ಲೋಕವನ್ನು ಜೈಸಿರಿ” ಎಂದು ಸಂದೇಶ ನೀಡುತ್ತಾರೆ.

ಜ.ನಾ.ತೇಜಶ್ರೀ ಅವರು ‘ಕ್ರಿಸ್ತನೆಂಬ ಕೆಂಗುಲಾಬಿ’ ಕವಿತೆಯಲ್ಲಿ ಕ್ರಿಸ್ತನ ಪುನರುತ್ಥಾನದ ಆಶಯವನ್ನು ಉತ್ತಮ ರೂಪಕವಾಗಿ ರೂಪಿಸಿದ್ದಾರೆ.

“ಸಾವೆಂದರೆ ಅದೇ, ಮತ್ತದೇ ಹುಟ್ಟು
ದೀಪ ಹಣತೆಯ ಉಸಿರಲ್ಲಿ
ಉಸಿರು ಕಟ್ಟಿ ಒಡೆಯುತ್ತದೆ
ಮರು ಜೀವದ ಮೊಳಕೆ
ಬದುಕುತ್ತಲೇ ಇರುತ್ತಾನೆ ಕ್ರಿಸ್ತ
ದ್ವೇಷದ ಸ್ಮಶಾನದಲ್ಲಿ
ಪ್ರೀತಿಯ ಕೆಂಗುಲಾಬಿಗಳು ತಲೆಯೆತ್ತಿ ತೂಗುತ್ತಿರುವ ತನಕ” ಕ್ರಿಸ್ತನ ಸಂದೇಶ ಸಾರುವ ಅನುಯಾಯಿಗಳಿಗೆ ಇಲ್ಲಸಲ್ಲದ ಆರೋಪಗಳು ಉಂಟಾಗುತ್ತಿವೆ. ಕೊಲೆ ಬೆದರಿಕೆ ಬಂಧನ ಇಂತಹ ನೋವುಗಳಿಂದ ಸಮಾಜದ ಸ್ವಾಸ್ಥ ಕೆಡುತ್ತದೆ ಎಂಬ ಆಶಯ ಕವಿತೆಯದ್ದಾಗಿದೆ. ಬುದ್ಧ, ಮಹಾವೀರ, ಕ್ರಿಸ್ತ ಇತ್ಯಾದಿ ಮಹನೀಯರು ಹೇಳಿದ ಉಪದೇಶವನ್ನು ಸಾರುವುದು ಮಾನವೀಯತೆಯ ದ್ಯೋತಕ ಎಂಬುದನ್ನು ಸಮುದಾಯ ಅರಿಯುವಲ್ಲಿ ವಿಫಲತೆಯನ್ನು ಕಾಣುತ್ತಿದೆ. ಇತರರನ್ನು ನಿನ್ನಂತೆ ಪ್ರೀತಿಸುವುದನ್ನು ಕಲಿಯೆಂದು ಹೇಳಿದ ಕ್ರಿಸ್ತನ ನಡತೆಗೆ ನಾವು ತಲೆದೂಗಲೇಬೇಕು.

ಕ್ರಿಸ್ತನ ಸಂದೇಶವನ್ನು ತಿಳಿದವರು ಮತ್ತೆ ಮತ್ತೆ ತಪ್ಪಿನ ರಹದಾರಿ ವಿಸ್ತರಿಸುತ್ತಲೇ ಇರುತ್ತೇವೆ. ಅಂತಹ ತಪ್ಪನ್ನು ಮತ್ತೆ ಮತ್ತೆ ಕ್ಷಮಿಸುವ ಯೇಸುವನ್ನು ಕುರಿತು, ಮುದ್ದು ತೀರ್ಥಹಳ್ಳಿ ‘ಕ್ಷಮಿಸಿ ಬಿಡು ‘ಕವಿತೆಯಲ್ಲಿ…

“ನಿನ್ನ ತಿಳಿದು ಅರಿಯದವರ
ಆ ನಿನ್ನ ಶಿಲುಬೆಗಳ ಮನೆಯಲ್ಲಿಟ್ಟು ಪೂಜಿಸಿ ಕೊರಳಲ್ಲಿ ಧರಿಸಿ ಪ್ರತಿಕ್ಷಣ ನಿನ್ನ ಹೆಸರ
ಪಾಪದ ಶಿಲುಬೆಗೆ ಜಡಿದವರ ಕ್ಷಮಿಸಿ ಬಿಡು”

ವಾಕ್ಯವೇ ದೇವರು ಎನ್ನುವ ಕ್ರಿಸ್ತನ ಅನುಯಾಯಿಗಳು ವಾಕ್ಯದ ಮುಖಾಂತರ ನಡೆಯುತ್ತೇವೆ ಎಂಬ ಭ್ರಮೆಯಲ್ಲಿ ಇರುತ್ತಾರೆ ಅದು ಅವರ ಅರಿವಿಗೆ ಬರುವಷ್ಟರಲ್ಲಿ ಪಾಪದ ಕೊಡ ತುಂಬುತ್ತಲಿರುತ್ತದೆ. ಅಂದು ಏಸುವನ್ನು ದೈಹಿಕವಾಗಿ ಶಿಲುಬೆಗೆ ಏರಿಸಿದರೆ, ಇಂದಿನ ಅನುಯಾಯಿಗಳೆಂಬ ಅಂಧ ಭಕ್ತರ ದಂಡು ಮಾನಸಿಕವಾಗಿ ಯೇಸುವನ್ನು ಶಿಲುಬೆಗೇರಿಸಿದ್ದಾರೆ ಎಂಬ ಭಾವ ಕವಿತೆಯದ್ದಾಗಿದೆ. ವಚನಕಾರರು ಅಂತರಂಗ ಶುದ್ದಿ ಬಹಿರಂಗ ಶುದ್ದಿಯನ್ನು ಇಲ್ಲಿ ವಾಕ್ಯದ ಮೂಲಕ ನೆನಪಿಸಿಕೊಳ್ಳಬಹುದು.

ಜ. ಹೊ ನಾರಾಯಣ ಸ್ವಾಮಿಯವರು ‘ಯೇಸುವಿಗೆ ಸಾವಿಲ್ಲ’ ಕವಿತೆಯಲ್ಲಿ ಕರುಣೆಯ ಕಡಲು, ಪ್ರೀತಿಯ ಒಡಲು, ಮಮತೆಯ ಮಡಿಲು, ಆಕಾಶದ ಶಾಂತತೆ, ಸಮುದ್ರದ ಪ್ರಶಾಂತತೆ, ಪರ್ವತ ಸ್ಥೈರ್ಯ ತುಂಬಿದ ಧೈರ್ಯ, ಅರಿತಷ್ಟು ಆಳ ಆಳ’ ಎಂದು ಉದ್ಗರಿಸುತ್ತಾರೆ. ಕರುಣೆಗೆ ಪ್ರೀತಿಗೆ ವಾತ್ಸಲ್ಯಕ್ಕೆ ಸಾವಿದೆಯೇ ಸಾವು ಎಂಬುದು ಕೇವಲ ತೋರಿಕೆಗೆ ಮಾತ್ರ. ಪ್ರೀತಿ ತೋರಿದ ಜಗತ್ತಿನ ಅನೇಕ ಸಂತರಿಗೆ ಸಾವಿಲ್ಲ ಎಂಬ ಆಶಯ ಕವಿತೆಯದು.

ಸು.ರುದ್ರಮೂರ್ತಿ ಶಾಸ್ತ್ರಿಯವರು ‘ಸತ್ಯ ಶಿಲುಬೆ’ ಕವಿತೆಯಲ್ಲಿ
“ಓ ಯೇಸು,
ಸಾವಿಗೂ ಸತ್ಯಕ್ಕೂ ಸಂಬಂಧ ತಿಳಿದವ ನೀನು ಸಾಕ್ರೆಟಿಸನ ಹಾಗೆ ಗಾಂಧಿ ಹಾಗೆ ಶಿಲುಬೆ ಮೊಳೆ ಯಲ್ಲಿ ವಿಷದ ಬಟ್ಟಲಲ್ಲಿ ಗುಂಡಿನ ಆರ್ಭಟದಲ್ಲಿ ಸಾಯದ ಸತ್ಯಕ್ಕಾಗಿ ನೀವು ಸತ್ಯದೊಳಗೆ ಬದುಕಿದಿರಿ”. ಸತ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಟ ಮಾಡಿದ ಮಹನೀಯರ ನೆನಪುಗಳನ್ನು ಕವಿ ಬಿತ್ತುತ್ತ ಸಾಗುತ್ತಾರೆ. ಸತ್ಯದ ಮಹಾತ್ಮನಿಗೆ ಕನ್ನಡ ಕಾವ್ಯ ಲೋಕ ಹೃದಯ ಅಂತರಾಳದಿಂದ ಕಂಬನಿ ಮಿಡಿದಿದೆ ಎಂಬುದನ್ನು ಓದುಗರು ಗಮನಿಸಲೇಬೇಕು.

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ