ಗೊತ್ತು ನನಗೆ
ಉದುರುವ ಎಲೆಗಳ ಲೆಕ್ಕ ಗಾಳಿ ಇಟ್ಟುಕೊಳ್ಳುವುದೆ?
ಬೀಸುವುದಷ್ಟೇ ಗೊತ್ತು ಗಾಳಿಗೆ
ಬದುಕ ಲೆಕ್ಕಾಚಾರಗಳಲ್ಲಿ ನನ್ನನ್ನು ಕಟ್ಟದಿರು
ತಪ್ಪಿಸಿಕೊಳ್ಳುವುದು ಗೊತ್ತು ನನಗೆ.
ನಡೆಯುವ ದಾರಿಯ ಮೇಲೆಯೇ
ಒಲವಾಗಿದೆ ಈಗ
ಮನೆಯ ನೆನಪಾಗುವುದಾದರೆ
ಹಿಂದಿರುಗಿಬಿಡು.
ಮೊರೆಯುವ ಅಲೆಗಳ ಕೋಲಾಹಲ ತೀರಕ್ಕೆ ತಾಕುವುದೆ?
ನೋಡುವುದಷ್ಟೇ ಗೊತ್ತು ತೀರಕ್ಕೆ
ಇಲ್ಲದ ದ್ವಂದ್ವಗಳಲ್ಲಿ ನನ್ನನ್ನು ಸಿಲುಕಿಸದಿರು
ಕಲ್ಲಾಗಿರಲು ಗೊತ್ತು ನನಗೆ.
ಬದುಕ ಆಳದಲ್ಲಿ ಮುಳುಗುವ
ಹುಚ್ಚು ಅತಿಯಾಗಿದೆ
ತೇಲುವ ಆಸೆಯಿನ್ನೂ ಇದ್ದರೆ
ಮರೆತುಬಿಡು.
ಸುಡುವ ರೆಕ್ಕೆಗಳ ನೆನಪು ದೀಪಕ್ಕೆ ಕಾಡುವುದೆ?
ಉರಿಯುವುದಷ್ಟೇ ಗೊತ್ತು ದೀಪಕ್ಕೆ
ನೆನಪ ಬಾಣಗಳಲ್ಲಿ ನನ್ನನ್ನು ಇರಿಯದಿರು
ಮರೆತುಬಿಡುವುದೂ ಗೊತ್ತು ನನಗೆ.
ಪ್ರೇಮದಲ್ಲಿ ಉರಿದುಹೋಗುವ
ಖಯಾಲಿ ಶುರುವಾಗಿದೆ
ಬದುಕು ದೊಡ್ಡದು ಅನ್ನಿಸಿದರೆ
ಹೊರಟುಬಿಡು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
ಪ್ರಕೃತಿಯೊಡನೆ ಒಂದಾಗಿ ಬೆರೆತು ಬಾಳುವ ಬದುಕಿಗಿರುವ ಸವಾಲುಗಳನ್ನು ಎದೆಗುಂದದೆ ಎದುರಿಸುವ, ಹಾಗೆಯೇ ಮುನ್ನಡೆಯುವ ಛಲವನ್ಮು ಕವನ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದೆ. ಅಭಿನಂದನೆಗಳು
ನೆನಪುಗಳ ಸ್ವಗತದಲ್ಲಿ ತನ್ನತನವೇನೆಂಬ ಆತ್ಮವಿಶ್ವಾಸ ದ ನುಡಿಗಳು ಸಶಬ್ದವಾಗಿ ಗಟ್ಟಿತನವನ್ನು ಸಾರಿದ ಕವಿತೆ….ಚಂದದ ಸಾಲುಗಳು
ಹೀಗೂ ಗೊತ್ತಿದೆ ಎಂದು ಓದಿದ ಮೇಲೆ ಗೊತ್ತಾಯಿತು!!!. ಗಜ಼ಲ್ ಶೈಲಿಯ ಪದಸಾಲುಗಳು ಖುಷಿ ನೀಡುತ್ತವೆ. ಅಭಿನಂದನೆಗಳು.