ಗುಟ್ಟನ್ನು ಕಾಯ್ದುಕೊಳ್ಳಬೇಕು
ಈ ಗಾಢ ಮೌನ
ಆಗಸವೇ ಕಳಚಿಬಿದ್ದಂತೆ ಬೀಳುವ
ಮಳೆಯಂತೆ ಗಾಢ.
ತುಂಬಿ ಮೇಲೆ ಹರಿಯುತ್ತಿದೆ
ಬಾವಿಯ ನೀರು,
ಅಲೆಗಳೇಳುತ್ತಿವೆ;
ಏನೋ ಪ್ರತೀಕ್ಷೆ.
ಒಂದು ಮಾತನಾಡಿಬಿಟ್ಟರೆ
ಕಳೆದುಹೋಗುತ್ತದೆ;
ಹೇಳಿದರೆ, ಕೇಳಿದರೆ
ನಿಂತು ಹೋಗುತ್ತದೆ ಮಳೆ
ಸುರಿದ ಮಳೆ ಹರಿದುಹೋಗುತ್ತದೆ..
ಸುಮ್ಮನಿರು,
ಗುಪ್ತಗಾಮಿನಿ ತುಂಬಿಹರಿಯಲಿ.
ಕಾಲವೇ ಒದಗಿಸುತ್ತದೆ
ಒದಗಿಸಿದ ಕಾಲ ಇಲ್ಲವಾಗುತ್ತದೆ
ಕಾಲವಿಲ್ಲದ ಮೇಲೆ ಮರಣಭಯವಿಲ್ಲ.
ಮತ್ತೆ ಧೋ ಎಂದು ಸುರಿಯುತ್ತದೆ
ಹಗಲಲ್ಲಿ ಇದ್ದಲ್ಲಿಯೇ ಇರಿಸುತ್ತದೆ
ರಾತ್ರಿ, ಯಾವುದೋ ಗೂಢ ಲೋಕಕ್ಕೆ
ಸೆಳೆದೊಯ್ಯುತ್ತದೆ…
ಸೂರಿನ ಅಂಚಿಂದ ಸಣ್ಣ ಜುಳುಜುಳು,
ಮಾಮರದಂಚಿಂದ, ಹನಿಹನಿ
ಕಣ್ಣತುಂಬುತ್ತದೆ, ಹರಿಯುವುದಿಲ್ಲ.
ಏನಾದರೂ ಮಾತನಾಡು,
ಜೋಗಿಜಂಗಮನಾಗಿ ಬರುತ್ತಾನೆ
ಅಂಗೈಯಲ್ಲಿಟ್ಟು ಹೋಗುತ್ತಾನೆ
ಯಾರಿಗೂ ಹೇಳುವುದು ಬೇಡ.
ನಮ್ಮಿಬ್ಬರ ಹೆಸರುಗಳು
ಅದೆಲ್ಲೋ ಮಳೆಗೆ ಸಿಕ್ಕು
ತೇಲಿ ಮತ್ತೆಲ್ಲೋ ಹೋಗುತ್ತವೆ,
ಹೆಸರಿಲ್ಲದವರಾಗುತ್ತೇವೆ ನಾವು.
“ಗುಟ್ಟನ್ನು ಕಾಯ್ದುಕೊಳ್ಳಬೇಕು”
ಆಗಸವೆಂದರೆ ಬರಿ ಬಯಲು
ಅಲ್ಲೇನೂ ಇಲ್ಲ,
ಕಣ್ಣುತುಂಬಿದರೆ ಧನ್ಯತೆ ಅದಕ್ಕೆ ಕಾರಣವಿಲ್ಲ
ನಿನ್ನ ಬಳಿಗೊಂದು ನದಿ ಹರಿದು ಬಂದರೆ
ನೋಡು ಅಲ್ಲಿ
ಆಗಸದ ಬೆಳಕಲ್ಲಿ
ನಗುತ್ತಾನೆ.
ಗೊತ್ತಾಯಿತಲ್ಲ;
ಮತ್ತೆ ನಾನು ಮಾತನಾಡುವುದಿಲ್ಲ!
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ