ಕಥೆಯ ನಿರೂಪಣೆಯಲ್ಲಿ ನಾವೂ ಕೂಡಾ ಕರುಣಾಕರನ ಜಾಗದಲ್ಲಿ ನಿಂತುಬಿಡುತ್ತೇವೆ. ಒಂದೆಲಗ ನೆನಪಿನ ಶಕ್ತಿಹೆಚ್ಚಿಸುವ ಸಂಕೇತ. ಇದು ನೆಲದಲ್ಲಿ ಬೆಳೆಯುವ ಸಸ್ಯವೂ ಹೌದು. ನೀರು ಮತ್ತು ಭೂಮಿಯ ಕುರಿತು ಅಪರಿಮಿತ ಆಸಕ್ತಿಯಿದ್ದ ಜೋಗಿನ್ಮನೆಯವರ ಇಗ್ಗಪ್ಪ ಮತ್ತು ಕರುಣಾಕರ ಇಬ್ಬರೂ ಇಲ್ಲಿ ಸಾಮ್ಯತೆಯನ್ನು ಪಡೆಯುವದು ಹೀಗೆ. ನಾವು ಕಳೆದುಕೊಂಡುದೆಲ್ಲಿ ಎನ್ನುವದರ ಹುಡುಕಾಟದಲ್ಲಿರುವ ಪುರಾಣಗಳ ‘ಅಭಿಜ್ಞಾ’ನದ ನೆನಪು ಮಾಡಿಕೊಳ್ಳುವ ಕರುಣಾಕರನಿಗೆ ಅನಿಸಿದ್ದು ಕಳೆದುದನ್ನು ಕಳೆದಕಡೆಯೇ ಹುಡುಕಬೇಕು, ಹಾಗೇ ಹುಡುಕಬೇಕಾದರೆ ನಮ್ಮ ಮೂಲ ಸೆಲೆ ನೆನಪಾಗಬೇಕು.
ಪತ್ರಕರ್ತ ರಾಜಶೇಖರ ಜೋಗಿನ್ಮನೆ ಕಥಾಸಂಕಲನ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ಯ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ
ಕತೆ ಹುಟ್ಟಿಕೊಳ್ಳುವ ಹೊತ್ತೇ ವಿಸ್ಮಯ. ಕ್ರೌಂಚ ಪಕ್ಷಿಯ ರೋಧನ ರಾಮಾಯಣಕ್ಕೆ ಹೇತುವಾದ ರೀತಿಯಲ್ಲಿಯೇ ಅನೇಕ ಸಂದರ್ಭಗಳಲ್ಲಿ ಬದುಕಿನಲ್ಲಿ ಕಾಣುವ ಸಣ್ಣ ಸಣ್ಣ ಘಟನೆಗಳೇ ಮಹಾಕಾವ್ಯಕ್ಕೆ ಪ್ರೇರಣೆಯಾಗಬಹುದು. ಬಾನಲ್ಲಿ ಕಂಡ ಮೋಡಗಳು ಪಡೆಯುವ ವಿವಿಧ ರೀತಿಯ ಆಕಾರಗಳಂತೆ ಸೃಜನಶೀಲ ಕತೆಗಾರ ತನ್ನ ಕಣ್ಣಲ್ಲಿ, ಕಿವಿಯಲ್ಲಿ, ಮನದಲ್ಲಿ ನೋಡಿದ, ಕೇಳಿದ, ಅನುಭವಿಸಿದ ವಸ್ತುವನ್ನು ನವಿರಾದ ಕತೆಯನ್ನಾಗಿಸಬಲ್ಲದು.
ಅಷ್ಟಕ್ಕೂ ಕತೆಯೆನ್ನುವುದು ಓದುವವರನ್ನು ಆಯಾ ಭಾವಲೋಕಕ್ಕೆ ಒಯ್ಯುವ ಒಂದು ಮಾಧ್ಯಮ ತಾನೇ. ಈ ಕತೆಗಳ ಯಶಸ್ಸು ಈ ಭಾವಲೋಕದಲ್ಲಿ ಓದುಗನನ್ನು ಹೇಗೆ ಸೆರೆಹಿಡಿದಿಡುತ್ತದೆ ಎನ್ನುವದರಮೇಲೆ ನಿಂತಿದೆ. ವರ್ತಮಾನದ ಕನ್ನಡ ಕಥಾಲೋಕದಲ್ಲಿ ಇಂತಹ ಅನೇಕ ಗಮನಿಸಬಹುದಾದ ಕತೆಗಳಲ್ಲಿ ಒಂದು ರಾಜಶೇಖರ ಜೋಗಿನ್ಮನೆಯವರು ಬರೆದ “ಇಗ್ಗಪ್ಪಣನ ವಿಗ್ರಹಾನ್ವೇಷಣೆ”. ಒಟ್ಟು ಹನ್ನೆರಡು ಕತೆಗಳ ಈ ಕಥಾ ಸಂಕಲನವನ್ನು ಬೆಂಗಳೂರಿನ ಸಮನ್ವಿತ ಪ್ರಕಾಶನದವರು ಹೊರತಂದಿದ್ದಾರೆ.
ರಾಜಶೇಖರ ಜೋಗಿನ್ಮನೆಯವರು ಕರ್ನಾಟಕದ ಹಿರಿಯ ಪತ್ರಕರ್ತರು. ವಿಜಯವಾಣಿಯಲ್ಲಿ ಸುದ್ಧಿ ಸಂಪಾದಕರು. ಇವರಮೊದಲ ಕಥಾ ಸಂಕಲನ “ಬಿಂಗಿ” ಪ್ರಕಟವಾದ ಇಪ್ಪತ್ತು ವರ್ಷಗಳ ನಂತರ ಈ ಕಥಾಸಂಕಲವನ್ನು ಹೊರತಂದಿದ್ದಾರೆ. ಉತ್ತರ ಕನ್ನಡದ ಸಿದ್ದಾಪುರ ಮೂಲದವರಾದ ಜೋಗಿನ್ಮನೆಯವರ ಕತೆಗಳಲ್ಲಿ ಪತ್ರಕರ್ತರಿಗಿರುವ ವರದಿಗಾರಿಕೆಯ ಚಾಳಿಹೊರಬರದೇ ಓರ್ವ ಕತೆಗಾರನಾಗಿ ಭಾವನಿರೂಪಣೆಯ ಬಣ್ಣಗಳನ್ನು ತುಂಬಿರುವದನ್ನು ಕಾಣಬಹುದಾಗಿದೆ. ಉತ್ತರ ಕನ್ನಡದ ಕತೆಗಾರರಲ್ಲಿ ಇರುವ ವೈಶಿಷ್ಟ್ಯವೇ ಅಂತಹದ್ದು. ಇಲ್ಲಿನ ಕತೆಗಾರರಲ್ಲಿ ಸಾಮಾನ್ಯವಾಗಿ ಇತರೆಡೆ ಕಂಡು ಬರುವಂತೆ ಊಳಿಗ ಮಾನ್ಯ ಪದ್ಧತಿ, ಶೋಷಣೆ ಮುಂತಾದ ಘಟನೆಗಳು ಕಂಡು ಬರುವದಿಲ್ಲ. ಇಲ್ಲಿನ ಜನರೆಲ್ಲಾ ಶೇಕಡಾ ಎಂಭತ್ತು ಅರಣ್ಯದಿಂದ ಕೂಡಿರುವ ಗುಡ್ಡ ಬೆಟ್ಟಗಳಿಂದ ಆವೃತವಾದ ಪ್ರಕೃತಿಯ ಮಡಿಲಲ್ಲಿ ಸುಖ ಮತ್ತು ಕಷ್ಟಗಳನ್ನು ಸಹಿಸಿಯೇ ಬಡ ಮತ್ತು ಮಧ್ಯಮ ವರ್ಗಗಳಲ್ಲಿ ಬೆಳೆದವರು. ವರ್ಗ ಬೇಧವಿಲ್ಲದೇ ಶಾಲೆಗೆ ಹತ್ತಾರು ಮೈಲಿಗಳಷ್ಟು ಹೋಗಿ ಬರುವ ಕಾಲುದಾರಿಯಲ್ಲಿ ಕಾಡಿನ ನೋಂಪನ್ನು ಅನುಭವಿಸಿರುವದರಿಂದ ಸಹಜವಾಗಿಯೇ ಭಾವಜೀವಿಯಾದವರು.
ಈ ಭಾವ ತೀವ್ರತೆ ಉದ್ಯೋಗಕಾಗಿ ದೊಡ್ಡ ದೊಡ್ಡ ಪಟ್ಟಣ ಸೇರಿದರೂ ಇಲ್ಲಿನ ಕತೆಗಾರರನ್ನು ಕಾಡುತ್ತಿರುತ್ತದೆ. ಚಿತ್ತಾಲರ, ಕಾಯ್ಕಿಣಿಯವರ ಕತೆಗಳಲ್ಲಿನ ಹನೇಹಳ್ಳಿ, ಗಂಗಾವಳಿ ಗೋಕರ್ಣದ ಬದುಕನ್ನು ಇಲ್ಲಿ ನೆನೆಯಬಹುದು. ಅದೇ ರೀತಿ ಘಟ್ಟದ ಮೇಲಿನ ಪುಟ್ಟ ಊರು ಕುಮ್ರಿಜಡ್ಡಿ ಈ ಸಂಕಲನದಲ್ಲಿ ಕತೆಗಾರರನ್ನು ಬೆನ್ನುಬಿಡದೆ ನೆನಪಿಸಿಕೊಂಡು ಪತ್ರಿಕಾವ್ಯವಸಾಯದ ಮಧ್ಯೆಯೂ ಇಣುಕುಹಾಕಿದೆ.
ಇಗ್ಗಪ್ಪಣ್ಣನಿಗೆ ಅಪ್ಪ ಹೇಳಿದ ವಿಗ್ರಹಾನ್ವೇಷಣೆ ತುಂಬಾ ಮುಖ್ಯ. ಅಪ್ಪ ಸಾಯುವಾಗ ಹೇಳಿದ ಮಾತು ಆತನನ್ನು ಕೊರೆಯುತ್ತಿದೆ. ಕುಮ್ರಿಜಡ್ಡಿಯಿಂದ ಸುಮಾರು ಹದಿನಾಲ್ಕು ಕಿ.ಮೀ. ದೂರದಲ್ಲಿನ ಕಾನಿನೊಳಗೆ ದಿಬ್ಬದ ಪಕ್ಕ ಇರುವ ನೀರೆತ್ತಿಮರ, ಅದರ ಪಕ್ಕದಲ್ಲಿರುವ ಪುಟ್ಟ ತಗ್ಗು. ಈ ತಗ್ಗಿನಲ್ಲಿ ಅಗೆದರೆ ಅಲ್ಲಿ ಇರುವ ದೇವಿಯನ್ನು ತಂದು ಮನೆಯ ಪಕ್ಕದಲ್ಲಿರುವ ಅಶ್ವತ್ಥಮರದ ಪಕ್ಕದಲ್ಲಿ ಸ್ಥಾಪಿಸಬೇಕು. ಪ್ರಾರಂಭದಲ್ಲಿಯೇ ಕುತೂಹಲ ಮೂಡಿಸುವ ಈ ಕತೆ ಸರಳವಾಗಿ ಸಾಗಿದರೂ, ಉಪಯೋಗಿಸಿರುವ ಪ್ರತಿಮೆಗಳು ಮತ್ತು ಸಂಕೇತಗಳು ಕತೆ ಓದಿದ ನಂತರವೇ ಮಹತ್ವ ಪಡೆಯುತ್ತದೆ.
ಅನ್ವೇಷಣೆ ಮನುಷ್ಯನ ಸಹಜ ಸ್ವಭಾವ. ಇಗ್ಗಪ್ಪಣ್ಣನ ಅಪ್ಪ ಸಾಯುವಾಗ ಬೋದೆ ಸರಿಯಿಲ್ಲದೇ ಹೇಳಿದ್ದಿರಬಹುದು ಎಂದು ಅಂದುಕೊಂಡರೂ ಆ ಅಪ್ಪ ಇಗ್ಗಪ್ಪಣ್ಣನ ಮನಸ್ಸಿನಲ್ಲಿ ಆಳವಾಗಿ ಇಳಿದುಬಿಟ್ಟಿದ್ದಾನೆ. ಆತನ ಮಗ ಬೆಳೆದು ದೊಡ್ಡವನಾಗಿ ಬೆಂಗಳೂರಿನಲ್ಲಿ ದುಡಿಯುವ ಸುಖದ ಬದುಕಿನಲ್ಲಿಯೂ ಇಗ್ಗಪ್ಪಣ್ಣನಿಗೆ ಅಪ್ಪನ ಮಾತು ಮನಸ್ಸಿನಾಳಕ್ಕೆ ಇಳಿದು ಬಿಟ್ಟಿದೆ ಎನ್ನುವದಕ್ಕೆ ಸ್ವಪ್ನದಲ್ಲಿ ಅಪ್ಪ ಮತ್ತೆ ಬಂದು ಹೇಳಿದುದು ಸಾಕ್ಷಿ. ಹಾಗಾಗಿಯೇ ಆ ನೀರೊತ್ತಿಮರ, ಅಲ್ಲಿನ ದಿಬ್ಬವನ್ನು ಹುಡುಕಿಹೋಗುತ್ತಾನೆ; ಹೋಗುವ ಮಾರ್ಗದಲ್ಲಿ ದಾರಿ ತಪ್ಪಿದಾಗ ಮತ್ತೊಂದು ದಾರಿಯನ್ನು ತಾನೇ ಅನ್ವೇಷಿಸುತ್ತಾ ಕೊನೆಗೆ ಗುರಿತಲುಪುತ್ತಾನೆ. ಅಲ್ಲಿ ಅಗೆದಾಗ ಇನ್ನೇನು ದೇವಿಯ ವಿಗ್ರಹ ಸಿಕ್ಕೇ ಬಿಟ್ಟಿತು ಎನ್ನುವ ಕುತೂಹಲದ ತೀವ್ರತೆಯಲ್ಲಿ ಓದುಗನನ್ನು ತಂದು ನಿಲ್ಲಿಸಿ ಇಣುಕಿ ನೋಡುವಾಗ ಅಲ್ಲಿ ಸಿಕ್ಕಿದ್ದು ದೇವಿಯ ವಿಗ್ರಹವಲ್ಲ. ಬದಲು ಉಕ್ಕೇರಿದ್ದು ನೀರಿನ ಒರತೆ. “ನೀರೆಂಭ ನಿಧಿ”ಯ ಮೂಲಕ ನೀರಿನ ಸಹವಾಸ ಅಂಟಿಕೊಂಡ ಲೇಖಕರು ದೇವಿಯನ್ನು ನೀರಿಗೆ ಸಮೀಕರಿಸುವ ರೀತಿಯೇ ವಿಭಿನ್ನ. ಈಗ ಕತೆಯನ್ನು ಹಿಂತಿರುಗಿ ನೋಡಿದಾಗ ಅಶ್ವತ್ಥಮರದ ಪಕ್ಕದಲ್ಲಿ ಸ್ಥಾಪಿಸಬೇಕಾದ ಸಂಕೇತ ಅರ್ಥವಾಗುತ್ತದೆ.
ಈ ನಡುವೆ ಒಮ್ಮೆ ಇಗ್ಗಪ್ಪಣ್ಣ ತನ್ನ ಬದುಕಿನ ಹೋರಾಟದಲ್ಲಿ ಹೆಬ್ಬಾವಿನ ಬಾಯಿಗೆ ಸಿಕ್ಕಿಕೊಂಡು ಅಲ್ಲಿಂದ ಉಳಿದುಬಂದರೂ ಆ ಲೋಳೆಯನ್ನು ತೊಳೆಯಲು ನೆರವಾದದ್ದು ನೀರೇ. ಕೊನೆಯಲ್ಲಿ ಕಾಡಿಪ್ರಾಣಿಗಾದರೂ ಆದೀತು ಎನ್ನುತ್ತಾ ಮನೆಗೆ ಕಾಲುವೆ ಮಾಡಿ ಕೊಂಡೊಯ್ಯಬಹುದಾದ ನೀರು ಅನ್ವೇಷಣೆಯ ಹೊಸ ಮಜಲನ್ನು ಮುಟ್ಟುವದು ಅರ್ಥಪೂರ್ಣ. ಅದೇ ರೀತಿ “ಒಂದೆಲಗದ ತಂಬುಳಿ”ಯ ಕರುಣಾಕರ. ಈತನೂ ತನ್ನ ಮೂಲದ ಪ್ರೀತಿಯನ್ನು ಬಿಡಲಾರದವ. ಬದುಕಿನ ರಥಕ್ಕಾಗಿ ಬೆಂಗಳೂರು ಸೇರಿದವ. ಅನುಕೂಲಸ್ಥ. ಅಪ್ಪ ಅಮ್ಮ ಇಬ್ಬರೂ ಊರನಲ್ಲಿ ಇದ್ದರೂ ಈತ ಊರು ಸೇರಲಾರ; ಆದರೆ ಆ ಬಂಧವನ್ನು ಬಿಡಲಾರದ ವ್ಯಕ್ತಿತ್ವ.
ಕಥೆಯ ನಿರೂಪಣೆಯಲ್ಲಿ ನಾವೂ ಕೂಡಾ ಕರುಣಾಕರನ ಜಾಗದಲ್ಲಿ ನಿಂತುಬಿಡುತ್ತೇವೆ. ಒಂದೆಲಗ ನೆನಪಿನ ಶಕ್ತಿಹೆಚ್ಚಿಸುವ ಸಂಕೇತ. ಇದು ನೆಲದಲ್ಲಿ ಬೆಳೆಯುವ ಸಸ್ಯವೂ ಹೌದು. ನೀರು ಮತ್ತು ಭೂಮಿಯ ಕುರಿತು ಅಪರಿಮಿತ ಆಸಕ್ತಿಯಿದ್ದ ಜೋಗಿನ್ಮನೆಯವರ ಇಗ್ಗಪ್ಪ ಮತ್ತು ಕರುಣಾಕರ ಇಬ್ಬರೂ ಇಲ್ಲಿ ಸಾಮ್ಯತೆಯನ್ನು ಪಡೆಯುವದು ಹೀಗೆ. ನಾವು ಕಳೆದುಕೊಂಡುದೆಲ್ಲಿ ಎನ್ನುವದರ ಹುಡುಕಾಟದಲ್ಲಿರುವ ಪುರಾಣಗಳ ‘ಅಭಿಜ್ಞಾ’ನದ ನೆನಪು ಮಾಡಿಕೊಳ್ಳುವ ಕರುಣಾಕರನಿಗೆ ಅನಿಸಿದ್ದು ಕಳೆದುದನ್ನು ಕಳೆದಕಡೆಯೇ ಹುಡುಕಬೇಕು, ಹಾಗೇ ಹುಡುಕಬೇಕಾದರೆ ನಮ್ಮ ಮೂಲ ಸೆಲೆ ನೆನಪಾಗಬೇಕು.
ಅಲ್ಲಿ ಅಗೆದಾಗ ಇನ್ನೇನು ದೇವಿಯ ವಿಗ್ರಹ ಸಿಕ್ಕೇ ಬಿಟ್ಟಿತು ಎನ್ನುವ ಕುತೂಹಲದ ತೀವ್ರತೆಯಲ್ಲಿ ಓದುಗನನ್ನು ತಂದು ನಿಲ್ಲಿಸಿ ಇಣುಕಿ ನೋಡುವಾಗ ಅಲ್ಲಿ ಸಿಕ್ಕಿದ್ದು ದೇವಿಯ ವಿಗ್ರಹವಲ್ಲ. ಬದಲು ಉಕ್ಕೇರಿದ್ದು ನೀರಿನ ಒರತೆ. “ನೀರೆಂಭ ನಿಧಿ”ಯ ಮೂಲಕ ನೀರಿನ ಸಹವಾಸ ಅಂಟಿಕೊಂಡ ಲೇಖಕರು ದೇವಿಯನ್ನು ನೀರಿಗೆ ಸಮೀಕರಿಸುವ ರೀತಿಯೇ ವಿಭಿನ್ನ.
ಇಗ್ಗಪ್ಪಣ್ಣನಲ್ಲಿ ವೇದಾಂತದ ಅಶ್ವತ್ಥ ಸಂಕೇತವಾದರೆ ಇಲ್ಲಿ ಜನಪದರ ‘ಒಂದೆಲಗ’ಪಡೆದುಕೊಳ್ಳುವ ಸಂಕೇತ ಮತ್ತೂ ವಿಶಿಷ್ಠ. ಈ ಎರಡರಲ್ಲೂ ಸಾಮ್ಯವಿದೆ. ಈ ಎರಡೂ ಕತೆಯ ರಚನಾ ಕ್ರಮವೇ ಇತ್ತೀಚಿನ ಕತೆಗಳಲ್ಲಿ ಹೊಸ ರೀತಿಯದು. “ಮುತ್ತಜ್ಜನ ಊರುಗೋಲು” ಮತ್ತು “ನಾಟಕದ ಮಾರನೇ ದಿನ” ಎರಡೂ ಕತೆಗಳೂ ಹಳ್ಳಿಯ ಬದುಕಿನಲ್ಲಿರುವ ಕಳೆದು ಹೋದ ವೈಭವದ ನೆನಪುಮಾಡಿಕೊಳ್ಳುವಂತಹದ್ದು.
ಮನು ಮತ್ತು ಮಹೇಶ ಇಲ್ಲಿ ವರ್ತಮಾನದ ಪ್ರತಿನಿಧಿಗಳು. ಗೌರಕ್ಕನಿಗೆ ಮಾವನ ತಂದೆ ಊರಜ್ಜ ತಬಲಾ ಬಾರಿಸುವ ಹುಚ್ಚಿನಲ್ಲಿ ನಾಟಕದ ಖಯಾಲಿಗೆ ತೊಡಗಿ ಅಲ್ಲಿನ ಹೆಣ್ಣುಗಳ ಹಿಂದೆ ಬಿದ್ದು ಎಲ್ಲವನ್ನು ಕಳೆದುಕೊಂಡು ಬೀದಿ ಹೆಣವಾದ ದುಃಸ್ವಪ್ನ ಕಾಡುತ್ತಿರುತ್ತದೆ. ಅಪ್ಪನಿಗೆ ತನ್ನ ಅಜ್ಜನೊಳಗಿನ ಕಲಾವಿದ ತನ್ನ ಮಗನಲ್ಲಿ ಮೂಡಿಬರಲಿ ಎನ್ನುವದು ಆಶಯ. ಇದಕ್ಕೆ ಮನುವಿನ ಅಪ್ಪ ಆಶ್ರಯಿಸುವದು ಶಟ್ಟಿ ಮಾಸ್ತರರ ಜ್ಯೋತಿಷ್ಯ. “ನಾಟಕದ ಮಾರನೇ ದಿನ” ಕತೆಯ ಮಹೇಶ ಖಯಾಲಿಗಾಗಿ ವರ್ಷಕ್ಕೊಮ್ಮೆ ಆಡುವ ನಾಟಕದ ನಟ. ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಾಟಕ ಆಡುವ ಸಂಭ್ರಮವೇ ಬೇರೆ. ಅದರ ತಯಾರಿ, ತಾಲೀಮು, ಅತಿಥಿ ನಟಿಯರ ಕುರಿತು ಹಬ್ಬುವ ಸುದ್ದಿ, ನಾಟಕ ಮುಗಿದ ಮೇಲೆ ಆ ಕುರಿತು ಬರುವ ವಿಮರ್ಶೆ ಮತ್ತೆ ಮುಂದಿನ ವರ್ಷದ ನಾಟಕದ ಸಿದ್ಧತೆ; ಇವೆಲ್ಲಾ ಸಂಸ್ಕೃತಿಯ ಕೊಂಡಿಗಳು. ಇಲ್ಲಿ ಆ ಸಂಸ್ಕೃತಿಯ ಸೆಳವಿಗೆ ಸಿಕ್ಕ ಮಹೇಶ ಚಾರುದತ್ತ ಪುಲಕೇಶಿಯಾಗಿ ಅಗುವ ರೂಪಾಂತರದ ಸುತ್ತ ಕತೆ ಸಾಗುತ್ತದೆ.
ಎರಡೂ ಕಡೆ ಅಮ್ಮನ ಆತಂಕ ಸಹಜವಾಗಿ ಬಂದಿದೆ. ಮನು ಊರಿನಲ್ಲಿದ್ದೇ ಪ್ರಸಿದ್ಧ ತಬಲಾವಾದಕನಾಗುತ್ತಾನೆ. ಊರು ಕೇರಿ ಮುಖ್ಯವಲ್ಲ, ಆ ಕುರಿತಾದ ಪರಿಶ್ರಮ ಮುಖ್ಯವೆನ್ನುವದಕ್ಕೆ ಜ್ಯೋತಿಷ್ಯವನ್ನು ನೆಪಮಾಡಿಕೊಂಡು ಮನುವಿನ ಅಪ್ಪ ಮನುವಿನ ಆಶೆಗೆ ನೀರೆರೆದಿದ್ದಾನೆ. ಮಹೇಶ ನಾಟಕದ ಮಾರನೇ ದಿನ ಅಮ್ಮನ ಅಡ್ಡಿ ನಿವಾರಿಸಿಕೊಳ್ಳಲು ಊರುಬಿಟ್ಟು ಓಡಿಹೋಗಿ ನಾಟಕದ ಕಂಪನಿ ಸೇರಿದ್ದಾನೆ. ಇಬ್ಬರೂ ಪ್ರಸಿದ್ಧರಾದಾಗ ಹೆಮ್ಮೆಪಡುವದು ಆ ತಾಯಂದಿರೆ ಹಾಗೂ ಅವರ ಮೂಲಕ ಊರವರೆಲ್ಲರೂ. ಈ ವೈಭವ ಇದೀಗ ಉಳಿದಿಲ್ಲ. “ನಾಟಕದ ಮಾರನೇದಿನ”ದಲ್ಲಿ ಈ ವೈಭವ ಕಳೆದು ಹಳ್ಳಿಯಜನ ಟೀವಿಯ ಧಾರಾವಾಹಿಯಲ್ಲಿ ಮುಳುಗಿರುವದನ್ನು ತಿಳಿಸುವಾಗ ವಿಷಾದದ ಛಾಯೆ ಆವರಿಸುವದೂ ಅಷ್ಟೇ ಸತ್ಯ.
ಇನ್ನುಳಿದ ಕತೆಗಳಲ್ಲಿ ಬರುವ ‘ಚಂಡವ್ಯಾಘ್ರ’ ಪುಣ್ಯಕೋಟಿ ಕತೆಯ ಇಂದಿನ ಸ್ವರೂಪ. ಪುಣ್ಯ ಕೋಟಿಯ ಸಂತತಿಯ ಕೆಂಪಿ ಎನ್ನುವ ಆಕಳಿನ ಗುಣ ಸ್ವಭಾವಗಳಲ್ಲಿ ಬದಲಾವಣೆಯಾಗಿಲ್ಲ. ಅದೇ ಸಭ್ಯತನ, ಅದೇ ಸತ್ಯದ ಕುರಿತಾದ ನಂಬಿಕೆ, ಮುಗ್ಧತೆ ಉಳಿದುಕೊಂಡಿದೆ. ಆದರೆ ಚಂಡವ್ಯಾಘ್ರನ ಗುಣದಲ್ಲಿ ಬದಲಾವಣೆಯಾಗಿದೆ. ಆತ ಗೋಮುಖ ವ್ಯಾಘ್ರನಾಗಿ ಬದಲಾಗಿದ್ದಾನೆ. ಈ ವ್ಯಾಘ್ರಕಿಂತಲೂ ಮನುಷ್ಯ ಮತ್ತೂ ಅಪಾಯಕಾರಿ ಎನ್ನುವದನ್ನು ತಿಳಿಸಲು ಆಯ್ಕೆಮಾಡಿಕೊಂಡಿದ್ದು ಗೋವಿನ ಹಾಡಿನ ಹಿನ್ನೆಲೆಯ ವಸ್ತು. ಹಾಗಾಗಿ ಇಲ್ಲಿ ಕೆಂಪಿ ಎನ್ನುವ ಹಸು ಮತ್ತು ಗಿರಿಜೆ ಎನ್ನುವ ಮುಗ್ಧಹುಡುಗಿ ಇಬ್ಬರೂ ಮಾಂಸದ ಸರಕಾಗಿ ಬಲಿಯಾಗುತ್ತಾರೆ.
ಹಳ್ಳಿಯ ಬದುಕಿನಲ್ಲಿ ಈ ಹಿಂದಿನ ಕತೆಗಳಲ್ಲಿ ಸಹಜತೆ, ಸರಳತೆ ಮುಗ್ಧತೆಯನ್ನು ಕಾಣುವ ಕತೆಗಾರನಿಗೆ ಇಲ್ಲಿ ಅದೇ ಹಳ್ಳಿಯ ಬದುಕಿನಲ್ಲಿ ವ್ಯಾಪಿಸಿದ ಮೋಸ ವಂಚನೆ ಗೋಚರಿಸತೊಡಗಿವೆ. ಅದು ಈ ಕತೆಯಲ್ಲಿ ಮತ್ತು ‘ಆತ’ ಎನ್ನುವ ಕತೆಯಲ್ಲಿ ವ್ಯಕ್ತವಾಗಿದೆ. ‘ಆತ’ ತುಂಬಾ ಸಂಕೀರ್ಣ ವಸ್ತುವನ್ನು ಆಯ್ದುಕೊಂಡ ಕತೆ. ಆತ ಎನ್ನುವವ ಯಾರೂ ಆಗಬಹುದು. ಆತ ಎನ್ನುವವ ನಾನಲ್ಲ ನೀನೂ ಅಲ್ಲ. ಏಕೆಂದರೆ ಆತನಂತವರ ಗುಣಹೊಂದಿದ ವ್ಯಕ್ತಿತ್ವವುಳ್ಳವರೂ ಆತನಂತಹ ಗುಣವನ್ನು ಹೊಂದಿದ್ದೇನೆಂದು ಬಹಿರಂಗವಾಗಿ ವ್ಯಕ್ತಪಡಿಸಲು ಬಯಸುವದಿಲ್ಲ. ಹಾಗಾಗಿಯೇ ಗಾಂಧೀಜಿಯ ಅಭಿಮಾನಿ ಎನ್ನುತ್ತಲೇ ಆತನ ಬಾಯಿಯಿಂದ ಬರುವ ಬೋಳಿಮಗ… ಎನ್ನುವ ಮಾತುಗಳನ್ನು ಕೇಳಿದವರು ಕಣ್ಣು ಬಾಯಿ ಮತ್ತು ಕಿವಿಗಳನ್ನು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ.
ಎಂತಹ ಕತೆಗಾರನಿಗಾದರೂ ನಾಮಪದವಿಲ್ಲದ ತೃತೀಯ ವಿಭಕ್ತಿಯಲ್ಲಿ ಸರ್ವನಾಮವನ್ನು ಬಳಸಿ ಕತೆ ಕಟ್ಟುವಾಗ ಇರುವ ಸವಾಲು ಬಹಳ ಸಂಕೀರ್ಣ. ಇಲ್ಲಿ ರಾಜಶೇಖರ ಜೋಗಿನ್ಮನೆಯವರು ಈ ಏರುಗಂಬವನ್ನು ದಾಟಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಮಧ್ಯೆ ಮಧ್ಯೆ ಕತೆಗಾರ ಕತೆಯೊಳಗೆ ಇಣುಕುವದನ್ನು ಗಮನಿಸಬಹುದಾಗಿದೆ. ಕತೆಯ ಓಘಕ್ಕೆ ಇಲ್ಲಿ ಸ್ವಲ್ಪ ತಡೆ ಎಂದು ಅನಿಸಿದರೂ ಹೊಸವಸ್ತುವನ್ನು ಆಯ್ಕೆಮಾಡಿ ಕತೆಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಯಲ್ಲಿ ಗಾಂಧಿಯ ಅನುಯಾಯಿ ಎಂದುಕೊಳ್ಳುತ್ತಲೇ ಆ ಆತ ಸಂಕರನ ತಲೆಯ ಮೇಲೆ ಕಲ್ಲುಹಾಕಿ ಕೊಂದಾಗ ಹೇಳುವ ಮಾತು “ಕೆಟ್ಟದ್ದನ್ನು ಮಾಡಬಾರದು- ನಾನು ಮಾಡಿಲ್ಲ. ಕೆಟ್ಟದ್ದನ್ನು ಆಡಬಾರದು – ನೀನು ಆಡಿಲ್ಲ. ಕೆಟ್ಟದ್ದನ್ನು ನೋಡಬಾರದು – ನೀನು ನೋಡಿಲ್ಲ” ಗಾಂಧಿಯ ಅನುಯಾಯಿಗಳನ್ನು ಅಣಕಿಸುವ ಒಂದು ತುರೀಯಾವಸ್ಥೆಯನ್ನು ತಲುಪಿದೆ.ಈ ಕತೆಯಂತಹ ಕತೆಗಳು ನಮ್ಮೊಳಗಿರುವ ಆತನನ್ನು ನಮ್ಮೆದುರು ರಾಚಿತೋರಿಸುವ ಪ್ರಯತ್ನ.
“ಎಲ್ಲ ಮರೆತಿರುವಾಗ” ಕತೆಯಲ್ಲಿ ನಾಯಕನ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡು ಪ್ರೀತಿಸಿದ ಮತ್ತೆ ಅವನಿಂದ ದೂರವಾದವಳ ಸಾವಿನನಲ್ಲಿ ಮತ್ತೆ ಕಾಡುವ ಆದರೆ ಆ ಹೊತ್ತಿನಲ್ಲಿ ಈತನಿಗೆ ತಾನು ಮದುವೆ ಮಾಡಿಕೊಂಡವಳ ನೆನಪಾಗಿ ಇಬ್ಬಂದಿತನದಲ್ಲಿ ಸಿಲುಕುವ ಚಿತ್ರಣದ ನಿರೂಪಣೆಯಿದೆ. ಈ ಕತೆ ಇವರ ಹಳ್ಳಿಬದುಕಿನಷ್ಟು ಇಲ್ಲಿ ಕತೆ ಆಳಕ್ಕೆ ಇಳಿಯುವದಿಲ್ಲ. ಬಾಕೀ ಕತೆಗಳಾದ “ಬಾವಾಜಿ ಕೊಲೆ” ಪ್ರಜಾಪ್ರಭುತ್ವದ ಬೆಂಕಿ, ಲಾಟೀನು, ಸ್ವಯಂಭೂ ಕಥಾ ನಿರೂಪಣೆಯಲ್ಲಿ ಗೆಲ್ಲುತ್ತದೆ. ಜೋಗಿನ್ಮನೆಯವರು ಆರಿಸಿಕೊಂಡ ವಸ್ತು ತುಂಬಾ ಸರಳವಾದುದು. ಆದರೆ ಅದನ್ನು ನಿರೂಪಿಸುವಲ್ಲಿ ಆಯ್ದುಕೊಂಡ ವಿಧಾನಮಾತ್ರ ವಿಶಿಷ್ಠವಾದುದು. “ಲಾಟಿನಿನ ಗಾಜು ದಿನನಿತ್ಯ ರಾತ್ರಿ ತನ್ನದೇ ದೀಪಸೂಸುವ ಇಂಗಾಲಕ್ಕೆ ಕಪ್ಪಾಗಿಬಿಡುತ್ತದೆ. ಅದನ್ನು ಸುಣ್ಣದಿಂದ ಮುಸ್ಸಂಜೆಯಾಗುವದರೊಳಗೆ ಬೆಳಗುತ್ತಿರಬೇಕಾಗುತ್ತದೆ. ಬೆಳಕು ಅದೇ ಇದ್ದರೂ ಆ ಬೆಳಕಿನಲ್ಲಿ ಕಾರಣದಿಂದಲೇ ಕಪ್ಪಾಗಿ ಬಿಡುವ ಹೊತ್ತಿನಲ್ಲಿ ಮಾನಸಿಕವಾಗಿರುವ ಬಂಧಿಸಲ್ಪಟ್ಟ ತನ್ನೊಳಗಿನ ಇತಿವೃತ್ತವನ್ನು ಚಿದಾನಂದನಿಗೆ ದಾಟಲು ಗುರು ಸಹಾಯಮಾಡುತ್ತಾನೆ.
ಉತ್ತರ ಕನ್ನಡದ ಜನಜೀವನದ ಮುಗ್ಧತೆಯ ನಡುವೆ ಇಲ್ಲಿನ ಬೆಟ್ಟಗುಡ್ಡಗಳ ಒಳಗಿರುವ ಅಡಿಕೆ ತೋಟ ಆ ಅಡಿಕೆಗೆ ಬರುವ ಕೊಳೆ, ಅರಣ್ಯದ ಕಾಡು ಪ್ರಾಣಿಗಳ ಉಪಟಳದ ನಡುವೆ ಬೆಳವ ವ್ಯಕ್ತಿತ್ವದಲ್ಲಿ ಅರಳಿದ “ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ” ಓದಿಸಿಕೊಂಡು ಹೋಗಿ ಆ ನಂತರದಲ್ಲಿ ಈ ಭಾವಜೀವಿಗಳನ್ನು ನಮ್ಮಲ್ಲಿ ಹುಡುಕುವ ಒಂದು ಯಶಸ್ವೀ ಪ್ರಯತ್ನ. ಓದಲೇ ಬೇಕಾದ ಕೃತಿ ಇದು.
(ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ: ಕಥಾ ಸಂಕಲನ, ಪ್ರಕಾಶಕರು: ಸಮನ್ವಿತ ಬೆಂಗಳೂರು, ಬೆಲೆ: ರೂ. 110/-)
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.