ಜಗತ್ತು ಅಪಾರ ಸತ್ಯಗಳನ್ನು ಒಳಗೊಂಡು ಮುಚ್ಚಿಟ್ಟುಕೊಂಡು ಹುಡುಕಿಕೊಳ್ಳಿ ಎಂದು ಮುಗುಮ್ಮಾಗಿ ಕೂತಿದೆ. ನಾವೇ ನಾವು ನಾವಾಗಿ ಬೊಗಸೆಯೊಡ್ಡಿಕೊಂಡು ಸತ್ಯವನ್ನು ಹುಡುಕಿ ಹೊರಡಬೇಕಿದೆ. ಇಲ್ಲಿನ ಒಂದೊಂದು ಜೀವ ಅಜೀವಗಳಿಗೂ ಅಂತರ್ ಸಂಬಂಧವಿದೆ. ಅದನ್ನು ಅರಿತು ಒಳಗೊಂಡು ಬದುಕಬೇಕಿದೆ. ಆದರೆ ಆ ಎಡೆಯಲ್ಲಿ ನಮ್ಮ ಪ್ರಯತ್ನವೆಷ್ಟಿದೆ?! ಕೆಲವೊಮ್ಮೆ ಶೂನ್ಯ! ಇದು ಕವಿಯನ್ನು ನೋಯಿಸಿದೆ. ಮತ್ತವರು ಹೇಗಾದರೂ ಸರಿ ಒಳಗೊಂಡು ಬದುಕಬೇಕು ನಾನು ಎಂದು ಹಂಬಲಿಸುತ್ತಾರೆ. ನಾನು ನೋಯದೇ ಇತರರ ನೋವು ನನ್ನ ಗ್ರಹಿಕೆಗೆ ನಿಲುಕುವುದು ಹೇಗೆ ಸಾಧ್ಯ… ನನಗೆ ನೋವು ಗೊತ್ತಿಲ್ಲದೆ ಹೋದರೆ ಬೇರೆಯವರ ನೋವು ನನಗೆ ನಾಟಕ ಎನಿಸತೊಡಗುತ್ತದೆ…
ಆಶಾ ಜಗದೀಶ್ ಅಂಕಣ
ಅದು ಎಚ್.ನರಸಿಂಹಯ್ಯ ಕಲಾಭವನ. ಅವರಲ್ಲಿ ಕೂತಿದ್ದರು. ನಾ ಹೋದದ್ದು ಅವರನ್ನು ನೋಡಲಿಕ್ಕಾಗಿಯೇ. ಬಹುಶಃ ರಾಧೆಗೆ ಕೃಷ್ಣನನ್ನು ನೋಡುವಾಗ ಹೀಗೇ ಆಗಿದ್ದಿರಬಹುದಾ… ಅನಿಸುವಂತಹ ಭಾವಪರವಶತೆ. ಏನೆಂದರೆ ಏನೊಂದೂ ಲೆಕ್ಕಿಸದೆ ತುಂಬಿದ ಸಭೆಯನ್ನೂ ಗಮನಿಸದೆ ಅವರ ಅಡಿಗೆರಗಿಬಿಡಬೇಕು… ತುಂಬುತ್ತಿರುವ ಕಂಗಳಿಂದ ಅವರ ಪಾದ ತೊಳೆಯಬೇಕು ಎಂದು ತೀವ್ರವಾಗಿ ಅನಿಸುತ್ತಿತ್ತು… ದೇಹ ಮಂಜಿನಷ್ಟು ಮರಗಟ್ಟತೊಡಗಿತ್ತು… ಹಣೆಯ ಹಿಂಭಾಗ ಎಳೆದಂತಾಗುತ್ತಿತ್ತು… ಏನೆಂದು ಅರ್ಥವಾಗದ ರೋಮಾಂಚನ… ಕಾರ್ಯಕ್ರಮ ಮುಗಿಯಿತು. ಅವರು ವೇದಿಕೆಯಿಂದ ಇಳಿಯುತ್ತಿದ್ದರು. ಇನ್ನೇನು ಅವರ ಬಳಿಗೋಡಬೇಕು ಎಂದು ಮನಸು ಚಡಪಡಿಸುತ್ತಿತ್ತು. ಆದರೆ ದೇಹ ಕೊರಡು! ಚಲಿಸಲೇ ಇಲ್ಲ. ನಾನು ಏಳುವಷ್ಟರಲ್ಲೇ ಅವರು ಕಾರು ಹತ್ತಿ ಹೊರಟೇ ಹೋಗಿದ್ದರು.
ನಂತರ ಕೋಲಾರದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ರಾಘವೇಂದ್ರ ಪಾಟೀಲರ ಜೊತೆಗೊಮ್ಮೆ ಅಚಾನಕ್ ಅವರ ದರ್ಶನ ಭಾಗ್ಯ! ಓಹ್ ನನ್ನ ಕನಸು ಅರ್ಧ ನನಸಾದ ಘಳಿಗೆ… ಸಂತಸಕ್ಕೆ ಪಾರವೇ ಇರಲಿಲ್ಲ…
ನಂತರ ನನ್ನ ಕವಿತೆಗಳನ್ನು ಹಿಡಿದು ಅವರ ಮನೆ ತಲುಪಿದ್ದೆ (ಇದಕ್ಕೆ ಅನುವು ಮಾಡಿಕೊಟ್ಟ ಮಾಲಿನಿ ಗುರುಪ್ರಸನ್ನರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು) ಕೃಷ್ಣನ ಮುಂದೆ ಮೀರಾ ಕುಳಿತಂತೆ ಅವರ ಮುಂದೆ ಕೂತು ಅವರನ್ನು ಕಣ್ತುಂಬಿಕೊಂಡದ್ದು ಓಹ್ ಮರೆಯಲಾಗದ ಅದ್ಭುತ ಘಳಿಗೆ. ನನಗೆ ಬರೆಯುವ ಶಕ್ತಿ ಬಂದದ್ದು, ನನಗೆ ಹಾಡುವ ಕಂಠ ಬಂದದ್ದು ಬಹುಶಃ ಇದಕ್ಕಾಗಿಯೇ ಇರಬೇಕು ಅಂತ ಉತ್ಕಟವಾಗಿ ಅನಿಸಿಬಿಟ್ಟಿತು. ಕಂಠದ ತುದಿಯಂಚನ್ನು ಮೀಟುತ್ತಿದ್ದ ಪ್ರೀತಿಯ ಮೃದು ಬೆರಳೊಂದು ಹಿತವಾಗಿ ಸಂತೈಸುತ್ತಿತ್ತು….
ಹೀಗೆಲ್ಲ ಅನಿಸಬಾರದಾ… ಗೊತ್ತಿಲ್ಲ. ಹೀಗೆಲ್ಲ ಹೇಳಬಾರದಾ… ಗೊತ್ತಿಲ್ಲ. ವ್ಯವಹಾರದ ಶುಷ್ಕ ಜಗತ್ತಿಗೆ ಬಹುಶಃ ಇದು ನಗೆಪಾಟಲಿನ ವಿಷಯವಿರಬಹುದು. ಆದರೆ ನನಗಿದು ಹಾಗಲ್ಲ…
ಇದು ಹೀಗೆ ನನಸಾಗದೆ ಉಳಿದಿದ್ದರೆ ನನ್ನನ್ನು ಕೊಲ್ಲುತ್ತಿತ್ತು…. ಅವರು (ನನ್ನ) ಎಚ್ಚೆಸ್ವಿಯವರು. ಮಕ್ಕಳಾಗಿದ್ದಾಗ ಅವರ ಹಾಡುಗಳನ್ನು ಗುನುಗಿಕೊಳ್ಳುತ್ತಿದ್ದ ದಿನಗಳಿಂದ ಶುರುವಾದ ಪ್ರೀತಿ ಇದು… ಇಂದು ಭಕ್ತಿಯೊಂದಿಗೆ ಕಲೆತು ಆರಾಧಾನಾ ಭಾವವಾಗಿ ಮಡುಗಟ್ಟಿದೆ ನನ್ನಲ್ಲಿ. ಹೀಗೆಲ್ಲ ಹೇಳಲು ಸಣ್ಣ ಸಂಕೋಚವಿದೆ. ಆದರೂ ಹೇಳಿಕೊಳ್ಳುವ ಹಂಬಲ ಕಾಡುತ್ತಿದೆ….
“ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ…”
ರಾಧೆ ಪ್ರೀತಿ ಕೊಟ್ಟಿದ್ದಾಳೆ ಅದು ನಿಷ್ಕಲ್ಮಶ ಆಗುವ ಹೊತ್ತಿನಲ್ಲೇ ನಿಸ್ವಾರ್ಥವೂ ಹೌದು… ಅದು ನಿಸ್ವಾರ್ಥವಾದದ್ದರಿಂದಾಗಿಯೇ ಅಗಾಧ.. ಅದರ ಆಳ ವಿಸ್ತಾರಕ್ಕೆ ಅಳಿಯುವ ಜಗದಲ್ಲಿ ಅಳತೆಗಳಿಲ್ಲ. ಹಾಗಾಗಿಯೇ ನಿರುಪಾಯನಾದ ಕೃಷ್ಣ ಅವಳಿಗೆ ಮಾತುಕೊಟ್ಟಿದ್ದಾನೆ. ಅದು ರಾಧೆಯ ಪ್ರೀತಿಯ ಶಕ್ತಿ… ತನ್ನನ್ನೇ ಅವನಿಗೆ ಅರ್ಪಿಸಿಕೊಂಡ ಕೊಳಲಿಗೆ ಕೃಷ್ಣ ರಾಗವನ್ನು ಕೊಟ್ಟಿದ್ದಾನೆ. ಇಲ್ಲಿ ರಾಧೆಯೇ ಅವನ ಕೊಳಲು ಮತ್ತು ಕೃಷ್ಣ ತೆತ್ತ ರಾಗವೇ ಅವನ ಅಸಖ್ಖಲಿತ ಪ್ರೇಮ… ಅಂತ ಭಾವಿಸಿದಾಗ ಓದುವ ಮತ್ತು ಹಾಡುವ ಮನಸಿಗೆ ಪ್ರೇಮದ ಪರಕಾಷ್ಠೆ ತಲುಪಿದ ಅನುಭವವಾಗುತ್ತದೆ. ಅಷ್ಟಕ್ಕೂ ರಾಗದ ಅರ್ಥವೂ ಪ್ರೀತಿಯೇ ತಾನೇ…
“ಮಹಾ ಪ್ರವಾಹ ಮಹಾ ಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೇ ಪ್ರೀತಿಯ ರೀತಿ….”
ಆಹಾ… ಪ್ಲೆಟಾನಿಕ್ ಲವ್ ಅನಿಸಿಬಿಡುವಂತಹ ಸಾಲುಗಳಿವು. ಪ್ರೇಮದಲ್ಲಿ ಅದ್ದಿ ತೆಗೆದಿರಿಸಿದಂತಹ ಭಾವ…. ದೈವೀಕ! ಅವಳು ತನ್ನನ್ನೇ ತೋರೆಯಲು ಸಿದ್ಧಳಾಗುತ್ತಾಳೆ ಬೇಕಾದರೆ. ಆದರೆ ಅವನನ್ನು ಮಾತ್ರ ತೊರೆಯಲಾರಳು…. ಅವಳ ಪಾಲಿಗೆ ತನಗಿಂತಲೂ ಅವನೇ ಹೆಚ್ಚಾಗುವ ಹೊತ್ತಿಗೆ ಅವಳು ದೈಹಿಕ, ಐಹಿಕ ವಾಂಛೆಗಳಷ್ಟನ್ನೂ ಕಳೆದುಕೊಂಡು ಪರಿಶುದ್ಧ ಪ್ರೇಮವನ್ನು ಮಾತ್ರ ಉಸಿರಾಡುತ್ತಿರುತ್ತಾಳೆ. ಇಂತಹ ಪ್ರೀತಿಯ ಈ ಪರಿ ರಾಧೆಯದ್ದಲ್ಲದೆ ಇನ್ನಾರದ್ದಾಗಿರಲು ಸಾಧ್ಯ… ಕಾಮದ ಮುಸುಕಿನಲ್ಲಿ ಪ್ರೇಮವನ್ನು ಕೊಂದು ಬದುಕುವ ಹಿಪೋಕ್ರೆಟಿಕ್ ಜಗತ್ತಿಗೆ ದಾರಿ ಅಂತ ತೋರಿಸುವವಳಿದ್ದರೆ ಅದು ರಾಧೆಯೇ… ಜಗತ್ತಿನ ಮಿತಿಗೊಳಪಟ್ಟ ಕಷ್ಟ ಕಟ್ಟಳೆಗಳನ್ನು ಮೀರುವುದು ಹೇಗೆಂದು ತಿಳಿಸಿಕೊಡುವವಳಂಥ ಯಾರಾದರೂ ಇದ್ದರೆ ಅದು ರಾಧೆಯೇ…
ಇಂತಹ ಅವರ ಕವಿತೆಗಳಿಂದಲೇ ಕೃಷ್ಣ ರಾಧೆಯರ ಪ್ರೇಮವನ್ನು ಪರಿಗ್ರಹಿಸಬಹುದು ಅನಿಸಿಬಿಡುತ್ತದೆ ನನಗೆ. ಅವರ ಭಾವಗೀತೆಗಳು ನನ್ನ ಏಕಾಂತದ ಸಂಗಾತಿಗಳಾಗಿವೆ. ಅವರ ಕವಿತೆಗಳ ಒಂದೊಂದು ಪದಗಳೂ ನನ್ನ ಭಾವಕೋಶದ ತಿದಿ ಒತ್ತಿವೆ. ಕವಿತೆಯೊಂದು ಅಮರವಾಗುವುದೆಂದರೆ ಹೀಗೇ ಇರಬೇಕು… ಅವರ ಕೈಯಿಂದ ಹುಟ್ಟಿ ಅಮರವಾದ ಕವಿತೆಗಳದೊಂದು ದಂಡೇ ಇದೆ.
“ತನ್ನಾವರಣವೆ ಸೆರೆಮನೆಯಾದರೆ
ಜೀವಕೆ ಎಲ್ಲಿಯ ಮುಕ್ತಿ?!
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
ಬಯಲೇ ಜೀವನ್ಮುಕ್ತಿ
ಹೂಮೊಗವಾಡದ ಇರಿಯುವ ಮುಳ್ಳೇ
ಎಲ್ಲಿಯವರೆಗೆ ನಿನ್ನಾಟ
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
ಕಲಿಸಿದೆ ಜೀವನಪಾಠ”
ಈ ಕವಿತೆಯ ಒಂದೊಂದು ರೂಪಕವೂ ನನ್ನಲ್ಲೊಂದು ಬೆರಗಾಗಿ ನಿಂತಿವೆ. “ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ” ಮತ್ತು “ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ” ಎನ್ನುವ ಈ ಸಾಲುಗಳಂತೂ ಅತ್ಯದ್ಭುತ….
‘ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಬಹುದೇ ಅಯ್ಯಾ…’ ಎನ್ನುವ ಸಾಲಿನಷ್ಟೇ ಗಟ್ಟಿಯಾಗಿ ಇಲ್ಲಿನ ಮೊದಲೆರೆಡು ಸಾಲುಗಳು ಧ್ವನಿಸುತ್ತವೆ. ಬೆಳಕು ಮತ್ತು ಹಣತೆಯನ್ನು ನಾನಾ ರೂಪಕಗಳಿಗೆ ಅನ್ವಯಿಸಿಕೊಂಡು ಬಹಳಷ್ಟು ಜನ ಬರೆದಿದ್ದಾರೆ. ಅವೆಲ್ಲದರ ನಡುವೆ ಇಲ್ಲಿನ ರೂಪಕಗಳು ಬಹಳಾ ವಿಶೇಷ ಚಂದ ಅನಿಸಿಬಿಟ್ಟಿತು ನನಗೆ.
ಜ್ಯೋತಿ, ಇಲ್ಲಿ ಬೆಳಕಿನ ಬಟ್ಟೆಯನ್ನು ಬಿಚ್ಚುತ್ತದೆ. ಮತ್ತೆ ಅಡೆತಡೆಯೊಂದಿಲ್ಲದೆ ಹೋದರೆ ಎಷ್ಟು ದೂರ ಬೇಕಾದರೂ ಯಾವ ಮಾಧ್ಯಮದ ಸಹಾಯವಿಲ್ಲದೆ ಚಲಿಸಬಲ್ಲ ಬೆಳಕಿಗೆ ಬಯಲು ತಾನೇ ಜೀವನ್ಮುಕ್ತಿ! “ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ” ಎನ್ನುತ್ತದೆ ನಂತರದ ಸಾಲು. ತಾನು ಉರಿಯದೆ, ತಾನು ಸುಡದೆ ಬೇರೆಯವರಿಗೆ ಬೆಳಕಾಗಲು ಸಾಧ್ಯವೇ ಇಲ್ಲ ಎನ್ನುವ ಜೀವನ ಪಾಠ ಸಿಗುವುದೂ ಸಹ ಅದೇ ಬೆಳಕಿನ ಕೂಸಿನಿಂದಲೇ…
ಇಂತಹ ಅದೆಷ್ಟು ಕವಿತೆಗಳಿಗೆ, ಸಾಲುಗಳಿಗೆ ಮಾರುಹೋಗಬೇಕೋ ತಿಳಿಯುವುದಿಲ್ಲ. ಅವರ ಒಂದೇ ಮಧ್ಯಾಹ್ನ, ಮುಟ್ಟು, ಕಂಡದ್ದು, ಅಮೇರಿಕದಲ್ಲಿ ಬಿಲ್ಲು ಹಬ್ಬ, ಬೇಕಿರುವುದು ಮತ್ತು ಇನ್ನೂ ಅನೇಕ. ಹೇಳಲು ಹೊರಟರೆ ಮುಗಿಯದ ಸಾಲು ಅವರ ಚಂದದ ಕವಿತೆಗಳ ಪಟ್ಟಿ… ಅವರ ಭಾವಗೀತೆಗಳಷ್ಟೇ ಚಂದ ಅವರ ಕವಿತೆಗಳು. ಇನ್ನು ಅವರ ಶಿಶು ಸಾಹಿತ್ಯವಂತೂ ಮತ್ತೊಂದೇ ಆಳದ್ದು. ಮಕ್ಕಳ ಮನೋಧರ್ಮವರಿತವರಂತೆ, ಪರಕಾಯ ಪ್ರವೇಶ ಮಾಡಿದವರಂತೆ ಬರೆವ ಅವರ ಕವಿತೆಗಳು ಮಕ್ಕಳ “ಎಳೆ ನಾಲಿಗೆ ಮೇಲೆ ಅರಳಿದ ವರ್ಣಾಕ್ಷರ ಮಾಲೆ”ಯೇ…
“ಹಾವು ಅಂದ್ರೆ ಮರಿಗುಬ್ಬಿಗೆ ಭಾರಿ ದಿಗಲೇನೆ
ನೆನೆಸಿಕೊಂಡ್ರೆ ಮೈ ನಡಗತ್ತೆ ಹಾಡೇ ಹಗಲೇನೇ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳತ್ತೆ
ಅಮ್ಮ ಅಮ್ಮ ಬುಸ್ ಬುಸ್ ಹಾವು ಹ್ಯಾಗಿರತ್ತೆ”
ಇಂತಹ ಅವರ ಕವಿತೆಗಳಿಂದಲೇ ಕೃಷ್ಣ ರಾಧೆಯರ ಪ್ರೇಮವನ್ನು ಪರಿಗ್ರಹಿಸಬಹುದು ಅನಿಸಿಬಿಡುತ್ತದೆ ನನಗೆ. ಅವರ ಭಾವಗೀತೆಗಳು ನನ್ನ ಏಕಾಂತದ ಸಂಗಾತಿಗಳಾಗಿವೆ. ಅವರ ಕವಿತೆಗಳ ಒಂದೊಂದು ಪದಗಳೂ ನನ್ನ ಭಾವಕೋಶದ ತಿದಿ ಒತ್ತಿವೆ. ಕವಿತೆಯೊಂದು ಅಮರವಾಗುವುದೆಂದರೆ ಹೀಗೇ ಇರಬೇಕು… ಅವರ ಕೈಯಿಂದ ಹುಟ್ಟಿ ಅಮರವಾದ ಕವಿತೆಗಳದೊಂದು ದಂಡೇ ಇದೆ.
ಈ ಹಾಡು ನಾವೆಲ್ಲ ಬಹಳ ಚಿಕ್ಕವರಿದ್ದಾಗ ಡಿಡಿ1 ರಲ್ಲಿ ಪ್ರಸಾರವಾಗುತ್ತಿತ್ತು. ಆಗೆಲ್ಲಾ ನಿಜಕ್ಕೂ ದಿಗಲೆನಿಸುತ್ತಿತ್ತು. ಒಂದೆಡೆ ಭಯವಾಗಿ, ಇನ್ನೊಂದೆಡೆ ಮರಿಗುಬ್ಬಿ ಪಾಪಚ್ಚಿ ಎನಿಸಿ, ಈ ಹಾವನ್ನು ಹೊಡೆದು ಕೊಂದು ಬಿಡಬೇಕು ಎನಿಸುತ್ತಿತ್ತು. ಕೊನೆಗೆ ತಾಯಿಗುಬ್ಬಿ ಎಷ್ಟು ಚಂದ ಮಮತೆಯಿಂದ ಮಗುವನ್ನು ಲಾಲಿಸುತ್ತಾ ಪಾಠ ಕಲಿಸುತ್ತದೆ ಎನ್ನಿಸುತ್ತಿತ್ತು. ನಾವೆಲ್ಲಾ ಹಾಗೆ ಅದನ್ನು ನೋಡುತ್ತಾ ಟಿವಿಯ ಮುಂದೆ ಬಾಯಿ ಕಳೆದು ಕಣ್ಣು ಪಿಟುಕಿಸದೆ ಕೂತುಬಿಡುತ್ತಿದ್ದೆವು.
ನಂತರ ಹದಿಹರೆಯಕ್ಕೆ ಕಾಲಿಟ್ಟಾಗ ಬರುತ್ತಿದ್ದ “ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು” ಎಂಬ ಗೀತೆಯಂತೂ ನಮ್ಮ ಹದಿಹರೆಯದ ಭಾವಗಳ ಪಲ್ಲಟ, ತಾಕಲಾಟಗಳೆಲ್ಲಕ್ಕೂ ಒದಗಿ ಬಂದ ಸಾಂತ್ವನವೇ ಆಗಿತ್ತು. ಯಾರೂ ಇಲ್ಲದಾಗ ಅಮ್ಮನ ಸೀರೆಯೊಂದನ್ನು ಎಪರಾ ತೆಪರಾ ಉಟ್ಟು ಕನ್ನಡಿಯ ಮುಂದೆ ನಿಂತು, ಹಾಡಿನಲ್ಲಿ ಬರುತ್ತಿದ್ದ ಹುಡುಗಿಯಂತೇ ನಾಚುತ್ತಾ ಆ ಹಾಡನ್ನು ಗುನುಗಿಕೊಂಡಿದ್ದು ಈಗಲೂ ಕಿವಿಯಲ್ಲೊಮ್ಮೆ ರಿಂಗಣಿಸಿದಂತೆ ಭಾಸವಾಗುತ್ತದೆ… ಇದೆಲ್ಲ ಸವಿನೆನಪುಗಳಿಗಾಗಿ ನಾನವರಿಗೆ ಋಣಿ.
ಬಾಲ್ಯದ ಆ ಸುಂದರ ಅನುಭವಕ್ಕೆ ಕಾರಣ ಎಚ್ಚೆಸ್ವಿಯವರು. ಅವರ ಆ ಸುಂದರ ಗೀತೆಗಳೇ ನನ್ನಲ್ಲಿನ ಗಾಯಕಿಯನ್ನು ಹೆಕ್ಕಿ ತೆಗೆದಿದ್ದವು. ಅಂದು ಗುನುಗಿದ ಹಾಡುಗಳೆಲ್ಲವೂ ಅಳಿಸಲಾಗದಷ್ಟು ಆಳವಾಗಿ ಮನದಲ್ಲಿ ಬೇರು ಬಿಟ್ಟಿವೆ. ಈಗೆನಿಸುತ್ತದೆ ಒಬ್ಬ ಕವಿಯದು ಎಂತಹಾ ಭಾಗ್ಯ! ಅದೂ ಎಚ್ಚೆಸ್ವಿಯವರಂತಹ ಕವಿಯದ್ದು..! ಅದಾವುದೂ ಬರೀ ಅದೃಷ್ಟವಲ್ಲ, ಅವರ ಶ್ರಮ ಮತ್ತು ದೈತ್ಯ ಶಕ್ತಿ…
ಒಬ್ಬರ ನೋವಿಗೆ ಮುಲಾಮಾಗಬಲ್ಲ ಅವರ ಕವಿತೆಯ ಸಾಲುಗಳು ಅದೆಷ್ಟು ಜನರ ಪ್ರಾಣಕ್ಕೆ ವಾಯುವಾಗಿರಬಹುದೋ…
“ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವಾ?”
ಹೌದಲ್ಲ… ಜೊತೆಗಿದ್ದವರನ್ನೇ ಅರ್ಥೈಸಿಕೊಳ್ಳಲಾಗದ ನಾವು… ಅರ್ಥೈಸಿಕೊಳ್ಳಲಾಗದ್ದು ಅಸಮರ್ಥತೆಯಾದರೆ ಸೈ… ಆದರದು ಸಹಜ ಅಸಮರ್ಥತೆ ಅಲ್ಲ. ಅದು ಸ್ವಾರ್ಥ, ಅಹಂ, ವೈಷಮ್ಯ ಎನ್ನುವ ವಿಷದ ಗಿಡ. ಅದನ್ನು ನಾವೇ ಉದ್ದೇಶಪೂರ್ವಕ ಬೆಳೆಸಿ ಬಲಿಸಿದ್ದೇವೆ. ಇದು ಆಗಬಾರದ್ದಾಗಿತ್ತು. ಈಗಿನ ಸೆಲ್ ಫೋನ್ ಯುಗದಲ್ಲಿ ಅಪ್ಪ ಅಮ್ಮ ಗಂಡ ಹೆಂಡತಿಯರು ಒಟ್ಟಿಗೆ ಕೂತು ಮಾತನಾಡಲಿಕ್ಕೂ ಹತ್ತು ನಿಮಿಷ ಯಾರಲ್ಲೂ ಸಮಯವಿಲ್ಲ. ಒಂದು ವೇಳೆ ಮಾತನಾಡುವ ತುರ್ತಿದ್ದರೆ ಕಾಲ್ ಮಾಡಿಯೇ ಮಾತನಾಡಬೇಕು ಎನ್ನುವಂತಹ ತೀವ್ರ ವಿಷಾದದ ಪರಿಸ್ಥಿತಿಗೆ ತಲುಪಿಕೊಂಡುಬಿಟ್ಟಿರುವ ಈ ಸಂದರ್ಭಕ್ಕೆ ಈ ಸಾಲುಗಳು ಹೆಚ್ಚು ಪ್ರಸ್ತುತ ಎನ್ನಿಸುವಂತಾಗಿದೆ.
“ಬೇಲೂರ ಶಿಲಾಬಾಲಕಿ ಮತ್ತು ಹಸಿದ ಹುಡುಗ” ಕವಿತೆ ಅವರ ಮತ್ತೊಂದು ವಿಶಿಷ್ಟ ಕವಿತೆ. ಶಿಲಾಬಾಲಿಕೆಯನ್ನು ಶೃಂಗಾರದ ದೃಷ್ಟಿಯಿಂದ ನೋಡುವುದು ಸಾಮಾನ್ಯ. ಆದರೆ ಎಚ್ಚೆಸ್ವಿಯವರ ಈ ಕವಿತೆ ಶುರುವಾದಾಗ ಸಾಮಾನ್ಯ ನೋಟದಂತೆಯೇ ಶುರುವಾಗಿ ಒಂದು ಅದ್ಭುತ ತಿರುವಿಗೆ ಮತ್ತು ಅಂತ್ಯಕ್ಕೆ ಹೊರಳಿಕೊಳ್ಳುತ್ತದೆ. ಹಸಿದ ಹುಡುಗನೊಬ್ಬ…
“ಬೇಲೂರ ಶಿಲಾಬಾಲಿಕೆಯ ಬಳಿ ಬಂದು ಅವಳ ತೊಡೆಯ ಮೇಲೆ ಅಂಗಾಲೊತ್ತಿ ಹೆಗಲ ಸಂದಿಯಲ್ಲಿ ಕೈ ತೂರಿಸಿ ನೇತುಬಿದಗದ ಕತ್ತಿಗೆ, ಕಾತರದಿಂದ ಹೊಟ್ಟಗೆ ಹೊಟ್ಟೆ ಹಚ್ಚಿ ಅರೆಗಣ್ಣು ಮಾಡಿ ಇಷ್ಟು ದಪ್ಪದ ಅವಳ ಎಡ ಮೊಲೆಗೆ ಹಚ್ಚಿ ತುಟಿ, ಕೆನ್ನೆ ಒಳಗೆಳೆದುಕೊಂಡು ಹೀರಿದ ಮೊಲೆತೊಟ್ಟನ್ನು ಹಿಡಿದು ಕಚ್ಚಿ…”
ಏನಾಶ್ಚರ್ಯ ಇದ್ದಕ್ಕಿದ್ದಂತೆ ಅವಳ ಮೊಲೆ ದೊಡ್ಡದಾಗತೊಡಗುತ್ತದೆ, ಹಾಲಿನಿಂದ ತುಂಬಿಕೊಳ್ಳುತ್ತದೆ, ಹುಡುಗ ತನ್ನ ಹಸಿವು ತಣಿಯುವಷ್ಟು ಹಾಲು ಕುಡಿದು ಸಂತೃಪ್ತನಾಗುತ್ತಾನೆ. ಶಿಲಾಬಾಲಿಕೆ ಕೊನೆಯಲ್ಲಿ ತಾಯಿಯಂತೆ ಅವನನ್ನು ಮುದ್ದಿಸುತ್ತಾಳೆ.
ಈ ಕವಿತೆ ಓದಲು ಶುರುಮಾಡಿದಾಗ ಉಂಟು ಮಾಡಿದ ಭಾವವೆಲ್ಲ ಓದಿಯಾದ ನಂತರ ತಲೆಕೆಳಗಾಗಿಬಿಡುತ್ತದೆ. ಇಂತಹ ವಿಭಿನ್ನ ಕೋನಗಳಿಂದಾಗಿಯೇ ಅವರ ಕವಿತೆಗಳು ಭಿನ್ನವಾಗಿ ನಿಲ್ಲುತ್ತವೆ.
“ಹಡೆದವರ ಗುರುತಿಲ್ಲದ ಬೇನಾಮಿ ಮಕ್ಕಳೆ
ತೆರೆದ ಹೊಟ್ಟೆಯ ನಡುವೆ ಗುಣಿಬಿದ್ದ ಹೊಕ್ಕಳೆ
ಜಲ್ಲಿ ಕಲ್ಲೊಡೆಯುತ್ತ ಕೂತಂಥ ಒಕ್ಕಲೆ
ಎತ್ತರದ ಗೋಪುರವ ಹೊತ್ತ ಚಪ್ಪಡಿಕಲ್ಲ ತಳಮಳದ ನೋವೆ
ಹೇಗೆ ಒಳಗೊಳ್ಳುವುದು ನಿಮ್ಮ ನನ್ನೊಳಗೆ?
ಒಳಗೊಳದೆ
ಹೇಗೆ ಉಳಿಯಲಿ ಸ್ವಸ್ಥ ನಾನು ನನ್ನೊಳಗೆ?”
ಜಗತ್ತು ಅಪಾರ ಸತ್ಯಗಳನ್ನು ಒಳಗೊಂಡು ಮುಚ್ಚಿಟ್ಟುಕೊಂಡು ಹುಡುಕಿಕೊಳ್ಳಿ ಎಂದು ಮುಗುಮ್ಮಾಗಿ ಕೂತಿದೆ. ನಾವೇ ನಾವು ನಾವಾಗಿ ಬೊಗಸೆಯೊಡ್ಡಿಕೊಂಡು ಸತ್ಯವನ್ನು ಹುಡುಕಿ ಹೊರಡಬೇಕಿದೆ. ಇಲ್ಲಿನ ಒಂದೊಂದು ಜೀವ ಅಜೀವಗಳಿಗೂ ಅಂತರ್ ಸಂಬಂಧವಿದೆ. ಅದನ್ನು ಅರಿತು ಒಳಗೊಂಡು ಬದುಕಬೇಕಿದೆ. ಆದರೆ ಆ ಎಡೆಯಲ್ಲಿ ನಮ್ಮ ಪ್ರಯತ್ನವೆಷ್ಟಿದೆ?! ಕೆಲವೊಮ್ಮೆ ಶೂನ್ಯ! ಇದು ಕವಿಯನ್ನು ನೋಯಿಸಿದೆ. ಮತ್ತವರು ಹೇಗಾದರೂ ಸರಿ ಒಳಗೊಂಡು ಬದುಕಬೇಕು ನಾನು ಎಂದು ಹಂಬಲಿಸುತ್ತಾರೆ. ನಾನು ನೋಯದೇ ಇತರರ ನೋವು ನನ್ನ ಗ್ರಹಿಕೆಗೆ ನಿಲುಕುವುದು ಹೇಗೆ ಸಾಧ್ಯ… ನನಗೆ ನೋವು ಗೊತ್ತಿಲ್ಲದೆ ಹೋದರೆ ಬೇರೆಯವರ ನೋವು ನನಗೆ ನಾಟಕ ಎನಿಸತೊಡಗುತ್ತದೆ…
ಹೀಗೆ ಏನೆಲ್ಲ ಬದುಕಿನ ವಾಸ್ತವಗಳು… ಅವುಗಳನ್ನು ಎಚ್ಚೆಸ್ವಿಯವರ ಕಣ್ಣಿಂದ ನೋಡುವುದು ಮತ್ತೊಂದೇ ಅನುಭವ… ಆದರೆ ಪರಮ ಜೀವಂತಿಕೆ ಮತ್ತು ಜೀವಪ್ರೀತಿಯನ್ನು ಸ್ಫುರಿಸುವ ಅವರ ಕವಿತೆಗಳು ಎಡವಿದಾಗಲೊಮ್ಮೆ ಎಡತಾಕುತ್ತವೆ. ನೇರ ನಡೆವ ನಡಿಗೆ ಕಲಿಸುತ್ತವೆ….
“ನಾವೆಂಬ ನಾವೆಗೆ ನಾವೆ ನಾವಿಗರಾಗಿ
ತೊರೆಯನ್ನು ಹಾಯ ಬೇಕು…”
ಎನ್ನುವ ಅವರದೇ ಸಾಲಿನ ಹಾಗೆ.
ಇಂತಹ ಮಹಾನುಭಾವರು ಕನ್ನಡದ ಪ್ರತಿಷ್ಠೆ ಎನ್ನಿಸುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಈ ಸುಸಂದರ್ಭದಲ್ಲಿ ಇಷ್ಟು ಹೇಳಲು ಹೃದಯ ಹೂವಾಗಿ ಅರಳಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”