Advertisement
ರೇಗಿಸ್ತಾನದಲ್ಲಿ ಉರಿಯುವ ಬಣ್ಣಗಳು: ಹೇಮಾ ನಾಯಕ  ಪ್ರವಾಸ ಕಥನ

ರೇಗಿಸ್ತಾನದಲ್ಲಿ ಉರಿಯುವ ಬಣ್ಣಗಳು: ಹೇಮಾ ನಾಯಕ ಪ್ರವಾಸ ಕಥನ

ಶಾಮ ಸುಮ್ಮನೆ ಮಾತನಾಡುವವನಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಆಳವಾಗಿ ವಿಚಾರ ಮಾಡಿ, ಎದುರಿಗೆ ಇರುವವರಿಗೆ ಆಸಕ್ತಿ ಇದ್ದರೆ ಮಾತ್ರ ವಿಷಯ ಹಂಚಿಕೊಳ್ಳುವವನು. ನಸುಕಿನ ನಾಲ್ಕಕ್ಕೇ ಎಬ್ಬಿಸಿ ನಮ್ಮನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಹೊರಟ. ಧೋಲಿಯಾದಿಂದ ಹೊರಟು ಪೋಖ್ರನ್ ತಹಶೀಲಿನ ಹುಲ್ಲುಗಾವಲುಗಳ ಕಡೆ ಹೊರಟೆವು. ದಾರಿಯುದ್ದಕ್ಕೂ ಮೌನ, ಚಳಿಯಲ್ಲಿ ಬಾಯಿ ತೆರೆಯಲೂ ಆಗದೇ ಹಲ್ಲು ಕಡಿಯುತ್ತ ಕೂರಬೇಕಾಯಿತು. ಹೋಗಿ ತಲುಪಿದ್ದು ಎಲ್ಲಿ ಎಂದು ಗುರುತಿಸಲಾಗದಂತ ಒಣ ಕಡ್ಡಿಗಳ ನಡುವೆ. ನೀರಿನ ನೆಲೆಯಿಲ್ಲದೇ ಬರಡಾದ ಜಾಗದ ನಡುವೆ ಕೂತಾಗ ಹತ್ತೂ ದಿಕ್ಕಿನ ಗಾಳಿ ಮುಖವನ್ನು ಒಣಗಿಸಿತು.
ಹೇಮಾ ನಾಯಕ ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

ಕೊಕನಕ್ಕಿ ಕಾಲು, ಕಾಕಿ ಕಾಲು, ಕೋಳಿ ಕಾಲು – ಹೀಗೆ ಊರಿನಲ್ಲಿ ಹೆಸರು ಹಿಡಿದು ಗುರುತಿಸುವ ಎಲ್ಲ ಹಕ್ಕಿಗಳ ಕಾಲುಗಳಿಗೂ ಒಂದೊಂದು ರೂಪಕವಿದೆ. ಲೆಗ್ಗಿಂಗ್ಸ್ ಎಂದು ಕರೆಯುವ ಪ್ಯಾಂಟುಗಳು ಏಕ್ದಂ ಕಾಲೇಜಿನ ಹುಡುಗಿಯರ ಕಾಲೇರಿದಾಗ ಕೊಕನಕ್ಕಿ ಕಾಲಿನೋರೇ ಎಂದು ವರಂಡಾದಲ್ಲಿ ಕೂಗುತ್ತಿದ್ದರು. ಬರೆದವರಿಗೂ ಓದಲು ಕಷ್ಟವೆನಿಸಬಹುದಾದ ಕೈಬರಹವನ್ನು ಕಾಗೆ ಕಾಲು ಎಂದು ಕರೆಯುತ್ತಿದ್ದರು. ಹೀಗಿರುವ ಬಾಯಿಮಾತು ಬಾರೀಕು ಕಾಲಿನ ಮೇಲೆ ಒಂದು ತರಹದ ಗಮನವನ್ನು ತಂದಿಟ್ಟಿತ್ತು. ಇದರ ಆಚೆ, ಆಸ್ಟ್ರಿಚ್ ಹಕ್ಕಿಯ ಚಿತ್ರ ಕಂಡು ಅಚ್ಚರಿಯಾದರೆ, ಭಾರತದಲ್ಲೇ ಇರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯ ಬಗ್ಗೆಯ ಕುತೂಹಲವಿತ್ತು. ಆದರೆ ಅದರ ಕುರಿತು ಅಧ್ಯಯನ ಮಾಡುವ ವ್ಯವಧಾನವಿಲ್ಲದೇ ಮರೆತಿದ್ದ ಹಕ್ಕಿಯನ್ನು ಒಮ್ಮೆ ನೋಡಬೇಕೆಂದಿತ್ತು. ಡಿಸೆಂಬರಿನ ರಜೆಯಲ್ಲಿ ಜೈಸಲಮೇರ್ ಕಡೆಗೆ ಹೋಗುವ ವಿಚಾರ ಮಾಡಿದ್ದರಿಂದ ಇದನ್ನೂ ಪ್ರಯಾಣದ ಒಂದು ಭಾಗವಾಗಿ ಮಾಡಬೇಕೆಂದುಕೊಂಡೆವು. ಹೋಗುವ ಮೊದಲು, ಮರುಭೂಮಿಯ ಪಕ್ಕದ ಕುರುಚಲು ಕಾಡಿನಲ್ಲಿ ಕಳೆದ ಬರೀ ಮೂರು ದಿನಗಳು ಮನದ ಕಣ್ಣು ತೆರೆಯಿಸುವ ಅಮೂಲ್ಯ ಗಳಿಗೆಗಳಾಗುತ್ತವೆ ಎಂದು ಯಾರಾದರೂ ಹೇಳಿದ್ದರೆ ನಂಬುತ್ತಲೇ ಇರಲಿಲ್ಲವೇನೋ.

೨೦೨೪ರ ಡಿಸೆಂಬರಿನ ಕೆಟ್ಟ ಚಳಿಯ ದಿನಗಳವು. ಗಾರೋ ಹಿಲ್ಸಿನ ಮನೆಯಿಂದ ಏಳೆಂಟು ತಾಸು ಸುತ್ತಿಬಳಸಿ ಹರಿಯುವ ರಸ್ತೆಯಲ್ಲಿ ಹಾಗೋಹೀಗೋ ಗುವಾಹಟಿ ತಲುಪಿ ಅಲ್ಲಿಂದ ಜೋಧಪುರ ಮುಟ್ಟಿದೆವು. ಮುಂದೆ ಜೈಸಲಮೇರಿಗೆ ಹೋಗುತ್ತ ಮರುಭೂಮಿಯ ಮೊದಲ ಮರಳ ಕಣ ನೇರವಾಗಿ ಕಣ್ಣಿಗೆ ಹೊಕ್ಕಿತ್ತು. ನೇರ ರಸ್ತೆಗಳು, ಮರುಭೂಮಿಯ ಚಳಿಯ ಜೊತೆ ಬಿರು ಬಿಸಿಲು. ಆ ಬಿಸಿಲನ್ನು ಮೀರಿ ಕಣ್ಬಿಟ್ಟು ನೋಡಿದರೆ ಇಡೀ ಊರು ಕಾಮಾಲೆ ಇಲ್ಲದ ಕಣ್ಣಿಗೂ ಲೋಕವೆಲ್ಲ ಹಳದಿ ಎನ್ನುವಂತೆ ರಾಚುತ್ತದೆ. ತೆಳು ಹಳದಿ ಮರಳ ದಿಣ್ಣೆಗಳ, ದಿಬ್ಬಗಳ ಎದುರಲ್ಲಿ ಅವಕ್ಕೆ ಸೆಡ್ಡು ಹೊಡೆಯುವಂತೆ ಕಟ್ಟಿದ ಮರಳುಗಲ್ಲಿನ ಕೋಟೆಕೊತ್ತಲಗಳು, ಹವೇಲಿಗಳು, ಜಾಲರಿಗಳು, ಬಜಾರುಗಳು. ಹೀಗೆ ಹಳದಿಗೆ ಹಳದಿ ಕೂಡುತ್ತ ಕಳೆಯುತ್ತ, ಬಿಸಿಲಲ್ಲಿ ಎಲ್ಲವೂ ಹೊಳೆಯುತ್ತ ಜೈಸಲಮೇರ್ ‘ಚಿನ್ನದ ಶಹರ’ ಎಂದೇ ಕರೆಯಿಸಿಕೊಳ್ಳುತ್ತದೆ. ಕತ್ತಲಾವರಿಸಿದರೆ, ಜೈಸಲಮೇರಿನ ಕೋಟೆ ಸೋನಾರ್ ಕಿಲಾ ವಿದ್ಯುದಲಂಕಾರದಿಂದ ಹೊಳೆಯುತ್ತದೆ.

ಬೆಳಗಾಗುತ್ತಿದ್ದ ಹಾಗೆ ಕೋಟೆಯ ರಸ್ತೆಗಳು ಪ್ರವಾಸಿಗರಿಂದ ಗಿಜಿಗುಡುತ್ತವೆ. ಕೆಲವರು “ಸರಕಾರದ ಅನುಮತಿಯೊಂದಿಗೆ” ಎಂದು ಘೋಷಿಸಿಕೊಂಡ ಭಾಂಗ್ ಶಾಪಿನಲ್ಲಿ ತಣ್ಣಗೆ ಥಂಡೈ ಕುಡಿದು ನಶೆಯೇರಿಸಿಕೊಳ್ಳುತ್ತ ಕೋಟೆಯನ್ನೇ ನೋಡದೇ ವಾಪಾಸು ಹೋದರೆ, ಇನ್ನು ಕೆಲವರು ಊಟತಿಂಡಿ ಬಿಟ್ಟು ಕೋಟೆಯೊಳಗಿನ ಪ್ರತಿ ಮೂಲೆಯನ್ನೂ ಮುಟ್ಟಿ ಹಾಜರಿ ಹಾಕುತ್ತಿರುತ್ತಾರೆ. ಬಹಳಷ್ಟು ಜನ ಈ ಎರಡನ್ನೂ ಬಿಟ್ಟು ಹವೇಲಿಗಳ ಗಲ್ಲಿಗಲ್ಲಿಯಲ್ಲಿ ಚೌಕಾಸಿ ಮಾಡಿ ಚಂದ ಕಾಣುವ ಸಾಮಾನೆಲ್ಲವನ್ನು ಒಟ್ಟು ಮಾಡುತ್ತಿರುತ್ತಾರೆ. ಎಲ್ಲ ತರದ ಮಂದಿಗೂ ಆಗಿಬರುವಂತೆ ಏನೋ ಒಂದು ಅಲ್ಲಿ ಇರುವುದರಿಂದಲೋ ಏನೋ ಒಟ್ಟಿನಲ್ಲಿ ಜನ ಮುತ್ತಿಕೊಳ್ಳುತ್ತಾರೆ. ಹಾಗೆ ನೋಡಿದರೆ ಶಹರ ಸಣ್ಣದಾದರೂ ಸುತ್ತಮುತ್ತಲ ಹಳ್ಳಿಗಳಲ್ಲಿ ಮರುಭೂಮಿಯ ಮೌನ ಹೊತ್ತು ನಿಂತ ಅನೇಕ ಜಾಗಗಳಿವೆ. ಅಂತಹ ಒಂದು ಜಾಗ ಕುಲಧಾರಾ.

ದೆವ್ವ ಬಡಿದ ಜಾಗ ಎಂದೇ ಗುರುತಿಸಿಕೊಳ್ಳುವ ಕುಲಧಾರಾ ಒಂದು ಪರಿತ್ಯಕ್ತ ಹಳ್ಳಿ. ಹತ್ತೊಂಭತ್ತನೇ ಶತಮಾನದಲ್ಲಿ ರಾತ್ರೋರಾತ್ರಿ ಆ ಹಳ್ಳಿಯನ್ನು ಕಟ್ಟಿದ ಮಂದಿಯೇ ಬಿಟ್ಟು ನಡೆದರಂತೆ. ಹಾಗೆ ಹೋಗುವಾಗ ಮತ್ತೆ ಯಾರೂ ಅಲ್ಲಿ ನೆಲೆಸದಂತೆ ಶಾಪ ಕೊಟ್ಟು ಹೋದುದರಿಂದ ಮುಂದೆಯೂ ಯಾರೂ ನೆಲೆಸಲಿಲ್ಲ ಎಂದು ಹೇಳುತ್ತಾರೆ. ಊರ ಬಾಗಿಲು ದಾಟಿ ಒಳ ಬಂದಾಗ ದೇವಿಯ ಮಂದಿರವೊಂದಿದ್ದು, ಅದರ ಸುತ್ತಲೂ ಅಚ್ಚುಕಟ್ಟಾಗಿ ಚೌಕ, ಆಯತದ ಆಕಾರಗಳಲ್ಲಿ ಜಾಗಗಳನ್ನು ವಿಭಜಿಸಿ ಮನೆಗಳನ್ನು ಕಟ್ಟಿಕೊಂಡಿದ್ದಿರಬೇಕು. ತುಸು ದೂರದಲ್ಲಿ ಗಾಳಿಯೋ, ನೀರೋ ಕೊರೆದಿರಬಹುದಾದ ಕಲ್ಲ ಗೆರೆಗಳು ಯಾವುದೋ ಒಂದು ಕಾಲಕ್ಕೆ ನೀರ ತೊರೆಯೊಂದು ಸರಿದಾಡಿರಬಹುದಾದ ಸೂಚನೆಯನ್ನು ಕೊಡುವಂತೆ ಇವೆ. ಯಾವ ಕಾರಣಕ್ಕೆ ಬೆಳೆದ ಸಮುದಾಯವೊಂದು ಇವನ್ನೆಲ್ಲ ಬಿಟ್ಟು ನಡೆದಿರಬಹುದು ಎಂದು ಕೇಳುತ್ತ ಹೋದರೆ ತಲೆಗೊಂದು ಕತೆಗಳಿವೆ. ಕೊನೆಕೊನೆಗೆ ನೀರಿಗಾಗಿ ಪರಿತಪಿಸಿ ನೀರ ಸೆಲೆ ಸಿಗದೇ ಊರ ಬಿಟ್ಟರೆಂದೂ ಇಲ್ಲವೇ ಭೂಕಂಪದಿಂದ ಬೆದರಿ ಓಡಿದರೆಂದೂ ಹೇಳುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾದದ್ದು, ಜೈಸಲಮೇರಿನ ದಿವಾನನಾಗಿದ್ದ ಸಲೀಂ ಸಿಂಗನ ಕಣ್ಣು ಕುಲಧಾರಾದ ಹಿರಿಯನ ಮಗಳ ಮೇಲೆ ಬಿದ್ದ ಕತೆ. ಸಿಂಗನ ಹುಚ್ಚಾಟಕ್ಕೆ ಹಳ್ಳಿಯ ಸಮುದಾಯ ಒಪ್ಪದೇ ಹೋದಾಗ ಸೇಡಿಗೆ ಬಿದ್ದು ಅವರ ಮೇಲೆ ಇಲ್ಲದ ತೆರಿಗೆಗಳನ್ನು ಹೇರಿ ಸತಾಯಿಸುತ್ತಾನೆ. ಒಂದರ ಮೇಲೊಂದು ಪೆಟ್ಟು ತಿಂದ ಸಮುದಾಯ ಶಾಪ ಹಾಕಿ ಊರು ಬಿಟ್ಟು ಹೊರನಡೆಯುತ್ತದೆ. ಊರಿಗಂಟಿದ ಕಳಂಕಗಳಿಂದಾಗಿ ಖಾಲಿ ಬಿದ್ದು ಪಾಳು ಬಿದ್ದು ಹೋಗಿದ್ದ ಹಳ್ಳಿಯನ್ನು ನೋಡಲು ಈಗ ಜನ ಬರುತ್ತಾರೆ. ಹಿಂದಿನ ತಲೆಮಾರಿನ ಬದುಕಿನ ವಿವರಗಳನ್ನು ನೋಡುವುದರಲ್ಲಿ ಒಂದು ವಿಚಿತ್ರವಾದ ಆಕರ್ಷಣೆಯಿರುವುದಂತೂ ನಿಜ.

ಇತಿಹಾಸದ ಕ್ಲಾಸುಗಳಲ್ಲಿ ರಾಜ-ಮಹಾರಾಜರ, ಮಂತ್ರಿಗಳ, ದಿವಾನರ ಶಕ್ತಿ ವೈಭವಗಳ ಪ್ರದರ್ಶನ ಪಡೆದಿರುವ ನಾವು ಅಂದಿನ ಜನಸಮುದಾಯದ ಸಾಮಾನ್ಯ ಬದುಕನ್ನು, ಅದರ ಆಳದ ಹೋರಾಟವನ್ನು ತಿಳಿದುಕೊಳ್ಳಬೇಕಾಗಿದೆ. ಇಲ್ಲದೇ ಹೋದರೆ ಹೊಸ ತಲೆಮಾರಿನವರು ಅನುಭವಿಸುತ್ತಿರುವ ಪರಕೀಯತೆಯ, ಏಕಾಂಗಿತನದ ಇರುವಿಕೆಯ ಅರಿವೇ ಆಗದೇ, ವಿಶಾಲ ನದಿಯ ಕೂರ್ವೆಗಳಂತೆ ಇರುವುದು ನಾವೊಬ್ಬರೇ ಏನೋ ಎಂಬ ತಪ್ಪು ಕಲ್ಪನೆಯಲ್ಲೇ ಇರಬೇಕಾದೀತು. ಕುಲಧಾರಾದ ಗುಂಗಿನಿಂದ ಹೊರಬರಲು ಕಣ್ಣು ಮೂಗು ಬಾಯಿಯಲ್ಲಿ ನೀರೂರಿಸುವ ಲಾಲ್ ಮಾಸ್ ತಿನ್ನಬೇಕಾಯಿತು. ಅದರ ನಂತರ ಗಡಿಸಾರ್ ಕೆರೆಯನ್ನು, ರಾಜಮನೆತನದ ಸಮಾಧಿಗಳನ್ನು ಹೊಂದಿರುವ ಬಡಾ ಬಾಘನ್ನು ನೋಡಿದರೂ ಯಾಕೋ ನೆನಪಿನಲ್ಲಿ ಅಚ್ಚು ಒತ್ತದೇ ಮರುಭೂಮಿಯ ಗಾಳಿಯಲ್ಲಿ ಮರಳಂತೆ ಗುರುತು ಸಿಗದೇ ಹೋದ ಹಾಗಾಯಿತು. ಹೀಗೆ ಮೂರು-ನಾಲ್ಕು ದಿನಗಳ ಕಾಲ ಜೈಸಲಮೇರನ್ನು ಸುತ್ತಿದ ಮೇಲೆ ನಾವು ಹೊರಟಿದ್ದು ಧೋಲಿಯಾ ಎಂಬ ಹಳ್ಳಿಗೆ. ಮನುಷ್ಯ ನಿರ್ಮಿತ ಕೋಟೆಕೊತ್ತಲಗಳ, ಕೈಕೆಲಸದ ಕುಸುರಿ ಕೆತ್ತನೆಗಳ, ಮರಳುಗಲ್ಲಿನ ಅಚ್ಚರಿಗಳ ಕಂಡು ಮರುಳೇ ಆಗಿದ್ದ ನಮಗೆ ಇದಕ್ಕಿಂತಲೂ ಹೆಚ್ಚಿನ ಯಾವ ಸೌಂದರ್ಯವನ್ನು ಮನುಷ್ಯ ತಯಾರು ಮಾಡಬಹುದು ಎಂದು ಉದಾಸೀನ ಬಂದುಬಿಟ್ಟಿತ್ತೋ ಏನೋ. ಆ ಉದಾಸೀನವನ್ನು ಬಡಿದು, ಚಿನ್ನದ ಶಹರದಿಂದ ಧೂಳಿನ ನಾಡಿಗೆ ಹೊರಟೆವು. ಧೋಲಿಯಾ ಎನ್ನುವುದು ಜೋಧಪುರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಬರುವ, ಜೈಸಲಮೇರ್ ಜಿಲ್ಲೆಯ ಪೋಖ್ರನ್ ತಹಶೀಲಿನ ಒಂದು ಹಳ್ಳಿ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಗಳನ್ನೊಮ್ಮೆ ನೋಡಬೇಕೆಂದು ಯೋಚಿಸಿದಾಗ ಹಲವರು ಸೂಚಿಸಿದ್ದು ಡೆಸರ್ಟ್ ರಾಷ್ಟ್ರೀಯ ಉದ್ಯಾನವನ್ನು. ಅಳಿವಿನ ಅಂಚಿನಲ್ಲಿರುವಹಕ್ಕಿಗಳನ್ನು ಕನ್ನಡದಲ್ಲಿ ಹೆಬ್ಬಕ, ಎರೆಬೂತ, ಎರಲಾಡ ಮುಂತಾದ ಹೆಸರುಗಳಲ್ಲಿ ಕರೆದರೆ, ರಾಜಸ್ಥಾನದಲ್ಲಿ ಗೋಡಾವಣ್ ಎಂದು ಕರೆಯುತ್ತಾರಂತೆ. ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಮಾತ್ರವೇ ಕಂಡುಬರುವ ಇವು ಭಾರತದಲ್ಲಿ ಈಗ ಉಳಿದುಕೊಂಡಿರುವುದು ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ. ಈ ಹಕ್ಕಿಗಳ ಸಂಖ್ಯೆ ಇನ್ನೂರಕ್ಕಿಂತ ಕಮ್ಮಿಯಿದ್ದು, ರಾಜಸ್ಥಾನ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಇರುವುದು ಬೆರಳೆಣಿಕೆಯಷ್ಟು ಹಕ್ಕಿಗಳು ಮಾತ್ರ. ರಾಜಸ್ಥಾನದಲ್ಲಿ ಹೆಚ್ಚಾಗಿ ಈ ಹಕ್ಕಿಗಳು ಡೆಸರ್ಟ್ ರಾಷ್ಟ್ರೀಯ ಉದ್ಯಾನದಲ್ಲಿ ಇದ್ದು, ಉಳಿದವು ಅದರ ಹೊರಗೆ ಜೈಸಲಮೇರಿನ ಒಣ ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಕೆಲ ಜಾಗಗಳು ಗ್ರಾಮ ಸಮುದಾಯಗಳ ದೇವರ ಕಾಡು (ಓರಣ್)ಗಳಾದರೆ ಇನ್ನು ಹಲವು ಹಳ್ಳಿ ಜನರ ಖಾಸಗಿ ಭೂಮಿಯೋ ರೈತರ ವ್ಯವಸಾಯ ಭೂಮಿಯೋ ಆಗಿವೆ. ಇದನ್ನು ಒತ್ತಿ ಹೇಳುವುದಕ್ಕೆ ತುಂಬ ಮುಖ್ಯ ಕಾರಣಗಳಿವೆ. ನಮ್ಮಲ್ಲಿ ಜೀವವೈವಿಧ್ಯದ ಸಂರಕ್ಷಣೆಯ ವಿಷಯಕ್ಕೆ ಬಂದಾಗ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿರುವ ಜೀವಸಂಕುಲದ ಕಡೆಗೆ ಹೆಚ್ಚಿನ ಒತ್ತು ಕೊಡುವುದು ತಿಳಿದೇ ಇದೆ. ಸಂರಕ್ಷಿತ ಪ್ರದೇಶಗಳಾಚೆ ವಾಸಿಸುವ ಪ್ರಾಣಿಗಳನ್ನು ಬಹಳಷ್ಟು ಸಲ ಮಾನವ-ಪ್ರಾಣಿ ಸಂಘರ್ಷದ ನೆಲೆಗಟ್ಟಿನಲ್ಲಿ ಮಾತ್ರ ನೋಡುವುದರಿಂದ ಸಂರಕ್ಷಣೆಯನ್ನು ಆಮೂಲಾಗ್ರವಾಗಿ ಅರಿಯುವುದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಗೋಡಾವಣ್ ಹಕ್ಕಿಯ ಸಲುವಾಗಿ ತಮ್ಮ ಖಾಸಗಿ ಭೂಮಿಯನ್ನು ಮೀಸಲಿಟ್ಟ ಜೈಸಲಮೇರಿನ ಹಳ್ಳಿ ಜನಸಮುದಾಯದ ನಿಲುವುಗಳು ಸರಕಾರಿ ಮೀಟಿಂಗುಗಳ, ವಿಶ್ವವಿದ್ಯಾಲಯಗಳ ಸಂಶೋಧನೆಗಳ, ಶೋಕಿಗೆ ಕಾಡು-ಪ್ರಾಣಿ-ಪರಿಸರ ವಿಷಯ ಹೆಕ್ಕುವ ವಿದೇಶಿ ಫಂಡುಗಳ ಕಲ್ಪನೆಯನ್ನು ಎಂದಿಗೋ ಮೀರಿ, ಅನುದಿನದ ಸಾದಾಸೀದಾ ಬದುಕಿನಲ್ಲಿಯೇ ಪರಿಸರ ಹಾಗೂ ಜೀವವೈವಿಧ್ಯದ ರಕ್ಷಣೆಯ ದಾರಿ ತೋರಿಸಿಕೊಟ್ಟಿವೆ.

ಆಗೀಗ ಅವಶ್ಯಕತೆಗಳಿಗಷ್ಟೇ ಹಾರಾಡುವ ಗೋಡಾವಣ್ ಭೂಮಿಯ ಮೇಲೆಯೇ ಹೆಚ್ಚು ಓಡಾಡಿಕೊಂಡಿರುವ ಹಕ್ಕಿ. ವರ್ಷಕ್ಕೆ ಒಂದರಂತೆ ಮೊಟ್ಟೆಯಿಡುವ ಇದರ ಸಂತತಿ ಉಳಿಯಲು ಬೆಳೆಯಲು ಯಾವುದೇ ಅಡೆತಡೆಗಳಿಲ್ಲದ ಹುಲ್ಲುಗಾವಲುಗಳು, ಕುರುಚಲು ಪೊದೆಗಳಿರುವ ಬರಡು ಜಾಗಗಳು, ಅರೆ ಮರುಭೂಮಿಯಂತ ಜಾಗಗಳು ಬೇಕಾಗುತ್ತವೆ. ಇತಿಹಾಸದ ಕಷ್ಟಕರ ದಿನಗಳನ್ನು ದಾಟಿ ಇವು ಚೂರುಪಾರು ಸಂತತಿ ಉಳಿಸಿಕೊಂಡಿದ್ದೇ ಒಂದು ದೊಡ್ಡ ಕತೆ. ಬೇಟೆ, ಶಿಕಾರಿ ಮುಂತಾದ್ದರಲ್ಲಿ ಮುಂದಿದ್ದ ಬ್ರಿಟಿಷರು ಈ ಹಕ್ಕಿಯನ್ನೂ ಬಿಡದೇ ಗೇಮ್ ಬರ್ಡ್ ಆಫ್ ಇಂಡಿಯಾ ಎಂದು ಕರೆದದ್ದು ಇದೆ. ಸ್ವಾತಂತ್ರ್ಯದ ನಂತರ ಬಂದ ಹಸಿರು ಕ್ರಾಂತಿಯಿಂದ ಬರಡು ಭೂಮಿಯನ್ನು ವ್ಯವಸಾಯಕ್ಕೆ ಹಸನು ಮಾಡತೊಡಗಿದ್ದು ಕೂಡ ಇವುಗಳ ವಾಸಸ್ಥಾನವನ್ನು ಕುಗ್ಗಿಸಿತು. ಇದರಿಂದ ದೇಶದ ಗಡಿ ದಾಟಿ ಇವು ಪಾಕಿಸ್ತಾನದ ಹುಲ್ಲುಗಾವಲುಗಳ ಕಡೆ ಹೋದಾಗ, ಅಲ್ಲಿಯೂ ಶಿಕಾರಿಗೆ ಬಲಿಯಾದವು. ಮುಂದೆ ಕೈಗಾರೀಕರಣ, ನಗರೀಕರಣ ಎಲ್ಲ ಶುರುವಾಗಿ ಹಲವಾರು ಹೊಸ ಸಂಕಷ್ಟಗಳು ಬಂದವು. ಜೈಸಲಮೇರಿನ ಮರುಭೂಮಿ ಅಕ್ಕಪಕ್ಕ ಹಾದುಹೋಗುವ ವಿದ್ಯುತ್ತಿನ ಹೈಟೆನ್ಶನ್ ತಂತಿಗಳು ಇವುಗಳ ಉಳಿವಿಗೆ ಇಂದು ಬಹುದೊಡ್ಡ ಸವಾಲಾಗಿವೆ. ಇವೆಲ್ಲದರ ನಡುವೆ ಯಾರ ಒತ್ತಾಯವೂ ಇಲ್ಲದೇ ಈ ಭಾಗದ ಹಲವಾರು ಹಳ್ಳಿಯ ಜನ ತಮ್ಮ ತಮ್ಮ ಜಾಗಗಳಲ್ಲಿ ನೀರಾವರಿ ಶುರು ಮಾಡದೇ, ಜೀವನೋಪಾಯವಾದ ಕೃಷಿಯನ್ನು ಮಾಡದೇ, ತಂತಿ ಬೇಲಿಯನ್ನು ಕಟ್ಟದೇ, ಹೈವೇಯಲ್ಲಿ ಮನೆಮುಂಗಟ್ಟು, ಅಂಗಡಿಗಳನ್ನು ಮಾಡದೇ ಗೋಡಾವಣ್ ಹಕ್ಕಿಗಳ ಸಲುವಾಗಿ ಹುಲ್ಲುಗಾವಲನ್ನು ಹಾಗೇ ಬಿಟ್ಟಿದ್ದಾರೆ. ಇಂತಹ ಒಂದು ಅಪರೂಪವನ್ನು ನಮಗೆ ತೋರಿಸಿದ್ದು, ಹಲವಾರು ವಿಷಯ ತಿಳಿಹೇಳಿದ್ದು ಧೋಲಿಯಾದ ಶಾಮ (ಎಂದು ಕರೆಯೋಣ).

ಬಿಷ್ನೋಯ್ ಸಮುದಾಯಕ್ಕೆ ಸೇರಿದ ಈ ಯುವಕನ ಬದುಕು ಅಂತಿಂಥದ್ದಲ್ಲ. ಕಾಲೇಜಿನಲ್ಲಿ ಈ ಯಾವುದನ್ನೂ ಕಲಿಯದ ಇವನು ಹುಟ್ಟುತ್ತಲೇ ತನ್ನ ಸಮುದಾಯದಿಂದ ಬದುಕಿನ, ಪರಿಸರದ ಪಾಠಗಳನ್ನು ಕಲಿತವನು. ತಲೆ ಮೇಲೆ ಹಾರುವ ದೊಡ್ಡ ಗಾತ್ರದ ಗೋಡಾವಣಗಳನ್ನು, ರಣಹದ್ದುಗಳನ್ನು ನೋಡುತ್ತ, ಅವು ಕಾಣದೇ ಹೋದ ದಿನಗಳನ್ನು ದೂಡುತ್ತ, ಹೈವೇಯಲ್ಲಿ ಗಾಡಿಗಳಿಗೆ ಡಿಕ್ಕಿಯಾಗಿ ಸಾಯುವ, ಗಾಯಗೊಳ್ಳುವ ಪ್ರಾಣಿಗಳನ್ನು ಕಂಡು ಮರುಗುತ್ತ ಸುಮ್ಮನೇ ಕೂರದೇ ಪಶುಚಿಕಿತ್ಸೆಯನ್ನು ತನ್ನದೇ ರೀತಿಯಲ್ಲಿ ಕಲಿತು ಅದನ್ನು ಪ್ರಾಣಿಪಕ್ಷಿಗಳ ಜೀವ ಉಳಿಸಲು ಬಳಸಿದವನು. ಸಮಾನ ಮನಸ್ಕ ಯುವಕರ ತಂಡ ಕಟ್ಟಿಕೊಂಡು ಶಿಕಾರಿಯವರ, ಬೇಟೆಗಾರರ ಕಾರ್ಯಗಳಿಗೆ ತಡೆಯಾಗಿದ್ದಷ್ಟೇ ಅಲ್ಲದೇ, ತನ್ನ ಬದುಕನ್ನೇ ಜೀವ ಸಂರಕ್ಷಣೆಗೆ ಕೊಟ್ಟವನು. ಇದನ್ನು ಬರೆಯುವಾಗ ಎದೆಯೊಳಗೆ ಭಾರವಾದ ಕಲ್ಲು ಹೊತ್ತು ಕೂತಹಾಗೆ ಭಾಸವಾಗುತ್ತಿದೆ. ಜೈಸಲಮೇರಿಗೆ ಹೋದವರು ಮರಳುಗಾಡಿನ ಒಂಟೆ ಪ್ರಯಾಣ ಮಾಡುವುದು ಇಲ್ಲವೇ ಕನಿಷ್ಠ ಪಕ್ಷ ಅದನ್ನು ನೋಡಿ ಬರುವುದು ಸಾಮಾನ್ಯ. ಯಾಕೋ ಜನರ ರಾಶಿ ನೋಡಿ ಎಲ್ಲಿಯೂ ಹೋಗದೇ ಎರಡು-ಮೂರು ದಿನ ಧೋಲಿಯಾದಲ್ಲಿ ಕಳೆಯಬೇಕೆಂದು ಹೊರಟೆವು. ಗೋಡಾವಣ್ ನೋಡಬೇಕೆಂದಿದ್ದರಿಂದ ಡೆಸರ್ಟ್ ರಾಷ್ಟ್ರೀಯ ಉದ್ಯಾನಕ್ಕೆ ಹೋಗಲು ಸಜ್ಜಾದಾಗ ಸಿಕ್ಕಿದ್ದು ಈ ಶಾಮ. ಜೀವನೋಪಾಯಕ್ಕಾಗಿ ಆಗೀಗ ಆಸಕ್ತಿ ಇರುವವರನ್ನು ಗೋಡಾವಣ್ ತೋರಿಸಲು ಕರೆದುಕೊಂಡು ಹೋಗುತ್ತಿದ್ದ. ನಮ್ಮ ಜೊತೆ ಮಾತುಕತೆಯಾದ ಮೇಲೆ, ಸಂರಕ್ಷಿತ ವಲಯ ಎಲ್ಲ ಬಿಟ್ಟು ಊರಿನ, ಸಮುದಾಯದ ಬಳಿಗೆ ಕರೆದುಕೊಂಡು ಹೋಗುತ್ತೇನೆಂದ. ವಿಪರೀತ ಚಳಿಯ ರಾತ್ರಿಯಲ್ಲಿ ಮರಳ ಮೇಲೆ ಕುಳಿತು ಬೆಂಕಿಯೆದುರು ಚಳಿ ಕಾಯಿಸುತ್ತ, ಬಿಷ್ನೋಯಿ ಸಮುದಾಯದಲ್ಲಿ ಪಾಲಿಸಬೇಕಾದ ಪರಿಸರದ ಮೌಲ್ಯಗಳ ಬಗ್ಗೆ ಅವನು ಹೇಳುತ್ತ ಹೋದರೆ ಕೇಳುತ್ತ ಕೇಳುತ್ತ ಕಣ್ಣಲ್ಲಿ ನೀರೇ ಬಂತು.

ಶಾಮ ಸುಮ್ಮನೆ ಮಾತನಾಡುವವನಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಆಳವಾಗಿ ವಿಚಾರ ಮಾಡಿ, ಎದುರಿಗೆ ಇರುವವರಿಗೆ ಆಸಕ್ತಿ ಇದ್ದರೆ ಮಾತ್ರ ವಿಷಯ ಹಂಚಿಕೊಳ್ಳುವವನು. ನಸುಕಿನ ನಾಲ್ಕಕ್ಕೇ ಎಬ್ಬಿಸಿ ನಮ್ಮನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಹೊರಟ. ಧೋಲಿಯಾದಿಂದ ಹೊರಟು ಪೋಖ್ರನ್ ತಹಶೀಲಿನ ಹುಲ್ಲುಗಾವಲುಗಳ ಕಡೆ ಹೊರಟೆವು. ದಾರಿಯುದ್ದಕ್ಕೂ ಮೌನ, ಚಳಿಯಲ್ಲಿ ಬಾಯಿ ತೆರೆಯಲೂ ಆಗದೇ ಹಲ್ಲು ಕಡಿಯುತ್ತ ಕೂರಬೇಕಾಯಿತು. ಹೋಗಿ ತಲುಪಿದ್ದು ಎಲ್ಲಿ ಎಂದು ಗುರುತಿಸಲಾಗದಂತ ಒಣ ಕಡ್ಡಿಗಳ ನಡುವೆ. ನೀರಿನ ನೆಲೆಯಿಲ್ಲದೇ ಬರಡಾದ ಜಾಗದ ನಡುವೆ ಕೂತಾಗ ಹತ್ತೂ ದಿಕ್ಕಿನ ಗಾಳಿ ಮುಖವನ್ನು ಒಣಗಿಸಿತು. ಅದೆಲ್ಲಿತ್ತೋ ಧುತ್ತೆಂದು ಮಂಜು ಮುಸುಕಿ ಎದುರಿಗೆ ಏನೂ ಕಾಣದ ಹಾಗಾಯಿತು. ಅಲ್ಲಿಯೇ ಬಿದ್ದ ನಾಕಾರು ಕಡ್ಡಿಗಳನ್ನು ಒಟ್ಟು ಹಾಕಿ ಬೆಂಕಿ ಹಚ್ಚಿ ಕೂತೆವು. ಸೋನಾರ್ ಕಿಲಾದ ಗಲ್ಲಿಯಲ್ಲಿಯೇ ಓಡಾಟದ ಹುಮ್ಮಸ್ಸು ಇಳಿದುಹೋಗಿತ್ತು. ಹಾಗಾಗಿಯೇ ಏನೂ ನಿರೀಕ್ಷಿಸದೇ ಸುಮ್ಮನೆ ಕೂತು ಯಾವುದಕ್ಕಾಗಿ ಎಂದು ತಿಳಿಯದೇ ಕಾದೆವು. ಸುಮಾರು ಕಾದ ನಂತರ ಬಿಸಿಲು ತುಸುವೇ ಬಿದ್ದಾಗ ಗಾಡಿಯಲ್ಲಿ ಅಲ್ಲಿಯೇ ಅಕ್ಕಪಕ್ಕ ಕುರುಚಲು ಗಿಡಗಳ ನಡುವೆ ಸುತ್ತು ಹೊಡೆಯಲು ಶುರು ಮಾಡಿದೆವು. ಮಧ್ಯೆಯೆಲ್ಲೋ ಶಾಮ ನಿಧಾನಕ್ಕೆ ಗಾಡಿ ನಿಲ್ಲಿಸಿ ಏನೂ ಹೇಳದೇ ಸುಮ್ಮನೆ ಕೂತ. ತುಸು ದೂರದಲ್ಲಿ ಆಕಾರ ನೋಡಿ ನಂಬಲಾಗದೇ ಇದೇನಾ ಎಂದು ಕೇಳಿದ್ದಕ್ಕೆ ಹೌದೆಂದು ತಲೆ ಅಲ್ಲಾಡಿಸಿದನಷ್ಟೇ. ಅಲ್ಲೇ ಕೂತು ಸಮಾಧಾನದಲ್ಲಿ ಗೋಡಾವಣ್ ಹಕ್ಕಿಗಳು ತಮ್ಮ ಕೆಲಸ ಮಾಡಿಕೊಂಡು ಓಡಾಡಿಕೊಂಡಿರುವುದನ್ನು ನೋಡಿದೆವು. ಅವು ಮರುಭೂಮಿಯ ಬಿಸಿಲಲ್ಲಿ ಹಾರುವುದಂತೂ ಅದ್ಭುತವಾದ ನೋಟ. ಸುಮ್ಮನೆ ನೋಡಿ ಬಂದರೆ ಹಕ್ಕಿಯೊಂದನ್ನು ನೋಡಿ ಬಂದ ಕತೆಯಾಗುತ್ತಿತ್ತೇನೋ, ಆದರೆ ಹಕ್ಕಿಯ ಕುರಿತಾದ ಶಾಮನ ಅಪಾರ ಅನುಭವ ಮತ್ತು ಅದರಿಂದ ಹುಟ್ಟಿದ ಕತೆಗಳು ನಮ್ಮನ್ನು ಇನ್ನೊಂದೇ ಲೋಕಕ್ಕೆ ಕರೆದುಕೊಂಡು ಹೋದವು. ಶಾಮ ರೇಗಿಸ್ತಾನದ ಮಗ, ಅಲ್ಲಿಯ ಜೀವಜಂತು, ಅವುಗಳ ಚಲನವಲನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವನು ಜೈಸಲಮೇರ್ ಜಿಲ್ಲೆಯಲ್ಲಿ ಸರಕಾರದ ಹಾಗೂ ಖಾಸಗಿಯ ಹಲವಾರು ವನ್ಯಜೀವಿ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಚಿಕ್ಕ ವಯಸ್ಸಿನಲ್ಲೇ ಒಂದು ರೀತಿಯ ಮಾರ್ಗದರ್ಶಕನಾಗಿದ್ದ.

ಮರುಭೂಮಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಗಳನ್ನು ಹಾಕಿದಾಗ ಕೆಲವು ಗೋಡಾವಣ್ ಹಕ್ಕಿಗಳು ಅವುಗಳ ಕೆಳಗೆ ಸತ್ತು ಬಿದ್ದುದನ್ನು ನೋಡಿದ ಅವನು ಮತ್ತು ಅಲ್ಲಿಯ ಯುವಸಮುದಾಯ ಅದಕ್ಕೆ ಕಾರ್ಯಕಾರಣ ಸಂಬಂಧ ಹುಡುಕಿ ಅರಣ್ಯ ಇಲಾಖೆಯ, ಪರಿಸರವಾದಿಗಳ ಗಮನಕ್ಕೆ ತಂದಿತು. ಒಳ್ಳೆಯ ಫೋಟೋಗ್ರಾಫರ್ ಕೂಡ ಆಗಿರುವ ಶಾಮ ಹಾಗೆ ಸತ್ತುಬಿದ್ದಿದ್ದ ಗೋಡಾವಣಗಳ ಚಿತ್ರಗಳನ್ನು ತೋರಿಸಿದ. ಅವನ ಗೆಳೆಯ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವ ಸಲುವಾಗಿ ಶುರುವಾದ ಕಾನೂನು ಹೋರಾಟವನ್ನು, ಅದರ ಬೆಳವಣಿಗೆಗಳನ್ನು ವಿವರಿಸಿದ. ಹಲವಾರು ರಾಜ್ಯಗಳಲ್ಲಿ ಹಲವು ಸಮುದಾಯಗಳನ್ನು ಹಾಗೂ ಯುವಪೀಳಿಗೆಯನ್ನು ನೋಡಿರುವ ನಮಗೆ ಇಷ್ಟು ಸ್ಪಷ್ಟವಾಗಿ ಪರಿಸರದ ಬಗ್ಗೆ ಯೋಚಿಸುವ ಹಾಗೂ ಸ್ವಂತಕ್ಕೆ ಏನನ್ನೂ ಬಯಸದೇ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಇಂತಹ ಬಳಗ ಕಂಡಿದ್ದು ತುಂಬ ಅಪರೂಪವೇ. ಧೋಲಿಯಾದಲ್ಲಿ ಇದ್ದಷ್ಟು ಕಾಲ ಮರುಭೂಮಿಯ ಕಾಯಿಪಲ್ಲೆಗಳನ್ನೇ ತಿಂದೆವು. ಅವು ಸಿಗದಿದ್ದಾಗ ಒಣಗಿಸಿಟ್ಟಿರುವ ಖೇಜ್ರಿ ಮರದ ಬಾರೀಕು ಬೀನ್ಸಿನ ಕಡ್ಡಿಗಳಿಂದ ರುಚಿಯಾದ ಸಾಂಗ್ರಿ ಪಲ್ಲೆಯನ್ನು ತಯಾರಿಸಿದ್ದರು. ಊಟದ ನಡುವೆಯೂ ಮಾತುಕತೆ ಮುಂದುವರಿಯುತ್ತಲೇ ಇತ್ತು. ಒಂದು ಕಾಲದಲ್ಲಿ ಎಲ್ಲ ಕಡೆಗಳಲ್ಲಿ ಕಾಣಸಿಗುತ್ತಿದ್ದ ರಣಹದ್ದುಗಳ ಸಂತತಿ ಹಲವಾರು ಕಾರಣಗಳಿಂದ ಕ್ಷೀಣಿಸುತ್ತ ಇರುವುದು ಗೊತ್ತಿರುವಂಥದ್ದೇ. ಇವುಗಳ ಸಲುವಾಗಿ ಪೋಖ್ರನ್ ಹತ್ತಿರದಲ್ಲಿ ಸಮುದಾಯವೇ ಒಂದು ಜಾಗವನ್ನು ಗುರುತಿಸಿದೆ. ಅಕ್ಕಪಕ್ಕದ ಹಳ್ಳಿಗಳಲ್ಲಿ ದನಕರುಗಳು ಸತ್ತರೆ, ಹೈವೇಯಲ್ಲಿ ಗಾಡಿಗಳ ಅಡಿಗೆ ಸಿಕ್ಕಿ ಪ್ರಾಣಿಗಳು ಸತ್ತರೆ ಅವುಗಳನ್ನು ಅದೇ ಜಾಗದಲ್ಲಿ ಹಾಕುತ್ತಾರೆ. ನಾವು ಹೋದಾಗ ಹಲವಾರು ಜಾತಿಗಳ ನೂರಾರು ರಣಹದ್ದುಗಳು ನೋಡಲು ಮೊದಲ ಬಾರಿಗೆ ಹಾಗೆ ಸಿಕ್ಕಿದ್ದು, ವಿಚಿತ್ರ ಹಾಗೂ ವಿಶಿಷ್ಟವಾದ ಚಿತ್ರವಾಗಿ ಮನಸ್ಸಲ್ಲಿ ಅಚ್ಚೊತ್ತಿದೆ. ಕೆಲಸಮಯದಲ್ಲಿ ಅಲ್ಲಿ ಪಡೆದ ಅನುಭವ ಕೋಟೆಕೊತ್ತಲಗಳ ಗತವೈಭವ ನೋಡುವುದಕ್ಕಿಂತ ಹೆಚ್ಚಿನದೇನನ್ನೋ ನೀಡಿತು.

ಅನುಭವದ ಹಾಗೂ ನೆನಪಿನ ತಲೆಗೆ ಹೊಡೆದಂತೆ ಬಂದಿದ್ದು ಇದೇ ವರ್ಷದ ಮೇ ತಿಂಗಳಲ್ಲಿ ಶಾಮ ತೀರಿಕೊಂಡ ಸುದ್ದಿ. ಬೇಟೆಯ ಸುಳಿವು ಸಿಕ್ಕು ಆ ಜಾಗಕ್ಕೆ ತನ್ನ ಸಾಥಿಗಳ ಜೊತೆ ಹೋಗುವಾಗ ಹೈವೇ ಅಪಘಾತದಲ್ಲಿ ಶಾಮ ಇಲ್ಲವಾದ ಕುರಿತು ಎಲ್ಲಿಂದಲೋ ಧುತ್ತೆಂದು ಪತ್ರಿಕೆಯ ವರದಿಯೊಂದರಲ್ಲಿ ನೋಡಿದಾಗ ಆದ ಆಘಾತ ವಿವರಿಸುವಂಥದ್ದಲ್ಲ. ಯಾರನ್ನೂ ಕೇಳಲಾಗದ ಏನನ್ನೂ ಮಾಡಲಾಗದ ಹತಾಶೆ. ಅದರ ಕುರಿತು ಯೋಚಿಸಿದರೆ ನಿಜವೋ ಭ್ರಮೆಯೋ ಎಂದು ಸಂದೇಹ ಬರುವಂತೆಲ್ಲ ಆಯಿತು. ಬರಿಯ ಮೂರು ದಿನಗಳ ಪರಿಚಯದಿಂದ ಹೀಗೆ ಇನ್ನೊಬ್ಬರ ಬದುಕಿನ ಮೇಲೆ ಪ್ರಭಾವ ಬೀರುವಂತವರು ಕೆಲವೇ ಮಂದಿ. ಇದಾಗಿ ಸುಮಾರು ಆರು ತಿಂಗಳು ಕಳೆದಿವೆ. ಇದಕ್ಕಿಂತ ಹೆಚ್ಚಿಗೆ ಹೇಳಲು ಬಾಯಿಯಿಲ್ಲ. ಇಪ್ಪತ್ತೆಂಟೇ ವಯಸ್ಸಿಗೆ ಶಾಮ ಮಾಡಿದ ಕೆಲಸಗಳು ನಮಗೆ ಇಡೀ ಆಯಸ್ಸು ಕಳೆದರೂ ಮಾಡಲು ಆಗದಂತಹವು. ಅವನ ಸ್ನೇಹವಲಯ ಅವನ್ನು ಮುಂದುವರಿಸಲಿ ಎಂಬ ಹಾರೈಕೆಯಷ್ಟೇ ಸದ್ಯಕ್ಕೆ.

(ಫೋಟೋಗಳು: ಲೇಖಕರವು)

About The Author

ಹೇಮಾ ನಾಯಕ

ಹೇಮಾ ನಾಯಕ ಮೂಲತಃ ಅಂಕೋಲದವರು. ಸದ್ಯ ಕೆಲಸದ ಕಾರಣದಿಂದ ಮೇಘಾಲಯ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಕವಿತೆ ಬರೆಯುವುದು ಇವರ ಪ್ರಿಯವಾದ ಹವ್ಯಾಸ. 'ನೋವಿಗೂ ಇದೆ ಚಲನೆ' ಇವರ ಪ್ರಕಟಿತ ಕವನ ಸಂಕಲನ.

1 Comment

  1. Keerthana Srinivas

    Beautiful article. I never knew Shyam, but your words made me feel connected to his journey. It’s heartbreaking he left so soon, but thanks to voices like yours that keep his memory alive, his influence continues to inspire — including me.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ