ಮಗುವಾದರೂ ಆಗದೇ?
ಬಿಳಿ ಹಾಳೆಯ ಮೇಲೆ
ಕಪ್ಪು ಶಾಯಿಯು ಗುರುತಿಸಿದ
ಅಕ್ಷರಗಳನು, ಪದಗಳನು,
ಸಾಲುಗಳನು,
ಪ್ಯಾರಾದ ಮೇಲೆ ಪ್ಯಾರಾಗಳನು,
ಪುಸ್ತಕದ ಮೇಲೆ ಪುಸ್ತಕಗಳನು,
ಅಲ್ಪ ವಿರಾಮ, ಪೂರ್ಣ ವಿರಾಮ,
ಉದ್ಧರಣ, ಆಶ್ಚರ್ಯ ಸೂಚಕ, ಪ್ರಶ್ನಾರ್ಥಕ,
ಯಾವೊಂದನೂ ಬಿಡದೆ
ವರ್ಷಾನುಗಟ್ಟಲೆ
ಕಣ್ಣ ನೆಟ್ಟು,
ಹೃದಯವಿಟ್ಟು,
ಮನಸು ಕೊಟ್ಟು,
ಕಡೆಗೆ ಗ್ರಹಿಸಿದ್ದು,
ಆಸ್ವಾದಿಸಿದ್ದು,
ಉಳಿಸಿದ್ದು,
ಬೆಳೆಸಿದ್ದು,
ಅರಳಿಸಿದ್ದು,
ಅಳವಡಿಸಿಕೊಂಡಿದ್ದು
ಏನನ್ನು!?
ಗೀತೆ, ಕುರಾನ್, ಬೈಬಲ್,
ವೇದ, ಆಗಮ, ಉಪನಿಷತ್ತು,
ರಾಮಾಯಣ, ಮಹಾಭಾರತ,
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಗೆ
ಜೈಕಾರ ಹಾಕಲದಷ್ಟೇ ಸಾಕೇ?
ನಮ್ಮ ಒಡಲು ತಣ್ಣಗಿದ್ದು
ನಮ್ಮವರು ನೋವಕಡಲಿನಲ್ಲಿ
ಬೇಯಬೇಕೇ?
ಮನುಷ್ಯನ ಮುಖದ
ಮೇಲಿನ ನೆರಿಗೆಗಳು
ಹೇಳುವ
ನೂರು ಕತೆಗಳ,
ಮನಸಿನಾಳದ ಗೆರೆಗಳು
ಸಾರುವ ಸಾಗುವ ಅಳಲಿನ
ಅರ್ಥ ಗ್ರಹಣ,
ಭಾವ ಗ್ರಹಣ,
ರಸ ಗ್ರಹಣ,
ನಮ್ಮದಾಗಲು;
ಪರರ ಪಾತ್ರಗಳಲ್ಲಿ
ಪರಕಾಯ ಪ್ರವೇಶ ಮಾಡಲು;
ಲಘುಗುರುಗಳನೊರೆವ
ಕವಿಯಾಗಬೇಕೇ?
ಪಾತ್ರ, ಕಥಾವಸ್ತು, ಸನ್ನಿವೇಶಗಳ
ಕಟ್ಟುವ
ಕತೆಗಾರ, ಕಾದಂಬರಿಕಾರನಾಗಬೇಕೇ?
ಅಳಿಸುತ್ತಾ ಮುಗಿಸುವ,
ನಗಿಸುತ್ತಾ ಮಂಗಳ ಹಾಡುವ
ನಾಟಕಕಾರನಾಗಬೇಕೇ?
ಪಾರಮಾರ್ಥವ ಒಲಿಸಿಕೊಂಡ
ಮಹಾಯೋಗಿಯೇ ಬರಬೇಕೆ?
ವಿಜ್ಞಾನ, ತಂತ್ರಜ್ಞಾನಗಳ
ಹಿಡಿತವಿರುವ ಮೇಧಾವಿಯೇ
ಇರಬೇಕೆ?
ಮನುಷ್ಯನಾದರೆ ಸಾಲದೇ?
ಮಗುವಾದರೂ ಆಗದೇ?
ರೇವಣಸಿದ್ದಪ್ಪ ಜಿ.ಆರ್. ದಾವಣಗೆರೆ ಜಿಲ್ಲೆಯ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕ.
ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷಣ, ಚರ್ಚೆಗಳಲ್ಲಿ ಆಸಕ್ತಿ
ಸಂಕ್ರಮಣ ಸಾಹಿತ್ಯ ಸ್ಪರ್ಧೆ೨೦೧೮ರ ಕಾವ್ಯ ವಿಭಾಗದಲ್ಲಿ ಬಹುಮಾನಿತರು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ