ಓಸಿಯೆಂಬುದು ಹೊಳೆಸಾಲಿನ ದಿನದ ಮಾತುಕತೆಯ ಭಾಗವಾಗಿಹೋಯಿತು. ಪಡ್ಡೆ ಹುಡುಗರು ಹಣ ಕಟ್ಟುವುದನ್ನು ನೋಡಿ ಕೆಲವು ವಯಸ್ಸಾದ ಗಂಡಸರು ರೂಪಾಯಿ, ಎರಡು ರೂಪಾಯಿಗಳನ್ನು ತಮ್ಮ ಹೆಂಡತಿಯರ ಕಣ್ತಪ್ಪಿಸಿ ಕಟ್ಟತೊಡಗಿದರು. ಆದರೆ ನಿಧಾನವಾಗಿ ಅವರಿಗೆಲ್ಲ ತಮ್ಮ ಹೆಂಗಸರೂ ಕೂಡ ಕವಳದ ಸಂಚಿಯಲ್ಲಿ ಬಚ್ಚಿಟ್ಟ ನಾಲ್ಕಾಣೆ, ಎಂಟಾಣೆಯನ್ನು ತಮಗೆ ಗೊತ್ತಿಲ್ಲದೇ ಕಟ್ಟುತ್ತಿರುವ ಸತ್ಯ ತಿಳಿಯಿತು. ಹೀಗೆ ಇಡಿಯ ಊರಿಗೆ ಊರೇ ಓಸಿಮಯವಾಗಿ ಅದರ ಗುಂಗಿನಲ್ಲಿ ಓಲಾಡತೊಡಗಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ
ಹೊಳೆಸಾಲಿನ ಹೊಸತಲೆಮಾರಿನ ಹುಡುಗ ವಾಸು ಇದ್ದಕ್ಕಿದ್ದಂತೆ ಒಂದು ದಿನ ‘ಡುಗು ಡುಗು ಡುಗು….ಡರ‍್ರಂ….’ ಎಂದು ಸದ್ದು ಮಾಡುವ ದೊಡ್ಡ ಬೈಕಿನಲ್ಲಿ ಅಂಗಡಿಗೆ ಬಂದಿಳಿದಾಗ ಸುತ್ತಲಿದ್ದವರ ಕಿವಿಗಳೆಲ್ಲಾ ಸರಕ್ಕನೆ ಸೆಟೆದುಕೊಂಡವು. ಅಲ್ಲೆಲ್ಲೋ ಪರವೂರಿನ ಗೌಡರೊಬ್ಬರ ಮಗ ಇಂತದೊಂದು ವಾಹನವನ್ನು ಖರೀದಿಸಿ, ತಲೆಗೊಂದು ಅದೆಂಥದ್ದೋ ವಿಚಿತ್ರವಾದ ಟೊಪ್ಪಿಗೆಯನ್ನು ಹಾಕಿಕೊಂಡು ಹೀಗೆಯೇ ಓಡಿಸುವುದನ್ನು ಅವರೆಲ್ಲರೂ ನೋಡಿದ್ದರೇ ಹೊರತು ಬೈಕ್ ಎಂಬ ವಿಚಿತ್ರ ವಾಹನವನ್ನು ಹತ್ತಿರದಿಂದ ಕಂಡಿದ್ದಿಲ್ಲ. ತಮ್ಮೆಲ್ಲರಂತೆಯೇ ಸೈಕಲ್ಲನ್ನೇರಿ ದಿನವೂ ಅಂಗಡಿಗೆ ಬರುತ್ತಿದ್ದ ವಾಸುವಿಗೆ ಬರುತ್ತಿದ್ದ ಹೊಲಿಗೆ ಬಟ್ಟೆಯೂ ಅಷ್ಟಕ್ಕಷ್ಟೆ. ಹೊಳೆಸಾಲಿನ ಹುಡುಗರ ಚೆಡ್ಡಿಯ ಅಂಡು ಹೊಲಿಯುತ್ತಾ ತನಗೆ ಬರುವ ಕಿಂಚಿತ್ ಹೊಲಿಗೆಯೂ ಮರೆತುಹೋಗುವುದೆಂದು ಅವನೇ ಆಗೀಗ ತನ್ನ ಗೆಳೆಯರಲ್ಲಿ ಅಲವತ್ತುಕೊಳ್ಳುತ್ತಿದುದುಂಟು. ಏನಾದರೂ ನಾಲ್ಕು ಕಾಸು ಗಿಟ್ಟುವುದಿದ್ದರೆ ಅದು ಹೆಂಗಸರ ಕಿರಗಣಿ ಹೊಲಿಯುವುದಲ್ಲಿ ಎಂಬುದನ್ನು ಅವನು ಅನುಭವದಿಂದಲೇ ಕಂಡುಕೊಂಡಿದ್ದ. ಇಂತಿಪ್ಪ ವಾಸು ಇದೀಗ ಇಷ್ಟೊಂದು ದುಬಾರಿಯಾದ ವಾಹನದಲ್ಲಿ ಸಿನೆಮಾದ ಹೀರೋ ರಾಜಕುಮಾರನಂತೆ ಬಂದಿಳಿದರೆ ಹೊಳೆಸಾಲಿನವರಿಗೆಲ್ಲ ಏನೆನಿಸಬೇಡ? ಅವನ ಶ್ರೀಮಂತಿಕೆಯ ವಿಚಾರಣೆಗೆಂದು ಅಂಗಡಿಯ ಸುತ್ತಲೂ ಜನರ ಪ್ರವಾಹವೇ ತುಂಬಿ ತುಳುಕಿತು. “ಅಲ್ಲಾ ವಾಸು, ಇದ್ದಕ್ಕಿದ್ದಂತೆ ಶ್ರೀಮಂತ ಆಗಿಬಿಟ್ಯಲ್ಲೋ! ಭೂಮಿ, ಕಾಣಿ ಇದ್ರೆ ಬ್ಯಾಂಕ್ ಸಾಲ ಆದ್ರೂ ಮಾಡಬಹುದು ಅಂತ ಇಟ್ಕೊಳ್ಳೋಣ. ನಿಂಗ್ ನೋಡಿದ್ರೆ ವಾಸ ಮಾಡೋ ಮನೆ ಬಿಟ್ರೆ ಬೇರೊಂದು ತುಂಡು ಗದ್ದೆ ಇಲ್ಲ. ಅಂತಾದ್ರಲ್ಲಿ ಹೊಸಾ ಬೈಕ್ ತಗೊಂಡು ಬಂದಿದ್ದೀಯಲ್ಲ. ಹೇಂಗೆ?” ಎಂಬ ಪ್ರಶ್ನೆಯೊಂದಿಗೆ ಅವನ ಸುತ್ತಲೂ ಪ್ರಶ್ನಾರ್ಥಕ ನೋಟದ ಮಳೆಯೇ ಸುರಿಯಿತು. ಅವರ ಮಾತಿಗೆ ನಕ್ಕ ವಾಸು, “ಒಂಥರಾ ಲಾಟರಿಯೆ. ಆದರೆ ಲಾಟರಿ ಅಲ್ಲ.” ಎಂದು ಇನ್ನಷ್ಟು ನಿಗೂಢವಾಗಿ ಉತ್ತರಿಸಿದ. “ಏಯ್ ಬಿಡು. ಲಾಟರಿಯಲ್ಲಿಡೋ ಬೈಕ್ ನಾವು ನೋಡಿಲ್ವಾ? ಬರೀ ಬಣ್ಣದ ಬೇಗಡೆ ಅದು. ಇದಂತೂ ಒರಿಜಿನಲ್ ಬೈಕ್. ಎಲ್ಲಿ ಸಿಕ್ತು ಹೇಳೋ ವಾಸಣ್ಣ?” ಎನ್ನುತ್ತ ಪಡ್ಡೆ ಹುಡುಗರು ಅವನನ್ನು ಒತ್ತಾಯಿಸತೊಡಗಿದರು. ಅದಾಗಲೇ ಕೆಲವು ಮಕ್ಕಳು ಕರುವಿನ ಮೈಯ್ಯಷ್ಟೇ ಮೃದುವಾಗಿದ್ದ ಬೈಕನ್ನು ಸವರತೊಡಗಿದರು.
“ಹೇಯ್, ಬೈಕೊಂದು ಮುಟ್ಟಬೇಡಿ ಮಾರಾಯ. ಸ್ಕ್ರ್ಯಾಚ್ ಆಯ್ತಂದ್ರೆ ಪೇಂಟ್ ಮಾಡೋದಕ್ಕೆ ನನ್ನ ಒಂದು ತಿಂಗಳ ದುಡಿಮೆ ಸಾಲದು.” ಎಂದು ಅವರನ್ನೆಲ್ಲ ದೂರ ಓಡಿಸಿದ. ಅಂತೂ ಬೈಕ್ ತಗೊಂಡದ್ದರ ಹಿಂದಿರುವ ಕತೆಯನ್ನು ಹೇಳದಿದ್ದರೆ ಇವರೆಲ್ಲ ಇಡೀ ದಿನ ಇಲ್ಲೇ ಠಿಕಾಣಿ ಅಂತ ಗೊತ್ತಾದ ವಾಸು ಹೊಲಿಗೆಯ ಮೆಷೀನನ್ನೊಂದರಗಳಿಗೆ ಮೌನವಾಗಿಟ್ಟು ಅವರಿಗೆ ಹೊಸದೊಂದು ಲೋಕದ ಬಗ್ಗೆ ಹೇಳಿದ.
“ಮೊನ್ನೆ ಹೊಲಿಗೆ ಮೇಷಿನ್ನಿನ ಸಾಲದ ಬಾಕಿ ಕಟ್ಟಲೆಂದು ಬ್ಯಾಂಕಿಗೆ ಹೋಗಿದ್ನಾ? ಅಲ್ಲೇ ಪಕ್ಕದಲ್ಲಿರೋ ಗೂಡಂಗಡಿಯಲ್ಲಿ ಒಂದು ಸೋಡಾ ಕುಡಿಯೋಣವೆಂದು ಹೋದೆ. ಅಲ್ಲಿ ಕೆಲವರೆಲ್ಲ ಸೇರಿ ನಾಳೆಗೆ ಯಾವ ನಂಬರ್ ಬರಬಹುದು ಎಂದು ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ನಾನೂ ಕಿವಿಗೊಟ್ಟೆ. ಅದೆಂಥದ್ದೋ ಓಸಿ ಎಂಬ ಆಟವಂತೆ. ನಮ್ಮೂರ ಜಾತ್ರೆಯಲ್ಲಿ ಲಾಟರಿ ಅಂತ ಮಾಡ್ತೇವಲ್ಲ. ಅಂಥದ್ದೇ ಇನ್ನೊಂದು ಬಗೆ. ಆದರೆ ಇದು ದಿನಾ ನಡೀತದೆ. ಒಂದರಿಂದ ತೊಂಭತ್ತೊಂಭತ್ತರವರೆಗಿನ ಯಾವುದಾದರೂ ನಂಬರಿಗೆ ನಾವು ಹಣ ಕಟ್ಟಬೇಕು. ಮರುದಿನ ಓಸಿ ಸೆಂಟರಿನಲ್ಲಿ ಒಂದು ನಂಬರನ್ನು ಹೆಕ್ಕುವುದರ ಮೂಲಕ ನಂಬರಿನ ಡ್ರಾ ನಡೆಯುತ್ತದೆ. ಯಾವ ನಂಬರನ್ನು ಆರಿಸ್ತಾರೋ ಆ ನಂಬರಿಗೆ ಹಣ ಕಟ್ಟಿದವರಿಗೆಲ್ಲ ಅವರು ಕಟ್ಟಿದ ಹಣದ ನೂರು ಪಟ್ಟು ಹಣವನ್ನು ಕೊಡುತ್ತಾರೆ. ಬೇರೆ ನಂಬರಿಗೆ ಕಟ್ಟಿದವರ ಹಣವೆಲ್ಲ ಹೋಯ್ತು ಅಷ್ಟೆ.” ಎಂದು ವಿವರಣೆ ನೀಡಿದ. “ಅಂದ್ರೆ? ನೀನು ಓಸಿಗೆ ಹಣ ಕಟ್ಟಿದ್ಯಾ? ಎಷ್ಟು ಕಟ್ಟಿದೆ? ಎಲ್ಲಿ ಕಟ್ಟಿದೆ? ಎಷ್ಟು ಹಣ ಬಂತು?” ಪ್ರಶ್ನೆಗಳ ಸುರಿಮಳೆಯೇ ಸುರಿಯಿತು. ವಾಸು ವಿಚಲಿತನಾಗದೇ ಸಮಾಧಾನದಿಂದಲೇ ಅವರಿಗೆ ವಿವರಿಸಿದ. “ಅದೇ ನಾನು ತಿಂಗಳ ಕಂತು ಕಟ್ಟಲೆಂದು ಐನೂರು ರೂಪಾಯಿ ಕೂಡಿಸಿಕೊಂಡು ಹೋಗಿದ್ನಾ? ಬ್ಯಾಂಕಿನ ಮೆಟ್ಟಿಲು ತುಳಿಯುವ ಮೊದಲೇ ಅಂಗಡಿಯೊಳಗಿದ್ದೆ. ಈ ಬ್ಯಾಂಕ್ ಸಾಲ ಹೇಗೂ ಮುಗಿಯೋದಲ್ಲ, ಒಂದು ಅದೃಷ್ಟ ಪರೀಕ್ಷೆ ಮಾಡೇಬಿಡಣ ಅಂತ ಐನೂರು ರೂಪಾಯಿಯನ್ನೂ ಎಪ್ಪತ್ತರಂಕಿಗೆ ಕಟ್ಟಿ, ಅಲ್ಲಿಯೇ ನಿಂತರೆ ಹೆದರಿಕೆಯಿಂದ ಸತ್ತೇ ಹೋಗುತ್ತೇನೆ ಎನಿಸಿ ಓಡಿ ಬಂದುಬಿಟ್ಟೆ. ಮರುದಿನ ಹೋಗಿ ನೋಡಿದರೆ ಅದೇ ಅಂಕೆ ಬಂದಿತ್ತು. ನಂಗೆ ಸಿಕ್ಕಿದ ಐವತ್ತು ಸಾವಿರ ರೂಪಾಯಿಯಲ್ಲಿ ಬ್ಯಾಂಕ್ ಸಾಲದ ಮುಂದಿನ ಐದು ಕಂತು ಕಟ್ಟಿ ಈ ಬೈಕ್ ತಗೊಂಡು ಬಂದೆ.” ಎಂದು ಬೈಕ್ ಖರೀದಿಯ ಗುಟ್ಟನ್ನು ರಟ್ಟು ಮಾಡಿದ.
ಮುಂದೆ ಲೋಕಾಭಿರಾಮವಾಗಿ ಹರಟೆ ಮುಂದುವರೆದು ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಮರಳಿದರಾದರೂ ರಾತ್ರಿ ಮಲಗಿದಾಗ ಎಲ್ಲರಿಗೂ ಮತ್ತದೇ ವಿಷಯ ಬಾಧಿಸತೊಡಗಿತು. ಇವತ್ತು ಒಂದು ರೂಪಾಯಿ ಕಟ್ಟಿದರೆ ನಾಳೆ ನೂರು ರೂಪಾಯಿ ಸಿಗುವುದಾದರೆ ಯಾರಿಗೆ ಬೇಡ? ಹೋದರೆ ಒಂದು ರೂಪಾಯಿ ಹೋಯಿತು. ಬಂದರೆ ಬಂಪರ್ ಲಾಟರಿಯಲ್ವಾ? ಜತೆಗೆ ದಿನವೂ ಅದೃಷ್ಟ ಪರೀಕ್ಷೆ ನಡೆಸುವ ಅವಕಾಶ. ಇಂದು ಕಳಕೊಂಡದ್ದನ್ನು ನಾಳೆ ಮರಳಿ ಪಡೆಯಬಹುದು. ದಿನವೂ ನಸೀಬು ಖೊಟ್ಟಿಯಾಗಿರಲು ಸಾಧ್ಯವಿಲ್ಲವಲ್ಲ. ಹೀಗೆಲ್ಲ ಯೋಚಿಸುತ್ತ ಮಲಗಿದವರಿಗೆ ಕನಸಿನ ತುಂಬೆಲ್ಲ ವಾಸುವಿನ ಬೈಕೇ ಕಣ್ಣೆದುರು ಬಂದು ದಿನಕ್ಕಿಂತ ಮೊದಲೇ ಎಚ್ಚೆತ್ತರು. ವಾಸು ಅಂಗಡಿಗೆ ಬರುವುದನ್ನೇ ಕಾದು ತಮ್ಮ ಕೈಯ್ಯಲ್ಲಿರುವ ಚಿಲ್ಲರೆ ಕಾಸನ್ನು ಅವನ ಕೈಗಿಟ್ಟು ಇಂಥ ನಂಬರಿಗೆ ಬರೆಸಲು ಸಾಧ್ಯವೆ? ಎಂದು ವಿಚಾರಿಸತೊಡಗಿದರು. ಅಚಾನಕ್ ಹಣ ಬಂದನಂತರ ಮತ್ತಿದರ ಗೊಡವೆ ಬೇಡವೆಂದು ಸುಮ್ಮನಾಗಿದ್ದ ವಾಸು ಇವರ ಚಿಲ್ಲರೆ ಕಾಸು ಕಟ್ಟಲು ಅಷ್ಟು ದೂರದ ಪೇಟೆಗೆ ಹೋಗಲು ಸಿದ್ಧನಿರಲಿಲ್ಲ. ಆದರೆ ದಿನವೂ ಅವನ ಗಾಡಿಗೆ ಬೇಕಾಗುವಷ್ಟು ಪೆಟ್ರೋಲಿನ ದುಡ್ಡನ್ನೂ ತಾವೇ ಭರಿಸುತ್ತೇವೆಂದು ಅವರೆಲ್ಲರೂ ಒತ್ತಾಯಿಸಿದಾಗ ಇಲ್ಲವೆನ್ನಲಾಗಲಿಲ್ಲ. ಈಗ ವಾಸುವಿನ ಅಂಗಡಿಯಲ್ಲಿ ಬಟ್ಟೆಯ ಅಳತೆಗಳನ್ನು ಬರೆದುಕೊಳ್ಳುವ ಪಟ್ಟಿನ ಜೊತೆಗೆ ಇನ್ನೊಂದು ಓಸಿ ಪಟ್ಟಿಯೂ ಜಾಗವನ್ನು ಪಡೆದುಕೊಂಡಿತು. ಕಟ್ಟುವ ಹಣವೂ ಚಿಲ್ಲರೆಯಿಂದ ಸಣ್ಣ ನೋಟುಗಳಿಗೆ ವರ್ಗಾವಣೆಯಾಗತೊಡಗಿತು. ದಿನವೂ ಸಂಜೆ ಎಲ್ಲರ ಹಣವನ್ನು ಕೂಡಿಸಿ ಪೇಟೆಗೆ ಕೊಂಡುಹೋಗಿ ಕೊಡುವ ವಾಸು ಅಲ್ಲಿಂದ ಬರುವಾಗ ಯಾವ ನಂಬರಿಗೆ ಓಸಿ ತಾಗಿದೆ ಎಂದು ಗುರುತುಹಾಕಿಕೊಂಡು ಬಂದು ಅವರಿಗೆಲ್ಲ ಹಣವನ್ನು ನಿಯತ್ತಾಗಿ ನೀಡುತ್ತಿದ್ದ.
ಹೀಗೆ ಓಸಿಯೆಂಬ ಹೊಸದೊಂದು ರೋಗ ಹೊಳೆಸಾಲಿಗೆ ಲಗ್ಗೆಯಿಟ್ಟಿತು. ಮೊದಲೆಲ್ಲ ಹುಡುಗರು ಮಕ್ಕಳ ಈ ಆಟಕ್ಕೆ ವಾಚಾಮಗೋಚರ ಬೈಯ್ಯುತ್ತಿದ್ದ ದೊಡ್ಡವರು ಮತ್ತೆ ನೋಡೋಣವೆಂದು ತಾವೂ ಇದರಲ್ಲಿ ಕೈಯ್ಯಾಡಿಸತೊಡಗಿದರು. ಹೀಗೆ ಓಸಿಯಾಡುವವರ ಸಂಖ್ಯೆ ಹೆಚ್ಚತೊಡಗಿ, “ಇವತ್ತು ಕಟ್ಟು ವಾಸಣ್ಣ, ನಾಳೆ ಖಂಡಿತ ದುಡ್ಡು ಕೊಡುವೆ.” ಎಂಬಲ್ಲಿವರೆಗೂ ತಲುಪಿ, ಮರುದಿನ ಓಸಿ ತಾಗಲಿಲ್ಲವೆಂದು ತಿಳಿದೊಡನೆ ಮುಖ ಮರೆಸಿಕೊಂಡು ತಿರುಗುವವರ ಸಂಖ್ಯೆಯೂ ಹೆಚ್ಚತೊಡಗಿತು. ಹೊಲಿಗೆಯಂಗಡಿಯಲ್ಲಿ ಇಡೀ ದಿನ ಇದರದೇ ಲೆಕ್ಕವಾಗಿ, ಅದೊಂದು ಉಂಡಾಡಿಗಳ ಅಡ್ಡೆಯಾಗತೊಡಗಿದಾಗ ವಾಸುವಿಗೆ ತಲೆಕೆಡತೊಡಗಿತು. ಹಾಗೆಂದು ಓಸಿಯ ಗುಂಗು ಹೊಳೆಸಾಲಿನವರ ತಲೆಗೆ ಯಾಪಾಟಿ ಏರಿತ್ತೆಂದರೆ ಅದನ್ನು ನಿಲ್ಲಿಸಿದರೆ ಅನೇಕರು ಅರೆಹುಚ್ಚರಾಗುವ ಅಪಾಯವಿತ್ತು. ಅದಕ್ಕೆಂದೇ ವಾಸು ಪೇಟೆಯ ಗೂಡಂಗಡಿಯವರಲ್ಲಿ ಮಾತನಾಡಿ ಹೊಳೆಸಾಲಿಗೊಂದು ಏಜೆಂಟರನ್ನು ಗೊತ್ತುಮಾಡಿಬಿಟ್ಟ. ಹೊರಗಿನಿಂದ ಬಂದವರನ್ನು ಹಳ್ಳಿಯ ಜನರು ನಂಬಬಾರದೆಂದು ತಿಳಿದಿದ್ದ ಓಸಿಯ ಯಜಮಾನ ಹೊಳೆಸಾಲಿನಲ್ಲಿಯೇ ಅತಿಮಾತುಗಾರನೆಂದು ಜನಪ್ರಿಯನಾಗಿದ್ದ ಸಣ್ಣಯ್ಯನನ್ನು ಓಸಿ ಏಜೆಂಟ್ ಎಂದು ಅಧಿಕೃತವಾಗಿ ಘೋಷಿಸಿಬಿಟ್ಟ. ದಿನವೂ ಹೊಳೆಸಾಲಿನ ಮನೆಮನೆಗೆ ಭೇಟಿ ನೀಡುವ ಸಣ್ಣಯ್ಯ ಒಬ್ಬರ ಮನೆಯಲ್ಲಿ ಚಾ, ಇನ್ನೊಬ್ಬರ ಮನೆಯಲ್ಲಿ ಕಷಾಯ, ಮತ್ತೊಬ್ಬರ ಮನೆಯಲ್ಲಿ ಕವಳ ತಿನ್ನುತ್ತಾ, ದಿನದ ಆಗುಹೋಗುಗಳ ಬಗ್ಗೆ ಪಟ್ಟಾಂಗ ಹೊಡೆಯುತ್ತಾ, ಆ ದಿನದ ಓಸಿ ನಂಬರ್ ತಿಳಿಸಿ, ನಂಬರ್ ಬಂದವರಿಗೆ ಹೆಚ್ಚುವರಿ ಹಣ ನೀಡಿ, ಉಳಿದವರು ಯಾವ ನಂಬರಿಗೆ ಹಣ ಕಟ್ಟುತ್ತಾರೋ ಆ ನಂಬರಿಗೆ ಅವರ ಬಾಬ್ತನ್ನು ಬರೆದುಕೊಂಡು ಪೇಟೆಯ ದಾರಿ ಹಿಡಿಯುತ್ತಿದ್ದ. ಒಟ್ಟುಗೂಡಿಸಿದ ಹಣವನ್ನೆಲ್ಲ ಗೂಡಂಗಡಿಗೆ ಮುಟ್ಟಿಸಿ ಸಣ್ಣಯ್ಯ ಮನೆತಲುಪುವಾಗ ಸೂರ್ಯನೂ ಮನೆಗೆ ಸಾಗುವ ಹವಣಿಕೆಯಲ್ಲಿರುತ್ತಿದ್ದ.
ಹೀಗೆ ಓಸಿಯೆಂಬುದು ಹೊಳೆಸಾಲಿನ ದಿನದ ಮಾತುಕತೆಯ ಭಾಗವಾಗಿಹೋಯಿತು. ಪಡ್ಡೆ ಹುಡುಗರು ಹಣ ಕಟ್ಟುವುದನ್ನು ನೋಡಿ ಕೆಲವು ವಯಸ್ಸಾದ ಗಂಡಸರು ರೂಪಾಯಿ, ಎರಡು ರೂಪಾಯಿಗಳನ್ನು ತಮ್ಮ ಹೆಂಡತಿಯರ ಕಣ್ತಪ್ಪಿಸಿ ಕಟ್ಟತೊಡಗಿದರು. ಆದರೆ ನಿಧಾನವಾಗಿ ಅವರಿಗೆಲ್ಲ ತಮ್ಮ ಹೆಂಗಸರೂ ಕೂಡ ಕವಳದ ಸಂಚಿಯಲ್ಲಿ ಬಚ್ಚಿಟ್ಟ ನಾಲ್ಕಾಣೆ, ಎಂಟಾಣೆಯನ್ನು ತಮಗೆ ಗೊತ್ತಿಲ್ಲದೇ ಕಟ್ಟುತ್ತಿರುವ ಸತ್ಯ ತಿಳಿಯಿತು. ಹೀಗೆ ಇಡಿಯ ಊರಿಗೆ ಊರೇ ಓಸಿಮಯವಾಗಿ ಅದರ ಗುಂಗಿನಲ್ಲಿ ಓಲಾಡತೊಡಗಿತು. ಎಷ್ಟು ದಿನಗಳಿಂದ ಕಟ್ಟಿದರೂ ಅಲ್ಲಲ್ಲಿ ಒಬ್ಬಿಬ್ಬರಿಗೆ ಐವತ್ತು, ನೂರು ರೂಪಾಯಿಗಳ ಜಾಕ್‌ಪಾಟ್ ತಾಗಿದ್ದು ಬಿಟ್ಟರೆ ಯಾರಿಗೂ ವಾಸುವಿನಂತೆ ಬೈಕ್ ಖರೀದಿಸುವಷ್ಟು ಹಣ ಸಿಗಲಿಲ್ಲ.
ಅದೇ ಚರ್ಚೆಯಲ್ಲಿ ಮುಳುಗಿದ್ದಾಗ ಅವರಿಗೆಲ್ಲ ರಾತ್ರಿ ಬೀಳುವ ಕನಸಿನ ಆಧಾರದಲ್ಲಿ ನಾಳೆ ಬರುವ ಓಸಿ ನಂಬರನ್ನು ಊಹಿಸುವ ಹೊಸವಿಧಾನವನ್ನು ಸಣ್ಣಯ್ಯ ಹೇಳಿಕೊಟ್ಟ. ಕನಸಿನಲ್ಲಿ ಹಾವು ಬಂದರೆ ಒಂದಂಕಿ ಏಳು ಎಂಬುದು ಖಚಿತ. ಕನಸಲ್ಲಿ ಹೆಂಗಸರು ಬಂದರೆ ಒಂಭತ್ತು, ಮಕ್ಕಳನ್ನು ಕಂಡರೆ ಮೂರು, ಗಂಡಸರನ್ನು ಕಂಡರೆ ಆರು, ಪಾತ್ರೆಗಳನ್ನು ಕಂಡರೆ ಸೊನ್ನೆ, ಎತ್ತು ಬಂತೆಂದರೆ ನಾಲ್ಕು, ಕೋಳಿಗಳು ಬಂದರೆ ಎರಡು……. ಹೀಗೆ ಕನಸುಗಳ ಆಧಾರದಲ್ಲಿ ನಂಬರುಗಳ ವಿಶ್ಲೇಷಣೆ ನಡೆಯತೊಡಗಿತು. ಕಾಕತಾಳೀಯವೆಂಬಂತೆ ಹಾಗೆ ಕಟ್ಟಿದ ಒಬ್ಬಿಬ್ಬರಿಗೆ ಓಸಿಯೂ ತಾಗಿ ಕನಸಿನ ವಿಶ್ಲೇಷಣೆಯು ಹಣಪಡೆಯುವ ಪರಿಣಾಮಕಾರಿ ಪದ್ಧತಿಯೆಂದು ಪ್ರಚಾರವಾಯಿತು.
ಹೀಗೆಯೇ ವರ್ಷಗಳು ಉರುಳುತ್ತಾ, ಕಟ್ಟುವ ಹಣದ ಪ್ರಮಾಣವೂ ಏರಿಕೆಯಾಗುತ್ತಾ ಮನೆಯಲ್ಲಿರುವ ದುಡ್ಡೆಲ್ಲವೂ ಸಣ್ಣಯ್ಯನ ಚೀಲ ಸೇರತೊಡಗಿದಾಗ ಮನೆಯ ಹೆಂಗಸರು ಕಳವಳಪಡತೊಡಗಿದರು. ಮನೆಯಲ್ಲಿರುವ ಅಡಿಕೆ, ತೆಂಗು, ಬಾಳೆ ಎಲ್ಲವೂ ಮನೆಯವರಿಂದಲೇ ಕಳುವಾಗುವ ಪರಿಸ್ಥಿತಿ ಬರತೊಡಗಿದಾಗ ಮನೆನಡೆಸುವ ಜವಾಬ್ದಾರಿ ಹೊತ್ತವರು ಯೋಚಿಸತೊಡಗಿದರು. ಆದರೆ ಓಸಿಯ ನಶೆ ಹಾಗೆಲ್ಲ ಇಳಿಯುವಂಥದ್ದಾಗಿರಲಿಲ್ಲ. ತಿಂಗಳಿಗೊಂದು ಹೊಸಪ್ರಯೋಗಗಳು ಅದರಲ್ಲಿಯೂ ಆವಿಷ್ಕಾರಗೊಂಡವು. ಪ್ರತಿದಿನ ಹಣ ಕಟ್ಟುವಾಗಲೂ ಇವತ್ತೊಂದಿನ ಮಾತ್ರ ಎನ್ನುತ್ತಲೇ ಕಟ್ಟುವುದನ್ನು ಮುಂದುವರೆಸುತ್ತಿದ್ದರು. ಹೀಗಿರುವಾಗಲೇ ಬಂದ ವದಂತಿಯೆಂದರೆ 55 ನಂಬರನ್ನು ಹಿಂಬಾಲಿಸುವ ವಿಧಾನ. 55 ಎಂದಲ್ಲ, ಯಾವುದಾದರೂ ಒಂದು ನಂಬರಿಗೆ ಹಣ ಕಟ್ಟಲು ಪ್ರಾರಂಭಿಸಿ, ದಿನವೂ ಅದೇ ನಂಬರಿಗೆ ಕಟ್ಟುವ ಹಣವನ್ನು ನಾಲ್ಕಾಣೆಯಂತೆ ಏರಿಸುತ್ತಾ ಹೋಗುವುದು. ಇದರಿಂದಾಗುವ ಲಾಭವೆಂದರೆ ಯಾವ ದಿನ ಆ ನಂಬರು ಬಂದರೂ ಚಿಂತೆಯಿಲ್ಲ, ಕಟ್ಟಿದ ಹಣದೊಂದಿಗೆ ದುಪ್ಪಟ್ಟು ಹಣ ಕೈಸೇರುವುದು ಖಂಡಿತ. ಅದ್ಯಾರೋ ಶ್ರೀಮಂತರು ಈಗಾಗಲೇ 55 ನಂಬರನ್ನು ಹಿಂಬಾಲಿಸುತ್ತಿದ್ದು, ಸುಮಾರು ಸಮಯದಿಂದ ಬರದಿರುವ ಅದನ್ನು ಹಿಂಬಾಲಿಸಿದರೆ ಸಧ್ಯದಲ್ಲಿಯೇ ಆ ನಂಬರ್ ಬರುವುದರಿಂದ ಕಟ್ಟಿದ ಹಣ ವಾಪಸ್ ಬಂದೇ ಬರುತ್ತದೆಯೆಂದು ಪ್ರಚಾರವಾಯಿತು. ಈ ಸುದ್ದಿ ಮಾದೇವಿಯ ಗಂಡ ಜಟ್ಟಿಯನ್ನೂ ತಲುಪಿ, ಒಳ್ಳೆಯ ಕೆಲಸಕ್ಕೆ ತಡಮಾಡುವುದು ಸೂಕ್ತವಲ್ಲವೆಂದು ಅವನು ಮರುದಿನದಿಂದಲೇ 55 ನಂಬರನ್ನು ಹತ್ತು ರೂಪಾಯಿಗಳಿಂದ ಪ್ರಾರಂಭಿಸಿ ಹಿಂಬಾಲಿಸತೊಡಗಿದ. ಅವನಂತೆ ಇನ್ನೂ ಅನೇಕರು ಅದೇ ಸಂಖ್ಯೆಯ ಜಾಡನ್ನು ಹಿಡಿದರು.
ಬೆನ್ನು ಬೆನ್ನಿಗೆ ಹುಟ್ಟಿದ ನಾಲ್ಕು ಮಕ್ಕಳನ್ನು ಓದಿಸಲೇಬೇಕೆಂಬ ಹಠದಿಂದ ದೂರದ ಹಾಸ್ಟೆಲ್ಲಿನಲ್ಲಿಟ್ಟು ಓದಿಸುತ್ತ, ಅವರ ಪುಸ್ತಕ, ಬಟ್ಟೆಗೆ ಹಣ ಹೊಂದಿಸಲು ಹೈರಾಣಾಗುತ್ತಿದ್ದ ಮಾದೇವಿಗೆ ಜಟ್ಟಿಯ ಹುಚ್ಚಾಟಗಳು ಮೊದಲಿನಿಂದಲೂ ತಲೆ ಕೆಡಿಸಿದ್ದವು. ಇದೀಗ ಈ ಹಿಂಬಾಲಿಸುವಿಕೆಯೂ ಸೇರಿ ತಲೆಕೆಟ್ಟು ಹೋದಂತೆನಿಸಿತು. ಕಟ್ಟಬೇಡವೆಂದು ಕಟ್ಟಳೆ ಮಾಡಿದರೆ ತನಗೆ ತಿಳಿಯದಂತೆ ಕಟ್ಟುತ್ತಾನೆಂದು ಅರಿವಿದ್ದ ಅವಳು ಎಲ್ಲರೂ ಹೇಳುವಂತೆ 55 ನಂಬರೊಂದುಸಲ ಬಂದುಹೋಗಲಿ, ಮತ್ತೆ ಬಿಗಿಮಾಡಿದರಾಯಿತೆಂದು ಕಾಯತೊಡಗಿದಳು. ಹತ್ತು ಇಪ್ಪತ್ತಾಗಿ, ಇಪ್ಪತ್ತು ನಲವತ್ತಾಗಿ ಐವತ್ತರ ಅಂಚಿಗೆ ತಲುಪಿದರೂ 55 ನಂಬರಿನ ಸುಳಿವು ಇರಲಿಲ್ಲ. 55 ನಂಬರಿಗೆ ದಿನವೂ ಕಟ್ಟುವ ಹಣ 55 ರೂಪಾಯಿ ದಾಟತೊಡಗಿದಾಗ ಇನ್ನು ಸುಮ್ಮನುಳಿದರೆ ಉಳಿಗಾಲವಿಲ್ಲವೆಂದು ಸಮಯ ಕಾಯತೊಡಗಿದಳು.
ಅವಳ ಇಚ್ಛೆಯಂತೆ ಆ ದಿನ ಸಣ್ಣಯ್ಯ ಮನೆಗೆ ಬರುವಾಗ ಜಟ್ಟಿ ಅದೇತಾನೇ ಹೊಲಕ್ಕೆ ಸೊಪ್ಪಿನ ಹೊರೆ ತರಲು ಹೋಗಿದ್ದ. ಇದೇ ತಕ್ಕ ಸಮಯವೆಂದು ಅರಿತ ಮಾದೇವಿ ಅಂಗಳ ಗುಡಿಸುತ್ತಿದ್ದ ಹಿಡಿಸೂಡಿಯನ್ನೇ ಆಯುಧವನ್ನಾಗಿ ಮಾಡಿಕೊಂಡು ಸಣ್ಣಯ್ಯನೆದುರು ಝಳಪಿಸತೊಡಗಿದಳು. “ಅಲ್ಲಾ ಸಣ್ಣಯ್ಯ, ನಿಮಗಂತೂ ದುಡಿದು ತಿನ್ನೂಕೆ ದಾಡಿ. ಅದೆಂಥದ್ದೋ ಪಟ್ಟಿ ಹಿಡಕಂಡು ಊರಿನ ಹಣವನ್ನೆಲ್ಲ ಒಟ್ಟುಗೂಡಿಸಿ ಪರಭಾರೆ ಮಾಡ್ತೀರಿ. ನಮ್ಮಂಥ ಬಡವರನ್ನು ಯಾಕೆ ಸಾಯಿಸ್ತೀರಿ?” ಎಂದು ಓಂನಾಮವನ್ನು ಶುರುಮಾಡಿದಳು. ಎಂಥವರನ್ನೂ ತನ್ನ ಮಾತಿನ ಮೋಡಿಯಲ್ಲಿ ಸಿಕ್ಕಿಸಬಲ್ಲ ಸಣ್ಣಯ್ಯ ಅವಳಿಗೆ ಮುಂದೆ ಮಾತನಾಡಲು ಬಿಡದೇ, “ನೋಡು ಮಾದೇವಿ, ನಾನೇನು ನಿನ್ನ ಗಂಡನ ಹತ್ರ ಬಲವಂತವಾಗಿ ಹಣ ಕಟ್ಟಿಸಿಕೊಳ್ತಿಲ್ಲ. ಅವನು ಕೊಡ್ತಾನೆ, ನಾನು ತೆಕಂತೆ. ಅವನು ಬ್ಯಾಡ ಅಂದ್ರೆ ನಾನ್ಯಾಕೆ ಹಣ ಪಡೀಲಿ?” ಎಂದು ಸಮಜಾಯಿಸಿ ನೀಡತೊಡಗಿದ. ಮಾದೇವಿ ಮಾತ್ರ ಆ ದಿನ ಊರ ಮಾರಿಯ ಅವತಾರ ತಾಳಿದ್ದಳು, “ಇಗಾ ಸಣ್ಣಯ್ಯ, ನಾನು ಹೇಳೂದ ಜಪ್ತಿಲಿ ಮಡಿಕೊ. ನೀನು ದಿನಾ ಸೊಡ್ಡು ಜೋಲಿಸಿಕೊಂಡು ಮನೆಯಂಗಳಕ್ಕೆ ಬರದಿದ್ದರೆ ನನ್ನ ಗಂಡ ನಿನ್ನನ್ನು ಹುಡುಕಿಕೊಂಡು ಹೋಗಿ ಹಣ ಕಟ್ಟಲ್ಲ. ಅದೆಂಥದ್ದೋ 55 ನಂಬರ್ ಕತೆ ಹೇಳಿ ಅವನ ತಲೆ ಕೆಡಿಸದಿದ್ದರೆ ದಿನಾ ಇಷ್ಟೊಂದು ದುಡ್ಡನ್ನು ಕಳಕಂತಾನೂ ಇರಲಿಲ್ಲ. ನಿನ್ನ ಕತೆಯೆಲ್ಲಾ ನಂಗೆ ಬ್ಯಾಡ. ನಾಳೆಯಿಂದ ನಮ್ಮ ಅಂಗಳಕ್ಕೆ ಕಾಲಿಟ್ಯೋ, ನಿಂಗೆ ಹಿಡಿಸೂಡಿ ಪೂಜೆ ಮಾಡ್ತೆ. ಹಾಗೆ ಹೊಡೆದ್ರೆ ನನ್ನ ಗಂಡ ನನ್ನನ್ನು ಬೈದು ಸರಿಮಾಡ್ತನೆ ಅಂತೆಲ್ಲಾ ಆಸೆ ಇಟ್ಕಬೇಡ. ನಾನು ಮಾದೇವಿಯಾಗಿ ನಿನ್ನನ್ನು ಹೊಡೆಯಲ್ಲ, ಮಾರಮ್ಮನಾಗಿ ಹೊಡಿತೀನಿ. ಇಗಾ, ನನ್ನ ಮೈಮೇಲೆ ಮಾರಮ್ಮ ಬಂದು ನಿಂಗೆ ಹಿಡಿಸೂಡಿ ಪೂಜೆ ಮಾಡ್ತಳೆ. ಆಗ ನನ್ನ ಗಂಡ ತಡೆಯೋದು ಹಂಗಿರ‍್ಲಿ, ನಂಗೆ ಕಾಯಿ ಒಡೆದು ಪೂಜೆ ಮಾಡ್ತಾನೆ.” ಎಂದವಳೇ ಮಾರಿಯಂತೆ ತನ್ನ ಕೂದಲನ್ನು ಮುಖದ ತುಂಬೆಲ್ಲ ಹರಡಿ, ಕಣ್ಣು ಕೆಂಪು ಮಾಡಿ ಉರಿನೋಟ ಬೀರಿದಳು. ಅವಳ ಮುಖಭಾವ ಹೇಗಿತ್ತೆಂದರೆ ಸಣ್ಣಯ್ಯನ ಕೈಗಳು ಅವನಿಗರಿವಿಲ್ಲದಂತೆ ಜೋಡಿಸಿಕೊಂಡವು. “ಬಿಟ್ಬಿಡೇ ತಾಯೇ, ನಾಳೆಯಿಂದ ನಿಮ್ಮನಿ ಕಡೆ ಮುಖ ಕೂಡ ಹಾಕುವುದಿಲ್ಲ.” ಎಂದವನೇ ಅಲ್ಲಿಂದ ಬಿರಬಿರನೆ ನಡೆಯತೊಡಗಿದ. ಜಿಂಕೆಯಂತೆ ಅವನೆಡೆಗೆ ನೆಗೆದ ಮಾದೇವಿ ಅವನ ಜೋಳಿಗೆಯನ್ನು ಎಳೆದು ಹೇಳಿದಳು, “ಇಗಾ, ಈಗ ಹೋಗುವಾಗ ಸೊಪ್ಪಿನ ಹೊರೆ ಹೊತ್ತ ನನ್ನ ಗಂಡ ದಾರಿಲಿ ಸಿಗ್ತಾನೆ. ಅವನಿಗೆ ನೀನೆ 55 ನಂಬರ್ ಹಿಂಬಾಲಿಸುವುದು ಒಳ್ಳೇದಲ್ಲ ಅಂತ ತಿಳಿಹೇಳಿ ಹೋಗು.” ಎಂದು ಅಬ್ಬರಿಸಿದಳು. ತಲೆಯಲ್ಲಾಡಿಸಿದ ಸಣ್ಣಯ್ಯ ಇದ್ದೆನೋ, ಬಿದ್ದೆನೋ ಎಂದು ಅಲ್ಲಿಂದ ಓಡತೊಡಗಿದ.
ಹೀಗೆ ಅಲ್ಲೊಂದು, ಇಲ್ಲೊಂದು ಪ್ರತಿಭಟನೆಗಳು ನಡೆಯುತ್ತಿದ್ದರೂ ಸಣ್ಣಯ್ಯನ ಓಸಿ ವ್ಯಾಪಾರ ಹೊಳೆಸಾಲಿನಲ್ಲಿ ಸರಾಗವಾಗಿಯೇ ನಡೆಯುತ್ತಿತ್ತು. ಈರಮ್ಮನ 55 ನಂಬರ್ ಫೊಲೊ ಪ್ರಕರಣ ನಡೆಯುವವರೆಗೂ ಮುಂದುವರೆಯುತ್ತಲೇ ಹೋಯಿತು. ಊರಿಗೆಲ್ಲ ಬುದ್ದಿ ಹೇಳುವ ಈರಮ್ಮನಿಗೆ ಇಳಿವಯಸ್ಸಿನಲ್ಲಿ ಅರುಳುಮರುಳು ಆವರಿಸುವಂತೆ ಓಸಿಯ ಚಟ ಅಂಟಿಕೊಂಡೇಬಿಟ್ಟಿತು. ಊರಿನ ಬಹುತೇಕರಂತೆ 55 ನಂಬರನ್ನು ಪಟ್ಟು ಹಿಡಿದು ಪೋಲೋ ಮಾಡತೊಡಗಿದಳು. ಮನೆಯಲ್ಲಿರುವ ಹಣವೆಲ್ಲ ಖಾಲಿಯಾಗಿ, ಪಾತ್ರೆ ಪಗಡೆಗಳು ಅಡವಾಗಿ ಕೊನೆಯಲ್ಲಿ ಅವಳ ತವರಿನ ಆಸ್ತಿಯಾದ ಕಟ್ಟಾಣಿ ಹಾರವನ್ನು ಮಾರುವವರೆಗೂ ಬಂದುಮುಟ್ಟಿತು. ತನ್ನ ಜೀವಕ್ಕಿಂತ ಪ್ರೀತಿಸುತ್ತಿದ್ದ ಆ ಸರವನ್ನು, ಇದುವರೆಗೂ ಯಾರಿಗೂ ಕೈಯ್ಯಲ್ಲಿ ಮುಟ್ಟಿನೋಡಲೂ ಕೊಡದ ಸರವನ್ನು, ಎಂತೆಂಥ ಕಷ್ಟದ ದಿನಗಳಲ್ಲೂ ಮಾರದೇ ಉಳಿಸಿಕೊಂಡಿದ್ದ ಸರವನ್ನು ದೂಸರಾ ಯೋಚಸದೇ ಸರಾಫು ಕಟ್ಟೆಯಲ್ಲಿ ಮಾರಾಟ ಮಾಡಿ 55 ನಂಬರನ್ನು ಹಿಂಬಾಲಿಸತೊಡಗಿದಳು. ಅದರ ಹಣವೂ ಮುಗಿದಾಗ ಮನೆಯ ಬಚ್ಚಲಿನಲ್ಲಿರುವ ಹಂಡೆಯನ್ನೇ ಮಾರಾಟಮಾಡಿ ಸಾವಿರಕ್ಕೆ ಹತ್ತಿರವಾದ ಕಂತನ್ನು ಕಟ್ಟಿ ಓಸಿಗಾಗಿ ಜೀವನ್ಮರಣ ಹೋರಾಟವನ್ನೇ ಮಾಡಿಬಿಟ್ಟಳು. ಅವಳ ಅದೃಷ್ಟವೋ, ಸಣ್ಣಯ್ಯನ ದುರಾದೃಷ್ಟವೋ ತಿಳಿಯದು, ಅಂತೂ ಆ ದಿನ 55 ನಂಬರ್ ಬಂದಿದೆಯೆಂಬ ಸುದ್ದಿ ಬೆಳಿಗ್ಗೆಯೇ ವಾಸುವಿನ ಮೂಲಕ ಹೊಳೆಸಾಲನ್ನು ತಲುಪಿಬಿಟ್ಟಿತು. ನಂಬರನ್ನು ಹಿಂಬಾಲಿಸುತ್ತಿದ್ದ ಜನರೆಲ್ಲರೂ ಹತ್ತಿರದ ಅಂಗಡಿಯಿಂದ ಪಟಾಕಿ ತಂದು ಹೊಡೆದು ಸಂಭ್ರಮಿಸಿದರೆ, ಈರಮ್ಮಜ್ಜಿಯ ಮನೆಯ ಬಾಗಿಲಿನಲ್ಲಿ ಜನರ ಸಂತೆಯೇ ನೆರೆಯಿತು. ಎಷ್ಟು ಲೆಕ್ಕ ಹಾಕಿದರೂ ಅವಳಿಗೆ ಬರಬೇಕಾದ ಹಣವನ್ನು ಅಂದಾಜಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅಷ್ಟೆಲ್ಲ ಹಣವನ್ನು ಅವಳು ಖರ್ಚು ಮಾಡುವುದಾದರೂ ಹೇಗೆ ಎಂಬುದು ಅವರಿಗೆಲ್ಲ ಬಿಡಿಸದ ಒಗಟಾಗಿ ಕಾಡತೊಡಗಿತು. “ನಾ ಅದನ್ನು ಹಾಸಿಗಿ ಮಾಡ್ಕಂಡು ಮಲ್ಕಂತೆ, ಅದೆಲ್ಲ ಉಸಾಬರಿ ನಿಮಗ್ಯಾಕೆ? ಸುಮ್ನೆ ನನ್ನ ತಲಿ ತಿನ್ನೂದು ಬಿಟ್ಟು ಆ ಸಣ್ಣಯ್ಯ ಬಂದ್ನಾ ಅಂತಾ ಕಾಣಿ” ಎಂದು ಎಲ್ಲರನ್ನೂ ಕೋಳಿ ಓಡಿಸುವಂತೆ ಮನೆಯಂಗಳದಿಂದ ಓಡಿಸಿದ್ದಳು.
ಅಂದು ಸಂಜೆಯಾದರೂ ಸಣ್ಣಯ್ಯನ ಸುಳಿವಿರಲಿಲ್ಲ. ವಾಸುವಿನ ಬೈಕನ್ನೇರಿ ಓಸಿಯ ಗೂಡಂಗಡಿಗೆ ಹೋಗಿ ಕೇಳಿದರೆ ಅವನು ಓಸಿಯ ಹಣವನ್ನು ತಂದುಕೊಡದೇ ಅನೇಕ ತಿಂಗಳುಗಳೇ ಆಗಿರುವ ಸತ್ಯ ಹೊರಬಂದಿತು. ಹೇಗೂ ಹೆಚ್ಚಿನವರೆಲ್ಲ 55 ನಂಬರ್ ಪೊಲೋ ಮಾಡುವವರೇ ಆಗಿದ್ದರಿಂದ ಉಳಿದ ನಂಬರಿಗೆ ತಾಗುವ ಹಣವನ್ನು ತಾನೇ ಭರಿಸುತ್ತ, ಮತ್ತುಳಿದ ಹಣವನ್ನೆಲ್ಲ ತಾನೇ ಇಟ್ಟುಕೊಳ್ಳುತ್ತಿದ್ದ ವಿಷಯ ಬಯಲಾಯಿತು. ಬಂದದಾರಿಗೆ ಸುಂಕವಿಲ್ಲವೆಂದು ಪೆಚ್ಚುಮೋರೆ ಹಾಕಿಕೊಂಡು ವಾಸು, ಮತ್ತವನ ಸ್ನೇಹಿತರು ಹೊಳೆಸಾಲಿಗೆ ಮರಳಿದರು. ವಿಷಯ ತಿಳಿದ ಈರಮ್ಮ ಸಣ್ಣಯ್ಯನಿಗೆ ಹಳೆಮೆಟ್ಟಿನ ಪೂಜೆ ಮಾಡಿಯೇ ಸಿದ್ದವೆಂದು ಪ್ರತಿಜ್ಞೆಗೈದು ಹರಿದುಹೋದ ಎರಡು ಚರ್ಮದ ಚಪ್ಪಲಿಯನ್ನು ತಂದು ತನ್ನ ಗುಡಿಸಲಿನ ಮಾಡಿಗೆ ನೇತಾಡಿಸಿದಳು. ಮೆಟ್ಟು ಕಟ್ಟಿದ ಮಹಿಮೇಯೋ ಏನೋ ತಿಳಿಯದು, ಓಸಿಯ ಭೂತ ಸಣ್ಣಯ್ಯನೊಂದಿಗೆ ಹೊಳೆಸಾಲಿನಿಂದ ಕಾಲ್ತೆಗೆಯಿತು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.