ಆವಾಗಾವಾಗ ರಾತ್ರಿಗಳಲ್ಲಿ ತಾವಿಬ್ಬರೂ ಮೈಗೆ ಮೈ ಬೆಸೆದುಕೊಂಡು ತಾನು ಎಡದಿಂದ ಅವಳು ಬಲದಿಂದ ಎಷ್ಟೊತ್ತಿನವರೆಗೆ ಚುಕ್ಕೆಗಳೆಣಿಸಿದರೂ ಇಬ್ಬರೂ ಬಂದು ಒಂದುಕಡೆ ಸೇರದ ಆಟಕ್ಕೆ ಈಗ ಬೇರೆಯದೇ ಅರ್ಥ ಕಾಣಿಸಿ ಇದೆಲ್ಲ ಎಲ್ಲಿಹೋಗಿ ಮುಟ್ಟುವುದೋ ಎಂದು ಅಯೋಮಯಗೊಳ್ಳುವನು. ಹೀಗೆ ಇಲ್ಲಸಲ್ಲದ ಯೋಚನೆಗೀಡಾದವನು ದಾರಿತಪ್ಪಿದವನಂತೆ ಎಡವುತ್ತ ಮತ್ತೊಂದು ರಾತ್ರಿಯನ್ನು ತುಳಿಯುತ್ತ ತಳ್ಳುವನು. ಬಗ್ಗಡದ ಬದುಕು ಟಿಸಿಲೊಡೆವ ಸೂಚನೆ ಕಂಡು ಮಲಗಿದಲ್ಲೇ ಬಿರುಕು ಬಿಡುವನು.
ಲಕ್ಷ್ಮಣ ಶರೆಗಾರ ಕಥಾ ಸಂಕಲನ “ತಿದಿಯ ತುದಿಗೆ ಬೆಂಕಿಯ ಉಗುಳು” ಕೃತಿಯ “ಉಧೋ ಉಧೋ” ಕತೆ ನಿಮ್ಮ ಈ ಭಾನುವಾರದ ಓದಿಗೆ
ಊರೊಳಗಣ ಬಯಲು
ಊರ ಹೊರಗಣ ಬಯಲೆಂದುಂಟೆ?
-ಬೊಂತಾದೇವಿ
ಭಾಗ-1:-
ಕತ್ತಲೆಯನೇ ಹೊದ್ದು ಕಡುಗಪ್ಪನೇ ಚಪ್ಪರಿಸುತ್ತ ಮಲಗಿದ ಒಂದಿನದ ಸರವತ್ತಿನ ರಾತ್ರಿ ವೇಳೆಯಲ್ಲಿ ಅಚಾನಕ್ಕಾಗಿ ಹೆಂಡ್ತಿ ಕಡೆ ತಿರುಗಿದ. ಸಣ್ಣದಾಗಿ ಉರಿಯುತ್ತಿರುವ ಲಾಟೀನದ ಮಂದವಾದ ಬೆಳಕಿನಲ್ಲಿ ಆಕೆಯ ಮುಖಕ್ಕೆ ಬಂಗಾರದ ಹೊಳಪು ಬಂದು ಹಂಗ ನೋಡಿದ್ದು ತನ್ನ ಹೆಂಡ್ತೀನ ಅಲ್ಲಂಥ ತಟ್ಟಂಥ ಅನಿಸಿದ್ರೂ ಇದೆಂಥ ವೈಚಿತ್ರ‍್ಯವೆಂದು ಅವಾಕ್ಕಾಗಿ ಚಲುವನು ಸವಿಯುವ ಆ ಕ್ಷಣದಲಿ ಅವನಿಗೆ ಕಾಣಿಸಿದ್ದು ನುಂಗುವಂತೆ ತೆರೆದ ಅವಳೆರಡು ಕಣ್ಣುಗಳು. ನಿದ್ದಿ ಬಂದಿಲ್ಲೇನ- ಅಂದ. ಹತ್ತೆನಿಸುವಷ್ಟು ಹೊತ್ತುರುಳಿದರೂ ಪ್ರತಿಯಾಗಿ ಉತ್ತರ ಬಾರದ್ದಕ್ಕೆ ಮತ್ತೊಮ್ಮೆ ಹೆಂಡ್ತಿ ಮುಖ ನೋಡಿದ. ಅವಳ ತೆರೆದ ಕಣ್ಣಾಳದಲಿ ಭಯಂಕರವಾದ ಶೂನ್ಯವೊಂದು ಅಡರಿದಂತಿತ್ತು. ಬಿಟ್ಟ ಕಣ್ಣು ಬಿಟ್ಟಂಗಿದ್ರೂ ರೆಪ್ಪಿ ಪಿಳುಕಿಸದಾಕಿಗೆ ಮೈಮ್ಯಾಲ ಎಚ್ಚರಿಲ್ಲಂತ ಗೊತ್ತಾಗುತ್ತಲೆ ಎದ್ದು ಚ್ಯಾಪಿ ಮ್ಯಾಲ ಜಿಗದ ಕುಂತ. ಹಂಗ ಬಿಟ್ಟ ಕಣ್ಣ ಬಿಟಗೊಂಡು ನೋಡೂದಾದ್ರೂ ಏನಂತ ಬಿಡುಗಣ್ಣ ಜಾಡು ಹಿಡಿದು ಹೊರಟವನಿಗೆ ಕಂಡಿದ್ದು ಗುಡಿಸಲಿಗೆ ಆಧಾರಾಗಿ ಮಣ್ಣಿಲೆ ಸಾರಿಸಿದ ಗ್ವಾಡಿ ಮ್ಯಾಲ ಜೋತುಬಿಟ್ಟ ಯಲ್ಲಮ್ಮ ದೇವಿ ಪಟ.
ಆ ಅರ್ಧ ರಾತ್ರಿಯೊಳಗ ಇಂಥದೊಂದು ವಿಕ್ಷಿಪ್ತ ಸನ್ನಿವೇಶದಾಗ ದೇವಿ ಇರುವ ಪಟ ನೋಡಿ, ಭಕ್ತಿ ಅಂಬೋದು ಎದಿಯೊಳಗಿನಿಂದ ಮೈಕೊಡವಿ ಎದ್ದುಬಂದಂತಾಗಿ, ಹೆಂಡ್ತಿಗೆ ಎಚ್ಚರಾಗಬಾರದೆಂದು ಹಗೂರಗ ಎದ್ದು ಪಟದ ಮುಂದ ಕೈಮುಕ್ಕೊಂಡು: ಮುಣಗುಸೂದು ತೇಲಿಸೂದು ಎಲ್ಲ ನಿನ್ನ ಕೈಯ್ಯಾಗ- ದೇವೀ ಮುಂದ ತಲೀಬಾಗಿ ಭಾವುಕನಾದವನ ಮುಖದಾಗ ಶರಣಾಗತಿಯ ಭಾವ ತುಳುಕುವುದು. ಗವ್ವೆನ್ನುವ ಕತ್ತಲಿನಲ್ಲಿ ಸುಖದ ಮತ್ತೊಂದು ರೂಪವಾದ ಬೆಳಕು ಲಾಟೀನದೊಳಗಿನಿಂದ ತುಳುಕಿ ಹೊರಚೆಲ್ಲಿದಂತಿತ್ತು. ಹೊಳ್ಳಿ ತಿರುಗಿ ನೋಡಿದ್ರ ಲಾಟೀನದ ಅದೇ ಕೆಂಪು ಮಂದ ಬೆಳಕಿನ್ಯಾಗ, ಮಗುವಿನಂಗ ಕಣ್ಮುಚ್ಚಿ ನಿದ್ದಿಯೊಳಗಿದ್ದ ಹೆಂಡ್ತಿ ಮುಖ ನೋಡಿ, ತಲೀ ಮ್ಯಾಲಿನ ಭಾರ ಕಳೆದು, ಎದಿಯಾಳದೊಳಗ ಪ್ರೇಮದ ಹುಡಿ ಹಾರಿ, ಮನಸು ಹಸಿಯಾಗಿ, ಹತ್ತಿರ ಸರಿದು ಅವಳ ಹಣೀಮ್ಯಾಲ ಕೈಯಿಟ್ಟ. ಕಾದ ಹಂಚಿನಂಗ ಮೈ ಸುಡಾಕತ್ತಿತ್ತು. ಇದೆಲ್ಲ ಏನಾಗುತ್ತಿದೆಯೆಂದು ತಿಳೀದ ತಣ್ಣೀರಿನ ಅರಿವಿ ಪಟ್ಟಿ ಹಣೀಮ್ಯಾಲ ಇಟ್ಟು ತಗೀದೂ ಮಾಡುತ್ತ ಕುಂತ. ಇದ್ಯಾವುದರ ಖಬರಿಲ್ದಂಗ ಹೆಂಡ್ತಿ ಅನ್ನೂ ಹೆಣ್ಣ ಜೀವ ತನ್ನ ಸುಪ್ತಾವಸ್ಥೆಯಾಳದೊಳಗ ಇಳದಹೋಗಿತ್ತು.

(ಲಕ್ಷ್ಮಣ ಶರೆಗಾರ)
ಕೂಸಿನಂಥಾ ಹೆಂಡ್ತಿ ಮುಖ ನೋಡ್ತ ನೋಡ್ತ ನಮಗೂ ಒಂದು ಕೂಸಿದ್ರ ಮನಿ ಅನ್ನೂದು ನಂದ ಗೋಕುಲದಂಗ ಇರ್ತಿತ್ತು- ಅಂತ ಒಳಗೇ ಮಮ್ಮಲ ಮರುಗಿದ. ಅಂಥಾ ಒಂದು ಭಾಗ್ಯ ಇಲ್ಲದ್ದಕ್ಕ: ಎಲ್ಲಾ ಬೇಡ್ಕೊಂಡು ಬಂದಿರ್ಬೇಕು- ಅಂತೆಲ್ಲ ನಿಟ್ಟುಸಿರುಬಿಟ್ಟ. ತಮ್ಮಿಬ್ಬರ ನಡುವೆ ಮಕ್ಕಳಿಲ್ಲದ್ದಕ್ಕ ಏನೊ ಒಬ್ಬರಿಗೊಬ್ಬರು ಇನ್ನೂ ಮತ್ತೂ ಅಂಟಿಕೊಂಡಿರುವುದು- ಎಂದೆಲ್ಲ ನೆನಪು ಮಾಡಿಕೊಳ್ಳುವಾಗ ಕಣ್ಣ ರೆಪ್ಪಿಯೊಳಗ ಹೆಂಡ್ತೀ ಮ್ಯಾಲಿನ ಪ್ರೀತೀನ ಒಸರಿದಂತಾಗಿ ಉದ್ವೇಗಕ್ಕೊಳಗಾದ. ಸಮಯ ಅನ್ನೂದು ಮುಂದೆ ಹರಿಯದೆ ಅವಳೆಡೆಗಿನ ಪ್ರೀತಿಯೊಳಗ ನೆಲೆ ನಿಂತು ಕತ್ತಲು ಬೆಳಕಿನೊಂದಿಗೆ ಆಟವಾಡುತ್ತಿತ್ತು.
ಎಳೆದಾಡುವ ಮನಸ್ಸನ್ನು ತಹಬದಿಗೆ ತರುವ ಹೆಣಗಾಟದೊಂದಿಗೆ ತಲ್ಲಣಗೊಂಡವನು, ದೇವೀ ಪಟದ ಹಿಂದೆ ಸರಿದು ಅಲ್ಲಿನ ನೆರಳಿನೊಂದಿಗೆ ತನ್ನೊಳಗಿನ ಭೀತಿಯನ್ನು ಸದ್ದಿಲ್ಲದೆ ಹಂಚಿಕೊಳ್ಳುವನು. ಅಲ್ಲಿ ನಡೆಯುತ್ತಿರುವುದಕ್ಕೂ ತನಗೂ ಸಂಬಂಧವೇ ಇಲ್ಲದಂತೆ, ಲಾಟೀನೊಳಗಿನ ಬೆಳಕು ಏಕಾಗ್ರತೆಯಿಂದ ಒಂದೇ ಪಾತಳಿಯಲ್ಲಿ ಶಕ್ತಿಮೀರಿ ಬೆಳಗುತ್ತ, ಇರುಳಿನ ಹೊಟ್ಟೆಯಲ್ಲಿ ತನ್ನದೊಂದು ಚಿತ್ರ ಮೂಡಿಸಲು ರಾತ್ರಿಯಿಂದಲೂ ಯತ್ನಿಸುತ್ತ ತೂಕಡಿಸುತ್ತಿತ್ತು. ಇಂಥ ನಟ್ಟಿರುಳಲಿ ಥಣ್ಣಗಿನ ಮೌನದ ನೀರವತೆಯನ್ನು ಅರ್ಥಮಾಡಿಕೊಳ್ಳಲು ದಿವ್ಯವಾಗಿ ಉರಿಯುವ ಲಾಟೀನೊಳಗಿನಿಂದ ಚಲ್ಲಿದ ಬೆಳುಕನ್ನು ಸಮಯವನ್ನೇ ಮರೆತು ತದೇಕವಾಗಿ ದಿಟ್ಟಿಸುತ್ತ ಕುಂತವ ಕತ್ತಲು ಬೆಳಕಿನಾಟಕೆ ಸಾಕ್ಷಿಯಾಗಿ ಹಾಗೇ ಕುಂತೇ ಇದ್ದ. ದೂರದಲ್ಲೆಲ್ಲೊ ಕೋಳಿ ಕೂಗಿದ್ದು ಕೇಳಿ, ಇಲ್ಲೀತನಕ ಉಬ್ಬಸಪಡುತ್ತ ಉರಿದ ಲಾಟೀನಿನ ಬೆಳಕು ಕಡಿಮೆಯಾದಂತೆನಿಸಿ, ಎದ್ದು ಮೈ ಮುರಿದು, ಒಂದೇ ಸವನೆ ಉರಿದ ಬೆಳಕು ಮತ್ತೊಂದು ರಾತ್ರಿಯವರೆಗೆ ಸುಧಾರಿಸಿಕೊಳ್ಳಲಿ ಅಂತ ಲಾಟೀನಾರಿಸಿ ಬಾಗಿಲು ತಗದು ಹೊರಗೆ ಹೋದ. ಅಕಾಲದಲ್ಲಿ ಆಗಸದ ತುಂಬ ಗುಳೇ ಎದ್ದು ಸಾಲು ಸಾಲಾಗಿ ಬರುತ್ತಿರುವ ರಾಕ್ಷಸಾಕಾರದ ಮೋಡಗಳು ಅವನ ಮುಖದಲ್ಲಿ ಆತಂಕ ಮೂಡಿಸುವವು. ಕತ್ತಲ ಎದೆಯನ್ನು ಸೀಳಿಕೊಂಡು ಬರುವ ಗಾಳಿಯಲ್ಲಿ ಸುಡುವ ಬೆಂಕಿಯ ಕಾವಿರುವುದನು ಗುರುತಿಸುವನು. ಬರಲಿರುವ ಬೇಡವಾದ ಯಾವುದೋ ಒಂದಕ್ಕೆ ಇದೆಲ್ಲ ಪೀಠಿಕೆ ಎಂಬೋ ವಿಷಾದ ಮನಸಿನಲ್ಲಿ ಗೋಜಲಾಗಿ ನಿಟ್ಟುಸಿರುಬಿಟ್ಟ. ಅಕಾಲದ ಮಳೆಗೆ ಮಲಿನದ ಬದುಕು ಒಮ್ಮೆ ತೊಳೆದು ಹಸನಾದರೂ ಆಗಲೆಂದು, ಎಲ್ಲ ಮೋಡಗಳೂ ತಲೆ ಮೇಲೆಯೇ ಒಟ್ಟಾಗಿ ಬಿಟ್ಟೂ ಬಿಡದೆ ಸುರಿದುಬಿಡಲೆಂದು ಬೇಡಿಕೊಳ್ಳುವನು.
ಒಮ್ಮೆ ಹಿತವೆನಿಸಿದ ಅದೇ ಎಳೀ ಬೆಳಕು ಒರಟಾಗಿ ಮೈ ಸುಡಾಕತ್ರೂ ಇನ್ನೂ ಎದ್ದಿರದ ಹೆಂಡ್ತಿ ನೋಡಿ ಎದೆಗುದಿಯಿಂದ ಅವಳ ಹಣೀಮ್ಯಾಗ ಕೈಯಿಟ್ಟ. ಜ್ವರ ಇಳದು ಮೈ ಥಣ್ಣಗಾಗಿತ್ತು. ಯಾವಾಗರ ಏಳ್ಲಿ – ಅಂತಂದುಕೊಂಡು ದೇವಿ ಪಟದ ಮುಂದೆ ನಿಂತು ಕೈಜೋಡಿಸಿ: ಎಲ್ಲಾ ನಿನ್ನ ಕೂಡೇತಿ ನೋಡವ್ವ – ಎಂದು ತನ್ನ ಬದುಕಿನ ಎಲ್ಲಾ ಭಾರವನ್ನು ದೇವಿ ಹೆಗಲಮ್ಯಾಲ ಹೊರಿಸಿ ತಾನು ಹಗುರಾಗುವನು.
*
ಇಡೀ ದಿನ ವಜ್ಜೆಯಾದ ಮೈಯ್ಯನ್ನು ಕೈಗೆ ಸಿಕ್ಕಷ್ಟು ಒತ್ತಗೋಂತ ದಿನ ದೂಡಿದವಳಿಗೆ ನಿನ್ನೆ ರಾತ್ರಿ ತನಗೇನಾಗಿತ್ತೆಂದು ಗೊತ್ತೇಯಿಲ್ಲದಂತಾಗಿ ತುಸು ಕಳವಳಗೊಂಡಿದ್ದಳು. ಗಂಡ ಹೇಳಿದ್ದನ್ನ ನಂಬಲೂ ಆಗದೆ, ಬಿಡಲೂ ಆಗದೆ ಕಂಬದಂತೆ ಕುಂತೇ ಇದ್ದಳು. ನೆವಕ್ಕ ನಾಕ ರೊಟ್ಟಿ ಬಡದರೂ ಒಂದು ತುತ್ತಿನ ಹಸಿವೂ ಆಗದ ಇಡೀ ದಿನ ಹಾಸಿಗ್ಯಾಗ ಹೊರಳಾಡುತ್ತ ದಿನ ತಗದಳು. ಗಂಡ ಅನ್ನೂ ಪ್ರಾಣಿ ದೂರ ನಿಂತು ಅದೊಂದು ನಮೂನಿ ನೋಡುವಾಗ, ಅವನ ಹಾವಭಾವದೊಳಗಿನ ಕಾಳಜಿಗೆ ಅದು ಯಾಕೊ ಅವನನ್ನೊಮ್ಮೆ ಎಳದು ತಬ್ಬಿಕೊಳ್ಳುವ ಆಸೆ ಆಗೂದು ಅವಳಿಗೆ.
ತಿಂಗಳುಗಟ್ಟಲೆ ರಾತ್ರಿಯಾಗುತ್ತಲೇ ಜ್ವರ.. ಮೈಮರೆವು.. ಹಗಲೆಲ್ಲ ಮೈಯ್ಯಾಗ ಯಾರೋ ಓಡ್ಯಾಡಿಹೋದ ಹೆಜ್ಜೆಗಳ ಭಾರ.. ದಣಿವು. ಪಾದರಸದಂತಿದ್ದವಳು ಬಸವಳಿದು ರಸ ಹೀರಿದ ಹಣ್ಣಿನ ಸಿಪ್ಪಿಯಂತಾದಳು. ಚೀಟಿ ಆತು.. ಅಂಗಾರ ಆತು. ಹಾಸಿಗೆಗಂಟಿಕೊಂಡವಳ ನಾಡಿ ಹಿಡದು, ಮಖಾ ನೋಡಿ ಯಾರೋ ಹೇಳಿದರು: ನಿನ್ನ ಮೈಯ್ಯಾಗ ಯಲ್ಲಮ್ಮ ದೇವಿ ಬರಾಕತ್ತಾಳು- ಅಂತ. ಮುಗುಲು ಹರದು ತಲೀಮ್ಯಾಲ ಬಿದ್ದಂಗ ಕುಸಿದು ಹೋದಳು. ದೈನೇಸವನು ಮುಖದ ತುಂಬ ಸವರಿಕೊಂಡು ದೇವೀ ಪಟದ ಮುಂದೆ ನಿಂತಲ್ಲೇ ಅದುರಿ, ಹೋಯ್ದಾಡುವ ಬದುಕಿನ ದೋಣಿಯನು ಪಾರುಗಾಣಿಸಲು ಕಣ್ತುಳುಕಿಸುವಳು. ಕಮರಿ ಕುಂತ ಹೆಂಡ್ತಿಗೆ ಅಷ್ಟಿಷ್ಟು ಧೈರ್ಯ ಹೇಳಲು ಹತ್ತಿರ ಬಂದ ಗಂಡನಿಂದ ದೂರ ಸರಿಯುವಳು. ಅವನ ಬೆರಳುಗಳಿಗೆ ತನ್ನ ಗಲ್ಲದ ಮ್ಯಾಲ ಹರಿವ ಕಣ್ಣೀರ ವರಸಾಕೂ ಬಿಡಲಿಲ್ಲ.
ದಿನಗಳು ಒಂದರ ಹಿಂದ ಒಂದು ಉರುಳಿದವು. ಹುಣ್ಣಿಮಿಯ ಆ ಒಂದು ರಾತ್ರಿಗೇ ಕಾದು ಕೂತಂತಿದ್ದ ಅವನ ಮೈಯ್ಯಾಗಿನ ಭುಸುಗುಡುವ ಬಯಕೆಯೊಂದು ಅವಳ ಹತ್ತಿರ ನಿಶ್ಯಬ್ಧವಾಗಿ ಹೊಸೆದು ಕೆನ್ನೆ ನೇವರಿಸಾಕ ಬಂದಾಗ ನಯವಾಗಿ ಕೈಕೊಸರಿ ಅತ್ತ ತಿರುಗಿ ಕಣ್ಣೀರಾಗುವಳು. ದೇವಿ ಅಂಬುವವಳು ಮೈಯಾಗ ಬಂದು ಹೋದ ಮ್ಯಾಲ.. ಮತ್ತ, ಮತ್ತ ಬರ್ತಾಳು ಅನ್ನೂವಾಗ ಈ ಮೈ ಅನ್ನೂದನ್ನ ಇನ್ಮುಂದ ಮಡಿಯಾಗಿ ಇಟ್ಕೊಳ್ಳದಿದ್ರ ಅದು ದೇವಿಗೆ ಮಾಡೂ ಮಹಾ ಅಪಚಾರ.. ಮಡಿ ಮುರದರ ರೌರೌವದ ನರಕ- ಅನ್ನೂ ತನ್ನಾಳದ ನಂಬುಗೆ ಮುರಿಯಲು ಅವಳು ಯಾವ ಕಾರಣಕ್ಕೂ ತಯಾರಿರಲಿಲ್ಲ. ಮಲಗಿದಲ್ಲಿಯೆ ನಿಟ್ಟುಸಿರು ಬಿಟ್ಟು ಅರೇ ಜೀವವಾಗುವಳು. ಉದುರಿಸಿದ ಕಣ್ಣ ಹನಿಗಳಿಗೆ ನೆಲವೂ ತೋಯ್ದು ಹಸಿಯಾಗುವುದು. ನೆಚ್ಚಿದ ದೈವದ ಕಲ್ಲುಹೃದಯಕೆ ಎದೆ ಅನ್ನೂದು ಕಾದ ಕುಲುಮೆಯಾಗಿ ಆಸೆಗಳೆಲ್ಲ ಸುಟ್ಟು ಬೂದಿಯಾಗುವವು.
*
ಅಂಥದೊಂದು ನೀರವದ ಧೀರ್ಘ ಮೌನದ ಘಳಿಗೆಯಲ್ಲಿ ಉಸಿರೆಳೆದುಕೊಳ್ಳುವುದು ಮತ್ತು ಬಿಡುವುದೂ ಅಡಚಣೆಯೆನ್ನಿಸಿ ಉಸಿರನ್ನೇ ನಿಲ್ಲಿಸಿಕೊಳ್ಳುವ ಆಸೆಯಾಗುವುದು ಅವನಿಗೆ. ಈ ಮೌನವೆನ್ನುವುದು ಭಯಂಕರವಾದ ಹಿಂಸೆಯೆನ್ನಿಸತೊಡಗಿ ಹೊರಹೋಗಿ ನೀಲಾಕಾಶದಲ್ಲಿ ಹರಡಿಕೊಂಡು ಮಿನುಗುತ್ತಿರುವ ಚುಕ್ಕೆಗಳನ್ನು ನೋಡಿ ಮತ್ತೊಮ್ಮೆ ಎಣಿಸಬೇಕೆಂಬಾಸೆ ಹುಟ್ಟುವುದು ಅವನಲ್ಲಿ. ಆವಾಗಾವಾಗ ರಾತ್ರಿಗಳಲ್ಲಿ ತಾವಿಬ್ಬರೂ ಮೈಗೆ ಮೈ ಬೆಸೆದುಕೊಂಡು ತಾನು ಎಡದಿಂದ ಅವಳು ಬಲದಿಂದ ಎಷ್ಟೊತ್ತಿನವರೆಗೆ ಚುಕ್ಕೆಗಳೆಣಿಸಿದರೂ ಇಬ್ಬರೂ ಬಂದು ಒಂದುಕಡೆ ಸೇರದ ಆಟಕ್ಕೆ ಈಗ ಬೇರೆಯದೇ ಅರ್ಥ ಕಾಣಿಸಿ ಇದೆಲ್ಲ ಎಲ್ಲಿಹೋಗಿ ಮುಟ್ಟುವುದೋ ಎಂದು ಅಯೋಮಯಗೊಳ್ಳುವನು. ಹೀಗೆ ಇಲ್ಲಸಲ್ಲದ ಯೋಚನೆಗೀಡಾದವನು ದಾರಿತಪ್ಪಿದವನಂತೆ ಎಡವುತ್ತ ಮತ್ತೊಂದು ರಾತ್ರಿಯನ್ನು ತುಳಿಯುತ್ತ ತಳ್ಳುವನು. ಬಗ್ಗಡದ ಬದುಕು ಟಿಸಿಲೊಡೆವ ಸೂಚನೆ ಕಂಡು ಮಲಗಿದಲ್ಲೇ ಬಿರುಕು ಬಿಡುವನು.
*
ಜೀವರಸವೆಲ್ಲ ಬಸಿದು ಸೋರತೊಡಗಿದ ಬದುಕಿನಿಂದ ಬಸವಳಿದವಳು ದೇವೀ ಪಟದ ಮುಂದೆ ಬೋರಲು ಬಿದ್ದು: ಎದೀ ಗವ್ಯಾಗ ಸೆಲೆಯಾಗಿ ಚಿಮ್ಮಿ ಹರಿಯುತ್ತ, ಹರಿಯುತ್ತ ಬದುಕಿನ ಎರಡೂ ದಂಡೆಗಳನ್ನ ಚಿಗುರಿಸಾಕಿ ನೀನು.. ಮೈಲಿಗಿಯ ಈ ಪಾಪಿ ಮೈಯ್ಯಾಗ ಯಾಕ ಬರ‍್ತೀಯವ್ವ.. ಎದಕೂ ಒಂದು ನೇಮ ಅನ್ನೂದಿಲ್ಲ ನಂದು. ಮುಡಚಟ್ಟಿನ ಬದುಕಿನ್ಯಾಗ ನಿನ್ಹೆಂಗ ಕರಕೊಳ್ಳಲಿ..? ಬರೀ ಮಡಿಯೆಂದರೆ ಹೆಂಗ..? ಜೀವಕ್ಕ ಒಂದಿಷ್ಟು ಮೈಲಿಗೆನೂ ಬೇಕಲ್ಲೇನು..!. ಈ ಗುಡಸಲ್ದಾಗ ಅದೇನ್ ಕಂಡೀ ತಾಯಿ. ಮಕ್ಕಳಿಲ್ಲ ಅಂತ ಮದಲ ನೊಂದೀನಿ. ಅದು ಹೆಂಗೊ ಏನೊ ಗಂಡಾ – ಹೆಂಡ್ತಿ ಅನ್ನೂ ಎರಡು ಜೀವಗಳು ಹಕ್ಕಿ ಹಂಗ ಹಾರ‍್ಯಾಡಕೊಂತ ಇದ್ವಿ. ಇದೇನ್ ಸಿಡಿಲು ಬಡಿಸಿದಿ…
.. ಬಾಳೆಂಬೂದು ರೆಕ್ಕಿ ಕತ್ತರಿಸಿದ ಹಕ್ಕಿ ಹಂಗಾಗೇತಿ. ನೀನು ಯಾವಾಗ ಈ ಮೈಯ್ಯಾಗ ಬರ‍್ತಿ, ಯಾವಾಗ ಹೋಗ್ತಿ ಅನ್ನೂದು ಒಂದೂ ಗೊತ್ತಾಗೂದುಲ್ಲ. ನೀ ಬಂದು ಹೋಗೂ ಈ ದೇಹ ಎಂಬೂ ತಡಿಕೇನ್ನ ಅದು ಹೆಂಗಂತ ಮಡಿಯಾಗಿ ಇಟ್ಕೊಳ್ಳಿ.. ಬ್ಯಾಡವ್ವ.. ಜೀವ ವಲ್ಯಾಗೇತಿ.. ನಿನ್ನ ಸಲುವಾಗಿ ಎಂಥಾ ಚಂದದ ಗುಡಿ ಕಟ್ಟಿಸ್ಯಾರು ಅಲ್ಲಿ. ದಿನಾ ಅದೇನ್ ಪೂಜಿ. ಅಭಿಷೇಕ ಅಂತಾರು.. ನೈವೇದ್ಯ ಅಂತಾರು.. ಕಣ್ಣ್ತುಂಬೂವಂಗ ಜಾತ್ರೀನೂ ಮಾಡ್ತಾರು.. ಥಣ್ಣಗ ಅಲ್ಲೇ ಇರಬಾರ್ದ ನಮ್ಮವ್ವ.. ಸಿಕ್ಕ ಅಷ್ಟಿಷ್ಟು ಸಣ್ಣ, ಸಣ್ಣ ಸುಖಕ್ಕೂ ಯಾಕ್ ಎರವಾಗ್ತೀ. ಇದೇನ್ ಸರಿ ಅಲ್ಬಿಡು.. ಮುಳ್ಳಕಂಟಿ ಮ್ಯಾಲ ಒಣಗ ಹಾಕಿದ ಸೀರಿ ಹಂಗಾಗಿ ಹೋತಲ್ಲ ಈ ಬಾಳೆಂಬೂದು. ವರ್ಸ ಆಗಾಕ ಬಂತು ಮೈ ಸುಖ ಇಲ್ದ ಗಂಡ ದಿಂಡ ಆಗ್ಯಾನ.. ನನ್ನ ಪರಿಸ್ಥಿತಿನೂ ಬ್ಯಾರೆ ಅಲ್ಲ ಅಂತೀನಿ..
“ನಿನ್ನ ಹಂತೇಕ ಬಂದ್ರ ಎಲ್ಲಿ ನಿನ್ನ ಮೈಯ್ಯಾಗ ದೇವಿ ಅಂಬೋಳು ಅದಾಳಂತ ಮುಟ್ಟಾಕ ಅಳುಕು ಆಕೈತಿ..”- ಅಂತೆಲ್ಲ ಹಲುಬಿ ದ್ವಂದ್ವದಲ್ಲಿ ದೂರಹೋಗಿ ಕೊರಗೂ ಗಂಡನ ಪಾಡ ಯದಕೂ ಬ್ಯಾಡ ಬಿಡ ಹಡದವ್ವ. ಅದೇನ್ ತಪ್ಪ ಮಾಡೀನಿ.. ಅದೇನು ಒಪ್ಪ ಮಾಡ್ಕೋಬೇಕಂತ ಅನ್ನೂದಾದ್ರೂ ತಿಳ್ಸೂ ತಾಯಿ. ನೀ ಬಂದು ಹೋಗೂ ಈ ದೇಹಾನ್ನ ಮೈಲಿಗಿ ಮಾಡಾಕ್ ನಂಗಾದ್ರೂ ಹೆಂಗ್ ಮನಸ್ ಬರಬೇಕಂತ ನೀನ ಹೇಳು. ಮುಗುಲು ಕಳಚಿ ಬೀಳೂ ಇಂಥಾ ಗುಡುಗು ಈ ಹುಲುಜೀವಕ್ಯಾಕವ್ವ. ಹರದು ಹನ್ಯಾರಡಾಗಿದ್ದ ಬದುಕಿಗೆ ಒಂದಾಸರಾಗಿದ್ದ ಗಂಡನ್ನೂ ದೂರ ಮಲಗೂ ಹಂಗ ಮಾಡಿದಿಯಲ್ಲ. ಜೋಡಿ ಅಂತ ಮಾಡಿ ಅವನನ್ನೂ ನನ್ನಿಂದ ಕಸಗೊಂಡು ಯಾರ ಮ್ಯಾಲಿನ ಸೇಡ ಇನ್ಯಾರ ಮ್ಯಾಲ ತೋರಸಾಕತ್ತಿ ನೀನು. ತಿಂಗಳಾತು ದೇವಿನ್ನ ಕಂಡು ಬರ‍್ತೀನಿ ಅಂತ ಹೋದಾಂವ ಇನ್ನೂ ಹೊಳ್ಳಿ ಬಂದಿಲ್ಲ. ಬರೂ ದಾರಿ ಹೇಳ್ದ ಮಖಾ ಒಣಗಿಸಿಕೊಂಡು ಹೋದಾಂವನ್ನ ಹೆಂಗ ಹಳೀಲಿ..
.. ಜುಲುಮೀಲಿ ಸಿಹಿ ತಿನ್ನಿಸಿ ಸೀಳಿ ನೋಡೂದು ಬ್ಯಾಡ ನಮ್ಮವ್ವ.. ನನ್ನ ಸೆರಗೊಳಗ ಕೆಂಡ ಕಟ್ಟಿ ಯಾರನ್ನ ತಂಪಾಗಿಸಬೇಕೆಂದಿ ತಾಯಿ.. ಬೆಂಕಿಯ ಸುಖಾ ಕೊಟ್ಟು ಹೆಣಾನ್ನೂ ಅರಳಿಸಿ ತೋರಸಾಕ ನಾನ್ಯಾಕ ಬೇಕು..? ನಂದು ಒಡಕು ಬದುಕು.. ಮೋರೆ ಕೇಳು.. ಹರಿದ ಸೆರಗನ್ನೇ ಒಡ್ಡೀನಿ.. ಅನ್ನ ಹಾಕಿ ಹೊಟ್ಟೆ ತುಂಬ್ಸು.. ಕೆಂಡ ಸುರಿದು ಒಡಲು ಸುಡುವುದು ಬ್ಯಾಡ. ನಿನ್ನ ಆಣತಿ ಹೇಳು.. ನೀ ಬಂದು ನನ್ನ ಬಾಳ ನರಕ ಮಾಡೀದಿ – ಅಂತ ಯಾವ ಬಾಯಿಂದ ಹೇಳ್ಲಿ ನನ್ನವ್ವ. ಈ ಅಲ್ಪಳ ಮ್ಯಾಲ ಕರುಣೆ ಅನ್ನೂದು ಇರಲಿ ತಾಯಿ. ನಂದು ಸಣ್ಣ ಬಾಯಿ.. ದೊಡ್ಡ ಮಾತೇನರ ಆಡಿದ್ರ ಕ್ಷಮಿಸವ್ವ. ಇದ್ದಕ್ಕಿದ್ದಂಗ ನಮ್ಮಿಬ್ಬರ ನಡು ನೀ ಬಂದ್ರ ಈ ಚಪ್ಪರದಾಗ ನಿನ್ನ ಎಲ್ಲೆಂಥ ಕೂಡಸ್ಲಿ. ಹಸಿವು ಅಂದ್ರ ನಮ್ಮಿಬ್ಬರೊಳಗಿನ ಯಾರ ತುತ್ತ ನಿನಗ ತಿನಸ್ಲಿ.. ಏನರ ತಾಪ್ಪಾಗಿದ್ರ ಹೇಳ್ ತಾಯಿ. ಇಲ್ಲಿಂದನ ದೀಡ್ ನಮಸ್ಕಾರ ಹಾಕ್ಕೊಂತ ಬಂದು ಭಕ್ತಿ ಅನ್ನೂದನ್ನ ಮೆರೀತೀನಿ. ತಪ್ದಂಡ ಇದ್ರ ಹೇಳು. ತಲೆದಂಡ ಬ್ಯಾಡ ನೋಡು. ಯಾಕೊ ನಂಗಿದೆಲ್ಲ ಒಗ್ಗೂದಿಲ್ಲವ್ವ. ಹೂವರಳಿಸಾಕ ಕಲ್ಲ ಮ್ಯಾಲ ಬೀಜ ಬಿತ್ತಬೇಕೇನು ಹೇಳು. ಮರಳಿಗೆ ನೀರುಣ್ಣಿಸಿ ಯಾವ ಬೆಳಿ ತಗ್ಯಾಕ ಹೊಂಟಿ ತಾಯಿ. ಬಂಗಾರ ಬಟ್ಟಲದಾಗ ವಿಷ ಕುಡಿಸಬ್ಯಾಡ ನನ್ನವ್ವ.. ಒಂದು ಹನಿ ಗುಟುಕಿನ ನೀರಡಿಕೆ ದಾಹಕ ನೀ ಕಡಲಾದ್ರೂ ಏನುಪಯೋಗ ಹೇಳು. ಹಸಿವು ಆಗೇತೆಂತ ಎಸರು ಕುದಿಸಾಕ ಯಾರರ ಚಿತೆಯ ಕೆಂಡ ಹುಡುಕ್ತಾರೇನವ್ವ. ಕೊಡಲಿಗೆ ಜೀವ ಬರಸಾಕ ಕಾವಿಗೆ ಚಿಗುರೊಡೆಸುವ ಪ್ರಯತ್ನ ಬ್ಯಾಡ ತಾಯಿ..
.. ಒಮ್ಮೊಮ್ಮೆ ನಿನಗೂ ಮನುಷ್ಯರ ಹಂಗಿನ್ಯಾಗ ಬೀಳಬೇಕಿನಿಸುವುದು ಯಾಕೊ.. ನಿನ್ನ ಮೂರ್ತಿಗೆ ನೆಕ್ಕಿಸಿದ ರಕುತದ ರುಚಿಗೆ ನಾವೆಲ್ಲ ತೇಗುವವರು.. ಕಸರು ಕಳಕೊಳ್ಳಲು ನಿನ್ನಲೇ ಕಣಿ ಕೇಳುವ ಕರ್ಮಗೇಡಿಗಳ ಸಹವಾಸ ಬ್ಯಾಡವ್ವ.. ತುಂಬದ ನಮ್ಮ ಹೊಟ್ಟೆಗೆ ಹಸಿವಿಲ್ಲದ ನಿನ್ನ ಬಾಯಲ್ಲಿ ಜೊಲ್ಲು ಸುರಿಯಬೇಕೆನ್ನುವವರು ನಾವು. ನಿನ್ನ ಹೆಸರಿನ ಬ್ಯಾಟಿ ಅನಾಮತ್ತಾಗಿ ನುಂಗಿ ನೀರು ಕುಡಿಯುವಂಥವ್ರು ನಾವು.. ಅಮಾಯಕರ ಗರಜುಗಳ ಮಿಡಿತ ಅರಿತು ಕಲಕಿನಲಿ ದೇವಮಾನವರಾಗಲೆತ್ನಿಸುವವರ ನಡುವೆ ನಿನ್ನದೆಂಥ ನಡಿಗೆ ತಾಯಿ.. – ಎಂದೆಲ್ಲ ಪರಿಪರಿಯಾಗಿ ಅಂಗಲಾಚುತ್ತ ಹಲುಬುವಳು.. ಒಮ್ಮೆ ನಿಂದಿಸುವಳು.. ಮತ್ತೊಮ್ಮೆ ಅನುನಯಿಸುವಳು.
..ಹಿಂದೆಲ್ಲ ನೀನು ಭೂಮಿಗೆ ಬಂದು ಕಲಿಸಿದ್ದು ಸಾಕಾಗಿಲ್ಲೇನು.. ಮೈಲಿಗಿ ಹೊತ್ತು ತಿರುಗೊ ನನ್ನ ಮೈಯ್ಯಾಗ ಕುಂತು ಏನ್ ಹೇಳಿದ್ರೂ ಯಾರು ಕೇಳ್ತಾರ ತಾಯಿ.. ಧರ್ಮದ ಹೆಸರಿನ ಬಟ್ಟೆ ಹಾಕಿಕೊಂಡಾವ್ರು ಒಳಗೆಲ್ಲ ಬತ್ತಲಾಗ್ಯಾರು.. ನಿನ್ನ ಇರವು ಜಗಲೀಮ್ಯಾಲಷ್ಟ ತಾಯಿ.. ನಮ್ಮ ಬದುಕಿನ್ಯಾಗ ನಿನಗ ತಾವು ಎಲೈತಿ..? ದೇವ್ರು ಗುಡ್ಯಾಗ ಇದ್ರನ ಚಂದ.. ಮನ್ಯಾಗ ಗುಡಿಗೋಳು ಹುಟ್ಟಬಾರ್ದು. ದಿನಾ ತುಪ್ಪದ ದೀಪ ಹಚ್ತೀನಿ.. ನೀ ಬರಬ್ಯಾಡ್ ಹೋಗ್! – ಎಂದು ದೇವರಿಗೂ ನಿಷ್ಟುರವಾಗುವಳು.
ಅಷ್ಟೊತ್ತಿನವರೆಗೂ ಹೊರಗ ಗಪ್ಪ ಗಡದ್ದಾಗಿದ್ದ ಗಾಳಿ ಸದ್ದಿಲ್ದ ಗುಡಸಲ್ದಾಗ ಸಳ, ಸಳ ಅಂತ ಸುಳಿದಂತಾಗಾಗಿ ದೇವಿ ಬಂದಾಳಂತ ಸುಳುವು ಹತ್ತಿದವಳಂತೆ ಮುಂದೆ ಏನಾಗುವುದೊ ಎಂದು ಗಟ್ಟಿಯಾಗಿ ನೆಲಕ್ಕ ಕವುಚಿದವಳು ಬೇಸುದ್ದಿ ಆಗುವಳು.
ಇಂಥ ನಟ್ಟಿರುಳಲಿ ಥಣ್ಣಗಿನ ಮೌನದ ನೀರವತೆಯನ್ನು ಅರ್ಥಮಾಡಿಕೊಳ್ಳಲು ದಿವ್ಯವಾಗಿ ಉರಿಯುವ ಲಾಟೀನೊಳಗಿನಿಂದ ಚಲ್ಲಿದ ಬೆಳುಕನ್ನು ಸಮಯವನ್ನೇ ಮರೆತು ತದೇಕವಾಗಿ ದಿಟ್ಟಿಸುತ್ತ ಕುಂತವ ಕತ್ತಲು ಬೆಳಕಿನಾಟಕೆ ಸಾಕ್ಷಿಯಾಗಿ ಹಾಗೇ ಕುಂತೇ ಇದ್ದ. ದೂರದಲ್ಲೆಲ್ಲೊ ಕೋಳಿ ಕೂಗಿದ್ದು ಕೇಳಿ, ಇಲ್ಲೀತನಕ ಉಬ್ಬಸಪಡುತ್ತ ಉರಿದ ಲಾಟೀನಿನ ಬೆಳಕು ಕಡಿಮೆಯಾದಂತೆನಿಸಿ, ಎದ್ದು ಮೈ ಮುರಿದು, ಒಂದೇ ಸವನೆ ಉರಿದ ಬೆಳಕು ಮತ್ತೊಂದು ರಾತ್ರಿಯವರೆಗೆ ಸುಧಾರಿಸಿಕೊಳ್ಳಲಿ ಅಂತ ಲಾಟೀನಾರಿಸಿ ಬಾಗಿಲು ತಗದು ಹೊರಗೆ ಹೋದ.
ಭಾಗ-2
ಇಲ್ಯಾಕ್ ಕುಂತಿಯೊ.. ಇನ್ನೂ ದೇವಿ ದರ್ಶನ ಮಾಡಿಲ್ಲ..- ಎಂಬ ದ್ವನಿ ಬಂದತ್ತ ಇಲ್ಲೆಂದು ಅಡ್ಡಡ್ಡ ಗೋಣು ಹಾಕಿದವ ತಲೆಯೆತ್ತಿ ಯಾರೆಂದು ಹಂಗಂದವಳೆಡೆ ನೋಡುವನು. ‘ಜೀವನದಾಗ ಒಮ್ಮೆಯಾದ್ರೂ ದೇವೀ ದಿವ್ಯತೆ ಎದ್ಯಾಗ ತುಂಬಿಸ್ಕೊಬೇಕು.. ಹಾಳು ಜನ್ಮ ಪಾವನ ಆದೀತು..’ – ಹಂಗೆಲ್ಲ ಜೋಗುಳ ತೂಗಿದಂತೆ ಹೇಳುತ್ತಿದ್ದ ಜೋಗಮ್ಮಳ ಕಣ್ಣಾಗ ಆ ದೇವಿಯೆಂಬುವವಳು ಗೆಜ್ಜಿ ಕಟಗೊಂಡು ಕುಣ್ಯಾಕತ್ತಿದ್ದು ಕಂಡಂತಾಗಿ ಮೈ ಜುಂಮ್ಮೆಂದು ಏನೆಂದರೆ ಏನೂ ತಿಳೀದ ಬೆಪ್ಪಾದ. ಬೇರು ಬುಡಮೇಲ ಮಾಡುವಂಥಾ ಸಿಡಿಲು ಕಾಣಿಸುವ ನಿನಗ ಜೀವಕ್ಕ ಹಿತ ಆಗೂವಂಗ ಮಳೆ ಸುರಿಸೂದೂ ಗೊತ್ತು.. ಉಸಿರಿಗೆ ಒಂದುಸುರು ಹೊಸೆದು ಜತೆಯಾಗಿಸೂದೂ ಗೊತ್ತು.. ಮೊಳಕೆಗೆ ಸುಡು ಬಿಸಿಲ ಪರೀಕ್ಷೆ ಯಾಕ್ ಬೇಕು- ಡೋಲಾಯಮಾನದಲಿ ತುಯ್ಯುವ ಮನಸ್ಸು ಸೆಳವಿಗೆ ಸಿಕ್ಕು ಎಲ್ಲ ವೈಚಿತ್ರ‍್ಯಗಳ ನೆನೆದು ತತ್ತರಿಸುವುದು. ಊರುಬಿಟ್ಟು ತಿಂಗಳಾದ್ರೂ ಇನ್ನೂ ಹೊಳ್ಳಿ ಹೋಗಾಕ ಯಾಕೊ ಮನಸ ಬರವಲ್ದು.. ದೇವಿನ್ನ ಕಣ್ತುಂಬ ನೋಡ್ಬೇಕು.. ಹರಕು ಮುರಕು ಬದುಕಿಗೆ ದೇವೀ ಆಶೀರ್ವಾದ ಬೇಕು.. ಎಲ್ಲಾ ಖರೆ.. ಆದ್ರ ಆ ದೇವಿ ಅಂಬೋಳು ಹೆಂಡ್ತಿ ಮೈಯ್ಯಾಗ್ ಬಂದು ಹೆಂಡ್ತಿ ಆ ದಡ, ಗಂಡ ಈ ದಡ ಆದ್ರ ಜೀವನ ಮುಂದ ಸಾಗೂದಾದ್ರೂ ಹೆಂಗವ್ವ.. ಹೆಣದ ಹಂಗ ತಣ್ಣಗಾದ ಮೈಯವಳ ಕಾವು ಅದೆಲ್ಲಿ ಕರಗಿ ಹೋಯ್ತೊ ಶಿವನೇ..- ಹಿನ್ನೋಟಕ್ಕಿಳಿದವ ಒಂದೂ ಮಾತಾಡದ ಮೂಗನಂಗ ಕುಂತಾವನ ತಲೀವಳಗ ಗೊಂದಲದ ದುರಗ ಮುರಗಿ ನಡ್ಯಾಕತ್ತಿದ್ದು ಎದುರಿಗೆ ದೇವಿಯ ಇನ್ನೊಂದು ಅವತಾರವೆಂಬಂತೆ ಇನ್ನೂ ನಿಂತಿದ್ದ ಜೋಗಮ್ಮಳಿಗೆ ಗೊತ್ತಾದಂತಾಗಿ ಹೆಗಲಮ್ಯಾಲಿನ ಚವರಿಯಿಂದ ಅವನ ತಲೀಮ್ಯಾಲ ಒಂದು ಬೀಸು ಬೀಸಿ ಅಲ್ಲಿಂದ ಸರ‍್ರನೆ ಸರದು ಹೋಗಿದ್ದಕ್ಕೆ ಅಂಥ ಸುಡು ಸುಡು ಬಿಸಿಲಾಗೂ ಅವನಿಗೆ ತಂಪನೆಯ ಸುಳಿಗಾಳಿ ಸೂಸಿದಂತಾಗಿ ಎಲ್ಲ ದೇವಿ ಮಹಿಮೆ ಅಂದ್ಕೊಂಡ.
ಜೋಗುಳ ಭಾಂವ್ಯಾಗ ಮುಣುಗಿ ಮುಣುಗಿ ಏಳಾವರೆಲ್ಲ ಇಲ್ಲೀತನಕದ ತಮ್ಮೆಲ್ಲಾ ಪಾಪಗಳನ್ನ ನೀರಾಗ ಬಿಟ್ಟು ಹಗುರಾಗಿ ಮ್ಯಾಲೆದ್ದು ಬರುವ ಭಕ್ತರ ಮುಖದಾಗ ಒಸರೂ ಭಾವ ಅದ್ಯಾಕೊ ನೋಡೂದಕ್ಕನ ಒಂಥರಾ ಚಂದನ್ನಿಸಿ ಅಂಥಾದ್ದೊಂದು ದೃಶ್ಯ ಸುಮ್ನ ಸದ್ದಿಲ್ದ ರೆಪ್ಪಿ ಪಿಳುಕಿಸ್ದ ನೋಡಕೋಂತ ಕುಂತವನಿಗೆ ಹೊತ್ತು ಏರಿದ್ದೇ ಗೊತ್ತಾಗ್ಲಿಲ್ಲ. ತಾನೂ ಒಂದ್ಸಲ ಆ ನೀರಾಗಿಳ್ದು ಎದಿಯೊಳಗ ಹೆಪ್ಪಿಸ್ಕೊಂಡ ಎಲ್ಲ ದುಃಖಾನ್ನ ಕರಗಿಸಿಕೊಳ್ಳಬೇಕನಿಸಿ ಮೈಮ್ಯಾಲಿನ ಅರಿವಿ ಬಿಚ್ಚಿ ಒಂದೊಂದ ಮೆಟ್ಟಿಲಿಳಿಯುವವನಿಗೆ ತಾನೊಂದು ಬೇರೆಯದೇ ಲೋಕಕ್ಕೆ ಹೊರಟಂತನ್ನಿಸಿ ಹೆಜ್ಜೆಗಳು ಗಾಳ್ಯಾಗ ಇಟ್ಟಂತಾಗಿ ಅಲ್ಲಿ ಬೀಸೂ ಗಾಳಿಗೆ, ಭಕ್ತರ ಗಿಜಿಗಿಡುವಿಗೆ ಒಂದು ಭಾಗವಾಗಿ, ಸಾಕ್ಷಿಯಾಗಿ ಕಳೆದುಹೋದ.
ಪಾದಕ್ಕ ನೀರು ತಗುಲಿದ್ದ ಬಂತು ಗೊಂದಲದ ಗೂಡಾಗಿದ್ದ ಜೀವನ ಅಂಬೋದು ಧನ್ಯ ಆದಂತಾಗಿ “ಉಧೋ.. ಉಧೋ..”- ಎಂದು ದೊಡ್ಡದಾಗಿ ಜೈಕಾರ ಹಾಕಿದ. ಭಕ್ತಿ ಅಂಬೂದು ಅದಾಗಲೇ ಅವನ ಮನಸಿನ್ಯಾಗ ಮಡುಗಟ್ಟುತ್ತ ಆಳವಾಗತೊಡಗಿತ್ತು. ಹಾಗೆ ಜೈಕಾರ ಹಾಕಿದ್ದೇ ತಡ ತಲೀಮ್ಯಾಲಿನ ಹೊರೆಯೊಂದು ಇಳದಂತಾಗಿ ಹಗುರಾಗಿ ನೀರಾಗೊಂದು ಮುಳುಗು ಹಾಕಿದ. ಬದುಕೊಳಗ ಕವದ ಕತ್ತಲು ನೀರಾಗ ಕರಗಿ ಹೊಸ ಮನಸ್ಯಾ ಆದಂತಾಗಿ ಮುಖ ನೋಡಕೊಳ್ಳಾಕ ನೀರಿಗೆ ಹಣಿಕಿದ. ನೀರೊಳಗ ಅಲ್ಲೀತನಕದ ತನ್ನ ಗುರುತೆಂಬೊ ಗುರುತೇ ಕಾಣದಂತಾಗಿ.. ಪಟ್ಟುಹಿಡಿದು ನಗಾರಿ ಬಾರಿಸುತ್ತ ಒಳಗೇ ಕುಂತು ಕಾಡಿಸುತ್ತಿದ್ದವನೊಬ್ಬ ನೀರಾಗ ಕಳಚಿಹೋಗಿ ಮೇಲೆದ್ದು ಬಂದವ ಬೇರೆ ಇನ್ನೊಬ್ಬ ಎಂಬಂಥ ಅನುಭೂತಿಯೊಂದು ಹುಟ್ಟಿ ಮತ್ತೆ “ಉಧೋ.. ಉಧೋ..”- ಎಂದ. ನೀರೊಳಗಿನ ಪುಣ್ಯ ಮೈಮೇಲೆಲ್ಲ ತೆಳುವಾಗಿ ಹರಡಿದಂತಾಗಿ ಅಲ್ಲೀತನಕ ಮೆತ್ತಿಕೊಂಡಿದ್ದ ಜಾಡ್ಯ ಕಳೆದು ಎಳೆದುಕೊಳ್ಳುವ ಉಸಿರಿನೊಳಗೆ ತೇಲಿಬಂದಿದ್ದು ಗಾಳಿ ಅಲ್ಲ ಜೀವವೇ ಎಂಬಂತಾಗಿ ಹುರುಪುಗೊಂಡ. ಭಾಂವಿಯಿಂದ ಮೇಲೆ ಬಂದು ನೋಡಿದರೆ ಇದೇ ಮೊದಲ ಸಲ ನೋಡುತ್ತಿರುವಂತೆ ಇನ್ನೊಂದು ತುದಿ ಕಾಣದವರೆಗೂ ನೀರೋ ನೀರು.. ಅಗಾಧ ಜಲರಾಶಿ ಕಣ್ಣೊಳಗಿಳಿದಿದ್ದೇ ತನ್ನಿರವಿನ ಪಾತ್ರ ಮತ್ತು ಅಸ್ತಿತ್ವ ನೆನೆದು ಶರಣಾಗಿ ಅದೇ ಅಗಾಧ ಜಲರಾಶಿಯ ನೀರ ಹನಿಯಾಗುವನು. ಮಣ್ಣ ಮತ್ತು ನೀರ ನಂಟಲಿ ಚಿಗುರಲೆತ್ನಿಸಿದ ತನ್ನ ಬದುಕಿಂದು ಪರೀಕ್ಷೆಗೊಡ್ಡಿದಂತೆ ದೇವಿಯ ಸಾನಿಧ್ಯಕೆ ಬಂದು ನಿಂತುದ ನೆನೆದು ಉಮ್ಮಳಿಸುವನು. ಟಿಸಿಲೊಡೆದು ಕವಲಾದ ತನ್ನ ಜೀವನದ ದಾರಿ ಕಂಡು ಅಸಹಾಯಕನಾದವನಿಗೆ ಹೊತ್ತು ಗೊತ್ತು ಮರೆತುಹೋಗುವುದು. ತನ್ನೆದುರು ತೆರೆದುನಿಂತ ಎರಡು ದಾರಿಗಳ ಮುಂದೆ ಕಳೆದುಹೋದ ಭಾವ ತೇಲಿ ಕಾಲೊಳಗಿನ ಸತು ಬಸಿದು ಹೆಜ್ಜೆಗಳು ಕಿತ್ತೇಳಲಾಗದೆ ನೆಲದೊಳಗೆ ಹುಗಿದುಹೋದಂತಾಗಿ ಕುಸಿಯುವನು.
ಹೊತ್ತೆನ್ನುವುದು ತಲೆಮೇಲೇರಿ ನಿಂತ ವೇಳೆಯಲ್ಲಿ ಸರಿಯಾಗಿ ತನ್ನ ನೆರಳು ತನ್ನದೇ ಕಾಲ ಕೆಳಗೆ ಸಿಕ್ಕು ನೀರಿನಿಂದ ಮೇಲೆ ಬಂದ ಮೀನ ಹಾಗೆ ಚಡಪಡಿಸುವನು. ನಿನ್ನ ಉಸಿರಿರದಿದ್ರೆ ಕೊಳಲೂ ಬಿದಿರು.. ನಿನ್ನ ಸೇವೆಗೆ ಈ ಜೀವ ಮುಡಿಪು- ಎಂದೆಲ್ಲ ಹೇಳಿಕೊಳ್ಳುತ್ತ ಆಗಸದೆಡೆ ಮುಖಮಾಡಿ ಜೀವವನ್ನೇ ಕಣ್ಣೊಳಗೆ ತೂರಿಸಿ ಎರಡೂ ಕೈ ಜೋಡಿಸುವನು. ಆವಾಗಾವಾಗ ಕೇಳಿಸುವ ಗುಡ್ಯಾಗಿನ ಗಂಟೀ ಸದ್ದು ಕಿವಿಗೆ ಇಂಪೆನಿಸಿ ಭಕ್ತಿ ಅನ್ನೂದು ಗರ್ಭ ಗುಡ್ಯಾಗಷ್ಟ ಅಲ್ಲ ಇಡೀ ಭೂಮೀಮ್ಯಾಲೆಲ್ಲ ತುಂಬಿ ಹೆಚ್ಚಾಗಿದ್ದು ಆಕಾಶದ ತುಂಬ ಸಾರಿಸಿದಂತಾಗಿ ಉಕ್ಕಿದ ಅಂತರಂಗದ ಭಾವಕ್ಕೆ ಬೆರಗಾಗುವನು.
ಒಂದು ಲಯದಾಗ ಬೀಸೂ ಗಾಳೀನ ಎದೀತುಂಬ ತುಂಬ್ಕೊಂಡಿದ್ದು, ಬರೀ ಗಾಳಿ ಅಲ್ಲಾಗಿ, ಅದೆಲ್ಲ ಭಕ್ತಿಯೆಂಬೂದರ ಇನ್ನೊಂದು ರೂಪ ಅಂತಾಗಿ, ಒಳಗಿನ ಜೀವದ ಕಣಕಣಗಳು ಹಿಗ್ಗಿದಂತಾಗುವವು. ಇಲ್ಲೀತನಕದ ಜಿವನದಾಗ ಎಂದೂ ಕಾಣದ ಅಲೌಕಿಕದ ಸುಖದಂಥಾದ್ದೊಂದು ಅನುಭವಕ್ಕೆ ದಕ್ಕಿ ಮೈಯ್ಯಾಗಿನ ಮುಳ್ಳೆಲ್ಲ ಉದುರಿ ಹೋದಂತೆ ಹುರುಪುಗೊಂಡ. ಮನಶ್ಯಾರ ಮುಟಗಿಯೊಳಗಿನ ಸಂಕ್ಟಗಳೆಲ್ಲಾ ಬೆರಳ ಸಂದ್ಯಾಗಿಂದ ಸೋರಿ ಹೋದಂತಾಗಿ ಜೀವಕ್ಕೊಂದು ಹೊಸ ಅರ್ಥ ಬಂದಿದ್ದು ದೇವೀ ಕೃಪೆಯಿಂದ.. ತಾನೀಗ ಬಂದು ಸೇರಿಕೊಂಡಿದ್ದು ಎಂದೋ ಒಂದಿನ ಬರಲೇಬೇಕಾಗಿದ್ದ ತಾವು.. ಇಲ್ಲಿಂದ ಎದ್ದು ಹೋಗುವುದು ಎಲ್ಲೂ ಇಲ್ಲ- ಎಂದುಕೊಂಡ.
ಮೈತುಂಬ ಮೆತ್ತಿಕೊಂಡ ಕೊಳೆ ಅನ್ನೂ ಕತ್ತಲು ಕಳದು, ಮನಸೆಲ್ಲಾ ಹಗುರಾದ ಹೊತ್ತಿನ್ಯಾಗ, ಬಂದು ಬಾರಿಸಿದ ಗುಡ್ಯಾಗಿನ ಗಂಟೀನಾದಕ್ಕ ಸ್ವರ್ಗದ ಬಾಗಿಲೇ ತೆರೆದಂತಾಗಿ, ಮೈ ಮನಸ್ಸನ್ನ ಮುದ್ದಿಮಾಡಿ ಹಿಡಿಯಾಗಿ ದೇವಿ ಪಾದಕ್ಕ ತಲೀ ಹಚ್ಚಿ: ಗೊತ್ತಿಲ್ದ ನನ್ನಿಂದೇನರ ತಪ್ಪಾಗಿದ್ರ ಹೊಟ್ಯಾಗ ಹಾಕ್ಕೊ ತಾಯಿ- ಅಂತೆಲ್ಲಾ ಹನಿಗಣ್ಣಾಗಿ ಬೇಡಿಕೊಂಡ. ನೈವೇದ್ಯ, ಪಂಚಾಮೃತ ಅಂತೆಲ್ಲ ಸವಿಯುತ್ತ ಬೆಚ್ಚಗೆ ಗುಡ್ಯಾಗ ಕುಂತ ನಿನಗೆ ನಮ್ಮ ಗುಡಸಲ್ಯಾಕ ತಾಯಿ- ಅಂದುಕೊಳ್ಳುತ್ತಿರುವವನನ್ನು, ಗುಡ್ಯಾಗಿನ ದೇವ್ರು ತನ್ನನ್ನೇ ದಿಟ್ಟಿಸುತ್ತ ನಕ್ಕಂತಾಗಿ, ಮೈಯ್ಯಾಗಿನ ಕೂದಲೆಲ್ಲ ನೆಟ್ಟಗ ಎದ್ದು ನಿಂತು, ಒಸರಿದ ಧನ್ಯತೆಯ ಭಾವದಲಿ ಮುಳುಗೇಳುವಾಗ, ಲೋಕದ ಮಾತೆ ತನ್ನ ಮನ್ಯಾಗ ಹೆಂಡ್ತಿ ಮೈಯ್ಯಾಗ ಬಂದು ಕುಂತದ್ದನ್ನ ಅಲ್ಲಿದ್ದ ಪೂಜಾರಿಯ ಕಿವಿಯ್ಯಾಗ ಹೇಳಬೇಕೆಂದುಕೊಂಡವ ಅದ್ಯಾಕೊ ಸುಮ್ಮನಾದ. ದೈವಾನೇ ಹೇಳ್ದ ಕೇಳ್ದ ಬಂದು ಮನ್ಯಾಗ ಕುಂತ ವ್ಯಾಳೇದಾಗ ಪಾಪದ ವಿಧೀನ್ನ ಹಳಿಯೂದಾದ್ರೂ ಹೆಂಗ.. ದೇವೀದು ಮಾಯದ ಆಟ- ಎಂದುಕೊಳ್ಳುವನು.
ದೇವಿಯದು ಪ್ರೀತಿಯೊ, ಕಾರುಣ್ಯವೊ.. ಹಿಡಿದಿಟ್ಟುಕೊಬೇಕಂದ್ರ ಸೋರುವ ನಮ್ಮೀ ಜಲುಮ ಯಾತಕ್ಕೂ ಸಾಲ್ದು… ನೆಟ್ಟಗ ಗುರ್ತು ಹಿಡೀದ ನಿನಗೇನರ ಅಪಚಾರ ಮಾಡಿದ್ರ ಕ್ಷಮಿಸವ್ವ – ಎಂದೆಲ್ಲ ಹೆಂಡ್ತಿಯನ್ನು ಆಗೆಲ್ಲ ಬಯಸಿದ ಮನದೊಳಗಿನ ಕಸಿವಿಸಿಯನು ಭಾರವಾಗಿ ಹೊರಹಾಕುವನು. ತನ್ನನ್ನೇ ಉರಿಸಿಕೊಂಡು ಬೆಳಕು ನೀಡುವ ದೇವೀ ಮುಂದ ಹಚ್ಚಿದ ಹಣತೆ ಆರಿ ರಾತ್ರಿಯೆಂಬೂದು ಕತ್ತಲೆಯಾಳದಲ್ಲಿ ಕಲಸಿಹೋಗಬಾರದೆಂದು ತನ್ನ ಜೀವವನೇ ಹನಿಸಿ ಹಣತೆ ಬೆಳಗಿಸುವ ಉತ್ಸುಕತೆ ತೋರುವನು. ಹೆಂಡ್ತಿ ಮೈಯ್ಯಾಗಿನ ದೇವಿ ನೆನೆದು ತನ್ನ ಜನ್ಮ ಪಾವನ ಆತು ಅಂದ್ಕೊಂಡವನ ಎದಿ ಯಾಕೊ ಮತ್ತೆ ಬರ‍್ರನೆ ಬಿಗದು ಎಳೆದುಕೊಂಡ ಉಸರು ಹೊರಗೆ ಬರದಂತಾಗಿ ಒದ್ದಾಡಿದ. ಏಕಾಏಕಿ ಬಿಡಿಸಲು ಬಾರದ ಗಂಟಂತಾದ ತನ್ನ ಬದುಕನ್ನು ಎಳೆ ಎಳೆಯಾಗಿಸುವ ಭಾರ ನಿನಗೇ ಸೇರಿದ್ದು- ವಿನೀತಭಾವದಲಿ ತೋಡಿಕೊಳ್ಳುತ್ತ ದೇವಿ ಮುಂದಿನ ಭಂಡಾರ ಹಣೀಗೆ ಬಳಿದುಕೊಂಡು ಉಧೋ..ಉಧೋ.. ಎನ್ನುವನು.
ತೀರ ಇತ್ತೀಚೆಗೆ ಇದೆಲ್ಲ ಸುರುವಾಗುವ ಮುನ್ನ ದುಡ್ಡಿನಾಸೆಗೆ ಕೋರ್ಟಿಗೆ ಹೋಗಿ ಕಟಕಟೆಯಲ್ಲಿ ನಿಂತು ಸುಳ್ಳು ಸಾಕ್ಷಿ ಹೇಳಿ ಬಂದ ದುಡ್ಡಲ್ಲಿ ಹೆಂಡ್ತಿಗೆ ಜಿಲೇಬಿ ತಂದು ತಿನ್ನಿಸಿದ ರಾತ್ರಿಯೇ ಅವಳು ಹೊಟ್ಟೆ ನೋವೆಂದು ಚ್ಯಾಪೀ ತುಂಬ ಒದ್ದಾಡಿದ್ದು ನೆನಪಿಗೆ ಬಂದು ನಿಂತಲ್ಲೇ ಮರಗಟ್ಟಿ ದೇವಿ ಮುಂದೆ ಉದ್ದಕ್ಕೆ ಬಿದ್ದು: ನಿನ್ನ ಪಾದಕ್ಕೆ ನನ್ನ ತಲೆ – ಅನ್ನುವನು. ಬಡತನದ ಕುಲುಮೆಯಲ್ಲಿ ಅರಳಿದ್ದು ಇಲ್ಲೇ ಇಲ್ಲ.. ಸುಟ್ಟುಕೊಂಡಿದ್ದೇ ಎಲ್ಲ- ಎಂದುಕೊಳ್ಳುವನು. ಊರ ಗುಡ್ಯಾಗಿನ ದೇವಿ ಮೂಗುತಿ ತುಡುಗು ಮಾಡಿ ಸಿಕ್ಕವರ ಪರವಾಗಿ ಅಂದು ಸಾಕ್ಷಿ ಹೇಳಿದ್ದಕ್ಕೇ ಹಿಂಗೆಲ್ಲ ಆಯ್ತೇ?.. ತಿಳಿವಿನಾಚೆಗೆದ್ದ ಗೊಂದಲ ದೊಡ್ಡದೆನ್ನಿಸಿ ನೆಲಕ್ಕೆ ಹಣೆಬಡಿದುಕೊಂಡ. ಹಣೆಯಿಂದ ಹರಿದ ರಕ್ತ ಮೂಗಿನ ತುದಿಗೆ ಬಂದು ನಿಂತಿತು. ಯಾರೊ ಎಬ್ಬಿಸಿ ಕಂಬಕ್ಕೆ ಕೂಡ್ರಿಸಿದರು. ಮತ್ಯಾರೋ ಕೈಗೆ ಹಾಕಿದ ಭಂಡಾರ ಹಣೆಯಲ್ಲಿ ಜಿನುಗುವ ರಕ್ತಕ್ಕೆ ನೆಕ್ಕಿಸಿದ.
ರಾವು ಬಡಿದವನಂತೆ ಕುಂತಲ್ಲೇ ಕುಂತು ಒಳಗಿನ ಕಲಕೆಲ್ಲ ಮೇಲೆ ತೇಲಿ ಬಂದಂತಾಗಿ ಹೊರಗೋಡಿ ಕಾರಿಕೊಂಡ. ಮನದ ಪೊಟರೆಯೊಳಗೆ ಮುದುರಿಕೊಂಡಿದ್ದೆಲ್ಲವೂ ಒಂದೊಂದಾಗಿ ಮೈಕೊಡವಿ ಹೊರಗೆದ್ದು ಬರುತ್ತಿರುವುದಕ್ಕೆ ವಿಸ್ಮಿತನಾಗಿ: ಇದೆಲ್ಲ ತನ್ನೊಳಗಿನ ಪಾಪ ತೊಳೆದು ಜನುಮ ಹಸನು ಮಾಡಲೆಂದೇ ದೇವಿ ತನ್ನನ್ನು ಇಲ್ಲಿಯವರೆಗೂ ಕರೆಸಿಕೊಂಡಿರುವಳೆಂಬ ನಂಬಿಕೆ ಹೆಮ್ಮರವಾಗುವುದು. ಸುಸೂತ್ರವಾಗಿ ತೇಲುತ್ತ ಬಂದ ಹಡಗು ಕಿನಾರೆ ತಲುಪುತ್ತಲೇ ಮುಳುಗಬೇಕೆಂದರೆ ದೇವಿಯದೇ ಕಾರುಬಾರೆಂದುಕೊಳ್ಳುವನು. ದೈವ ಎಂಬೂದು ಶಿಲೆಯ ರೂಪ ತಳೆದು ಕಣ್ಣ ಮುಂದೆ ಭೂಮ್ಯಾಕಾಶವಾಗಿ ನಿಂತು ಮನಸೊಳಗಿನ ಮಾತುಗಳಿಗೆ ಧ್ವನಿಯಾಗಿಬಿಟ್ಟರೆ ಜನುಮಕ್ಕೆ ಮತ್ತೇನು ಬೇಕು?.. ದೂರದಿಂದ ನೀರ ಅಲೆಗಳ ಮೂಲಕ ತೇಲಿ ಬಂದ ಭಕ್ತಿ ಅಂಬೂದು ಅವನೆದೆಯೊಳಗೆ ಲಯವಾಗುವುದು.
(ಕೃತಿ: ತಿದಿಯ ತುದಿಗೆ ಬೆಂಕಿಯ ಉಗುಳು (ಕಥಾಸಂಕಲನ), ಲೇಖಕರು: ಲಕ್ಷ್ಮಣ ಶರೆಗಾರ, ಬೆಲೆ: 140/- )

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ