ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ

ಮಾಯೆಯಿಂದ ಜನಿಸಿ
ಮಾಯೆಗೆ ಮೋಹಿತನಾಗಿ
ಮಾಯೆಯ ಉತ್ಪತ್ತಿಗೆ ಬೀಜವಾಗುವ
ಮಾಯಾಲೋಲನೆಂಬ ಮಾನವ
ಬಾಹ್ಯಲೋಕದಲ್ಲಿ
ಹೆಣ್ಣು ಹೊನ್ನು ಮಣ್ಣುಗಳೆಂಬ ತ್ರಿವಿಧ ರೂಪದ ಮಾಯೆಯಲ್ಲಿ ಬಂಧನ
ಆಂತರ್ಯ ಲೋಕದಲ್ಲಿ
ಅರಿಷಡ್ವರ್ಗಗಳ ರೂಪದ
ಮಾಯೆಯ ಅಂಕೆಯೊಳಗೆ ಬಂಧನ

ಮಾನವನ ಭವಿಯ ಬದುಕಿನ
ಲಿಖಿತ ಬರೆಯುವುದು ವಿಧಿಯ ನಿಯಮ
ಲಗ್ನ ವಿಘ್ನ, ಒಳಿತು ಕೆಡುಕು
ಕತ್ತಲು ಬೆಳಕು, ಸುಖ ದುಃಖಗಳೆಂಬ
ದ್ವಂದ್ವಗಳನ್ನು
ಜೀವನವೆಂಬ ಹಾಳೆಯಲ್ಲಿ ಬರೆಯುವುದು
ಮಾಯೆಯ ಕೈಯಲ್ಲಿನ ಲೇಖನಿ

ಸ್ವರ್ಗ ನರಕ ಮೋಕ್ಷ ಸಿಗುವುದು ಸತ್ತ ಬಳಿಕ
ಎಂಬ ಮೂರ್ಖ ನಂಬಿಕೆಯಲ್ಲಿ
ಬಾಳುತ್ತಾನೆ
ಇಹಲೋಕದ ಬದುಕೆಲ್ಲವನ್ನೂ ಪರಲೋಕದ ಸಿದ್ಧತೆಗಾಗಿ

ಕೊಟ್ಟ ಕುದುರೆಯನ್ನು ಏರದೇ ಮತ್ತೊಂದು ಕುದುರೆ ಬಯಸಿ ಹೊರಡುತ್ತಾನೆ
ಕಂಡುದ ಹಿಡಿಯಲೊಲ್ಲದೆ ಕಾಣುದುದನರಸಿ ತೆರಳುತ್ತಾನೆ
ಭ್ರಾಂತ ಹುಸಿಯನ್ನೇ ನಿಜವೆಂದುಕೊಂಡು
ಆತ್ಮವಂಚನೆಯೆಂಬ ಆತ್ಮಹತ್ಯೆ ಮಾಡಿಕೊಂಡು

ಸುತ್ತಿ ಸುತ್ತಿ ಅಲೆದು
ಕೊನೆಗೊಂದು ದಿನ ತನ್ನ ಮೂಳೆಗಳನ್ನು
ಧರೆಗೆ ಅರ್ಪಿಸಿ ಮರೆಯಾಗುತ್ತಾನೆ
ಮನುಷ್ಯ
ತಿರುಗಿ ತಿರುಗಿ ಕೊನೆಗೆ
ತನ್ನ ಶಕ್ತಿಯನ್ನು ಕಳೆದುಕೊಂಡು
ಸೋತು ನೆಲಕ್ಕೆ ಬೀಳುವ
ಬುಗುರಿಯಂತೆ

ಬದುಕೆಂಬ ಬುಗುರಿಯ ವೇಗ
ತಿರುಗುವ ಕಾಲ
ತೀರ್ಮಾನಿಸೋದು ಪ್ರಕೃತಿ
ಮನುಷ್ಯ
ಪ್ರಕೃತಿ ತಿರುಗಿಸುವ ಬುಗುರಿ
ಅಷ್ಟೇ!

ಲಕ್ಷ್ಮಿಕಾಂತ ಮಿರಜಕರ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವದವರು.
ʼಚಿಲುಮೆʼ ಇವರ ಪ್ರಕಟಿತ ಕೃತಿ.. “ಬಯಲೊಳಗೆ ಬಯಲಾಗಿ”ಗಜಲ್ ಸಂಕಲನ ಅಚ್ಚಿನಲ್ಲಿದೆ.
ಸದ್ಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.