ನಿನ್ನ ತುಟಿಗಳು
ಈ ಎಳೆ ಎಸಳುಗಳೆರಡು ಹೇಗೆ ಹೊಂದಿಕೊಂಡು ತುಟಿಯೆನಿಸಿವೆ
ಮೇಲ್ದುಟಿಗೆ ಮೇಲೆಂಬ
ಕೆಳದುಟಿಗೆ ಕೆಳಗೆಂಬ
ಯಾವ ಹಮ್ಮುಗಳಿಲ್ಲ
ನಾಲಗೆ ಆಡುವದನೆಲ್ಲ ಆಡಿ ಹಾಡಾಗಿಸುತ್ತವೆ
ನಕ್ಕಾಗ ನಕ್ಕು ಅತ್ತಾಗ ಮುದುರಿ
ಉದುರಿ ಬಿದ್ದ ಎಲೆಗಳ ಬಗ್ಗೆ
ಅವಕೆಷ್ಟು ಮರುಕ
ಅದೆಷ್ಟು ಬಾರಿ ನಾಲಗೆಗೆ ಬುದ್ಧಿ ಹೇಳಿ
ಬಿದ್ದ ಹಲ್ಲುಗಳ ಕುರಿತು ಖೇದಗೊಂಡು
ಮಾತು ಮಾತಿನ ಮೋಹಕೆ
ವಿಷಾದ ಗೀತೆ
ಹಾಡಿ ಹಾಡಿ ಕಪ್ಪಿಟ್ಟು
ಪ್ರಿಯ ಸಖಿ
ನಿನ್ನ ಗುಲಾಬಿ ತುಟಿಗಳ ಋಣ ದೊಡ್ಡದು
ನಿನ್ನ ತುಟಿ ರಂಗು ಉಂಡು
ಅವೆಷ್ಟು ಹಾಡುಗಳು
ಈ ಬಡ ಲೋಕ ಸಲುಹುತ್ತಿವೆ
ತುಟಿಗೆ ತುಟಿ ಬಿಗಿದು
ನನ್ನೆದುರಿನ ನೀನು
ಆಡಬೇಕಾದ ಕೊನೆಯ ಮಾತೂ
ಲೋಕ ಪ್ರೇಮದ ಹಾಡಾಗಿರುತ್ತದೆ
ನಿನ್ನ ಗುಲಾಬಿ ತುಟಿಗಳ ಕುರಿತು
ಕಡು ಪ್ರೇಮವನ್ನಲ್ಲದೆ ಮತ್ತೇನೂ ಹೊಂದಿರದ ನಾನು
ನಿಸ್ಪಾಪಿ ಪ್ರೇಮವನ್ನು ಹಾಡುತ್ತಲೇ ಇರುತ್ತೇನೆ
ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.