ಹಿಂದಿನ ಕಾಲದಲ್ಲಿ ಭಾಗವತರು ಪ್ರಸಂಗದ ಮೊದಲಿನಿಂದ ಕೊನೆಯವರೆಗಿನ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡೇ ತಯಾರಾಗಿರಬೇಕಾಗಿತ್ತು. ಇಂತಹಾ ಆದಿಯ ಪದ್ಯಗಳಿಗೆ ಕಥಾಸಾರ ಎಂಬ ಹೆಸರು. ಇದನ್ನು ಕಥಾನುಸಾರವೆಂದೂ ಕರೆಯುತ್ತಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರ ಕಾಲ ಮತ್ತು ಅದಕ್ಕೂ ಮೊದಲು ಪ್ರಸಂಗದ ಕಥಾಸಾರವನ್ನು ಪ್ರದರ್ಶನದ ವೇಳೆ ಕೈ ಬಿಡುವ ಪದ್ಧತಿ ಇರಲಿಲ್ಲ.ಸದ್ಯದ ಸಂದರ್ಭ ಕಥಾಸಾರ ಅಂದರೇನೆಂಬುದೇ ಅರಿವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
‘ಬಲಿಪ ಮಾರ್ಗ’ ಅಂಕಣದಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ ಅವರು ಕಥಾಸಾರದ ಕುರಿತು ಬರೆದಿದ್ದಾರೆ.
ಯಕ್ಷಗಾನ ಪ್ರಸಂಗವಾಡಿಸುವ ರೀತಿ ಹಿಂದೆ ನಿಯಮಬದ್ಧವಾಗಿಯೂ ಸಾವಧಾನವಾಗಿಯೂ ಇರುತ್ತಿತ್ತು. ಪ್ರಸಂಗದ ಆದಿಯಲ್ಲಿ ಕವಿ ರಚಿಸಿದ ದೇವತಾಸ್ತುತಿಗಳು, ಕಥೆಯ ಸಾರ, ಕಥೆ ಸಾಗುವ ರೀತಿ ಇವೆಲ್ಲವನ್ನೂ ಒಳಗೊಂಡಿರುತ್ತಿತ್ತು. ಕವಿ ರಚಿಸಿದ ಮೊದಲ ಕೆಲವಾರು ಪದ್ಯಗಳು ಇವೇ ಆಗಿರುತ್ತಿತ್ತು. ಪ್ರಸಂಗದ ಕೊನೆಗೆ ಮಂಗಲ ಪದ್ಯದ ಜತೆಗೇ ಕವಿಯ ಹೆಸರು ಇತ್ಯಾದಿಯೂ ಇರುತ್ತಿದ್ದವು. ಭಾಗವತನು ಇವನ್ನೆಲ್ಲ ಸೇರಿಸಿಕೊಂಡೇ ಹಾಡಬೇಕಾಗಿರುತ್ತಿತ್ತು. ಹಾಗಾಗಿ ಭಾಗವತರು ಪ್ರಸಂಗದ ಮೊದಲಿನಿಂದ ಕೊನೆಯವರೆಗಿನ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡೇ ತಯಾರಾಗಿರಬೇಕಾಗಿತ್ತು. ಇಂತಹಾ ಆದಿಯ ಪದ್ಯಗಳಿಗೆ ಕಥಾಸಾರ ಎಂಬ ಹೆಸರು. ಇದನ್ನು ಕಥಾನುಸಾರವೆಂದೂ ಕರೆಯುತ್ತಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರ ಕಾಲ ಮತ್ತು ಅದಕ್ಕೂ ಮೊದಲು ಪ್ರಸಂಗದ ಕಥಾಸಾರವನ್ನು ಪ್ರದರ್ಶನದ ವೇಳೆ ಕೈ ಬಿಡುವ ಪದ್ಧತಿ ಇರಲಿಲ್ಲ. ಸದ್ಯದ ಸಂದರ್ಭ ಕಥಾಸಾರ ಅಂದರೇನೆಂಬುದೇ ಅರಿವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಅಜ್ಜನ ನೆನಪನ್ನು ಮಾಡುತ್ತಾ ಕಿರಿಯ ಬಲಿಪ ನಾರಾಯಣ ಭಾಗವತರು ಹೀಗನ್ನುತ್ತಾರೆ: “ಅಜ್ಜ ತಾಳಮದ್ದಳೆಯ ಸಂದರ್ಭದಲ್ಲೂ ಕಥಾಸಾರವನ್ನು ಹಾಡುತ್ತಿದ್ದರು. ಇದನ್ನು ನಾನೇ ನೋಡಿದ್ದೇನೆ. ಪಾತ್ರ ಹಂಚಿಕೆಯಾಗುವವರೆಗೂ ಪ್ರಸಂಗದ ಸ್ತುತಿಪದ್ಯಗಳನ್ನು ಮತ್ತು ಕಥಾಸಾರವನ್ನು ಹೇಳುತ್ತಿರುತ್ತಿದ್ದರು.” ಆ ಕಾಲದಲ್ಲಿ ಮನೆ ಮನೆಯಲ್ಲಿ ತಾಳಮದ್ದಳೆ ಪೂಜೆ ಪುನಸ್ಕಾರಗಳ ಸಂದರ್ಭ ನಡೆಯುತ್ತಿತ್ತು ಎಂಬುದನ್ನು ಗಮನಿಸಬೇಕು. ಮನೆಗೆ ಬಂದ ಅತಿಥಿ ಅಭ್ಯಾಗತರೇ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಕಾಲವದು. ಹಾಗಾಗಿ ಪಾತ್ರ ನಿಶ್ಚಯವೆಂಬುದು ಯಾರೆಲ್ಲ ಅತಿಥಿಗಳು ಬಂದರೆಂಬುದರ ಮೇಲೆ ತೀರ್ಮಾನವಾಗುತ್ತಿತ್ತು. ಪಾತ್ರ ತೀರ್ಮಾನವಾಗುವವರೆಗೆ ಸಾವಧಾನವಾಗಿ ಅಂದಿನ ಪ್ರಸಂಗದ ಸ್ತುತಿ ಪದ್ಯಗಳನ್ನು ಮತ್ತು ಕಥಾಸಾರವನ್ನು ಭಾಗವತರು ಹಾಡುತ್ತಿದ್ದರು. ಸಾವಕಾಶವಾಗಿ ಚೆಂಡೆಯ ‘ಪೀಠಿಕೆ’ ಎಂಬ ವಿವಿಧ ಲಯವಿನ್ಯಾಸಗಳಲ್ಲಿ ಚೆಂಡೆಯ ಪಾಠಾಕ್ಷರಗಳ ವಾದ್ಯಪ್ರಬಂಧವನ್ನು ವಾದಕರು ನುಡಿಸಿ ತೋರಿಸುತ್ತಿದ್ದರು.
ತಾಳಮದ್ದಳೆ ಎಂದರೆ ‘ಭಾರತೀ’ ವೃತ್ತಿಯೇ ಪ್ರಧಾನವಾದ ನಾಟ್ಯವಿಲ್ಲದ ಮಾತಿನಲ್ಲೇ ಪಾತ್ರವಿಸ್ತರಣವನ್ನು ಮಾಡುವ ಕ್ರಮ. ವಿದ್ವಾಂಸ ದಿವಂಗತ ಸೇಡಿಯಾಪು ಕೃಷ್ಣ ಭಟ್ಟರೆನ್ನುವಂತೆ ಅದು ‘ಲುಪ್ತನಾಟ್ಯ’. ಆ ಕಾಲದ ಮತ್ತೋರ್ವ ಮೇರು ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರೂ ಕೂಡ ಕಥಾನುಸಾರವನ್ನು ಹೇಳುತ್ತಿದ್ದರು ಅಥವಾ ಹಾಡುತ್ತಿದ್ದರು. ಕಿರಿಯ ಬಲಿಪ ನಾರಾಯಣ ಭಾಗವತರು ಯಕ್ಷಗಾನ ರಂಗಕ್ಕೆ ಪ್ರವೇಶಿಸುವಾಗ ಕಥಾಸಾರ ಹೇಳುವ ಕ್ರಮ ನಿಂತಿತು. ಹಾಗಾಗಿ ಕಿರಿಯ ಬಲಿಪರ ಕಾಲದಲ್ಲಿ ‘ಕಥಾಸಾರ’ ಪರಿಕಲ್ಪನೆ ಜಾರಿಯಲ್ಲಿರಲಿಲ್ಲ. ಈ ಕಾಲದಲ್ಲಂತೂ ಅದರ ಹೆಸರು ಕೇಳದವರು ಅನೇಕರು.
ಈ ಪದ್ಧತಿ ಪ್ರಾಚೀನ ಭಾರತದ ನಾಟ್ಯಶಾಸ್ತ್ರದ ದಾರಿಯಲ್ಲೇ ಇತ್ತೆಂಬುದು ಬಹು ರೋಚಕ ಅಂಶ. ಕಥಾನುಸಾರ ಅಥವಾ ಕಥಾಸಾರವೆಂಬುದು ಭಾರತೀಯ ನಾಟ್ಯ(ನಾಟಕ) ಪರಂಪರೆಯ ಭಾಗವಾಗಿಯೇ ಇತ್ತು. ಈ ಹಿನ್ನೆಲೆಯಲ್ಲಿ ಯಕ್ಷಗಾನ ಕ್ಷೇತ್ರದ ವಿದ್ವಾಂಸ ದಿವಂಗತ ಕುಕ್ಕಿಲ ಕೃಷ್ಣ ಭಟ್ಟರ “ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ” ಎಂಬ ಲೇಖನದ ಒಂದು ಪಂಕ್ತಿಯನ್ನು ಗಮನಿಸಬಹುದು. ಅದು ಈ ರೀತಿ ಇದೆ:
“ಹೀಗೆ ‘ಆಮುಖ’ದ ಹಾಸ್ಯ ಪ್ರಯೋಗವಾದ ಮೇಲೆ ‘ಪ್ರಸ್ತಾವಕ’ನು ಬಂದು (ಅವನಿಗೆ ಕಥಾ ಪ್ರಸಂಗಿ ಎಂದೂ ಹೆಸರಿದೆ) ಮುಂದಿನ ಆಟದ ಕಥಾಭಾಗವನ್ನು ಪ್ರೇಕ್ಷಕರಿಗೆ ಹೇಳಿ ತಿಳಿಸಬೇಕೆಂದಿದೆ. ನಮ್ಮ ಆಟದಲ್ಲಿ ಈ ‘ಕಥಾನುಸಾರ’ ಹೇಳುವುದನ್ನು ಭಾಗವತನೇ ಮಾಡುತ್ತಾನೆ. ಆಮೇಲೆ ಯವನಿಕಾಂತರದಲಿ (ತೆರೆ) ವೀರರಸದ ಪದ್ಯವೊಂದನ್ನು ಹೇಳಬೇಕು, ಅದರ ಬೆನ್ನಿಗೆ ವಾದಕರು ಶುಷ್ಕ ವಾದ್ಯಗಳನ್ನು ಬಾರಿಸಬೇಕು ಎಂದು ಶಾಸ್ತ್ರವಿಧಿ. ‘ಶುಷ್ಕವಾದನ’ ಎಂದರೆ ಗೀತವಿಲ್ಲದೆ ಬಾರಿಸುವುದು ಎಂದರ್ಥ. ಈಗಿನ ಆಟಗಳಲ್ಲಿಯೂ ಯಥಾಪ್ರಕಾರ ಭಾಗವತನು ಒಂದು ಭಾಮಿನಿಯನ್ನೋ, ವೃತ್ತವನ್ನೋ ಹೇಳಿ ಚೆಂಡೆಮದ್ದಳೆಗಳನ್ನು ತೆರೆ ಸೀರೆಯ ಹಿಂದೆ ಬಾರಿಸುತ್ತಾರೆ. ಅದಕ್ಕೆ ನಾವು ಪೀಠಿಕೆ ಹೊಡೆಯುವುದೆನ್ನುತ್ತೇವೆ. ಆ ಮೇಲೆ ವೇಷಗಳು ಬಂದು ಕ್ರಮದಂತೆ ತೆರೆಯನ್ನು ಸರಿಸಿ ರಂಗಪ್ರವೇಶ ಮಾಡಿ ಕುಣಿದು ತಮ್ಮ ಪಾತ್ರದ ಸ್ವಭಾವ ಪೌರುಷ ಪ್ರದರ್ಶನ ಮಾಡುವುದು; ಈ ಪ್ರವೇಶ ಕ್ರಮಕ್ಕೆ ನಾವು ‘ಅಬ್ಬರ ತಾಳ’ ಎನ್ನುತ್ತೇವೆ. ಈ ಕ್ರಮ ಮತ್ತು ಹೆಸರು ಎಲ್ಲವೂ ಶಾಸ್ತ್ರೋಕ್ತವಾದುದೇ ಆಗಿವೆ….” (ನೋಡಿ: ಕುಕ್ಕಿಲ ಸಂಪುಟ, ಪುಟ 29, ಸಂಪಾದಕರು ಡಾ.ಎಂ.ಪ್ರಭಾಕರ ಜೋಷಿ).
ಪಾತ್ರ ನಿಶ್ಚಯವೆಂಬುದು ಯಾರೆಲ್ಲ ಅತಿಥಿಗಳು ಬಂದರೆಂಬುದರ ಮೇಲೆ ತೀರ್ಮಾನವಾಗುತ್ತಿತ್ತು. ಪಾತ್ರ ತೀರ್ಮಾನವಾಗುವವರೆಗೆ ಸಾವಧಾನವಾಗಿ ಅಂದಿನ ಪ್ರಸಂಗದ ಸ್ತುತಿ ಪದ್ಯಗಳನ್ನು ಮತ್ತು ಕಥಾಸಾರವನ್ನು ಭಾಗವತರು ಹಾಡುತ್ತಿದ್ದರು.
ಕಥಾಸಾರ ಹೇಗಿರುತ್ತಿತ್ತು ಎಂಬುದನ್ನು ಈಗ ಕೆಲವಾರು ಪ್ರಸಂಗ ಪುಸ್ತಕಗಳಿಂದಷ್ಟೇ ತಿಳಿಯಲು ಸಾಧ್ಯ. ಅಂತಹಾ ಕೆಲವನ್ನು ಇಲ್ಲಿ ಗಮನಿಸುವುದು ದಾಖಲಾತಿಯ ದೃಷ್ಟಿಯಿಂದಲೂ ಅಗತ್ಯ ಎಂಬುದು ಅಭಿಪ್ರಾಯ. ಹಾಗಾಗಿ ಯಕ್ಷಗಾನದ ಕವಿ ಪಾರ್ತಿಸುಬ್ಬನ ಪ್ರಸಂಗಗಳು ಮತ್ತು ಹಿರಿಯ ಬಲಿಪ ನಾರಾಯಣ ಭಾಗವತರ ಕೆಲವು ಪ್ರಸಂಗಗಳ ಕಥಾಸಾರವನ್ನು ಇಲ್ಲಿ ನೋಡೋಣ.
ಪಾರ್ತಿಸುಬ್ಬನ ಪುತ್ರಕಾಮೇಷ್ಟಿ-ಸೀತಾಕಲ್ಯಾಣ ಪ್ರಸಂಗದ ಕಥಾಸಾರದ ಕೆಲವಾರು ಪದ್ಯಗಳನ್ನು ಗಮನಿಸೋಣ. ಈ ಪದ್ಯಗಳು ವಿದ್ವಾನ್ ಕುಕ್ಕಿಲ ಕೃಷ್ಣ ಭಟ್ಟರು ಸಂಪಾದಿಸಿದ “ಪಾರ್ತಿಸುಬ್ಬನ ಯಕ್ಷಗಾನಗಳು” ಪುಸ್ತಕದಿಂದ ಆಯ್ದದ್ದು.
ಮಾಲಿನೀ ವೃತ್ತ
ಮದಗಜವದನಂ ತಂ ವಿಘ್ನವಿಚ್ಛೇದದಕ್ಷಂ|
ಸರಸಿಜಭವಜಾಯಾಂ ಭಾರತೀಂ ಸೋಮಮೀಶಂ|
ನಿಶಿಚರಕುಲಕಾಲಂ ರಾಘವಂ (ಜಾನಕೀಂಚ) ಜಾನಕೀಶಂ|
ಪ್ರತಿದಿನಮತಿಭಕ್ತ್ಯಾ ನೌಮಿ ವಾಲ್ಮೀಕಿಮಾರ್ಯಂ||
ಶಾರ್ದೂಲ ವಿಕ್ರೀಡಿತ ವೃತ್ತ
ಪ್ರಾಪ್ತಾನಂತಘನಶ್ರಿಯಃ ಪ್ರಿಯತಮಶ್ರೀರೋಹಿಣೀಜನ್ಮನೋ|
ವಂಚಿಕ್ಷ್ಮಾವರ ವೀರಕೇರಳವಿಭೋ ರಾಜ್ಞಃ ಸ್ವಸೋಃ ಸೂನುನಾ|
ಶಿಷ್ಯೇಣ ಪ್ರವರೇಣ ಶಂಕರಕವೇ ರಾಮಾಯಣಂ ವಣ್ರ್ಯತೇ|
ಕಾರುಣ್ಯೇನ ಕಥಾಗುಣೇನ ಕವಯಃ ಕುರ್ವಂತು ತಾಂ ಕರ್ಣಯೋಃ||
ಈ ಎರಡೂ ವೃತ್ತಗಳು ಕೊಟ್ಟಾರಕರ ಮಹಾರಾಜನ ಕೇರಳದ ಕಥಕಳಿ ರಾಮಾಯಣ ಪುತ್ರಕಾಮೇಷ್ಟಿಯ ಆರಂಭದಲ್ಲಿರುವವು. ಪಾರ್ತಿಸುಬ್ಬ ಬರೆದ ಪಟ್ಟಾಭಿಷೇಕ ಹಾಗು ಪಂಚವಟಿ ಪ್ರಸಂಗಗಳ ಪ್ರದರ್ಶನ ಸಂದರ್ಭಕ್ಕೂ ಈ ವೃತ್ತಗಳು ಕೆಲವು ಓಲೆ ಪ್ರತಿಗಳಲ್ಲಿರುತ್ತವೆ. (ಕುಕ್ಕಿಲ ಕೃಷ್ಣ ಭಟ್ಟರು ತಮ್ಮ “ಪಾರ್ತಿಸುಬ್ಬನ ಯಕ್ಷಗಾನಗಳು” ಎಂಬ ಕೃತಿಯಲ್ಲಿ ಹೇಳಿದ ಮಾತುಗಳಿವು. ಪುಟ ಸಂಖ್ಯೆ 3,)
ನಾಟಿ ರಾಗ-ಜಂಪೆ ತಾಳ
ಜಯತು ಗೌ|ರಿಯ ಕುವರ| ಜಯಸಕಲ |ವಿಘ್ನಹರ|
ಜಯಸುಜನ|ಮಂದಾರ|ಜಯಸುರೋ| ದ್ಧಾರ||
ಕಮನೀಯ|ಗುಣರಾಜ|ಕಂಜಬಾಂ|ಧವತೇಜ|
ಕುಮುದಕು|ಟ್ಮಲದಂತ| ಕುಂದಛವಿ|ಯಂಥ|
ರಮಣೀಯ|ಕರರೂಪ| ರಕ್ಷಿಸೆ| ನ್ನನುಗಣಪ|
ನಮಿಪೆನಾ| ಬಲಬಂದು| ಹೇ ದಯಾ|ಸಿಂಧು||1||
ಬಾಲೇಂದು ಶೇಖರಾ ಬಲುದುರಿತ ಸಂಹಾರ
ಮೂಲೋಕ ಸಂಚಾರ ಮುನಿಜನೋ ದ್ಧಾರ|
ನೀಲಾಚಲೋತ್ತುಂಗ ನಿಖಿಲದೇ ವಾಸಂಗ|
ಪಾಲಿಸೋ ಮಂಗಲವ ಪರಮಗುರು ಜನವ||
ವರವೀವ ಧಾತಾರ ವಾರ್ಧಿಸಮ ಗಂಭೀರ|
ಮೆರೆವ ಮೋ|ಹನಕಾಯ ಮೋದಕ ಪ್ರೀಯ|
ಸುರಪಾಲ ಕನರಕ್ಷ ಸಕಲದೇ ವಾಧ್ಯಕ್ಷ|
ವರದ ಮಧು|ಪುರವಾಸ|ಶರಣು ವಿ|ಘ್ನೇಶ||
ಹೀಗೆ ಇನ್ನೂ ಮೂರು ಪದ್ಯಗಳಿವೆ
ಮತ್ತಿನದು ಕಂದ ರಚನೆ
ಗಜವದನ ಗೌರಿ ಶಾರದೆ
ಅಜಹರಿ ಶಿವರಂಘ್ರಿಯುಗಳಕಭಿವಂದಿಸು |
ಸುಜನಂ ವಾಲ್ಮಿಕ ಮುನಿಪನ
ಭಜಿಸುತ ರಾಮಾಯಣವನು ಪೇಳುವೆ ಮುದದಿ ||
ಮತ್ತಿನ ಹತ್ತು ದ್ವಿಪದಿ ರಚನೆಗಳಲ್ಲಿ, ಗಿರಿಜಾದೇವಿ ಪರಶಿವನಲ್ಲಿ ಅತ್ಯಂತ ಉತ್ತಮವಾದ ಹರಿಕಥೆಯಾವುದೆಂದು ಕೇಳುತ್ತಾಳೆ. ಆಗ ಶಿವ ರಾಮಾಯಣದ ಮಹತ್ವವನ್ನು ತಿಳಿಸುತ್ತಾನೆ. ಜತೆ ಜತೆಗೇ ವಾಲ್ಮೀಕಿ ವ್ಯಾಧನಾಗಿದ್ದ ಕಥೆಯಿಂದ ಆರಂಭವಾಗಿ, ಅವನು ಹುತ್ತದಿಂದ ಹುಟ್ಟಿದ ವಾಲ್ಮೀಕಿ ಮುನಿಯಾಗಿ ಬದಲಾಗುವ ಕಥೆಯವರೆಗಿನ ಅಂಶಗಳು ಈ ದ್ವಿಪದಿಗಳಲ್ಲಿ ಬರುತ್ತವೆ. ವಾಲ್ಮೀಕಿ ಕ್ರೌಂಚ ಪಕ್ಷಿಯ ವಧೆಯನ್ನು ಕಂಡು ಕರಗಿ ರಾಮಾಯಣದ “ಮಾನಿಷಾದ ಪ್ರತಿಷ್ಠಾ…” ಶ್ಲೋಕ ಶೋಕರೂಪದಿಂದ ಹೊರಡುತ್ತದೆ ಎಂಬುದೂ ಇಲ್ಲಿ ಉಲ್ಲೇಖವಾಗುತ್ತದೆ. ವಾಲ್ಮೀಕಿ ಕುಶ-ಲವರಿಗೆ ರಾಮಾಯಣ ಕಥೆಯನ್ನು ಹೇಳುವವರೆಗೂ ಸಾಗುತ್ತವೆ ಈ ದ್ವಿಪದಿಗಳು.
ದ್ವಿಪದಿ
ಪರಶಿವನ ಪಾದಕ್ಕೆ ಪೊಡಮಟ್ಟು ನಿಂದು|
ಗಿರಿಜೆ ಹರಿಕಥೆ ಗಧಿಕವಾವುದೆನಲಂದು||
ರಾಮಾಯಣಾಮೃತವು ರಮಣೀಯಕರವು|
ಭಾಮಿನೀಮಣಿ ಕೇಳು ಬಹುಸೌಖ್ಯಕರವು||
ಎನಲಾಗಿ ಈ ಕಥೆಯ ಎನಗೆ ಪೇಳೆನಲು|
ಘನಮಹಿಮ ರಾಮಾಯಣವನೊರೆಯುತಿರಲು||
ಇತ್ತ ಬದರಿಯೊಳೋರ್ವ ಚೋರ ವ್ಯಾಧಂಗೆ|
ಉತ್ತಮಶ್ಲೋಕ ಮುನಿವರರ ದಯವಾಗೆ||
ಪರಮತಪಸಿಗೆ ಮೆಚ್ಚಿ ಪರಮೇಷ್ಠಿ ಬಂದು|
ಕರುಣಿಸಲು ವಾಲ್ಮೀಕಿ ಋಷಿಯಾದನಂದು||
ವರಕ್ರೌಂಚಪಕ್ಷಿಯನು ಕಂಡು ಚಿಂತಿಸುತ|
ಇರುತಿರಲು ಸುರಮುನಿಪ ನಾರದನು ಬರುತ||
ನಾರದನ ಚರಣಕ್ಕೆ ನಮಿಸಿ ನಿಂದಿರುವ|
ನೀರೇರುವಾಲಿಗಳ ವಾಲ್ಮಿಕನ ಕರವ||
ಪಿಡಿದು ರಜತಾದ್ರಿಯೊಳು ಪಾರ್ವತಿಗೆ ಪ್ರಿಯದಿ|
ಮೃಡನುಸುರ್ದ ರಾಮಾಯಣವ ಪೇಳ್ದ ಮುದದಿ||
ಕೇಳಿ ವಾಲ್ಮೀಕಿ ಮುನಿ ಕುಶಲವರಿಗಂದು|
ಪೇಳ್ವ ಮನವಾಗಿರಲು ಬಾಲಕರು ಬಂದು||
ನಮ್ಮ ಪೂರ್ವಜರೆಂತು ಜನಿಸಿದರು ಜೀಯ|
ಎಮ್ಮನರುಹೆನೆ ಪೇಳ್ದನಾಗ ಮುನಿರಾಯ||
ಮುಂದಿನ ಮಧ್ಯಮಾವತಿ ರಾಗ ತ್ರಿಪುಟ ತಾಳದ ನಾಲ್ಕು ಹಾಡುಗಳಲ್ಲಿ ಸೂರ್ಯವಂಶದ ಪರಂಪರೆಯನ್ನು ತಿಳಿಸುವಂಥ ಮತ್ತು ರಾಜರನ್ನು ಹೆಸರಿಸುವಂಥ ಹಾಡುಗಳನ್ನು ಪಾರ್ತಿಸುಬ್ಬ ರಚಿಸಿದ್ದಾನೆ. ದಶರಥನು ಒಡ್ಡೋಲಗ ಕೊಡಲು ತೊಡಗುವಲ್ಲಿಯವರೆಗೆ ಈ ಪದ್ಯಗಳು ರಚಿಸಲ್ಪಟ್ಟಿದೆ.
1. ಬ್ರಹ್ಮನಿಂದ ಮ|ರೀಚಿ ಕಶ್ಯಪ|ಸೂರ್ಯ ಮನುವಾ|ಕುಕ್ಷಿಯು|
ಧರ್ಮಯುತನು ವಿ|ಕುಕ್ಷಿ ಇಕ್ಷ್ವಾಕು| ಕುಲದಿ ರಾಯ ರ| ಘೂತ್ತಮ-|
ರಾಮಕೇಳು||
2. ಅಜಕುಮಾರ ಸು|ಧೀರಮಂಗಲ| ತ್ರಿಜಗರಕ್ಷಕ| ನೆನಿಸುತ|
ಸುಜನವಂದಿತ |ನಾದ ದಶರಥ| ನೃಪತಿಲಕ ನೆಸೆ|ದಿರ್ದನು-|
ಸುಂದರಾಂಗ||
3. ಭಾಸುರಾಂಗದ| ದಶರಥೇಂದ್ರಗೆ| ಕೌಸಲ್ಯಾ ಸ್ತ್ರೀ | ರತ್ನವ|
ಆ ಸುಮಿತ್ರೆಯ | ಕೈಕಾದೇವಿಯ| ನೀಶ ಮದುವೆಯ | ರಚಿಸಿದ-| ಚಂದದಿಂದ||
4. ಒಂದುದಿನ ಸು|ಮಂತ್ರ ಕೌಸಲೆ|ಇಂದೀವರಾಕ್ಷಿ ಸು|ಮಿತ್ರೆಯೂ|
ಮಂದಗಮನದ |ಕೈಕೆ ಸಹಿತಾ |ನಂದದಿಂದಲಿ|ಬಂದನು-||
ಇಲ್ಲಿಂದ ಮುಂದೆ ಒಡ್ಡೋಲಗದ ಪದ್ಯ ದಶರಥನಿಗೆ. ಇಲ್ಲಿಯವರೆಗಿನ ಪದ್ಯಗಳು ಈ ಪ್ರಸಂಗದ ಕಥಾಸಾರವಾಗಿದೆ. ಮುಂದೆ ಸೀತಾಕಲ್ಯಾಣದವರೆಗೆ ಕಥೆ ಮುಂದುವರಿದು ವಾರ್ಧಕ ಷಟ್ಪದಿಯ ಮಂಗಲ ಪದ್ಯದವರೆಗೆ ಪದ್ಯಗಳು ನಡೆಯುತ್ತದೆ.
ವಾರ್ಧಕ
ಇಂತೆಂದು ಶ್ರೀರಾಮಚಂದ್ರ ಗಭಿವಂದಿಸುತ
ತಾಂ ತೆರಳಲಿತ್ತಲುಂ ಸತಿಸಹಿತ ರಾಘವಂ
ಸಂತಸದಿ ಪುರಕೆ ಬಂದಿರ್ದನೆಂದೆನುತ ಬಾಲರಿಗೆ ಮುನಿಪತಿ ಪೇಳ್ದನು|
ಕಂತು ಜನಕನ ಚರಿತೆ ಇದನು ಕೇಳ್ದವರಿಗ
ತ್ಯಂತ ಸೌಖ್ಯವನಿತ್ತು ಧರೆಯೊಳನವರತ ನಿ
ಶ್ಚಿಂತೆಯಲಿ ಸಲಹುವನು ಕಣ್ವಪುರದೊಡೆಯ ಶ್ರೀ ಕೃಷ್ಣಕಟಾಕ್ಷದಿಂದ||
ಬ್ರಹ್ಮ ಕಪಾಲ” ಪ್ರಸಂಗದ ಕಥಾಸಾರ:
ಹಿರಿಯ ಬಲಿಪ ನಾರಾಯಣ ಭಾಗವತ ವಿರಚಿತ “ಬ್ರಹ್ಮ ಕಪಾಲ” ಪ್ರಸಂಗದ ಕಥಾಸಾರದ ನಾಲ್ಕು ಪದ್ಯಗಳು ಹೀಗಿವೆ:
ದ್ವಿಪದಿ
ಸೂತ ಶೌನಕರಿಗರುಹುತಿರೆ ಸತ್ಕಥೆಯ| ಆ ತಪಸಿಗಳು ಕೇಳಿದರು ಹರನು ವಿಧಿಯ||1||
ಶಿರ ತರಿದ ಮೇಲೆ ಭಿಕ್ಷಾಟನೆಯ ಗೈದು| ಧರೆಯ ಚರಿಸುತ ಹರಿಯೊಳರುಹಲವನೊಲಿದು||2||
ಸಂತವಿಸುತಜನೊಡನೆ ಸಂಧಿಗೈಸುತಲಿ|ಕಾಂತೆ ವಾಣಿಯನಿತ್ತ ಚರಿತೆಯಿಂದಿನಲಿ||3||
ವಿಸ್ತರಿಸಬೇಕೆನುತ ಕೇಳಲೆಲ್ಲರನು| ಸತ್ಕರಿಸಿ ಹರನಡಿಯ ನೆನೆದು ಪೇಳಿದನು||4||
ಹಿರಿಯ ಬಲಿಪ ನಾರಾಯಣ ಭಾಗವತರ ಮತ್ತೊಂದು ಪ್ರಸಂಗ ಅಹಲ್ಯಾ ಶಾಪ. ಇಲ್ಲಿನ ಕಥಾಸಾರ ಪದ್ಯಗಳು ಹೀಗಿವೆ.
ರಾಗ ಸೌರಾಷ್ಟ್ರ ತ್ರಿವುಡೆ
ಪೃಥ್ವಿಪತಿ ಜನಮೇಜಯಗೆ ಮುದ|
ವೆತ್ತು ವೈಶಂಪಾಯ ಮುನಿಪನು|
ವಿಸ್ತರಿಸೆ ಹರಿವಂಶ ಪುಣ್ಯ ಚ|ರಿತ್ರಗಳನು||
ಒಂದು ದಿನ ಬೆಸಗೊಂಡ ನೃಪನರ|
ವಿಂದಭವನಾತ್ಮಜೆಯಹಲ್ಯೆಯ|
ನಿಂದ್ರ ಕಪಟದಿ ಬೆರೆದು ಶಾಪವ| ಹೊಂದಿದುದನು||
ಪೇಳಬೇಕದನೆನುತಲೆರಗಿದ|
ಭೂಲಲಾಮನ ತಕ್ಕವಿಸುತಲಿ|
ಮೂಲಮಂ ವಿಸ್ತರಿಸಿದಂ ಮುನಿ| ಪಾಲನವಗೆ||
ಅಜ್ಜ ಬಲಿಪ ನಾರಾಯಣ ಭಾಗವತರು ಕಥಾಸಾರದ ಪದ್ಯಗಳೆಲ್ಲವನ್ನು ಹಾಡಿಯೇ ಮುಂದಿನ ಕಥಾರಂಭಕ್ಕೆ ತೊಡಗುತ್ತಿದ್ದರು ಎಂದು ಕಿರಿಯ ಬಲಿಪರು ನೆನಪಿಸಿಕೊಳ್ಳುತ್ತಾರೆ. ಈ ಪದ್ಯಗಳಿಗೆಲ್ಲ ಪಾತ್ರಧಾರಿಯಾಗಲೀ ಅಥವಾ ಬೇರೆಯಾರಾದರೂ ಅರ್ಥ ಹೇಳಲು ಇಲ್ಲ. ಭಾಗವತನೊಬ್ಬನೇ ಇದನ್ನು ಹಾಡುವುದಿತ್ತು. ಇದಿಷ್ಟರಿಂದ ಪ್ರಸಂಗವನ್ನು ತೊಡಗಿಸಿಕೊಂಡಾಗ ಪ್ರದರ್ಶನಕ್ಕೆ ತಾರ್ಕಿಕ ಚೌಕಟ್ಟು ಸಿಗುತ್ತದೆ. ಆದರೆ ಬದುಕಿನಲ್ಲಿ ವೇಗವು ಸೇರಿಕೊಂಡಂತೆ, ಕಥಾಸಾರವನ್ನು ಹಾಡುವ ಕ್ರಮವು ಕ್ರಮೇಣ ಲುಪ್ತವಾಯಿತು.
ಅಗರಿ ಶ್ರೀನಿವಾಸ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರುಗಳೆಲ್ಲ ಈ ಹಿಂದಣ ಈ ಕ್ರಮವನ್ನು ಮುಕ್ತಕಂಠದಿಂದ ಬಲಿಪರಲ್ಲಿ ಶ್ಲಾಘಿಸುತ್ತಿದ್ದರು. ಕಥಾನುಸಾರದಿಂದ ತೊಡಗಿ ಮಂಗಲ ಪದದಲ್ಲಿ ಬರುವ ಕವಿಯ ಹೆಸರಿನವರೆಗಿನ ಪದ್ಯಗಳನ್ನು ಅಜ್ಜ ಬಲಿಪ ನಾರಾಯಣ ಭಾಗವತರು ಹೇಳುತ್ತಿದ್ದ ಕ್ರಮ ಅನನ್ಯ ಎಂದು ಹೃದಯಪೂರ್ವಕವಾಗಿ ಹೊಗಳುತ್ತಿದ್ದರು. ಮತ್ತಿನ ತಲೆಮಾರಿನಲ್ಲಿ ಪ್ರಸಂಗಕ್ಕೆ ಎಷ್ಟು ಪದ್ಯಗಳು ಬೇಕೋ ಅಷ್ಟು ಮಾತ್ರವೇ ಕಂಠಸ್ಥ ಮಾಡಿಕೊಂಡು ಪ್ರದರ್ಶನದಲ್ಲಿ ಬಳಸುತ್ತಿದ್ದರು. ಅಗತ್ಯ ಬಿದ್ದರೆ ಆಶುಕವಿತ್ವದ ಮೂಲಕ ರಂಗದಲ್ಲೇ ಹಾಡುಗಳನ್ನು ಹೆಣೆಯುತ್ತಿದ್ದರು. ಆದರೆ ಈಗ ಕಥಾನುಸಾರ ಸಮೇತ ಪ್ರಸಂಗ ಬಾಯಿಪಾಠ ಇರಲಿ, ಪ್ರಸಂಗಕ್ಕೆ ಬೇಕಾದ ಪದ್ಯಗಳ ಕಂಠಪಾಠವೂ ಇರಲಿ, ಪುಸ್ತಕದ ಅಥವಾ ಮೊಬೈಲ್‌ನಲ್ಲಿ ಇರುವ ಪ್ರಸಂಗ ಪದ್ಯಗಳನ್ನು ಸರಿಯಾಗಿ ಓದಲು ಬಾರದವರೂ ಭಾಗವತರೆಂಬ ಹಣೆಪಟ್ಟಿಯಿಟ್ಟುಕೊಂಡಿದ್ದಾರೆ ಎಂಬುದು ಶೋಚನೀಯ ಸಂಗತಿ. ಆದರೆ, ತೀರಾ ನಿರಾಶರಾಗಬೇಕಿಲ್ಲ- ಕೆಲವಾರು ಪ್ರಸಂಗಗಳ ಚಾಲ್ತಿಯಲ್ಲಿರುವ ಪದ್ಯಗಳನ್ನು ಕಂಠಸ್ಥಮಾಡಿರುವ ಭಾಗವತರು ಅನೇಕರು ಇಂದೂ ಇದ್ದಾರೆಂಬುದು ಸಮಾಧಾನದ ವಿಚಾರ.
ಕಥಾಸಾರವನ್ನೂ ಸೇರಿಸಿ ಭಾಗವತ ಹಾಡುವ ಕ್ರಮದಲ್ಲೊಂದು ಔಚಿತ್ಯವಿದೆ. ಹೀಗೆ ಹಾಡಿದಾಗ ಸಭೆಯಲ್ಲಿ ಶ್ರೋತೃಗಳಿಗೆ ಅಂದಿನ ಆಖ್ಯಾನದ ಸಮಗ್ರ ವಿಹಂಗಮ ನೋಟ ದೊರಕುವುದು ಒಂದಾದರೆ; ಮತ್ತೊಂದು ಬಗೆಯಲ್ಲಿ ಕಲಾವಿದರಿಗೂ ಕಥೆಯ ಪೌರಾಣಿಕ ಹಿನ್ನೆಲೆಯ ಜ್ಞಾನವೂ ಒಂದಂಶದಿಂದ ಲಭಿಸುತ್ತದೆ. ಆಖ್ಯಾನದ ಘನತೆಯನ್ನು ಎತ್ತರಿಸಿ ಹಿಡಿದಂತಾಗುತ್ತದೆ. ಕಥಾಸಾರವನ್ನು ಸೇರಿಸಿ ಪ್ರಸಂಗ ರಚನೆ ಮಾಡುವುದು ಈಗೀಗ ಅಪೂರ್ವವಾಗುತ್ತಾ ಇದೆ. ಇದಕ್ಕೆ ಕಾರಣ ಭಾಗವತನಾದವ ಅಥವಾ ಸಂಘಟಕರಲ್ಲಿ ಇದನ್ನು ಹಾಡಿಸಬೇಕು/ಹಾಡಬೇಕು ಎಂಬ ಪೂರ್ವನಿರ್ಧಾರ ಇಲ್ಲದಿರುವುದು.
ಕವಿ ಮಟ್ಟಿ ವಾಸುದೇವ ಪ್ರಭು ಎಂಬವರು ಬರೆದ “ಬಿಲ್ಲ ಹಬ್ಬ ಮತ್ತೂ ಕಂಸವಧೆ” ಎಂಬ ಯಕ್ಷಗಾನ ಪ್ರಸಂಗದಲ್ಲಿನ ಕಥಾಸಾರವನ್ನು ಇಲ್ಲಿ ನೋಡುತ್ತಾ ಈ ಭಾಗದ ಓದನ್ನು ಮುಕ್ತಾಯಗೊಳಿಸೋಣ.
ವಾರ್ಧಿಕ
ಸೃಷ್ಟಿಸ್ಥಿತಿಲಯದ ಕಾರಣಕೆ ನಾಭಿಯೊಳು ಪರ|
ಮೇಷ್ಠಿಯನು ಪೆತ್ತಿಕ್ಕುತವನ ಮುಖದೊಳು ಜಗವ|
ದೃಷ್ಟಿಗೋಚರಕೆ ತಂದಖಿಳಜನಜನಿತ ಸ್ಥಾವರ ಜಂಗಮಾದಿಗಳನು||
ಇಷ್ಟದಿಂದವರವರ ತಾರತಮ್ಯದಿ ಬಲುಹ|
ಕೊಟ್ಟು ನಡೆಸುವ ದೇವ ನೀನೆಯೇಕೋವಿಷ್ಣು|
ಶ್ರೇಷ್ಠ ಶ್ರೀಮೂಲಿಕೆಯ ನರಸಿಂಹ ದೇವ ಮಾರಮಣನೆನ್ನನು ಪಾಲಿಸು||1||
ವಚನ
ಇಂತೀ ಗುರುದೇವಕವಿಪ್ರಾರ್ಥನೆಯಂ ಮಾಡಿ ತತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ-
ದ್ವಿಪದಿ
ಹಿಮಕರಕುಲಾನ್ವಯ ಪರೀಕ್ಷಿತನು ನಯದಿ|
ವಿಮಲ ಶುಕಯೋಗೀಂದ್ರನಡಿಗೆರಗಿ ಮುದದಿ||1||
ನಮಿಸಿ ಕೇಳಿದ ಭಾಗವತಕಥಾಮೃತದಿ|
ಕಮಲಲೋಚನನು ಅವತರಿಸಿ ಗೋಕುಲದಿ||2||
ಬಾಲಲೀಲೆಯ ತೋರಿದನಿತು ಸತ್ಕಥೆಯ|
ಪೇಳುತಲಿ ಉದ್ಧರಿಸಿದೆಯೊ ಮುನಿಕುಲಾರ್ಯ||3||
ಮತ್ತೆ ಶ್ರೀವರನು ಮಧುರೆಗೆ ಪೋಗಿ ಪಥದಿ|
ಒತ್ತಿ ಗಂಟಲ ರಜಕನನು ಸದೆದು ಮುದದಿ||4||
ಸಾಲೋಕ್ಯಪದವಿಯನು ಚಿಪ್ಪಿಗನಿಗಿತ್ತು|
ಮಾಲೆಗಾರಗೆ ಭಾಗ್ಯ ಕರುಣದಿಂದಿತ್ತು||5||
ಮುರುಟಿರುವ ಕುಬುಜೆಡೊಂಕನೆ ತಿದ್ದಿ ನಡೆದು|
ಮೆರೆವ ಧನು ಮುರಿದು ಗಜವನು ಕೊಂದು ಬಡೆದು||6||
ಮಲ್ಲ ಚಾಣೂರಮುಷ್ಟಿಕರ ಮರ್ದಿಸುತ|
ಖುಲ್ಲ ಕಂಸಾಸುರನ ಹಿಡಿದೆಳೆದು ಕೊಲುತ||7||
ಸಕಲ ಜಗದಾಧಾರನುಗ್ರಸೇನನಿಗೆ|
ಪ್ರಕಟದಿಂ ಮಧುರೆಯೊಲಿದಿತ್ತ ಕಥೆಯೆನಗೆ||8||
ಕೃಪೆಯಿಂದರುಹಬೇಕೆನುತಲಡಿಗೆರಗಿ|
ಉಪಚಾರದಿಂದೊಪ್ಪುತೆಂದ ಭೂವರಗೆ||9||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭೂಲಲಾಮನೆ ಕೇಳು ರಾಧಾ| ಲೋಲನಮಲ ಕಥಾಮೃತದ ರಸ|
ಲೀಲೆಯನು ನಿನ್ನಂತೆ ಸೇವಿಪ|ಶೀಲರುಂಟೆ ||1||
ಖತಿಯೊಳಶ್ವತ್ಥಾಮ ಬಿಟ್ಟ| ಸ್ತ್ರವ ನಿವಾರಿಸಿ ನೀ ಪರೀಕ್ಷಿತ|
ಪತಿಯೆನುತ ಪೆಸರಿಟ್ಟು ಕಾಯ್ದ ಶ್ರೀ|ಪತಿಯು ನಿನಗೆ||2||
ಅರಿಯದಜ್ಞನೆ ನೀನು ಲಕ್ಷ್ಮೀ| ವರನ ಭಕುತನು ಲೋಕದವರುಪ|
ಕರಕೆ ಕೇಳುವೆ ಪೇಳ್ವೆ ಶ್ರೀನರ|ಹರಿಯ ಕಥೆಯ ||3||
ಶ್ರೀರಮಣ ಗೋಕುಲದೊಳಿರಲಿ|ತ್ತಾ ಮಹಾಕಂಸಾಖ್ಯಾ ಮಧುರೆಯ|
ಧಾರಿಣಿಯ ಪಾಲಿಸುತಲಿರ್ದನು| ದಾರತನದಿ ||4||
ಮಂಗಳೂರಿನ ಪೆರ್ಮಂಕಿಯವರಾದ ಕೃಷ್ಣಪ್ರಕಾಶ ಉಳಿತ್ತಾಯ ಉದ್ಯೋಗ ಕರ್ಣಾಟಕ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಗರಿ ಮಾರ್ಗ’ ಮತ್ತು ‘ಸುಘಾತ’ ಅವರ ಪ್ರಕಟಿತ ಕೃತಿಗಳು. ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆ, ಯಕ್ಷಗಾನ ನಾಟ್ಯಾಭ್ಯಾಸ, ಮತ್ತು ಮೃದಂಗವಾದನದಲ್ಲಿ ಆಸಕ್ತಿ ಹೊಂದಿದ್ದಾರೆ.