ಇಷ್ಟೆಲ್ಲಾ ಬಟ್ಟೆ ಧರಿಸಿಕೊಂಡು ತಯಾರಾಗುವುದೇ ದೊಡ್ಡ ಸಾಹಸ. ಕೈ ಕಾಲುಗಳ ಸಲೀಸಾದ ಚಲನೆ ಇಲ್ಲದಂತಾಗಿ, ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವ ಭಾವನೆ. ತಯಾರಾಗಲು ಒಂದರ್ಧ ಘಂಟೆ ಹಿಡಿಯುತ್ತಿತ್ತು. ಮನೆಯ ಒಳಗೆ ಹೀಟರ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ತಯಾರಾಗುವ ಒಳಗೆ ಮೈ ಎಲ್ಲಾ ಬೆವರಲು ಶುರು. ಹೊರಗೆ ಕೊರೆಯುವ ಚಳಿ. ನನ್ನಷ್ಟೇ ಭಾರದ ಉಡುಗೆ ತೊಡುಗೆ ತೊಟ್ಟು ಹೊರ ನಡೆದರೆ ಎಲ್ಲೆಲ್ಲೂ ಹಿಮ. ಈ ರೀತಿ ತಯಾರಾಗಿದ್ದರೂ, ಆ ದಿನದ ಸುತ್ತಾಟ ಮುಗಿಯುವ ಹೊತ್ತಿಗೆ ಕಾಲು ಬೆರಳುಗಳು ಮರಗಟ್ಟಿ ಹೋಗಿರುತ್ತಿದ್ದವು.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್ ಪ್ರವಾಸದ ಮತ್ತಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ
ಹಿಂದಿನ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡ್ ಪ್ರವಾಸದ ಸಿದ್ಧತೆ ಹೇಗೆ ಪ್ರಾರಂಭವಾಯಿತು, ಹೆಲ್ಸಿನ್ಕಿಯಲ್ಲಿ ಕಾದಿರಿಸಿದ ಮನೆ ಸಿಗದೇ ಹೇಗೆಲ್ಲಾ ಪರದಾಡಿದೆವು ಎಂದು ವಿವರಿಸಿದ್ದೆ. ತಾಲಿನ್ ಹಾಗೂ ಹೆಲ್ಸಿಂಕಿಯಲ್ಲಿ ಕಳೆದ ಸಮಯದ ಬಗೆಗೂ ಬರೆದಿದ್ದೆ. ನೀವು ಓದಿಲ್ಲದಿದ್ದರೆ ಇಲ್ಲಿ ಓದಿ: ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ
ಹೆಲ್ಸಿನ್ಕಿಯಿಂದ ರಾತ್ರಿ ಬಸ್ ಹತ್ತಿ ಲ್ಯಾಪ್ಲ್ಯಾಂಡ್ ಎಂಬ ಕನಸಿನ ಲೋಕದೆಡೆಗೆ ನಮ್ಮ ಪ್ರಯಾಣ ಶುರುವಾಯಿತು. ಮನಸಿನಲ್ಲಿ ಏನೇನೋ ಕಲ್ಪನೆಗಳು ಹಾಗೂ ಆತಂಕಗಳು. ಆ ವಾತಾವರಣಕ್ಕೆ ನಾವು ಹೊಂದಿಕೊಳ್ಳುತ್ತೇವಾ? ಚಳಿ ಸಿಕ್ಕಾಪಟ್ಟೆ ಅಂತೆ. ಕೊಡುವ ಕಾಟೇಜ್ ನಲ್ಲಿ ನಮ್ಮೊಂದಿಗೆ ಬೇರೆ ಯಾರು ಬರುತ್ತಾರೋ? ಎಂದೆಲ್ಲಾ ನೂರಾರು ಪ್ರಶ್ನೆಗಳು. ಅರೋರಾ ಹೇಗಿರತ್ತೆ, ನಿಜವಾಗಲೂ ಫೋಟೋದಲ್ಲಿ ಕಾಣುವ ಹಾಗೆಯೇ ಇರತ್ತಾ? ಅಷ್ಟೊಂದು ಬಟ್ಟೆಗಳನ್ನ ಹಾಕಿಕೊಂಡ್ರೆ ಹೇಗೆ ಕಾಣಿಸ್ತೀವಿ? ಹೀಗೆ ಏನೇನೋ ಯೋಚನೆಗಳು.
ಬಸ್ ಪ್ರಯಾಣದಲ್ಲಿ ಮುಂದೆ ಎಲ್ಲಿ ತಲುಪಿದೆವು ಎನ್ನುವುದಕ್ಕಿಂತ ಮುಂಚೆ, ಈ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡಿನಲ್ಲಿ ಉಡುಗೆ ತೊಡುಗೆ ಹೇಗಿರಬೇಕು? ಹಾಗೂ ಆರ್ಕ್ಟಿಕ್ ವೃತ್ತದ ವಿಸ್ಮಯಗಳನ್ನು ನೋಡೋಣ.
ಅಡಿಯಿಂದ ಮುಡಿಯವರೆಗೆ:
ಅಲ್ಲಿಯ ಪ್ರತೀಕೂಲ ಹವಾಮಾನ ಉಡುಗೆ ತೊಡುಗೆಗಳ ಮೇಲೆ ಪ್ರಭಾವ ಬೀರುತ್ತದೆ. ಆಗಲೇ ಹೇಳಿದಂತೆ ಇಲ್ಲಿಯವರೆಗೆ ಅಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶ (ಈ ಪದಕ್ಕೆ ಅಪಮಾನ ಮಾಡಿದಂತಿದೆ) -55.1 ಡಿಗ್ರಿ ಸೆಲ್ಸಿಯಸ್!!! ನಾವು ಹೋದಾಗ ಇದ್ದದ್ದು ಕನಿಷ್ಠ -26 ಡಿಗ್ರಿ ಸೆಲ್ಸಿಯಸ್. ಬಟ್ಟೆಯ ಪ್ಯಾಕಿಂಗ್ ತಯಾರಿ ಮಾಡುವಾಗ ಹಲವಾರು ಯೂಟ್ಯೂಬ್ ವಿಡಿಯೊಗಳನ್ನು ನೋಡಿ ತಲೆ ಕೆಡಿಸಿಕೊಂಡು ಬೇಕಾದುದನ್ನೆಲ್ಲ ನಾನು ಹಾಗೂ ನಿತ್ಯಾ(ನನ್ನ ಹೆಂಡ್ತಿ) ಕೊಂಡು ತಂದು ಜೋಡಿಸಿಡುತ್ತಿದ್ದೆವು. ಪ್ರತಿಯೊಂದು ವಿಡಿಯೋ ನೋಡಿದಾಗಲೆಲ್ಲ ಚಳಿ ಅನ್ನಿಸುತ್ತಿತ್ತು. ಅಲ್ಲಿ ತಲುಪಿದ ಮೇಲೆ ಅಡಿಯಿಂದ ಮುಡಿಯವರೆಗೆ ನನ್ನ ಉಡುಗೆ ತೊಡುಗೆ ಹೀಗಿತ್ತು:
• ತಲೆಗೆ ಥರ್ಮಲ್ ಟೋಪಿ, ಅದರ ಮೇಲೊಂದು ಉಣ್ಣೆಯ ಟೋಪಿ.
• ಕುತ್ತಿಗೆ ಸುತ್ತು, ಅದರ ಮೇಲೊಂದು ಉಣ್ಣೆಯ ಮಫ್ಲರ್.
• ಎರಡು ಥರ್ಮಲ್ ಟಿ-ಶರ್ಟ್. ಅದರ ಮೇಲೆ ಮತ್ತೊಂದು ದಪ್ಪನೆಯ ಟಿ-ಶರ್ಟ್. ಅದರ ಮೇಲೆ ದಪ್ಪನೆಯ ಜೆರ್ಕಿನ್!
• ಎರಡು ಥರ್ಮಲ್ ಪ್ಯಾಂಟ್, ಅದರ ಮೇಲೆ ಜೀನ್ಸ್. ಅದರ ಮೇಲೊಂದು ಸ್ಕೀ ಪ್ಯಾಂಟ್. ಸ್ಕೀ ಪ್ಯಾಂಟ್ ನೀರು ತೂರಲಾರದಂತಹ ವಾಟರ್ ಪ್ರೂಫ್ ಪ್ಯಾಂಟ್. ಹಾಗೂ ದಪ್ಪನೆಯ ಪದರ ಇರುವುದರಿಂದ ಗಾಳಿಯನ್ನೂ ತಡೆಯುತ್ತದೆ.
• ಕಾಲಿಗೆ ಒಂದರ ಮೇಲೊಂದು ಎರಡು ಉಣ್ಣೆಯ ಸಾಕ್ಸ್.
• ಹಿಮ ವಾತಾವರಣದ ಹೆಣ ಭಾರದ ಶೂ!! ಸಾಕ್ಸ್ ಎರಡೆರಡು ಇರುವುದರಿಂದ ಒಂದೆರಡು ಸೈಜ್ ದೊಡ್ಡ ಶೂ ಬೇಕಾಗುತ್ತದೆ.
• ಕೈಗಳಿಗೆ ಎರಡು ಜೊತೆ ಗ್ಲೌಸ್ಗಳು.
• ಜೊತೆಗೆ ಕ್ಯಾಮರಾ ಬ್ಯಾಗ್ 6 ಕೆಜಿ!
ಇಷ್ಟೆಲ್ಲಾ ಹಾಕಿಕೊಂಡು ತಯಾರಾಗುವುದೇ ದೊಡ್ಡ ಸಾಹಸ. ಕೈ ಕಾಲುಗಳ ಸಲೀಸಾದ ಚಲನೆ ಇಲ್ಲದಂತಾಗಿ, ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವ ಭಾವನೆ. ತಯಾರಾಗಲು ಒಂದರ್ಧ ಘಂಟೆ ಹಿಡಿಯುತ್ತಿತ್ತು. ಮನೆಯ ಒಳಗೆ ಹೀಟರ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ತಯಾರಾಗುವ ಒಳಗೆ ಮೈ ಎಲ್ಲಾ ಬೆವರಲು ಶುರು. ಹೊರಗೆ ಕೊರೆಯುವ ಚಳಿ. ನನ್ನಷ್ಟೇ ಭಾರದ ಉಡುಗೆ ತೊಡುಗೆ ತೊಟ್ಟು ಹೊರ ನಡೆದರೆ ಎಲ್ಲೆಲ್ಲೂ ಹಿಮ. ಈ ರೀತಿ ತಯಾರಾಗಿದ್ದರೂ, ಆ ದಿನದ ಸುತ್ತಾಟ ಮುಗಿಯುವ ಹೊತ್ತಿಗೆ ಕಾಲು ಬೆರಳುಗಳು ಮರಗಟ್ಟಿ ಹೋಗಿರುತ್ತಿದ್ದವು. ಒಂದು ವಾರದ ಲ್ಯಾಪ್ಲ್ಯಾಂಡ್ ಓಡಾಟ ಯಾವುದೇ ಜಿಮ್ ಕಸರತ್ತಿಗೆ ಕಡಿಮೆ ಇಲ್ಲ ಎನ್ನುವ ಸಾರ್ಥಕ ಭಾವ ನನ್ನದು!
ಈ ರೀತಿ ಪದರಗಳ ಬಟ್ಟೆ ಇದ್ದರೆ, ಪ್ರವಾಸ ಮುಗಿದ ಮೇಲೆ ಮುಂದಿನ ಪ್ರವಾಸಗಳಲ್ಲಿ ವಾತಾವರಣಕ್ಕೆ ಅನುಸಾರವಾಗಿ ಇವುಗಳನ್ನು ಒಂದೊಂದಾಗಿ ಉಪಯೋಗಿಸಬಹುದು. ಇಲ್ಲಿನ ಸ್ಥಳೀಯ ಜನರ ಉಡುಗೆಗಳು ಭಿನ್ನ. ಅವರು ಸ್ಥಳೀಯವಾಗಿ ಸಿಗುವ ಕುರಿಯ ಉಣ್ಣೆ, ಮೊಲ ಹಾಗೂ ಹಿಮಸಾರಂಗಗಳ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಈಗಲೂ ಇಲ್ಲಿಯ ಮಾರಾಟ ಮಳಿಗೆಗಳಲ್ಲಿ ದೊರೆಯುತ್ತವೆ. ಪ್ರವಾಸಿಗರಿಗೆ ಇಲ್ಲಿ ಬಂದ ಮೇಲೆ ಕೂಡ ಬೆಚ್ಚಗಿನ ಬಟ್ಟೆಗಳನ್ನು, ಶೂಗಳನ್ನು ಬಾಡಿಗೆಗೆ ಕೊಳ್ಳುವ ಅವಕಾಶವಿದೆ. ದಿನದ ಲೆಕ್ಕಕ್ಕೆ ಬಾಡಿಗೆ ಪಡೆಯುತ್ತಾರೆ. ಇಲ್ಲಿಯವರೆಗೆ ಬರುವುದಕ್ಕಾದರೂ ಬೆಚ್ಚಗಿನ ಬಟ್ಟೆಗಳು ಬೇಕಾಗಿರುವುದರಿಂದ ಬಹಳಷ್ಟು ಜನ ಮುಂಚಿತವಾಗಿಯೇ ತಯಾರಾಗಿ ಬಂದಿರುತ್ತಾರೆ.
ನಾವು ಹೋದಾಗ ಇದ್ದದ್ದು ಕನಿಷ್ಠ -26 ಡಿಗ್ರಿ ಸೆಲ್ಸಿಯಸ್. ಬಟ್ಟೆಯ ಪ್ಯಾಕಿಂಗ್ ತಯಾರಿ ಮಾಡುವಾಗ ಹಲವಾರು ಯೂಟ್ಯೂಬ್ ವಿಡಿಯೊಗಳನ್ನು ನೋಡಿ ತಲೆ ಕೆಡಿಸಿಕೊಂಡು ಬೇಕಾದುದನ್ನೆಲ್ಲ ನಾನು ಹಾಗೂ ನಿತ್ಯಾ(ನನ್ನ ಹೆಂಡ್ತಿ) ಕೊಂಡು ತಂದು ಜೋಡಿಸಿಡುತ್ತಿದ್ದೆವು. ಪ್ರತಿಯೊಂದು ವಿಡಿಯೋ ನೋಡಿದಾಗಲೆಲ್ಲ ಚಳಿ ಅನ್ನಿಸುತ್ತಿತ್ತು.
ಈ ಭಾಗದಲ್ಲಿ ಮಕ್ಕಳಿಗೆ ಸಿಗುವ ಮನರಂಜನೆ, ಸಂತಸ ಬೇರೆ ಯಾರಿಗೂ ಸಿಗುವುದಿಲ್ಲ. ಎಲ್ಲೆಲ್ಲೂ ಹಿಮ ಆವರಿಸಿರುವುದರಿಂದ ಮಕ್ಕಳನ್ನು ತಳ್ಳುವ ಗಾಡಿ ಇಲ್ಲಿ ನಡೆಯುವುದಿಲ್ಲ. ಚಕ್ರಗಳು ಹಿಮದಲ್ಲಿ ಹೂತುಹೋಗುತ್ತವೆ. ಹಾಗಾಗಿ ಇದಕ್ಕೊಂದು ಪರ್ಯಾಯ ಮಾರ್ಗ ಕಂಡು ಹಿಡಿದುಕೊಂಡಿದ್ದಾರೆ. ಕೆಲವರಿಗೆ ನಿಮ್ಮ ಬಾಲ್ಯದಲ್ಲಿ ತೆಂಗಿನ ಗರಿಯ ಮೇಲೆ ಕೂತು, ಅದನ್ನು ಯಾರಾದರೂ ದೊಡ್ಡವರು ಜಾರಿಸಿಕೊಂಡು ಹೋದ ನೆನಪಿರಬಹುದು. ಒಳ್ಳೆಯ ಮನರಂಜನೆ ಅಲ್ಲವೇ. ಇಲ್ಲಿ ಅದೇ ರೀತಿ ಪ್ಲಾಸ್ಟಿಕ್ ಹಾಳೆಯ ಮೇಲೆ ಮಕ್ಕಳನ್ನು ಕೂರಿಸಿ, ಅದಕ್ಕೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗುತ್ತಾರೆ. ಮಕ್ಕಳಿಗೆ ಆಟ, ದೊಡ್ಡವರಿಗೆ ಎತ್ತಿಕೊಂಡು ಹೋಗುವ ತಾಪತ್ರಯವಿಲ್ಲ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹಾಗೆ.
ಸೂರ್ಯಂಗೇ ಟಾರ್ಚ್!
ಇದೇನಿದು ಶೀರ್ಷಿಕೆ ಹೀಗಿದೆ ಎಂದು ಯೋಚಿಸುತ್ತಿದ್ದೀರಾ? ಹೌದು ಇದು ಸತ್ಯ. ನಾ ಭೇಟಿ ನೀಡಿದ ಜಾಗದಲ್ಲಿ ಸೂರ್ಯನಿಗೆ ಟಾರ್ಚ್ ಬಿಡಬೇಕಾದ ಪರಿಸ್ಥಿತಿ ಇತ್ತು. ಭೂಮಧ್ಯ ರೇಖೆಗೆ ಸಮೀಪವಿರುವ ನಮಗೆ ಭಾರತದಲ್ಲಿ ಋತುಗಳಿಂದಾಗುವ ಹಗಲು ಸಮಯದ ಬದಲಾವಣೆಗಳು ಕಾಣುವುದು ಕಡಿಮೆ. ಸೂರ್ಯೋದಯ ಹಾಗೂ ಸೂರ್ಯಾಸ್ತ ವರ್ಷ ಪೂರ್ತಿ ಬಹುತೇಕ ಸಮನಾಗಿರುತ್ತದೆ. ಭೂಮಧ್ಯ ರೇಖೆಯಿಂದ ಮೇಲೆ ಮೇಲೆ ಹೋದ ಹಾಗೆ ಹಗಲು ಸಮಯದ ಬದಲಾವಣೆಗಳು ಹೆಚ್ಚಾಗಿ ಗೋಚರಿಸುತ್ತದೆ. ಇನ್ನೂ ಹೆಚ್ಚು ಅರ್ಥವಾಗಬೇಕೆಂದರೆ “ಆರ್ಕ್ಟಿಕ್ ಸರ್ಕಲ್” ಬಗ್ಗೆ ತಿಳಿಯಲೇಬೇಕು.
ಭೂಮಿಯ ಅಕ್ಷಾಂಶ ರೇಖೆಗಳಲ್ಲಿ ಐದು ವಿಧಗಳಿವೆ. ಎಲ್ಲವೂ ಕಾಲ್ಪನಿಕ ರೇಖೆಗಳು. ಮೊದಲನೆಯದು ಭೂಮಧ್ಯ ರೇಖೆ (Equator). ಆಫ್ರಿಕಾ, ದಕ್ಷಿಣ ಅಮೆರಿಕಾ ಹಾಗು ಏಷ್ಯಾ ಖಂಡಗಳನ್ನು ಹಾದು ಹೋಗುವ ಈ ರೇಖೆ ಭೂಮಿಯನ್ನು ಸಮನಾಗಿ ಎರಡು ಭಾಗವನ್ನಾಗಿ ಬೇರ್ಪಡಿಸುತ್ತದೆ – ಉತ್ತಾರಾರ್ಧ ಗೋಳ ಮತ್ತು ದಕ್ಷಿಣಾರ್ಧ ಗೋಳ. ಭೂಮಧ್ಯ ರೇಖೆಯಿಂದ ಎರಡೂ ಗೋಳಗಳಲ್ಲಿ ಎಲ್ಲಿಯವರೆಗೂ ಸೂರ್ಯನ ಕಿರಣಗಳು ನೇರವಾಗಿ ನೆತ್ತಿಯ ಮೇಲೆ ಬಿಳುತ್ತವೆಯೋ ಅವು ಮುಂದಿನ ಎರಡು ಅಕ್ಷಾಂಶ ರೇಖೆಗಳು. ಉತ್ತಾರಾರ್ಧ ಗೋಳದಲ್ಲಿ ಇದನ್ನು “ಕರ್ಕಾಟಕ ಸಂಕ್ರಾಂತಿ ವೃತ್ತ” (Tropic of cancer) ಮತ್ತು ದಕ್ಷಿಣಾರ್ಧ ಗೋಳದಲ್ಲಿ ಇದನ್ನು “ಮಕರ ಸಂಕ್ರಾಂತಿ ವೃತ್ತ” (Tropic of Capricorn) ಎಂದು ಕರೆಯುತ್ತಾರೆ. ನಮ್ಮ ಭಾರತದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ಗುಜರಾತಿನಿಂದ ಮಣಿಪುರದವರೆಗೂ ಹಾದು ಹೋಗುವುದು ನಮಗೆ ಗೊತ್ತೇ ಇದೆ.
ಕೊನೆಯ ಎರಡು ಅಕ್ಷಾಂಶ ರೇಖೆಗಳು ಅತ್ಯಂತ ಕುತೂಹಲಕಾರಿಯಾಗಿವೆ. ಭೂಮಿಯ ಧ್ರುವದಿಂದ ಎಲ್ಲಿಯವರೆಗೂ ವರ್ಷದಲ್ಲಿ ಕನಿಷ್ಠ ಒಮ್ಮೆಯಾದರೂ ಸೂರ್ಯ ಇಪ್ಪತ್ತನಾಲ್ಕು ಘಂಟೆ ಮುಳುಗದೆ ಇರುವ ಪ್ರದೇಶಕ್ಕೆ “ಪೋಲಾರ್ ಸರ್ಕಲ್” ಎನ್ನುತ್ತಾರೆ. ಉತ್ತಾರಾರ್ಧ ಗೋಳದಲ್ಲಿ ಇದನ್ನು “ಆರ್ಕ್ಟಿಕ್ ವೃತ್ತ” ಮತ್ತು ದಕ್ಷಿಣಾರ್ಧ ಗೋಳದಲ್ಲಿ ಇದನ್ನು “ಅಂಟಾರ್ಕಟಿಕ್ ವೃತ್ತ” ಎಂದು ಕರೆಯುತ್ತಾರೆ. ಆರ್ಕ್ಟಿಕ್ ವೃತ್ತದ ಮೇಲೆ ಉತ್ತರ ಧ್ರುವದವರೆಗೂ ಹಾಗೂ ಅಂಟಾರ್ಕಟಿಕ್ ವೃತ್ತದಿಂದ ಕೆಳಗೆ ದಕ್ಷಿಣ ಧ್ರುವದವರೆಗೂ ವರ್ಷದಲ್ಲಿ ಎರಡು ತಿಂಗಳು ಪ್ರಕೃತಿಯ ವಿಸ್ಮಯ ನಡೆಯುತ್ತದೆ. ವರ್ಷದಲ್ಲಿ ಬರುವ ಎರಡು ಸಂಕ್ರಮಣ ಕಾಲದಲ್ಲಿ ಈ ವಿಸ್ಮಯವನ್ನು ಕಾಣಬಹುದು. ಡಿಸೆಂಬರ್ ಸಮಯದಲ್ಲಿ ಉತ್ತರ ಧ್ರುವದಲ್ಲಿ ಇಪ್ಪತ್ತನಾಲ್ಕು ಘಂಟೆ ಕತ್ತಲಿದ್ದಾಗ, ದಕ್ಷಿಣ ಧ್ರುವದಲ್ಲಿ ಇಪ್ಪತ್ತನಾಲ್ಕು ಘಂಟೆ ಬೆಳಕಿರುತ್ತದೆ. ಮತ್ತೆ ಆರು ತಿಂಗಳಾದ ಮೇಲೆ ಜೂನಿನಲ್ಲಿ ಎಲ್ಲವೂ ತದ್ವಿರುದ್ಧ. ಆಗ ಉತ್ತರ ಧ್ರುವದಲ್ಲಿ ಇಪ್ಪತ್ತನಾಲ್ಕು ಘಂಟೆ ಬೆಳಕಿದ್ದು, ದಕ್ಷಿಣ ಧ್ರುವದಲ್ಲಿ ಇಪ್ಪತ್ತನಾಲ್ಕು ಘಂಟೆ ಕತ್ತಲಿರುತ್ತದೆ.
( ಕೃಪೆ: By CIA World Fact Book – File:Arctic.svg, from the CIA World Fact Book, Public Domain)
ಫಿನ್ಲ್ಯಾಂಡಿನ ಆರ್ಕ್ಟಿಕ್ ಸರ್ಕಲ್ ಮೇಲಿನ ಭಾಗವನ್ನು “ಲ್ಯಾಪ್ಲ್ಯಾಂಡ್” ಎಂದು ಕರೆಯುತ್ತಾರೆ. ಇದು ಉತ್ತರ ಧ್ರುವದ ಸಮೀಪ ಇರುವುದರಿಂದ ನಾವು ಭೇಟಿ ನೀಡಿದ ಡಿಸೆಂಬರಿನ ಬಹುತೇಕ ದಿನಗಳಲ್ಲಿ ಸೂರ್ಯ ಉದಯಿಸಲಿಲ್ಲ. ಜೂನಿನಲ್ಲಿ ಸೂರ್ಯ ಮುಳುಗುವುದೇ ಇಲ್ಲ!!! ಈ ವಿಸ್ಮಯವನ್ನು ಪ್ರತ್ಯಕ್ಷ ಸಾಕ್ಷಿಯಾಗಿ ನಂಬಲು ಬಹಳ ಸಮಯ ಬೇಕಾಯಿತು! ತಿಳಿಯಾದ ಆಗಸವಿದ್ದರೂ ಸೂರ್ಯನ ಪತ್ತೆಯಿಲ್ಲ. ಸೂರ್ಯೋದಯದ ಮುಂಚೆ ಅಥವಾ ಸೂರ್ಯಾಸ್ತದ ನಂತರದ ಸಂಧ್ಯಾ ಕಾಲದ ಹೊಂಬಣ್ಣದ ಬೆಳಕು ಬೆಳಗ್ಗೆ 9 ರಿಂದ ಸುಮಾರು ಮಧ್ಯಾಹ್ನ 1 ಗಂಟೆಯ ತನಕ! ಯಾವಾಗಲೂ ಸೂರ್ಯಾಸ್ತದ ಅನುಭವ. ದಿಗಂತದೆಡೆ ಸೂರ್ಯನ ರಶ್ಮಿಯನ್ನು ಮೇಲೆ ಚೆಲ್ಲಿದ ಹಾಗೆ, ಆದರೆ ಸೂರ್ಯನ ದರ್ಶನ ಭಾಗ್ಯವಿಲ್ಲ. ಯಾರೋ ಸೂರ್ಯನನ್ನು ಅಪಹರಣ ಮಾಡಿದ್ದಾರಾ ಅನ್ನುವ ಅನುಮಾನ ಮೂಡಿತು! ಆಮೇಲೆ ದಿನದ ಉಳಿದ ಸಮಯ ಬರಿಯ ಕತ್ತಲೆ. ಕತ್ತಲೆಯೆ ಇಲ್ಲಿನ ಪ್ರವಾಸೋದ್ಯಮದ ಜೀವಾಳ! ಕತ್ತಲೆಯಿದ್ದು ಆಕಾಶ ತಿಳಿಯಾಗಿದ್ದರೆ ಮಾತ್ರ ಜಗತ್ತಿನ ಅಪರೂಪದ ದೃಶ್ಯಕಾವ್ಯ ಅರೋರಾ ಕಾಣಸಿಗುವುದು. ಚಳಿಗಾಲ ಸಂಕ್ರಮಣದ ಬಳಿಕ ಕ್ರಮೇಣ ಸೂರ್ಯನ ಬೆಳಕು ಹೆಚ್ಚಾಗುತ್ತಾ ಹೋಗುತ್ತದೆ.
ಅಂತೂ ಇಂತು ಸೂರ್ಯನೇ ಉದಯಿಸದ ನಾಡಿಗೂ ಭೇಟಿ ಕೊಟ್ಟಿದ್ದಾಯಿತು. ಯಾರಾದರೂ ಇನ್ನು ನನ್ನ ಮುಂದೆ “ಪೂರ್ವದಲ್ಲಿ ಉದಯಿಸುವ ಸೂರ್ಯನ ಮೇಲಾಣೆ” ಎಂದು ಆಣೆ ಮಾಡಲು ಬಂದರೆ ಡಿಸೆಂಬರ್ ಸಮಯದಲ್ಲಿ ಲ್ಯಾಪ್ಲ್ಯಾಂಡಿಗೆ ಬಂದು ಆಣೆ ಮಾಡಿ ಎಂದು ಮರು ಸವಾಲು ಹಾಕಬಹುದು.
ಇನ್ನು ಬೇಸಿಗೆಯ ಸಂಕ್ರಮಣ ಕಾಲವಾದ ಜೂನಿನಲ್ಲಿ ಸಂಪೂರ್ಣ ಅದಲು ಬದಲು. 24 ಘಂಟೆಗಳೂ ಮುಳುಗದ ಸೂರ್ಯ ಕಣ್ಣೆದುರಿಗೆ, ತಲೆಯ ಸುತ್ತ ವೃತ್ತಾಕಾರದಲ್ಲಿ ಗಿರಕಿ ಹೊಡೆಯುತ್ತಿರುತ್ತಾನೆ. ಇದಕ್ಕೆ “ಮಿಡ್ನೈಟ್ ಸನ್” ಎಂದು ಕರೆಯುತ್ತಾರೆ. ಉದಾಹರಣೆಗೆ ನೀವು ಭಾರತದಲ್ಲಿ ಪೂರ್ವಕ್ಕೆ ಮುಖ ಮಾಡಿ ದಿನ ಪೂರ್ತಿ ನಿಂತರೆ – ಸೂರ್ಯ ನಿಮ್ಮ ಕಣ್ಣ ಮುಂದೆ ಉದಯಿಸಿ, ತಲೆಯ ಮೇಲಿಂದ ಹಾದು ಹೋಗಿ ನಿಮ್ಮ ಹಿಂದೆ ಪಶ್ಚಿಮದಲ್ಲಿ ಸೂರ್ಯಾಸ್ತವಾಗುತ್ತದೆ. ಆದರೆ ಅಲ್ಲಿ ನೀವು ಪೂರ್ವಕ್ಕೆ ಮುಖ ಮಾಡಿ ನಿಂತರೆ ಸೂರ್ಯ ನಿಮ್ಮ ಮುಖವನ್ನು ವೃತ್ತಾಕಾರದಲ್ಲಿ ಪ್ರದಕ್ಷಿಣೆ ಹಾಕಿ ಮತ್ತೆ ಪೂರ್ವಕ್ಕೇ ಬರುತ್ತಾನೆ! ತಲೆಯ ಸುತ್ತ ವೃತ್ತಾಕಾರದಲ್ಲಿ ಗಿರಕಿ ಹೊಡೆಯುತ್ತಿರುತ್ತಾನೆ. ಅದೃಷ್ಟ ಇದ್ದರೆ ಮಿಡ್ನೈಟ್ ಸನ್ ಕೂಡ ನೋಡಬೇಕೆಂಬ ಬಯಕೆಯೊಂದಿಗೆ ಕತ್ತಲ ಮಾಯಾಲೋಕದಲ್ಲಿ ವಿಹರಿಸಿದೆ.
ಲ್ಯಾಪ್ಲ್ಯಾಂಡಿನ ಪ್ರೇಕ್ಷಣೀಯ ಸ್ಥಳಗಳ ಪಯಣ ಮುಂದಿನ ಸಂಚಿಕೆಯಲ್ಲಿ.
(ಮುಂದುವರೆಯುವುದು)
(ಫೋಟೋಗಳು: ಲೇಖಕರವು)
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್‌ಸ್ಟೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..
Nice article guru keep continue writing it’s really nice
Gurudut amritapur’s journey to Lapland is a wonderful travologue .his language and discreet details are catchy .l look forward to his next adventure
ಗುರು, ಈ ಪ್ರವಾಸ ಕಥನದ ಸರಣಿ ಪ್ರಕೃತಿ ಸೌಂದರ್ಯ, ಪ್ರಕೃತಿ ವಿಸ್ಮಯಗಳ ಸೊಗಸನ್ನು ಹದವಾಗಿ ಉಣಬಡಿಸುತ್ತಿದೆ.
ಜೊತೆಜೊತೆಗೆ ಅನೇಕ ಭೌಗೋಳಿಕ, ವೈಜ್ಞಾನಿಕ ವಿಷಯಗಳನ್ನು ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ. ಇದು ಬಹಳ ವಿಶೇಷವಾದುದು.
ಇನ್ನು ಲೇಖನದಲ್ಲಿ ಲಗತ್ತಿಸಿರುವ ಭಾವಚಿತ್ರಗಳು ದೃಶ್ಯಕಾವ್ಯದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಓದುಗರನ್ನು ಮಾಯಾಲೋಕದ ಪಕ್ಷಿನೋಟ ತೋರಿಸಿ ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿದೆ. ಇದನ್ನು ಓದಿದವರಿಗೆ, ಚಿತ್ರಗಳನ್ನು ಅನುಭವಿಸಿದವರಿಗೆ ಲ್ಯಾಪ್‌ಲ್ಯಾಂಡ್ ನೋಡುವ ಹಂಬಲ ಕಾಡದೆ ಇರದು.
ಅರೋರಾದ ಅದ್ಭುತ ವಿಸ್ಮಯ ಒಮ್ಮೆ ನೋಡಿಯೇಬಿಡಬೇಕೆಂಬ ಕುತೂಹಲ ಮೂಡಿಸುವ ಬರಹ. ಇನ್ನು ಭೂಗೋಳದ ಅನೇಕ ಸಂಚಾರಗಳನ್ನು ಈ ಲೇಖನದಿಂದ ತಿಳಿದೆ. ಸೂರ್ಯ ಉದಯಿಸದ ನಾಡೂ ಇದೆಯೆಂಬುದು ನೋಡದವರಿಗೆ ಕಲ್ಪನೆ. ಅಬ್ಬ!!! ಇನ್ನು ಬಟ್ಟೆಯ ವಿಷಯ. ಅದ್ಹೇಗೆ ಅಷ್ಟೊಂದು ತೂಕದೊಂದಿಗೆ ನಡೆವುದೋ …..ಕೂತಲ್ಲೇ ಬೆವರಿಬಿಟ್ಟೆ. ಸಾಹಸಮಯ ಪ್ರವಾಸ. ಮಕ್ಕಳ ರೋಚಕ ಘಳಿಗೆ. ಬರಹ ಉಪಯುಕ್ತ. ಹಾಗೂ ಕಥನವಿವರಣೆ ಚಂದ.ಧನ್ಯವಾದ ಗುರುದತ್ತ. ಹೀಗೇ ಎಲ್ಲವನ್ನೂ ಬರಿ. ನಿತ್ಯಳಿಗೂ ಬರೆಯಲು ಹೇಳು.
ಭಾಗ್ಯಲಕ್ಷ್ಮಿ. ಸು. ಅಮೃತಾಪುರ.
Very nice article.. what an adventurous trip..
Very nice article ?
Fascinating facts explained very well with nice examples. Neewu nimma chaliya battegala bagge helutta haage vruttagalu, soorya chalane baggegina visheshate chennagi bannisiddira.