ಒಮ್ಮೆ ಹೀಗೆ ಬಿಡುವಿದ್ದಾಗ, ಐತಾಳರು ನನ್ನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಸುಳ್ಳು ಹೇಳಲು ಮನಸ್ಸಾಗದೆ ಎಲ್ಲ ಹೇಳಿಬಿಟ್ಟೆ. ಮನಸ್ಸು ಹಗುರಾಯಿತು. ಈವರೆಗೂ ಸಂಪೂರ್ಣ ಸತ್ಯ ಯಾರಿಗೂ ಹೇಳಿರಲಿಲ್ಲ. ಐತಾಳರು ಸ್ವಲ್ಪ ಹೊತ್ತು ನನ್ನ ಮುಖವನ್ನೇ ನೋಡಿದರು. ಕೆಲಸದ ವಿಷಯದಲ್ಲಿ ಅವರು ತುಂಬಾ ಸ್ಟ್ರಿಕ್ಟ್; ಆದರೆ ಹೆಂಗರಳು. ಕೆಲಸಗಾರರನ್ನು ಮಕ್ಕಳ ಹಾಗೆ ನೋಡಿಕೊಳ್ಳುವ ಸ್ವಭಾವ. “ಆದ್ರೂ ನೀ ಊರು ಬಿಟ್ಟು ಬರಬಾರದಿತ್ತು ಮಾರಾಯ, ನೀ ಎಣಿಸಿದ ಹಾಗೆ ಅಲ್ಲೇನು ಆಗಿರಲಿಕ್ಕಿಲ್ಲ. ಈ ಕಾಲದ ಜನ ಕಥೆ ಸಿನಿಮಾ ಧಾರಾವಾಹಿ ನೋಡಿ ಎಂತೆಲ್ಲಾ ಗ್ರಹಿಸಿ ಹೀಗೆ ಮಾಡಿಬಿಡೋದು ಹೌದಲ್ಲವನ! ಆದರೂ ಒಮ್ಮೆ ಹೋಗಿ ಬಾರ” ಎಂದರು.
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಅನಿಕೇತನ” ನಿಮ್ಮ ಓದಿಗೆ
ಇಂಟರ್ ಕಾಲೇಜಿನ ಕೆಲವು ಸ್ಪರ್ಧೆಗಳು ಮುಗಿದು, ತೀರ್ಪುಗಾರರ ನಿರ್ಧಾರಗಳನ್ನು ಒಟ್ಟುಗೂಡಿಸಿ, ವಿಜೇತರನ್ನು ಆಯ್ಕೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದ ಸಹದೇವನಿಗೆ ಯಾರೋ ತನ್ನನ್ನು ಕರೆದ ಹಾಗಾಯಿತು. ಯುವತಿ ಒಬ್ಬರು ನಿಂತಿದ್ದರು. “ನೀವು ಸಹದೇವ ಅಲ್ಲವೇ?” ಅಂದಾಗ ಸಹದೇವ “ಹೌದು” ಎನ್ನುತ್ತಾ ಕೊಂಚ ತಲೆ ಆಡಿಸಿದ. “ಸರ್ ಒಂದೆರಡು ನಿಮಿಷ ಮಾತಾಡಬಹುದಾ” ಎಂದಳು ತುಸು ಸಂಕೋಚದಿಂದ. ಸಹದೇವ ಒಂದರೆಘಳಿಗೆ ಅವಳ ಮುಖವನ್ನೂ ತನ್ನ ಕೈಯಲ್ಲಿದ್ದ ಕಾಗದಗಳನ್ನೂ ನೋಡಿ “ಒಂದು ಐದು ನಿಮಿಷ ಇಲ್ಲೇ ಕೂತಿರಿ. ಇವುಗಳನ್ನು ಕೊಟ್ಟು ಬರುವೆ” ಎಂದು ಹೇಳಿ ಹೊರಟು ಆ ಕಾಗದಗಳನ್ನು ಇನ್ನೊಬ್ಬರು ಉಸ್ತುವಾರಿಯ ಕೈಯಲ್ಲಿ ಕೊಟ್ಟು-ಕೊಡುವ ಮುಂಚೆ ಇನ್ನೊಮ್ಮೆ ಗಮನಿಸಿ- ಐದು ನಿಮಿಷಕ್ಕೆ ಮುನ್ನವೇ ಸ್ಟಾಫ್ ರೂಂ ಕಡೆ ಹೊರಟ.
ಸ್ಟಾಫ್ ರೂಂನಲ್ಲಿ ಇನ್ನಿಬ್ಬರು ಸಹೋದ್ಯೋಗಿಗಳು ಮುಂದಿನ ಸ್ಪರ್ಧೆಯ ಬಗ್ಗೆ ತಯಾರಿ ನಡೆಸುತ್ತಿದ್ದರು. ಇವಳು ಅನ್ಯ ಮನಸ್ಕಳಾಗಿ ಸೂರು ನೋಡುತ್ತಾ ಒಬ್ಬಳೇ ಕುಳಿತಿದ್ದಳು. ಅವಳೆದುರಿನ ಚೇರ್ ಎಳೆದುಕೊಂಡು ಕುಳಿತು “ಹೇಳಿ ಏನ್ ಸಮಾಚಾರ? ನೀವು ಎಸ್. ಆರ್. ಎಸ್. ಕಾಲೇಜಿನವರಲ್ಲವೇ, ಏನಾದರೂ ಸಮಸ್ಯೆಯೇ” ಎಂದ. ಅವಳು “ಸರ್ ಹಾಗೇನಿಲ್ಲ, ಬಹುಶಃ ನಾನ್ಯಾರೆಂದು ನಿಮಗೆ ಗೊತ್ತಿಲ್ಲ; ಆದರೆ ನೀವು ಬಹುಶಃ ನನಗೆ ತಿಳಿದವರೇ ಎನ್ನುವ ಭಾವನೆ ನನ್ನದು. ನೀವು ರಾಮಲಿಂಗಾಪುರದವರಲ್ಲವೇ?! ಈ ಹೆಸರು, ನಿಮ್ಮ ಹಣೆಯ ಮೇಲಿನ ಗಾಯದ ಗುರುತು ನೀವು ಅವರೇ ಎಂದು ನನ್ನ ಅಂತರಾತ್ಮ ಹೇಳುತ್ತಿದೆ” ಎಂದಳು. ಸಹದೇವನ ಮುಖಭಾವ ತುಸು ಬದಲಾಯಿತು. ಒಂದರೆ ಘಳಿಗೆ ಸುಮ್ಮನಿದ್ದ. “ನೀವು ಯಾರು?” ಎಂದ. ಅವಳ ಮುಖದಲೊಂದು ಸಣ್ಣ ನಂಬಿಕೆಯ, ಆತ್ಮವಿಶ್ವಾಸದ ನಗು ಸುಳಿಯಿತು. “ಅಂದರೆ ನೀವು ನಮ್ಮೂರಿನ ರಾಮಲಿಂಗಾಪುರದ ಸಹದೇವ ಎಂದು ಖಾತರಿ ಆಯಿತು. ನಾನು ಲಿಂಗರಾಜಪ್ಪನವರ ಮಗಳು ಸಿಂಚನಾ” ಎಂದಳು, ಅವನ ಮುಖವನ್ನೇ ದಿಟ್ಟಿಸುತ್ತಾ. ಸಹದೇವ ಮುಖದಲ್ಲಿ ಯಾವ ಭಾವನೆಯನ್ನೂ ತೋರಿಸದೆ ನಿಶ್ಚಲವಾಗಿ ಕುಳಿತಿದ್ದ. ಕೆಲವು ಕ್ಷಣಗಳ ನಂತರ “ಇಂದು ನಿಮಗೆ ಗೊತ್ತಲ್ಲ ತುಂಬಾ ಕೆಲಸ ಇದೆ. ಈಗ ನಡೀತಾ ಇರೋ ಸ್ಟೇಜ್ ಪ್ರೋಗ್ರಾಮ್‌ನ ನಂತರ ಲಂಚ್ ಬ್ರೇಕ್ ನಲ್ಲಿ ಸಿಕ್ಕರೆ ಇನ್ನಷ್ಟು ಮಾತಾಡಬಹುದು” ಎಂದ. ಆದರೂ ಮನಸ್ಸು ವಿಚಲಿತವಾಗಿತ್ತು. ತನ್ನ ಸಹೋದ್ಯೋಗಿಯ ನೆರವಿನಿಂದ ಮುಂದಿನ ಕಾರ್ಯಕ್ರಮ ಮುಗಿಸಿ ಊಟದ ಹಾಲ್ ಕಡೆ ತೆರಳಿದ.
*****
ಸಿಂಚನಾ ರಾಮಲಿಂಗಾಪುರದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ ಹತ್ತಿರದ ಬೋರಲಿಂಗಾಪುರದಲ್ಲಿ ಹೈಸ್ಕೂಲು, ಪಿಯುಸಿ ಮಾಡಿದ್ದಳು. ಡಿಗ್ರಿ ಮಾಡಬೇಕಿದ್ದರೆ ಚಿತ್ರದುರ್ಗಕ್ಕೋ ದಾವಣಗೆರೆಗೋ ಹೋಗಬೇಕಿತ್ತು. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿದ್ದ ಸೋದರ ಮಾವ -ತಾಯಿಯ ದೊಡ್ಡ ಅಣ್ಣ- ಅವನ ಇಬ್ಬರು ಮಕ್ಕಳೂ ವಿದೇಶದಲ್ಲಿದ್ದರು. ತಾನು ಇಲ್ಲಿ ಸರ್ಕಾರಿ ಇಂಜಿನಿಯರಾಗಿ ಸಾಕಷ್ಟು ದುಡಿದಿದ್ದ. ಊರಿನಲ್ಲೂ ಸಾಕಷ್ಟು ಜಮೀನಿತ್ತು. ಆದರೆ ದೊಡ್ಡ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ. ಮೊದಲೇ ಹೆಣ್ಣು ಮಕ್ಕಳನ್ನು ಬಯಸಿ, ಎರಡೂ ಗಂಡಾದಾಗ ಬೇಸರಪಟ್ಟಿದ್ದರೂ ಎಲ್ಲಾ ಅವನಿಚ್ಛೆ ಎಂದಿದ್ದರು. ಈ ತಂಗಿಯನ್ನು ಒತ್ತಾಯಿಸಿ, ಅವಳ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಇಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮಾಡುವವರೆಗೂ ಓದಿಸಿದ್ದರು. ಇನ್ನೇನು ಅವಳ ಮನೆಯಲ್ಲಿ ಆಗಲೇ ಮದುವೆ ಪ್ರಸ್ತಾಪಗಳು ಬರುತ್ತಿದ್ದವು. ಈಗಾಗಲೇ ತಡ ಎನ್ನುವ ಮಾತುಗಳ ನಡುವೆ ಸಿಂಚನಾ ಮಾವನನ್ನು ತನ್ಮೂಲಕ ಅಮ್ಮ ಅಪ್ಪನನ್ನು ಒಪ್ಪಿಸಿ, ಒಂದು ವರ್ಷವಾದರೂ ಲೆಕ್ಚರರ್ ಆಗಿ ಕೆಲಸ ಮಾಡುವೆ ಆಮೇಲೆ ನೋಡೋಣ ಎಂದು ಹೇಳಿ ಮನೆಗೆ ಹತ್ತಿರದಲ್ಲೇ ಇದ್ದ ಎಸ್ ಆರ್ ಎಸ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿಗೆ ಪಾಠ ಮಾಡಲು ಶುರು ಮಾಡಿದಳು.
*****
ಸಹದೇವ ಊಟದ ಹಾಲ್‌ನತ್ತ ಬಂದ. ಆಗಲೇ ಅಲ್ಲಿ ಇವನ ಬರುವಿಕೆಗೆ ಕಾಯುತ್ತಿದ್ದ ಸಿಂಚನಾ ಅವನ ಬಳಿ ಬಂದಳು. ಇವನೇ ಅವಳ ಕೈಗೂ ಒಂದು ತಟ್ಟೆಕೊಟ್ಟ. ಇಬ್ಬರೂ ಬೇಕಾದುದನ್ನು ಹಾಕಿಸಿಕೊಂಡು ಮೂಲೆಯಲ್ಲಿದ್ದ ಟೇಬಲ್ ಕಡೆ ಹೊರಟರು. “ಮೊದಲು ಊಟ ಮಾಡಿ ಆಮೇಲೆ ಮಾತಾಡೋಣ” ಎಂದ ಸಹದೇವ. ತನ್ನ ಕುತೂಹಲ ಬೇಗ ತಣಿಸಿಕೊಳ್ಳುವ ದೃಷ್ಟಿಯಿಂದ ಸಿಂಚನ ಹೆಚ್ಚು ಊಟ ಮಾಡಲಿಲ್ಲ. ಸಹದೇವನ ಮನಸ್ಸಿನಲ್ಲಿ ಬಹಳಷ್ಟು ವಿಚಾರಸರಣಿ ಓಡುತ್ತಿದ್ದ ಹಾಗೆ ಮುಖಭಾವವಿದ್ದರೂ ಒಂದೂ ಮಾತನಾಡದೆ ಊಟ ಮುಗಿಸಿದ. ಅವಳ ತಟ್ಟೆಯನ್ನೂ ತೆಗೆದುಕೊಂಡು ಹತ್ತಿರದ ಟೇಬಲ್ ಮೇಲೆ ಇಟ್ಟು ಇಬ್ಬರಿಗೂ ನೀರು ತೆಗೆದುಕೊಂಡು ಬಂದ. ಒಂದೇ ಸರತಿಗೆ ನೀರು ಕುಡಿದು ಮುಗಿಸಿ, ಸಿಂಚನಾಳ ಮುಖ ನೋಡಿದ.
ಸಿಂಚನಾಳ ಊಹೆಯಂತೆ ಸಹದೇವ ರಾಮಲಿಂಗಾಪುರದವನೇ. ತಂದೆ ಮುನಿರಾಜಪ್ಪ, ತಾಯಿ ಸುಶೀಲಮ್ಮ, ತಂಗಿ ಸಾಹಿತ್ಯಳ ಜೊತೆ ಜೀವನ ಸಾಗಿತ್ತು. ಸ್ವಲ್ಪ ಮಟ್ಟಿಗೆ ಜಮೀನಿತ್ತು, ಜೊತೆಗೆ ಮುನಿರಾಜಪ್ಪ ಪಂಚಾಯಿತಿ ಮೆಂಬರ್ ಆಗಿದ್ದರು. ಹೊಟ್ಟೆ ಬಟ್ಟೆಗೆ ಕೊರತೆ ಇರಲಿಲ್ಲ. ಜೊತೆಗೆ ಮುನಿರಾಜಪ್ಪರ ತಮ್ಮ ರಾಜೇಶ ಮೂವತ್ತು ದಾಟಿದ್ದರೂ ಮದುವೆಯಾಗದೆ ಇವರ ಜೊತೆಗೆ ಇದ್ದ. ಏನೋ ಆದರ್ಶಗಳು! ಕೆಲವು ಎಡಪಂಥೀಯ ಗೆಳೆಯರು ಇದ್ದರು. ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ತಾರುಣ್ಯದ ಬಿಸಿ, ತೆಗೆದುಕೊಂಡ ನಿರ್ಧಾರವೇ ಸರಿ ಎನ್ನುವ ಮನಸ್ಥಿತಿ. ದಾವಣಗೆರೆಯಲ್ಲಿ ಪೊಲಿಟಿಕಲ್ ಸೈನ್ಸ್ ನಲ್ಲಿ ಬಿಎ ಮಾಡಿ ಬಂದಿದ್ದ. ಕೆಲವು ವರ್ಷ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಸಿಗದೇ ಖಾಸಗಿ ಕೆಲಸಕ್ಕೆ ಹೋಗಲು ಮನಸ್ಸಾಗದೇ, ಮಾಡುವಾಗಲೇ ಬಿಎಡ್ ಮಾಡಬೇಕಿತ್ತು ಎಂದು ಕೊರಗುತ್ತಾ, ಅಣ್ಣನಿಗೆ ಏನಾದರೂ ದುರ್ಗ ದಾವಣಗೆರೆಯಲ್ಲಿ ಕೆಲಸವಿದ್ದರೆ ಅದಕ್ಕೆ ಸಹಾಯ ಮಾಡುತ್ತಾ ಕಾಲ ಕಳೆಯುತ್ತಿದ್ದ. ಮನೆಯಲ್ಲಿ ಎಷ್ಟು ಒತ್ತಾಯಿಸಿದರೂ- ಅದರಲ್ಲೂ ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡು, ಈಗ್ಗೆ ಐದು ವರ್ಷಗಳ ಹಿಂದೆ ತಾಯಿಯೂ ತೀರಿ ಹೋದ ಮೇಲೆ ಒತ್ತಾಯ ಮಾಡುವವರಿಲ್ಲದೆ, ಅಣ್ಣ ಅತ್ತಿಗೆಯೂ ಹೇಳುವಷ್ಟು ಹೇಳಿ ಸುಮ್ಮನಾಗಿ, ಊರಿನ ಕೆಲವು ಕುಹಕಿಗಳು ತಮ್ಮನ ಆಸ್ತಿಯನ್ನು ಹೊಡೆಯುವ ಅಣ್ಣನ ಸಂಚೆಂದು ಕಿಚಾಯಿಸಿ, ಈ ಎಲ್ಲದರ ನಡುವೆ ಮದುವೆಯ ವಯಸ್ಸು ದಾಟಿತ್ತು.
ಮುನಿರಾಜಪ್ಪನವರಿಗೆ ಸಿಕ್ಕಸಿಕ್ಕ ಪುಸ್ತಕಗಳನ್ನು ಓದುವ ಹವ್ಯಾಸ ಹಾಗೆಯೇ ಮಹಾಭಾರತದ ಹುಚ್ಚು. ಹಿಂದಿಯ ಧಾರಾವಾಹಿ ಹಿಂದೆ ಬಂದಿದ್ದಾಗಲೂ ನಂತರ ಪುನಃ ಇನ್ನೊಮ್ಮೆ ತಯಾರಾದ ಧಾರಾವಾಹಿಯನ್ನೂ ಅದರ ಕನ್ನಡದ ಅವತರಣಿಕೆಯನ್ನೂ ಎಷ್ಟು ಸಲ ನೋಡಿದ್ದರೋ! ಏನೆಂದರೂ ಅದಕ್ಕೆ ಸಮನಾದ ಯಾವ ಕಥೆ ಕಾದಂಬರಿಗಳು ಇಲ್ಲ. ಬಹುಶಃ ಪ್ರಪಂಚದಲ್ಲಿ ಮಹಾಭಾರತದಷ್ಟು ವಿಶಿಷ್ಟ ಕಥಾಸಾಗರ ಇನ್ನೆಲ್ಲೂ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟು ಅವರ ಮನಸ್ಸು ಭಾರತಮಯವಾಗಿತ್ತು. ಹೀಗಾಗಿಯೇ ಮೊದಲು ಮಗನಾದಾಗ ‘ಸಹದೇವ’ ಎಂದು ಹೆಸರಿಟ್ಟರು ‘ಸ’ ಅಕ್ಷರದಿಂದ ಶುರುವಾಗುವ ಹೆಸರಿಡಿ ಎಂದು ‘ಐನೋರು’ ಹೇಳಿದ್ದರಿಂದ. ಬಹಳಷ್ಟು ಮನೆಯಲ್ಲಿ ಹೊಸ ಸಾಮಾಜಿಕ (ಮನೆಮುರುಕ) ಧಾರಾವಾಹಿಗಳು ಪ್ರಸಾರವಾಗುವಾಗ ಅವುಗಳಲ್ಲಿದ್ದ ಹೆಸರುಗಳನ್ನೇ ತಮ್ಮ ಮನೆಯ ಮಕ್ಕಳಿಗೆ ಇಡುವ ಅಭ್ಯಾಸದಂತೆ ಮೂರು ವರ್ಷದ ನಂತರ ಎರಡನೆಯವಳು ಮಗಳಾದಾಗ ಅವಳಿಗೆ ‘ಸಾಹಿತ್ಯ’ ಎಂದು ಹೆಸರಿಟ್ಟಿದ್ದರು.
ಮುನಿರಾಜಪ್ಪನವರ ಮನೆಯಿಂದ ಎರಡು ಮನೆ ಆಚೆಗಿದ್ದ ಲಿಂಗರಾಜಪ್ಪನವರಿಗೂ ಎರಡು ಮಕ್ಕಳು- ಒಂದು ಗಂಡು ಒಂದು ಹೆಣ್ಣು- ಹೆಚ್ಚು ಕಡಿಮೆ ಒಂದೇ ವಯಸ್ಸಿನ ಮಕ್ಕಳು ಆದ್ದರಿಂದ; ಎರಡು ಮನೆಯ ಹಿರಿಯರು ಸ್ನೇಹ ಭಾವದಿಂದ ಇದ್ದುದರಿಂದ ಮಕ್ಕಳಲ್ಲೂ ಅದು ಮುಂದುವರೆದಿತ್ತು. ಸಿಂಚನಾಳೂ ಸಾಹಿತ್ಯಳೂ, ಸಹದೇವನೂ ಸಾರ್ಥಕನೂ ಒಟ್ಟಿಗೆ ಶಾಲೆಗೆ ಹೋಗಿ ಬಂದು ಮಾಡುತ್ತಿದ್ದರು. ಏಳನೆಯವರೆಗೂ ಅದೇ ಊರಿನಲ್ಲಿ ಶಾಲೆ ಇದ್ದುದರಿಂದ ತೊಂದರೆ ಇರಲಿಲ್ಲ.
ಆಗ ಸಹದೇವ ಏಳನೆಯ ತರಗತಿಯಲ್ಲಿದ್ದ. ಹನ್ನೆರಡು ಹದಿಮೂರು ವರ್ಷದ ಹುಡುಗ. ವಯಸ್ಸಿಗಿಂತ ತಿಳುವಳಿಕೆ ತುಸು ಹೆಜ್ಜೆ ಇತ್ತು. ಸ್ವಲ್ಪ ಮಿತ ಭಾಷಿ. ಒಂದು ದಿನ ಮುನಿರಾಜಪ್ಪನವರು ಯಾವುದೋ ಕೆಲಸದ ನಿಮಿತ್ತ ದಾವಣಗೆರೆಗೆ ಹೋಗಿದ್ದರು ದ್ವಿಚಕ್ರ ವಾಹನದಲ್ಲಿ. ಅದೇ ದಿನ ರಾಜೇಶ ದುರ್ಗಕ್ಕೆ ಹೋಗಿದ್ದುದ್ದರಿಂದ, ಇವರ ಕೆಲಸ ತುಸು ತುರ್ತಿನದಾಗಿದ್ದುದರಿಂದ ಅವರೇ ಹೊರಟಿದ್ದರು. ಅಲ್ಲಿ ಆಫೀಸಿನ ಕೆಲಸ ಮುಗಿಸಿ, ಅಪರೂಪಕ್ಕೆ ಸಿಕ್ಕ ಗೆಳೆಯರೊಂದಿಗೆ ಕೆ ಟಿ ಕುಡಿದು, ಹರಟಿ ಹೊರಡುವಾಗಲೇ ಮೋಡ ದಟ್ಟೈಸಲು ಶುರುವಾಯಿತು. ಮಳೆ ಜೋರಾಗುವ ಮೊದಲೇ ಹೊರಟುಬಿಟ್ಟರು. ದಾರಿಯಲ್ಲಿ ಮಳೆ ಹೆಚ್ಚಾಗಿ ಮರದ ಬುಡದಲ್ಲಿ ನಿಂತು ಸ್ವಲ್ಪ ಕಡಿಮೆಯಾದ ಮೇಲೆ ಪುನಃ ಹೊರಟರು. ಆದರೆ ಒಳ ಮಣ್ಣಿನ ರಸ್ತೆಗಳಿಂದ ಬರುವ ಗಾಡಿಗಳು ಟ್ರ್ಯಾಕ್ಟರ್ ಗಳು ರಸ್ತೆಯಲ್ಲಿ ಮಣ್ಣಿನ ರಾಡಿ ಎಬ್ಬಿಸಿ ದ್ವಿಚಕ್ರವಾಹನಗಳು ಜಾರುವಂತಾಗಿತ್ತು. ಆದರೂ ಮುನಿರಾಜಪ್ಪನವರು ಹುಷಾರಾಗಿಯೇ ಗಾಡಿ ಓಡಿಸುತ್ತಿದ್ದರು. ಎದುರಿನಿಂದ ಬಂದ ಟಿಪ್ಪರ್‌ನ ಬೆಳಕಿಗೆ ದಾರಿ ಕಾಣದಂತಾಗಿ, ಮಣ್ಣಿನ ಮೇಲೆ ಹೊರಟ ಗಾಡಿಯ ಚಕ್ರ ಎಡಕ್ಕೆ ಹೊರಳಿ ಬಾಗಿದಾಗ ಮುನಿರಾಜಪ್ಪನವರು ಬ್ಯಾಲೆನ್ಸ್ ಮಾಡುವ ಅವಸರದಲ್ಲಿ ರಸ್ತೆಯಲ್ಲಿ ಬಲಕ್ಕೆ ಬಿದ್ದು ಟಿಪ್ಪರ್ ಅವರ ಮೇಲೆಯೇ ಹರಿದು ಹೋಗಿತ್ತು.
ವಿಷಯ ಹೇಗೋ ತಿಳಿದು, ಆಕ್ಸಿಡೆಂಟ್ ಆದ್ದರಿಂದ, ಟಿಪ್ಪರ್‌ನವನು ನಿಲ್ಲಿಸದೆ ಹೋಗಿದ್ದುದರಿಂದ, ಅಲ್ಲೆಲ್ಲೂ ಸಿಸಿ ಟಿವಿಗಳಿಲ್ಲದಿದ್ದುದರಿಂದ ಪೊಲೀಸರು ಹಿಟ್ ಅಂಡ್ ರನ್ ಕೇಸ್ ದಾಖಲಿಸಿ, ಪೋಸ್ಟ್ ಮಾರ್ಟಮ್ ನಂತರ ದೇಹ ಮಾರನೆಯ ಮಧ್ಯಾಹ್ನ ಮನೆಯ ಬಳಿ ಬಂತು. ಈಗಾಗಲೇ ಅತ್ತು ಅತ್ತು ಕಣ್ಣೀರು ಬತ್ತಿ, ಸೊರಗಿ ಮುದುಡಿದ್ದ ಸುಶೀಲಮ್ಮನವರನ್ನು ಸಮಾಧಾನಗೊಳಿಸುವುದೇ ಕಠಿಣವಾಗಿತ್ತು. ಮಕ್ಕಳ ಆಳುವಿಗೆ ಪಾರವೇ ಇಲ್ಲ. ಅದರಲ್ಲೂ ಸಹದೇವನಿಗೆ ತನ್ನ ಮುಂದಿನ ಬದುಕನ್ನು ಕುರಿತೂ ಅಯೋಮಯವಾಗಿತ್ತು. ಅವನಿನ್ನು ಸಣ್ಣವನಾಗಿದ್ದುದರಿಂದ ಅಲ್ಲದೆ ರಾಜೇಶನಿಗೆ ತಂದೆ ತಾಯಿ ಇಲ್ಲದುದರಿಂದ ಅವನೇ ಮುಂದಿನ ಕಾರ್ಯಗಳನ್ನು ಪೂರೈಸಿದ. ರಾತ್ರಿ ಈ ಮನೆಯ ಮಕ್ಕಳಿಬ್ಬರು ಲಿಂಗರಾಜಪ್ಪನವರ ಮನೆಯಲ್ಲಿ ಕಳೆದರು. ಮನೆಯಲ್ಲಿ ಹತ್ತಿರದ ನೆಂಟರು ಸುಶೀಲಮ್ಮನವರ ಬಳಿ ಇದ್ದರು. ಹದಿಮೂರು ದಿನಗಳವರೆಗೆ ಎಲ್ಲ ಕಾರ್ಯಗಳು ಮುಗಿದು, ಹಿರಿಯರೆಲ್ಲರೂ ರಾಜೇಶನಿಗೆ ‘ನೀನೇ ಹಿರಿಯ, ಇನ್ಮೇಲೆ ಈ ಮನೆಯ ಜವಾಬ್ದಾರಿ ನಿನ್ನದೇ,’ ಎಂದು ಹೇಳಿ ಮಕ್ಕಳ ಅತ್ತಿಗೆಯ ಹೊಣೆಯೂ ನಿನ್ನದೇ ಎಂದು ಮನವರಸಿ ಹೊರಟುಬಿಟ್ಟರು.

ದಿನ ಕಳೆದಂತೆ ದೂರದವರಿಗೆ ಎಲ್ಲವೂ ಸಹಜ ಸ್ಥಿತಿಗೆ ಬಂದ ಹಾಗೆ ಕಾಣುತ್ತದೆ. ಆದರೆ ಹದಿನೇಳೆಂಟು ವರ್ಷ ಒಟ್ಟಿಗೆ ಜೀವನ ನಡೆಸಿದ ಸಂಗಾತಿಗೆ ಕತ್ತಲು ಆವರಿಸುವುದು ಸಹಜ. ಹಾಗೆಯೇ ಮಕ್ಕಳಲ್ಲಿ ಹೆಣ್ಣು ಮಕ್ಕಳು ತಂದೆಯನ್ನು ಹಚ್ಚಿಕೊಳ್ಳುವುದು ಸಹಜ. ಆದರೆ ಮಹದೇವನೂ ತಂದೆಯನ್ನು ಹಚ್ಚಿಕೊಂಡಿದ್ದ. ವಯಸ್ಸಿಗೆ ಮೀರಿದ ಗಂಭೀರತೆಯಿಂದ, ಅದರಲ್ಲೂ ತಂಗಿ ಹುಟ್ಟಿದ ಮೇಲೆ ತೀರಾ ಚೆಲ್ಲು ಚೆಲ್ಲಾಗಿ ಆಡುತ್ತಿರಲಿಲ್ಲ. ತಂದೆಯಂತೆಯೇ ಅವನಿಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆದು ಬಂದಿತ್ತು. ಅದು ಅವನನ್ನು ಇನ್ನಷ್ಟು ಗಂಭೀರನನ್ನಾಗಿ ಮಾಡಿತ್ತು. ಅವನಿಗೊಂದೇ ಚಿಂತೆ ಇನ್ನೇನು ಈ ವರ್ಷ ಏಳನೇ ತರಗತಿ ಮುಗಿಯುತ್ತದೆ. ನಂತರ ಬೋರಲಿಂಗಪುರಕ್ಕೆ ಹೈಸ್ಕೂಲಿಗೆ ಹೋಗಬೇಕು. ಚಿಕ್ಕಪ್ಪ ನನಗೆ “ಓದಿದ್ದು ಸಾಕು ಹೊಲದ ಕೆಲಸಕ್ಕೆ ಬಾ” ಎಂದು ಬಿಟ್ಟರೆ?! ಹೀಗೆ ಅನವಶ್ಯಕ ಆಲೋಚನೆಗಳಲ್ಲಿ ಇನ್ನಷ್ಟು ಗಂಭೀರನಾಗಿಬಿಟ್ಟ. ಒಮ್ಮೆ ತಾಯಿ ಒಬ್ಬರೆ ಇದ್ದಾಗ ಈ ಬಗ್ಗೆ ಕೇಳಿಯೂಬಿಟ್ಟ. “ಇಲ್ಲಪ್ಪ ಹಾಗೇನಿಲ್ಲ ನೀನು ಹೈಸ್ಕೂಲಿಗೂ ಹೋಗಬಹುದು. ಕಾಲೇಜಿಗೂ ಹೋಗಬಹುದು” ಎಂದಾಗ ಅವನಿಗೆ ತುಸು ನಿರಾಳವಾಯಿತು.
ಈ ನಡುವೆ ರಾಜೇಶ ಸ್ವಲ್ಪ ಹೆಚ್ಚಿಗೆ ಮನೆಯಲ್ಲಿ ಇರುತ್ತಿದ್ದ. ಮಕ್ಕಳಿಗೆ ಏನಾದರೂ ಅವಶ್ಯಕತೆ ಇದ್ದರೂ ಸುಶೀಲಮ್ಮನೆ ಅವನ ಬಳಿ ಹೇಳಿ ಮಾಡಿಸುತ್ತಿದ್ದರು. ಅಲ್ಲದೆ ಕೆಲವು ಬ್ಯಾಂಕ್ ವ್ಯವಹಾರಕ್ಕೆ ಸಹಿ ಬೇಕು ಎಂದು ಅತ್ತಿಗೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಮೊದಲೇ ಸುಶೀಲಮ್ಮ ನಸುಗೆಂಪು ವರ್ಣದವರು. ನೀಳ ಮೂಗು ಅವರ ಮುಖಕ್ಕೆ ಶೋಭೆ ತಂದಿತ್ತು. ಹಿಂದೆಯಲ್ಲ ತೀರಾ ಬೇಕಾದವರಂತೆ ವರ್ತಿಸುತ್ತಿದ್ದ ಕೆಲವು ಹೆಂಗಸರ ಮನಸ್ಸಿನ ಅಸೂಯೆಯ ಮಣ್ಣಿನಲ್ಲಿ ಕೆಟ್ಟ ಕಲ್ಪನೆಯ ಗಿಡಗಳು ಮೊಳಕೆ ಒಡೆಯಲು ಪ್ರಾರಂಭಿಸಿದವು.
ಏಳನೇ ತರಗತಿಯ ಪರೀಕ್ಷೆ ಮುಗಿದಿತ್ತು. ಬೇಸಿಗೆ ರಜೆ ಬಂದಿತ್ತು. ಕೆಲವು ಮಕ್ಕಳು ಆಗಲೇ ತಾವು ಮುಂದೆ ಯಾವ ಊರಿನಲ್ಲಿ ಯಾವ ಶಾಲೆಯಲ್ಲಿ ಅಡ್ಮಿಶನ್ ಆಗ್ತೇವೆ ಎಂದೆಲ್ಲ ಮಾತಾಡಿಕೊಳ್ಳುವುದು ಕಿವಿಗೆ ಬಿದ್ದು, ಒಂದು ದಿನ ಸಹದೇವ ಚಿಕ್ಕಪ್ಪನ ಬಳಿ ಈ ಬಗ್ಗೆ ಕೇಳಿದ ಆಗ ರಾಜೇಶ “ರಿಸಲ್ಟ್ ಬರಲಿ ಬಿಡು ಆಮೇಲೆ ಯೋಚನೆ ಮಾಡೋಣ ಈಗೇನು ಅವಸರ” ಎಂದು ಬಿಟ್ಟ. ಸಹದೇವ ಪೆಚ್ಚಾದ. ಗಾಳಿ ಸುದ್ದಿಗಳು ಜೋರಾದವು. ಒಂದು ದಿನ ಲಿಂಗರಾಜಪ್ಪನವರು ತಮ್ಮ ಮನೆಯಲ್ಲಿ ತಮ್ಮ ಮಗನ ಜೊತೆ ಆಡಿಕೊಂಡಿದ್ದ ಸಹದೇವನನ್ನು ಹತ್ತಿರ ಕರೆದು ಬೆನ್ನು ಸವರುತ್ತಾ, “ಸಾವ್ರ ಜನ ಸಾವ್ರ ಮಾತಾಡ್ತಾರೆ ನೀನೇನು ತಲೆಕೆಡಿಸಿಕೊಳ್ಳಬೇಡ, ನಿಮ್ಮಮ್ಮ ದೇವರಂಥವರು” ಎಂದಾಗ ಸಹದೇವನಿಗೆ ಆ ಮಾತಿನ ತಲೆ ಬುಡ ಅರ್ಥ ಆಗಲಿಲ್ಲ. ಆದರೆ ಒಂದು ದಿನ ಸಹದೇವ ಬೆಂಕಿ ಪೊಟ್ಟಣ ತರಲು ಹತ್ತಿರದ ಗೂಡಂಗಡಿಗೆ ಹೋಗಿದ್ದ. ಅಲ್ಲೊಂದಿಬ್ಬರು ಬೀಡಿ, ಸಿಗರೇಟು ಸೇದುತ್ತಾ ನಿಂತಿದ್ದ ತರುಣರು ಇವನನ್ನು ನೋಡುತ್ತಲೇ ಕುಹಕ ನಗೆ ಬೀರಿದರು. ಅದರಲ್ಲೊಬ್ಬ ಯಾವಾಗಲೂ ಕಳ್ಳಬಟ್ಟಿಯ ನಶೆಯಲ್ಲಿರುವ ಸೀನಾ ಇವನನ್ನು ಪ್ರೀತಿಯಿಂದ ಎಂಬಂತೆ ಹತ್ತಿರ ಕರೆದು “ಏನೋ ಮರಿ ಚೆನ್ನಾಗಿದ್ದೀಯಾ, ಪಾಪ ನಿಮ್ಮಪ್ಪ ಇಷ್ಟು ಬೇಗ ಹೋಗಬಾರದಿತ್ತು ಹೋಗಲಿ ಬಿಡು, ಚಿಗಪ್ಪ ಇದಾನಲ್ಲ ಚೆನ್ನಾಗ್ ನೋಡ್ಕೊಂತಾನ, ಅವನಿಗೇನ್ ಬಿಡಪ್ಪ ಮದುವೆ ಬೇಡ ಬೇಡ ಅಂತ ಮನೆಯಲ್ಲೇ ಅಡ್ಜಸ್ಟ್ ಮಾಡ್ಕೊಂಡ್ಬಿಟ್ಟ” ಎಂದಾಗ ಉಳಿದವರು ಕೇಕೆ ಹಾಕಿ ನಕ್ಕರು. ಅಂಗಡಿಯ ನರಸಿಂಹಪ್ಪನೆ “ಯಾಕ್ರೋ ಸುಮ್ಮನೆ ಇರಾಕ್ ಆಗಲ್ವಾ? ನಿಮ್ ಕೇಮೆ ನೀವ್ ನೋಡ್ಕಳಿ, ಎಲ್ಲಾ ಕಣ್ಣಲ್ಲಿ ಕಂಡಂಗ್ ಆಡ್ಬೇಡಿ. ಅದಕ್ಕೆ ಎಷ್ಟೋ ಸಲ ಹೇಳ್ತೀನಿ ಇಲ್ ನಿಂತ್ಕಂಡ್ ಪಂಚಾಯಿತಿ ಮಾಡಬೇಡಿ” ಅಂತ ಅವರಿಗೆ ಗದರಿಸಿ ಬೆಂಕಿ ಪೊಟ್ಟಣದ ಜೊತೆ ಒಂದು ಚಾಕ್ಲೇಟನ್ನು ಕೊಟ್ಟು “ನೀನು ತಲೆ ಕೆಡಿಸಿಕೊಳ್ಬೇಡ ಮರಿ ಅವರು ಹಂಗೇನೆ” ಅಂದು ಕಳಿಸಿದರು. ಸಹದೇವನಿಗೆ ಆ ಮಾತಿನ ಅರ್ಥ ಪೂರ್ತಿ ಆಗದಿದ್ದರೂ ಮನಸ್ಸಿಗೆ ಕಸಿವಿಸಿ ಆದದ್ದು ಸುಳ್ಳೇನಲ್ಲ. ಲಿಂಗರಾಜಪ್ಪನವರು ಹೇಳಿದ ಮಾತಿಗೆ ಈ ಪುಂಡರ ಮಾತನ್ನು ಸೇರಿಸಿ ನೋಡಿದಾಗ ಯಾಕೋ ಮನಸ್ಸಿಗೆ ತುಂಬಾ ಬೇಸರವಾಯಿತು. ತಂದೆಯ ನೆನಪು ತುಂಬಾ ಕಾಡಿತು. ಮುಂಚಿನಿಂದಲೂ ಸುಶೀಲಮ್ಮ ಮೈದುನನೊಂದಿಗೆ ಸಲುಗೆಯಿಂದಲೇ ಇದ್ದರೂ ಈಗ ಸಹದೇವನ ಭ್ರಮಿಷ್ಟ ಮನಸ್ಸಿಗೆ ಅವರು ಇನ್ನಷ್ಟು ಹತ್ತಿರವಾಗಿದ್ದ ಹಾಗೆ ಕಂಡು, ಎರಡು ಮೂರು ದಿನ ಅದೇ ವಿಷಯ ಯೋಚಿಸಿ ತಲೆಕೆಟ್ಟು, ಒಂದು ಮುಂಜಾನೆ ಬೇಗ ಎದ್ದವನು ಹೊಲದ ಕಡೆಗೆ ಹೋಗೋಣವೆಂದು ಹೊರಟವನು ತನಗೆ ತಿಳಿಯದ ಹಾಗೆ ಮುಖ್ಯ ರಸ್ತೆಗೆ ಬಂದು ಬಿಟ್ಟಿದ್ದ. ದೂರದಲ್ಲಿ ಒಂದು ಲಾರಿ ಬರುತ್ತಿರುವುದು ಕಾಣಿಸಿತು.
*****
“ಆ ದಿನ ಮನೆ ಬಿಟ್ಟವರು ನೀವು ಇಂದೇ ಕಾಣುತ್ತಿರುವುದು. ನಮ್ಮ ಅಪ್ಪನೂ ನಿಮ್ಮ ಚಿಕ್ಕಪ್ಪನೂ ತುಂಬಾ ಹುಡುಕಾಡಿದರು. ನೀವು ಮುಖ್ಯರಸ್ತೆಯಲ್ಲಿ ನಿಂತಿದ್ದನ್ನು ಯಾರೋ ಒಬ್ಬರು ನೋಡಿದ್ದರು. ಹಾಗಾಗಿ ಊರು ಬಿಟ್ಟು ಎಲ್ಲಿಗೋ ‘ಓಡಿ’ ಹೋಗಿರಬೇಕೆಂದುಕೊಂಡರು. ತಲೆಗೊಂದು ಮಾತನಾಡಿದರು.
“ಅವನಿಗೆ ಓದಲು ಇಷ್ಟವಿಲ್ಲ ಅದಕ್ಕೆ ಓಡಿ ಹೋದ” ಎಂದರು. “ಮನೆಯಲ್ಲಿ ವಾತಾವರಣ ಸರಿ ಇಲ್ಲ ಅದಕ್ಕೆ ಹೀಗಾಗಿದೆ” ಎಂದರು. ಪಾಪ ನಿಮ್ಮಮ್ಮ ನಿಮ್ಮ ಕೊರಗಿನಲ್ಲಿ ಅನೇಕ ದಿನ ಊಟ ನಿದ್ದೆ ಮಾಡಲಿಲ್ಲವಂತೆ; ಆಗಾಗ ನಮ್ಮಮ್ಮ ಹೋಗಿ ಸಮಾಧಾನ ಮಾಡುತ್ತಿದ್ದರು. ಪೊಲೀಸ್ ಕಂಪ್ಲೇಂಟ್ ಕೂಡ ಕೊಟ್ಟರು. ಏನು ಉಪಯೋಗವಾಗಲಿಲ್ಲ. ಬೆಂಗಳೂರಿಗೆ ಹೋಗಿದ್ದರೆ ಹೇಗೆ ಹುಡುಕುವುದು ಆ ಜನಾರಣ್ಯದಲ್ಲಿ, ಇಲ್ಲೇ ದುರ್ಗ ದಾವಣಗೆರೆ ಆದರೆ ಸಿಕ್ಕರೂ ಸಿಗಬಹುದು ಎಂದು ಎಲ್ಲರೂ ಅಂದುಕೊಂಡು ಸುಮ್ಮನಾದರೆ, ನಮ್ಮಣ್ಣ ಸಾರ್ಥಕ್ ಮಾತ್ರ ತುಂಬಾ ದಿನ ನೆನೆಸಿಕೊಳ್ಳುತ್ತಿದ್ದ. “ಹೈಸ್ಕೂಲಿಗೆ ನನ್ನ ಜೊತೆ ಬರುತ್ತಿದ್ದ, ನಂಗ್ ಒಳ್ಳೆ ಫ್ರೆಂಡ್ ಇಲ್ದಂಗೆ ಆಯ್ತು” ಅಂತಿದ್ದ. ಸಾಹಿತ್ಯ ಕೂಡ ಎಷ್ಟೋ ಸಲ ನನ್ನ ಜೊತೆ ನಿಮ್ಮನ್ನು ನೆನೆಸಿಕೊಂಡು ಕಣ್ಣೀರು ಹಾಕ್ತಿದ್ಲು. ದಿನ ಕಳೆದ ಹಾಗೆ ಎಲ್ಲಾ ಸಹಜವಾಗ್ತಾ ಬಂತು. ಜನ ಅನ್ಕೊಂಡ ಹಾಗೆ ನಿಮ್ಮ ಮನೆಯಲ್ಲಿ ನಡೆಯಬಾರದ್ದು ಏನೂ ನಡೆದಿರಲಿಲ್ಲ. ಒಂದಿನ ರಾಜಣ್ಣ ನಮ್ಮಪ್ಪನ ಹತ್ತಿರ ಮಾತಾಡ್ತಾ ತುಂಬಾ ನೊಂದುಕೊಂಡರಂತೆ. ಆಗ ನಮ್ಮಪ್ಪ ತುಂಬಾ ಬಲವಂತ ಮಾಡಿದ್ರಂತೆ ನೀನೊಂದು ಮದುವೆಯಾಗು ಅಂತ. ಆಗ ರಾಜಣ್ಣ “ಇಲ್ಲಣ್ಣ ಮುಂಚೆನೇ ನಂಗೆ ಮದುವೆಯಲ್ಲಿ ನಂಬಿಕೆ ಇಲ್ಲ, ಬರೋಳು ಎಂಥವ್ಳೋ ಏನೋ, ಅತ್ತಿಗೆನಾ ಮಗಳನ್ನ ಹೆಂಗ್ ನೋಡ್ಕೊಂತಾಳೋ” ಅಂತ ಅಂದ್ರಂತೆ. ಕೊನೆಗೆ ನಮ್ಮ ಅಪ್ಪಾನೆ ದೂರದ ಬಡ ಸಂಬಂಧಿ ಒಬ್ಬರ ಮಗಳನ್ನು ಒಪ್ಪಿಸಿ, ಮದುವೆ ಶಾಸ್ತ್ರ ಮಾಡಿಸಿದರು. ಆಯಮ್ಮನು ತುಂಬಾ ಒಳ್ಳೇವ್ಳೆ. ನಿಮ್ಮ ತಾಯಿನ, ತಂಗಿನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಆಗಲೂ ಅನ್ನೋ ಜನ ಅಂತಾನೆ ಇದ್ದರು” ಎಂದು ನಿಟ್ಟಿಸಿರು ಬಿಟ್ಟ ಸಿಂಚನಾ “ಆಮೇಲೆ ಒಂದು ದಿನ ನಮ್ಮೂರಿನ ಸಿದ್ದಪ್ಪಣ್ಣ ಬೆಂಗಳೂರಿನಲ್ಲಿ ಹೋಟೆಲ್ ಒಂದರಲ್ಲಿ ನಿಮ್ಮನ್ನ ನೋಡಿದರಂತೆ, ನೀವು ಸಪ್ಲೈ ಮಾಡ್ತಿದ್ದರಂತೆ. ಕರೆದು ಕೇಳಿದ್ದಕ್ಕೆ “ನೀವು ಯಾರೋ ಗೊತ್ತಿಲ್ಲ, ನಾನು ಸಹದೇವ ಅಲ್ಲ” ಅಂತ ಅಂದರಂತೆ ನೀವು. ಅವರು ಊರಿಗೆ ಬಂದವರು ಹಿಂಗಿಂಗೇ ಅಂತಾ ಅಂದ್ರಾ, ಮಾರನೇ ದಿನಾನೇ ನಮ್ಮಪ್ಪನೂ ರಾಜಣ್ಣನೂ ಆ ಹೋಟೆಲಿಗೆ ಹೋಗಿ ನೋಡಿದಾಗ; ನಿಮ್ಮ ಫೋಟೋ ತೋರಿಸಿ ಕೇಳಿದ್ರೆ “ಈ ಹುಡುಗ ನಿನ್ನೆವರೆಗೂ ಇಲ್ಲೇ ಇದ್ದ, ಹೇಳದೆ ಮಾಡದೇ ಹೊರಟು ಹೋಗಿದ್ದಾನೆ. ಎಲ್ಲೋಗಿದ್ದಾನೋ ಗೊತ್ತಿಲ್ಲ. ಇಂಥ ಹುಡುಗರಿಗೆ ಕೆಲಸ ಕೊಟ್ಟರೆ ನಮಗೆ ತಲೆನೋವು ತಪ್ಪಲ್ಲ” ಅಂತ ಅವರ ಸಮಸ್ಯೆನೇ ಹೇಳ್ಕೊಂಡ್ರಂತೆ.
*****
ಹೌದು ಬಳೆಪೇಟೆ ಗಲ್ಲಿಯಲ್ಲಿದ್ದ ಸನ್ಮಾನ್ ಕೆಫೆಯಲ್ಲಿ ನಾನು ಸಪ್ಲೈ ಮಾಡ್ತಿದ್ದ ಟೇಬಲ್ ನಲ್ಲಿ ಸಿದ್ದಪ್ಪಣ್ಣ ಕೂತಿದ್ರು. ಮೊದಲು ನಾನು ಗಮನಿಸಲಿಲ್ಲ. ಪುನಹ ಬಿಲ್ ಕೊಡಲು ಬಂದಾಗ ಅವರೇ ಗುರುತಿಸಿ ಕೇಳಿದರು “ನೀನು ಸಹದೇವ ಅಲ್ವಾ” ಅಂತ. “ನಂಗೊಂದಿಷ್ಟು ಕೆಲಸ ಅದೆ ಮುಗಿಸಿಕೊಂಡು ಬರ್ತೀನಿ ನಂಜೊತೆ ಬಂದ್ಬಿಡು ಊರಿಗೋಗೋಣ, ನಿಮ್ಮಮ್ಮ ತುಂಬಾ ನೊಂದ್ಕೊಂಡವಳೆ ಮರಿ” ಅಂದ್ರು. ನಾನು “ನೀವ್ಯಾರೋ ಗೊತ್ತಿಲ್ಲ” ಅಂತ ತಪ್ಪಿಸಿಕೊಂಡೆ. ಅಕಸ್ಮಾತ್ ಊರಿನಿಂದ ಯಾರಾದರೂ ಬಂದರೆ ಎಂದು ಅಲ್ಲಿಂದ ಹೊರಟು ಸದಾಶಿವ ಕೆಲಸ ಮಾಡುತ್ತಿದ್ದ ರುಚಿ ದರ್ಶಿನಿಯಿದ್ದ ಗುಟ್ಟಳ್ಳಿ ಕಡೆಗೆ ಹೋದೆ. ಸದಾಶಿವ ಕಳೆದ ತಿಂಗಳು ಇಲ್ಲಿ ಕೆಲಸ ಬಿಟ್ಟು ಅಲ್ಲಿಗೆ ಹೋಗಿದ್ದ. ಮೊನ್ನೆ ಮೊನ್ನೆ ಒಮ್ಮೆ ಇಲ್ಲಿಗೆ ಬಂದು ಬಾಕಿ ಸಂಬಳ ವಸೂಲಿ ಮಾಡಿ, ಅವರ ಹೋಟೆಲ್ ವಿಸ್ತರಣೆ ಮಾಡುತ್ತಿದ್ದಾರೆ ನೀನು ಬರ್ತೀಯಾ ಅಂತ ಕೇಳಿದ್ದ ಅದರ ನೆನಪಾಗಿ ಆ ಕಡೆ ಹೊರಟೆ.
ಸ್ವಲ್ಪ ಹುಡುಕಿದ ಮೇಲೆ ಹೋಟೆಲ್ ಸಿಕ್ಕಿತು. ಸದಾಶಿವನೇ ಓನರ್ ಶಿವರಾಮ ಐತಾಳರ ಬಳಿ ರೆಕಮಂಡ್ ಮಾಡಿದ. ಅವರು ನನ್ನ ಮುಖ ಅರೆಕ್ಷಣ ನೋಡಿ ಒಪ್ಪಿಕೊಂಡರು. ಅಲ್ಲಿಯೇ ಸೆಟಲ್ ಆದೆ. ಆಗಾಗ ಊರಿನ ನೆನಪು ಆಗುತ್ತಿತ್ತು. ಅಮ್ಮ, ತಂಗಿಯ, ಗೆಳೆಯರ ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಆಗೆಲ್ಲಾ ಯಾವುದಾದರೂ ಪುಸ್ತಕ ಓದುತ್ತಾ ಕುಳಿತುಬಿಡುತ್ತಿದ್ದೆ. ಒಮ್ಮೆ ಹೀಗೆ ಬಿಡುವಿದ್ದಾಗ, ಐತಾಳರು ನನ್ನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಸುಳ್ಳು ಹೇಳಲು ಮನಸ್ಸಾಗದೆ ಎಲ್ಲ ಹೇಳಿಬಿಟ್ಟೆ. ಮನಸ್ಸು ಹಗುರಾಯಿತು. ಈವರೆಗೂ ಸಂಪೂರ್ಣ ಸತ್ಯ ಯಾರಿಗೂ ಹೇಳಿರಲಿಲ್ಲ. ಐತಾಳರು ಸ್ವಲ್ಪ ಹೊತ್ತು ನನ್ನ ಮುಖವನ್ನೇ ನೋಡಿದರು. ಕೆಲಸದ ವಿಷಯದಲ್ಲಿ ಅವರು ತುಂಬಾ ಸ್ಟ್ರಿಕ್ಟ್; ಆದರೆ ಹೆಂಗರಳು. ಕೆಲಸಗಾರರನ್ನು ಮಕ್ಕಳ ಹಾಗೆ ನೋಡಿಕೊಳ್ಳುವ ಸ್ವಭಾವ. “ಆದ್ರೂ ನೀ ಊರು ಬಿಟ್ಟು ಬರಬಾರದಿತ್ತು ಮಾರಾಯ, ನೀ ಎಣಿಸಿದ ಹಾಗೆ ಅಲ್ಲೇನು ಆಗಿರಲಿಕ್ಕಿಲ್ಲ. ಈ ಕಾಲದ ಜನ ಕಥೆ ಸಿನಿಮಾ ಧಾರಾವಾಹಿ ನೋಡಿ ಎಂತೆಲ್ಲಾ ಗ್ರಹಿಸಿ ಹೀಗೆ ಮಾಡಿಬಿಡೋದು ಹೌದಲ್ಲವನ! ಆದರೂ ಒಮ್ಮೆ ಹೋಗಿ ಬಾರ” ಎಂದರು. ಆಗ ನಾನು ನನಗೆ ಚೆನ್ನಾಗಿ ಓದಬೇಕೆಂಬ ಆಸೆ ಎಂದು ಹೇಳಿದಾಗ, ಐತಾಳರು “ಹೌದೌದು ಓದಿ ದೊಡ್ಡ ಜನ ಆಗಬೇಕಲ್ಲ ನಿನಗೆ ಆದರೆ ಇಲ್ಲಿ ಕೆಲಸ ಮಾಡುವವರು ಯಾರು ನಿನ್ನ ಅಪ್ಪನ?” ಎಂದು ನಗುತ್ತಾ ಹೇಳಿ, ಸಾರಿ ನಿಂಗೆ ಅಪ್ಪ ಇಲ್ಲ ಅಲಾ, ಇರಲಿ ನೋಡುವ. ಓದಲಿಕ್ಕೊಂದು ವ್ಯವಸ್ಥೆ ಮಾಡುವ” ಎಂದರು, ನನ್ನ ತಲೆ ಸವರುತ್ತಾ. ನನ್ನ ಜೀವಮಾನದಲ್ಲಿಯೇ ಅಂತಹ ಸಂತೋಷ ಎಂದೂ ಆಗಿರಲಿಲ್ಲ. ಹೀಗೆ ದಿನ ಕಳೆದ ಹಾಗೆ ಎಕ್ಸ್ಟರ್ನಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಕಟ್ಟಿಸಿ, ನಂತರ ಓಪನ್ ಯುನಿವರ್ಸಿಟಿಯಲ್ಲಿ ಡಿಗ್ರೀ ಮಾಡಿಸಿದರು. ಅವರ ಮಗನ ಹಾಗೆ ನೋಡಿಕೊಂಡರು. ನಾನೂ ಅವರ ನಂಬಿಕೆಗೆ ಚ್ಯುತಿ ಬಾರದ ಹಾಗೆ ಹಗಲು ರಾತ್ರಿ,- ಓದು ಬಿಟ್ಟರೆ ಕೆಲಸ, ಕೆಲಸ ಬಿಟ್ಟರೆ ಓದು- ಬರಿ ನಾಲ್ಕೈದು ಗಂಟೆ ನಿದ್ದೆ ಮಾಡಿದೆ. ಕಾಲ ಓಡಿದ್ದೇ ತಿಳಿಯಲಿಲ್ಲ. ಅವರೇ ಒಮ್ಮೆ “ಬೇರೆಲ್ಲಾದರೂ ಕೆಲಸಕ್ಕೆ ಹೋಗುವ ಆಲೋಚನೆ ಉಂಟಾ ಮಾರಾಯ?” ಎಂದಾಗ ನಾನು “ಇಲ್ಲ ನಿಮ್ಮಲ್ಲಿಯೇ ಇದ್ದು ಎಮ್.ಎ. ಮಾಡ್ತೀನಿ” ಎಂದೆ. “ಸರಿ ಸರಿ, ಎಮ್ಮೆಯೋ ಕೋಣವೋ ಮಾಡು ಮರಾಯ” ಎಂದು ನಕ್ಕರು. ಹೀಗೇ ಕನ್ನಡ ಸಾಹಿತ್ಯದಲ್ಲಿ ಎಮ್ ಎ ಮುಗಿಸಿದೆ. ಐತಾಳರ ವಶೀಲಿಯಿಂದಲೇ ಮಲ್ಲೇಶ್ವರದ ಈ ಕಾಲೇಜಿನಲ್ಲಿ ನನಗೆ ಕೆಲಸ ಸಿಕ್ಕಿರುವುದು. ನಂತರವೂ ಅಲ್ಲಿಯೇ ಉಳಿದುಕೊಂಡಿದ್ದೆ. ಐತಾಳರು ಒತ್ತಾಯ ಮಾಡಿ “ಆಗಾಗ ಬಂದು ಹೋಗಿ ಮಾಡ ಸಾಕು. ಅಲ್ಲೇ ಹತ್ತಿರ ರೂಮ್ ಮಾಡಿಕೋ. ಎರಡು ವರ್ಷ ಕಳೆಯಲಿ ನಾನೇ ಚಂದದೊಂದು ಹುಡುಗಿ ನೋಡ್ತೇ ಆಯ್ತಾ” ಎಂದಾಗ ನಾನು ನನಗೆ ತಿಳಿಯದ ಹಾಗೆ ಅವರ ಪಾದದ ಮೇಲಿದ್ದೆ. ಬಹುಶಃ ತೀರಿಕೊಂಡ ಅಪ್ಪನೇ ಅವರೊಳಗೆ ಸೇರಿ ಇಷ್ಟೆಲ್ಲಾ ಮಾಡಿಸಿರಬಹುದು ಎನ್ನಿಸಿತು. ಹಾಗೆಂದರೂ ಐತಾಳರ ವ್ಯಕ್ತಿತ್ವಕ್ಕೆ ಚ್ಯುತಿ ತಂದ ಹಾಗೆ!
ಇಷ್ಟು ವಿವರಿಸಿ ನಿಟ್ಟುಸಿರು ಬಿಟ್ಟು ಒಂದೇ ಗುಟುಕಿಗೆ ಲೋಟದ ನೀರು ಕುಡಿದು ಮುಗಿಸಿದ ಸಹದೇವ. ಇಬ್ಬರೂ ಸುಮಾರು ಹೊತ್ತು ಮೌನದೊಳಗೆ ಮುಳುಗಿದ್ದರು. ಅಷ್ಟರಲ್ಲಿ ಹುಡುಗನೊಬ್ಬ ಬಂದು “ಸರ್ ಪ್ರಿನ್ಸಿಪಾಲ್ ಕರೆಯುತ್ತಿದ್ದಾರೆ” ಎಂದಾಗ ಸಹದೇವ ಎದ್ದು ಹೊರಟ. “ನಾನು ಕಾರ್ಯಕ್ರಮ ಮುಗಿಯುವವರೆಗೂ ಕಾಯುತ್ತೀನಿ” ಎಂದಳು ಸಿಂಚನಾ. ಉಳಿದ ಕಾರ್ಯಕ್ರಮಗಳನ್ನು ಹೇಗೆ ಮುಗಿಸಿದನೋ ಸಹದೇವ ಅವನಿಗೇ ತಿಳಿಯಲಿಲ್ಲ. ಕೊನೆಯ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ನೋಡುತ್ತಿದ್ದರೂ ಸಿಂಚನಾಳ ತಲೆಯಲ್ಲಿ ಬೇರೆಯದೇ ಯೋಚನೆ ಇತ್ತು. ಮಧ್ಯದಲ್ಲಿ ಎದ್ದು ದೂರ ನಿಂತು ತಂದೆಗೆ ಫೋನ್ ಮಾಡಿದಳು. ಉದ್ವೇಗದಿಂದಲೇ ಎಲ್ಲವನ್ನೂ ಹೇಳಿದಳು. ಆ ಕಡೆ ಲಿಂಗರಾಜಪ್ಪನವರಿಗೂ ಒಂದು ಕ್ಷಣ ಅಚ್ಚರಿ, ಆನಂದ ಆಯ್ತು. “ಅಲ್ಲೇ ಇದ್ದಾನ ನಾನು ಮಾತಾಡಲ” ಎಂದರು. “ಬೇಡ ನಾನೇ ಆಮೇಲೆ ಮಾಡ್ತೀನಿ. ನೀವೀಗ ಹೊರಟು ಅವರ ಮನೆಯಲ್ಲಿ ಇರಿ. ಸೂಕ್ಷ್ಮವಾಗಿ ಸುಶೀಲಮ್ಮನವರಿಗೆ ವಿಷಯ ತಿಳಿಸಿ. ನಾನು ಅವನ ಕೈಯಲ್ಲಿ ಫೋನ್ ಮಾಡಿಸ್ತೀನಿ” ಎಂದಳು.

ಕಾರ್ಯಕ್ರಮ ಮುಗಿದು ಪ್ರಶಸ್ತಿ ವಿತರಣೆಯಾಗಿ ಎಲ್ಲರೂ ಹೊರಟರು. ಸಿಂಚನಾ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡಿ, ತಮ್ಮ ಕಾಲೇಜಿನ ಮಕ್ಕಳನ್ನು ಕಳುಹಿಸಿಕೊಟ್ಟಳು, ತನಗೆ ಅನಿವಾರ್ಯ ಕೆಲಸವಿರುವುದೆಂದು ಹೇಳಿ. ಇನ್ನೂ ಅರ್ಧ ಗಂಟೆ ಪ್ರಿನ್ಸಿಪಾಲ್ ಜೊತೆ ಸ್ಟಾಫ್ ಮೀಟಿಂಗ್ ನಂತರ ಸಹದೇವ ಹೊರಬಂದಾಗ ಸಿಂಚನಾ ಕಾಯುತ್ತಾ ಇದ್ದಳು. ಅವನನ್ನು ಕಂಡವಳೇ “ನಾಳೆ ರಜೆ ಹಾಕಿ, ನಾನೂ ಹಾಕ್ತೀನಿ ಊರಿಗೆ ಹೋಗೋಣ” ಎಂದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಸಹದೇವ “ಯಾವ ಮುಖ ಇಟ್ಟುಕೊಂಡು ಹೋಗಲಿ” ಎಂದ. “ಇದರಲ್ಲಿ ನಿಮ್ಮ ತಪ್ಪೇನು ಇಲ್ಲ. ಪರಿಸ್ಥಿತಿ, ಸಂದರ್ಭ ಹಾಗಿತ್ತು. ಇನ್ನೊಂದು ಸಂತೋಷದ ವಿಷಯ ಗೊತ್ತಾ? ನಿಮ್ಮ ತಂಗಿ ಸಾಹಿತ್ಯಗಳಿಗೆ ಮದುವೆ ಸೆಟಲ್ ಆಗಿದೆ” ಎಂದಳು. ಸಹದೇವ ಸುಮ್ಮನೆ ಕುಳಿತಿದ್ದ. ಸಿಂಚನಾಳೆ “ನಾನು ನಮ್ಮಪ್ಪನಿಗೆ ಈಗಷ್ಟೇ ಹೇಳಿದೆ. ಈಗ ಅವರು ನಿಮ್ಮ ಮನೆಯಲ್ಲಿ ಇರುತ್ತಾರೆ. ನಿಮ್ಮ ಅಮ್ಮನಿಗೆ ಸೂಕ್ಷ್ಮವಾಗಿ ವಿಷಯ ತಿಳಿಸಿರುತ್ತಾರೆ ಫೋನ್ ಮಾಡ್ತೀರಾ?!” ಎಂದಳು. ಸಹದೇವನೊಳಗೆ ಭಾವನೆಗಳ ತಾಕಲಾಟ ನಡೆಯುತ್ತಿತ್ತು. ಸಿಂಚನ ಧೈರ್ಯ ಮಾಡಿ ಕೈಯನ್ನು ಕೈಯಲ್ಲಿ ತೆಗೆದುಕೊಂಡು, ಸಾಂತ್ವನದ ಭರವಸೆಯ ನಗೆ ಚೆಲ್ಲಿದಳು. ಕೂಡಲೇ ತನ್ನ ತಂದೆಗೆ ಫೋನ್ ಮಾಡಿದಳು. ಮೊದಲು ತಾನು ಮಾತನಾಡಿ ಸಹದೇವನಿಗೆ ಕೊಟ್ಟಳು. ಲಿಂಗರಾಜಪ್ಪ ಮಾತನಾಡಿ “ಹೇಗಿದ್ದೀಯಪ್ಪ ಸಹದೇವ” ಎಂದಾಗ ಸಹದೇವನಿಗೆ ಇದುವರೆಗೂ ತಡೆದುಕೊಂಡಿದ್ದ ದುಃಖದ ಅಣೆಕಟ್ಟು ಒಡೆದು ಪ್ರವಾಹ ಉಕ್ಕಿ ಹರಿಯಿತು. ಒಂದೆರಡು ಮಾತನಾಡಿದ ನಂತರ ಲಿಂಗರಾಜಪ್ಪ “ನಿಮ್ಮಮ್ಮನ ಕೈಯಲ್ಲಿ ಕೊಡ್ತೀನಿ” ಎಂದು ಕೊಟ್ಟಾಗ ಆ ಕಡೆಯಿಂದ ಅಮ್ಮನ ದನಿ ಕೇಳಿ ಸಹದೇವ ಬಿಕ್ಕಿಬಿಕ್ಕಿ ಅಳುತ್ತಾ ಅಮ್ಮಾ… ಅಮ್ಮಾ… ಎಂದು ಹಲುಬುತ್ತಲೇ ಇದ್ದ. ಸಿಂಚನಾ ಅವನ ಮುಖವನ್ನೇ ನೋಡುತ್ತಾ, ಅವನ ಬೆನ್ನು ಸವರುತ್ತಾ, ತನ್ನ ತುಟಿಯಲೊಂದು ಸಾರ್ಥಕ ಭಾವದ ನಗು, ಕಣ್ಣುಗಳಲ್ಲಿ ಆನಂದ ಭಾಷ್ಪ ತುಂಬಿಕೊಂಡು ನಿಂತಿದ್ದಳು.

ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
