ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಈ ದಿನದ ಕವಿತೆ ಬರೆದವರು ನಾಗರಾಜ ವಸ್ತಾರೆ.

ಕ್ರಮಣ

ಮಾಡಲೇನೂ ಇಲ್ಲದಿರುವಾಗ ಇಲ್ಲಾ
ಏನೂ ಮಾಡದಿರುವಾಗ, ಸಾಮಾನ್ಯ,
ಹಾವಾಗಬೇಕೆಂದೆನಿಸುತ್ತದೆ. ಕಾಳಿಂಗದ ಹಾಗೆ.
ಕಪ್ಪಗೆ. ಮತ್ತು ಹಳದಿಯಾಗಿ ಕೆಳಗೆ, ಒಳಗೆ.

ಅನಿಸಿದ್ದೇ ಹರಿಯುತ್ತೇನೆ ಆಚೀಚೆ
ನುಲಿಯುತ್ತ- ಒಮ್ಮೆಯೂ ನೇರವಿರದೆ
ಯೋಚನೆ ಹರಿದಲ್ಲೆಲ್ಲ ಹಾಗೇ.
ಬಳುಕಿ ಸರಿಯುತ್ತೇನೆ. ಸರಿದು ಕ್ರಮಿಸುತ್ತೇನೆ
ನನ್ನ ಮೈಯನ್ನು ನಾನೇ, ಒಮ್ಮೊಮ್ಮೆ ಪೊರೆ ಕಳಚಿ
ಕಾಯದ ಜಂಜಡ ನೀಗುವಂತೆ.

ನುಂಗುತ್ತೇನೆ ಉದ್ದುದ್ದ
ನನ್ನಂಥದೇ ಮತ್ತೊಂದು. ಹಾವೊಳಗೆ
ಹಾವಾಗಿ ಅಂತ- ನೀವು ಹೇಳುವ ಹಾಗೆ.

ಅಡಗುತ್ತೇನೆ ಹಾಗೇ
ಪೊದೆಯನ್ನೋ ಮೆಳೆಯನ್ನೋ ಹೊಕ್ಕು
ಒಂದು ನಿಶ್ಚೇಷ್ಟ ಸುಪ್ತಿಯೊಳಗೆ. ನನ್ನೊಳಗೆ
ನಾನಾಗಿ ನಾನೇ…

***

ಸುರುಟಿ ವಂಕಿಯಿಟ್ಟು ಸುಮ್ಮಗಿದ್ದುದನ್ನು ತಾಳದೆ
ತಿವಿದೆಬ್ಬಿಸಿದ್ದು ನೀವೆಯೋ… ನಿಮ್ಮೆತ್ತರಕ್ಕು
ಹೆಡೆ ಬಿಚ್ಚಿ ಭುಸ್ಸೆಂದಿದ್ದೇ ನನ್ನತನ ಅಂತ
ಕಿಂಚಿತ್ತು ತಿಳಿಯಬಾರದೆ ನಿಮಗೆ.
ನೀವು ನಿಮ್ಮತನವನ್ನು ಮೆರೆದಿರಿ
ಈ ಹಾವುತನಕ್ಕೆ ಎಡೆಗೊಡದೆ.
ಬಡಿದಿರಿ. ಜಜ್ಜಿದಿರಿ. ಕೊಳ್ಳಿಯೂ ಇಟ್ಟಿರಿ.
ಎಲ್ಲ ನಿಮ್ಮ ನೇರ. ಧರ್ಮಾನುಸಾರ.

ಹಾಗಂತ ಬೇಸರವೇನಿಲ್ಲ ಬಿಡಿ ನನಗೆ.
ಮಾಡಲೇನೂ ಇರದೆ, ಇಲ್ಲಾ ಏನೂ ಮಾಡದೆ
ಹಾವಾದವನು ನಾನು. ಕೊನೇ ಪಕ್ಷ
ನಿಮ್ಮ ಜಾತಕದೋಷವೇ ನೆಪವಾಗಿ
ನನ್ನ ಸಂಸ್ಕಾರವಾಯಿತಲ್ಲ ಬಿಡಿ…
ಇಷ್ಟು ಸಾಕು.