ಹತ್ತು ವರ್ಷಗಳಿಂದ ನನ್ನ ಅಮ್ಮನಿಗೆ ಜತೆಯಾಗಿರುವ, ಒಂದು ರೀತಿಯಲ್ಲಿ ಅವಳ ಬಾಡಿಗಾರ್ಡಾಗಿರುವ ಇವಳ ಬಗ್ಗೆ ನಾನು ಈ ಹಿಂದೆಲ್ಲೋ ಬರೆದಿದ್ದು ನೆನಪು. ಇವಳ ಸಂಕೀರ್ತನೆಯಾಗದೆ ನಮ್ಮ ಮನೆಯಲ್ಲಿ ಹೊತ್ತು ಹುಟ್ಟುವುದಿಲ್ಲ. ಮುಳುಗುವುದಿಲ್ಲ. ನಮ್ಮ ಮನೆಗೆ ಮೊದಲ ಸಲ ಬಂದವರು- ನಾವು ಇವಳ ಹೆಸರು ಕೂಗುವುದು ಕೇಳಿ ಏನೇನೋ ಊಹಿಸಿಕೊಂಡು, ಇವಳ ದರ್ಶನವಾಗಿದ್ದೇ ತಡ ಪೇಚಾಗುತ್ತಾರೆ. ಹೆಸರಿಗೂ, ಅದರ ಕಲ್ಪನೆಗೂ ಮತ್ತು ತಾನಿರುವ ವಾಸ್ತವಕ್ಕೂ ತಾಳೆಯಾಗದ ನಮೂನೆಯೆಂದರೆ ಇದು. ಹೆಸರು ರೋಜಾವದಿ. ತನ್ನನ್ನು ಕರೆದುಕೊಳ್ಳುವುದು, ಹಾಗೇ ಕರೆಸಿಕೊಳ್ಳುವುದು ರೋಸ್ ಎಂದು! ಕಟ್ಟಾ ದ್ರಾವಿಡ ಚಹರೆ. ಸೈಂಧವ ಮೈಕಟ್ಟು. ಎತ್ತರವನ್ನು ಇನ್ನಿಲ್ಲದೆ ಸೆಣಸುವ ಸುತ್ತಳತೆ. ಭಾರೀ ಗಾತ್ರದ ಹೆಣ್ಣು.
ತಮಿಳುನಾಡಿನ ವೃದ್ಧಾಚಲಂ ದಾರಿಯಲ್ಲಿ ಸಿಗುವ ಉಳುಂದರು ಪೇಟೆ ತನ್ನ ಊರೆಂದು ಹೇಳಿಕೊಳ್ಳುವ ಈ ರೋಸ್ ಅಮ್ಮನಿಗೆ ಹೇಗೆ ಸಿಕ್ಕಿದಳೋ ನೆನಪಿಲ್ಲ. ಒಟ್ಟಿನಲ್ಲಿ ಹತ್ತು ಕಾಲದಿಂದ ಜತೆಗಿದ್ದಾಳೆ. ಇವತ್ತಿಗೂ ಕನ್ನಡ ಕಲಿತಿಲ್ಲ. ಬದಲಿಗೆ ಅಮ್ಮನಿಗೆ ತಮಿಳು ಕಲಿಸಿದ್ದಾಳೆ. ನನಗೆ ಕನ್ನಡವಲ್ಲದೆ, ಓದಿನಿಂದ ನಿರರ್ಗಳ ಇಂಗ್ಲಿಷು, ವೃತ್ತಿಯ ಸಲುವಿನಿಂದಾಗಿ ಗಳಗಳ ಹಿಂದಿ- ಇವಿಷ್ಟು ಬಿಟ್ಟರೆ ಇನ್ನಾವ ಭಾಷೆಯೂ ಅಷ್ಟಕ್ಕಷ್ಟೆ. ಈ ಊರಿನಲ್ಲಿ ಮತ್ತು ವೃತ್ತಿಯಲ್ಲಿ ಕನ್ನಡ ಗೊತ್ತಿರುವುವರು ಸಿಗುವುದೇ ಕಡಿಮೆ. ನಾನು ಅಪರ್ಣೆ ಆಗಿಬರುವವರೆಗೆ ಕನ್ನಡ ಆಡಿದ್ದೂ ಕಡಿಮೆಯೆ. ಅವಳ ದೆಸೆಯಿಂದಾಗಿ ಕೊಂಚ ನನ್ನ ತಾಯಿನುಡಿ ಸುಧಾರಿಸಿದೆಯೆಂತಲೇ ಹೇಳಬೇಕು. ಇವತ್ತಿಗೂ ಅಪರ್ಣೆ ನನ್ನನ್ನು ತಮಾಷೆಗೆ ‘ಥೇಮ್ಸ್ ತಳಿ’ ಅಂತ ಅಡ್ಡಡ್ಡ ಉದ್ದುದ್ದ ಕರೆಯುತ್ತಾಳೆ. ಇದಕ್ಕಿಂತ ಅಚ್ಚರಿಯ ವಿಷಯವೆಂದರೆ ಈ ರೋಸ್ ಆಗಾಗ್ಗೆ- ಬೆಂಗಳೂರಿನಲ್ಲಿದ್ದೂ ನಾನು ತಮಿಳೇಕೆ ಕಲಿತಿಲ್ಲ ಅಂತ ಬೆರಗು ಪಡುವುದು! ನೋಡಿ- ಹೇಗಿದೆ ವರಸೆ?! ಇರಲಿ. ಐದಾರು ವರ್ಷಗಳ ಹಿಂದೆ ನಾನು ಬರೆಯಲು ಸುರು ಹಚ್ಚಿದಂದಿನಿಂದ ರೋಸ್ ನನಗೆ ಅನುದಿನದ ಆಸಕ್ತಿಯಾಗಿಬಿಟ್ಟಿದ್ದಾಳೆ. ಈ ಊರಿನಲ್ಲಿ ಇಳಿದು ಬಿಳಲೂರಿಕೊಂಡ ಸರೀ ಇಪ್ಪತ್ತು ವರ್ಷದ ಬಳಿಕ ಒಂದು ಪ್ರಶಸ್ತ ಲಗ್ನದಲ್ಲಿ ಒಳಗಿನ ತುರ್ತೊಂದು ತಂತಾನೆ ಉಮ್ಮಳಿಸಿ ನನಗೆ ಬರೆಯುವಂತೆ ಪ್ರೇರೆಪಿಸಿತಲ್ಲ- ಆವಾಗಲಿಂದಲಿರಬೇಕು, ನನ್ನನ್ನು ಕನ್ನಡದಲ್ಲಿ ಯೋಚಿಸಲಿಕ್ಕೆ, ಪದರಚನೆಯ ಬಗ್ಗೆ ಉತ್ಸುಕವಾಗಲಿಕ್ಕೆ, ಅವುಗಳ ಅರ್ಥದ ಬಗ್ಗೆ ಆಸ್ಥೆ ವಹಿಸಲಿಕ್ಕೆ- ಇನ್ನೂ ಮುಂದಕ್ಕೆ ಅವುಗಳ ನಿಷ್ಪತ್ತಿಯ ಬಗ್ಗೆಯೂ ತಲೆ ಕೆಡಿಸಿಕೊಳ್ಳುವಷ್ಟರ ಮಟ್ಟಿಗೆ ತನ್ನ ದಿನದ ಮಾತುಗಳಿಂದ ನನ್ನನ್ನು ಭಾಷೆಯಲ್ಲಿ ತೊಡಗಿಸಿದ್ದಾಳೆ. ಬಹುಶಃ ನಾನು ಮೊದಲ ಸಲ ಬರಹ ಅಂತ ಶುರು ಮಾಡಿದ್ದೇ ಇವಳನ್ನು ಕುರಿತಾಗಿರಬೇಕು.
ನನ್ನ ಮನೆ ಮತ್ತು ಅದಕ್ಕಂಟಿಕೊಂಡಿರುವ ಅಫೀಸಿನಲ್ಲಿ ಇವಳದಲ್ಲದೆ ಫಟ್ಟಿ, ಅಪ್ಪಲುಕೊಂಡ, ಗಿಡದಾ, ಬೆಟ್ಟ್ಯಾ ಮೊದಲಾದ ಪದಗಳು ವಾಡಿಕೆಯಲ್ಲಿವೆ. ಇವೆಲ್ಲ ನಪುಂಸಕ ಲಿಂಗವಲ್ಲದ ನಾಮಪದಗಳು ಎಂಬುದು ಇಲ್ಲಿ ಮುಖ್ಯ. ಇವರೆಲ್ಲ ನಮ್ಮ ಜತೆ ಮನೆಯಲ್ಲಿ, ಆಫೀಸಿನಲ್ಲಿ ಇದ್ದುಕೊಂಡು ಒಮ್ಮೊಮ್ಮೆ ನನ್ನ ಬರಹದಲ್ಲಿ ನುಸುಳಿ ಕತೆಯಾದವರು. ಈ ಮಹಾಪಟ್ಟಣದ ನಾಜೂಕಿನ ರೀತಿರಿವಾಜುಗಳಲ್ಲಿ ಅಜ್ಞವೆನ್ನುವ ನಡವಳಿಕೆಯಿಂದ ಮೋಜಿನ ಕಥಾನಕಗಳಿಗೆ ಪಾತ್ರವಾದವರು. ಕೆಲವಾರು ವರ್ಷಗಳಿಂದ ಇಲ್ಲಿದ್ದರೂ ತಂತಮ್ಮ ದಟ್ಟ ಗ್ರಾಮ್ಯದಲ್ಲೇ ವ್ಯವಹರಿಸುವುದರಿಂದ ಕೆಲವೊಮ್ಮೆ ಆಭಾಸಗಳನ್ನು ಸೃಷ್ಟಿಸಿ, ನಮಗೂ ತಂದೊಡ್ಡಿ ರೋಚಕ ನಗೆಪ್ರಸಂಗಗಳಾದವರು. ಉದಾಹರಣೆಯೆಂಬಂತೆ ಮೊನ್ನೆ ಮೇ ಬೇಸಗೆಯ ಒಂದು ಮಧ್ಯಾಹ್ನದ ಸಂಭಾಷಣೆ ನೋಡಿ.
‘ಆಲೂಗಡ ಇಲ್ಲೆ ಫಟ್ಟೀ…! ನೀ ಎಂಗ ಇಟ್ಟಿರುಕೇ?’
‘ಯಮ್ಮೋ! ಕಣ್ಣ್ ಕಾಣಾಕಿಲ್ಲೇನು? ಅಲ್ಲೇ ಇಟ್ಟೀನಿ ನೋಡು…’
‘ವಿರೀಜುಲೆ ಇಲ್ಲೆ ಫಟ್ಟೀ.. ನಾ ನೋಡಿಟ್ಟೆ ಪೇಸರೇ…’
‘ವಿರೀಜೂ..! ಅಂದ್ರೇನಪಾ ಅದೂ?’
‘ಇದುದಾಂ ಫಟ್ಟಿ, ದರಗಾರಿ, ಪಾಲು ವೆಚ್ಚಿರೋದಿಲ್ಲೆಯಾ- ವೈಡ್ ಗಲರ್ ಡಬ್ಬಾ…!!’
‘ಯಮ್ಮೋ! ನಿನ್ನ್ ತಲೇ ಕುಟ್ಟಾ… ಅದು ವಿರೀಜ್ ಅಲ್ಲಮ್ಮೋ! ಅದ್ಕೇ ಪಿರೀಜ್ ಅಂತಾರೆ. ಎಲ್ಲಿ ಯೋಳು… ಪಿರೀಜ್… ಪಿ..ರೀ..ಜ್…!’
‘ಬಿ..ರೀ..ಜ್. ಬಿರೀಜ್!!’
‘ಅಯ್ಯೋ ನಿನ್ನ್ ಜಲ್ಮವೇ? ನಾಲ್ಗೇನೇ ಒಳ್ಳಲ್ಲಾಂತಲ್ಲಪೋ…!! ಪಿರೀಜ್ ಅನ್ನಾಕೆ ವಿರೀಜ್ ಅಂತೀತಲ್ಲಪೋ…’
‘ವಿರೀಜ್… ವಿರೀಜ್…’
‘ಯಮ್ಮೋ ನಿಂಗೇಳೊದ್ರಾಗೆ ನನ್ನ ಮಾತೇ ತಪ್ಪೋಯ್ತಿತೇ…!!’
ಕನಕಪುರದ ಬಳಿಯ ಕಗ್ಗಲೀಪುರ ಮೂಲದ ಫಟ್ಟಿಗೆ ತನ್ನ ಮಾತಿನ ರೀತಿನೀತಿಗಳ ಬಗ್ಗೆ ಇನ್ನಿಲ್ಲದ ನಂಬಿಕೆ ಮತ್ತು ನಿಷ್ಠೆ. ಹಾಗಾಗಿಯೇ ಅವನು ಈ ರೋಜಾವದಿಯ ತಿಗಳ ಸೊಲ್ಲುಗಳ ವೈಖರಿಯನ್ನು ಅಲ್ಲಗಳೆಯುವುದು ಹಾಗೂ ಟೀಕಿಸುವುದು. ತಾನು ಹೇಳುವ ಪಿರೀಜು ಸಹ ನಮ್ಮ ಫ್ರಿಡ್ಜಿನ ಅಪಭ್ರಂಶವೆಂದು ಇವನು ಒಪ್ಪುವುದೇ ಇಲ್ಲ. ಹಾಗೆ ಸಹಮತವಿದ್ದಿದ್ದಲ್ಲಿ ಅವಳ ವಿರೀಜು ಇವನ ಪಿರೀಜಿನದೇ ಜ್ಞಾತಿಯೆಂದು ಒಪ್ಪಿಸಬಹುದಿತ್ತು. ಎಷ್ಟೇ ಒತ್ತುಗಳಿದ್ದರೂ ಶಬ್ದವನ್ನು ಒಡೆದು, ಉಚ್ಚಾರಣೆಗೆ ಅಣಿಗೊಳಿಸಿ ಶಬ್ದದ ಮೂಲ ಧ್ವನಿಗೆ ಸಾಕಷ್ಟು ಹತ್ತಿರವಿರುವ ಉಲುಹನ್ನಷ್ಟೇ ಇಬ್ಬರೂ ಹೇಳುವುದು.
ಮೂಲಭೂತವಾಗಿ ಇಬ್ಬರ ಶಬ್ದವಿಜ್ಞಾನಕ್ಕೂ ಇರುವ ತಾತ್ವಿಕ ತಳಹದಿ ಒಂದೇ. ರೋಸು ಮೂಲ ಶಬ್ದದಲ್ಲಿ ಇರಬಹುದಾದ ವರ್ಗೀಯ ವ್ಯಂಜನದ ಸ್ಥಳದಲ್ಲಿ ಅದೇ ವರ್ಗದ ಇನ್ನಾವುದೇ ವ್ಯಂಜನವನ್ನು ಮರುಹೂಡಿ ಹೇಳಿಬಿಡುತ್ತಾಳಷ್ಟೆ. ಅಥವಾ ಹೀಗೆ ಮರುಹೂಡಿದ ಅಕ್ಷರ ತನ್ನ ಉಚ್ಚಾರಣೆಯ ಧ್ವನಿಯಲ್ಲಿ ಅವಳು ಉಚ್ಛಾಟಿಸಿದುದಕ್ಕೆ ಹತ್ತಿರವಿದ್ದರೆ ಸಾಕು. ಇದು ನಿಯಮ. ಅವಳಿಗೆ ಹೀಗೆ ನಾನು ಕಂಡಿರುವ ಸತ್ಯವನ್ನು ತಿಳಿಹೇಳಿದರೆ- ‘ನಂಬುಳಿಕೆ ಕೊತ್ತು’ ಅಂತ ತಲೆಯಾಡಿಸುತ್ತಾಳೆ. ಕೂಡಲೆ ಫಟ್ಟಿ, ‘ನಮ್ ಕನಡಾನ ಯೆಂಗ್ ಬೇಕಾದರೊ ಯೋಳಬೋದು ಬುಡಣ್ಣಾ…’ ಅಂತ ಟೀಕೆ ಪಲುಕುತ್ತಾನೆ. ಹೀಗಾಗಿಯೇ ಇವರ ಅಪಭ್ರಂಶಗಳು ನಮ್ಮ ಮನೆಯಲ್ಲಿ ಸಲೀಸಾಗಿ ಎಲ್ಲರಿಂದಲೂ ಅವೇ ಸರಿಯೆಂಬಂತೆ ಬಳಕೆಯಾಗುತ್ತವೆ. ಇದನ್ನು ಗಮನಿಸಿ ನನಗೆ ಈ ಕುರಿತು ವ್ಯಾಕರಣವೊಂದನ್ನು ಬರೆಯಬೇಕು ಅಂತ ಆಗಾಗ್ಗೆ ಅನಿಸಿದೆ. ಪದವೊಂದರಲ್ಲಿ ಕೆಲವು ಸ್ವರಗಳು ಹ್ರಸ್ವಗೊಂಡು, ಕೆಲವು ದೀರ್ಘಗೊಂಡು, ಒಂದು ಲೋಪಗೊಂಡು, ಇನ್ನೊಂದು ಆದೇಶಗೊಳ್ಳುವ ರೀತಿಯಷ್ಟೇ- ಇದನ್ನು ನಾನಿರಲಿ, ಮಾತನ್ನು ಇಸ್ತ್ರಿ ಮಾಡಿ ಹೇಳುವ ಅಪರ್ಣೆಯೂ ತಾತ್ವಿಕವಾಗಿ ಒಪ್ಪಿಕೊಂಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಕೆಲವೊಮ್ಮೆ ಶಬ್ದವೊಂದರ ಸಾರ್ವತ್ರಿಕ ಅರ್ಥ, ಉಚ್ಚಾರಗಳನ್ನೇ ಕಡೆಗಣಿಸಿ ಅದನ್ನು ರೋಸು, ಫಟ್ಟಿಯರ ಬೌದ್ಧಿಕ ಅಳತೆಯಲ್ಲಿ ನೋಡುವುದು ಈಚೆಗೆ ನಮಗೆ ಸಾಮಾನ್ಯವಾಗಿಬಿಟ್ಟಿದೆ.
‘ಇಸ್ತ್ರೀಗೆ ಹೋಗಿ ಬಾ ಅಂತ ಬಟ್ಟೆ ಕೊಟ್ಟರೆ ಇಷ್ಟು ಹೊತ್ತು ಹೋಗೋದಾ ರೋಸ್? ನಿಂಗಂತೂ ತಲೇನೇ ಇಲ್ಲಪ್ಪ… ಅದಕ್ಕೆ ಆಳು ಮಾಡೋದು ಹಾಳು ಅನ್ನೋದು!’ ಅಮ್ಮ ನಿನ್ನೆ ಕೂಗಾಡುತ್ತಿದ್ದಳು. ‘ಎಲ್ಲಿ ಹಾಳಾಗಿ ಹೋಗಿದ್ಲೋ ಫಟ್ಟಿ ಇವಳು? ನಿನಗೆ ಹುಡುಕಿಕೊಂಡು ಬಾ ಅಂದರೆ ನೀನೂ ಅರ್ಧ ಗಂಟೆ ಮಾಡೋದಾ?’
‘ತುಣೀ ಇಸ್ದ್ರೀಗೆ ಕೊಟ್ಟಿಟು ಟೀಡಿ ಕಿಟ್ಟೆ ಹೋಗಿರುಕೇಮ್ಮಾ! ನಂಬುಳ ಪುಳ್ಳೆ ಫೋನೂ…’
‘ಟೀಡೀ…?! ನೀನೋ… ನಿನ್ನ ಭಾಷೆಯೋ?!’
‘ಅಮ್ಮೋ ಅಲ್ಲಿ ಬಿರೀಜ್ ತಾವ ಎಸ್ಟೀಡೀ ಬೂತಿಲ್ಲವಮ್ಮಾ… ಅಲ್ಲಿ ವಯ್ಯಾರ ಮಾಡಿಕೊಂಡು ನಿಂತಿದ್ಲೂ. ಕೂಗಿ ಯೊಳ್ಕಂಡು ಬಂದೇಂತೀನೀ…’
‘ಯಾವ ಬ್ರಿಡ್ಜೋ ಅದು?’
‘ಬಿರೀಜಮ್ಮಾ… ಈ ರೋಡ್ ಕೊನೇಲಿಲ್ಲವ್ರಾ?’ ಫಟ್ಟಿ ರಸ್ತೆಯ ಕೊನೆಯಲ್ಲಿರುವ ದೊಡ್ಡ ಚರಂಡಿಯ ಮೇಲಿನ ಕಲ್ವರ್ಟನ್ನು ಕುರಿತು ಹೇಳುತ್ತಿದ್ದ. ಫಟ್ಟಿಗೆ ಕಲ್ವರ್ಟ್ ಸೇತುವೆಯಾದರೆ ರೋಸ್ ಅದನ್ನು ಅರ್ಥೈಸಿದ್ದೇ ಬೇರೆ. ‘ಟೀಡಿಲೆಮ್ಮಾ.. ಫೋನು ಬಿರೀಜಲೆ ಎಪ್ಪುಡಿಮಾ ಇರುಕುದು?!’ ಅಂದರೆ ಎಸ್ಟಿಡೀ ಬೂತಿನ ಫೋನು ರೆಫ್ರಿಜರೇಟರಿನಲ್ಲಿ ಇರಲು ಹೇಗೆ ಸಾಧ್ಯ? ಇಬ್ಬರೂ ತಂತಮ್ಮ ನೇರಕ್ಕೆ ಸರಿಯಾಗಿದ್ದುದನ್ನೇ ಹೇಳುತ್ತಿದ್ದರು. ಅರ್ಥದ ಜಾಡು ಬೇರೆ ಬೇರೆ ಇತ್ತು ಅಷ್ಟೆ. ‘ಯೋಯ್! ಥೂ ನಿನ್ನಾ!! ಒಂದು ಯೋಳುದ್ರೆ ಯಿನ್ನೊಂದು ತಿಳ್ಕೋತಿತೇ… ಕರಕೊಂಡೋಗಿ ಕಾಟ್ಪಾಡೀಗೆ ಆಕಿ ಬಂದುಬುಡಬೇಕೂ…’ ಫಟ್ಟಿ ಮತ್ತದೇ ರಗಳೆ ಸುರು ಹಚ್ಚಿದ.
ರೋಸ್ ನಮ್ಮಲ್ಲಿರುವ ಅವಳ ಓರಗೆಯವರಿಗಿಂತ ವಯಸ್ಸಿನಲ್ಲಿ ಹಿರಿಯಳು. ಕೆಲಸದಲ್ಲಿ ಭಾರೀ ನುರಿತವಳು. ಹಾಗಾಗಿಯೇ ಅವಳು ಗಿಡದಾ, ಬೆಟ್ಟ್ಯಾ, ಅಪ್ಪಲುಕೊಂಡ ಇವರೆಲ್ಲರಿಗೂ ಮುಂದಾಳು. ಎಲ್ಲ ಕೆಲಸದಲ್ಲೂ ನಾವು ತಿದ್ದಿದ ಅಚ್ಚುಕಟ್ಟು ರೂಢಿಸಿಕೊಂಡಿರುವ ಇವಳಿಗೂ, ನಮಗೂ ಇರುವ ಒಂದೇ ಒಂದು ತೊಡಕೆಂದರೆ ಭಾಷೆ, ವಿನಿಮಯ ಮತ್ತು ಸಂವಹನೆ. ಅವಳು ಮನೆಗೆ ಬಂದ ಹೊಸತರಲ್ಲಿ ಅವಳ ಭಟ್ಟಿಯಿಳಿಸಿದ ಗಾಢ ತಮಿಳು ಸೊಗಡು ನಮ್ಮ ಇಲ್ಲಿನ ಕನ್ನಡ ಕಲಬೆರಕೆಯ ಜತೆ ತಾಳೆಯಾಗದೆ ವಿಪರೀತ ಫಜೀತಿಯಾಗುತ್ತಿತ್ತು. ಏನನ್ನೇ ತಿಳಿಹೇಳಲು ಅಗತ್ಯಕ್ಕಿಂತ ಹೆಚ್ಚು ಮಾತು, ಅಭಿನಯಗಳ ವಿನಿಯೋಗವಾಗುತ್ತಿತ್ತು. ಈ ಪಿರಿಪಿರಿಯನ್ನು ನಿವಾರಿಸಬೇಕೆಂದು ಅಮ್ಮ ಆಗ ದಿನಕ್ಕೆ ಒಂದೂವರೆ ತಾಸು ಕನ್ನಡದ ತಾಲೀಮು ಕೊಟ್ಟಿದ್ದಳು. ದಿನಾ ರಾತ್ರಿ ಎಂಟರಿಂದ ಒಂಬತ್ತೂವರೆವರೆಗಿನ ಪ್ರೈಮ್ಟೈಮ್ನಲ್ಲಿ ನಡೆದ ವಯಸ್ಕ ಶಿಕ್ಷಣವಂತೂ ಯಶಸ್ವಿಯಾಯಿತು, ಅಮ್ಮ ತನ್ನ ಹರುಕು ತಮಿಳನ್ನು ಸ್ವಚ್ಚಗೊಳಿಸಿಕೊಳ್ಳುವ ಮಟ್ಟಿಗೆ! ಆಗಲೇ ರೋಸು, ನಾನು ತಮಿಳು ಕಲಿತಿರದ ಬಗ್ಗೆ ಖೇದಿಸಿದ್ದಂತೆ. ಅದೇನೇ ಇರಲಿ ಈವರೆಗೆ ನಮ್ಮಿಂದ ರೋಸನ್ನು ಕನ್ನಡದಲ್ಲಿ ಉದ್ಧರಿಸಲು ಸಾಧ್ಯವಾಗಿಲ್ಲ. ಕಕಾರವಿರುವಲ್ಲಿ ಗಕಾರವನ್ನು, ಚಕಾರಕ್ಕೆ ಜಕಾರವನ್ನು, ಟಕಾರಕ್ಕೆ ಡಕಾರವನ್ನೂ ಅವಳು ಮುಲಾಜಿಲ್ಲದೆ ಹೂಡುವುದನ್ನು ನೋಡಿದರೆ ನಮ್ಮ ಸಂಧಿಗಳಲ್ಲಿನ ಆಗಮ-ಆದೇಶಗಳನ್ನೂ, ಎಗ್ಗಿಲ್ಲದ ಜಸ್ವಗಳನ್ನೂ ನಮ್ಮ ಮನೆಯ ದ್ವಿಭಾಷಾ ವೇದಿಕೆಗೆ ಅನುಕೂಲವಾಗುವಂತೆ ವಿಸ್ತರಿಸಬೇಕೆಂದು ಅನಿಸುತ್ತದೆ. ನಮಗಂತೂ ತಮಿಳು ಪ್ರತ್ಯಯಗೊಂಡ ಕನ್ನಡ ವ್ಯತ್ಯಯಗಳು ಒಗ್ಗಿಹೋಗಿ ದೋಷರಹಿತವೆನಿಸಿಬಿಟ್ಟಿವೆ. ಈ ಭಾಷಾವಂತಿಕೆಯ ಗುಣಾವಗುಣಗಳೇನೇ ಇರಲಿ, ನಾನು ಬೆರಗಾಗುವುದು ಇಂಗ್ಲಿಷ್ ಪದಗಳನ್ನು ಈ ರೋಸು, ಫಟ್ಟಿ, ಅಪ್ಪಲುಕೊಂಡ ನಿರಾತಂಕದಿಂದ ಪರಿಣಾಮಕಾರಿಯಾಗಿ ಕೆಲವೊಮ್ಮೆ ದೇಸೀಕರಿಸುವ ಕೌಶಲವನ್ನು. ರೋಸು ಹೇಳುವ ರೇಲ್ಡೇಸನ್ನು ಮತ್ತು ಮೆಜಷ್ಟಿ, ಪಟ್ಟಿಯ ಪೋಲೀಟೇಸನ್ನು ಮತ್ತು ಫ್ಲಯೋರುಗಳು ನನಗೆ ತಪ್ಪು ಅನಿಸಿದ್ದೇ ಇಲ್ಲ. ಇಲ್ಲಿ ಕೆಲವರು ಮೊಬೈಲ್ ಫೋನಿಗೆ ಜಂಗಮಗಂಟೆ ಅಂತ ಶಬ್ದ ಟಂಕಿಸಿರುವುದನ್ನು ನಿವಾಳಿಸುವ ಹಾಗೆ ಅಪ್ಪಲುಕೊಂಡ ಅದಕ್ಕೆ ಕೈಪೋನು ಅನ್ನುತ್ತಾಳೆ. ಇವರುಗಳು ಹುಟ್ಟಿ ಹಾಕುವ ತದ್ಭವಗಳು ನಾವು ಓದಿಕೊಂಡವರು ಇಂಗ್ಲಿಷಿನಿಂದ ಅನುವಾದಿಸುವ ಎಷ್ಟೆಲ್ಲ ಕನ್ನಡ ಶಬ್ದಗಳಿಗಿಂತ ಹೆಚ್ಚು ಅರ್ಥವತ್ತೆಂಬುದೇ ನನ್ನ ಅಭಿಮತ.
ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.