ಕಾಡು ಹಡೆಯಬಹುದಿತ್ತು!
ಮಣ್ಣ ಸೊಗಡು ಹೀರುತ್ತ
ಮಳೆ ಕವಿತೆ ಬರೆವ
ಕವಿಗಳು ಅಥವಾ
ಮಳೆ ನೋಡಿ ಕವಿಯಾದವರೆಲ್ಲ
ಸೇರಿ
ಒಂದೊಂದು ಬೀಜ ಬಿತ್ತಿ
ಕಾವಲು ಕಾದು
ಕಾಡು ಹಡೆಯಬಹುದಿತ್ತು
ಗೂಬೆ ಮಂಗಟ್ಟೆ ಮಣಿಸೋರೆ
ನತ್ತಿಂಗ ಕುಟುರು ಹಕ್ಕಿಗಳು
ಹುಲಿ ನರಿ ಹಂದಿ ಜಿಂಕೆಗಳು
ಹಾವು ಹರಣೆ ಚೇಳುಗಳು
ಉಸಿರಾಡಿ ತಿಂದುಂಡು
ನೆಲವ ಪೊರೆಯುತ್ತಿದ್ದವು
ಸ್ವಸ್ಥ ಜಗವೊಂದು
ಪೊರೆ ಕಳಚುತ್ತಿತ್ತು
ಚಳಿ ಮಳೆ ಬೇಸಗೆಗಳು
ಮರ ಮರಳಿ ಬಂದು
ಹೂವಾಗಿ ಹಣ್ಣಾಗಿ
ಎದೆ ತೊಯ್ಯಿಸುತ್ತಿದ್ದವು
ನಿರಾಳ ನಿಶ್ಶಬ್ದ ನಿಗೂಢ
ಕತ್ತಲು
ಕತ್ತಲೊಳಗಿನ ಸದ್ದಲ್ಲದ
ಸದ್ದುಗಳು
ಜೀವಜಂತುಗಳ ಸಲಹಿ
ಜೋಗುಳ ಸಂತೈಸುತ್ತಿತ್ತು…..
….
ಕವಿತೆಗಳು
ಕವಿಗಳನ್ನು
ಕೊಂಡಾಡುತ್ತಿದ್ದವು!
ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು