ಮೊಲೆಯೂಡಿಸುತ್ತಾಳೆ!
ಪಾದವೂರಿದಲ್ಲೆಲ್ಲ
ರಕ್ತ ಸೋರಿದೆ
ದೇಹವೇ ಒಂದು
ಗಾಯವಾಗಿದೆ
ದನದಂತೆ ಮಾರಾಟವಾಗಿ
ರಾಜಕಾರಣದ ದಾಳವಾಗಿ
ಮಗನಿಂದಲೇ ತಲೆ ಕಡಿಸಿಕೊಂಡು
ದ್ರೋಹ ವಂಚನೆಯ ಗಾಳಕ್ಕೆ
ಪಾಪಿ ಎರೆಹುಳುವಾಗಿ
ಶತಮಾನಗಳ ಸವೆಸಿದ್ದಾಳೆ
ಯೋನಿಯ ಸೀಳಿ
ರಕ್ತ ಹರಿಸಿದ
ನರ ಪ್ರೇತಗಳು
ಮೊಲೆಗಳ ತರಿದು
ನಾಯಿ ನರಿಗಳಿಗೆ ಉಣಿಸಿವೆ
ಬೆತ್ತಲೆ ಮೆರವಣಿಗೆ ಮಾಡಿ
ಹರಿದು ಮುಕ್ಕಿವೆ
ಕೊಂದು ಸುಟ್ಟಿವೆ
ಅವಳೀಗ ಮೊದಲ ಬಾರಿಗೆ
ತನಗಾಗಿ ಬಿಡುವಾಗಿದ್ದಾಳೆ
ಮೈಯ್ಯ ಕಣಕಣವನ್ನು
ಅಪ್ಪಿ ನೇವರಿಸಿ ಸಂತಯಿಸಿ
ಬದುಕಿಗೆ ಮರಳಿಸಿದ್ದಾಳೆ
ಸೌರಮಂಡಲದಾಚೆಯಿಂದ
ನಗುವ ಕಡ ತಂದು
ಮೆದುಳ ನರನರಗಳಿಗೆ
ಲೇಪಿಸಿದ್ದಾಳೆ
ಚಾರಿತ್ರ್ಯಕ್ಕೆ ನಿರ್ಣಯ ಬರೆವ
ಜಗಕೆ ಬೆನ್ನು ಮಾಡಿ
ಅವಳು
ಮೊಲೆಯೂಡಿಸುತ್ತಾಳೆ
ಯಾರೋ ಬೀದಿಗೆ
ಎಸೆದು ಹೋದ
ಹಸುಮಗುವಿಗೆ!
ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು