ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು
ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ
ಸರ್ವಾಧಿಕಾರಿ!
ಯುದ್ಧ ಸಾರುವ ಸರ್ವಾಧಿಕಾರಿ
ಹೇಗಿರಬಹುದೆಂದು ಯೋಚಿಸುತ್ತೇನೆ
ಅವನಿಗೂ ನಮ್ಮಂತೆ
ಮೆದುಳು ಹೃದಯ ಪಿತ್ಥಕೋಶ
ರಕ್ತನಾಳಗಳು ಅಸ್ತಿಮಜ್ಜೆ
ಬಿಪಿ ಶುಗರ್ ಪಲ್ಸ್
ಲೆಕ್ಕಾಚಾರಗಳೆಲ್ಲ ಇರಬಹುದೆ
ಮತ್ತವೆಲ್ಲ ಸರಿಯಿರಬಹುದೆ?!
ಅವನಿಗೂ ಮನೆ ಮಡದಿ
ಮಕ್ಕಳು ಪ್ರೀತಿಯ ನಾಯಿ
ಗುಲಾಬಿ ತೋಟ- ಪ್ರೇಯಸಿ
ಇಷ್ಟದ ಜಾಗಗಳು ಇರಬಹುದೆ
ಅಥವಾ
ಯಂತ್ರಮಾನವನಂತೆ….?!
ನಿರ್ದಯಿ
ಬಾಂಬು ಅಣ್ವಸ್ತ್ರಗಳನ್ನು
ಟಪಾರನೆ ಎಸೆದು
ಕ್ಷಣವೊಂದರೊಳಗೆ ಸ್ಮಶಾನ
ಸೃಷ್ಟಿಸಿ ಅಟ್ಟಹಾಸಗೈವ
ಅವನ ಮಿದುಳು ಎದೆ
-ಯೊಳಗೆ ರಕ್ತದ ಬದಲು
ಕುದಿವ ಜ್ವಾಲೆ ಹರಿಯುತ್ತಿರಬಹುದೆ
ಕಣ್ಣೀರು ಇಂಗಿ ಹೋಗಿರಬಹುದೆ!
ಮಿದು ಕಂದಮ್ಮಗಳ,
ಮುಗ್ಧ ಜೀವರ, ಮಾನವರ
ಹೆಣದ ರಾಶಿ ಒಟ್ಟುವ ಅವನು
ಸೈತಾನನಾಗಿರಬಹುದೆ?
ಓಹ್! ನಿಸರ್ಗವೇ
ಆ ಸರ್ವಾಧಿಕಾರಿಯ
ನೀನೇ ಪಳಗಿಸು
ಇಲ್ಲಾ
ಯಾವುದಾದರೂ ಪವಾಡವನ್ನಾದರೂ
ಜರುಗಿಸು!