ಚಾರಣ ಪ್ರಾಂಭವಾದ ಸುಮಾರು ಒಂದು ಘಂಟೆಯ ನಂತರ ಎಲ್ಲರನ್ನೂ ಹಿಮದ ಮೇಲೆ ಮಲಗಿ ಸುಧಾರಿಸಲು ಹೇಳಿದ ನಮ್ಮ ಗೈಡ್ ಇನ್ನೊಂದು ಸೂಚನೆಯನ್ನೂ ಕೊಟ್ಟರು. ಕಣ್ಣು ಮುಚ್ಚಿ ಮೌನವನ್ನು ಆನಂದಿಸಬೇಕು. ಅಲ್ಲಿಯವರೆಗೂ ಗಿಜಿ ಗಿಜಿ ಎನ್ನುತ್ತಿದ್ದ ಗುಂಪು ತಕ್ಷಣ ಮೌನವಾಯಿತು. ಮೌನ ಆಚರಿಸಿ ಅಂತರ್ಮುಖಿಯಾಗುವುದೊ ಅಥವಾ ಕಣ್ಣಿನ ಮೇಲಿರುವ ತಾರಾಗಣವನ್ನು ಲೆಕ್ಕ ಹಾಕುವುದೋ ಎನ್ನುವ ಗೊಂದಲ. ಮನಸ್ಸೆನ್ನುವ ಬಿಸಿಲ್ಗುದುರೆ ಎಷ್ಟಾದರೂ ಚಂಚಲ!  ‘ದೂರದ ಹಸಿರು’ ಸರಣಿಯಲ್ಲಿ ಲ್ಯಾಪ್ಲ್ಯಾಂಡ್ ನ ಪ್ರಮುಖ ಆಕರ್ಷಣೆಯಾದ ಅರೋರಾ ಹಾಗೂ ಹಿಮದ ಮೇಲಿನ ಚಾರಣಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

 

ಫಿನ್ಲ್ಯಾಂಡಿನ ಸೌನಾ ಜಗತ್ ಪ್ರಸಿದ್ದಿ. ಪ್ರಪಂಚದ ಅತಿ ಹೆಚ್ಚು ಸೌನಾ ಸ್ಟುಡಿಯೋಗಳು ಫಿನ್ಲ್ಯಾಂಡ್ ನಲ್ಲಿವೆ. ಎಲ್ಲ ಬಚ್ಚಲಮನೆಗಳಿಗೂ ಇದೊಂದು ಹೆಚ್ಚುವರಿ ಕೋಣೆ. ಅಲ್ಲಿ ಕೂರುವುದಕ್ಕೆ ವ್ಯವಸ್ಥೆ ಮಾಡಿರುತ್ತಾರೆ. ಮೂಲೆಯಲ್ಲೊಂದು ಸಣ್ಣ ಗಾತ್ರದ ಕಲ್ಲುಗಳನ್ನು ಜೋಡಿಸಿ ಹೀಟರ್ ಮಷೀನ್ ಮೇಲೆ ಇಟ್ಟಿರುತ್ತಾರೆ. ಚೆನ್ನಾಗಿ ಕಾದ ಕಲ್ಲುಗಳ ಮೇಲೆ ನೀರು ಹಾಕಿದರೆ, ನೀರು ಹಬೆಯಾಗಿ ಮಾರ್ಪಟ್ಟು ಇಡೀ ಕೋಣೆಯನ್ನು ಆವರಿಸಿಕೊಳ್ಳುತ್ತದೆ. ಸರಳವಾಗಿ ಹೇಳುವುದಾದರೆ ಕಾದ ದೋಸೆ ಕಾವಲಿಯ ಮೇಲೆ ನೀರು ಚುಮುಕಿಸಿದರೆ ಹೇಗೆ ಹಬೆ ಬರುತ್ತೋ ಹಾಗೆಯೇ. ಈ ಹಬೆಗೆ ಮೈ ಒಡ್ಡಿದರೆ ಚರ್ಮಕ್ಕೆ ಕಾಂತಿಯನ್ನು ಕೊಟ್ಟು, ಹೊಳಪಾಗಿ ಇಡಲು ಸಹಾಯಕವಂತೆ. ಅತಿರೇಕದ ಬಳಕೆಯೆಂದರೆ – ಸೌನಾದಲ್ಲಿ ಬೆಂದು ಬೆವರಿದಾಗ ಹೊರ ಬಂದು ಹಿಮದ ಮೇಲೆ ಉರುಳಾಡಿ ಮತ್ತೆ ಸೌನಾಗೆ ಹೋಗುವುದಂತೆ. ನಮಗೆ ಕೇಳಿಯೇ ತಲೆ ತಿರುಗಿದಂತಾಗಿತ್ತು. ಹೊರಗೆ -26 ಡಿಗ್ರಿ ಸೆ! ಅದರಲ್ಲಿ ಹೊರಳಾಡಿದರೆ, ನಮ್ಮನ್ನು ಎತ್ತಿಕೊಂಡು ಹೋಗಲು ಯಾರಾದರೂ ಬರಬೇಕು ಅಷ್ಟೇ. ಒಟ್ಟಾರೆಯಾಗಿ ಐವತ್ತು ಲಕ್ಷ ಜನಸಂಖ್ಯೆ ಇರುವ ಫಿನ್ಲ್ಯಾಂಡ್ ದೇಶದಲ್ಲಿ ಇಪ್ಪತ್ತು ಲಕ್ಷ ಸೌನಾಗಳಿವೆ ಎಂದರೆ ಅದರ ಜನಪ್ರಿಯತೆಯನ್ನು ಊಹಿಸಿಕೊಳ್ಳಿ! ಈ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡ್ ನ ಪ್ರಮುಖ ಆಕರ್ಷಣೆಯಾದ ಅರೋರಾ ಹಾಗೂ ಹಿಮದ ಮೇಲಿನ ಚಾರಣವನ್ನು ಅನ್ವೇಷಿಸೋಣ.

ಹಿಮದ ಮೇಲೆ ಚಾರಣ!

ಲ್ಯಾಪ್ಲ್ಯಾಂಡಿಗೆ ಭೇಟಿ ಕೊಡುವ ಜನರಿಗೆ ಅಲ್ಲಿ ಆಯ್ದುಕೊಳ್ಳಲು ಹಲವಾರು ಚಟುವಟಿಕೆಗಳು ಲಭ್ಯವಿದೆ. ಅದರಲ್ಲಿ ಒಂದು ಅತ್ಯಪರೂಪದ ಚಟುವಟಿಕೆ ಹಿಮದ ಮೇಲಿನ ಚಾರಣ. ಅಕ್ಟೋಬರಿನಿಂದ ಮಾರ್ಚ್ ವರೆಗೆ ಅತಿಯಾಗಿ ಸುರಿಯುವ ಹಿಮ. ಹಿಮವನ್ನು ಕರಗಿಸುವ ಉಷ್ಣತೆ ಇಲ್ಲದ ಕಾರಣ ಹಿಮ ಒಂದರ ಮೇಲೊಂದು ಪದರಗಳಾಗಿ ನಿಂತಿರುತ್ತದೆ. ಹೊಸದಾಗಿ ಬೀಳುವ ಹಿಮ ಹತ್ತಿಯ ಹಾಗೆ ಮೃದುವಾಗಿದ್ದರೆ, ತಾಪಮಾನ ಕುಸಿದ ಹಾಗೆ ಮೃದುವಾಗಿರುವ ಹಿಮ ಗಟ್ಟಿಯಾಗಿ ಒಂದು ಪದರವಾಗುತ್ತದೆ.

ನಾನು ಹಿಮದ ಚಾರಣ ಹೋದಾಗ ಕೆಲವೆಡೆ ಸುಮಾರು ಆರು ಅಡಿಗಳಷ್ಟು ಮೃದುವಾದ ಹಿಮವಿತ್ತು ಎಂದು ನಮ್ಮ ಗೈಡ್ ವಿವರಿಸಿದರು. ಇಷ್ಟು ಹಿಮದ ಮೇಲೆ ಕಾಲಿಟ್ಟರೆ – ಮೈ ಭಾರಕ್ಕೆ ಅರ್ಧ ಹೂತುಹೋಗುತ್ತಿದ್ದೆನಂತೆ! ಅದಕ್ಕಾಗಿಯೆ ಇಲ್ಲಿ ವಿಷೇಶ ಶೂ ವ್ಯವಸ್ಥೆ ಇದೆ (ಫೋಟೋದಲ್ಲಿ ಗಮನಿಸಿ). ಇದು Surface area ಜಾಸ್ತಿ ಮಾಡಿ ಮೃದುವಾದ ಹಿಮದ ಮೇಲೂ ನಡೆಯಲು ಸಹಾಯ ಮಾಡುತ್ತದೆ. ಶೂ ಕಟ್ಟಿಕೊಂಡು ತಯಾರಾದ ಮೇಲೆ ಎರಡು ಗುಂಪುಗಳಾಗಿ ವಿಂಗಡಿಸಿದರು. ಮೊದಲನೆಯದು “fun hike”, ಎರಡೆನೆಯದು “fast hike”. ಆಯ್ಕೆ ನಮಗೆ ಬಿಟ್ಟಿದ್ದು. ನಾವು “fun hike” ಆರಿಸಿಕೊಂಡೆವು.

(ಹಿಮ ಚಾರಣದ ವಿಶೇಷ ಶೂನೊಂದಿಗೆ)

ಈ ಶೂ ಹಾಕಿಕೊಂಡು ನಡೆದರೆ ನಾರದ ಮುನಿಗಳು ನೆನಪಾಗುತ್ತಿದ್ದರು. ಅವರು ಪಾದುಕೆ ಹಾಕಿಕೊಂಡು ಪ್ರಪಂಚ ಪರ್ಯಟನೆ ಹೇಗೆ ಮಾಡುತ್ತಿದ್ದರೋ ನಾ ಕಾಣೆ! ಕಾಲು ಎತ್ತಿಡಲು ಹರ ಸಾಹಸ ಪಡಬೇಕು. ಸ್ವಲ್ಪ ದೂರ ನಡೆದರೆ ಇಷ್ಟು ದೊಡ್ಡ ಶೂ ಇದೆ ಎನ್ನುವುದು ಮರೆತುಹೋಗಿ ಇನ್ನೊಬ್ಬರ ಶೂ ಮೇಲೆ ಕಾಲಿಡುತ್ತಿದ್ದದ್ದು ಸರ್ವೆ ಸಾಮಾನ್ಯ. ಅದರಿಂದ ಒಬ್ಬರನ್ನೊಬ್ಬರು ಹಿಮದಲ್ಲಿ ಬೀಳಿಸಿ ಕೊನೆಗೆ ಅದೇ ಒಂದು ಆಟವಾಗಿಹೋಗಿತ್ತು. ಏಕೆಂದರೆ ಬಿದ್ದರೂ ಹತ್ತಿಯ ಮೇಲೆ ಬಿದ್ದ ಹಾಗೆ! ಚಾರಣ ಪ್ರಾರಂಭವಾಗುವುದಕ್ಕೂ ಮೊದಲು ಶೂ ಕಟ್ಟಿಕೊಳ್ಳುವಾಗ ಮನಸ್ಸಿನಲ್ಲಿ ಏನೋ ಒಂದು ಆತಂಕ. ಹೇಗಪ್ಪಾ ನಿಭಾಯಿಸುವುದು ಇದನ್ನೆಲ್ಲಾ ಅಂತ. ಚಾರಣ ಪ್ರಾರಂಭವಾಗಿ ಕತ್ತಲ ಕಾಡಿನಲ್ಲಿ ಲೀನವಾದ ಮೇಲೆ ಎಲ್ಲವೂ ಮರೆತೆಹೋಯಿತು. ಕತ್ತಲಲ್ಲಿ ಹಿಮ ಚಾರಣ ಮರೆಯಲಾಗದ ಅನುಭವ! ಸ್ವಲ್ಪವೇ ಬರುವ ಚಂದ್ರನ ಬೆಳಕಿಗೆ ಕಣ್ಣುಗಳು ಹೊಂದಿಕೊಂಡ ಮೇಲೆ ಸುತ್ತಲಿನ ಮಾಯಾಲೋಕದ ಅನಾವರಣವಾಯಿತು. ಎಲ್ಲೆಲ್ಲೂ ಇರುವ ಶುಭ್ರ ಶ್ವೇತ ಹಿಮ ಕೂಡ ಇದಕ್ಕೆ ಸಹಾಯ ಮಾಡುತ್ತದೆ.

ಇನ್ನೊಂದು ಆಕರ್ಷಣೆ ಎಂದರೆ ಚಾರಣದ ಮಧ್ಯದಲ್ಲಿ ಅನುಭವಿಸಿದ ಶಾಂತತೆ! ಚಾರಣ ಪ್ರಾಂಭವಾದ ಸುಮಾರು ಒಂದು ಘಂಟೆಯ ನಂತರ ಎಲ್ಲರನ್ನೂ ಹಿಮದ ಮೇಲೆ ಮಲಗಿ ಸುಧಾರಿಸಲು ಹೇಳಿದ ನಮ್ಮ ಗೈಡ್ ಇನ್ನೊಂದು ಸೂಚನೆಯನ್ನೂ ಕೊಟ್ಟರು. ಕಣ್ಣು ಮುಚ್ಚಿ ಮೌನವನ್ನು ಆನಂದಿಸಬೇಕು. ಅಲ್ಲಿಯವರೆಗೂ ಗಿಜಿ ಗಿಜಿ ಎನ್ನುತ್ತಿದ್ದ ಗುಂಪು ತಕ್ಷಣ ಮೌನವಾಯಿತು. ಮೌನ ಆಚರಿಸಿ ಅಂತರ್ಮುಖಿಯಾಗುವುದೊ ಅಥವಾ ಕಣ್ಣಿನ ಮೇಲಿರುವ ತಾರಾಗಣವನ್ನು ಲೆಕ್ಕ ಹಾಕುವುದೋ ಎನ್ನುವ ಗೊಂದಲ. ಮನಸ್ಸೆನ್ನುವ ಬಿಸಿಲ್ಗುದುರೆ ಎಷ್ಟಾದರೂ ಚಂಚಲ! ಆದರೂ ಧೃಡ ಮನಸ್ಸು ಮಾಡಿ ಅಂತರ್ಮುಖಿಯಾದ  ಆ ಕ್ಷಣ ಮರೆಯಲು ಸಾಧ್ಯವಿಲ್ಲ!

ಇದೆಲ್ಲ ಆಗಿ ಮುಂದೆ ಹೋದಮೇಲೆ ದೊಡ್ಡ ಇಳಿಜಾರು. ಎಲ್ಲರೂ ಮಕ್ಕಳಾಗಿ ಹಿಮದ ಜಾರುಬಂಡೆಯ ಮೇಲೆ ಜಾರಿ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿದರು. ಬಂದಿದ್ದ ಗುಂಪಿನಲ್ಲಿ ಹಲವಾರು ದೇಶಗಳಿಂದ, ವಿವಿಧ ವಯೋವರ್ಗದ ಜನರಿದ್ದರೂ ಬಾಲ್ಯದ ನೆನಪು ಮಾತ್ರ ಒಂದೇ ಆಗಿತ್ತು! ಆತಂಕದಿಂದ ಪ್ರಾರಂಭವಾದ ಚಾರಣ ಆನಂದದಿಂದ ಅಂತ್ಯವಾಗಿದ್ದು ಸಂತೋಷವಾಯಿತು.

ನಮ್ಮ ಪ್ರವಾಸದ ಮೂಲ ಉದ್ದೇಶ ಇದ್ದದ್ದು ಅರೋರಾ ನೋಡಬೇಕು ಎಂದು. ನಾವು ಉಳಿದಿದ್ದ ಬಹುತೇಕ ದಿನಗಳು ಮೋಡ ಕವಿದ ವಾತಾವರಣ ಇದ್ದುದರಿಂದ ಆಕಾಶ ತಿಳಿಯಾಗಿರಲಿಲ್ಲ. ಅರೋರಾ ವೀಕ್ಷಣೆಯ ವಿವರ ತಿಳಿಯಲು ಈಗೀಗ ಹಲವಾರು ಮೊಬೈಲ್ ಅಪ್ಲಿಕೇಶನ್ ಬಂದಿವೆ. ಯಾವ ಸಮಯಕ್ಕೆ ಎಷ್ಟು ಪ್ರಖರವಾಗಿ ಅರೋರಾ ಕಾಣುತ್ತದೆ ಎಂದು ಅದರಲ್ಲಿ ತಿಳಿಯಬಹುದು. ಇದು ಒಂದು ರೀತಿಯ ಹವಾಮಾನ ಮುನ್ಸೂಚನೆ ಇದ್ದ ಹಾಗೆ. ಆದರೆ ಇದು ಉಪಯೋಗವಾಗುವುದು ಕತ್ತಲಿನ ಸಮಯದಲ್ಲಿ ಆಕಾಶ ತಿಳಿಯಾಗಿದ್ದಾಗ ಮಾತ್ರ. ಇಲ್ಲದಿದ್ದರೆ ಅರೋರಾ ಚಟುವಟಿಕೆ ನಡೆಯುತ್ತಿದ್ದರೂ ನಮಗೆ ಕಾಣುವುದಿಲ್ಲ. ಅರೋರಾ ಬಗ್ಗೆ ತಿಳಿಸಿ ಮತ್ತೆ ನನ್ನ ಕಥೆ ಮುಂದುವರೆಸುತ್ತೇನೆ.

ಸೂರ್ಯ ತನ್ನ ಹೊರಮೈನಿಂದ ಹೊರಸೂಸುವ ವಿಕಿರಣಗಳು ಭೂಮಿಯ ಉತ್ತರ ಧೃವ ಮತ್ತು ದಕ್ಷಿಣ ಧೃವಗಳ ಆಯಸ್ಕಾಂತೀಯ ಪದರಗಳನ್ನು ಹೊಕ್ಕಾಗ ಪ್ರಕೃತಿಯ ವಿಸ್ಮಯ ಸೃಷ್ಟಿಯಾಗುತ್ತದೆ. ಕಡುಹಸಿರಿನಿಂದ ಹಿಡಿದು ಕೆಂಪು ನೇರಳೆವರೆಗೂ ರಾತ್ರಿಯ ಆಗಸದಲ್ಲಿ ವರ್ಣರಂಜಿತ ಚಿತ್ತಾರ ಮೂಡಿಸುತ್ತವೆ. ಅರೋರಾ ತೀವ್ರತೆಯನ್ನು Kp ಸೂಚ್ಯಂಕದ ಮೂಲಕ ಅಳೆಯಲಾಗುತ್ತದೆ. Kp ಸೂಚ್ಯಂಕದ ಮೌಲ್ಯವನ್ನು ಶೂನ್ಯದಿಂದ ಎಂಟರವರೆಗೂ ಬದಲಾಗುತ್ತದೆ. ಅರೋರಾ ಪ್ರಖರತೆ Kp ಸೂಚ್ಯಂಕದ ಮೌಲ್ಯ ಶೂನ್ಯ ಎಂದರೆ ಅತಿ ಕಡಿಮೆಯಿಂದ ಹಿಡಿದು ಎಂಟು ಎಂದರೆ ಅತೀ ಹೆಚ್ಚು ಎಂದಾಗುತ್ತದೆ. ಭೂಮಿಯ ಉತ್ತರ ಧೃವದಲ್ಲಿ ಈ ಎಲ್ಲ ರಾಷ್ಟ್ರಗಳ ಉತ್ತರಭಾಗದಲ್ಲಿ ಅರೋರಾ ಚಟುವಟಿಕೆ ಕಾಣಸಿಗುತ್ತದೆ: ಐಸ್ಲ್ಯಾಂಡ್, ಗ್ರೀನ್ಲ್ಯಾಂಡ್, ರಷ್ಯಾ, ನಾರ್ಡಿಕ್ ದೇಶಗಳಾದ ಫಿನ್ಲ್ಯಾಂಡ್, ನಾರ್ವೆ, ಸ್ವೀಡನ್ ಹಾಗೂ ಅಮೆರಿಕಾದ ಅಲಾಸ್ಕಾ. ಹಾಗೆಯೇ ದಕ್ಷಿಣ ಧೃವದಲ್ಲಿ ಅಂಟಾರ್ಟಿಕಾ ಭಾಗದಲ್ಲಿ ಕಾಣಸಿಗುತ್ತದೆ. ಆದರೆ ದಕ್ಷಿಣ ಧೃವದಲ್ಲಿ ಜನ ಜೀವನ ನಡೆಸುವ ಹಾಗೂ ಸುಲಭವಾಗಿ ತಲುವುವ ಅವಕಾಶಗಳು ಕಡಿಮೆಯಿರುವುದರಿಂದ, ಬಹುತೇಕ ಪ್ರವಾಸಿಗರು ಉತ್ತರ ಧೃವದ ನಾರ್ಡಿಕ್ ದೇಶಗಳು ಹಾಗೂ ಕೆನಡಾ ಭಾಗದಲ್ಲಿ ಅರೋರಾ ವೀಕ್ಷಣೆಗೆ ಪ್ರವಾಸ ಕೈಗೊಳ್ಳುತ್ತಾರೆ.

ನಾವು ಸಣ್ಣವರಿದ್ದಾಗ ಶಾಲೆಯಲ್ಲಿ ಒಂದು ಪ್ರಯೋಗ ಮಾಡಿಸಿದ್ದರು. ಕಬ್ಬಿಣದ ಪುಡಿಯನ್ನು ಒಂದು ಪೇಪರಿನ ಮೇಲೆ ಹಾಕಿ, ಕೆಳಗಿಂದ ಆಯಸ್ಕಾಂತವನ್ನು ಹಿಡಿದರೆ ಎಲ್ಲ ಕಬ್ಬಿಣದ ಕಣಗಳು ಆಯಸ್ಕಾಂತದೆಡೆ ಆಕರ್ಷಿತವಾಗಿ ಬರುತ್ತವೆ. ಹಾಗೆಯೇ ಕೆಳಗಿನ ಆಯಸ್ಕಾಂತವನ್ನು ಸ್ವಲ್ಪ ಅತ್ತಿಂದಿತ್ತ ಆಡಿಸಿದರೆ ಕಬ್ಬಿಣದ ಕಣಗಳು ಸಹ ಅದೇ ಚಲನವನ್ನು ಹಿಂಬಾಲಿಸುತ್ತವೆ. ನಾವದನ್ನು “ಐರನ್ ಡಾನ್ಸ್” ಅಂತ ಅಡ್ಡ ಹೆಸರಿಟ್ಟು ಕರೆಯುತ್ತಿದ್ದೆವು. ಇದೊಂದು ಪ್ರಯೋಗ ಎನ್ನುವುದಕ್ಕಿಂತಲೂ ಆಟವಾಗಿದ್ದು ಹೆಚ್ಚು. ಸುಮ್ಮನೆ ಕಲ್ಪಿಸಿಕೊಳ್ಳಿ : ಭೂಮಿಯ ಆಯಸ್ಕಾಂತೀಯ ಪದರದಲ್ಲಿ ಸೂರ್ಯನ ವಿಕಿರಣಗಳೂ ಸಹ ನಾನು ಹೇಳಿದ ಐರನ್ ಡಾನ್ಸ್ ರೀತಿಯಲ್ಲಿ ಆಡುತ್ತಿದ್ದರೆ, ಭೂಮಿಯ ಮೇಲೆ ನಿಂತಿರುವ ನಮಗೆ ಅದು ಅರೋರಾ ಡಾನ್ಸ್. ಹಸಿರು ಬಣ್ಣದ ದೃಶ್ಯ ಕಾವ್ಯ! ಪದಗಳಲ್ಲಿ ಹಿಡಿದಿಡುವುದು ಕಷ್ಟ ಅನ್ನಿಸುತ್ತಿದೆ. ಇದನ್ನೆಲ್ಲಾ ನೋಡಿ ಏನೋ ಸಾಧಿಸಿದ ಭಾವ ಮನಸಿನಲ್ಲಿ.

ಈಗ ಮತ್ತೆ ನನ್ನ ಕಥೆಗೆ ಬರೋಣ. ನಮ್ಮ ಪ್ರವಾಸದಲ್ಲಿ ಇನ್ನೊಂದು ದಿನ ಮಾತ್ರ ಉಳಿದಿತ್ತು. ಆವತ್ತು ಡಿಸೆಂಬರ್ 31. ಸಂಜೆಯಾಗುತ್ತಿದ್ದಂತೆ ಆಕಾಶ ತಿಳಿಯಾಗುತಿತ್ತು. ಆಗಸಕ್ಕೆ ನಮ್ಮ ಕೋರಿಕೆ ಯಾರು ತಲುಪಿಸಿದರೋ, ನಾ ತಿಳಿಯೆ. ಸಂಜೆ ಹೊತ್ತಿಗೆ ಪೂರ್ತಿ ತಿಳಿಯಾದ ಆಗಸ. ಅರೋರಾ ಒಂದು ಪ್ರಾಕೃತಿಕ ಘಟನೆಯಾದ್ದರಿಂದ ಪ್ರತಿ ದಿನ ಆಗುವುದಿಲ್ಲ. ಅದಕ್ಕೆ ಅನುಕೂಲಕರ ವಾತಾವರಣ ಇದ್ದರೆ ಮಾತ್ರ ಆ ವಿಸ್ಮಯ ಸೃಷ್ಠಿಯಾಗುತ್ತದೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ ಸುಮಾರು ಇನ್ನೂರು ದಿನಗಳು ಅರೋರಾ ಚಟುವಟಿಕೆ ಬಾನಿನಲ್ಲಿ ನಡೆಯುತ್ತದೆಯಂತೆ. ಹಾಗಾಗಿ ಕೊಂಚ ಆತಂಕ ಕೂಡ ಇತ್ತು. ಸಂಜೆ ಏಳೂವರೆಗೆ ನಮ್ಮ ಬಸ್ ಅರೋರಾ ಹುಡುಕುತ್ತಾ ಹೊರಟಿತು. ಸುಮಾರು ಒಂದು ಘಂಟೆಯ ಪ್ರಯಾಣದ ನಂತರ ಕಡುಗತ್ತಲ ಜಾಗದಲ್ಲಿ ಬಸ್ ನಿಲ್ಲಿಸಿ “ಇಲ್ಲಿ ಅರೋರಾ ನೋಡುವ ಅವಕಾಶ ಹೆಚ್ಚಿದೆ. ಇಲ್ಲಿ ಕೃತಕ ಬೆಳಕಿನ ಅಡಚಣೆಯಿಲ್ಲ” ಎಂದು ಗೈಡ್ ನಮ್ಮನ್ನೆಲ್ಲಾ ಇಳಿಸಿ ಮುಂದೆ ಕರೆದುಕೊಂಡು ಹೋದರು. ಅದೊಂದು ಹಿಮದ ವಿಶಾಲ ಮೈದಾನದಂತೆ ಕಂಡಿತು.

ನಾನು ನಿಂತಿರುವ ಮೈದಾನದಂತೆ ಕಂಡ ಜಾಗ ಹೆಪ್ಪುಗಟ್ಟಿರುವ ಸರೋವರ! ಅಲ್ಲಿಯ ಉಷ್ಣಾಂಶ (ಉಷ್ಣ ಇಲ್ಲದಿದ್ದರೂ ಪದ ಬಳಕೆಯ ಒತ್ತಾಯಕ್ಕೆ ಮಣಿದು ಈ ಪದ ಬಳೆಸಿದ್ದೇನೆ) -21 ಡಿಗ್ರಿ ಸೆಲ್ಸಿಯಸ್!!! ಎಲ್ಲ ಎಲೆಕ್ಟ್ರಾನಿಕ್ ಚಿಪ್ ಗಳಲ್ಲಿ ವೈಪರಿತ್ಯ ಸನ್ನಿವೇಶಗಳು ಎದುರಾದರೆ ತಾನಾಗಿಯೇ ಆಫ್ ಆಗುತ್ತದೆ ಎಂದು ಓದಿದ್ದೆ. ಉದಾಹರಣೆಗೆ ಅತಿ ಹೆಚ್ಚು/ಕಡಿಮೆ ವೋಲ್ಟೇಜ್, ಅತಿ ಹೆಚ್ಚು/ಕಡಿಮೆ ತಾಪಮಾನ ಇತ್ಯಾದಿ. ಮೊಬೈಲಿನಲ್ಲಿ ಫೋಟೋ ತೆಗೆಯುತ್ತಿದ್ದಾಗ ತಟ್ಟನೆ ಸ್ವಿಚ್ ಆಫ್ ಆಗಿಹೋಯ್ತು. ಇದನ್ನು “Temperature Shutdown” ಎಂದು ಕರೆಯುತ್ತೇವೆ. ಈ ವಿಷಯದಲ್ಲಿ, ಓದಿದ್ದನ್ನು ಪ್ರಮಾಣಿಸಿ ನೋಡುತ್ತೇನೆ ಎಂದುಕೊಂಡಿರಲಿಲ್ಲ!

(ಅಗಣಿತ ತಾರಾಗಣ)

ನಾನು ಸಣ್ಣವನಿದ್ದಾಗ ತುಂಬಾ ಗಲಾಟೆ ಮಾಡಿದ್ರೆ ನನ್ನಮ್ಮ ಒಂದು ತಟ್ಟೆಯಲ್ಲಿ ಅಕ್ಕಿ – ಸಾಸುವೆ ಹಾಕಿ ಬೇರೆ ಮಾಡಲು ಕೊಡ್ತಿದ್ರಂತೆ. ಈ ರಾತ್ರಿ ಇದೇ ಪರಿಸ್ಥಿತಿ! ಎತ್ತ ನೋಡಿದರೂ ನಕ್ಷತ್ರಗಳ ಚಿತ್ತಾರ. ಸಣ್ಣವನಾಗಿದ್ದಾಗ ಆಡಿದ ಚುಕ್ಕಿ ಆಟದ ನೆನಪು. ಅಗಾಧ – ಅನಂತ ಪದಗಳ ಅರ್ಥ ಕಣ್ಣಿಗೆ ಕಾಣಿಸಿತು! ಉತ್ತರದ ದಿಕ್ಕಿಗೆ ಅರೋರಾ ದೃಶ್ಯ ಕಾವ್ಯ ಪ್ರಾರಂಭವಾಯಿತು.ಪ್ರಕೃತಿಯೇ ನಮಗಾಗಿ ಒಂದು ವೇದಿಕೆಯನ್ನು ಸೃಷ್ಟಿಸಿ, ನಮ್ಮನ್ನೆಲ್ಲ ಪ್ರೇಕ್ಷಕರನ್ನಾಗಿಸಿದ ಅನುಭವ! ನಮ್ಮಂತಹ ಎಂಜಿನಿಯರ್ಗಳನ್ನು ಹೊರತುಪಡಿಸಿ ಭಾವನೆಗಳನ್ನು ದಾಖಲಿಸುವಂತಹ ಕವಿಗಳು- ವರ್ಣಚಿತ್ರಕಾರರು ಭೇಟಿ ನೀಡಿದರೆ ಇನ್ನೂ ಸೊಗಸಾಗಿರುತ್ತದೆ ಎನ್ನುವ ಯೋಚನೆ ಮನಸ್ಸಿನಲ್ಲಿ ಹಾದುಹೋಯಿತು. ಕ್ಯಾಮೆರಾ ಕಣ್ಣಿಗೆ ಇನ್ನೂ ಹೆಚ್ಚು ಕಾಣುವುದರಿಂದ, ಆಕಾಶ ಗಂಗೆ (milky way) ಜೊತೆಗೆ ಅರೋರಾ ಸೆರೆಹಿಡಿದದ್ದು ನನ್ನ ಭಾಗ್ಯವೇ ಸರಿ. ಈ ರೀತಿಯಲ್ಲಿ ಹೊಸವರ್ಷ ಆರಂಭವಾಗುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ!!! ಪ್ರವಾಸ ಕೊನೆಗೊಳ್ಳುತಿತ್ತು ಹಾಗೂ ಹೊಸ ವರ್ಷ ಪ್ರಾರಂಭವಾಗುತ್ತಿತ್ತು. ಒಮ್ಮೆಗೆ “What a way to finish & What a way to begin!” ಅನ್ನಿಸಿದ್ದು ಇದೆ ಮೊದಲು. ಗಣಿತ ಲೋಕದಲ್ಲಿ ಅನಂತದೆಡೆ ಸಾಗಿದಷ್ಟೂ ತದ್ವಿರುದ್ಧಗಳೆರಡೂ ಐಕ್ಯವಾಗುತ್ತವೆ ಎಂದ ಹಾಗೆ! ನಿರ್ಲಿಪ್ತತೆಯ ಅನುಭವ.

ಈ ಪ್ರವಾಸ ನನ್ನ ಜೀವಮಾನದ ಶ್ರೇಷ್ಠ ಪ್ರವಾಸಗಳಲ್ಲಿ ಒಂದು. ಹೆಲ್ಸಿನ್ಕಿಯಲ್ಲಿ ಪರದಾಟದಿಂದ ಪ್ರಾರಂಭವಾದ ಪ್ರವಾಸ, ಎದುರಾದ ಎಲ್ಲ ಸವಾಲುಗಳನ್ನು ದಾಟಿ ಲ್ಯಾಪ್ಲ್ಯಾಂಡಿನಲ್ಲಿನ ಅಚ್ಚರಿಗಳನ್ನು ಪ್ರಮಾಣಿಸುವ ತನಕದ ಹಾದಿ ನನ್ನಲ್ಲಿನ ನಂಬಿಕೆ ಮತ್ತು ಧೃಡತೆಯನ್ನು ಹೆಚ್ಚಿಸಿತು. ಈ ನಂಬಿಕೆಯ ಟಾನಿಕ್ ನನಗೆ ಅವಶ್ಯವಾಗಿತ್ತು. ಕೊರೋನಾದಿಂದ ಎದುರಾಗಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಜಡ್ಡು ಹಿಡಿದಿದ್ದ ಮನಸ್ಸು ಪುಟಿದೆದ್ದು ಮುಂದಿನ ಪ್ರವಾಸಕ್ಕೆ ತಯಾರಾಗುತ್ತಿದೆ!

“ದೂರ ಇನ್ನೂ ದೂರ ಕಾಣದೂರ ಕಡೆಗೆ.. ಮೈಲಿಗಲ್ಲು ಇರದ ದಾರಿ ಹುಡುಕಿ ನಡಿಗೆ…” (ರೋಹಿತ್ ಪಧಕಿ)

ನನ್ನ ಒಂದು ಕನಸಿನ ಪಯಣದ ಕಥನ ಓದಿದ್ದಕ್ಕೆ ಅನಂತ ವಂದನೆಗಳು. ನಿಮ್ಮ ನೇರ ಅಭಿಪ್ರಾಯಗಳೇ ಬರೆಯುತ್ತೀರಲ್ಲ ?

(ಹಿಂದಿನ ಬರಹ : ಮಂಜಿನೂರಿನಲ್ಲಿ ಹಿಮಸಾರಂಗದ ಸ್ನೇಹ )

(ಚಿತ್ರಗಳು: ಲೇಖಕರವು