ಕೆಲವರು, ಭಾರತಕ್ಕೆ ಬಂದಾಗ ತಾವು ಯಾವುದೇ ಕೆಲಸವೇ ಮಾಡದವರ ಹಾಗೇ ಕಾಣಿಸಿಕೊಂಡು ಮನೆಗಳಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಇನ್ನು ಹೊರಗಡೆ ಬಂದಾಗ ತಾವು ಅಮೇರಿಕಾದಿಂದ ಬಂದವರು ಎಂದು ಹೇಗೆ ಎದುರಿನವರಿಗೆ ತಿಳಿಸುವುದು ಎಂದು ಹೆಣಗಾಡುತ್ತಾರೆ. ಇನ್ನು ಬಸ್ಸು ಅಥವಾ ರೈಲುಗಳಲ್ಲಿ ಪ್ರಯಾಣಮಾಡುವಾಗ ಸಹಪ್ರಯಾಣಿಕರ ಜೊತೆ ಸಂಭಾಷಣೆ ಶುರುವಾದರೆ, ತಮ್ಮ ಅಮೇರಿಕಾ ಜ್ಞಾನ ಹೊರಹಾಕುತ್ತಾರೆ. ಹೀಗೆ ಎಲ್ಲರೂ ಇರುವುದಿಲ್ಲವಾದರೂ, ಕೆಲವರಂತೂ ಅಲ್ಲಿರುವ ಎಲ್ಲರೂ ಹೀಗೇ ಮಾಡುತ್ತಾರಾ ಎಂಬಂತೆ ನಡೆದುಕೊಳ್ಳುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
ಒಂದು ಮಾತಿದೆ; ವಿದೇಶದಲ್ಲಿರುವ ಭಾರತೀಯರು ವಿದೇಶದಲ್ಲಿ ಭಾರತೀಯರಾಗಿ, ಭಾರತಕ್ಕೆ ಬಂದಾಗ ವಿದೇಶೀಯರಾಗಿ ಬದುಕುತ್ತಾರೆ ಎಂದು. ಇದು ಬಹಳ ಜನರ ಮಟ್ಟದಲ್ಲಿ ನಿಜ. ಬಹುತೇಕ ಎಲ್ಲಾ ಭಾರತೀಯರೂ ವಿದೇಶಗಳಲ್ಲಿ ಭಾರತೀಯರಂತೇ ಬದುಕುವುದು. ಅಮೇರಿಕಾದಲ್ಲಿ ಭಾರತೀಯರ ಜೀವನ ಹೇಗಿರುತ್ತದೆ ತಿಳಿದುಕೊಳ್ಳೋಣ.
ಅಮೇರಿಕಾದಲ್ಲಿ ಎಲ್ಲವೂ ದುಬಾರಿ. ಜನವೂ ಕಡಿಮೆ. ಕೆಲಸದವರು ಸಿಗುವುದು ದುರ್ಲಭ, ಒಂದು ವೇಳೆ ಸಿಕ್ಕಿದರೂ ಅವರ ವೇತನ ಹೆಚ್ಚು, ಬರುವ ಸಂಬಳದಲ್ಲಿ ಕೆಲಸದವರನ್ನು ಇಟ್ಟುಕೊಂಡು ಜೀವನ ನಿಭಾಯಿಸುವುದು ಕಷ್ಟ. ಮನೆ ಬಾಡಿಗೆ ಅಥವಾ ಮನೆ ಸಾಲದ ಕಂತು, ಕಾರಿನ ಸಾಲದ ಕಂತು, ಅದಕ್ಕೆ ಪೆಟ್ರೋಲ್ (ಅದನ್ನು ಅಮೇರಿಕಾದಲ್ಲಿ ಗ್ಯಾಸ್ ಎನ್ನುತ್ತಾರೆ, ಗ್ಯಾಸೋಲಿನ್ ಶಾರ್ಟ್ ಫಾರ್ಮ್), ಆರೋಗ್ಯ ವಿಮೆ, ಮಕ್ಕಳ ಖರ್ಚು, ಆಹಾರ ಸಾಮಗ್ರಿ, ಓಡಾಟ, ಭಾರತಕ್ಕೆ ಬರಲು ಆಗುವ ಖರ್ಚು ಹೀಗೆ ಹಣಹೋಗಿ ಉಳಿಯುವ ಹಣದಲ್ಲಿ ಜೀವ ವಿಮೆ, ಉಳಿತಾಯ ಖಾತೆ, ನಿವೃತ್ತಿಗಾಗಿ ಉಳಿಕೆ ಮಾಡಬೇಕಾಗುತ್ತದೆ. ಇಲ್ಲಿ ಬೇರೆಯವರ ಅಥವಾ ಬೆಳೆದ ಮಕ್ಕಳ ಮೇಲೆ ಬದುಕುವುದು ಸಾಧ್ಯವಿಲ್ಲ. ಮಕ್ಕಳಿಗೂ ತಂದೆ ತಾಯಿಯರನ್ನು ಮನೆಯಲ್ಲಿ ಇರಿಸಿಕೊಂಡು ಸಾಕುವುದು ಕಷ್ಟ. ಆದ್ದರಿಂದ ಎಲ್ಲರೂ ನಿವೃತ್ತಿಗಾಗಿ ಸ್ವಲ್ಪ ಹಣ ಮೊದಲಿನಿಂದಲೂ ತೆಗೆದಿರಿಸುತ್ತಾರೆ.
ಇರಲಿ, ಕೆಲಸದವರು ಸಿಗುವುದಿಲ್ಲವಾದ್ದರಿಂದ, ಮನೆಯ ಎಲ್ಲಾ ಕೆಲಸಗಳನ್ನೂ ಮನೆಯ ಎಲ್ಲರೂ ಹಂಚಿಕೊಂಡು ಮಾಡಬೇಕು. ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಬಾತ್ರೂಮ್ ತೊಳೆಯುವುದು, ಬಟ್ಟೆ ವಾಷಿಂಗ್ ಮಷೀನ್ ಹಾಕಿ, ಒಣಗಿದಮೇಲೆ ಮಡಿಚಿ ಇಡುವುದು, ಮನೆಯ ಪೀಠೋಪಕರಣಗಳನ್ನು ಒರೆಸುವುದು, ಸ್ವಂತ ಮನೆಯಿದ್ದರೆ ಮನೆಯ ಸುತ್ತಣ ಹುಲ್ಲು ಕಟಾವು ಮಾಡುವುದು ಕಳೆ ತೆಗೆಯುವುದು, ಮಕ್ಕಳನ್ನು ಅವರ ಚಟುವಟಿಕೆಗಳಿಗೆ ಕರೆದುಕೊಂಡು ಹೋಗುವುದು, ಕರೆತರುವುದು ಹೀಗೆ ಅನೇಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಸಂಬಂಧಿಗಳು ಇರುವುದಿಲ್ಲ, ಮನೆಯಲ್ಲಿ ಬೇರೆ ಯಾರೂ ಸಹಾಯ ಮಾಡಲು ಇರುವುದಿಲ್ಲ, ಬಹುತೇಕ ಗಂಡ-ಹೆಂಡತಿ ಸೇರಿ ಮನೆಗೆಲಸಗಳೆಲ್ಲವನ್ನೂ ಮಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಕೆಲಸ ಇರುವುದರಿಂದ ಬೇರೆ ಏನಕ್ಕೂ ಸಮಯ ಉಳಿಯುವುದಿಲ್ಲ, ಆದರಿಂದ ಎಲ್ಲರೂ ವಾರಾಂತ್ಯಕ್ಕೆ ಕಾಯುತ್ತಾರೆ, ಶನಿವಾರ, ಭಾನುವಾರ ಎರಡ ದಿನ ರಜೆ ಇರುವುದರಿಂದ ಬೇರೆ ಕೆಲಸಗಳಿಗೆ ಸ್ವಲ್ಪ ಸಮಯ ಸಿಗುತ್ತದೆ. ಜೀವನ ಹೀಗೆ ಇರುವುದರಿಂದ, ಸುತ್ತಲೂ ಜನ ಕಡಿಮೆ ಇರುವುದರಿಂದ, ಯಾರೂ ಯಾರನ್ನೂ ಅಷ್ಟಾಗಿ ಗಮನಿಸಲು ಸಾಧ್ಯವಿಲ್ಲದ್ದರಿಂದ, ಇಲ್ಲಿ ಮದುವೆ ಆಗಿ ಬರುವ ಸಿನೆಮಾ ನಾಯಕಿಯರಿಗೆ ಉಸಿರು ಕಟ್ಟಿದ ಹಾಗಾಗುವುದು ಸಹಜ, ಲೈಮ್ ಲೈಟಲ್ಲಿ ಇದ್ದವರನ್ನು ತಂದು ಮರುಭೂಮಿಯಲ್ಲಿ ಹಾಕಿದ ಹಾಗಾಗುತ್ತದೆ, ಆದ್ದರಿಂದ ಅವರು ಇಲ್ಲಿಂದ ಭಾರತಕ್ಕೆ ಬರಲು ತಹ ತಹಿಸುತ್ತಾರೆ. ಅಮೇರಿಕಾ ತಮ್ಮ ಪಾಡಿಗೆ ತಾವು ಬದುಕಲು ಇಚ್ಚಿಸುವ ಜನರಿಗೇ ಹಿತ. ಆದರೂ ಜನ ಕನ್ನಡ ಸಂಘ, ಸ್ನೇಹಿತರ ಬಳಗ ಮಾಡಿಕೊಂಡು ಜನ ಸೋಶಿಯಲ್ ಆಗಲು ಪ್ರಯತ್ನಿಸುತ್ತಾರೆ.
ಅಮೇರಿಕಾದಲ್ಲಿ ನೋಡಲು ಅನೇಕ ಪ್ರದೇಶಗಳಿವೆ. ಪ್ರತಿಯೊಂದು ಊರಿನಲ್ಲಿಯೂ ದೊಡ್ಡ ದೊಡ್ಡ ಪಾರ್ಕ್‌ಗಳು ಇರುತ್ತವೆ. ಅಲ್ಲಿ ಒಂದಾದರು ತೊರೆ ಹರಿಯುತ್ತಿರುತ್ತದೆ, ಇಲ್ಲ ನೀರು ತುಂಬಿದ ಕೆರೆ ಇರುತ್ತದೆ. ಕೆಲವರು ದಿನಾ ಜಾಗಿಂಗ್ ಮಾಡಲು ಇಂತಹ ಪಾರ್ಕುಗಳಿಗೆ ಹೋಗುತ್ತಾರೆ. ಇಲ್ಲ ಮಕ್ಕಳನ್ನು ವಾರಾಂತ್ಯದಲ್ಲಿ ಇಲ್ಲಿಗೆ ಕರೆತಂದು ದಿನ ಕಳೆಯುತ್ತಾರೆ. ಹದಿಹರೆಯದವರು ಶುಕ್ರವಾರ ಹಾಗು ಶನಿವಾರ ಸಂಜೆ ಕ್ಲಬ್‌ಗಳಿಗೆ ತಮ್ಮ ಸಂಗಾತಿ ಜೊತೆ ಹೋಗುತ್ತಾರೆ. ತಡ ರಾತ್ರಿ ಮನೆಗೆ ಬರುತ್ತಾರೆ. ಬೇಸಿಗೆಯಲ್ಲಿ ಸ್ವಲ್ಪ ದೂರದ ಪ್ರದೇಶಗಳಿಗೆ ಪ್ರವಾಸ ಹೊರಡುತ್ತಾರೆ. ಅಮೇರಿಕಾದ ಜನ ಪ್ರವಾಸ ಮಾಡಲು ಇಷ್ಟಪಡುವ ಜನ. ಅದಕ್ಕಾಗಿ ವರ್ಷದ ಮೊದಲೇ ಯೋಜನೆ ಮಾಡುತ್ತಾರೆ. ದೊಡ್ಡ ಪ್ರವಾಸವಾದರೆ ಹಣ ಕೂಡಿಡುತ್ತಾರೆ. ಪತ್ನಿಯೊಡನೆ ಡಿನ್ನರ್‌ಗೆ ಹೋಗುವುದನ್ನೂ ಸಹ ಇಲ್ಲಿನ ಜನ ಸಂಭ್ರಮಿಸುತ್ತಾರೆ.
ಇನ್ನು ಅಮೇರಿಕಾದಲ್ಲಿ ವಾಸಿಸುವ ಜನ ಭಾರತಕ್ಕೆ ಬಂದಾಗ, ಭಾರತದಲ್ಲಿನ ಕೆಲವುದರ ಬಗ್ಗೆ, ಟೀಕೆ ಮಾಡುತ್ತಾರೆ ಮತ್ತು ಅದರ ಬಗ್ಗೆ ಉಪದೇಶ ಮಾಡುತ್ತಾರೆ. ಅದರಲ್ಲಿ ಬಹು ಮುಖ್ಯವಾದುದ್ದು ಟೈಮ್ ಮ್ಯಾನೇಜ್ಮೆಂಟ್, ಸಮಯ ಪಾಲನೆ. ಅಮೇರಿಕಾದ ಜನ ಸಮಯ ಪರಿಪಾಲನೆಯಲ್ಲಿ ಎತ್ತಿದ ಕೈ. ಯಾರನ್ನೂ ಕಾಯಿಸುವುದಿಲ್ಲ, ಯಾರಿಗೂ ಕಾಯುವುದಿಲ್ಲ. ಆದರೆ ಭಾರತದಲ್ಲಿ ಸಮಯ ಪಾಲನೆ ಅಷ್ಟಾಗಿ ಆಗುವುದಿಲ್ಲವಾದ್ದರಿಂದ ಅದರ ಬಗ್ಗೆ ಭಾರತಕ್ಕೆ ಬಂದ ಜನ ಸ್ವಲ್ಪ ಕುಹಕತೆಯಿಂದ ಕೂಡಿದ ಉಪದೇಶ ಕೊಡಲು ಪ್ರಾರಂಭಿಸುತ್ತಾರೆ. ಇದಲ್ಲದೆ ಭಾರತದಲ್ಲಿನ ಪವರ್ ಕಟ್, ಬಿಸಿನೀರಿಗೆ ಕೆಲಕಡೆ ಆಗುವ ಅನನುಕೂಲತೆ, ಧೂಳು, ಹಸು ಎಮ್ಮೆ, ನಾಯಿಗಳು ರಸ್ತೆಯಲ್ಲಿ ಅಲೆಯುವುದು ಇಂಥವುಗಳ ಬಗ್ಗೆ ಅಮೇರಿಕಾಗೆ ಹೋಲಿಸಿ ಮಾತನಾಡುತ್ತಾರೆ.
ಕೆಲವರು, ಭಾರತಕ್ಕೆ ಬಂದಾಗ ತಾವು ಯಾವುದೇ ಕೆಲಸವೇ ಮಾಡದವರ ಹಾಗೇ ಕಾಣಿಸಿಕೊಂಡು ಮನೆಗಳಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಇನ್ನು ಹೊರಗಡೆ ಬಂದಾಗ ತಾವು ಅಮೇರಿಕಾದಿಂದ ಬಂದವರು ಎಂದು ಹೇಗೆ ಎದುರಿನವರಿಗೆ ತಿಳಿಸುವುದು ಎಂದು ಹೆಣಗಾಡುತ್ತಾರೆ. ಇನ್ನು ಬಸ್ಸು ಅಥವಾ ರೈಲುಗಳಲ್ಲಿ ಪ್ರಯಾಣಮಾಡುವಾಗ ಸಹಪ್ರಯಾಣಿಕರ ಜೊತೆ ಸಂಭಾಷಣೆ ಶುರುವಾದರೆ, ತಮ್ಮ ಅಮೇರಿಕಾ ಜ್ಞಾನ ಹೊರಹಾಕುತ್ತಾರೆ. ಹೀಗೆ ಎಲ್ಲರೂ ಇರುವುದಿಲ್ಲವಾದರೂ, ಕೆಲವರಂತೂ ಅಲ್ಲಿರುವ ಎಲ್ಲರೂ ಹೀಗೇ ಮಾಡುತ್ತಾರಾ ಎಂಬಂತೆ ನಡೆದುಕೊಳ್ಳುತ್ತಾರೆ. ಅಮೇರಿಕಾದಲ್ಲಿ ತಾವು ಇರುವುದರಿಂದ ತಮಗೆ ಪ್ರತ್ಯೇಕ ಗೌರವ ಸಿಗಲಿ ಎಂದು ಕೆಲವರು ಅಪೇಕ್ಷಿಸುತ್ತಾರೆ.
ಇನ್ನೊಂದು ಸಮಸ್ಯೆ ಅಮೇರಿಕಾದಿಂದ ಭಾರತಕ್ಕೆ ಹೋಗುವವರಿಗೆ ಆಗುತ್ತದೆ. ಅದೆಂದರೆ ಏನು ಕೊಂಡರೂ ಸ್ವಲ್ಪ ಹೆಚ್ಚಿನ ಬೆಲೆ ಇರುವುದನ್ನು ಕೊಳ್ಳುವುದು. ಅತೀ ಉತ್ತಮ ಹೋಟೆಲ್‌ಗಳಲ್ಲಿ ತಂಗುವುದು, ಉತ್ತಮ ರೆಸ್ಟೋರೆಂಟ್‌ಗಳಲ್ಲಿ ಊಟಮಾಡುವುದು ಇಂಥವುಗಳನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಜನ ತಮ್ಮಲ್ಲಿ ಹಣ ಇಲ್ಲ ಇಂದು ತಿಳಿಯುತ್ತಾರೆ ಎಂದೋ, ಜಿಪುಣ ಎಂದು ತಿಳಿದುಕೊಳ್ಳುತ್ತಾರೆ ಎಂದೋ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಹಣ ಖರ್ಚು ಮಾಡಬೇಕಾಗುತ್ತದೆ.
ಅಮೇರಿಕಾದ ಡಾಲರ್ ಭಾರತದಲ್ಲಿ ಎಂಬತ್ತು ರೂಪಾಯಿಗಳಾಗುವುದರಿಂದ ಇಂಥವುಗಳನ್ನು ತಡೆದುಕೊಳ್ಳಬಹುದು, ಆದರೆ ಒಂದು ಅಮೇರಿಕನ್ ಡಾಲರ್ ಒಂದು ರೂಪಾಯಿ ಆದರೆ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡಬೇಕಾಗುತ್ತದೆ. ಆದರೂ ಭಾರತದ ರೂಪಾಯಿ ಉತ್ತಮ ಸ್ಥಿತಿ ತಲುಪಲಿ ಎಂಬುದೇ ಆಸೆ ಮತ್ತು ಹಾರೈಕೆ.
ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ. ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು ಗಾಡ್, ಲೈಫ್, ಅಂಡ್ ಡೆತ್ (ಕವನ ಸಂಕಲನ), “ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು. “ಲಾಸ್ಟ್ ಲೈಫ್” ಕಥನ ಕವನ ಮತ್ತು “ದ್ವಂದ್ವ” ಕವನ ಸಂಕಲನ ಅಚ್ಚಿನಲ್ಲಿವೆ
ತುಂಬಾ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ sir…