ವಾಪಸ್ಸು ಬರುವಾಗ ಎದುರು ಸಿಕ್ಕವರ ಮುಖ ನೋಡಿದ್ದಕ್ಕಿಂತ ಅವರ ಕಾಲುಗಳನ್ನು ನೋಡಿದ್ದೇ ಹೆಚ್ಚು. ನೂರಾರು ರಕ್ತದ ಜಾಡು ಬಿಟ್ಟರೆ ಕಪ್ಪು ಬಣ್ಣದ ಬಾಟಾ ಚಪ್ಪಲಿಯ ಸುಳಿವೇ ಸಿಗಲಿಲ್ಲ. ಮನೆಗೆ ಬಂದಾಗ ಅಪ್ಪ ಅದೇ ಜಾಗದಲ್ಲಿ ಕೂತು ಬೀಡಿ ಹಚ್ಚಿದ್ದನು. ‘ಹೋಗಿತ್ ಹೋಯ್ತು ಬಿಡಪ್ಪೋ, ಇನ್ನೊಂದ್ ಜೊತೆ ಹೊಸಾದ್ ತಂದ್ರೆ ಆಯ್ತು. ಅದ್ಕೆ ಹಿಂಗ್ ಕಟ್ಗಟ್ಲೆ ಬೀಡಿ ಸೇದ್ಕೊಂಡಿದ್ರೆ ಆ ಚಪ್ಲಿ ಬತ್ತದಾ ನಿನ್ನುಡ್ಕಂಡು’ ಎಂದೆ. ಉತ್ತರವೇನೂ ಬರಲಿಲ್ಲ. ಬೀಡಿಯ ಹೊಗೆಯ ಜೊತೆ ನಿಟ್ಟುಸಿರನ್ನೂ ಬಿಟ್ಟು ಮೌನವಾದನು.
ವಿನಯ ಗುಂಟೆ ಕಥಾ ಸಂಕಲನ “ಬನದ ಕರಡಿ” ಕೃತಿಯ ಒಂದು ಕತೆ “ಅಪ್ಪನ ಚಪ್ಪಲಿ” ನಿಮ್ಮ ಈ ಭಾನುವಾರದ ಓದಿಗೆ
ಬೆಂಗಳೂರಿನಿಂದ ಹೊರಟ ನನ್ನ ಪಲ್ಸರ್ ಗಾಡಿ ನೂರಾರು ಕಿಲೋಮೀಟರ್ ದೂರದ ಊರಿನ ಮನೆಯ ಮುಂದೆ ನಿಂತಾಗ ಆಗಷ್ಟೇ ನೆತ್ತಿಯ ಮೇಲೆ ಚಂದ್ರ ಇಣುಕಲು ಗಡಿಬಿಡಿಯಿಂದ ಮೋಡಗಳ ತೆರೆ ಸರಿಸುತ್ತಿದ್ದ. ಗಾಡಿಯಿಂದ ಇಳಿದವನು ಮನೆಯ ಒಳಗೆ ಹೋಗದೆ ಆಜುಬಾಜು ಮನೆಗಳನ್ನು, ಬೀದಿಗಳನ್ನು ನೋಡಿದೆ. ರಸ್ತೆ ತುಂಬಾ ಸೀರಿಯಲ್ ಸೆಟ್ ಲೈಟುಗಳು ಕ್ಷಣಕ್ಕೊಂದು ಬಣ್ಣ ಬದಲಿಸುತ್ತಾ ಉರಿಯುತ್ತಿದ್ದವು. ಅಕ್ಕಪಕ್ಕದ ಮನೆಗಳ ಅಂಗಳದಲ್ಲಿ ನೆಂಟರಿಷ್ಟರು ಸೇರಿ ಹರಟೆ ಹೊಡೆಯುತ್ತಿದ್ದರೆ, ಚಿಕ್ಕ ಹೈಕಳುಗಳೆಲ್ಲಾ ಸರಿ ಹೊತ್ತಾದರೂ ಮನೆ ಸೇರದೆ ಡಬ್ಬ, ಡೈಡು ಆಟಗಳಾಡುತ್ತಾ ಸಂದಿಗೊಂದಿಗಳಲ್ಲಿ ಅಲೆಯುತ್ತಿದ್ದರು. ಅಲ್ಲೆಲ್ಲೋ ಊರಿನ ಕೇಂದ್ರಭಾಗದ ದೇವಸ್ಥಾನವಿದ್ದ ಸ್ಥಳದಿಂದ ತಮಟೆ, ಅರೆಯ ಶಬ್ದ ಕೇಳಿಸುತ್ತಿತ್ತು. ಅದರ ಜೊತೆಗೆ ನಮ್ಮ ಮನೆಯ ಕರಿನಾಯಿ ನಾನು ಬಂದದ್ದನ್ನು ಗುರುತಿಸಿ ಬಾಲ ಅಲ್ಲಾಡಿಸುತ್ತಾ ಜೋರಾಗಿ ಬೊಗಳುತ್ತಿತ್ತು. ಬೊಗಳುವುದು ಅದರ ಸಹಜ ಗುಣವಾದರೂ ನಾನು ಬಂದಾಗ ಬೊಗಳುವ ರೀತಿಯೇ ಬೇರೆ. ಅದರಿಂದ ಮನೆಯೊಳಗಿದ್ದವರಿಗೂ ನಾನು ಬಂದಿದ್ದು ಅರಿವಾಗುವುದು.
ಒಳಗಿನಿಂದ ಬಂದ ಅಪ್ಪ ನನ್ನನ್ನು ಹೆತ್ತವನೆಂಬ ಯಾವ ಗರ್ವವೂ ಇಲ್ಲದೆ ಗಾಡಿಯಲ್ಲಿದ್ದ ಲಗೇಜನ್ನು ತಾನೇ ಎತ್ತಿಕೊಂಡು ‘ಬಾ ಮಗಾ ಒಳ್ಗೆ, ಗಾಡಿ ಓಡ್ಸಿ ಸಾಕಾಗಿರ್ತಿಯ ಬಾ…… ದೋ ಮಗಂಗೆ ನೀರ್ಕೊಡು’ ಎಂದು ಲಗೇಜಿಡಲು ರೂಮಿಗೆ ಹೋದನು. ಅಕ್ಕ ಕೊಟ್ಟ ನೀರು ಕುಡಿದು ಕುರ್ಚಿಯ ಮೇಲೆ ಕುಳಿತುಕೊಂಡೆ.

(ವಿನಯ ಗುಂಟೆ)
ಹೊರಗಿಂದ ಬಂದ ಯಾರೋ ‘ಚೆನ್ನಾ… ಬಾರೋ ಮಾರಿ ಗುಡಿಗೆ ಉವ್ವ ಹಾಕ್ಬೇಕು’ ಎಂದು ಅಪ್ಪನನ್ನು ಕರೆದುಕೊಂಡು ಹೋದನು. ಅಕ್ಕ, ಅಮ್ಮ ಎಲ್ಲರ ಕ್ಷೇಮ ವಿಚಾರಿಸಿ, ಬಟ್ಟೆ ಬದಲಾಯಿಸಿಕೊಂಡು ಲಂಗೋಟಿಯೂ ಹಾಕದ ಕಾಲದಿಂದ ಗೆಳೆಯನಾಗಿದ್ದ ಹರಿಗೆ ಫೋನಾಯಿಸಿದೆ. ‘ಊರ‍್ಮುಂದ್ಲು ಆಂಜನೇಯಂಗೆ ಆರತಿ ನಡೀತಾದೆ ಬಾ’ ಎಂದನು. ಅಲ್ಲಿಗೆ ಹೋಗಲು ಹೊರ ಬಂದು ಚಪ್ಪಲಿ ನೋಡಿದೆ. ಅರೇ! ಈಗಷ್ಟೇ ಇಲ್ಲೆ ಮನೆಯ ಈಚೆ ಬಾಗಿಲ ಮುಂದೆಯೇ ಬಿಟ್ಟಿದ್ದೆನಲ್ಲಾ, ಎಲ್ಲೊಯ್ತು! ಎಂದು ಅಕ್ಕನನ್ನು ಕರೆಯುವಷ್ಟರಲ್ಲಿ ಇದು ಈಗಷ್ಟೇ ಹೊರಗೆ ಹೋದ ಅಪ್ಪನ ಕೆಲಸವೆಂದು ಅರಿವಾಯಿತು. ಚಪ್ಪಲಿಯನ್ನ ಎತ್ತಿ ವರಾಂಡದ ಅಡ್ಡಗೋಡೆ ಮೇಲೆ ಇರಿಸಿ ಹೋಗಿದ್ದನು. ಇದು ಹೊಸದೇನು ಆಗಿರಲಿಲ್ಲ. ಪ್ರತಿಬಾರಿ ಊರಿಗೆ ಬಂದಾಗಲೂ ಅಪ್ಪ ಹೊರಗೆ ಬಿಟ್ಟಿದ್ದ ಚಪ್ಪಲಿಯನ್ನ ತೆಗೆದು ವರಾಂಡದ ಅಡ್ಡಗೋಡೆ ಮೇಲೆಯೋ, ಬಾತ್ರೂಮಿನಲ್ಲಿಯೋ ಇಟ್ಟು ಬಿಡುತ್ತಿದ್ದ. ನಾ ಹುಡುಕಾಡುವಾಗ ಅವನೇ ತಂದು ಕೊಡುತ್ತಿದ್ದ. ‘ನೀನ್ಯಾಕೆ ಯಾವಾಗ್ಲೂ ಚಪ್ಲಿ ಎತ್ತಿಡದು? ಇಲ್ಲಿದ್ರೆ ಏನಾಯ್ತವೆ?’ ಎಂದರೆ ‘ನಾಯ್ಗಳು ಸರಿ ಇಲ್ಲ, ಕಚ್ಕೊಂಡೋಗಿ ಎಲ್ಲೆಲ್ಲೋ ಬಿಡ್ತವೆ. ಆಮೇಲೆ ಹುಡ್ಕಕ್ಕೆ ಆಗಲ್ಲಾ. ಮೊನ್ನೆ ಮತ್ಯಾರದ್ದೋ ಹಿಂಗೆ ಆಯ್ತುʼ ಅಂತ ‘ಹ್ಹಿಹ್ಹೀಹ್ಹೀ…’ ಹಲ್ಲು ಕಿರಿವನು.
ನನಗೋ ಕೆಲಸಕ್ಕೆ ಸೇರಿ ಸಿಟಿಗೆ ಬಂದಾಗಿಂದ ನಾನು ತೊಡುವ ಚಪ್ಪಲಿಗಳು ಮೆತ್ತಗೆ ಇರಬೇಕು, ಪಾದ ಉರಿ ಬರಬಾರದು, ಬೆವರು ಬರಬಾರದು ಅಂತಹ ಕಾಸ್ಟ್ಲೀ ಚಪ್ಪಲಿಗಳನ್ನೇ ಹಾಕುವುದನ್ನು ರೂಢಿಸಿಕೊಂಡಿದ್ದವನು. ಹೀಗೆ ಹೋದ ಸಾರಿ ಬಂದಾಗಷ್ಟೇ ಕೊಂಡು ಧರಿಸಿದ್ದ ಉಡ್‌ಲ್ಯಾಂಡಿನ ಹೊಸ ಚಪ್ಪಲಿಯನ್ನ ಅಪ್ಪ ಮಾಮೂಲಿ ಜಾಗದಲ್ಲಿ ಇರಿಸದೆ ಒಳಗೆ ತಾನು ಮಲಗುವ ಕೋಣೆಯ ಮೂಲೆಯಲ್ಲಿ ಇರಿಸಿಕೊಂಡಿದ್ದ. ಕೆಲಸಕ್ಕೆ ಹೊರಡಲು ಹೊರಬಂದು ಚಪ್ಪಲಿಗಾಗಿ ಹುಡುಕಾಡುತ್ತಿದ್ದಾಗ ಅಪ್ಪ ಒಳಗಿಂದ ತಂದು ಕೊಟ್ಟನು. ತೊಟ್ಟುಕೊಂಡು ಗಾಡಿ ಹತ್ತಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಪ್ಪನ ಕಾಲು ನೋಡಿದ್ದೆ. ತಾನು ಧರಿಸಿದ್ದ ಪ್ಯಾಂಟಿನ ಒಂದು ತೋಳು ಮೇಲಕ್ಕೂ, ಮತ್ತೊಂದನ್ನು ಕೆಳಕ್ಕೂ ಅಸಮಾನವಾಗಿ ಮಡಚಿಕೊಂಡಿದ್ದನು. ಹಿಮ್ಮಡಿ ತುಂಬಾ ಬಿರುಕುಗಳು, ಸಿಮೆಂಟು ಕಲಸುವ ಕೆಲಸ ಮಾಡುತ್ತಿದ್ದರಿಂದ ಬೂದುಬೂದಾಗಿ ಮರಗಟ್ಟಿಬಿಟ್ಟಿದ್ದವು. ಚಪ್ಪಲಿ ಯಾವ ಕಂಪನಿಯವೆಂದು ತಿಳಿಯಲಿಲ್ಲ. ಅದಕ್ಕೆ ಕಂಪನಿಯ ಹೆಸರೂ ಇರಲಿಲ್ಲ. ಮಾಸಲಾಗಿದ್ದವು. ಮುಂದೆ ಉಂಗುಷ್ಟವೇ ಇರಲಿಲ್ಲ. ತಂತಿ ಸುತ್ತಿ ಬಿಗಿದುಕೊಂಡಿದ್ದನು. ಹಿಮ್ಮಡಿ ಪಾದದ ಕೆಳಗನ್ನು ಕಣ್ಣಿಗೆ ಹಿಡಿದರೆ ದೇಶ ಕಾಣುವಷ್ಟು ಸವೆದು ತೂತಾಗಿತ್ತು. ಕೆಲಸಕ್ಕೆ ದಿನಕ್ಕೊಂದು ಚಪ್ಪಲಿ ಹಾಕಿಕೊಂಡು ಹೋಗುವ ನಾನು ಅಪ್ಪನ ಚಪ್ಪಲಿಯ ಕಡೆ ಗಮನ ಹರಿಸಿದ್ದು ಇದೇ ಮೊದಲು. ದುಡಿಯುವ ನನ್ನನ್ನು ಅವನು ಯಾವೊತ್ತು ಚಪ್ಪಲಿ ಬೇಕೆಂದು ಕೇಳಿದವನಲ್ಲ. ತಾನು ಗಾರೆ ಕೆಲಸದಲ್ಲಿ ದುಡಿವ ಹಣದಲ್ಲಿ ಕೊಂಡವನೂ ಅಲ್ಲ. ಆದರೂ ಹೀಗೆ ಸವೆದು ತೂತಾದ ಚಪ್ಪಲಿಗಳು ಹೋಗಿ ಅಪ್ಪನ ಕಾಲಿಗೆ ಬೇರೆ ಚಪ್ಪಲಿಗಳು ಬಂದು ಸೇರುತ್ತಿದ್ದವು. ಆಗೆಲ್ಲಾ ನಾನು ಅಪ್ಪನೇ ಕೊಂಡುಕೊಂಡು ಬಳಸದೆ ಒಳಗಿಟ್ಟಿದ್ದಿರಬೇಕು ಎಂದುಕೊಂಡು ಅವನಿಗೊಂದು ಹೊಸ ಚಪ್ಪಲಿ ಕೊಡಿಸಬೇಕೆಂಬ ಆಲೋಚನೆಯೇ ಬಾರದೆ ಇದ್ದುಬಿಡುತ್ತಿದ್ದೆ.
ಆದರೇ ಆಗ ಅಪ್ಪನ ಆ ಚಪ್ಪಲಿಗಳ ಸ್ಥಿತಿ ನೋಡಿ ಅವನಿಗೊಂದು ಜೊತೆ ಹೊಸ ಚಪ್ಪಲಿ ಕೊಡಿಸಬೇಕು ಅಂದುಕೊಂಡು ಕೆಲಸಕ್ಕೆ ಹೋಗಿದ್ದೆ.
ಈಗ ಊರಬ್ಬಕ್ಕೆ ಬರುವ ಮೊದಲೇ ಅಪ್ಪನಿಗೆಂದು ಅಂಗಡಿ ಅಂಗಡಿ ಸುತ್ತಿ ಚೆಂದದ ಚಪ್ಪಲಿಗಾಗಿ ಅಲೆದಿದ್ದೆ. ಅವನ ಕಾಲಿನ ಅಳತೆಯೇ ಗೊತ್ತಿಲ್ಲ. ಆದರೂ ನನ್ನ ಕಾಲಿಗಿಂತ ತುಸು ದೊಡ್ಡದಾದ ಬಾಟಾ ಕಂಪನಿಯ ಕಪ್ಪು ಬಣ್ಣದ್ದು, ಪಾದಗಳಿಗೆ ಮೆತ್ತಗೆ ಇರುವಂತಹ ಚಪ್ಪಲಿ ಖರೀದಿಸಿದೆ. ಎಷ್ಟೇ ಆದರೂ ವಯಸ್ಸಿನಲ್ಲಿ ಅವನು ನನಗಿಂತ ದುಪ್ಪಟ್ಟು ದೊಡ್ಡವನಲ್ಲವೇ ಅದಕ್ಕೇ ದೊಡ್ಡ ಅಳತೆಯ ಚಪ್ಪಲಿ.
‘ಅರೆ! ತಂದಿದ್ದ ಚಪ್ಪಲಿಯನ್ನ ಕೊಡುವಷ್ಟರಲ್ಲಿ ಗುಡಿಯ ಕಡೆ ಹೊರಟುಬಿಟ್ಟನಲ್ಲ. ಆಮೇಲೆ ಬಂದ ಮೇಲೆ ಕೊಟ್ಟರಾಯಿತು’ ಎಂದುಕೊಂಡು ಅಡ್ಡಗೋಡೆ ಮೇಲೆ ಅಪ್ಪ ಇರಿಸಿ ಹೋಗಿದ್ದ ಚಪ್ಪಲಿ ತೂರಿಸಿಕೊಂಡು ಆರತಿ ನೋಡಲು ಗೆಳೆಯನಿದ್ದ ಹನುಮಪ್ಪನ ಗುಡಿಯ ಕಡೆ ಹೊರಟೆ.
ತಮ್ಮ ತಮ್ಮ ಯೋಗ್ಯತೆಗೆ ತಕ್ಕಂತೆ ಬಣ್ಣಬಣ್ಣದ ಹೂಗಳಿಂದಲೂ, ಹೊಂಬಾಳೆಗಳಿಂದಲೂ ಸಿಂಗರಿಸಿಕೊಂಡು ಒಳಗೆ ಮಸುಕಾದ ದೀಪದ ಬೆಳಕು ಸೂಸುವ ಆರತಿಗಳನ್ನು ನನ್ನಂತಹ ಯುವಕರ ಕಣ್ಣು ಕುಕ್ಕಿಸುವಂತೆಯೆ ಸಿಂಗರಿಸಿಕೊಂಡ ಹುಡುಗಿಯರು ತಲೆ ಮೇಲೆ ಹೊತ್ತು ತಮಟೆ, ಅರೆ ಬಾರಿಸುವವರ ಹಿಂದೆ ನಡೆದು ಕೊನೆಗೆ ಹನುಮಪ್ಪನ ಗುಡಿಯ ಮುಂದೆ ಇಳಿಸಿ ಆರತಿ ಬೆಳಗಿದರು. ಅವರು ಆರತಿ ಮಾಡಿದ ನಂತರ ಬರಿದೆ ಕೇದಿಗೆ, ಕೆಂಜುಗದ ಹೂಗಳಿಂದಲೋ, ಕಕ್ಕೆ ಹೂಗಳಿಂದಲೂ, ಸಿಂಗರಿಸಿಕೊಂಡಿದ್ದ ಸಣ್ಣಸಣ್ಣ ಆರತಿಗಳು ನಮ್ಮ ಕೇರಿಯವು, ಅವು ಹನುಮಪ್ಪನಿಗೆ ಮುಟ್ಟುಚಿಟ್ಟಾಗದ ಹಾಗೆ ದೂರದಲ್ಲಿ ನಿಂತೇ ಆರತಿ ಮಾಡಿ ಮನೆಯ ಕಡೆ ನಡೆದೆವು. ನಾನು, ನನ್ನ ಗೆಳೆಯನೂ ಮಾರಿ ಗುಡಿಯ ಕಡೆಗೆ ಹೋದೆವು.
ಮೇಲೆ ಸೂರಿಲ್ಲದೆ ತೆಂಗಿನ ಗರಿ ಹೊದಿಸಿದ್ದ, ಸುಣ್ಣದ ಜೊತೆ ಕೆಮ್ಮಣ್ಣಿನಿಂದ ಪಟ್ಟಿ ಮಾತ್ರವೇ ಬಳಿದಿದ್ದ ಮಾರಿ ಗುಡಿ ಮಾವಿನ ಸೊಪ್ಪು, ಬೇವಿನ ಸೊಪ್ಪು ಒಂದಷ್ಟು ಚೆಂಡು ಹೂ ಇಷ್ಟರಿಂದಲೇ ಅಲಂಕರಿಸಿಕೊಂಡು ಹನುಮಪ್ಪನ ಗುಡಿಗೆ ಠಕ್ಕರ್ ಕೊಡುವಂತೆ ಕಂಗೊಳಿಸುತ್ತಿತ್ತು. ಅಲ್ಲೇ ಬಾಗಿಲಲ್ಲಿ ಅಪ್ಪನೂ, ಕೇರಿಯ ಒಂದಿಬ್ಬರೂ ಇದ್ದರು. ಬೆಳಿಗ್ಗೆ ಕೊಂಡ ಹಾಯಲು ಬೇಕಾದ ಸಿದ್ಧತೆಗಾಗಿ ಗೂಬೆಹಳ್ಳದ ಕಾಡಿನಿಂದ ಸಂಜೆಯಷ್ಟೇ ಕಡಿದು ತಂದಿದ್ದ ಹಸಿ ಸೌದೆಗಳಿಗೆ ಬೆಂಕಿ ಹಾಕುತ್ತಿದ್ದರು. ಬೆಳಗ್ಗೆ ಹೊಟ್ಟೆಗೆರಡು ಇಡ್ಲಿ ತಿಂದು ಮಧ್ಯಾಹ್ನ ಏನೂ ತಿನ್ನದೆ ಊರಿಗೆ ಬಂದಿದ್ದರಿಂದ ಹೊಟ್ಟೆಯಲ್ಲಿ ಸಂಕಟವಾಗುತ್ತಿತ್ತು. ಊಟ ಮಾಡಿ ಮತ್ತೆ ಬಂದರಾಯ್ತು ಎಂದು ಅಪ್ಪನ ಬಳಿ ಹೋಗಿ ‘ಊಟ ಮಾಡ್ಕಂಡ್ ಬರೀವಂತೆ ಬಾ’ ಎಂದೆ. ‘ನೀ ವೋಗ್ ಮಾಡು, ಅಷ್ಟ್ರಲ್ಲಿ ಬಂದ್ಬುಟ್ಟೆ’ ಅಂತ್ಹೇಳಿ ಕೊಂಡಕ್ಕೆ ಮತ್ತಷ್ಟು ಸೌದೆ ಸುರಿಯಲು ಹೋದ. ಜತೆಯಿದ್ದ ಗೆಳೆಯನನ್ನು ಎಳೆದುಕೊಂಡು ಮನೆಗೆ ಬಂದೆ.
ಅಕ್ಕ ನೆಂಟರಿಗೆಲ್ಲಾ ಸೇರಿಸಿ ಹೋಳಿಗೆ ಅಡುಗೆ ಮಾಡಿದ್ದಳು. ನನಗೆ ಹೋಳಿಗೆ ಅಂದ್ರೇ ಅಷ್ಟೇನೂ ಇಷ್ಟವಿಲ್ಲ. ಬರಿ ಅನ್ನ ಸಾರನ್ನಷ್ಟೇ ತಿಂದು ಅಪ್ಪನ ಬರುವಿಕೆಗಾಗಿಯೇ ಕಾದು ಕೂತೆ. ಬ್ಯಾಗಿನಲ್ಲಿದ್ದ ಚಪ್ಪಲಿಯ ಬಾಕ್ಸನ್ನು ತೆಗೆದು ದಿವಾನದಡಿ ಇಟ್ಟೆ. ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರಲ್ಲಿ ಹರಟುತ್ತಾ ಕುಳಿತಿದ್ದೆ.
ಅಪ್ಪ ಬಂದವನೆ ಅಕ್ಕನನ್ನು ಕರೆದು ‘ದೋ ವಸಿ ಕೊಬ್ರಿ ಎಣ್ಣೆ ಕೊಡು’ ಎಂದು ಕೇಳಿದ. ‘ಇಷ್ಟೋತ್ತಲ್ಲಿ ಏನುಕ್ಕಪ್ಪೋ’ ಎಂದ ಪ್ರಶ್ನೆಗೆ ಉತ್ತರವೇನೂ ಬರಲಿಲ್ಲ. ಬಾಯಿಯಿಂದ ತನ್ನ ಕೈಗಳಿಗೆ ‘ಉಫ್..ಉಫ್’ ಗಾಳಿ ಊದಿಕೊಳ್ಳುತ್ತಿದ್ದ. ಏಕೆಂದು ಎದ್ದು ಹೋಗಿ ನೋಡಿದರೆ ಕೊಂಡದ ಬೆಂಕಿಯಿಂದ ಕೈ ಸುಟ್ಟಿಸಿಕೊಂಡು ಬಂದಿದ್ದ. ಒಂದೆರಡು ಬೊಬ್ಬೆಗಳೂ ಎದ್ದಿದ್ದವು. ಎಣ್ಣೆ ತಂದ ಅಕ್ಕ ‘ಓವ್ ಸಿವ್ನೇ, ನೀನೊಬ್ನೆನಾ ಇರೋದು ಊರ್ಗೆಲ್ಲಾ ತಳ್ವಾರಾ? ಯೆಲ್ಲಾ ನೀನೆ ಮಾಡಕ್ಕೆ, ನೋಡೀಗ ಏನ್ಮಾಡ್ಕಂಡ್ ಬಂದಿದ್ದಿ!’ ಎಂದು ಬೈಯ್ಯುತ್ತಲೇ ಎಣ್ಣೆ ಹಚ್ಚಿದಳು. ಅಪ್ಪ ಗಪ್ಪನೆ ಗಾಳಿ ಊದಿಕೊಳ್ಳುತ್ತಾ ಹೋಗಿ ತನ್ನ ಮಾಮೂಲು ಜಾಗವಾದ ಮನೆಯ ಹೊರಗಿನ ವರಾಂಡದ ಅಡ್ಡಗೋಡೆಗೆ ಒರಗಿ ಕೂತುಕೊಂಡನು. ಕೈ ಸುಟ್ಟುಕೊಂಡಿದ್ದರಿಂದಲೂ, ಅಕ್ಕ ಬೈದಿದ್ದರಿಂದಲೂ ಅನ್ಯಮನಸ್ಕನಾಗಿ ಗೋಡೆಗೆ ಒರಗಿ ಕುಳಿತು ಏನೋ ಧೇನಿಸುತ್ತಿದ್ದನು.
ದಿವಾನದಡಿಯಿದ್ದ ಹೊಸ ಚಪ್ಪಲಿ ತೆಗೆದುಕೊಂಡು ಹೊರಗೆ ಬಂದೆ. ಅಲ್ಲೆ ಬಾಗಿಲಿನಿಂದ ಆಚೆ ಇತ್ತಲೇ ನೋಟ ನೆಟ್ಟಂತೆ ಇದ್ದ ತಳ ಹರಿದ ಅಪ್ಪನ ಚಪ್ಪಲಿ ನೋಡಿದೆ. ಅವು ನನ್ನನ್ನು ನೋಡಿ ಅಸೂಯೆ ಪಟ್ಟು ಗುರಾಯಿಸುತ್ತಿದ್ದವೆನಿಸಿ ಅಪ್ಪನ ಬಳಿ ಬಂದು ಕೂತೆ.
‘ಇನ್ಮೇಲಿಂದ ಆ ತೂತಾಗಿರೋ ಚಪ್ಲಿ ಎಲ್ಲಾ ಹಾಕ್ಬೇಡ. ಇಗಾ ಹೊಸಾ ಚಪ್ಲಿ’ ಎಂದು ಅವನ ಮುಂದಿರಿಸಿದೆ. ಅಪ್ಪ ಎತ್ತಲೋ ಯೋಚನೆಯಲ್ಲಿದ್ದವನು ತಿರುಗಿ ನೋಡಿದ. ಹೊಸ ಚಪ್ಪಲಿ ನೊಡಿ ಅಪ್ಪನ ಮುಖ ಕಳೆಗಟ್ಟದೇ ‘ಇದೆಲ್ಲಾ ಯಾಕ್ ತಂದೆ, ನನ್ನತ್ರಾ ಚಪ್ಲಿ ಇಲ್ವಾ? ನೋಡಿನ್ನು ಏನಾಗ್ಯವೆ’ ಎಂದ. ‘ಹು ಆ ಮಠಾಧೀಶನ ಚಪ್ಲಿ ನೋಡಿನೇ ಈ ಚಪ್ಲಿ ತಂದಿದ್ದು’ ಎಂದು ಬಾಕ್ಸು ಬಿಚ್ಚಿ ಕೊಟ್ಟೆ. ಕಪ್ಪು ಬಣ್ಣದ ಚಪ್ಪಲಿ. ಹೊಸ ಮದುವೆ ಗಂಡಿಗೆ ಮಾವ ಕೊಡುವ ಚಪ್ಪಲಿಯಂತೆಯೇ ಸಕತ್ ರಿಚ್ಚಾಗಿದ್ದವು. ಅಪ್ಪನ ಮುಖದಲ್ಲೇನು ಬದಲಾವಣೆ ಕಾಣದೇ ನಿರಾಸೆಯಾಯಿತು. ಅವನ ಕಣ್ಣಿನಲ್ಲಿ ಚಪ್ಪಲಿಯ ಬಿಂಬ ಮಾತ್ರ ಕರ್ರಗಿತ್ತು. ‘ಎಷ್ಟಾ ಇದು?’ ಎಂದಿದ್ದಕ್ಕೆ ‘ಎಷ್ಟಾದ್ರು ಆಗ್ಲಿ, ನೀ ಹಾಕ್ಕ ಈಗ’ ಎಂದೆ. ಕುಳಿತಿದ್ದವನು ಎದ್ದು ಹೊಸ ಚಪ್ಪಲಿ ಧರಿಸಲು ಕಾಲುಗಳು ಯಾಕೊ ಅದುರುತ್ತಿದ್ದವು. ಅಳತೆ ದೊಡ್ಡದಾಗಿಯೇ ಇತ್ತು. ಕಾಲು ತೂರಿಸಿದ ತಕ್ಷಣಕ್ಕೆ ಅದು ಅಪ್ಪನ ಕಾಲನ್ನೇ ನುಂಗಿಬಿಟ್ಟಂತಾಯಿತು. ‘ಛೇ! ಸೈಜ್ ಜಾಸ್ತಿ ಆಗ್ಬಿಡ್ತು. ಹೋಗ್ಲಿ ಬಿಡಪ್ಪಾ, ಮತ್ತೇ ಹೋಗ್ತೀನಲ್ಲಾ ಆಗ ಬೇರೆ ಎಕ್ಸ್ಚೇಂಜ್ ಮಾಡ್ಕಂಡ್ ಬತ್ತೀನಿ’ ಅಂದೆ. ಚಪ್ಪಲಿಯನ್ನು ಹಿಂದೆ ಮುಂದೆ ನೋಡಿಕೊಂಡು ಒಂದೆರಡು ಹೆಜ್ಜೆ ನಡೆದು ‘ಇರ್ಲಿ ಬಿಡು ಸ್ವಲೂಪ್ ದೊಡ್ದಾತದೆ. ಏನಾಗಲ್ಲ’ ಅಂತ್ಹೇಳಿ ಬಿಚ್ಚಿ ಮತ್ತೆ ಬಾಕ್ಸಿಗೆ ಹಾಕಲು ಮುಂದಾದನು. ಬಾಕ್ಸು ಕಿತ್ತಿಕೊಂಡವನು ‘ಇವಾಗ ಇವುನ್ನು ಎತ್ತಿಟ್ಕಂಡು ಇನ್ನ ವರ್ಷಕ್ಕೋ, ಆರ್ತಿಂಗ್ಳಿಗೋ ಹಾಕಂತಿಯ ಅಲ್ವಾ’? ಅಂದಾಗ ‘ಮತ್ತೇನು ಈ ವಸಾ ಚಪ್ಲಿನಾಗೆ ಸೀಮೆಂಟ್ ಕಲ್ಸಕ್ಕಾತದಾ?’ ಎಂದು ಮತ್ತೆ ಬಾಕ್ಸಿಗೆ ಹಾಕಲು ಮುಂದಾದಾಗ ‘ಹಬ್ಬ ಮುಗಿಯೋವರ್ಗಾದ್ರು ಹಾಕ್ಕ, ಆಮೇಲೆ ಎತ್ತಿಟ್ಕಂಡು ಎಲ್ಲಾದ್ರು ಇಟ್ಕ’ ಅಂತ ಅಡುಗೆ ಮನೆಯಿಂದ ಅಕ್ಕನ ಮಾತು ಕೇಳಿ ‘ಹ್ಞ್..’ ಎಂದಷ್ಟೇ ಅಂದು ಸುಮ್ಮನಾದನು.
ಊಟಕ್ಕೆ ಮೊದಲು ಅಪ್ಪನಿಗೆ ಮಾಮೂಲು ತೀರ್ಥ ಸೇವನೆಯಾಗಬೇಕಿದ್ದ ಕಾರಣ ಅಕ್ಕ ಬಂದು ಊಟ ಮಾಡೇಳು ಅಂದಾಗ ‘ಇರು ಈಚ್ಗೋಗಿ ಬರ್ತೀನಿ’ ಅಂತ್ಹೇಳಿ ಅದೇ ಹೊಸ ಚಪ್ಪಲಿ ತೊಟ್ಟು ರಸ್ತೆಯ ಉದ್ದಕ್ಕೂ ತೊಡಿಸಿದ್ದ ಬಣ್ಣಬಣ್ಣದ ಬೆಳಕಿನಲ್ಲಿ ಕರಗಿ ಹೋದನು.
ಸ್ವಲ್ಪ ಸಮಯದ ನಂತರ ಬಂದ ಅಪ್ಪ ಗೆಲುವಾಗಿದ್ದನು. ತಡವರಿಸಿ ಕೂತು ಏನೇನೋ ಗೊಣಗುತ್ತಿದ್ದನು. ಅಕ್ಕ ಬಂದು ಊಟ ಕೊಟ್ಟಳು. ತಿಂದಾದ ಮೇಲೆ ನನ್ನ ರೂಮಿಗೆ ಬಂದು ಇಣುಕಿದ. ಮೊಬೈಲಿನಲ್ಲಿ ಕಣ್ಣು ನೆಟ್ಟವನು ಅಲ್ಲಿಂದ ಕಣ್ಣು ಕಿತ್ತು ನೋಡಿದೆ. ಹತ್ತಿರ ಬಂದು ತನ್ನ ದೊಗಳೆ ಪ್ಯಾಂಟಿನ ಜೇಬಿನಿಂದ ದುಡ್ಡಿನ ಗಂಟೊಂದನ್ನು ತೆಗೆದು ಪೂರಾ ಕೊಟ್ಟನು. ‘ಯಾಕೀಗ ಇಷ್ಟು ದುಡ್ಡು, ಎಲ್ಲಿಂದ ಬಂತು, ಯಾರು ಕೊಟ್ಟದ್ದು?’ ಎಂದೆಲ್ಲಾ ಕೇಳಿದೆ. ‘ಗಾರೆ ಕೆಲ್ಸ ಮಾಡಿದ್ದು’ ಒಂದೇ ಉತ್ತರ. ನನ್ನ ಮುಂದಿನ ಪ್ರಶ್ನೆಗೆ ಅಲ್ಲಿ ನಿಲ್ಲದೇ ಆಗಲೇ ಬಾಗಿಲು ದಾಟಿದ್ದ ಅಪ್ಪ ಅಕ್ಕನಿಗೆ ‘ಗುಡಿತಾವೋಗ್ತೀನಿ’ ಅಂತ ಹೇಳಿದ್ದಷ್ಟೇ ಕೇಳಿಸಿದ್ದು. ಹಬ್ಬದ ವರ್ಚಸ್ಸು ಬೆಳಿಗ್ಗೆ ಜೋರಾಗುವುದರಿಂದ ಈಗ ಹೊರಗ್ಹೋಗಿ ಮಾಡುವುದಾದರೂ ಏನು? ನೋಡುವುದಾದರೂ ಏನು? ಒಂದು ದಿನದ ಸುಂದರಿಯರೆಲ್ಲಾ ಹೊರ ಬರದೇ ಇರುವಾಗ ಎಂದು ಕಂಬಳಿ ಗುಬರಾಕಿಕೊಂಡು ಮೊಬೈಲಿನಲ್ಲೇ ಯೂನಿವರ್ಸಲ್ ಸುಂದರಿಯರನ್ನು ನೋಡಿ ಮಲಗಿಕೊಂಡೆ.
ಇನ್ನೂ ಪೂರ್ವದ ಬೆಳಕಿನ ಸುಳಿವಿರಲಿಲ್ಲ, ಆಗಲೇ ಊರೆಲ್ಲಾ ಎದ್ದು ಗಿಜುಗುಡುತ್ತಿತ್ತು. ತಮಟೆಯ ಸದ್ದು, ಮನೆಯಲ್ಲಿ ನೆಂಟರಿಷ್ಟರ ಗಲಾಟೆ ನಿದ್ದೆ ಇನ್ನೂ ಆರದಿದ್ದರೂ ಎಚ್ಚರವಾಗುವ ಹಾಗೆ ಮಾಡಿತು. ಬೆಳಿಗ್ಗೆಯೇ ಮಾರಮ್ಮನಿಗೆ ಆರತಿ, ಕೊಂಡ, ಬಲಿ ಇದ್ದಿದ್ದರಿಂದ ಊರೆಲ್ಲವೂ ತಯಾರಿಯಲ್ಲಿತ್ತು. ಮನೆ ಮನೆಗೆ ಬರುತ್ತಿದ್ದ ತಮಟೆಯವರು ಆರತಿ ಹೊರಗೆ ಹೋಗುವವರೆಗೂ ಅಲ್ಲಿಂದ ಹೊರಡುತ್ತಿರಲಿಲ್ಲ. ತಮಟೆಯವರನ್ನು ಕಾಯಿಸುವ ಮನೆ ಅವರಿಗೆ ನೂರ ಒಂದು ರೂ ಕಾಣಿಕೆ ಸಲ್ಲಿಸಬೇಕಿತ್ತು. ಹಾಗಾಗಿ ಎಲ್ಲರೂ ತಮಟೆಯವರು ಬರುವ ಹೊತ್ತಿಗೆ ಆರತಿಯೊಂದಿಗೆ ಬಾಗಿಲಿನಲ್ಲಿ ರೆಡಿಯಾಗಿರುತ್ತಿದ್ದರು. ಆರತಿ ಹೊತ್ತುಕೊಂಡ ಅಕ್ಕನ ಹಿಂದೆ ನಾನೂ ತಮಟೆಯವರನ್ನು ಹಿಂಬಾಲಿಸಿದೆ. ಅಕ್ಕಪಕ್ಕದಲ್ಲಿ ಒಬ್ಬರಿಗೊಬ್ಬರದು ಮೀರಿಸುವಂತಹ ಆರತಿಗಳು, ಅವನ್ನು ಮೀರಿದ ಅವರ ಅಂದವೂ ಇನ್ನೂ ಸೂರ್ಯ ಮೂಡದಿದ್ದರೂ ಕಂಗಳಿಗೆ ಬೆಳಕನಿತ್ತವು. ಹಾಗೆ ನನ್ನಂತೆಯೆ ನನ್ನ ಇತರ ಗೆಳೆಯರೂ ಅದೇ ಗುಂಪಿಗೆ ಸೇರಿಕೊಂಡು ಆರತಿ ಹೊತ್ತಿದ್ದ ಹುಡುಗಿಯರ ಸೀರಿಯಿಂದ ಅದರ ಸೆರಗಿನ ಚಿತ್ತಾರದ ಬಗ್ಗೆಯೂ ಚರ್ಚಿಸಿಕೊಂಡು ಹಿಂಬಾಲಿಸಿ ಅದೇ ಮಾರಮ್ಮನ ಗುಡಿಯ ಬಳಿ ಬಂದಾಗ ಅಪ್ಪ ರಾತ್ರಿಯೆಲ್ಲಾ ಉರಿಸಿದ್ದ ಕೊಂಡದಲ್ಲಿ ಕೆಂಡಗಳನ್ನು ತಿರುವುತ್ತಿದ್ದನು. ಕೆಂಡ ಆದಷ್ಟೂ ಬೂದಿಯಾದರೆ ಕೊಂಡ ಹಾಯುವವರಿಗೆ ಹೆಚ್ಚು ಸುಡುವುದಿಲ್ಲ ಎಂದು ಹಾಗೆ ಮಾಡುತ್ತಿದ್ದನು.
ಗುಡಿ ಸಮೀಪಿಸುತ್ತಿದ್ದಂತೆ ತಮಟೆ, ಅರೆ ಬಾರಿಸುವವರು ಹುಚ್ಚೆದ್ದವರಂತೆ ಬಾರಿಸುತ್ತಿರಲು ಊರಿನ ಎಲ್ಲಾ ಬೀದಿಗಳ, ಎಲ್ಲಾ ಮನೆಯ ಆರತಿಗಳು ಕೂಡಿಕೊಂಡವು.
ಗುಡಿಯ ಪೂಜಾರಿ ಅವನೇನು ಜನಿವಾರ ಹಾಕಿದವನಲ್ಲ. ಚಡ್ಡಿಯ ಮೇಲೆ ಕೆಂಪಗಿನ ತುಂಡು ಪಂಚೆಯಷ್ಟನ್ನೇ ಉಟ್ಟಿದ್ದ ನಮ್ಮದೇ ಕೇರಿಯ ಮುಂಚಾಮಿ. ಕೊಂಡದ ಮುಂಭಾಗ ಬಂದು ಕೊಂಡಕ್ಕೆ ಎಡೆ ಇಟ್ಟು, ಪೂಜೆ ಮಾಡಿ, ಆರತಿ ಬೆಳಗಲು ಶುರು ಮಾಡಿದನು. ಆರತಿ ಬೆಳಗುತ್ತಾ ವಿಚಿತ್ರವಾಗಿ ಕೂಗಿಕೊಳ್ಳಲು ಶುರುಮಾಡಿದನು. ಕೊಂಡದ ಎರಡೂ ಬದಿಗೆ ನಿಂತಿದ್ದವರಲ್ಲಿ ನಾಲ್ಕೈದು ಜನ ಸೇರಿ ಪೂಜಾರಿಯನ್ನು ಪಟ್ಟನೆ ಹಿಡಿದುಕೊಂಡರು. ಅವನನ್ನು ಹಿಡಿದು ನಿಲ್ಲಿಸಲು ಹರಸಾಹಸ ಪಡುತ್ತಿದ್ದರು. ಗುಡಿಯ ಪಕ್ಕದಲ್ಲಿ ಅರೆ ಬಾರಿಸುತ್ತಿದ್ದವರು ಈಗ ಪೂಜಾರಿಯ ಮುಂದೆ ಬಂದು ಬಾರಿಸಲು ಶುರುಮಾಡಿದಾಗ ಪೂಜಾರಿ ಅದೇಕೋ ಮತ್ತಷ್ಟು ಆಕ್ರೋಶಭರಿತನಾಗಿ ಕಿರುಚುತ್ತಾ ಕುಣಿಯುತ್ತಿದ್ದನು. ಯಾರೋ ಅವನ ಕೈಗೆ ಬೇವಿನಸೊಪ್ಪು ಕೊಟ್ಟರು. ಮಾರಿ ಮೈ ಮೇಲೆ ಬಂದಿರುವಳೆಂದು ಎಲ್ಲರೂ ಭೀತರಾಗಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದರು. ಕಿವಿ ಕಚ್ಚುವಷ್ಟು ಅರೆಯ ಶಬ್ದದ ನಡುವೆಯೂ ‘ಲೋ… ಎಲ್ಲೋ ಇದಿಯಾ ಗೌಡ? ಬಾರೋ ಮುಂದಕ್ಕೆ. ನಾನ್ ಬರ್ತೀನಿ ಅಂತ ಗೊತ್ತಿಲ್ವೇನೋ ನಿಂಗೆ? ಹಾ.. ಬಾರೋ ಮುಂದಕ್ಕೆ. ನಿನ್ ಎದೆ ಬಗ್ದು ಮಾಲೆ ಮಾಡ್ಕಂತಿನಿ! ನಿನ್ ಮೈಯ್ಯಾಗಿನ್ ಕೊಬ್ಬಲ್ಲೇ ದೀಪ ಉರುಸ್ತೀನಿ! ಬಾರೋ ಮುಂದಕ್ಕೆ…’ ಎಂದು ಅಲ್ಲಿ ನೆರೆದಿದ್ದ ಎಲ್ಲರಿಗೂ ಕೇಳಿಸುವಷ್ಟು ಜೋರಾಗಿ ಕಿರುಚಲು ಅಲ್ಲೇ ಊರಿನ ಇತರ ಮುಖ್ಯಸ್ಥರೊಂದಿಗೆ ಇದ್ದ ಗೌಡ, ಪಂಚಾಯ್ತಿ ಮೆಂಬರ‍್ರು ಆದ ಮಾದೇಗೌಡ್ರು ಪಂಚೆ ಇಳಿಬಿಟ್ಟುಕೊಂಡು ಬೆನ್ನು ಬಾಗಿಸಿ ಕೈ ಮುಗಿದು ಪೂಜಾರಿ ಮುಂಚಾಮಿಯ ಮುಂದೆ ನಿಂತನು. ‘ಹೇಳವ್ವ ಏನ್ ಅಪ್ಣೆ ಕೊಡ್ತಿ, ನಾನ್ ಮುಂದೆ ನಿಂತು ತೀರುಸ್ತೀನಿ’ ಅಂತ ಹೇಳುತ್ಲೇ, ‘ನೀ ಏನೋ ತೀರ್ಸೋದು…? ತೀರುಸ್ಕಳದು ನಂಗ್ ಗೊತ್ತಿಲ್ವಾ? ವಂಶಾ.. ವಂಶ ಮುರ್ಕಂಡೋಯ್ತೀನಿ!’ ಅಂತ ಹೇಳಿದ. ಅದಕ್ಕೆ ಗೌಡ ‘ಏನಾರ ತ್ಯಪ್ ಮಾಡಿದ್ರೆ ಮಕ್ಳು ಅಂತ ಹೊಟ್ಟೆಗ್ ಹಾಕ್ಕಂಡ್ ಅಪ್ಣೆ ಕೊಡವ್ವಾ..’ ಎಂದು ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಕೈಲಿದ್ದ ಬೇವಿನ ಸೊಪ್ಪಿನಿಂದ ರಪ್ಪನೆ ಗೌಡನ ಬೆನ್ನಿಗೆ ನಾಲ್ಕೈದು ಬಾರಿ ಹೊಡೆದ ಪೂಜಾರಿ ‘ಏಳೋ ಗೌಡ, ನಂಗೆ ಸೂರಿಲ್ವಲ್ಲೋ, ಬಿಸ್ಲಾಗೆ ನಿಲ್ಲಕ್ಕಾಯ್ತಿಲ್ವಲ್ಲೋ. ಅದ್ಕೆ ನೆಳ್ ಮಾಡ್ಸೋ, ಮಾಡುಸ್ತೀಯ ಇಲ್ವಾ’? ‘ಹೂ ತಾಯಿ ಮಾಡುಸ್ತೀನಿ’. ‘ವರ್ಷ ಪೂರ್ತಿ ನಂಗ್ ಹಚ್ಚೋ ದೀಪ ಆರ್ದೇ ಇರಂಗ ನೋಡ್ಕೊಳೋ’, ‘ಹೂ ತಾಯಿ,’ ‘ನಾನು ಊರ್ಗೆ ಏನು ಕೇಡಾಗ್ದಂಗೆ ಕಾಯ್ತೀನಿ. ಆಯ್ತೇನೋ…’ ಅನ್ನಲು ಅದಕ್ಕೆ ಗೌಡ ‘ನಿನ್ ಅಪ್ಣೆ ಕಣವ್ವ’ ಎಂದನು. ಎಲ್ಲರೂ ಕೈ ಮುಗಿಯಲು ಪೂಜಾರಿ ಅರೆಯ ಸೌಂಡಿಗೆ ಮತ್ತೆ ಕುಣಿಯುತ್ತಾ ಕುಣಿಯುತ್ತಾ ಕೊಂಡದ ಮೇಲೆ ಓಡಿಬಂದು ಹಾಗೆ ಹಿಂದಕ್ಕೆ ಬೀಳುವಷ್ಟರಲ್ಲಿ ಅವನ ಹಿಂದೆಯೇ ಒಂದಷ್ಟು ಜನ ಓಡಿ ಬಂದು ಅವನು ಕೊಂಡಕ್ಕೆ ಬೀಳದಂತೆ ಹಿಡಿದುಕೊಂಡರು. ಹರಕೆ ಕಟ್ಟಿಕೊಂಡಿದ್ದವರು, ಕೊಂಡ ಹಾಯುವವರು ಹಾದ ಮೇಲೆ ಅದಕ್ಕೆ ಅಳ್ಳು ಸುರಿದರು.
ಮಾರಿ ಗುಡಿಗೆ ಆರತಿ ಬೆಳಗಿದ ಎಲ್ಲರೂ ತಮ್ಮ ಆರತಿಯಲ್ಲಿನ ಸ್ವಲ್ಪ ಹೂವು, ಹೊಂಬಾಳೆಯನ್ನು ಕಿತ್ತು ಗುಡಿಯ ಒಳಗೆ ಎಸೆದರು. ಅವರ ಹಿಂದೆಯೇ ಎರಡು ಓತಗಳನ್ನು ತಂದು ಬಲಿ ಕೊಡಲಾಯಿತು. ಒಂದನ್ನು ನಮ್ಮ ಕೇರಿಯ ಕಡೆ ಸಾಗಿಸಿದರೆ ಇನ್ನೊಂದು ಊರಿನ ಕಡೆ ಸಾಗಿತು. ಮನೆ ಮನೆಗಳಿಂದ ವೈಯಕ್ತಿಕ ಶಕ್ತ್ಯಾನುಸಾರ ಕುರಿ, ಕೋಳಿ ಬಲಿ ನಡೆಯಿತು. ಆಗ ಅಪ್ಪನೇ ಅಲ್ಲಿನ ಕೋಳಿಗಳ ಕತ್ತು ಕುಯ್ದು ರಕ್ತ ಚಿಮ್ಮಿಸಿ ಅವುಗಳ ತಲೆಯನ್ನು ಗುಡಿಯ ಪೂಜಾರಿಗೂ, ಉಳಿದ ಭಾಗವನ್ನು ಅದರ ಮಾಲೀಕರಿಗೂ ಕೊಡುತ್ತಿದ್ದನು. ಕತ್ತು ಕೊಯ್ದಾಗ ಚಿಮ್ಮಿದ ರಕ್ತ ಅಪ್ಪನ ಬಟ್ಟೆ, ಕೈ ಕಾಲು ಅಲ್ಲದೇ ಮುಖಕ್ಕೂ ಚಿಮ್ಮಿ ದೇವಿ ಮಾರಮ್ಮನಿಗೆ ಅಣ್ಣನೋ, ತಮ್ಮನೋ ಇದ್ದಿದ್ದರೆ ವರ್ಷದ ಕೂಳು ಬಿಟ್ಟು ಹೇಗೆ ಬಡಕಲಾಗಿರುತ್ತಿದ್ದನೋ ಹಾಗೆ ಇದ್ದ. ಹಾಗೆ ನಮ್ಮ ಮನೆಗೂ ಕೂಡ ಒಂದು ಪೊಗದಸ್ತಾದ ಹುಂಜವನ್ನು ಒಂದೇ ಕೈನಲ್ಲಿ ಹಿಡಿದು ಚರಚರನೆ ಕೊಯ್ದು ಅದನ್ನು ನನ್ನ ಕೈಗೆ ಕೊಟ್ಟು ‘ತಂಗಂಡೋಗು ಮನೇಗೆ, ನಾ ಆಮೇಲ್ ಬತ್ತೀನಿ’ ಎಂದಷ್ಟೇ ಹೇಳಿ ಅದೇ ಕೋಳಿಗಳ ಕತ್ತು ಕೊಯ್ಯಲು ತೊಡಗಿದನು. ನಾನು ರಕ್ತ ಚಿಮ್ಮಿಸಿ ನಿಸ್ತೇಜವಾದ ಸತ್ತ ಹುಂಜದ ಕಾಲುಗಳನ್ನು ಹಿಡಿದು ರಕ್ತ ನೆಲಕ್ಕೆ ಸೋರುವ ಹಾಗೆ ಮನೆಯ ಕಡೆ ನಡೆದೆ. ಅದರ ರಕ್ತ ಮನೆಯವರೆಗೂ ಸೋರಿ ಮಾರಿ ಗುಡಿಯ ದಾರಿ ತೋರಿಸುತ್ತಿತ್ತು.
ಎಲ್ಲರ ಮನೆಗಳಲ್ಲಿಯೂ ಮಸಾಲೆಯ ವಾಸನೆ. ಜೊತೆಗೆ ಬೆಂಕಿಗೆ ಹಿಡಿದು ಸೀಯುವ ಕೋಳಿಗಳ ಪುಕ್ಕದ ಕಮರು ವಾಸನೆ ಒಟ್ಟೊಟ್ಟಾಗಿಯೇ ಕೇರಿಯಿಂದ ಊರಿಗೂ, ಊರಿನಿಂದ ಕೇರಿಗೂ ಯಾವ ಗಡಿರೇಖೆಯೂ ಇಲ್ಲದೆ ಹರಡುತ್ತಿತ್ತು. ಮನೆಯಲ್ಲಿ ನಮಗ್ಯಾರಿಗೂ ಹುಂಜ ಕ್ಲೀನ್ ಮಾಡಲು ಬಾರದ ಕಾರಣ ಅದಕ್ಕೂ ಅಪ್ಪನೇ ಬರಬೇಕಿತ್ತು. ಅಪ್ಪ ಬಂದನು. ಬಂದವನೇ ರೆಡಿಯಿದ್ದ ಬಿಸಿ ನೀರಿನಲ್ಲಿ ಕೋಳಿಯನ್ನು ಅದ್ದಿ, ಪುಕ್ಕ ಕಿತ್ತು, ಕಳ್ಳುಪಚ್ಚಿ ಎಲ್ಲಾ ತೆಗೆದು ಮಾಂಸವನ್ನು ತುಂಡು ಮಾಡಿ ಕೊಟ್ಟು ಮನೆ ಮುಂದೆ ಗೋಡೆಗೆ ಒರಗಿ ಕೂತವನು ಒಂದೇ ಸಮನೇ ನಾಲ್ಕೈದು ಬೀಡಿಗಳನ್ನು ಸೇದಿ ಬಿಸಾಡಿದ. ಮತ್ತೊಂದಕ್ಕೆ ಜೇಬು ತಡಕಾಡಿದ. ಬೀಡಿ ಸಿಗದಿದ್ದಕ್ಕಾಗಿ ಸಿಟ್ಟುಗೊಂಡು ‘ಇದ್ರಮ್ಮನ್ ಇದು ಕಾಲಿ ಆಯ್ತಾ!’ ಅಂತ ಅಲ್ಲೆ ಸೇದಿ ಹಾಕಿದ್ದ ಮೋಟು ಬೀಡಿಯಲ್ಲಿ ಒಂದನ್ನು ಆರಿಸಿ ಬೆಂಕಿ ಹಚ್ಚಿದ. ಅದೂ ಪೂರಾ ಉರಿದು ಆರಿ ಹೋಯಿತಾದರು ಅವನ ಒಳಗೇನೋ ಉರಿ ಇನ್ನು ಹೊಗೆಯಾಡುತ್ತಿತ್ತು. ಕಣ್ಣು ಕೆಂಪೇರಿದ್ದು ಅಲ್ಲಿ ಕೆಳಗೆ ಜಾರಲೆಂದೇ ಕಾದಿದ್ದ ಕಣ್ಣೀರು ಮಡುಗಟ್ಟಿತ್ತು.
ಅರೇ! ದೇವಸ್ಥಾನದಲ್ಲಿ ಲಗುಬಗೆಯಿಂದ ಕೋಳಿ ಕತ್ತು ಕತ್ತರಿಸುತ್ತಿದವನು ಈಗಷ್ಟೇ ಹುಂಜವನ್ನು ಕ್ಲೀನ್ ಮಾಡಿ ಕೊಟ್ಟವನು ಹೀಗೇಕೆ ಹೀಗೆ ಇಷ್ಟೊಂದು ಬೀಡೀ ಸೇದಿ ಒಳಗೇ ಉರಿಯುತ್ತಿದ್ದಾನಲ್ಲಾ ಎನಿಸಿ ಬೆಳಿಗ್ಗೆ ಪೂಜಾರಿಯ ಮೇಲೆ ಮಾರಿ ಬಂದದ್ದು ನೆನಪಾಯಿತು. ಅಳುಕಿನಿಂದಲೇ ಹತ್ತಿರ ಹೋಗಿ ಕೇಳಿದೆ ‘ಯಾಕಪ್ಪೋ ಏನಾಯ್ತು? ಯಾಕಿಂಗ್ ಆಡ್ತಿದ್ದಿ? ನಿನ್ ಮೇಲು ಮಾರಿ ಏನಾದ್ರೂ ಬಂದ್ಲಾ…?’ ಎಂದೆ. ಕತ್ತೆತ್ತಿ ನೋಡಿದವನು ಏನೂ ಮಾತನಾಡಲಿಲ್ಲ. ಆತಂಕ ಹೆಚ್ಚಿ ಮತ್ತೆ ಕೇಳಿದೆ. ತಲೆ ಬಗ್ಗಿಸಿಕೊಂಡೇ ‘ನೆನ್ನೆ ನೀನ್ ತಂದಿತ್ ಹೊಸಾ ಚಪ್ಲಿ ಗುಡಿತಾವ ಕಳ್ದಬಿಟ್ವು! ಯಾರೋ ಎತ್ಬಿಟ್ಟವ್ರೆ’ ಎಂದಾಗ ಇಷ್ಟೊತ್ತು ಇದ್ದ ಕಟ್ಟೆ ಹೊಡೆದು ಬುಳುಬುಳನೆ ನೆಲದ ಮೇಲೆ ಕಣ್ಣೀರು ಸುರಿಯುತ್ತಿತ್ತು. ‘ಹೌದಾ!’ ಎಂದವನು ಹೊರಗೆಲ್ಲಾ ನೋಡಿದೆ. ಎಲ್ಲೂ ಚಪ್ಪಲಿ ಕಾಣಿಸಲಿಲ್ಲ. ‘ಅಯ್ಯೋ! ರಾತ್ರಿ ಅಲ್ಲೇ ಗುಡಿತಾವ ಎಲ್ಲೋ ಬಿಟ್ಟಿರ್ತೀಯ. ನೆನ್ಪ್ ಮಾಡ್ಕಂಡ್ ಹುಡ್ಕೊಗು ಸಿಗ್ತಾವೆ. ಮನೆತಾವೇ ಅಷ್ಟು ಸೇಫ್ ಮಾಡಿ ಎತ್ತಿಡ್ತೀಯಾ. ಇನ್ನ ಗುಡಿತಾವ ಕಳ್ಕಂಡಾ!’ ಎಂದೆ ‘ಇಲ್ಲ ಕಣಪ್ಪಾ, ಸಿಗ್ಲಿಲ್ಲಾ! ಎಲ್ಲಾ ಕಡೆ ನೋಡ್ದೆ, ಎಲ್ಲೂ ಸಿಗ್ಲಿಲ್ಲ. ರಾತ್ರಿ ಗುಡಿ ಪಕ್ದಲ್ಲಿ ಬಿಟ್ಟು ಅದ್ರು ಮೇಲೆ ಗರಿ ಹಾಕಿ ಮುಚ್ಚಿದ್ದೆ. ಈಗ್ ನೋಡುದ್ರೆ ಗರೀನೂ ಇಲ್ಲ! ಚಪ್ಲೀನೂ ಇಲ್ಲ! ರಾತ್ರಿ ಹಳೆ ಚಪ್ಲಿನೆ ಹಾಕಂಡೋಗ್ತಿದ್ದೆ. ನೀನೆ ಹಾಕ್ಸಿ ಕಳ್ಸಿದ್ದು, ಈಗ್ನೋಡು ಯಾರೆತ್ಕೊಂಡೋದ್ರೋ…?’ ಎಂದು ಹೊಸ ಚಪ್ಪಲಿ ಕಳುವಿನ ಮೂಲ ಕಾರಣ ನನ್ನ ಮೇಲೆ ಹಾಕಿ, ತನ್ನ ದೊಗಳೆ ಪ್ಯಾಂಟಿನ ಜೇಬಿನಲ್ಲಿ ಇದ್ದ ಚಿಲ್ಲರೆ ಹುಡುಕಿ ಬೀಡಿಗಾಗಿ ಅಂಗಡಿಗೆ ಹೋದನು.
ನಾನು ಅದೇ ಬೆಳಿಗ್ಗೆ ಸುರಿಸಿಕೊಂಡು ಬಂದಿದ್ದೆನಲ್ಲಾ ಕೋಳಿ ರಕ್ತದ ಜಾಡು ಹಿಡಿದು ಮಾರಿ ಗುಡಿಯ ಕಡೆ ಹೋಗಿ ಅಲ್ಲೆಲ್ಲಾ ಹುಡುಕಾಡಿದೆ. ಅಲ್ಲೆಲ್ಲು ಸಿಗದೆ ವಾಪಸ್ಸು ಬರುವಾಗ ಎದುರು ಸಿಕ್ಕವರ ಮುಖ ನೋಡಿದ್ದಕ್ಕಿಂತ ಅವರ ಕಾಲುಗಳನ್ನು ನೋಡಿದ್ದೇ ಹೆಚ್ಚು. ನೂರಾರು ರಕ್ತದ ಜಾಡು ಬಿಟ್ಟರೆ ಕಪ್ಪು ಬಣ್ಣದ ಬಾಟಾ ಚಪ್ಪಲಿಯ ಸುಳಿವೇ ಸಿಗಲಿಲ್ಲ. ಮನೆಗೆ ಬಂದಾಗ ಅಪ್ಪ ಅದೇ ಜಾಗದಲ್ಲಿ ಕೂತು ಬೀಡಿ ಹಚ್ಚಿದ್ದನು. ‘ಹೋಗಿತ್ ಹೋಯ್ತು ಬಿಡಪ್ಪೋ, ಇನ್ನೊಂದ್ ಜೊತೆ ಹೊಸಾದ್ ತಂದ್ರೆ ಆಯ್ತು. ಅದ್ಕೆ ಹಿಂಗ್ ಕಟ್ಗಟ್ಲೆ ಬೀಡಿ ಸೇದ್ಕೊಂಡಿದ್ರೆ ಆ ಚಪ್ಲಿ ಬತ್ತದಾ ನಿನ್ನುಡ್ಕಂಡು’ ಎಂದೆ. ಉತ್ತರವೇನೂ ಬರಲಿಲ್ಲ. ಬೀಡಿಯ ಹೊಗೆಯ ಜೊತೆ ನಿಟ್ಟುಸಿರನ್ನೂ ಬಿಟ್ಟು ಮೌನವಾದನು. ಅಂಗಳವೆಲ್ಲಾ ಅಪ್ಪ ಸೇದಿದ್ದ ಬೀಡಿಯ ಹೊಗೆಯಿಂದಲೇ ತುಂಬಿ ಅಲ್ಲೇ ಇದ್ದ ನನಗೆ ಆ ಹೊಗೆಗೋ ಅಪ್ಪನ ಮೌನಕ್ಕೋ ಉಸಿರು ಕಟ್ಟಿದಂತಾಗಿ ಅಲ್ಲಿ ನಿಲ್ಲಲು ಆಗದೆ ಒಳಗೆ ಬಂದು ಬಿಟ್ಟೆ.
ಅಡುಗೆಯೆಲ್ಲಾ ಆದಮೇಲೆ ಅಕ್ಕ ಎಲ್ಲರಿಗೂ ಊಟಕ್ಕೆ ಕೂರಲು ಹೇಳಿದಳು. ಹೊರಗೇ ಇದ್ದ ಅಪ್ಪನನ್ನು ಎಷ್ಟು ಕರೆದರೂ ತಾನು ಕೂತಿದ್ದ ಜಾಗ ಬಿಟ್ಟು ಕದಲಲಿಲ್ಲ. ನೆಂಟರ ಬಲವಂತಕ್ಕೂ ಅಪ್ಪ ಬಗ್ಗಲೇ ಇಲ್ಲ. ‘ನಂಗ್ ಈಗ್ಲೆ ಬ್ಯಾಡ. ನೀವ್ಮಾಡಿ’ ಎಂಬುದಷ್ಟೇ ಅವನ ಪ್ರತಿಕ್ರಿಯೆಯಾಗಿತ್ತು. ನೆಂಟರದ್ದೆಲ್ಲಾ ಊಟವಾದಮೇಲೆ ಹಸಿವಿನ ಕಾರಣಕ್ಕಾಗಿ ಸ್ವಲ್ಪವೇ ಊಟ ಮಾಡಿ ಮಲಗಿಕೊಂಡೆ. ಸಂಜೆ ಎಚ್ಚರಾದಾಗ ನೋಡಿದಾಗಲೂ ಅಪ್ಪ ಅಲ್ಲಿಯೇ ಕೂತಿದ್ದವನು ಆಚೀಚೆ ಕದಲಿರಲಿಲ್ಲ. ಹೆಚ್ಚುವರಿ ಬೀಡಿಯ ತುಂಡುಗಳು ಮಾತ್ರ ಅಡ್ಡಾದಿಡ್ಡಿ ಬಿದ್ದಿದ್ದವು. ‘ಹೋಗಿತ್ ಹೋಯ್ತು, ಹೋದ್ರೆ ಏನಾಯ್ತು? ಮತ್ತೆ ಹೊಸಾದು ತಂದ್ರಾಯ್ತು. ಅದ್ಕೆ ಹಿಂಗೆ ಹಬ್ಬುದ್ ದಿನ ಬಾಡಿಟ್ಟು ಉಣ್ಣದ್ ಬಿಟ್ಟು ಮಂಕಾಗಿ ಕುತ್ಕಂಡ್ರೆ ಹೆಂಗೆ’ ಅಂತ ರೇಗಬೇಕೆನಿಸಿತು. ನಾನು ಚಿಕ್ಕವನಿದ್ದಾಗ ಅಪ್ಪ ತಂದಿದ್ದ ರಬ್ಬರ್ ಬಾಲು ಆಡಲು ಹೋದಾಗ ಅದು ಕಳುವಾಗಿ ನಾನು ಕೂಡ ಹೀಗೆಯೇ ಅಳುತ್ತಾ ಮೂಲೆ ಹಿಡಿದಿದ್ದೆ. ಆಗ ನನ್ನ ಅಳು ರಬ್ಬರ್ ಬಾಲು ಕಳುವಾದದ್ದಕ್ಕೆ ಆಗಿರದೇ ಮತ್ತೊಂದು ರಬ್ಬರ್ ಬಾಲಿನ ಬೇಡಿಕೆಯಾಗಿ ಅತ್ತಿದ್ದೆ. ಆದರೇ ಈಗ ದುಡಿಯುವ ನಾನು ತಂದ ಚಪ್ಪಲಿ ಕಳೆದುಕೊಂಡ ಅಪ್ಪ ಬೇರೆ ಚಪ್ಪಲಿಗಾಗಿ ಹೀಗೆ ಮೌನವಾಗಿರದೇ ಅದೇ ಕಳುವಾದ ಚಪ್ಪಲಿಗಾಗಿಯೇ ಹೀಗೆ ಬೆಳಿಗ್ಗೆಯಿಂದ ಊಟ ಬಿಟ್ಟು ಒಂದು ರೀತಿಯ ಅಘೋಷಿತ ಸ್ಟ್ರೈಕ್ ನಡೆಸುತ್ತಿದ್ದ. ನನಗೆ ಆ ಚಪ್ಪಲಿ ಸಾವಿರದವರೆಗಿನ ಬೆಲೆಯಾಗಿ ಮಾತ್ರವೇ ಕಂಡಿತ್ತು. ಆದರೇ ಅಪ್ಪನೊಳಗೆ ಏನಾಗಿತ್ತೋ ಗೊತ್ತಾಗದೇ ನನಗೂ ಚಡಪಡಿಕೆ ಶುರುವಾಯಿತು.
ಗಳಿಗೆಗೊಂದು ಸಾರಿ ತಣಾರಿಸುತ್ತಾ ಬಣ್ಣ ಬದಲಿಸುವ ಸೀರಿಯಲ್ ಸೆಟ್ಟಿನ ಬೆಳಕಿನಿಂದ ಕತ್ತಲಿಗೆ ಜೀವ ಬಂದು ಬಂದು ಹೋಗುವಂತಿತ್ತು. ನೆತ್ತಿ ಮೇಲೆ ಅರ್ಧ ಚಂದ್ರ ಮಾತ್ರನಿದ್ದ. ಎಷ್ಟು ಹೊತ್ತಾದರೂ ಅಪ್ಪ ಒಳಗೆ ಬರಲಿಲ್ಲ, ಉಣಲೂ ಇಲ್ಲ. ಹೋಗಿ ಅಪ್ಪನ ಪಕ್ಕ ನಾನೂ ಗೋಡೆಗೆ ಒರಗಿ ಕುಳಿತುಕೊಂಡೆ. ನಕ್ಷತ್ರಗಳನ್ನು ಎಣಿಸುತ್ತಿರುವನಂತೆ ಆಕಾಶಕ್ಕೆ ಮುಖ ಹುದುಗಿಸಿದ್ದನು. ಅಲ್ಲಿಂದ ಮುಖ ಕಿತ್ತು ನನ್ನ ಕಡೆ ತಿರುಗಿದ. ಆ ಕಣ್ಣುಗಳಲ್ಲಿ ನಾ ಓದಲಾರದಷ್ಟು ವ್ಯಥೆಗಳಿವೆಯೇನೋ ಎನಿಸಿತು. ‘ಬೆಳ್ಗಿಂದಾ ಹೇಳ್ತಿದ್ದೀನಿ, ಹೋಗಿತ್ ಹೋಯ್ತು, ಬ್ಯಾರೆ ತಂದ್ರಾಯ್ತು ಅಂತ. ಹೋಗಿದ್ರು ಬಗ್ಗೆ ಹಿಂಗ್ ಚಿಂತೆ ಮಾಡ್ಕಂಡಿದ್ರೆ ಆಯ್ತದಾ? ಅಲ್ಲಾ ಹೋಗಿತ್ತಾದ್ರೂ ಏನೂ? ಚಪ್ಲಿ ಅಲ್ವಾ. ಚಪ್ಲಿ ಕಳುದ್ರೆ ಏನಾಯ್ತು? ಚಪ್ಲಿ ಏನಾರ ಕಳ್ಕಂಡ್ರೆ ನಮ್ ಪಾಪ ಕಳ್ದಂಗೆ ಅಂತ ಹೇಳಲ್ವಾ, ಹಂಗೇ ಯೋವ್ದೋ ಪಾಪ ಕಳೀತು ಅಂತ ಎದ್ಬಂದು ಉಣ್ಬುಟ್ಟು ಮಲ್ಕ ಯೇಳು’ ಎಂದೆ.
ಕಣ್ಣು ರಪರಪಾಂತ ಮಿಟುಗಿಸಿ ಹೆಗಲ ಮೇಲಿದ್ದ ಟವೆಲ್ನಿಂದ ಮುಖವನ್ನೊಮ್ಮೆ ಒತ್ತಿಕೊಂಡು ‘ಯಾವುದ್ಲಾ ಮಗಾ ಪಾಪ? ನಮ್ಮಪ್ಪ ಅಂದ್ರೆ ನಿನ್ ತಾತ ಪೀರಪ್ಪ ಇದ್ನಲ್ಲ. ಅವ್ನು ಜೀವ್ನಾ ಪೂರಾ ಮಾಡಿದ್ ಕೆಲ್ಸಾ ಏನ್ ಗೊತ್ತಾ? ಚಪ್ಲಿ ವಲೇದು. ಅವ್ನ್ ವಲೀತಿದ್ದಂತಾ ಚಪ್ಲಿನಾ ಸುತ್ತಳ್ಳಿಲಿ ಒಬ್ಮಗಾನೂ ಸೈತೆ ಹೊಲೇಕಾಗ್ತಿರ್ಲಿಲ್ಲ. ಜಾಲ್ಗೆರೆ ದಿಕ್ಕಿಂದ, ಹೊಲೇರಳ್ಳಿ ದಿಕ್ಕಿಂದ್ಲೂ ಜನ ನಮ್ಮಪ್ಪ ಹೊಲಿಯೋ ಚೆಪ್ಲಿನೇ ಹಾಕಂತಾ ಇದ್ದಿತ್ತು. ಹಿಂಗೇ ಒಂದಿನ ನಂಗೆ ಆಗ್ತಾನೆ ಮೀಸೆ ಕಪ್ಪಿಟ್ಟಿದ್ದ ವಯ್ಸು. ನಮ್ಮಪ್ಪ ಒಳ್ಳೆ ಹೊಸ ಚಪ್ಲಿ ಹೊಲ್ದು ಇಟ್ಟಿದ್ದ. ಅದ್ನ ನಾನೆ ಹಾಕ್ಕಂಡು ಖುಷೀಲಿ ಊರೊಳ್ಗೆಲ್ಲಾ ಹೋಗ್ಬಿಟ್ಟೆ ನೋಡು ಮಗಾ ಅಷ್ಟೇ! ನನ್ ಕಾಲ್ನಾಗಿದ್ದ ಚಪ್ಲಿ ನೋಡಿತ್ಲೇ ಹುಲಿ ಬಂದಂಗ್ ಬಂದ್ರು ಆ ಹಾಳ್ ಗೌಡ್ರುಗಳು. ಆಳಿಗೊಂದು ಏಟು ಅನ್ನಂಗೆ ಹಣ್ಗಾಯಿ ಆಗಂಗೆ ಹೊಡ್ದು ಹೋದ್ರು ಮಗಾ. ಅದಲ್ದೇ ಮನೇಲಿ ನಮ್ಮಪ್ಪನೇ “ಗೋಡ್ರುಗೆ ಅಂತ ಹೊಲ್ದು ಇಟ್ಟಿದ್ದ ಹೊಸಾ ಚಪ್ಲಿನೇ ಹಾಕ್ಕೊಂಡೊಯ್ತೀ” ಅಂತ ಕೊಳ್ಪೆ ಕಾಯ್ಸಿ ಕಾಲ್ಗೆ ಬರೆ ಹಾಕ್ಬಿಟ್ಟ!’ ಆಮೇಲೆ ಯೇಳ್ದಾ, “ನಮ್ನಾ ಊರ್ನಾಗೆ ಬಿಟ್ಕಳದೇ ನಮ್ ಪುಣ್ಯ, ಅಂತಾದ್ರಾಗೆ ದೊಡ್ ಗೌಡ್ರುಗೆ ಅಂತ ಹೊಲ್ದಿಟ್ಟಿದ್ದ ಚಪ್ಲಿನೇ ಹಾಕ್ಕಂಬುಟ್ಟು ಊರೊಳ್ಗೋಗ್ತೀ?” ಅಂತ ಬೈದ ಮಗಾ. ನಾನೂ ಕಾಲ್ಗೆ ಹಾಕಿದ್ದ ಬರೆ ಕೆಂಪಗೆ ಉರೀತಾ ಇದ್ರೂ ಕೇಳ್ದೇ, “ಯಾಕಪ್ಪಾ ಚಪ್ಲಿ ವಲೇದು ನಾವು, ನಾವ್ಯಾಕೆ ಚಪ್ಲಿ ಹಾಕ್ಬಾರ್ದೂ?” ಅಂತ. ಅದ್ಕೆ ನಮ್ಮಪ್ಪ ಯೇಳ್ದಾ “ನಾವು ಮಾದಿಗ್ರು, ಕೀಳ್ ಜಾತಿ ಮಗಾ. ಹೊಸಾ ಚಪ್ಲಿ ಹಾಕ್ಬಾರ್ದು. ಇಗಾ ಗೌಡ್ರವ್ರು ಹಾಕ್ಕಂಡು ಕಿತ್ತೋದ್ಮೇಲೆ ಅವನ್ನ ಹೊಲ್ಕಂಡು ಆಮೇಲೆ ನಾವ್ ಹಾಕ್ಕಬೇಕು. ಇದು ನಮ್ಮಪ್ಪಾ, ಅವ್ರಪ್ಪನ್ ಕಾಲ್ದಿಂದ್ಲು ಇರೊ ರೂಡಿ ಕಣ್ಲಾ” ಅಂತ್ಹೇಳಿ ಒಂದು ಜೊತೆ ಹಳೇ ಹರ್ದಿರೋ ಚಪ್ಲಿಗೆ ಮೊಳೆ ಹೊಡ್ದು ನಂಗೆ ಅಂತ ಕೊಟ್ಟ ಮಗಾ. ‘ಅದ್ಕೇ ನಾನು ನಾವ್ ವಲಿಯೋ ಚಪ್ಲಿ ಹಾಕ್ಕಳೊ ಯೋಗ್ಯತೆ ನಮ್ಗಿಲ್ಲ ಅಂದ್ಮೇಕೆ ನಾವ್ಯಾಕೆ ಅಂತ ಕೆಲ್ಸಾ ಮಾಡ್ಬೇಕೇಳು? ಅದ್ಕೆ ನಾನು ನಮ್ಮಪ್ಪ ಮಾಡ್ದಿದ್ದ ಕೆಲ್ಸಾ ಮಾಡ್ದೆ ಗಾರೆ ಕೆಲ್ಸಾ ಕಲ್ತೆ. ಈಗೇಳು ಮಗಾ ನಾನೇನ್ ಪಾಪ ಮಾಡಿದ್ದೀನಿ?’ ಅಂತ ಹೇಳಿ ‘ನಮ್ ಅಪ್ನಿಂದ ಬಂದಿದ್ದು ಒಂದೇ ಆಸ್ತಿ. ಅದೂ ಆ ಚಪ್ಲಿ ಹೊಲ್ಯ ಹತಾರ ಇದ್ವಲ್ಲ ಆ ಎಮ್ಮೆ ಚರ್ಮದ್ ಚೀಲ ಅದ್ನ ನಿಮ್ ತಾತ ಸತ್ಮ್ಯಾಕೆ ಇಲ್ಲೇ ಹಟ್ಟಿನಾಗೆ ಮಣ್ ಮಾಡ್ಬಿಟ್ಟೆ’ ಅಂತ ಅಂಗಳ ತೋರಿಸಿ ಅತ್ತಲೇ ಕಣ್ಣು ನೆಟ್ಟು ಕುಂತ. ‘ಇದುವರೆವಿಗೂ ಅಪ್ಪ ಯಾಕೆ ಹೊಸ ಚಪ್ಪಲಿ ಧರಿಸಿದ್ದನ್ನೇ ನಾನು ನೋಡಿಲ್ಲ!’ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತು. ಅಪ್ಪನಿಗೆ ಸಮಾಧಾನ ಹೇಳುವ ಮಾತು ಕೂಡ ಹೊರಡಲಿಲ್ಲ. ಮೌನವಷ್ಟೇ ತುಂಬಿಹೋಗಿದ್ದ ಅಲ್ಲಿ ಕೂರಲು ಆಗದೇ ಹಬ್ಬಕ್ಕಾಗಿ ಎರಡು ದಿನ ಮಾತ್ರವೇ ರಜೆ ಪಡೆದಿದ್ದ ನಾನು ಬೆಳಿಗ್ಗೆ ಮರಳಿ ಕೆಲಸಕ್ಕೆ ಹೋಗಬೇಕಾದ್ದರಿಂದ ಅಲ್ಲಿಂದ ಎದ್ದು ನನ್ನ ಕೋಣೆಗೆ ಹೋಗಿ ಮಲಗಿ ಕಣ್ಣು ಮುಚ್ಚಿದೆ.
ಊರ ಹಬ್ಬದ ಸಲುವಾಗಿ ಹೊಸ ಬಣ್ಣ ತೀಡಿಸಿಕೊಂಡು ಭಯಂಕರವಾಗಿ ಕಾಣುತ್ತಿದ್ದ ಮಾರಿ ಮತ್ತು ಅವಳ ಗುಡಿಯ ಮುಂದೆ ಇದ್ದ ಕೊಂಡ, ಅದರ ಸುತ್ತಲೂ ತಮಟೆ, ಅರೆಯವರು ಹುಚ್ಚೆದ್ದು ಬಾರಿಸುತ್ತಿದ್ದಾರೆ. ಕೊಂಡದಲ್ಲಿ ಉರಿಯುತ್ತಿದ್ದ ಸೌದೆಯ ಜೊತೆ ಚಿಟಚಿಟ ಉರಿಯುತ್ತಿರುವ ಅಳ್ಳಿನೊಂದಿಗೆ ಅಪ್ಪನ ಹೊಸ ಚಪ್ಪಲಿ ಕೂಡ ಉರಿದು ಕರಗುತ್ತಿವೆ. ಪಂಚೆ ಎತ್ತಿ ಕಟ್ಟಿದ ಗೌಡ ಮಾರುದ್ದದ ಕೊಳ್ಪೆಯನ್ನು ಅದೇ ಕೊಂಡದಲ್ಲಿ ಕಾಯಿಸುತ್ತಿದ್ದಾನೆ. ಅದು ನಿಗಿನಿಗಿ ಕೆಂಡದಂತೆ ಕೆಂಪಗಾಯಿತು. ಗೌಡ ಅದನ್ನು ನನ್ನ ಕಡೆಯೇ ತರುತ್ತಿದ್ದಾನೆ. ಅರೇ! ತಪ್ಪಿಸಿಕೊಳ್ಳಲು ಆಗುತ್ತಲೇ ಇಲ್ಲ. ಈ ತಮಟೆ, ಅರೆಯವರು ನಾ ಹೋದ ದಿಕ್ಕುಗಳನ್ನೆಲ್ಲಾ ಬಳಸಿ ಹಿಡಿಯಲು ಬರುತ್ತಿದ್ದಾರೆ. ಕಿವಿಗಳಿಗೆ ಅರೆಯ ಶಬ್ದ ಚಿಟ್ಟು ಹಿಡಿಸುತ್ತಿದೆ. ಕಾಲು ಕುಸಿಯುತ್ತಿವೆ. ತಮಟೆ ಸದ್ದಿಗೆ ನನ್ನ ಕೂಗು ನನಗೇ ಕೇಳಿಸದಷ್ಟು ಕ್ಷೀಣವಾಗುತ್ತಿದೆ. ಅಲ್ಲಿಂದ ಓಡಲು ಹೋಗಿ ಮಾರಿ ಗುಡಿಯ ಮುಂದಿದ್ದ ಯಾವುದೋ ಶತಮಾನದ ಕಲ್ಲು ಎಡವಿ ಬಿದ್ದೆ! ಕೆಂಪಾಗಿ ಕಾದಿರುವ ಕೊಳ್ಪೆ ಹಿಡಿದಿರುವ ಗೌಡ ಹತ್ತಿರ ಹತ್ತಿರ ಬರುತ್ತಿದ್ದಾನೆ. ನನ್ನ ಕೂಗು ಕೇಳಿಸಿತೋ ಏನೋ ತಕ್ಷಣಕ್ಕೆ ಅಲ್ಲಿಗೆ ಅಪ್ಪ ಬಂದ. ಅವನನ್ನು ನೋಡಿ ಧೈರ್ಯದಿಂದ ಎದ್ದು ನಿಂತರೆ ನನ್ನ ಕಾಪಾಡಬೇಕಿದ್ದ ನನ್ನ ಅಪ್ಪನೇ ಎಲ್ಲಿಂದಲೋ ಮತ್ತಷ್ಟು ಸೌದೆ ತಂದು ಕೊಂಡಕ್ಕೆ ಹಾಕಿ ಉರಿಸುತ್ತಿದ್ದಾನೆ.! ನನ್ನ ಕೂಗು ಅವನಿಗೆ ಕೇಳಿಸುತ್ತಿಲ್ಲವೋ ಅಥವಾ ಅವನಿಗೆ ಕಣ್ಣುಗಳೇ ಇಲ್ಲವೋ ಒಂದೂ ತಿಳಿಯದೆ ಭಯದಿಂದ ಮತ್ತಷ್ಟೂ ಕೂಗುತ್ತಿದ್ದೇನೆ. ಅಷ್ಟರಲ್ಲಿ ಗೌಡ ಹತ್ತಿರ ಬಂದವನೆ ಕಾದ ಕೊಳ್ಪೆಯನ್ನು ಕಾಲಿಗೆ ಇಟ್ಟೇ ಬಿಟ್ಟ! ಅಯ್ಯೋ..! ಅಪ್ಪಾ.. ಉರಿ.. ಉರಿ.. ಕೂಗಿಕೊಂಡು ಎದ್ದು ಕೂತೆ. ಕತ್ತಲಲ್ಲಿ ಹಾಸಿಗೆ ಮೇಲೆ ಬೆವೆತು ಹೋಗಿದ್ದೆ. ಅಯ್ಯೋ ಕನಸು! ಸುಧಾರಿಸಿಕೊಂಡೆ. ಎದ್ದು ಹೊರಗೆ ಬಂದು ಅಪ್ಪ ಕೂತಿದ್ದ ಜಾಗ ನೋಡಿದೆ. ಅಪ್ಪನಿಗೆ ಸಾಂತ್ವಾನ ಮಾಡುತ್ತಿದ್ದ ಬೀಡಿಯೊಂದು ತನ್ನನ್ನೇ ಸುಟ್ಟುಕೊಳ್ಳುತ್ತಿತ್ತು. ಒಳಗೆ ಬಂದು ನೀರು ಕುಡಿದು ಮತ್ತೆ ಮಲಗಿದೆ. ಕಣ್ಣು ಮುಚ್ಚಲು ಆಗಲೇ ಇಲ್ಲ. ಅಪ್ಪ ಈಚೆ ಗೋಡೆಗೊರಗಿ ಸಾಕಷ್ಟು ಹೊತ್ತು ಕೆಮ್ಮುತ್ತಲೇ ಇದ್ದ.
ಬೆಳಿಗ್ಗೆ ಎದ್ದವನೇ ಹೊರಗೆ ಬಂದು ನೋಡಿದರೆ ಅಪ್ಪ ಅಲ್ಲಿರಲಿಲ್ಲ. ಬೈಲಿನ ಕಡೆ ಹೋಗಿರಬೇಕೆಂದು ಸ್ನಾನ ಮುಗಿಸಿ ರೆಡಿಯಾಗಿ ಬಂದೆ. ಅಕ್ಕ ಕೊಟ್ಟ ತಂಗಳು ಕೋಳಿ ಸಾರು ಅನ್ನವನ್ನೇ ಗಬಗಬನೇ ತಿಂದು ಬ್ಯಾಗೇರಿಸಿಕೊಂಡು ಹೊರಗೆ ಬಂದೆ. ಚಪ್ಪಲಿ ನೋಡಿದೆ, ಅಡ್ಡಗೋಡೆ ಮೇಲೆದ್ದವು. ತೆಗೆದುಕೊಂಡು ಹಾಕಿಕೊಂಡೆ. ಅಪ್ಪನಿಗೆ ಹೇಳಿ ಹೋಗೋಣವೆಂದು ಸ್ವಲ್ಪ ಕಾದೆ. ಕಂಪನಿಯ ಕಲೀಗಿಗೆ ಕರೆ ಮಾಡಿ ‘ಸ್ವಲ್ಪ ತಡವಾಗಬಹುದು. ಬರುವವರೆಗೆ ಮ್ಯಾನೇಜರ್ ಹತ್ರ ಏನೋ ಒಂದು ಹೇಳಿ ಮ್ಯಾನೇಜ್ ಮಾಡು’ ಅಂತ್ಹೇಳಿ ಅಲ್ಲೇ ಸ್ವಲ್ಪ ಅಡ್ಡಾಡಿದೆ. ಅಪ್ಪ ಕೆರೆಯ ದಾರಿಯಿಂದ ಬರುತ್ತಿದ್ದುದು ಕಾಣಿಸಿತು. ಸರಿ ಹೇಳಿ ಹೋಗೋಣ ಎಂದು ಗಾಡಿಯ ಬಳಿ ಬಂದೆ. ಅಕ್ಕನಿಗೆ ಹೇಳಿ ಗಾಡಿ ತೆಗೆದೆ. ಅಪ್ಪ ಎದುರು ಬಂದ. ‘ಬರೋವಾಗ ಬೇರೆ ತರ್ತೀನಿ ಬಿಡಪ್ಪ. ಬೇಜಾರ್ ಆಗ್ಬೇಡ’ ಅಂದೆ. ಏನೂ ಉತ್ತರ ಬರಲಿಲ್ಲ. ‘ಸರಿ ಬರ್ತೀನಿ’ ಎಂದೆ. ‘ಹುಸಾರು..’ ಎಂದು ಅಲ್ಲಿ ನಿಲ್ಲದೇ ಒಳಗ್ಹೋದ ಅವನ ಹೆಜ್ಜೆಗಳನ್ನೇ ಹಿಂಬಾಲಿಸಿ ವಾಪಸ್ಸಾದ ಕಣ್ಣುಗಳಿಗೆ ಬಾಗಿಲ ಮುಂದೆ ಅಲ್ಲೇ ಅವನು ಆಗಷ್ಟೇ ಬಿಟ್ಟು ಹೋದ ತೂತಾದ ಚಪ್ಪಲಿ, ಅದಕ್ಕೆ ಬಿಗಿದಿದ್ದ ಹೊಸ ತಂತಿ ನನ್ನ ನೋಡಿ ನಕ್ಕಿತೋ ಏನೋ ಬೆಳ್ಳಗೆ ಮಿರುಗುತ್ತಿತ್ತು.
(ಕೃತಿ: ಬನದ ಕರಡಿ (ಕಥಾ ಸಂಕಲನ), ಲೇಖಕರು: ವಿನಯ ಗುಂಟೆ, ಪ್ರಕಾಶಕರು: ಕಾವ್ಯಮನೆ ಪುಸ್ತಕ ( ಫೋನ್: 8722039612), ಬೆಲೆ: 120/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
‘ಅಪ್ಪನಿಗೆ ಸಾಂತ್ವನ ಮಾಡುತ್ತಿದ್ದ ಬೀಡಿಯೊಂದು ತನ್ನನ್ನೇ ಸುಟ್ಟುಕೊಳ್ಳುತ್ತಿತ್ತು.’ ಗಟ್ಟಿ ಕತೆಗೆ ಇಂಥ ಮಾತುಗಳ ಪುಷ್ಟಿ ಇದೆ. ಇಷ್ಟವಾಯ್ತು .