ಇದಕ್ಕೆ ವ್ಯತಿರಿಕ್ತ ಎನ್ನುವಂತೆ ವಕೀಲರು ಹಾಗು ಜನನಾಯಕರಾಗಿದ್ದ ವ್ಯಕ್ತಿಯೊಬ್ಬರು ತಾವು ಕಾರಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಯಾರಾದರೂ ಮಳೆಯಲ್ಲಿ ಚಂಡಿಯಾಗಿ ಹೋಗುತ್ತಿದ್ದರೆ ಕಾರ್ ನಿಲ್ಲಿಸಿ ಅವರನ್ನು ಪರಿಚಯಿಸಿಕೊಂಡು ಅವರ ಮನೆವರೆಗೂ ಬಿಡುತಿದ್ದರು. ಇದಲ್ಲವೆ ನಿಜವಾದ ಮಾದರಿ ವ್ಯಕ್ತಿತ್ವ. ಇನ್ನೂ ಖೇದಕರವಾದ ಸಂಗತಿಯೆಂದರೆ ಬೇರೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿಯೊಂದು ಅಲ್ಲಲ್ಲಿ ಅಡ್ಡಾಡುತ್ತಿತ್ತು ಎನ್ನುವ ಕಾರಣಕ್ಕೆ ಬಿಸಿ ಗಂಜಿಯನ್ನು ಅದರ ಮೇಲೆ ಎರಚಿದವರೂ ಇದ್ದರು. ಏನು ಹೇಳುವುದು ಈ ರೀತಿಯ ವೈರುಧ್ಯಗಳಿಗೆ? ಜಗತ್ತು ವಿಭಿನ್ನವಾಗಿರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಅಲ್ಲವೆ!
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

ಈ ಅಂಕಣದ ಶೀರ್ಷಿಕೆಯೇ ಕೊಡಗಿನ ವರ್ಷಕಾಲ. ಕೊಡಗಿನಲ್ಲಿಯೂ ಅದರಲ್ಲಿಯೂ ಮಡಿಕೇರಿಯಲ್ಲಿ ಕಂಡ ವರ್ಷಧಾರೆಯಷ್ಟೇ ಇಲ್ಲಿ ನಿರೂಪಿತ. ಮಡಿಕೇರಿ ನಗರ ಪ್ರದೇಶವಾದ್ದರಿಂದ ಮರಗಿಡಗಳು ಇಲ್ಲ; ಆದರೆ ನಗರದ ಸುತ್ತಲೂ ಇರುವ ಗ್ರಾಮ್ಯ ಪ್ರದೇಶಗಳಿಂದ ಶಾಲಾ ಕಾಲೇಜಿಗೆ ಬರುತ್ತಿದ್ದ ಸಹಪಾಠಿಗಳ ಮಳೆಗಾಲದ ಅನುಭವವೇ ಭಿನ್ನ. ಮಳೆನಾಡಿನ ಈ ಹಳ್ಳಿಗಳ ಮನೆಗಳಿಗೆ ದಿನಸಿ, ಔಷಧಿ ಇತರೆ ಅಗತ್ಯ ಸಾಮಾನು ಸರಂಜಾಮುಗಳ ವಾಹಕರು ಅಂದರೆ ವಿದ್ಯಾರ್ಥಿಗಳೆ. ಕೆಲವೊಮ್ಮೆ ದಿನಸಿಗೆ ಕೊಟ್ಟ ಹಣ ಇನ್ನೇನೋ ಕಾರಣಕ್ಕೆ ಬಳಕೆಯಾಗಿ ಶಾಲೆಯಲ್ಲಿ ಹಣ ಕಳುವಾಗಿದೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಪೋಷಕರು ಶಾಲೆಯವರೆಗೂ ಹುಡುಕಿಕೊಂಡು ಬರುತ್ತಿದ್ದ ಸನ್ನಿವೇಶಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು .

ಗಾಳಿಬೀಡು, ಮೊಣ್ಣಂಗೇರಿ, ರಾಜರಾಜೇಶ್ವರಿ ದೇವಾಲಯ, ತಾಳತ್ಮನೆ, ಮಂಗಳದೇವಿನಗರ, ಇವುಗಳು ಮಡಿಕೇರಿ ನಗರಕ್ಕೆ ಅತಿ ಸಮೀಪ ಇರುವ ಹಳ್ಳಿಗಳು. ಗಾಳಿ ಬೀಡಿನಲ್ಲಿ ನಿಜಕ್ಕೂ ಗಾಳಿ ಹೆಚ್ಚಿತ್ತಂತೆ. ಇನ್ನು ರಾಜರಾಜೇಶ್ವರಿ ದೇವಾಲಯ ಅತ್ಯಂತ ತಗ್ಗಿನಲ್ಲಿರುವ ದೇವಾಲಯ. ಈ ದೇವಾಲಯಕ್ಕೆ ಹೋಗುವುದು ಬಹಳ ಸುಲಭ. ಆದರೆ ಅಲ್ಲಿಂದ ಬರುವಾಗ ದೇವಿ ದರ್ಶನ ಇದೇ ಕಡೆ ಬಾರಿಯದ್ದೇನೋ ಅನ್ನಿಸುತ್ತಿತ್ತು. ಅಂಥ ಇಳಿಜಾರು… ಮೇಲಿನಿಂದ ನೋಡಿದರೆ ಅಂಥ ಕಂದಕ ಅದು. ಬೇಸಗೆ ರಜೆ ಮುಗಿಯುವುದಕ್ಕೂ ಮಳೆಗಾಲ ಪ್ರಾರಂಭಕ್ಕೂ ಒಂದೇ ಆಗುತ್ತಿತ್ತು.

ಮಳೆ ಬಾರದು ಎನ್ನುತ್ತಲೇ ಸಿಟಿ ರೌಂಡ್ಸ್ ಹೋಗುತ್ತಿದ್ದೆವು. ಮಡಿಕೇರಿಯಲ್ಲಿ ಬ್ರಿಟಿಷರ ಕಾಲದ ಕಟ್ಟಡಗಳೆ ಹೆಚ್ಚು. ಜ್ಯೂನಿಯರ್ ಕಾಲೇಜು ಕಟ್ಟಡ ಆಗ ಅಲ್ಲಿ ಜವಹರ್ ನವೋದಯ ವಿದ್ಯಾಲಯವೂ ಅಲ್ಲಿಯೇ ಇತ್ತು. ಅವರನ್ನೊಮ್ಮೆ ಇಣಿಕಿ ನೋಡುತ್ತಿದ್ದೆವು. ಅಲ್ಲಿ ಸೇರಿದವರು ಗ್ರೇಟ್ ಅನ್ನುವ ಭಾವ ಇಂದಿಗೂ ಅದೇ ಭಾವವಿದೆ. ಈಗ ಜವಹರ್ ನವೋದಯ ವಿದ್ಯಾಲಯ ಮತ್ತು ಕೋಟೆ ಆವರಣದಲ್ಲಿದ್ದ ಜೈಲ್ ಎರಡೂ ನಗರದ ಹೊರವಲಯಕ್ಕೆ ಸ್ಥಳಾಂತರವಾಗಿದೆ. ಕೋಟೆ- ಕೊತ್ತಲ ಎನ್ನುವುದು ಜೋಡುನುಡಿ ಅಂದರೆ ಪರಸ್ಪರ ಪೂರಕ ಅರ್ಥವಿರುವ ಜೋಡುನುಡಿ ಅದಕ್ಕೆ ಪೂರಕ ಎಂಬಂತೆ ಕೋಟೆಯ ಆವರಣದಲ್ಲಿ ಅಲ್ಲಲ್ಲಿ ಕೊತ್ತಲಗಳು ಇವೆ. ಬ್ರಿಟಿಷರ ಕಾಲದ ಫಿರಂಗಿಗಳೂ ಕೂಡ. ಹೀಗೆ ಬೇಸಗೆ ರಜೆಗೆ ಬಂದಿದ್ದ ನನ್ನ ಮಾವನ ಮಗಳು ಅಕ್ಕಾ ನೋಡೇ….. ದೊಡ್ದು ಲಟ್ಟಣಿಗೆ ಎಂದು ಫಿರಂಗಿಯನ್ನು ನೋಡಿ ಹೇಳಿದ್ದಾಗ ಸುತ್ತಲೂ ಇದ್ದವರು ಒಮ್ಮೆ ತಿರುಗಿ ನೋಡಿದ್ದರು. ನಿಜ ಮೊದಲ ನೋಟಕ್ಕೆ ಅದು ಕಾಣಿಸುವುದೇ ಹಾಗೆ…. ನೋಡ ನೋಡುತ್ತಿದ್ದಂತೆ ಲಟ್ಟಣಿಗೆ ಅಲ್ಲ ಫಿರಂಗಿ ಅನ್ನಿಸುತ್ತದೆ. ಇನ್ನು ಇಂದಿನ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಅಂದಿನ ಸೀನಿಯರ್ ಕಾಲೇಜು. ಅದರಲ್ಲೂ ಲೈಬ್ರರಿ ಕಟ್ಟಡ ಎಷ್ಟು ದೂರದಿಂದಲೂ ಕಾಣಿಸುತ್ತದೆ. ಹೊರನೋಟಕ್ಕೇ ಏನೂ ಆಗದೆ ಇರಬಹುದು. ಆದರೆ ಒಳಗೆ ಅನೇಕ ದುರಸ್ತಿ ಕೆಲಸ ಬಾಕಿ ಇತ್ತು. ಆದರೆ ಅಲ್ಲಿನ ಪುಸ್ತಕ ಸಂಗ್ರಹ ನಿಜಕ್ಕೂ ಅಮೂಲ್ಯವೇ. ಆದರೆ ನಾನದರ ಉಪಯೋಗ ಪಡೆದುಕೊಳ್ಳಲಿಲ್ಲವಷ್ಟೇ. ‘ವಚನಧರ್ಮಸಾರ’ ಎಂ. ಅರ್.ಶ್ರೀಯವರದ್ದು ಇಂದಿಗೂ ಅಧ್ಯಯನ ಮಾಡಬೇಕೇನಿಸುತ್ತದೆ. ನಮ್ಮ ಪ್ರಾಧ್ಯಾಪಕರು ಶ್ರೀಮತಿ ಜಯಂತಿ ‘ಎಂ. ಆರ್. ಶ್ರೀ’ ಎಂದರೇನು ಎಂದು ಕೇಳಿದ್ದರು. ಇಂದಿನ ಗೂಗಲ್ ಇದ್ದಿದ್ದರೆ ತಕ್ಷಣ ಹೇಳುತ್ತಿದ್ದೆವು. ಕಡೆಗೂ ಅತ್ಯಲ್ಪ ಕಾಲ ಎಂದರೆ ಎರಡು ವಾರ ಸಮಯ ತೆಗೆದುಕೊಂಡು ಹೇಳಿದ್ದೆ. ನನಗೆ ಉತ್ತರ ಬೇಗನೆ ಸಿಕ್ಕಿತ್ತು. ಆದರೆ ಹೇಳುವ ಧೈರ್ಯ ಇರಲಿಲ್ಲ. ಲೈಬ್ರರಿಯಲ್ಲಿಯೇ ಎಂ. ಆರ್ ಶ್ರೀನಿವಾಸ ಮೂರ್ತಿಗಳು ಎಂಬ ಉತ್ತರ ಕಂಡುಕೊಂಡು ಕಾಯ್ದು ಹೇಳಿದ್ದೆ. ಅಜಕ್ಕಳ ಗಿರೀಶ್ ಭಟ್ಟರ ಯಾವುದೋ ಪ್ರಶ್ನೆಗೆ ‘ರಕ್ತಪಿಪಾಸು’ ಎಂಬ ಪದ ಬಳಸಿ ಆ ಪದವನ್ನು ಸಮರ್ಥನೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿತ್ತು… ಸಮರ್ಪಕವಾಗಿ ಆ ದಿನ ಉತ್ತರ ನೀಡಿರಲಿಲ್ಲ.

ಮಡಿಕೇರಿ ಸೀನಿಯರ್ ಕಾಲೇಜ್ ಅಂದರೆ ಸೀನಿಯರ್ಸ್ ಮಾತ್ರ ಎನ್ನಬೇಕಿಲ್ಲ. ನಮ್ಮಂಥ ಜ್ಯೂನಿಯರ್ಸ್ ಸೇರಿದ ವರ್ಷವೇ ಅಂದರೆ 1993-1994 ರ ಶೈಕ್ಷಣಿಕ ಸಾಲಿನಲ್ಲಿ ಫೀಲ್ಡ್ ಮಾರ್ಷಲ್ ಕಾಲೇಜು ಆಗಿ ನಾಮಕರಣಗೊಂಡಿತು. ಕಾಲೇಜು ಪ್ರಾರಂಭವಾದ ಒಂದೆರಡು ದಿನಗಳಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂದಿನ ಅರಣ್ಯಮಂತ್ರಿ ಹೆಚ್. ವಿಶ್ವನಾಥ್ ಅವರು ಆಗಮಿಸಿದ್ದರು. ಕೆಲವು ಸಸಿಗಳನ್ನು ನೆಟ್ಟರು ಆದರೆ ಅಲ್ಲಿಯೇ ವಿದ್ಯಾರ್ಥಿನಿಯಾಗಿದ್ದ ನನಗೆ. ಆರು ತಿಂಗಳು ಕಳೆಯುವಷ್ಟರಲ್ಲಿ ಹೊಳೆದದ್ದು ಅಂದು ವನಮಹೋತ್ಸವ ಇಂದು ಒಣಮಹೋತ್ಸವ ಎಂದು. ವಿಶ್ವಪರಿಸರದಿನದ ಆಚರಣೆ ಮಾಡುವಾಗ ಇರುವ ಕಳಕಳಿ ಗಿಡ ನೆಟ್ಟ ನಂತರ ಇಲ್ಲದೆ ಇರುವುದು ದುರಂತ.

ಆಗ ಪ್ರಾಂಶುಪಾಲರಾಗಿದ್ದವರು ಡಾ. ವೆಂಕಟಾಚಲ ಶೆಟ್ಟಿಯವರು. ಟಿಪಿಕಲ್ ಕರ್ನಾಟಕ ಶೈಲಿಯ ಧಿರಿಸಿನೊಂದಿಗೆ ಲಂಚ್ ಬ್ಯಾಗ್ ಒಂದು ಕೈಯಲ್ಲಿ ಇನ್ನೊಂದರಲ್ಲಿ ‘ಯು’ ಆಕೃತಿಯ ಹಿಡಿಯ ಛತ್ರಿ ಹಿಡಿದು ಬರುತ್ತಿದ್ದರು. ವಿದ್ಯಾರ್ಥಿಗಳ ಬಗ್ಗೆ ಬಹಳ ಕಾಳಜಿ ಇದ್ದ ಮನುಷ್ಯ. ಮಾತು ಸ್ವಲ್ಪ ಒರಟಾಗಿದ್ದ ಕಾರಣದಿಂದ ಎಲ್ಲ ಕಡೆಯೂ ಇರುವಂತೆ ಇವರು ವಿದ್ಯಾರ್ಥಿ ಮಿತ್ರರಾಗಿರಲಿಲ್ಲವಷ್ಟೇ. ನನ್ನನ್ನು ವಿಜ್ಞಾನ ವಿಷಯವನ್ನು ತೆಗೆದುಕೊಳ್ಳಲು ಹೇಳಿದರು. ಅಲ್ಲಿ ಉಪನ್ಯಾಸಕರ ಕೊರತೆಯಿಂದ ನಾನು ಮಾನವಿಕ ವಿಭಾಗಕ್ಕೆ ಸೇರಿದೆ. ಅಲ್ಲಿ ನಾಯಕ್ ಎನ್ನುವ ಇಂಗ್ಲಿಷ್ ಸರ್ ಚಂದ ಪಾಠ ಮಾಡುವವರಿದ್ದರು. ಆದರೆ ಪಾಠ ಕೇಳಲೊಲ್ಲದ ವಿದ್ಯಾರ್ಥಿಗಣ ‘ನಾಯಕ್ ನಹೀ ಖಳ್ ನಾಯಕ್’ ಎಂದು ಗುನುಗುತ್ತಿದ್ದರು. ಮುಂದಿನ ಸಾಲಿನವರಿಗೆ ಸಹಿಸಲಾಗದ ನಗು ಬರುತ್ತಿತ್ತು. ಕಡೆಯ ಅವಧಿಯಲ್ಲಿ ಅವರ ತರಗತಿಗಳು ಇರುತ್ತಿದ್ದವು. ಮಳೆಯೂ ಧೋ ಎಂದು ಸುರಿಯುತ್ತಲೇ ಇರುತ್ತಿದ್ದ ಕಾರಣ ನಾಯಕ್ ಸರ್ ಧ್ವನಿ ಎತ್ತರಿಸಿ ಪಾಠ ಮಾಡುತ್ತಿದ್ದರು. ಹಾಗೆ ಸರ್ ಜೋರಾಗಿ ಪಾಠ ಮಾಡುತ್ತಿದ್ದರೆ ಹಿಂದೆ ಕುಳಿತವರು ಅಷ್ಟೇ ಜೋರಾಗಿ ಗದ್ದಲ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ನಡೆದ ದೊಡ್ಡ ಇವೆಂಟ್ ಅಂದರೆ ಕಾಲೇಜು ನಾಯಕ ಉಪನಾಯಕನ ಚುನಾವಣೆ. ನವೀನ್ ಎಂಬ ನಮ್ಮ ಸೀನಿಯರ್ ನಂತರದಲ್ಲಿ ಸುನಿಲ್ ಎಂಬ ನಮ್ಮ ಸೀನಿಯರ್ಸ್ ಆರಿಸಿ ಬಂದಿದ್ದರು. ಅವರು ಗೆದ್ದ ಕಾರಣಕ್ಕೆ ಕಾಲೇಜಿನಿಂದ ಮೆರವಣಿಗೆ ಹೊರಟು ಮೆರವಣಿಗೆ ಅರ್ಧಕ್ಕೆ ಮೊಟಕಾಯಿತು. ಕಾರಣ ಕೊಡಗಿನ ವರ್ಷಧಾರೆ. ಕಾಲೇಜಿನ ಚಟುವಟಿಕೆಗಳು ಮಳೆಗಾಲವನ್ನು ಅನುಸರಿಸಿ ಪ್ರಾರಂಭವಾಗುತ್ತಿದ್ದವು. ಆಗಸ್ಟ್ ಮೊದಲವಾರದಲ್ಲಿ ಫಸ್ಟ್ ಇನ್ಟರ್ನಲ್ಸ್ ಇರುತ್ತಿದ್ದರೆ ಕಾರಿಡಾರ್‌ನಲ್ಲಿಯೇ ಬ್ಯಾಗ್ ಕೊಡೆಗಳನ್ನು ಇರಿಸಬೇಕಿತ್ತು. ಮಳೆ ಜೋರಾಗಿ ಬಂದರೆ ಅವೆಲ್ಲ ಚಂಡಿಯಾಗಿರುತ್ತಿದ್ದವು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನ ಕಾರ್ಯಕ್ರಮ ಅದೂ ಮಳೆಯಲ್ಲಿಯೇ ಪರಿಸಮಾಪ್ತಿಯಾಗುತ್ತಿತ್ತು. ಆ ಕಾರ್ಯಮಕ್ಕೆ ಡ್ರೆಸ್ ತೆಗೆದುಕೊಳ್ಳುವುದೂ ಒಂದು ಭಾಗವಾಗಿರುತ್ತಿತ್ತು. ಆಶ ಸ್ಟುಡಿಯೋ ಇಲ್ಲ ಸ್ಟುಡಿಯೋ ಗೋವಿಂದ ಭಟ್ಟರು ಬರುತ್ತಿದ್ದರು. ಮಳೆಗೆ ಕ್ಯಾಮೆರಾ ಹಾಳಾಗುತ್ತದೆ ಎನ್ನುತ್ತಲೇ ಫೋಟೊ ಸೆರೆ ಹಿಡಿಯುತ್ತಿದ್ದರು.

ಏನು ಹೇಳಿದರೂ ಮಳೆಯನ್ನು ಬಿಟ್ಟು ಮಾತನಾಡುವಂತಿಲ್ಲ. ಮಳೆಯೆಂದರೆ ಮಳೆ ಎಂಥ ಮಳೆ ಎಂದರೆ ತನ್ನದೇ ದಾಖಲೆಗಳನ್ನು ತಾನೇ ಮುರಿದುಕೊಳ್ಳುವ ಮಳೆ. ಮೇ ತಿಂಗಳಲ್ಲಿ ಬಟಾ ಬಯಲು ಅನ್ನಿಸತೊಡಗಿದ್ದು ಜೂನ್ ಮಧ್ಯದ ವೇಳೆಗೆ ಸಂಪೂರ್ಣ ಹಸಿರುಮಯ. ಬೇಲಿಗಳೇ ಕಾಣಿಸವು. ಮನೆಗಳ ಬೇಲಿಗಳಲ್ಲಿ ಬೋಗನ್ ವಿಲ್ಲಾ ಚಂದದ ಹಸುರಿನ ಬೇಲಿ ಗಿಡ, ಕಸ್ಕ್ಯೂಟ ಬಳ್ಳಿ, ಕವಟೆಕಾಯಿ, ದತ್ತೂರದ ಗಿಡ ಇವುಗಳೆ ಕಾಮನ್. ಈ ನಡುವೆ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದ್ದವು. ಉಳುವವರು ಕೋಣಕ್ಕೆ ಬೆದರಿಸುತ್ತಿದ್ದರೆ ಅದೇ ಸದ್ದನ್ನು ಕಾಲೇಜು ಹುಡುಗರು ಪುನರಾವರ್ತಿಸುತ್ತಿದ್ದರು. (ಕಾಲೇಜಿನ ದಾರಿಯ ಒಂದು ಬದಿಯಲ್ಲಿ ಗದ್ದೆಗಳೆ ಹೆಚ್ಚಿದ್ದವು) ಕೊಡಗಿನ ಹವಾಮಾನದ ಅರಿವಿಲ್ಲದ ಉತ್ತರಕರ್ನಾಟಕದ ಹಲವರು ವ್ಯಾಪಾರಕ್ಕೆ ಬಂದು ಅವಸ್ಥೆ ಪಡುವುದನ್ನು ನೋಡಿ ನಮ್ಮ ಮನೆಯಲ್ಲಿ ಅವರಿಗೆ ತಾತ್ಕಾಲಿಕ ಆಶ್ರಯ ನೀಡಿದ್ದಿದೆ. ಅದೇ ಒಣದ್ರಾಕ್ಷಿ, ಶ್ಯಾವಿಗೆ ಇತ್ಯಾದಿಗಳನ್ನು ಮಾರಲು ಬಂದವರು. ಇನ್ನು ಇಲ್ಲಿ ನೆನಪಿಗೆ ಬರುವುದು ಭಿಕ್ಷುಕರು ಕೂಡ. ಕೇವಲ ಐವತ್ತು ಪೈಸೆ ಕೊಡುತ್ತಿದ್ದೆವು. ಒಂದು ರೂಪಾಯಿ ಕೊಟ್ಟರೆ ಹೆಚ್ಚು.

ಪ್ರತಿ ಗುರುವಾರ ಮೂರ್ನಾಲ್ಕು ಜನರು ಬರುತ್ತಿದ್ದರು ಅವರಿಗೆ ವಸತಿ ವ್ಯವಸ್ಥೆ ಏನಿತ್ತು ಗೊತ್ತಿಲ್ಲ. ಅವರಲ್ಲಿದ್ದ ವೃದ್ಧ ಮಹಿಳೆಯೋರ್ವರು ನೋಡಲು ತುಂಬಾ ಚಂದ. ಅಂದರೆ ಚಂದ ಇದ್ದರು ಹೆಸರು ಗೊತ್ತಿಲ್ಲದ ಅವರಿಗೆ ನಾವೇ ಲಕ್ಷ್ಮಮ್ಮ ಎಂದು ಹೆಸರಿಸಿದ್ದೆವು. ಜಡಿ ಮಳೆಯಲ್ಲಿ ಪ್ಲಾಸ್ಟಿಕ್ ಅನ್ನು ಸೊಂಟಕ್ಕೆ ಕಟ್ಟಿಕೊಂಡು ಬರುತ್ತಿದ್ದರು. ಪ್ಲಾಸ್ಟಿಕ್ ಎಂದು ಬಂದಾಗ ಇನ್ನೋರ್ವ ಮಹಿಳೆ ನೆನಪಾಗುತ್ತಾರೆ. ಅವರೆ ನಾಗಮ್ಮ (ಹೆಸರು ಬದಲಿಸಿದೆ) ಹೇಳಬೇಕೆಂದರೆ ಅವರು ಸರಕಾರಿ ನೌಕರರ ಪತ್ನಿ. ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಅವಜ್ಞೆಗೆ ಗುರಿಯಾಗಿದ್ದರು. ಸ್ವಂತ ತಂಗಿ ಗಂಡನಿಗೆ ಎರಡನೆ ಮಡದಿಯಾಗಿ ಬಂದರೆ ಚೆನ್ನಾಗಿರುತ್ತದೆ ಎಂದು ಅವರು ಗಂಡನ ಎರಡನೆ ಮದುವೆಗೆ ಸಮ್ಮತಿ ಸೂಚಿಸಿದ್ದರೇನೋ ತಿಳಿಯದು. ನಂತರದಲ್ಲಿ ರೌರವ ನರಕ ಅನುಭವಿಸುತ್ತಿದ್ದರು ಅನ್ನಿಸುತ್ತದೆ.

ಮನೆಯ ಎಲ್ಲಾ ಕೆಲಸ ಮಾಡಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು ಮತ್ತೆ ಮಧ್ಯಾಹ್ನ ಊಟ ತೆಗೆದುಕೊಂಡು ಹೋಗುವುದು ಮತ್ತೆ ಸಂಜೆ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವುದು, ರೇಷನ್ ತರುವುದು ಗಿರಣಿಗೆ ಹೋಗುವ ಕೆಲಸ ಇತ್ಯಾದಿಗಳನ್ನು ಒಬ್ಬರೆ ನಿಭಾಯಿಸುತ್ತಿದ್ದರು. ಅವರ ಮನೆಯ ಚಿಕ್ಕ ಮಕ್ಕಳೂ ದೊಡ್ಡಮ್ಮ ಎನ್ನುವ ಗೌರವ ಪ್ರೀತಿ ಇರಿಸಿಕೊಂಡಿರಲಿಲ್ಲ. ಅವರೂ ಸಹ ತಮ್ಮ ಭಾರದ ಶಾಲಾ ಬ್ಯಾಗುಗಳನ್ನು ಅವರಿಗೇ ಕೊಡುತ್ತಿದ್ದರು. ತಿಂಗಳ ದಿನಸಿ ಖರೀದಿಸ ಹೊರಟರೆ ನಾಗಮ್ಮ ಗಂಡ ಹಾಗು ತಂಗಿಯ ಹಿಂದೆ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಉತ್ತಮವಾದ ರೈನ್ ಕೋಟ್ ಕೂಡ ಇರಲಿಲ್ಲ. ಪ್ಲಾಸ್ಟಿಕ್ ಕಟ್ಟಿಕೊಂಡು ಇರುತ್ತಿದ್ದರು. ಮಳೆಗೆ ಎಂದರೂ ಹವಾಯಿ ಚಪ್ಪಲ್, ಹರಿದ ಕೊಡೆ ಕೆದರಿದ ಕೂದಲು ಸೆಲೆತ ಕಾಲುಗಳು ಮಳೆಯ ನೀರಿಗೆ ಬಿದ್ದು ಹೋದ ಸ್ಟಿಕರ್, ಬಣ್ಣಕಳೆದುಕೊಂಡ ಗಾಜಿನ ಬಳೆಗಳು ಅವರ ಇವು ಅವರ ಒಟ್ಟು ಚಿತ್ರಣ. ಅವರನ್ನು ಕಂಡಾಗಲೆಲ್ಲಾ ಸಂಬಂಧಗಳು ಹೋಗಲಿ ಮನುಷ್ಯತ್ವದ ದೃಷ್ಟಿ ಅವರ ಮನೆಯವರಿಗೆ ಇಲ್ಲವೆ? ಎನ್ನುವ ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ವಕೀಲರು ಹಾಗು ಜನನಾಯಕರಾಗಿದ್ದ ವ್ಯಕ್ತಿಯೊಬ್ಬರು ತಾವು ಕಾರಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಯಾರಾದರೂ ಮಳೆಯಲ್ಲಿ ಚಂಡಿಯಾಗಿ ಹೋಗುತ್ತಿದ್ದರೆ ಕಾರ್ ನಿಲ್ಲಿಸಿ ಅವರನ್ನು ಪರಿಚಯಿಸಿಕೊಂಡು ಅವರ ಮನೆವರೆಗೂ ಬಿಡುತಿದ್ದರು. ಇದಲ್ಲವೆ ನಿಜವಾದ ಮಾದರಿ ವ್ಯಕ್ತಿತ್ವ. ಇನ್ನೂ ಖೇದಕರವಾದ ಸಂಗತಿಯೆಂದರೆ ಬೇರೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿಯೊಂದು ಅಲ್ಲಲ್ಲಿ ಅಡ್ಡಾಡುತ್ತಿತ್ತು ಎನ್ನುವ ಕಾರಣಕ್ಕೆ ಬಿಸಿ ಗಂಜಿಯನ್ನು ಅದರ ಮೇಲೆ ಎರಚಿದವರೂ ಇದ್ದರು. ಏನು ಹೇಳುವುದು ಈ ರೀತಿಯ ವೈರುಧ್ಯಗಳಿಗೆ? ಜಗತ್ತು ವಿಭಿನ್ನವಾಗಿರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಅಲ್ಲವೆ!