ನಮ್ಮ ಗಿಡಗಳಿಗೆ, ನೆಲಕ್ಕೆ, ನೆಲದಲ್ಲಿರುವ ಬಗೆಬಗೆಯ ಜೀವ ವೈವಿಧ್ಯಕ್ಕೆ ನಾವು ನೀಡುವ ಇವೆಲ್ಲಾ ಗೊಬ್ಬರ ಬಗೆಗಳು ಹಾಗೆಯೇ ಭಾರಿ ಭೋಜನ ಇರಬೇಕೇನೋ, ಮದುವೆ ಊಟದಂತೆ ಅಂದೆನ್ನಿಸಿ ಖುಷಿಯಾಯ್ತು. ಬೆಳೆದ ತರಕಾರಿ ನಮ್ಮ ಕೈಗೆ ಬರುವ ಮುಂಚೆಯೇ ಹುಳಹುಪ್ಪಟೆಗಳು ತಿಂದು ತೇಗಿದರೂ ಪರವಾಗಿಲ್ಲ. ಏನೋ ಸ್ವಲ್ಪ ಮಟ್ಟಿಗಾದರೂ ಮಣ್ಣಿನ ಗುಣಮಟ್ಟ ಹೆಚ್ಚಿದರೆ ಅಷ್ಟೇ ಸಾಕು. ಅದರಿಂದ ಏನೋ ಕೈಲಾದಷ್ಟು ತರಕಾರಿ, ಹಣ್ಣು, ಹೂ ಬೆಳೆದರೆ, ಅವನ್ನು ಕಂಡು ಹಕ್ಕಿಗಳು, ಚಿಟ್ಟೆ, ಪತಂಗ, ದುಂಬಿ, ಜೇನ್ನೊಣ, ಹುಳಗಳ ಪ್ರಪಂಚ ನಮ್ಮ ತೋಟಕ್ಕೆ ಬಂದಿಳಿದರೆ ಅವೇ ನಮ್ಮಯ ಅತಿಥಿ ದೇವರುಗಳು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ
ಹವಾಮಾನ ಏರುಪೇರು, ಗಣಿಗಾರಿಕೆ, ಕೇರಳದಲ್ಲಿ ಗರ್ಭಿಣಿ ಆನೆ ಸತ್ತಿದ್ದು, ಮಹಿಳಾ ಸಬಲೀಕರಣ, ಕೊರೋನ ಕಾಲ, ಜೀವ ವೈವಿಧ್ಯತೆಯ ಮಾತು, ವಿಶ್ವ ಪರಿಸರ ದಿನ ಮತ್ತು ಇತ್ತೀಚಿನ ಕಪ್ಪುಜನರ ಹೋರಾಟ…. ಎಲ್ಲವನ್ನೂ ಮಣ್ಣಿನ ಗುಂಡಿಗೆ ಬಿಸಾಕಿ ಅದೆಲ್ಲವನ್ನೂ ತಿರುವಿಹಾಕಿ ಜೈವಿಕ ಗೊಬ್ಬರ ಮಾಡುವ ತಿಪ್ಪೆಯಂತಾಗಿದೆ ನನ್ನ ತಲೆ.
ಹಾಗೆಂದು ಕಳೆದ ಭಾನುವಾರ ಯಾರಿಗೊ ಹೇಳಿದರೆ ಹತ್ತಿರದವರಾದ ಅವರು ‘ಛೆ ಛೆ ಹೆಣ್ಣೊಬ್ಬಳು ಹೀಗೆಲ್ಲ ಮಾತನಾಡುತ್ತಾಳಾ, ಗೊಬ್ಬರದ ತಿಪ್ಪೆಗೆ ತನ್ನನ್ನು ಹೋಲಿಸಿಕೊಳ್ಳುವ ಹೆಂಗಸರು ಈ ಪ್ರಪಂಚದಲ್ಲಿ ನಿನ್ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲ. ಹೆಣ್ಣಿಗೆ ಸ್ವಲ್ಪ ನಾಜೂಕಿರಬೇಕಲ್ಲವೇ,’ ಅಂದರು. “ಅಲ್ರೀ, ನಾನು ಪಿ.ಎಚ್.ಡಿ ಮಾಡುವ ಕಾಲದಲ್ಲೂ ಹೀಗೇ ತಲೆ ಗೊಬ್ಬರದ ಗುಂಡಿಯಾಗಿದೆ ಅಂದರೆ ಕೇಳಿದವರು ಮೆಚ್ಚಿ ತಲೆತೂಗುತ್ತಿದ್ದರು. ಸಂಭಾವಿತರ ಸೋಗು ಬಿಟ್ಟು, ಮೇಲ್ವರ್ಗದವರ ಭಾಷೆ ಪಕ್ಕಕ್ಕೆ ಸರಿಸಿ, ಮಣ್ಣಿನ ಮಾತನ್ನಾಡಿದರೆ ಅದ್ಯಾಕೆ ಕೊಂಕು ತೆಗೆಯುತ್ತೀರಿ.? ಇಷ್ಟಕ್ಕೂ, ಗೊಬ್ಬರದ ತಿಪ್ಪೆಯೆಂದರೆ ಜೀವಾಮೃತ ತಯಾರಿಕೆಯ ಕಾರ್ಖಾನೆ. ತಿಪ್ಪೆಯಿದ್ದರೆ ಮಾತ್ರ ಆಹಾರ ಉತ್ಪಾದನೆ ಸಾಧ್ಯ,” ಅಂದೆ. ಮಾತು ಬೇರೆಲ್ಲೊ ಹೊರಳಿತು.
ಹೋದ ಭಾನುವಾರ ಅದೇ ಕೆಲಸವನ್ನೇ ನಾನು ಮಾಡಿದ್ದು. ಕುದುರೆ ಮತ್ತು ಹಸುವಿನ ಗೊಬ್ಬರವನ್ನು ಅಣಬೆ ಗೊಬ್ಬರದೊಂದಿಗೆ ಸೇರಿಸಿ, ಅದಕ್ಕೆ Blood and Bone ಮಿಶ್ರಣ, ಜಿಪ್ಸಮ್ ಮತ್ತು ಉಪ್ಪು, ಒಣಗಿದ ಕಬ್ಬಿನ mulch ಎಲ್ಲವನ್ನೂ ಬೆರೆಸಿ ಗಿಡಗಳಿಗೆ ಉಣಿಸಿದ್ದೀನಿ. ತೊಟ್ಟಿದ್ದ ಬಟ್ಟೆ, ಮೈಕೈ ಎಲ್ಲವೂ ಗಬ್ಬುನಾತ ಹೊಡೆದಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಗೊಬ್ಬರ ಇತ್ಯಾದಿಗಳನ್ನು ಕೊಂಡು ತಂದು, ಎಲ್ಲವನ್ನೂ ಕಲಬೆರಕೆ ಮಿಶ್ರಣ ಮಾಡುವ ಮುನ್ನ ಒಂದರ ಪಕ್ಕ ಒಂದನ್ನು ಇಟ್ಟಾಗ, ನನ್ನ ಕಣ್ಣ ಮುಂದೆ ಬಂದದ್ದು ಹಬ್ಬದ ದಿನ ಬಾಳೆಎಲೆಯಲ್ಲಿ ಬಡಿಸುವ ಹಲವಾರು ಬಗೆಯ ಆಹಾರಗಳು.
ನಮ್ಮ ಗಿಡಗಳಿಗೆ, ನೆಲಕ್ಕೆ, ನೆಲದಲ್ಲಿರುವ ಬಗೆಬಗೆಯ ಜೀವ ವೈವಿಧ್ಯಕ್ಕೆ ನಾವು ನೀಡುವ ಇವೆಲ್ಲಾ ಗೊಬ್ಬರ ಬಗೆಗಳು ಹಾಗೆಯೇ ಭಾರಿ ಭೋಜನ ಇರಬೇಕೇನೋ, ಮದುವೆ ಊಟದಂತೆ ಅಂದೆನ್ನಿಸಿ ಖುಷಿಯಾಯ್ತು. ಬೆಳೆದ ತರಕಾರಿ ನಮ್ಮ ಕೈಗೆ ಬರುವ ಮುಂಚೆಯೇ ಹುಳಹುಪ್ಪಟೆಗಳು ತಿಂದು ತೇಗಿದರೂ ಪರವಾಗಿಲ್ಲ. ಏನೋ ಸ್ವಲ್ಪ ಮಟ್ಟಿಗಾದರೂ ಮಣ್ಣಿನ ಗುಣಮಟ್ಟ ಹೆಚ್ಚಿದರೆ ಅಷ್ಟೇ ಸಾಕು. ಅದರಿಂದ ಏನೋ ಕೈಲಾದಷ್ಟು ತರಕಾರಿ, ಹಣ್ಣು, ಹೂ ಬೆಳೆದರೆ, ಅವನ್ನು ಕಂಡು ಹಕ್ಕಿಗಳು, ಚಿಟ್ಟೆ, ಪತಂಗ, ದುಂಬಿ, ಜೇನ್ನೊಣ, ಹುಳಗಳ ಪ್ರಪಂಚ ನಮ್ಮ ತೋಟಕ್ಕೆ ಬಂದಿಳಿದರೆ ಅವೇ ನಮ್ಮಯ ಅತಿಥಿ ದೇವರುಗಳು. ಅವನ್ನು ನೋಡುತ್ತಾ ಕೂತರೆ ಅದೇ ನನ್ನ ನಿತ್ಯಧ್ಯಾನ. ನಿತ್ಯವಲ್ಲದಿದ್ದರೂ ವಾರಾಂತ್ಯದಲ್ಲಾದರೂ ಅದು ಸಾಧ್ಯ.
ಗಾರ್ಡನಿಂಗ್ ಗುಂಪುಗಳಲ್ಲಿರುವವರು ಸದಾ ಮಾತನಾಡುವುದು ಗೊಬ್ಬರದ ವಿಷಯ ಮತ್ತು ತಮ್ಮ ಗಿಡಗಳಿಗೆ ಅಂಟಿರುವ ಹುಳ, ರೋಗಗಳು. ಅಪ್ಪಿತಪ್ಪಿ ಯಾರಾದರೂ hot composting ಹೇಗೆ ಮಾಡುವುದು ಎಂದು ಕೇಳಿಬಿಟ್ಟರೆ ಸಾಕು, ಬರುವ ಒಂದೆರಡು ಉತ್ತರಗಳಿಗಾಗಿ ಅನೇಕರು ಕಾದಿರುತ್ತೀವಿ. ನೆಲದ ಮೇಲ್ಗಡೆ ಪದರಗಳಲ್ಲಿ ತಯಾರಿಸುವ ಹಾಟ್ ಕಾಂಪೋಸ್ಟಿಂಗ್ ತಿಪ್ಪೆ ಒಂಥರಾ ಕುಶಲ ಕಲೆ ಎಂದು ಬಹುಜನರ ಅಂಬೋಣ. ಹಾಗಾಗಿ ಹೆಚ್ಚಿನವರು ಕಾಂಪೋಸ್ಟ್ ಬಿನ್ ಇಟ್ಟುಕೊಂಡೆ ಬದುಕುತ್ತಿದ್ದೀವಿ. ಅದರ ಜೊತೆಗೆ ಕಾಂಪೋಸ್ಟ್ ಹುಳಗಳ ಸಾಕಣೆ ಮತ್ತು ನಾನಾ ತರಹದ ಗೊಬ್ಬರ-ಸಂಬಂಧಿತ ವರ್ಧಕಗಳು. ಇತ್ತೀಚಿನ ಹೊಸ ಸುದ್ದಿಯೇನೆಂದರೆ ನಿಮ್ಮ ಗೊಬ್ಬರ-ಬುದ್ಧಿವಂತಿಕೆ ಎಷ್ಟಿದೆ, ಹೇಗಿದೆ ಎಂಬ ಚಿಕ್ಕದೊಂದು ಉಪಪರೀಕ್ಷೆ. ನಮ್ಮ ಕಾಲದಲ್ಲಿ Intelligence Quotient ಇತ್ತು; ತದನಂತರ Emotional Intelligence (Quotient) ಬಂತು. ಈಗ Green Intelligence (Quotient) ಬರುತ್ತಿದೆ. ಪರೀಕ್ಷೆ ಬರೆಯದಿದ್ದರೂ ಸಹ ನೆಲಭಾಷೆಯ ಹೊಸ ಪದಗಳು ಉತ್ಸಾಹ ತರುತ್ತವೆ.
ನಾನು ಗೊಬ್ಬರ-ತಿಪ್ಪೆ ಧ್ಯಾನದಲ್ಲಿದ್ದಾಗ ಜೂನ್ ಏಳರಂದು ಹತ್ತಡಿ ಉದ್ದದ ಒಂದು ಗ್ರೇಟ್ ವೈಟ್ ಶಾರ್ಕ್ ಒಬ್ಬರಿಗೆ ಕಚ್ಚಿ ಜೀವ ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಆ surfer ಕೊನೆಯುಸಿರನ್ನೆಳೆದರು ಎಂಬ ವರದಿ ಬಂತು. ಘಟನೆ ನಡೆದದ್ದು ಕಿಂಗ್ಸ್ ಕ್ಲಿಫ್ ಸಮುದ್ರತೀರದಲ್ಲಿ. ಕಣ್ಣುಕುಕ್ಕುವಷ್ಟು ಸುಂದರವಾಗಿರುವ ಈ Kings Cliff ಬೀಚ್ ಇರುವುದು ನಮ್ಮ ರಾಣಿರಾಜ್ಯದ ಗಡಿ ಮುಗಿದು ದಕ್ಷಿಣದ ನ್ಯೂ ಸೌತ್ ವೇಲ್ಸ್ ರಾಜ್ಯ ಗಡಿಯ ಆರಂಭದಲ್ಲಿ. ಕಳೆದ ಜನವರಿಯಲ್ಲಿ ನಾವು ಅದೇ ಬೀಚಿನಲ್ಲಿ ಬೀಡುಬಿಟ್ಟು, ಸಮುದ್ರದಲ್ಲಿ ಈಜಾಡಿದ್ದೆವು.
ಶಾರ್ಕ್ ಸುದ್ದಿ ಬಂದಾದ ಕೂಡಲೇ ಬೀಚ್ ಬಂದ್ ಆಗಿ, ಎರಡು ದಿನಗಳ ಕಾಲ ಶಾರ್ಕಿಗಾಗಿ ಹುಡುಕಾಟ ನಡೆಯಿತು. ಮನುಷ್ಯರ ಗಡಿಬಿಡಿ, ಹಾಹಾಕಾರವನ್ನ ಅರಿತು ಶಾರ್ಕ್ ಪರಾರಿಯಾಗಿತ್ತು. ಶಾರ್ಕ್ ಅಟ್ಯಾಕ್ ಕೇಳಿ ಗರಿಗೆದರಿದ ಜನರ ರೋಮಾಂಚನವಿನ್ನೂ ಕಡಿಮೆಯಾಗಿಲ್ಲ,. Great White Shark ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಅವುಗಳ ಬಗ್ಗೆ ಅತೀವ ಕುತೂಹಲ ಮತ್ತು ಅದಕ್ಕಿಂತಲೂ ಹೆಚ್ಚಿನ ಹೆದರಿಕೆಯಿದೆ. ಶ್ರೀಮಂತರು ವಿಶೇಷ ಪರವಾನಗಿ ಇರುವ ಕೆಲವೇ ಕೆಲವು ಪ್ರವಾಸಿ ಸಂಸ್ಥೆಗಳಿಗೆ ಅಪಾರ ಹಣಕೊಟ್ಟು ನೈಸರ್ಗಿಕ ಪರಿಸರವಾದ ಸಮುದ್ರದಲ್ಲಿ ಅವನ್ನು ನೋಡಲು ಹೋಗುತ್ತಾರೆ. ಆದರೆ ಒಂದೇ ಒಂದು ಶಾರ್ಕ್ ಅಚಾನಕ್ಕಾಗಿ, ಬಹುಶಃ ದಾರಿತಪ್ಪಿಯೋ ಏನೋ, ಮನುಷ್ಯರಿರುವ ಬೀಚಿಗೆ ಬಂದರೆ, ಮನುಷ್ಯರನ್ನು ಕಚ್ಚಿದರೆ ಅವಕ್ಕೆ ಉಳಿಗಾಲವಿಲ್ಲ.
ನಿಜವಾಗಿಯೂ ಹೇಳಬೇಕೆಂದರೆ, ಗೊಬ್ಬರ ಇತ್ಯಾದಿಗಳನ್ನು ಕೊಂಡು ತಂದು, ಎಲ್ಲವನ್ನೂ ಕಲಬೆರಕೆ ಮಿಶ್ರಣ ಮಾಡುವ ಮುನ್ನ ಒಂದರ ಪಕ್ಕ ಒಂದನ್ನು ಇಟ್ಟಾಗ, ನನ್ನ ಕಣ್ಣ ಮುಂದೆ ಬಂದದ್ದು ಹಬ್ಬದ ದಿನ ಬಾಳೆಎಲೆಯಲ್ಲಿ ಬಡಿಸುವ ಹಲವಾರು ಬಗೆಯ ಆಹಾರಗಳು.
ಶಾರ್ಕ್ ಅಟ್ಯಾಕ್ ಬಗ್ಗೆ ಮತ್ತಷ್ಟು ವರದಿಗಳನ್ನು ನೋಡುತ್ತಿದ್ದಾಗ ಇದ್ದಕ್ಕಿದ್ದಂತೆ ನೆನಪಿಗೆ ಬಂದದ್ದು ಡಿಂಗೊ ನಾಯಿ. ನಮ್ಮ ಕ್ಯಾಂಪಿಂಗ್ ಸಮಯದಲ್ಲಿ Tweed ನದಿಗೆ ಹೋದಾಗೊಮ್ಮೆ ಅಲ್ಲೊಂದು ಕುಟುಂಬವಿತ್ತು. ಮೂರು ಪ್ರೈಮರಿ ಶಾಲೆ ವಯಸ್ಸಿನ ಮಕ್ಕಳು ನೀರಿಗಿಳಿದಿದ್ದರು. ಮತ್ತೊಂದು ಕಡೆ ತಾಯಿ ಮತ್ತು ಪುಟ್ಟ ಕೂಸು ಇದ್ದರು. ದಡದ ಸನಿಹದಲ್ಲೇ ತಂದೆ ಇದ್ದರು. ನಾವುಗಳೆಲ್ಲ ನಮ್ಮ ಚೀಲವನ್ನಿಟ್ಟು ನೀರಿಗಿಳಿಯಲು ಸಿದ್ಧರಾಗುತ್ತಿದ್ದಾಗ ನನ್ನ ಗಮನ ಸೆಳೆದಿದ್ದು ಅವರ ಚೀಲದ ಪಕ್ಕ ವಿರಮಿಸಿದ್ದ ಡಿಂಗೊ. ನೋಡಲು ಬಹಳ ಆರೋಗ್ಯದಿಂದ, ಶುಂಠಿ ಬಣ್ಣದ ಒಳ್ಳೆ ಮೈಕಾಂತಿಯಿದ್ದ ನಾಯಿ ಚೆನ್ನಾಗಿತ್ತು. ನೋಡಿ ಆಶ್ಚರ್ಯವಾಗಿ ವನ್ಯಪ್ರಾಣಿ ಎಂದು ಹೆಸರುವಾಸಿಯಾದ ಡಿಂಗೊ ನಾಯಿಯನ್ನು ಸಾಕು ನಾಯಿಯನ್ನಾಗಿಟ್ಟುಕೊಳ್ಳಬಹುದು ಎಂದು ತಿಳಿದಿರಲಿಲ್ಲ, ಎಂದೆ. ಸರ್ಕಾರದಿಂದ ಅನುಮತಿಯಿದ್ದರೆ ಮನುಷ್ಯರೊಡನೆ ಇರಬಹುದು ಎಂದರಾತ.
ನೀವೇನಾದರೂ ಈ ದೇಶದ ಕೆಲ ಮೃಗಾಲಯಗಳಿಗೆ ಹೋದರೆ ಅಲ್ಲಿನ ಡಿಂಗೊ ಪಾಲಕ ಸಿಬ್ಬಂದಿ ನಿಗದಿತ ಸಮಯದಲ್ಲಿ ಡಿಂಗೊ ವಾಕ್ ಮಾಡುತ್ತಾರೆ. ಪಾಪ, ಆ ಡಿಂಗೋಗಳ ಕೊರಳಿಗೆ ಭದ್ರಪಟ್ಟಿಯಲ್ಲದೆ, ಮುಖಕ್ಕೂ ಭದ್ರ ಕವಚವನ್ನ ತೊಡಿಸಿರುತ್ತಾರೆ. ಅದನ್ನ ನೋಡಲು ಬೇಸರವಾಗುತ್ತದೆ. ಮನುಷ್ಯರೊಡನೆ ಚೆನ್ನಾಗಿ ಹೊಂದಿಕೊಂಡು ಬದುಕುತ್ತಿದ್ದ ಡಿಂಗೊ ಪರಿಸ್ಥಿತಿ ಇಂದು ಕ್ರಿಮಿನಲ್ ಪಟ್ಟಕ್ಕೇರಿದೆ. ಎಲ್ಲೆಲ್ಲೂ ನಾವುಗಳೇ ನಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡು, ಬೇರೆಲ್ಲ ಜೀವಿಗಳ ಮೇಲೆ ಸವಾರಿ ಮಾಡುತ್ತಾ ಇನ್ನೊಂದು ಕಡೆ ಅವನ್ನು ರಕ್ಷಿಸುವ, ಉಳಿಸುವ ಮಾತನ್ನಾಡಿದರೆ ಇದೆಂಥ ವಿರೋಧಾಭಾಸಗಳ ಮಿಶ್ರಣವೆನಿಸುತ್ತದೆ. ಮನಸ್ಸು ನನ್ನ ಗೊಬ್ಬರದ ಮಿಶ್ರಣದ ಕಡೆ ವಾಲುತ್ತದೆ.
ಭಾರತದಲ್ಲಿ ಹೇರಳವಾಗಿರುವ ಕಂದು ಬಣ್ಣದ ಬೀದಿನಾಯಿಗಿಂತಲೂ ದೊಡ್ಡ ಗಾತ್ರದ ಡಿಂಗೊ ಹಿಂದೊಮ್ಮೆ ಸ್ಥಳೀಯ ಮೂಲನಿವಾಸಿಗಳ ಜೀವನದ ಅಂಗವಾಗಿತ್ತು. ಬ್ರಿಟಿಷರು ತಮ್ಮ ವಸಾಹತುಗಳನ್ನ ಸ್ಥಾಪಿಸಿದಾಗ ಅದನ್ನು ದಾಖಲಿಸಿದ್ದಾರೆ. ಮೂಲನಿವಾಸಿಗಳು ಈ ನಾಯಿಯನ್ನು ಡಿಂಗೊ ಎಂದು ಕರೆಯುತ್ತಿದ್ದರಿಂದ ಈಗಲೂ ಅದೇ ಪದ ಉಳಿದಿದೆ. ಅವರ ಜನಪದ ಕಥೆಗಳಲ್ಲಿ ಡಿಂಗೊ ಕೂಡ ಒಂದು ಪ್ರಮುಖ ಪಾತ್ರಧಾರಿ.
ಆದರೆ ಯಾವಾಗ ಡಿಂಗೊ ನಾಯಿ ಹೊಸತಾಗಿ ನೆಲೆಯೂರಿದ್ದ ಬ್ರಿಟಿಷರ ದನಕರುಗಳನ್ನು, ಕುರಿಗಳನ್ನ, ಅಷ್ಟ್ಯಾಕೆ ಅವರದ್ದೇ ನಾಯಿಗಳನ್ನ ಬೇಟೆಯಾಡಲಾರಂಭಿಸಿದ್ದವೋ ಆವಾಗ ಡಿಂಗೊ ನಾಯಿ ಖಳನಾಯಕನಾಗಿ ಮಾರ್ಪಟ್ಟು ಅದರ ಸಾರ್ವತ್ರಿಕ ವಧೆ ಶುರುವಾಯ್ತು. ಅದಲ್ಲದೆ, ಡಿಂಗೊ ಬಗ್ಗೆ ಅಪಪ್ರಚಾರ, ಮಕ್ಕಳನ್ನು ಕದ್ದೊಯ್ದು ತಿನ್ನುವ ಕ್ರೂರಪ್ರಾಣಿ ಅನ್ನೋ ಭಯ ಹುಟ್ಟಿಸುವ ಸುಳ್ಳುಕಥೆಗಳು ಹರಿದಾಡಿ ಕಾಲಕ್ರಮೇಣ ಡಿಂಗೊ ಎಂದರೆ ಅಪಾಯದ ಪ್ರಾಣಿ ಅಂತಾಗಿದೆ. ಅವುಗಳ ಸಂಖ್ಯೆಯೂ ಬಹುಕ್ಷೀಣಿಸಿದೆ. ಒಂದೊಮ್ಮೆ ಡಿಂಗೊ ಅಳಿವಿಗಾಗಿ ಆಸ್ಟ್ರೇಲಿಯಾದ ಬಿಳಿಜನರು ಹಠತೊಟ್ಟು ‘ನಿನ್ನ ವಂಶ ನಾಶವಾಗಾ’ ಎಂದು ಶಾಪ ಹಾಕಿ ನಿರ್ದಯವಾಗಿ ಅವನ್ನು ಕೊಲ್ಲುತ್ತಿದ್ದರು. ವಿಪರ್ಯಾಸವೆಂದರೆ ಈಗ ಅಪರೂಪಕ್ಕೊಮ್ಮೆ ಕಾಣಿಸುವ ಅಥವಾ ನಿಗದಿತ ಪ್ರದೇಶಗಳಲ್ಲಿ ಮಾತ್ರ ಜೀವಿಸಿರುವ ಅದೇ ಡಿಂಗೊ ನಾಯಿಯ ಬಗ್ಗೆ ಅಚ್ಚರಿಪಡುತ್ತಾ ಜನ ನೋಡಲು ಹಾತೊರೆಯುತ್ತಾರೆ.
ವರ್ಷಪೂರ್ತಿ ಆಸ್ಟ್ರೇಲಿಯಾಗೆ ಭೇಟಿಕೊಡುವ ಅಮೆರಿಕನ್, ಬ್ರಿಟಿಷ್ ಮತ್ತು ಯೂರೋಪ್ ಪ್ರವಾಸಿಗರು ನಮ್ಮ ರಾಣಿರಾಜ್ಯದಲ್ಲಿರುವ Fraser Island ಮತ್ತು ದ್ವೀಪದ ಅಜರಾಮರ ಕಥೆಯಾದ ಡಿಂಗೊ ನಾಯಿಯನ್ನು ನೋಡದೆ ವಾಪಸ್ ಹೋಗುವುದಿಲ್ಲವಂತೆ. ಅದ್ಯಾಕೋ ನಾವು Fraser island ಗೆ ಭೇಟಿ ಕೊಟ್ಟಾಗ ನಮಗೆ ಡಿಂಗೊ ಕಾಣಿಸಲೇ ಇಲ್ಲ. ಅದಕ್ಕಾಗಿ ನಾವು ಬೇಸರಿಸಿಕೊಳ್ಳಲಿಲ್ಲ. ಈ ವರ್ಷ ನದಿ ತಟದಲ್ಲಿ ಕೊರಳಿಗೆ, ಮೂತಿಗೆ ಯಾವುದೇ ಬಂಧನವಿಲ್ಲದೆ ಸ್ವತಂತ್ರವಾಗಿ ಹಾಯಾಗಿ ಮೈಚೆಲ್ಲಿದ್ದ ಡಿಂಗೋವನ್ನ ನೋಡಿದ್ದೇ ನಮಗೆಲ್ಲ ಭಾಳಾ ಖುಷಿಯಾಯ್ತು.
ಮೂರುನೂರು ವರ್ಷಗಳ ಸತತ ವಸಾಹತು ಆಳ್ವಿಕೆಯಲ್ಲಿ ಅದೆಷ್ಟೋ ಗಿಡಮರ ಪ್ರಭೇದಗಳು ಅಳಿಸಿವೆ. ಪಕ್ಷಿಪ್ರಾಣಿಗಳ ಸಂತತಿ ನಿರ್ನಾಮವಾಗಿದೆ. ವಿನಾಶದಲ್ಲೂ ಆಶಾಕಿರಣಗಳು ಮಿಂಚುತ್ತವೆಯಲ್ಲವೇ? ಉಳಿದುಕೊಂಡಿರುವ ಜೀವಜಾಲವನ್ನು, ಜೀವವೈವಿಧ್ಯತೆಯನ್ನೂ ಕಾಪಾಡುವ ಕೆಲಸ ನಡೆಯುತ್ತಿದೆ.
ನಡೆಯುತ್ತಿರುವ ಕೆಲಸಗಳನ್ನ ಗಮನಿಸಿದರೆ ನನಗೆ ಒಂದು ಕಡೆ ಸಮಾಧಾನ ಮತ್ತೊಂದು ಕಡೆ ಚಿಂತೆ ಎರಡೂ ಉಂಟಾಗುತ್ತಿದೆ. ಇಂಟೆಲಿಜೆನ್ಸ್ ಪದದ ಬದಲು Green Wisdom (ಹಸಿರು ಜಾಣ್ಮೆ) ಎಂಬ ಪದಗುಚ್ಛ ಹೆಚ್ಚಾಗಿ ಬಳಕೆಯಾಗಲಿ, ಮತ್ತದು ಯಾರ ಸೊತ್ತೂ ಆಗದೆ ಜನಸಾಮಾನ್ಯರ ಸಾಂಘಿಕ ಸಂಪತ್ತಾಗಲಿ ಎಂಬ ನಿರೀಕ್ಷೆ ಮತ್ತು ಆಶಯಗಳಿವೆ.
‘ಹಸಿರು ಉಳಿಸಿ’ ಎಂಬ ಮಾತು ಹಳೆಯದಾಗಿದೆ. ಆ ಮಾತಿನ ಜೊತೆ ಕೈಗೂಡಬೇಕಿರುವುದು ಕ್ರಿಮಿಕೀಟ, ಮೃಗಪಕ್ಷಿಗಳಿಗೆ ಆಶ್ರಯ ಮತ್ತು ಆಹಾರ ನೀಡುವ ನಿಟ್ಟಿನಲ್ಲಿ ನಮ್ಮ ಹಸಿರು ಜಾಣ್ಮೆಯ ಕೆಲಸ. ಜೊತೆಗೆ ನಾವು ನಿರ್ಮಿಸಿಕೊಳ್ಳುವ ವಾಸಸ್ಥಳಗಳಲ್ಲಿ ಸಾಧ್ಯವಾದಷ್ಟೂ ಆಹಾರವನ್ನು ಬೆಳೆಯಬೇಕಿದೆ. ಎಲ್ಲದರೊಡನೆ ನಾವು ಎಂಬ ಜಾಣ್ಮೆಯನ್ನು ಬದುಕಬೇಕಿದೆ. ಇನ್ನೊಂದಷ್ಟು ಗೊಬ್ಬರ ಮಾಡುವುದಿದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.