ಕಳೆದವರ್ಷ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರಿ-ಖಾಸಗಿ ವಸತಿ ಶಾಲೆಗಳಿಂದ ಮನೆಗೆ ಮರಳಿ ಮಕ್ಕಳು ಎಲ್ಲಿ ಹೋದರು.. ತುಸು ಬೆಚ್ಚನೆಯ ಮನೆಯಿದ್ದವರು ಅಪ್ಪಅಮ್ಮನ ಕಾಳಜಿಯಲ್ಲಿ ದಿನ ದೂಡುವುದು ಸಾಧ್ಯವಾದರೆ, ಲಾಕ್ ಡೌನ್ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಕಂಗಾಲಾದ ಕುಟುಂಬಗಳಲ್ಲಿ ಮಕ್ಕಳು ತಾವೂ ದುಡಿಮೆಗೆ ನಿಲ್ಲುವುದು ಅನಿವಾರ್ಯವಾಯಿತು.
ಬಾಗಲಕೋಟೆ ಜಿಲ್ಲೆಯ ಉದಾಹರಣೆಯೊಂದಿಗೆ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
ವಿಜಯಪುರದ ಪಾರೇಖ್ ನಗರದಲ್ಲಿರುವ ವಿಶಾಲವಾದ ಖಾಲಿ ಸೈಟುಗಳ ತುಂಬಾ ಬೆಳ್ಳನೆಯ ಕುರಿಗಳು ಚೆಂಗನೆ ಹಾರುತ್ತಾ ಮೇಯುತ್ತಾ, ಮಣ್ಣಿನ ರಸ್ತೆಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಪಥಸಂಚಲನ ಮಾಡುತ್ತಾ ಇರುವುದು ಸಾಮಾನ್ಯ ದೃಶ್ಯವೇ. ಒಮ್ಮೊಮ್ಮೆ ಬಿಳಿ ಕುರಿಗಳ ಮಂದೆ, ಮತ್ತೆ ಕೆಲವೊಮ್ಮೆ ಕಪ್ಪು ಆಡುಗಳ ಸಾಲು. ಹಾಗೆ ಕಪ್ಪು ಆಡುಗಳ ಮಂದೆಯ ಮುಂದೊಬ್ಬ ಕಾವಲುಗಾರ, ಹಿಂದೊಬ್ಬ ಪುಟ್ಟ ಪೋರ ಕಾಣಿಸಿದ. ನೂರಕ್ಕೂ ಹೆಚ್ಚು ಕಪ್ಪು ಆಡುಗಳ ಮಂದೆ ನಿಷ್ಠೆಯಿಂದ ಅವರಿಬ್ಬರ ಮಾತು ಕೇಳುತ್ತಾ ಸಾಗುತ್ತಿದ್ದವು.
ಹಾಲಿನ ಚೊಂಬೊಂದನ್ನು ಹಿಡಿದುಕೊಂಡು, ಈ ಹುಡುಗನನ್ನು ಬೆಂಬತ್ತಿದಾಗ, ಆಡುಗಳ ಮಂದೆಯ ಜೊತೆಗೆ ಹೆಜ್ಜೆ ಹಾಕುತ್ತಲೇ ಅವನು ನನ್ನೊಡನೆ ಮಾತಿಗಿಳಿದ. ಅಶ್ವಹೃದಯ ಬಲ್ಲ ಶಲ್ಯನಂತೆ ಅಜಹೃದಯ ಬಲ್ಲ ಈ ಹುಡುಗನ ಹೆಸರು ಸಿದ್ದೇಶ್. 2020ರಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹೇರುವ ಮುನ್ನ ಅವನು ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಯಲ್ಲಿ ಆರನೇ ತರಗತಿ ಮುಗಿಸಿದ್ದ. ಆದರೆ ಲಾಕ್ ಡೌನ್ ನಂತರದ ಅನಿಶ್ಚಿತ ಶಿಕ್ಷಣ ವ್ಯವಸ್ಥೆಯ ಗೊಡವೆಗೆ ಹೋಗುವುದನ್ನು ಬಿಟ್ಟುಬಿಟ್ಟಿದ್ದ. ಬಾಗಲಕೋಟೆಯ ಮುಧೋಳ ಎಂಬ ಬಯಲಿನಂತಹ ಊರು ತನ್ನದು ಎಂದು ಹೇಳಿಕೊಂಡರೂ, ಊರಿನಲ್ಲಿ ಈಗ ಯಾರೂ ಇಲ್ಲ. ದುಡಿಮೆಯನ್ನು ಹುಡುಕಿಕೊಂಡು ಅಮ್ಮಅಕ್ಕ ಹೊರಟಿದ್ದರೆ, ಇಂತಹುದೇ ಕುರಿಮಂದೆಯನ್ನು ಹೊಡೆದುಕೊಂಡು ತಂದೆಯೂ ಹೋಗಿದ್ದಾರೆ ಎನ್ನುತ್ತಾನೆ.
ಮಾತಿನ ಮಧ್ಯೆ ‘ಈ ಆಡುಗಳನ್ನು ಮೇಯಿಸುತ್ತಾ ಮಾವನ ಜೊತೆಗೆ ನಾನು ಎಲ್ಲ ಗುಡಿಗಳಿಗೂ ಹೋಗಿದ್ದೀನ್ರಿ, ಬಸ್ಸು ಖರ್ಚು ಏನೂ ಇಲ್ಲ ನಮ್ಗೆ…’ ಎನ್ನುವ ಸಿದ್ದೇಶನ ಕಣ್ಣುಗಳನ್ನು ತನ್ನ ಶಾಲೆ ಕಲಿಕೆ ಅರ್ಧಕ್ಕೆ ನಿಂತಿದೆಯೆಂಬ ಬೇಸರವೇನೂ ಇರಲಿಲ್ಲ. ಊರಿನಲ್ಲಿದ್ದರೆ ಸರಪಾಲಿನ ಪ್ರಕಾರ, (ಅಂದರೆ ಮೂರುನಾಲ್ಕು ಮನೆಯವರ ಜಾನುವಾರುಗಳನ್ನು ಕಾಯುವ ಕೆಲಸಗಳ ಸಮಾನ ಹಂಚಿಕೆ ಪ್ರಕಾರ), ಜಾನುವಾರು ಕಾಯಲು ಅವನು ಹೋಗುತ್ತಾನೆ. ಅವನ ಬಗ್ಗೆ ಹಿರಿಯರಿಗೆ, ‘ಗಟ್ಟಿಮುಟ್ಟು ಹುಡುಗ ಎಮ್ಮೆಗಳನ್ನು ಸಂಭಾಳಿಸುತ್ತಾನೆ’ ಎಂಬ ನಂಬಿಕೆ ಇದೆಯಂತೆ. “ಶಾಲೆ ಕತೆ ಏನು.. ಹೋಗುವುದಿಲ್ಲವಾ ನೀನು..” ಎಂಬ ಪ್ರಶ್ನೆಗೆ ಅವನೇನೂ ಉತ್ತರಿಸುವುದಿಲ್ಲ.
ಕೊರೊನಾ ಸೋಂಕಿನ ದೆಸೆಯಿಂದ ಉಂಟಾದ ಪರಿಸ್ಥಿತಿಯ ಕೆಟ್ಟ ಪರಿಣಾಮಗಳಲ್ಲಿ ಇದೂ ಒಂದು ಎನಿಸುತ್ತದೆ. ಮುಧೋಳ ಸೇರಿದಂತೆ ಬಾಗಲಕೋಟೆ ಜಿಲ್ಲೆಯೊಂದನ್ನೇ ಗಮನಿಸಿದರೆ ಅಲ್ಲಿ ಲಾಕ್ ಡೌನ್ ದೆಸೆಯಿಂದ ಹೆಚ್ಚು ತೊಂದರೆಗೊಳಗಾದವರು ಮಕ್ಕಳು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 8ನೇ ತರಗತಿಯ ಮಹಾದೇವಿ ಕುರಿ ಎಂಬಾಕೆ ಹಗಲು ಕೂಲಿ ಮಾಡಿ ಸಂಜೆ ಮತ್ತು ಮುಂಜಾನೆ ಆನ್ ಲೈನ್ ಪಾಠಗಳನ್ನು ಆಫ್ ಲೈನ್ ನಲ್ಲಿ ಕೇಳುತ್ತ ಕಲಿಕೆ ಮುಂದುವರೆಸುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿತ್ತು. ಇದೇ ಬಾಗಲಕೋಟೆಯ ಬಾದಾಮಿ ತಾಲ್ಲೂಕಿನ ಮುತ್ತಲಗೇರಿ ಎಂಬ ಹಳ್ಳಿಯ ಈ ವಿದ್ಯಾರ್ಥಿನಿಗೆ ಆ ಬಳಿಕ ದಾನಿಗಳಿಂದ ನೆರವು ದೊರೆಯಿತು. ಆದರೆ ಹೀಗೆ ಸುದ್ದಿಯ ಕಣ್ಣಿಗೆ ಅಥವಾ ಮಕ್ಕಳ ಹಕ್ಕುಗಳ ಕಾರ್ಯಕರ್ತರ ಗಮನಕ್ಕೆ ಬಾರದೇ, ಶಾಲೆಯನ್ನು ತೊರೆದವರ ಸಂಖ್ಯೆ ದೊಡ್ಡದಿದೆ.
ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುವ ಬಸಮ್ಮ ಕೂಡ ಇದೇ ಮಾತುಗಳನ್ನು ಹೇಳಿದ್ದರು. ನಾಲ್ಕು ವರ್ಷಗಳ ಹಿಂದೆ ಕಟ್ಟಡ ಕಾರ್ಮಿಕ ಕೆಲಸವನ್ನು ಹುಡುಕಿಕೊಂಡು ಬಾಗಲಕೋಟೆಯಿಂದ ಹೊರಟ ಬಸಮ್ಮ ಮೊದಲು ಮಾಡಿದ ಕೆಲಸವೆಂದರೆ, ಐದನೇ ತರಗತಿಯ ಮಗಳು ಸುಮಾಳನ್ನು ಮಂಗಳೂರಿನಲ್ಲಿ ಸರ್ಕಾರಿ ವಸತಿ ಶಾಲೆಗೆ ದಾಖಲು ಮಾಡಿದ್ದು. ಹಾಸ್ಟೆಲ್ ನಲ್ಲಿ ಊಟ ತಿಂಡಿ ಮಾತ್ರವಲ್ಲ, ಸೋಪು, ಪೇಸ್ಟ್, ಬೆಡ್ ಶೀಟ್ ನಂತಹ ಇತರ ಅಗತ್ಯಗಳೂ ದೊರೆಯುತ್ತಿದ್ದುದರಿಂದ ಬಸಮ್ಮ, ತುಸು ನಿರಾಳ ಭಾವದಿಂದ ದುಡಿಮೆ ಹುಡುಕುತ್ತ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿದ್ದರು.
ಆದರೆ ಲಾಕ್ ಡೌನ್ ಹೇರಿಕೆಯಾದ್ದೇ ಹಾಸ್ಟೆಲ್ ನಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು. ಅತ್ತ ತನ್ನೂರಿನ ಮನೆಯಲ್ಲಿ ಯಾರೂ ಇಲ್ಲ, ಇತ್ತ ಕಾರ್ಮಿಕ ಕೆಲಸಗಳು ಲಭ್ಯವಿಲ್ಲದೇ ಇರುವುದರಿಂದ ಮಂಗಳೂರಿನಂತಹ ನಗರದಲ್ಲಿ ದಿನದೂಡುವುದು ಕಷ್ಟದ ಮಾತಾಗಿದೆ. ಫ್ಲಾಟ್ ನಲ್ಲಿ ಸೆಕ್ಯುರಿಟಿ ಕೆಲಸ ಮಾಡುವ ಸಂಬಂಧಿಕರ ಮನೆಯಲ್ಲಿ ಮಗಳನ್ನು ಇರಿಸಿದರು.
ಶಾಲೆಯೆಂಬುದು, ಅದರಲ್ಲಿಯೂ ಬೆಂಗಳೂರು, ಮಂಗಳೂರು, ಮೈಸೂರಿನಂತಹ ನಗರಗಳಲ್ಲಿರುವ ಸರ್ಕಾರಿ ಮತ್ತು ಅನುದಾನಿತ ವಸತಿ ಶಾಲೆಗಳು ಅಥವಾ ಖಾಸಗಿ ಸಂಸ್ಥೆಗಳ ವತಿಯಿಂದ ನಡೆಯುವ ಉಚಿತ ವಸತಿ ಶಾಲೆಗಳು ಬಡಮಕ್ಕಳ ನಿಜವಾದ ಆಸರೆಯಾಗಿದ್ದವು. ಮಕ್ಕಳನ್ನುವಸತಿ ಶಾಲೆಗೆ ದಾಖಲು ಮಾಡಿಸಿ ಹೆತ್ತವರು ದುಡಿಮೆಯನ್ನು ಅರಸಿಕೊಂಡು ಅಲೆಮಾರಿ ಬದುಕು ಸಾಗಿಸುತ್ತಾರೆ. ಮಕ್ಕಳಿಗೆ ಹಾಸ್ಟೆಲ್ ಗಳಲ್ಲಿ ಅಗತ್ಯ ಸೌಕರ್ಯಗಳು ಸಿಗುತ್ತವೆ ಎಂಬ ನಂಬಿಕೆಯೇ ಅವರ ದುಡಿಮೆಗೆ ಶಕ್ತಿಯನ್ನು ಒದಗಿಸುತ್ತದೆ.
ಶಾಲೆಯ ಆಸರೆ ತಪ್ಪಿದರೆ ಶೈಕ್ಷಣಿಕವಾಗಿ ಮಕ್ಕಳ ಬದುಕಿನ ಆಸರೆ ತಪ್ಪಿದಂತೆ ಎಂದು ಹೇಳಬಹುದು. ಆದರೆ ಶೈಕ್ಷಣಿಕ ಭವಿಷ್ಯದ ಮಾತು ಹಾಗಿರಲಿ, ಆಯಾ ದಿನವನ್ನುಕಳೆಯುವುದು ಮಕ್ಕಳ ಪಾಲಿಗೆ ದುಸ್ತರವೆನಿಸುತ್ತದೆ. ದುಡಿಮೆಯಿಲ್ಲದೆ ಹಿರಿಯರು ಮನೆಯಲ್ಲಿ ಚಿಂತೆಯಲ್ಲಿರುವಾಗ, ಮಕ್ಕಳ ಜವಾಬ್ದಾರಿಯೂ ದೊಡ್ಡದಾಗಿ ಕಾಣಿಸುತ್ತದೆ. ಆಗ ಸಹಜವಾಗಿಯೇ ಪೋಷಕರ ಮುಂದೆ ಕಾಣುವುದು ಎರಡು ಆಯ್ಕೆಗಳು. ಹೆಣ್ಣುಮಗಳಾಗಿದ್ದರೆ ಆಕೆಯನ್ನು ಬೇಗನೇ ಮದುವೆ ಮಾಡಿಕೊಟ್ಟುಬಿಡುವುದು ಅಥವಾ ದೊಡ್ಡವರ ಜೊತೆ ಮಾಡಿ ಕೂಲಿಕೆಲಸಕ್ಕೆ ಕಳುಹಿಸಿಬಿಡುವುದು.
ಬಾಗಲಕೋಟೆಯ ಮುಧೋಳ ಎಂಬ ಬಯಲಿನಂತಹ ಊರು ತನ್ನದು ಎಂದು ಸಿದ್ದೇಶ ಹೇಳಿಕೊಂಡರೂ, ಊರಿನಲ್ಲಿ ಈಗ ಯಾರೂ ಇಲ್ಲ. ದುಡಿಮೆಯನ್ನು ಹುಡುಕಿಕೊಂಡು ಅಮ್ಮಅಕ್ಕ ಹೊರಟಿದ್ದರೆ, ಇಂತಹುದೇ ಕುರಿಮಂದೆಯನ್ನು ಹೊಡೆದುಕೊಂಡು ತಂದೆಯೂ ಹೋಗಿದ್ದರು.
ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ಬೆಳಕಿಗೆ ಬಂದ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆಯೂ ಗಾಬರಿಬೀಳಿಸುವಂತಿದೆ. ಕದ್ದುಮುಚ್ಚಿ ನಡೆಯುವ ಮದುವೆಯ ಪ್ರಕರಣಗಳ ಬಹಿರಂಗವಾದ ಸಂಖ್ಯೆ ಸಾಂಕೇತಿಕವಷ್ಟೇ. ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ರೀಚ್ (Rural Environmental Awareness and Community Help ) ಸಂಸ್ಥೆಯ ವಾರ್ಷಿಕ ದಾಖಲೆಗಳ ಪ್ರಕಾರ, 2020ರ ಏಪ್ರಿಲ್ ತಿಂಗಳಿಂದ 2021ರ ಮಾರ್ಚ್ ಅವಧಿಯಲ್ಲಿ 182 ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ. ಮಕ್ಕಳ ಸಹಾಯವಾಣಿ (ಚೈಲ್ಡ್ ಲೈನ್) ಯನ್ನೂ ನಿರ್ವಹಿಸುವ ರೀಚ್ ಸಂಸ್ಥೆ ಕಳೆದ ವರ್ಷದ ಅವಧಿಯಲ್ಲಿ 584 ಪ್ರಕರಣಗಳನ್ನು ನಿರ್ವಹಿಸಿದೆ. ಆದರೆ ಎಷ್ಟೋ ಮಕ್ಕಳು ಸಹಾಯವಾಣಿಯ ಗೊಡವೆಗೇ ಹೋಗದೇ ತಮ್ಮ ಕೆಲಸ ಮಾಡಿಕೊಂಡು, ಕೆಲಸದ ಸ್ಥಳದಲ್ಲಿ ಎದುರಾಗುವ ದೌರ್ಜನ್ಯಗಳನ್ನು, ಪರಿಸ್ಥಿತಿಯಿಂದ ಸೃಷ್ಟಿಯಾಗುವ ದೌರ್ಜನ್ಯಗಳನ್ನು ಎದುರಿಸುತ್ತ ಸುಮ್ಮನೇ ದಿನಗಳನ್ನು ಕಳೆಯುತ್ತಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡುವುದು ಸುಲಭದ ಕೆಲಸವಲ್ಲ, ಆಡು ಕುರಿಕಾಯುವ ಕೆಲಸಕ್ಕೆ ಮಕ್ಕಳು ಸಮರ್ಥರೆಂದು ದೊಡ್ಡವರು ಭಾವಿಸುತ್ತಾರೆ. ದೊಡ್ಡವರೊಡನೆ ಮಕ್ಕಳು ಹೋದರೆ ಕುರಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ಹೆಚ್ಚಿನ ಶ್ರಮವಿಲ್ಲ. ಹಾಗಾಗಿ ಮಕ್ಕಳು ಚೆನ್ನಾಗಿರುತ್ತಾರೆ ಎಂದೇ ದೊಡ್ಡವರ ನಂಬಿಕೆ. ಮಕ್ಕಳಿಗೂ ಈ ಕೆಲಸ ಖುಷಿಕೊಡುತ್ತದೆ. ಸುತ್ತಾಟ, ಹೊಸ ನೋಟ ಮಕ್ಕಳಿಗಿಷ್ಟವಾದ ವಿಷಯ ಅಲ್ಲವೇ. ಅಲ್ಲದೆ ಓರಗೆಯ ಮಕ್ಕಳು ಕಟ್ಟಡ ಕೆಲಸ ಅಥವಾ ಹೋಟೆಲ್ , ಮನೆಗಳಲ್ಲಿ ದುಡಿಯುವ ಕೆಲಸ ಮಾಡುವಾಗ ಪಡುವ ಶ್ರಮ ಗಮನಿಸಿದರೆ, ತಾವು ಕುರಿಹಿಂಡುಗಳ ಹಿಂದೆ ಮುಕ್ತವಾದ ಓಡಾಟ ಮಾಡಿಕೊಂಡಿರುವುದೇ ಸುಖವೆನಿಸುತ್ತದೆ. ಆದರೆ ಹೀಗೆ ಊರು ಬಿಟ್ಟು ವಿಳಾಸವಿಲ್ಲದೆ ಅಲೆಯುವ ಪುಟ್ಟ ಮಕ್ಕಳನ್ನು ಪತ್ತೆ ಮಾಡುವುದಾದರೂ ಹೇಗೆ. ಲಾಕ್ ಡೌನ್ ಅಥವಾ ಮತ್ಯಾವುದೋ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುವ ಮಕ್ಕಳು, ಇಂತಹ ದಾರಿ ಹಿಡಿದುಬಿಟ್ಟರೆ ಅವರನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವುದೂ ಕಷ್ಟ.
‘ಬಾಗಲಕೋಟೆ ನಗರದಲ್ಲಿಯೇ ಇತ್ತೀಚೆಗೆ ಕುರಿಕಾಯುವ ತಂಡವೊಂದು ಬಂದಿತ್ತು. ಇಡೀ ಕುಟುಂಬವೇ ಹೊಲದಲ್ಲಿ ಟೆಂಟು ಹಾಕಿ, ಮೂರ್ನಾಲ್ಕು ದಿನಗಳ ಜೀವನ ಮಾಡುತ್ತಿರುವಾಗ, ಶಾಲೆಗೆ ಹೋಗಬೇಕಾದ ಮಕ್ಕಳು ಟೆಂಟಿನ ಸುತ್ತ ಆಡಿಕೊಂಡಿರುವುದನ್ನು ಕಂಡೆ’ ಎನ್ನುತ್ತಾರೆ ರೀಚ್ ಸಂಸ್ಥೆಯ ಸಂಯೋಜಕ ಕುಮಾರ್. ಜಿ.ಎನ್. ಬೆಳಗಾವಿಯಿಂದ ಬಂದ ಕುಟುಂಬದಲ್ಲಿ ಐದು ವರ್ಷ ವಯಸ್ಸಿನ ಮೂವರು ಮಕ್ಕಳಿದ್ದರು. ಶಾಲೆಗೆ ದಾಖಲಿಸುವ ಯೋಚನೆಯನ್ನೇ ಅವರು ಮಾಡಿರಲಿಲ್ಲ. ಜೊತೆಗಿದ್ದ 16 ವರ್ಷದ ಹುಡುಗ ಶಾಲೆಯ ಅಂಗಳವನ್ನೇ ತುಳಿದಿಲ್ಲ ಎಂಬುದು ಮಾತಿನ ನಡುವೆ ಗೊತ್ತಾಯಿತು. ಮತ್ತೊಬ್ಬ ಹತ್ತು ವರ್ಷದ ಹುಡುಗನನ್ನು ಶಾಲೆಗೆ ಸೇರಿಸಿದ್ದೇವೆ, ಶಾಲೆ ಆರಂಭವಾದ ಬಳಿಕ ಕಳುಹಿಸುವ ಯೋಚನೆಯಿದೆ..’ ಎಂದು ಹಿರಿಯರು ಹೇಳುತ್ತಾರೆ. ಆನ್ ಲೈನ್ ತರಗತಿಗಳು, ಪೂರಕ ಪಾಠಗಳ ಗೊಡವೆಯಿಲ್ಲದೆ ಅವರು ಕುರಿಕಾಯುವ ದುಡಿಮೆಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಕುಮಾರ್.
ಶಿಕ್ಷಣ ಇಲಾಖೆಯು ಪ್ರತೀವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿ, ಅವರನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಈ ಬಾರಿ ಅಂತಹ ಅಭಿಯಾನಗಳು ಎಷ್ಟರಮಟ್ಟಿಗೆ ಮಕ್ಕಳನ್ನು ತಲುಪಬಲ್ಲವು ಎಂಬುದು ಸವಾಲಿನ ಪ್ರಶ್ನೆಯಾಗಿದೆ.
ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಹಾನಗರಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯ ನಡೆಸಿದ ಸಮೀಕ್ಷೆಯಲ್ಲಿ 6ರಿಂದ 14 ವರ್ಷ ವಯೋಮಾನದ 56,605 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಗೊತ್ತಾಗಿದೆ. ಈ ಪೈಕಿ, 14,561 ಮಕ್ಕಳು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ ಎಂದರೆ ಆ ಮಕ್ಕಳು ಏನೇನು ಕೆಲಸಗಳಲ್ಲಿ ಮುಳುಗಿ ಹೋಗಿರಬಹುದು ಎಂದು ಯೋಚಿಸುತ್ತ ಬೇಸರವೆನಿಸುತ್ತದೆ. ಈ ಅಂಕಿ ಅಂಶಗಳಲ್ಲಿ ಬೆಂಗಳೂರಿನ ಸಮೀಕ್ಷೆಯ ಫಲಿತಾಂಶ ಸೇರಿಲ್ಲ.
ಗ್ರಾಮೀಣ ಭಾಗದಲ್ಲಿ 80,35,913 ಕುಟುಂಬಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ. ಆ ಪೈಕಿ 33,329 ಮಕ್ಕಳು ಅರ್ಧದಿಂದಲೇ ಶಾಲೆ ಬಿಟ್ಟಿದ್ದಾರೆ ಎಂದರೆ ಅವರಿಗೆದುರಾದ ಕಷ್ಟಗಳೇನಿರಬಹುದು ಎಂಬುದು ಊಹಿಸಬಹುದು. ಇನ್ನು 9,719 ಮಕ್ಕಳು ಶಾಲೆಗೇ ಸೇರಿಲ್ಲ. ನಗರ ಪ್ರದೇಶಗಳಲ್ಲಿ 25,47,228 ಕುಟುಂಬಗಳ ಸಮೀಕ್ಷೆಯಲ್ಲಿ 8,715 ಮಕ್ಕಳು ಅರ್ಧದಲ್ಲೇ ಶಾಲೆ ಬಿಟ್ಟಿರುವುದು ಮತ್ತು 4,842 ಮಕ್ಕಳು ಶಾಲೆಗೇ ಹೋಗಿಲ್ಲ.
ಕೊರೊನಾ ಸೋಂಕಿನ ಭಯವೇ ನಮ್ಮ ವ್ಯವಸ್ಥೆಯನ್ನು ಸಾಕಷ್ಟು ಹೈರಾಣಾಗಿಸಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಗಮನ ಹರಿಸಬೇಕಾದುದು ಮಕ್ಕಳ ಬಗ್ಗೆ. ಆದರೆ ತಮ್ಮ ಎಳೆಯ ಕೈಗಳಲ್ಲಿ, ಪುಟಾಣಿ ಬೆರಳುಗಳಿಗೆ ಘಾಸಿ ಮಾಡಿಕೊಂಡು ಚಳಿ ಮಳೆಯಲ್ಲಿ ದುಡಿಮೆಗೆ ಅವರು ತಮ್ಮನ್ನು ಅರ್ಪಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ, ಅತ್ತ ಬಾಲ್ಯವಿವಾಹ ಪ್ರಕರಣಗಳು ಅವರ ಹೆಗಲ ಮೇಲೆ ಹೊರಲಾರದಷ್ಟು ಭಾರವಾದ ನೊಗವನ್ನು ಇರಿಸಿದಂತಾಗಿದೆ. ಮತ್ತೆ ಕೆಲಸದ ಸ್ಥಳಗಳಲ್ಲಿ, ಟೆಂಟುಗಳಲ್ಲಿ ಮಕ್ಕಳು ಎಲ್ಲ ರೀತಿಯ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳಬೇಕಾಗಿದೆ. ಕಳೆದ ವರ್ಷ ಎದುರಾದ ಪರಿಸ್ಥಿತಿಗಳು ಹೀಗೆ ಸ್ಪಷ್ಟವಾಗುತ್ತಿರುವಾಗಲೇ, ಕೊರೊನಾ ಮೂರನೆಯ ಅಲೆಯು ಮಕ್ಕಳನ್ನೇ ಗುರಿಯಾಗಿಸಿಕೊಂಡು ಅಪ್ಪಳಿಸಲಿದೆ ಎಂಬ ಸುದ್ದಿ ಕರ್ಕಷವಾಗಿ ಕೇಳಿಸುತ್ತಿದೆ.
ಪ್ರತೀ ಮಗುವಿನ ಪರಿಸ್ಥಿತಿಯೂ ವಿಭಿನ್ನವಾಗಿರುತ್ತದೆ. ಸಿದ್ಧೇಶನಿರಬಹುದು, ಬೆಳಗಾವಿಯ ಅಲೆಮಾರಿ ಕುಟುಂಬದ ಪುಟಾಣಿಗಳು ಅಥವಾ ಮಹಾದೇವಿ ಕುರಿ ಅವರಂತ ಕಂದಮ್ಮಗಳಿರಬಹುದು, ಕೊರೊನಾ ಅಲೆಗಳನ್ನು ಎದುರಿಸಬೇಕು ನಿಜ. ಜೊತೆಗೆ ಅವರು ನಮ್ಮ ವ್ಯವಸ್ಥೆಯು ಅಪ್ಪಳಿಸುವ ನಿಯಮಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.
ಅಲೆಮಾರಿ ಜನಾಂಗದ ಮಕ್ಕಳ ದಾರುಣ ಸ್ಥಿತಿ ನಿಜಕ್ಕೂ ಅತ್ಯಂತ ಕಳವಳಕಾರಿ. ಇಂಥ ಮಕ್ಕಳನ್ನು ಮರಳಿ ಶಾಲೆಗೆ ಸೇರುವಂತೆ ಮಾಡುವದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.