ಏನೋ ಹುಷಾರಿಲ್ವೇನೋ ಎನ್ನುತ್ತಾ… ಟೈಂ ಆಗ್ತಾ ಇದೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ! ಬರಿ! ಎನ್ನುತ್ತಲೇ ಇದ್ದೆ ಅವಳು ‘ನೋ’ ‘ನೋ’ ಎನ್ನುವಂತೆ ತಲೆ ಆಡಿಸಿದಳು ಕಡೆಗೆ ಅವಳೆ “ಏನೂ ಪ್ರಿಪೇರ್ ಆಗಿಲ್ಲ ಮೇಡಮ್ ಹೇಗ್ ಬರೀಲಿ?” ಎಂದಾಗಂತೂ ಈಕೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ ಎಂದದ್ದಕ್ಕೆ ಸಾಧ್ಯ… ನೋ! ನೋ ಸಾಧ್ಯ …! ಎಂದು ತಲೆ ಆಡಿಸಿರುವಳಲ್ಲ… ನಿಜ! ಇವಳು ಬರಿಯಮ್ಮ, ಬರಿದಾದ ಖಾಲಿ ತಲೆಯಮ್ಮ, ಬರಿಯಮ್ಮ ಎಂದು ಹಂಡ್ರೆಡ್ ಪರ್ಸೆಂಟ್ ಅನ್ನಿಸಿತು…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ನಾಲ್ಕನೆಯ ಬರಹ

ಬದುಕಿನ ಆರಂಭಕ್ಕೆ ಹಣ ಬೇಕೋ? ಇಲ್ಲ ಸ್ಕ್ಯಾನ್, ಸ್ವೈಪ್‌ಗಳು ನಡೆಯುತ್ತೋ ಇಲ್ಲವೋ ಗೊತ್ತಿಲ್ಲ; ಆದರೆ ಪದಗಳು ಅನ್ನುವ ಕರೆನ್ಸಿ ಅವಶ್ಯವಾಗಿ ಬೇಕೇ ಬೇಕು. ಪದಗಳು ಎಷ್ಟು ಸುಂದರವೋ ಅಷ್ಟೆ ಕ್ಯಾತೆಯನ್ನು ತಂದೊಡ್ಡುತ್ತವೆ. ಪದಶಃ ಅರ್ಥ ನೇರ ಅರ್ಥ ಕೊಟ್ಟರೆ ಅವುಗಳನ್ನು ಮತ್ತೆ ಮತ್ತೆ ಯೋಚಿಸುತ್ತಾ ಹೋದರೆ ವ್ಯಂಗ್ಯ, ವಿನೋದ, ವಿಷಾದಗಳನ್ನು ಅರ್ಥೈಸುತ್ತವೆ. ಪದ ಮೋಹಿಗಳಿಗೆ ಇವುಗಳು ಆರಾಧನಾ ಪರಿಕರಗಳು. ಬನ್ನಿ ಪದಗಳ ಸೊಬಗ ಕೊಂಚ ವಿನೋದದ ಮೂಲಕ ಸವಿಯೋಣ.

ಬರಿಯಮ್ಮ

ಪರೀಕ್ಷಾ ಕೊಠಡಿ ಮೇಲ್ವಿಚಾರಣೆ ಸುಲಭದ ಮಾತಲ್ಲ. ಅನುಭವಿಸಿದವರಿಗೆ ಗೊತ್ತು ಆ ನೋವು. ಪರೀಕ್ಷೆಗೆ ತಯಾರಾಗಿ ಬಂದ ಮಕ್ಕಳ ಕೊಠಡಿಯಲ್ಲಿರುವುದು ಸುಲಭ. ಏನೂ ಓದಿಲ್ಲ ಅಥವಾ ಹಬ್ಬದ ಮರುದಿನ ಪರೀಕ್ಷೆ ಬಂದರಂತೂ ಕಷ್ಟ ಕಷ್ಟ. ಹೀಗೆ ಒಮ್ಮೆ ಗೌರಿ-ಗಣೇಶ ಹಬ್ಬದ ಮರುದಿನ ಮೆಹೆಂದಿ ಬಿಡಿಸಿದ, ಕೈತುಂಬ ಗಿಲಿಗುಟ್ಟುವ ಗಿಲಿಟ್ ಬಳೆ ತೊಟ್ಟ ಹಬ್ಬದ ಸಂಭ್ರಮವನ್ನು ಇನ್ನೂ ಸಂಭ್ರಮಿಸುತ್ತಿರುವ ಹುಡುಗಿಯನ್ನು ಟೈಂ ಏನಕ್ಕೆ ವೇಸ್ಟ್ ಮಾಡ್ತಾ ಇದ್ದೀಯ ಬರಿಯಮ್ಮ ಎಂದೆ. ಹೊಟ್ಟೆ ತೊಳೆಸಿದಂತೆ ಒರಲುತ್ತಾ, ವಾಕರಿಕೆ ಬಂದಂತೆ ಉಬ್ಬಳಿಸುತ್ತಾ, ಆಕಳಿಸುತ್ತಾ ಕುಳಿತಿದ್ದಳು. ಏನೋ ಹುಷಾರಿಲ್ವೇನೋ ಎನ್ನುತ್ತಾ… ಟೈಂ ಆಗ್ತಾ ಇದೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ! ಬರಿ! ಎನ್ನುತ್ತಲೇ ಇದ್ದೆ ಅವಳು ‘ನೋ’ ‘ನೋ’ ಎನ್ನುವಂತೆ ತಲೆ ಆಡಿಸಿದಳು ಕಡೆಗೆ ಅವಳೆ “ಏನೂ ಪ್ರಿಪೇರ್ ಆಗಿಲ್ಲ ಮೇಡಮ್ ಹೇಗ್ ಬರೀಲಿ?” ಎಂದಾಗಂತೂ ಈಕೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ ಎಂದದ್ದಕ್ಕೆ ಸಾಧ್ಯ… ನೋ! ನೋ ಸಾಧ್ಯ …! ಎಂದು ತಲೆ ಆಡಿಸಿರುವಳಲ್ಲ… ನಿಜ! ಇವಳು ಬರಿಯಮ್ಮ, ಬರಿದಾದ ಖಾಲಿ ತಲೆಯಮ್ಮ, ಬರಿಯಮ್ಮ ಎಂದು ಹಂಡ್ರೆಡ್ ಪರ್ಸೆಂಟ್ ಅನ್ನಿಸಿತು…

ವಾಚಾ(ಚ್ಹಾ)ಳಿ

ಮಾತು ಕಡಿಮೆಯೇ ಮೌನಹೆಚ್ಚು ಆಚರಿಸುವ ನನ್ನ ಕುರಿತು ಮನೆಯವರೆಲ್ಲಾ ಒಟ್ಟಾಗಿ ವಾಚಾಳಿ…! ವಾಚಾಳಿ…! ಎಂದು ಜೋರಾಗಿ ಮಾತನಾಡಿಕೊಂಡು ನಗುತ್ತಿದ್ದರು. ನಾನಾಡುವ ಕೆಲವು ಪದಗಳೆ ಹೆಚ್ಚು ಅನ್ನಿಸಿದರೆ ಹೆಚ್ಚು ಮಾತನಾಡುವವರನ್ನು ಇವರು ಇನ್ನೇನನ್ನಬಹುದು ಎಂದು ಯೋಚಿಸುತ್ತಲೇ ಮೌನವಾಗಿಯೇ ಇದ್ದೆ. ಎಷ್ಟೇ ಆದರೂ ನಾನು ಕನ್ನಡ ಮೇಜರ್ ವಿದ್ಯಾರ್ಥಿನಿ ಪದಶಃ ಅರ್ಥ ಮಾಡಿಕೊಂಡು ವಾಚಾಳಿ (ವಾಕ್ ಎಂದರೆ ಮಾತು ಅಳಿ ಎಂದರೆ ‘ಅವನು’ ಇಲ್ಲವೆ ‘ಅವಳು’ ಎನ್ನುವ ಸೂಚಕ, ವಾಚ+ಆಳಿ=ವಾಚಾಳಿ ಇಲ್ಲಿ ಅರ್ಧ ಸಂಸ್ಕೃತ ಅರ್ಧ ಕನ್ನಡ ಪದವಿದೆ . ಅವಶ್ಯಕತೆಗೆ ಮೀರಿ ಮಾತನಾಡುವವರು ಎನ್ನುವ ಅರ್ಥವಿದೆ) ಎನ್ನುವುದ ಬದಲು ‘ವಾಚ್ಹಾಳಿ’ ಎನ್ನಬಹುದಲ್ಲ ಎಂದುಕೊಳ್ಳುತ್ತಿರುವಾಗಲೆ ನನಗೆ ಪಡಸಾಲೆಯಿಂದ ಕರೆ ಬಂತು. ನಾನೆಲ್ಲಿ ಮಾತನಾಡಿದೆ? ಇನ್ನೆಷ್ಟು ಕಡಿಮೆ ಮಾತನಾಡುವುದು? ನಾನೇನು ಅವರ್ಹಾಗ? ಇವರ್ಹಾಗ? ಎಂದು ಕೇಳಿದೆ ಅದಕ್ಕೆ ಅವರೆಲ್ಲಾ “ಅಯ್ಯೋ! ನಾವೆಲ್ಲಿ ತುಂಬಾ ಮಾತನಾಡಿದೆ ಎಂದು ಹೇಳಿದೆವು? ಈ ವಯಸ್ಸಿಗೆ ಇಷ್ಟು ವಾಚುಗಳು ಬೇಕಾದುವಲ್ಲ, ಎಷ್ಟೊಂದು ವಾಚುಗಳನ್ನು ಕಳೆದುಕೊಂಡಿದ್ದೀಯ ವಾಚಾಳಿ ಎಂದೆವು” ಎಂದರು. ಅಷ್ಟರಲ್ಲಿ ಸೋದರತ್ತೆ ಇದ್ದವರು ಅಯ್ಯೋ ನಮ್ಮದೂ ತಪ್ಪಿದೆ ನಮ್ಮ ಉಚ್ಛಾರಣೆಯಲ್ಲೇ ದೋಷವಿದೆ ‘ವಾಚ್ ಹಾಳಿ’ಎನ್ನಬೇಕು. ‘ವಾಚ್ ಹಾಳಿ’ ಎನ್ನುವ ಬದಲು ‘ವಾಚಾಳಿ’ ಎಂದರೆ ಆಗುತ್ತದೆಯೇ ಎಂದು ಅದನ್ನೊಂದಷ್ಟು ಹೊತ್ತು ಎಳೆದು ನಕ್ಕರು.

ರಾಜ್ಯಸಭಾ

ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿದ್ದ ಆಶಾ ಮೇಡಮ್ ಈ ಪುಂಡ ಮಕ್ಕಳಿಗೆ ಲ್ಯಾಬ್ ಹೇಗ್ ಮಾಡಿಸೋದು ಎನ್ನುತ್ತಾ ಮನೆಯ ಹತ್ತಿರವಿದ್ದ ಶಾಲೆಯಿಂದ ಮಗಳು ಬರುವುದನ್ನೆ ಕಾಯುತ್ತಿದ್ದರು. ಮಗಳೆನೋ ಬಂದರು. ಅದರ ಜೊತೆಗೆ ಆಶ್ಚರ್ಯವನ್ನು ತಂದಿದ್ದಳು. ಗೇಟ್ ತೆಗೆಯುತ್ತಲೇ “ಅಮ್ಮಾ ಅಮ್ಮಾ ….. ನಮ್ ಸ್ಕೂಲಲ್ಲಿ ನಾಳೆ ರಾಜ್ಯಸಭಾ… ರಾಜ್ಯಸಭಾ ಇದೆ. ಫಂಕ್ಷನ್ ಮುಗಿದ ಮೇಲೆ ನಮಗೆಲ್ಲಾ ಚಾಕಲೆಟ್ ಕೊಡ್ತಾರಂತೆ! ನೀಟಾಗಿ ಯೂನಿಫಾರ್ಮ್ ಹಾಕ್ಕೊಂಡ್ ಹೋಗಬೇಕಂತೆ! ಬ್ಯಾಗ್ ಇಲ್ವಂತೆ!” ಎನ್ನುತ್ತಾ ಖುಷಿಯಾಗಿ ಒಳಗೆ ಬಂದಳು. ಆಶಾ “ಎಲ್ಲಾ ಸರಿ ರಾಜ್ಯಸಭಾ? ನಿಮ್ ಸ್ಕೂಲಲ್ಲಿ ಹೆಂಗೆ?” ಎಂದರೆ ಮಗಳು “ಅಯ್ಯೋ! ಅಮ್ಮಾ ನಿಂಗೆ ರಾಜ್ಯಸಭಾ ಗೊತ್ತಿಲ್ವ ? ಲೆಕ್ಚರರ್ ಆಗಿ” ಎಂದರೆ ಮತ್ತೆ ಆಶಾ ಕತ್ತು ಹೊರಳಿಸಿದರು. ಮಗಳು ಮತ್ತೆ “ಅದೇ ಅಮ್ಮಾ ಕರ್ನಾಟಕ ಫಾರ್ಮೇಶನ್ ಡೇ” ಎನ್ನುತ್ತಿದ್ದಂತೆ ಆಶಾ ಟೀಚರ್ಗೆ ಓಹೋ ರಾಜ್ಯಸಭಾ ಅಂದರೆ ಅದು ರಾಜ್ಯೋತ್ಸವ ಎಂದು ಅರ್ಥವಾಯಿತು!

ಮಂಡೆಯಿಂದ

ಇದೀಗ ಎಲ್ಲಾ ಕಾಲೇಜುಗಳಲ್ಲಿಯೂ ಸಮವಸ್ತ್ರ ಮಾಡಿರುವುದು ಸ್ವಾಗತಾರ್ಹ. ನಮ್ಮ ಕಾಲೇಜಿನ ಲಲನೆಯರು ದಿನಕ್ಕೊಂದು ಬಣ್ಣದ ಧಿರಿಸುಗಳನ್ನು ಧರಿಸಿಕೊಂಡು ಚಿಟ್ಟೆಗಳಂತೆ ಹಾರಾಡುತ್ತಿದ್ದರು. ಬಣ್ಣದ ಚಿಟ್ಟೆಗಳ ಹಾರಾಟ ಅತಿ ಅನ್ನಿಸಿ ಯೂನಿಪಾರ್ಮ್ ಧರಿಸಿ ಶಾಂತವಾಗಿ ಕುಳಿತಿದ್ದ ಗಂಡು ಮಕ್ಕಳನ್ನು ನೋಡಿ ಲಲನೆಯರನ್ನು ಕೇಳಿಯೇ ಬಿಟ್ಟೆ “ನಿವ್ಯಾವಾಗ ಯೂನಿಫಾರ್ಮ್ ಧರಿಸಿ ಬರುತ್ತೀರಿ?” ಎಂದು. ಆಗ ಲಲನೆಯರೆಲ್ಲಾ ಒಕ್ಕೊರಲಿನಿಂದ “ಮಂಡೆಯಿಂದ ಮಂಡೆಯಿಂದ” ಎಂದು ಪುನರುಚ್ಛರಿಸಿದರು. ನನಗೆ ಅವರು ಹೇಳಿದ್ದು ಸತ್ಯ ಅನ್ನಿಸಿ “ಹೆಣ್ ಮಕ್ಕಳು ಮಂಡೆ ಮೇಲಿಂದನೇ ಅಲ್ವೆ ಚೂಡಿದಾರ್ ಟಾಪ್ ಧರಿಸಲು ಸಾಧ್ಯ ಇನ್ಹೇಗ್ ಹಾಕ್ತೀರ?” ಎಂದೆ. ಜಾಗೃತರಾದ ಒಂದಿಬ್ಬರು “ಸೋಮವಾರದಿಂದ ಸೋಮವಾರದಿಂದ” ಎಂದರು.

ಕನ್ನಡದಲ್ಲಿ ವಾರಗಳ ಹೆಸರನ್ನು ಹೇಗೆಲ್ಲಾ ಕರೆಯುತ್ತಾರೆ ಮುಂದೆ ನೋಡೋಣ.

ರವಿವಾರ- ನೇಸರನಾಲು
ಸೋಮವಾರ-ಹೆರೆನಾಳು, ಪೆರೆನಾಳು
ಮಂಗಳವಾರ –ನೆಲನಾಳು, ನಲ್ನಾಲು, ಚೆನ್ನಾಳು, ಕೇಡ್ಯಾಳು
ಬುಧವಾರ-ನಡುನಾಳು, ಜಾಣ್ಯಾಳು
ಗುರುವಾರ – ಗಾಳಿನಾಳು, ಓಜನಾಳು, ಕಲಿನಾಳು, ಬೇಸ್ತ್ವಾರ
ಶುಕ್ರವಾರ -ಕಡಲನಾಳು, ಬೆಳ್ಳಿನಾಲು
ಶನಿವಾರ –ಕಡೆನಾಳು, ಕಾದೇರನಾಳು

ಇಂಗ್ಲಿಷಿನಲ್ಲಿ ವಾರಗಳ ಹೆಸರನ್ನು ರೋಮನ್ನಿನ ಕ್ಯಾಲೆಂಡರಿನಂತೆ ಗೃಹಗಳ ಅನುಸಾರ ತೆಗೆದುಕೊಳ್ಳಲಾಗಿದೆ.

ವಾರದ ರಜೆಯನ್ನು ಭಾನುವಾರವೇ ಏಕೆ ಕೊಟ್ಟದ್ದಾರೆ ಅನ್ನುವುದಕ್ಕು ಒಬ್ಬ ವ್ಯಕ್ತಿಯ ಹೋರಾಟದ ಪರಿಶ್ರಮವಿದೆ. ೧೮೪೮ ಮತ್ತು ೧೮೯೭ ರ ಕಾಲಾವಧಿಯಲ್ಲಿದ್ದಂತಹ ವ್ಯಕ್ತಿ ಮೇಘಾಜಿ ಲೊಕೊಂಡೆ. ಇವರು ಸತ್ಯ ಶೋಧನಾ ಸಮಿತಿಯಲ್ಲೂ ಇರುತ್ತಾರೆ. ಜೊತೆಗೆ ಇವರು ಕಾರ್ಮಿಕ ನಾಯಕರೂ ಹೌದು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ವಾರವಿಡೀ ನಮಗೆ ಕೆಲಸ ಮಾಡಲಾಗುವುದಿಲ್ಲ ಕನಿಷ್ಟ ಒಂದು ದಿನವಾದರು ರಜೆ ಬೇಕು ಎಂದು ಹೋರಾಟ ಮಾಡುತ್ತಾರೆ. ಅವರು ವಾರವಿಡಿ ನಮಗೋಸ್ಕರ ದುಡಿದಿರುತ್ತೇವೆ ಸಮಾಜಕ್ಕಾಗಿ ದುಡಿಯುವವರು ಯಾರೂ ಇಲ್ಲ ಸಮಾಜ ಸೇವೆಗೆ ರಜೆ ಬೇಕು ಎಂದಿರುತ್ತಾರೆ. ಅವರ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಾಗ ಅವರ ಒತ್ತಡಕ್ಕೆ ಮಣಿದು ಭಾನುವಾರದ ದಿನವನ್ನು ವಾರಾಂತ್ಯದ ರಜೆಯನ್ನಾಗಿ ಘೋಷಣೆ ಮಾಡುತ್ತಾರೆ. ಭಾರತ ಸರಕಾರ ಇವರ ಹೆಸರಿನಲ್ಲಿ ಐದು ರೂಗಳ ಅಂಚೆ ಚೀಟಿಯನ್ನೂ ೨೦೦೫ರಲ್ಲಿ ಬಿಡುಗಡೆ ಮಾಡಿದೆ.

ನಂ(ಥ)ತರ

ಕನ್ನಡ ಟೀಚರ್ ಬೋರ್ಡ್ ಮೇಲೆ ನೋಟ್ಸ್ ಬರೆಯುತ್ತಿದ್ದರು. ಮಕ್ಕಳು ಅದನ್ನು ಯಥಾವತ್ ನಕಲು ಮಾಡಬೇಕಿತ್ತು. ಅವರದ್ದೋ ಮುತ್ತು ಪೋಣಿಸಿದ ಹಾಗೆ ಅಕ್ಷರಗಳಿದ್ದವು. ಬೋರ್ಡ್ ಕಡೆ ತಿರುಗಿಕೊಂಡು ಬರೆಯುತ್ತಿರುವಾಗ ಆಗಾಗ ನಂತರ ಬರೆಯಿರಿ ನಂತರ ಬರೆಯಿರಿ ಎನ್ನುತ್ತಿದ್ದರು. ಮಕ್ಕಳೂ ಟೀಚರ್ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು. ಟೀಚರ್ ಬರೆದಾಗಿರಬಹುದು ಎಂದು ಅಳಿಸಿ ಅಳಿಸಿ ಬರೆದು ಕಡೆಗೆ ಆಯ್ತು ನೀಟಾಗಿ ಬರೆಯಿರಿ ಎಂದು ಬೆಂಚ್ ರೌಂಡ್ಸಿಗೆ ಹೋದರೆ ಆಗ ಕಡೆಯ ಭಾಗದ ನೋಟ್ಸ್ ಬರೆಯುತ್ತಿದ್ದ ವಿದ್ಯಾರ್ಥಿಗೆ ಇಷ್ಟೆನಾ ಬರೆದಿದ್ದೂ ಈಗ ಪ್ರಾರಂಭ ಮಾಡಿದ್ದಿಯ ಎಂದು ಗದರಿ ಮುಂದೆ ಹೋದರೆ ಅಲ್ಲೂ ಅದೆ ಇನ್ನೂ ಮುಂದೆ ಹೋಗಿ ಮೊದಲ ಬೆಂಚನ್ನು ತಲುಪಿದರೆ ಅಲ್ಲೂ ಅದೇ ಯಾಕ್ರೋ ಹೀಗ್ ಮಾಡಿದ್ರಿ ನಾನು ಬರೆದದ್ದು ವ್ಯರ್ಥ ಆಯ್ತಲ್ಲ ಎಂದು ಒಬ್ಬನನ್ನು ನಿಲ್ಲಿಸಿ ಕೇಳಿದರೆ ಅವನು “ಮ್ಯಾಮ್ ನೀವೇ ಹೇಳಿದ್ದು ನಂತರ ಬರೆಯಿರಿ ಅಂತ ಅದಕ್ಕೆ ನೀವು ನಿಲ್ಲಿಸಿದ ನಂತರ ನಾವು ಬರೆಯುತ್ತಿದ್ದೇವೆ” ಎಂದ. ಟೀಚರ್ ಅಯ್ಯೋ ಮಕ್ಳ ನಾನ್ ಹೇಳಿದ್ದು ನನ್ ಹಾಗೆ ಸ್ವಲ್ಪವೂ ತಪ್ಪಿಲ್ಲದ ಹಾಗೆ ಬರೆಯಿರಿ ನನ್ ಥರ…… ನಾನು ಬರೆದ ಹಾಗೆ ಎಂದು ಇನ್ನೊಮ್ಮೆ ಬರೆಯಬೇಕೆ ಎಂದು ಬೇಸರವಾಗಬೇಕೇ. ಇಲ್ಲಿ ದೋಷ ಅಂದರೆ ಮಕ್ಕಳು ಕರಾವಳಿ ಭಾಗದವರು ಟೀಚರ್ ಮೈಸೂರು ಭಾಗದವರು.. ಟೀಚರ್ ಹೇಳಿದ್ದು ನಂಥರ…. ಎಂದು ಮಕ್ಕಳು ಅರ್ಥ ಮಾಡಿಕೊಂಡಿದ್ದು ನಂತರವನ್ನು ಆನಂತರ, ತದನಂತರ ಎಂದು.

ಟೈಂಪಾಸ್ ಉಪ್ಪಿನಂಗಡಿ

ಈ ಮಾತಿಗೆ ಇನ್ನೂ ವರ್ಷ ತುಂಬಿಲ್ಲ. ನನ್ನ ಜೀವದ ಗೆಳತಿ ಜಯಶ್ರೀ ಅಕಾಲಿಕನಿಧನದ ಸುದ್ದಿ ಗರಬಡಿಸಿತ್ತು. ಇದ್ದಾಗ ಹೋಗಿ ಮಾತನಾಡಿ ಬರುವ ಅದೃಷ್ಟ ಇರಲಿಲ್ಲ. ಈಗಾದರೂ ಅವಳ ಮನೆಗೆ ಹೋಗಬೇಕೆಂದು ಅವಳಿಲ್ಲದ ಅವಳ ಮನೆಗೆ ತೆರಳಿದೆವು. ಪುತ್ತೂರಿನಿಂದ ಹಾಸನ ತಲುಪುವುದು ಸಂಜೆಯ ನಂತರ ಕಷ್ಟ ಅವಳ ಮನೆಯಿಂದ ಬೇಗನೆ ಹೊರಟು ಬರಬೇಕಾದ ಅನಿವಾರ್ಯತೆ ಇತ್ತು. ನೋವಿನಲ್ಲೂ ಜಯಶ್ರೀಯ ಪತಿ ಮತ್ತು ಮಗ ನಮ್ಮನ್ನು ಉಪ್ಪಿನಂಗಡಿ ಬಸ್ ನಿಲ್ದಾಣ ತಲುಪಿಸಿದರು. ಮಂಗಳೂರಿನಿಂದ ಹಾಸನಕ್ಕೆ ತೆರಳುವ ಬಸ್ಗಳಿಗಾಗಿ ಸ್ವಲ್ಪ ಹೊತ್ತು ಕಾಯಬೇಕಾಯಿತು. ಅಷ್ಟರಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಮುಗಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳುವವರಿದ್ದರು. ಕಡಲೆಕಾಯಿ ಮಾರುವಾತ ಬಂದು ಕಡ್ಲೆಕಾಯಿ ಕಡ್ಲೆಕಾಯಿ ಟೈಂ ಪಾಸ್ ಕಡ್ಲೆಕಾಯಿ ಎಂದ ಅದಕ್ಕೆ ಹುಡುಗರು ನಾವು ಕಾಲೇಜಿಗೆ ಬರುವುದೇ ಟೈಂ ಪಾಸಿಗೆ ಎಂದರು… ಇನ್ನೊಬ್ಬ ಹುಡುಗರ ಮೂತಿಗೆ ತಿವಿಯುವಂತೆ ಕಲ್ಲಂಗಡಿ ಕಲ್ಲಂಗಡಿ ಎನ್ನುತ್ತಾ ಬಂದ. ಅದಕ್ಕೆ ಹುಡುಗರು ಸುಮ್ಮನಿರುತ್ತಾರೆಯೇ ಕಲ್ಲಂಗಡಿ ಹಣ್ಣನ್ನು ತೋರಿಸಿ ಇದು ಕಲ್ಲಂಗಡಿ ಹಣ್ಣಾದರೆ ಇದು ಎಂದು ನೆಲ ತೋರಿಸಿ ಉಪ್ಪಿನಂಗಡಿ ಎಂದರು. ನೋವಿನ ಭಾರದಲ್ಲೂ ಹುಡುಗರ ಮಾತಿಗೆ ನಗು ಬಂತು.

ಪಲ್ಲಿ ಚಟ್ನಿ ಸ್ಪಾಂಜಿ ದೋಸ

ಕಳೆದವಾರ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಹೋಗಿದ್ದೆವು. ಮುಳಬಾಗಿಲಿನಲ್ಲೆ ಹೊಟ್ಟೆ ಚುರು ಚುರು ಅನ್ನುತ್ತಿತ್ತು. ಇರಲಿ ಎನ್ನುತ್ತಾ ಚಿತ್ತೂರಿನಲ್ಲಿ ಬಸ್ ಇಳಿದ ಕೂಡಲೆ ಹೋಟೆಲ್‌ಗೆ ತೆರಳಿ ದೋಸೆ ಆರ್ಡರ್ ಮಾಡಿದೆವು. ದೋಸೆ ಚಟ್ನಿಯ ಘಮ ನಮ್ಮ ಮೂಗನ್ನು ದಾಟಿ ಭರ್ರನೆ ದೇಹ ಪ್ರವೇಶಿಸುತ್ತಿತ್ತು. ಅದೇ ಭರದಲ್ಲಿ ತಿಂದಿದ್ದರೆ ಚೆನ್ನಾಗಿತ್ತು. ಸುಮ್ಮನಿರಲಾರದೆ “ಇದು ಏನು ಚಟ್ನಿ” ಎಂದೆ. ಹೋಟೆಲ್ ಮಾಣಿಗೆ ಕನ್ನಡ ಅರ್ಥವಾಯಿತು ಆದರೆ ಉತ್ತರವನ್ನು ತೆಲುಗಿನಲ್ಲಿಯೇ “ಇದಿ ಪಲ್ಲಿ ಚಟ್ನಿ” ಎಂದ. ಕಸಿವಿಸಿ ಆಯಿತು “ಹೇಗ್ ಮಾಡ್ತೀರಿ?” ಅಂದೆ ಅದಕ್ಕವನು “ಪಲ್ಲಿಲನು ಧಂಚಿ, ವೆಯಿಂಚಿ ಪುಡಿಛೇಸಿ….” ಎನ್ನುತ್ತಿದ್ದಂತೆ ವಾಕರಿಕೆ ಬರಲು ಶುರುವಾಯಿತು. ಕನ್ನಡದಲ್ಲಿ ‘ಪಲ್ಲಿ’ ಅಂದರೆ ‘ಹಲ್ಲಿ’ ಅಲ್ಲವೆ. ಆದರೂ ಬಿಡಲಿಲ್ಲ ಗೂಗಲಮ್ಮನ ಸಹಾಯ ಪಡೆದು ನೋಡಿದರೆ ತೆಲುಗಲ್ಲಿ ‘ಪಲ್ಲಿ’ ಅಂದರೆ ಕನ್ನಡದಲ್ಲಿ ‘ನೆಲಗಡಲೆ’ ಅಂತಿತ್ತು. ಸಧ್ಯ! ಬದುಕಿತು ಬಡ ಜೀವ ಅನ್ನುವ ಹಾಗಾಯಿತು. ನಾನು ಮಾಣಿಗೆ “ಚೆನ್ನಾಗಿದೆ ಪಲ್ಲಿ ಚಟ್ನಿ” ಎಂದೆ ಅದಕ್ಕವನು “ಒಕ್ಕಟೆ ಪಲ್ಲಿ ಚಟ್ನಿಕಾದು ಮೇಡಮ್ ಸ್ಪಾಂಜಿ ದೋಸ ಪಲ್ಲಿ ಚಟ್ನಿ!!” ಎಂದ.

ಆಳುಬನ್

ಅಪ್ಪ ಅಪ್ಪ ಹಾಳು ಬನ್, ಹಾಳು ಟಿಕ್ಕಿ, ಹಾಳುಪೂರಿ, ಹಾಳುಚಿಪ್ಸ್ ತಗೊಂಡ್ ಬನ್ನಿ ನನ್ ಫ್ರೆಂಡ್ಸ್ ಎಲ್ಲಾ ಬರ್ತಾರೆ ಎಂದು ಹೇಳಿದ. ಮಗನ ತಿಂಡಿ ಲಿಸ್ಟ್ ಕೇಳಿ ಭಯವಾಗಿ ಇದೇನೋ ಇದು ಕುರುಕಲು ಲಿಸ್ಟ್ ಎಂದರೆ ಅಪ್ಪ ಕುರ್ಕುರೆನೂ ಬೇಕೂ ತನ್ನಿ ಎಂದ. ಅಂತೂ ಅಪ್ಪ ಕಷ್ಟಪಟ್ಟು ಹಾಲು ಬನ್, ಸರಿ ಹಾಲು ಪೂರಿ ಮನೆಯಲ್ಲೇ ಮಾಡಬಹುದು. ಇದ್ಯಾವುದು ಹಾಲಿನ ಜೊತೆಗೆ ಟಿಕ್ಕಿ, ಚಿಪ್ಸ್ ಎಂದು ಗದರಿಕೊಳ್ಳುತ್ತಿದ್ದರೆ ಅಮ್ಮಾ ಬಂದು ಹೇಳೋರು ಕೇಳೋರು ಬಲು ಜಾಣ್ರೆ ಎನ್ನುತ್ತಾ ಅದು ಆಲೂ ಬನ್, ಆಲೂಟಿಕ್ಕಿ, ಆಲೂ ಪೂರಿ, ಆಲೂ ಚಿಪ್ಸ್ ಎಲ್ಲಾ ಆಲೂಗೆಡ್ಡದೆ ಸಮೋಸೆ ಮೆ ಆಲೂ ಚಲೇಗ, ಸರ್ಕಸ್ ಮೆ ಬಂದರ್ ಚಲೇಗ ಅನ್ನೋಹಾಗೆ ನಮ್ಮನೆಲಿ ತಿಂಡಿ ಲಿಸ್ಟಲ್ಲಿ ಹಾಳ್ ಸುರೀತಿದೆ. ಮೊದಲು ಅ>ಹ ವ್ಯತ್ಯಾಸ ತಿಳಿಯಪ್ಪ ಎನ್ನುತ್ತಾ ಮಗನ ತಲೆಗೊಂದು ಮೊಟಕಿದಳು.

ಅಕ್ಷರಗಳನ್ನು ಸರಿಯಾಗಿ ತಿಳಿದು ಜತನದಿಂದ ಬಳಸಿದರೆ ಇಂಥ ತಪ್ಪುಗಳು ನುಸುಳಳಾರವು. ನಿರಂತರ ಪದಧ್ಯಾನಿಯಾದರೆ ಅಕ್ಷರವ್ಯತ್ಯಾಸದಿಂದ ಆಗುವ ವಿವಿದಾರ್ಥ ಕೊಡುವ ಪದಗಳು ಸಿಗುತ್ತವೆ ಆ ಮೂಲಕವೆ ಅವುಗಳನ್ನು ನೋಡಬಹುದು.