ಕಡಿದ ಮರದ ಸೀಳಿನೆಡೆಯಿಂದ
ಟಿಸಿಲೊಡೆದ ಹೊಸ ಚಿಗುರು
ಸಾರ್ವತ್ರಿಕ ಸತ್ಯವೊಂದನ್ನು ನುಡಿಯಿತು-
“ಏನಾದರಾಗಲಿ ಮರಳಿ ಚಿಗುರು”
***
ಕನ್ನಡಿಯೆದುರು ನಿಂತ ನನ್ನಲ್ಲಿ ಪ್ರಶ್ನೆಯಿತ್ತು-
“ನಾನು ಸತ್ಯವೋ? ಅಲ್ಲಾ ಕನ್ನಡಿಯೊಳಗಿನವನೋ?”
ಕನ್ನಡಿಯೊಳಗಿನವನಿಗೂ ಅದೇ ಪ್ರಶ್ನೆ
ಇದ್ದಿರಬಹುದು
***
ಅನ್ಯಮತೀಯರ ಮೇಲೆಸೆದ
ಕಲ್ಲನ್ನು ಎತ್ತಿಕೊಂಡು ನೋಡಿದೆ
ಅಲ್ಲಿ ನನ್ನಿಷ್ಟದ ದೇವರು
ಕಣ್ಣೀರು ಸುರಿಸುತ್ತಿದ್ದ
***
ಪಂಜರದ ಗಿಳಿಯನ್ನು ಹೊರಬಿಟ್ಟೆ
ಮರಳಿ ಬಂದು ನನ್ನನ್ನೇ ಪ್ರಶ್ನಿಸಿತು-
“ನೀನು ‘ಮುಕ್ತ’ನಾಗುವುದು ಯಾವಾಗ?”
***
ನಿದ್ರೆ ಕದಿಯುವ ಕನಸುಗಳು
ಬದುಕಿನ ಪಯಣಕ್ಕೆ
ನೆರವಾಗುವ ಅಡಿಗಲ್ಲುಗಳಾಗುತ್ತವೆ
***
ಕೆಲವೊಮ್ಮೆ ಹೀಗಾಗುತ್ತದೆ
ಅಂಗಿಯ ಕಿಸೆ ದೊಡ್ಡದಾದಷ್ಟೂ
ಹೃದಯದ ಬಾಗಿಲು ಚಿಕ್ಕದಾಗುತ್ತದೆ
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.