ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಮಯ ಮುಂದುವರಿಯಲಾಗಲಿಲ್ಲ ಅಕರಿಗೆ. ಭಾವನೆಯ ನಿರಂತರತೆಗೆ ಒಗ್ಗಿಹೋಗಿದ್ದ ಅವಳಿಗೆ ಭಾವನೆಗಳನ್ನು ತುಂಡುತುಂಡಾಗಿಸಿ ಜೋಡಿಸಿಕೊಳ್ಳುವ ಬಗೆ ಅರ್ಥವಾಗುತ್ತಲೇ ಇರಲಿಲ್ಲ. ಪಾತ್ರವೇ ತಾನಾಗಿ, ಪರಕಾಯಪ್ರವೇಶ ಮಾಡಿ, ಅಭಿನಯಿಸುತ್ತಿದ್ದ ಅವಳಿಗೆ ಬಿಡಿ ಬಿಡಿ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದು ಇಷ್ಟವಾಗುತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಅಸಹನೀಯ ಎನಿಸತೊಡಗಿತ್ತು. ಸಂಪಾದನೆಯೇನೋ ಆಗುತ್ತಿತ್ತು. ಆದರೆ ಕೆಲಸದಿಂದ ದೊರೆಯುವ ಆನಂದ ಕಳೆದುಹೋಗಿತ್ತು. ಸಹಜತೆಗೆ ಒತ್ತು ಇರುವ ಅಭಿನಯದ ಅವಕಾಶಕ್ಕಾಗಿ ಆಕೆ ಕಾಯುತ್ತಿದ್ದಳು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಕರುಳಬಳ್ಳಿ ಬಾಡಿಗೆಗಿದೆ!” ನಿಮ್ಮ ಈ ಭಾನುವಾರದ ಓದಿಗೆ

ಜಪಾನಿನ ಪ್ರಸಿದ್ಧ ತಕೆಶಿತಾ ರಸ್ತೆಯಲ್ಲಿ ನಡೆಯುತ್ತಿದ್ದ ಆ ಮಹಿಳೆ, ಸುಮಾರು ನಲುವತ್ತೈದು ವರ್ಷ ವಯಸ್ಸಿನ ಆ ಮಹಿಳೆ, ತೀವ್ರವಾದ ಕುತೂಹಲದಲ್ಲಿದ್ದಳು. ಹೊಸ ಉದ್ಯೋಗಕ್ಕೆ ಸೇರಿದ ಮೊದಲ ದಿನ ಇದು. ತಾನು ಹೇಗೆಲ್ಲಾ ನಟಿಸಬೇಕು, ಎಷ್ಟು ಮಮತೆ ವ್ಯಕ್ತಪಡಿಸಬೇಕು ಎಂದು ಯೋಜಿಸುತ್ತಲೇ ವ್ಯಾನಿಟಿ ಬ್ಯಾಗಿನಿಂದ ಕಾಗದವೊಂದನ್ನು ಹೊರದೆಗೆದಳು. ಎದುರಿಗಿದ್ದ ಅಂಗಡಿಯ ಒಳಹೋಗಿ, ಕೈಲಿದ್ದ ಕಾಗದವನ್ನು ತೋರಿಸಿ, ಆ ಮನೆ ಎಲ್ಲಿ ಬರುತ್ತದೆ ಎಂದು ವಿಚಾರಿಸಿದಳು. ಅಂಗಡಿಯವನು ಕೊಟ್ಟ ಲಘು ವಿವರಣೆಯಿಂದ ಮತ್ತು ಅವನ ಆಂಗಿಕ ಅಭಿನಯದಿಂದ ತಾನು ಸಾಗಬೇಕಾದ ದಾರಿ ದೂರ ಏನಿಲ್ಲ ಎನ್ನುವುದು ಅವಳಿಗೆ ಸ್ಪಷ್ಟವಾಯಿತು. ಹತ್ತು ಹೆಜ್ಜೆ ಕ್ರಮಿಸಿದ ಮೇಲೆ ಎಡಕ್ಕೆ ತಿರುಗಿ, ಸೀದಾ ನೇರವಾಗಿ ಹೋಗಿ, ಬಲಕ್ಕೆ ತಿರುಗಿದ ತಕ್ಷಣ ಸಿಕ್ಕಿದ ಮನೆಯನ್ನು ನೋಡಿದಳು. ಅರಮನೆಯಂತಹ ಭವ್ಯ ಬಂಗಲೆಯೊಂದು ಅವಳ ಎದುರಿಗಿತ್ತು. ಮನೆಯೆದುರು ಹೋಗಿ ನಿಂತು, ತನ್ನ ಕೈಲಿದ್ದ ಕಾಗದವನ್ನೂ, ಮನೆಯ ಗೋಡೆಯನ್ನೂ ಮತ್ತೆ ಮತ್ತೆ ನೋಡಿ ವಿಳಾಸ ಸರಿ ಇದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡಳು. ತನ್ನ ಅಭಿನಯದ ಸಾಮರ್ಥ್ಯವನ್ನು ಪ್ರಕಟಪಡಿಸುವ ಅಪಾರ ನಿರೀಕ್ಷೆಯೊಂದಿಗೆ ಮನೆಯ ಬಾಗಿಲನ್ನು ಮೆಲುವಾಗಿ ಬಡಿಯತೊಡಗಿದಳು. ಜೊತೆಜೊತೆಗೆ ತನ್ನ ಮುಖದಲ್ಲಿದ್ದ ಬೆವರ ಹನಿಗಳನ್ನು ಬಟ್ಟೆಯ ತೋಳಿನಲ್ಲಿ ಲಗುಬಗೆಯಿಂದ ಒರೆಸಿಕೊಳ್ಳುತ್ತಾ, ಸಾಧ್ಯವಾದಷ್ಟು ಗರಿಷ್ಟ ಪ್ರಮಾಣದಲ್ಲಿ ಮುಖವನ್ನು ನಗುವಿನಿಂದ ಅರಳಿಸಿಕೊಳ್ಳುವ ಪ್ರಯತ್ನ ಮಾಡತೊಡಗಿದಳು…

*****

ಇವಳ ಹೆಸರು ಅಕರಿ. ‘ನ್ಹೋ’(Noh) ಎನ್ನುವ ನಾಟಕ ಪ್ರಕಾರದ ಪ್ರಸಿದ್ಧ ನಟಿ. ನಟನೆ ಎಂದರೆ ಪ್ರಾಣ ಬಿಡುವಷ್ಟು ಆಸಕ್ತಿ. ಈಕೆಯ ಅಮ್ಮ ಐನಾಳೂ ಕೂಡಾ ನ್ಹೋ ನಾಟಕದ ನಟಿಯಾಗಿದ್ದಳು. ನಾಟಕ ಪ್ರದರ್ಶನವೊಂದರ ಸಂದರ್ಭದಲ್ಲಿ ಐನಾಳಿಗೆ ಶ್ರೀಮಂತನೊಬ್ಬನ ಪರಿಚಯವಾಗಿತ್ತು. ಆ ಶ್ರೀಮಂತ ವ್ಯಕ್ತಿ ಐನಾಳ ಸೌಂದರ್ಯಕ್ಕೆ ವಿಪರೀತವಾಗಿ ಮನಸೋತಿದ್ದ. ತನ್ನ ಅಪ್ಪ- ಅಮ್ಮ ಒಪ್ಪಿಕೊಳ್ಳದಿದ್ದರೂ ಮದುವೆ ಆಗುವುದಂತೂ ಶತಃಸಿದ್ಧ ಎಂದು ಹೇಳಿದ್ದ. ಬಾಲ್ಯದಿಂದಲೂ ಅನಾಥಳಾಗಿ ನಾಟಕ ಕಂಪೆನಿಯಲ್ಲೇ ಬೆಳೆದಿದ್ದ ಐನಾಳಿಗೆ ಮನೆಯವರ ಒಪ್ಪಿಗೆ ಕೇಳುವ ಪ್ರಮೇಯ ಬರಲೇ ಇಲ್ಲ. ಹೀಗೆ ಆ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿ, ಏಳು ತಿಂಗಳ ಗರ್ಭಿಣಿಯಾಗಿದ್ದ ಸಮಯದಲ್ಲಿ, ತನ್ನ ಗಂಡ ಎನಿಸಿಕೊಂಡಿರುವ ವ್ಯಕ್ತಿಗೆ ಸುಂದರ ಯುವತಿಯರನ್ನೆಲ್ಲಾ ಮದುವೆ ಎನ್ನುವ ಹೆಸರಿನಲ್ಲಿ ತನ್ನವರನ್ನಾಗಿಸಿಕೊಳ್ಳುವ ಛಾಳಿಯಿದೆ ಎನ್ನುವ ನಿಜ ವಿಚಾರ ಐನಾಳಿಗೆ ತಿಳಿದುಬಂದಿತ್ತು. ತನ್ನ ಮೇಲಾದ ಅನ್ಯಾಯಕ್ಕಾಗಿ ಈಕೆ ಬಡಬಡಿಸುತ್ತಿದ್ದರೆ, ಇಂತಹ ಆಕ್ರೋಶದ ಮಾತುಗಳನ್ನು ಕೇಳಿ ಕೇಳಿ ಅಭ್ಯಾಸವಾಗಿದ್ದ ಆತನಿಗೆ ಈಕೆಯ ಮಾತುಗಳು ನಾಟಲೇ ಇಲ್ಲ. ಗಂಡನೆನಿಸಿಕೊಂಡವನಿಂದ ಬೇರೆಯಾದ ಐನಾ, ತನಗೆ ಜನಿಸಿದ ಹೆಣ್ಣುಮಗುವಿಗೆ ಅಕರಿ(ಅಂದರೆ ‘ಬೆಳಕು’ ಎಂದರ್ಥ) ಎಂಬ ಹೆಸರನ್ನು ಇರಿಸಿದ್ದಳು, ಅವಳ ಬಾಳು ಬೆಳಕಾಗಲಿ ಎನ್ನುವ ಆಶಯದಿಂದ.

ಮಗುವಾಗಿದ್ದಾಗಿನಿಂದಲೂ ನಟನೆಯ ಸಹವಾಸದಲ್ಲಿಯೇ ಇದ್ದ ಅಕರಿ ಇಪ್ಪತ್ತರ ಹರೆಯದಲ್ಲಿಯೇ ಉತ್ತಮ ನಟಿ ಎಂದು ಗುರುತಿಸಿಕೊಳ್ಳುವಂತಾಗಿತ್ತು. ಮುದ್ದು ಮುಖ, ತಿದ್ದಿ ತೀಡಿದಂತಹ ಅಂಗಸೌಷ್ಠವ, ಆಕರ್ಷಕವಾದ ಧ್ವನಿ ಇವೆಲ್ಲವೂ ಆಕೆಯ ಅಭಿನಯವನ್ನು ಮತ್ತಷ್ಟು ಚಂದಗೊಳಿಸಬಲ್ಲ ಸಂಗತಿಗಳಾಗಿದ್ದವು. ಮಗಳ ಸೌಂದರ್ಯ ಕೆಲವೊಮ್ಮೆ ಐನಾಳ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸುತ್ತಿತ್ತು. ತಾನು ಮೋಸಹೋದಂತೆ ತನ್ನ ಮಗಳು ಪ್ರೀತಿಯ ಹೆಸರಿನಲ್ಲಿ ಅನ್ಯಾಯಕ್ಕೆ ಒಳಗಾಗಬಾರದು ಎನ್ನುವ ಕಾಳಜಿ ಅವಳಲ್ಲಿತ್ತು. ನಾಟಕ ಪ್ರದರ್ಶನ ಮುಗಿದ ಮೇಲೆ ಅಕರಿಯನ್ನು ಮಾತನಾಡಿಸುವ ವ್ಯಕ್ತಿಗಳ ಬಗ್ಗೆ ಐನಾ ವಿಶೇಷವಾದ ನಿಗಾ ವಹಿಸಿದ್ದಳು.

ಅಷ್ಟು ಜಾಗೃತವಾಗಿದ್ದರೂ ದೀಪದ ಬುಡದಲ್ಲಿದ್ದ ಕತ್ತಲೆ ಐನಾಳಿಗೆ ತಿಳಿಯುವ ವೇಳೆಗೆ ಕಾಲ ಮಿಂಚಿಹೋಗಿತ್ತು. ತನ್ನ ಜೊತೆಗೇ ನಟಿಸುವ ಬಡ ಕಲಾವಿದನೊಬ್ಬನಿಗೆ ಅಕರಿ ಮನಸೋತಿದ್ದಳು. ಅವನ ನಟನೆ ಇವಳನ್ನು ವಿಶೇಷವಾಗಿ ಆಕರ್ಷಿಸಿತ್ತು. ಅವನ ವ್ಯಕ್ತಿತ್ವ ಇವಳನ್ನು ಪ್ರಭಾವಿಸಿತ್ತು. ಅವನೂ ಇವಳನ್ನು ಪ್ರೀತಿಸುತ್ತಿದ್ದ. ಐನಾಳಿಗೆ ಈ ವಿಚಾರ ತಿಳಿಯುವ ವೇಳೆಗಾಗಲೇ ಅವರಿಬ್ಬರೂ ಜೊತೆಯಾಗಿ ಬದುಕನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡಾಗಿತ್ತು. ಐನಾ ಎಷ್ಟುಮಾತ್ರಕ್ಕೂ ಈ ಮದುವೆಗೆ ಸಿದ್ಧ ಇರಲಿಲ್ಲ. ತನ್ನ ಮಗಳ ಬದುಕು ತನ್ನ ಬದುಕಿನಂತೆಯೇ ಪುನರಾವರ್ತನೆಗೊಳ್ಳುವುದು ಆಕೆಗೆ ಬೇಕಾಗಿರಲಿಲ್ಲ. ಆದರೆ ಅಕರಿಯ ಬದುಕಿನ ನಿಯಂತ್ರಣ ಈಗ ಐನಾಳ ಕೈಮೀರಿಹೋಗಿತ್ತು. ತಾಯಿಯ ಜೊತೆಗಿನ ಸಂಬಂಧ ಶಾಶ್ವತವಾಗಿ ಕಳೆದುಹೋಗುವ ಬೆದರಿಕೆಗೂ ಜಗ್ಗದ ಅಕರಿ ತಾನು ಪ್ರೀತಿಸಿದವನ ಜೊತೆಗೇ ಹೊಸ ಬದುಕನ್ನು ಆರಂಭಿಸಿದಳು. ಕೋಪಗೊಂಡ ಐನಾ ಮತ್ತೆ ಮಗಳ ಮುಖ ನೋಡದಿರುವ ನಿರ್ಧಾರ ಕೈಗೊಂಡಿದ್ದಳು.

ಬಡತನ ಇತ್ತು. ಆದರೆ ಜೊತೆಗಾರನ ಪ್ರೀತಿಯ ಗುಂಗಿನಲ್ಲಿ ಅಕರಿಗೆ ಬಡತನ ಅಷ್ಟಾಗಿ ಕಾಡಲಿಲ್ಲ. ನಟನೆಯ ಮೂಲಕವೇ ತಮ್ಮ ಬದುಕಿನ ಸಂಕಷ್ಟಗಳನ್ನು ಮರೆಯುವ ವಿಶಿಷ್ಟ ಶಕ್ತಿಯನ್ನು ಆ ದಂಪತಿಗಳು ರೂಢಿಸಿಕೊಂಡಿದ್ದರು. ಅವರ ಪ್ರೀತಿಯ ಫಲವೆಂಬಂತೆ ಮುದ್ದಾದ ಗಂಡುಮಗುವೊಂದು ಜನಿಸಿತ್ತು. ಮಗುವಿಗೆ ಎರಡೂವರೆ ತಿಂಗಳುಗಳಾಗಿದ್ದ ಸಮಯ, ಮನೆಯಿಂದ ಹೊರಹೋಗಿದ್ದ ಅಕರಿಯ ಗಂಡ ಹೆಣವಾಗಿ ಮನೆಗೆ ಬಂದಿದ್ದ. ಯಾವುದೋ ವಾಹನ ಆತನ ಜೀವವನ್ನು ನುಂಗಿಹಾಕಿತ್ತು. ಗಂಡನನ್ನು ಕಳೆದುಕೊಂಡ ಅಕರಿ ಮಗುವನ್ನು ಕರೆದುಕೊಂಡು ಮತ್ತೆ ತನ್ನ ತಾಯಿಯ ಬಳಿಗೆ ಹೋಗುವ ಪ್ರಯತ್ನ ಮಾಡಿದಳು. ಆದರೆ ಅದಾಗಲೇ ಅವಳ ತಾಯಿ ತೀರಿಹೋಗಿದ್ದಳು.

ಹಾಲಿಗಾಗಿ ಮೊರೆಯಿಡುವ ಮುದ್ದು ಕಂದನನ್ನು ವೇದಿಕೆಯ ಹಿಂಭಾಗದಲ್ಲಿ ಮಲಗಿಸಿ, ವೇದಿಕೆಯೇರಿ ನಟಿಸುತ್ತಿದ್ದಳು ಅಕರಿ. ಹೀಗೆ ಕಷ್ಟದಲ್ಲಿಯೇ ದಿನಗಳು ಸಾಗುತ್ತಿದ್ದವು. ಆಗ ಮಗುವಿಗೆ ಆರು ತಿಂಗಳುಗಳಾಗಿರಬಹುದು. ತೆವಳುತ್ತಾ ಸಾಗುವ ಪ್ರಯತ್ನ ಮಾಡುತ್ತಿತ್ತು. ಅದೊಂದು ದಿನ ಪಾತ್ರ ನಿರ್ವಹಣೆ ಮಾಡಿದ ಅಕರಿ ವೇದಿಕೆ ಹಿಂಭಾಗಕ್ಕೆ ಬಂದು ನೋಡಿದರೆ ಅಲ್ಲಿ ಮಗುವಿಲ್ಲ. ಎಷ್ಟು ಹುಡುಕಿದರೂ, ಎಲ್ಲಿ ಹುಡುಕಿದರೂ ಮಗುವಿನ ಪತ್ತೆಯಿಲ್ಲ. ಉಳಿದ ಕಲಾವಿದರುಗಳಿಗೂ ಗೊತ್ತಿಲ್ಲ. ಪೋಲೀಸರಿಗೆ ದೂರು ಕೊಟ್ಟರೂ ಪ್ರಯೋಜನ ಆಗಲಿಲ್ಲ. ಇದ್ದೊಂದು ಮಗುವನ್ನೂ ಕಳೆದುಕೊಂಡ ಬಳಿಕ ಅಕರಿ ಒಬ್ಬಂಟಿಯಾಗಿದ್ದಳು.

*****

ಇಪ್ಪತ್ತಮೂರು ವರ್ಷ ವಯಸ್ಸಿನ ಯುವಕ ಅಕಿಓ ಬಾಗಿಲನ್ನು ತೆರೆದಾಗ ಅಕರಿ ಮುಗುಳ್ನಗುತ್ತಾ ನಿಂತಿದ್ದಳು. ಅವನು ಪ್ರಶ್ನಾರ್ಥಕವಾಗಿ ಇವಳನ್ನು ನೋಡಿದ. “ನಾನು ಕಝೊಕೊ ನೊ ರೊಮಾನ್ಸು ಸಂಸ್ಥೆಯಿಂದ…” ಎಂದು ಇವಳು ಶುರುಮಾಡಿದ ತಕ್ಷಣವೇ ಅವನಿಗೆ ಸಂಪೂರ್ಣ ಅರ್ಥವಾಗಿತ್ತು. “ಹ್ಞಾ! ಗೊತ್ತಾಯ್ತು. ಒಳಗೆ ಬನ್ನಿ. ಕೆಲಸದ ಅವಧಿ ಶುರು ಆಗಿದೆಯಲ್ಲಾ. ಆದ್ದರಿಂದ ನಿಮ್ಮನ್ನು ಅಮ್ಮ ಎಂದೇ ಕರೆಯುತ್ತೇನೆ” ನಗುತ್ತಾ, ವೇಗವಾಗಿ ನುಡಿದ. ಅಕರಿ ಮುಗುಳ್ನಗುತ್ತಲೇ ಮನೆಯ ಒಳಹೋದಳು. ವಿಶೇಷವಾದ ಸುಗಂಧ ಮನೆಯ ಒಳಗನ್ನು ಆವರಿಸಿತ್ತು. ಬಡತನದ ಬದುಕನ್ನಷ್ಟೇ ಕಂಡಿದ್ದ ಅಕರಿಗೆ ಮನೆಯ ವಾತಾವರಣ ತೀರಾ ಹೊಸದೆನಿಸಿತು ಮತ್ತು ಆಕರ್ಷಕವೆನಿಸಿತು. “ಅಮ್ಮ ಈಗ ಬರುತ್ತೇನೆ, ನೀವು ಕುಳಿತಿರಿ” ಎಂದು ಸೋಫಾದೆಡೆಗೆ ಕೈತೋರಿಸಿ ಹೇಳಿದ ಅಕಿಓ ಅಡುಗೆ ಕೋಣೆಯ ಕಡೆಗೆ ಹೋದ. ಇವಳು ಗೋಡೆ ಮೇಲಿದ್ದ ಚಿತ್ರವಿಚಿತ್ರವಾದ ಪೇಂಟಿಂಗನ್ನು ನೋಡುತ್ತಾ ನಿಂತಳು. ಗುಹೆಯ ಒಳಗಿನಿಂದ ಕರುಳಬಳ್ಳಿ ಹೊರಬಂದಿರುವ ಪೇಂಟಿಂಗನ್ನು ಅವಳು ಬಹಳಷ್ಟು ಹೊತ್ತು ಗಮನಿಸುತ್ತಲೇ, ಅದರ ಅರ್ಥ ಏನಿರಬಹುದೆಂದು ಗ್ರಹಿಸಿಕೊಳ್ಳಲೆತ್ನಿಸುತ್ತಿದ್ದಳು…

*****

ಮಗುವನ್ನು ಕಳೆದುಕೊಂಡ ಮೇಲೆ ನಾಟಕಗಳ ಮೂಲಕವೇ ತನ್ನ ಬದುಕಿನ ಸುಖವನ್ನು ಕಂಡುಕೊಳ್ಳುತ್ತಿದ್ದ ಅಕರಿಗೆ ಇತ್ತೀಚೆಗೆ ಅದೂ ಕಷ್ಟವಾಗತೊಡಗಿತ್ತು. ಆಧುನಿಕ ಮಾಧ್ಯಮಗಳ ಪ್ರಭಾವದಿಂದಾಗಿ ನ್ಹೋ ನಾಟಕಗಳಿಗೆ ಪ್ರೇಕ್ಷಕರು ಇರಲಿಲ್ಲ. ಸಿನಿಮಾಗಳನ್ನು ಕಿಕ್ಕಿರಿದು ನೋಡುವ ಜನರು ನಾಟಕಗಳ ಪ್ರದರ್ಶನವಿದ್ದ ವೇದಿಕೆಗಳತ್ತ ಕಣ್ಣೂ ಹಾಯಿಸುತ್ತಿರಲಿಲ್ಲ. ಇಷ್ಟ ಇಲ್ಲದಿದ್ದರೂ ಅನಿವಾರ್ಯವಾಗಿ ಅಕರಿ ಸಿನಿಮಾ ಕ್ಷೇತ್ರದ ಕಡೆಗೆ ಮುಖ ಮಾಡಿದಳು…

ಅದೊಂದು ದಿನ ಪಾತ್ರ ನಿರ್ವಹಣೆ ಮಾಡಿದ ಅಕರಿ ವೇದಿಕೆ ಹಿಂಭಾಗಕ್ಕೆ ಬಂದು ನೋಡಿದರೆ ಅಲ್ಲಿ ಮಗುವಿಲ್ಲ. ಎಷ್ಟು ಹುಡುಕಿದರೂ, ಎಲ್ಲಿ ಹುಡುಕಿದರೂ ಮಗುವಿನ ಪತ್ತೆಯಿಲ್ಲ. ಉಳಿದ ಕಲಾವಿದರುಗಳಿಗೂ ಗೊತ್ತಿಲ್ಲ. ಪೋಲೀಸರಿಗೆ ದೂರು ಕೊಟ್ಟರೂ ಪ್ರಯೋಜನ ಆಗಲಿಲ್ಲ. ಇದ್ದೊಂದು ಮಗುವನ್ನೂ ಕಳೆದುಕೊಂಡ ಬಳಿಕ ಅಕರಿ ಒಬ್ಬಂಟಿಯಾಗಿದ್ದಳು.

“ಅವರು ಬರುವುದಕ್ಕೆ ಇನ್ನೂ ಸಮಯ ಇದೆ ಅಮ್ಮ. ನೀವು ಬಹಳ ಬೇಗ ಬಂದ ಹಾಗಾಗಿದೆ” ಕೈಯ್ಯಲ್ಲಿದ್ದ ಜ್ಯೂಸ್ ಲೋಟವನ್ನು ಅಕರಿ ಕಡೆಗೆ ಚಾಚಿದವನು ತುಸು ಮೆಲುವಾಗಿ ನುಡಿದ- “ನನ್ನಮ್ಮನನ್ನು ನಾನು ಏಕವಚನದಲ್ಲಿಯೇ ಮಾತನಾಡಿಸುತ್ತಿದ್ದೆ. ನಿಮಗೂ ಅಭ್ಯಂತರವಿಲ್ಲದಿದ್ದರೆ…” ಅಕರಿಯ ಒಪ್ಪಿಗೆಗಾಗಿ ಕಾದ.

“ಖಂಡಿತವಾಗಿಯೂ ನೀನು ಹಾಗೇ ಮಾತನಾಡಿಸಬಹುದು” ಆತ ಚಾಚಿದ ಗ್ಲಾಸನ್ನು ತೆಗೆದುಕೊಳ್ಳುತ್ತಾ ಈಕೆ ನುಡಿದಳು. “ಲವ್ ಮ್ಯಾರೇಜಾ ನಿಮ್ಮದು?” ಸೋಫಾದಲ್ಲಿ ಕುಳಿತುಕೊಂಡು, ಗ್ಲಾಸನ್ನು ಬಾಯಿಗಿಡುತ್ತಾ ಕೇಳಿದಳು.

“ಹೌದು, ಕಾಲೇಜು ಓದುತ್ತಿದ್ದಾಗಲೇ ನನಗೂ ಅವಳಿಗೂ ಲವ್ವಾಯಿತು. ಹೆಸರು ಅಯ್ಮಿ. ನಾನೇ ಪ್ರಪೋಸ್ ಮಾಡಿದ್ದು. ಅವಳು ಮೊದಲೇ ನನ್ನ ಪ್ರಪೋಸ್‌ನ ನಿರೀಕ್ಷೆಯಲ್ಲಿದ್ದಂತೆ ತಕ್ಷಣಕ್ಕೆ ಒಪ್ಪಿಕೊಂಡಳು. ನನ್ನ ಅಪ್ಪ ಅಮ್ಮ…” ಒಂದಷ್ಟು ಸಮಯ ಅಕಿಓ ಮೌನಿಯಾದ. ಒಂದಷ್ಟು ದುಃಖಿತನಾದಂತೆ ಕಂಡುಬಂದ. ಹೆತ್ತವರ ಬಗ್ಗೆ ಏನೋ ಯೋಚಿಸುತ್ತಿದ್ದಾನೆ ಎನ್ನುವುದು ಅಕರಿಗೆ ಸ್ಪಷ್ಟವಾಗಿತ್ತು. ತನ್ನ ಕರ್ತವ್ಯಪಾಲನೆಯನ್ನು ನೆನೆದು ಅವನ ತಲೆದಡವಿ ಸಂತೈಸುವ ಪ್ರಯತ್ನ ಮಾಡಿದಳು. ಕೇಳಲೋ ಬೇಡವೋ ಎಂಬ ಸಂಕೋಚದಲ್ಲಿಯೇ ಕೇಳಿದಳು- “ಅಪ್ಪ ಅಮ್ಮ ನಿಮ್ಮ ಮದುವೆಗೆ ಒಪ್ಪಿಕೊಳ್ಳಲಿಲ್ಲವಾ?”

“ಬದುಕಿದ್ದರೆ ಒಪ್ಪಿಕೊಳ್ಳುತ್ತಿದ್ದರು” ಎಂದವನು ಸೋಫಾದಿಂದ ಎದ್ದು, ಕಿಟಕಿಯ ಬಳಿ ಹೋಗಿ ನಿಂತುಕೊಂಡ. ಅಕರಿಗೆ ಅವನ ಮಾತು ಹೆಚ್ಚೇನೂ ಆಶ್ಚರ್ಯ ಮೂಡಿಸಲಿಲ್ಲ. ಅವನ ತಂದೆ ತಾಯಿ ತೀರಿಹೋದದ್ದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಮಾತ್ರ ಆಕೆಯಲ್ಲಿದ್ದದ್ದು. ಅವನು ಹೇಳತೊಡಗಿದ. ಅವಳು ಕೇಳಿಸಿಕೊಳ್ಳುತ್ತಿದ್ದಳು…

*****

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಮಯ ಮುಂದುವರಿಯಲಾಗಲಿಲ್ಲ ಅಕರಿಗೆ. ಭಾವನೆಯ ನಿರಂತರತೆಗೆ ಒಗ್ಗಿಹೋಗಿದ್ದ ಅವಳಿಗೆ ಭಾವನೆಗಳನ್ನು ತುಂಡುತುಂಡಾಗಿಸಿ ಜೋಡಿಸಿಕೊಳ್ಳುವ ಬಗೆ ಅರ್ಥವಾಗುತ್ತಲೇ ಇರಲಿಲ್ಲ. ಪಾತ್ರವೇ ತಾನಾಗಿ, ಪರಕಾಯಪ್ರವೇಶ ಮಾಡಿ, ಅಭಿನಯಿಸುತ್ತಿದ್ದ ಅವಳಿಗೆ ಬಿಡಿ ಬಿಡಿ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದು ಇಷ್ಟವಾಗುತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಅಸಹನೀಯ ಎನಿಸತೊಡಗಿತ್ತು. ಸಂಪಾದನೆಯೇನೋ ಆಗುತ್ತಿತ್ತು. ಆದರೆ ಕೆಲಸದಿಂದ ದೊರೆಯುವ ಆನಂದ ಕಳೆದುಹೋಗಿತ್ತು. ಸಹಜತೆಗೆ ಒತ್ತು ಇರುವ ಅಭಿನಯದ ಅವಕಾಶಕ್ಕಾಗಿ ಆಕೆ ಕಾಯುತ್ತಿದ್ದಳು. ಅದೇ ಸಮಯದಲ್ಲಿ ಅದೊಂದು ಸಂಸ್ಥೆಯ ಬಗ್ಗೆ ಆಕೆಗೆ ಸಹಕಲಾವಿದರು ಯಾರೋ ತಿಳಿಸಿದ್ದರು. ಕುತೂಹಲಗೊಂಡ ಆಕೆ ಆ ಸಂಸ್ಥೆಯಿದ್ದ ಪ್ರದೇಶ ಯಾವುದೆಂದು ವಿಚಾರಿಸಿ, ಆ ಕಡೆಗೆ ಪಯಣ ಬೆಳೆಸಿದ್ದಳು…

*****

“ಚಿಕ್ಕಂದಿನಿಂದಲೂ ಹಾಗೆ, ನನಗೆ ಯಾವುದಕ್ಕೂ ಬೇಡ ಎನ್ನುತ್ತಿರಲಿಲ್ಲ. ನಾನು ಏನೇ ಕೇಳಿದರೂ ಕೊಡಿಸುತ್ತಿದ್ದರು. ಎಲ್ಲವನ್ನೂ ಅವರಿಂದ ಪಡೆದೂ ಪಡೆದೂ ಅಭ್ಯಾಸವಾಗಿದ್ದ ನನಗೆ ನನ್ನ ಪ್ರೀತಿಯ ವಿಷಯದಲ್ಲಿಯೂ ಅವರು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿತ್ತು. ಆ ಕಾರಣದಿಂದಲೇ ಅವರಿಗೆ ವಿಷಯ ತಿಳಿಸುವುದಕ್ಕೆ ನಾನು ಹೆಚ್ಚು ಆತುರ ಮಾಡಿರಲಿಲ್ಲ. ಆದರೆ ಆ ದಿನ ಕಾರು ಹತ್ತಿ ಹೋದ ಅವರು ಜೀವಂತವಾಗಿ ಮನೆಗೆ ಬರಲೇ ಇಲ್ಲ. ಕಾಲೇಜಿನಿಂದ ಮನೆಗೆ ಬಂದು ಅವರಿಗಾಗಿ ಕಾದು ಕುಳಿತಿದ್ದ ನನಗೆ ಅವರ ರಕ್ತಸಿಕ್ತ ದೇಹ ನೋಡುವುದಕ್ಕೆ ಆಗಲೇ ಇಲ್ಲ” ಹೀಗೆಂದ ಅಕಿಓ ಮನದಣಿಯೇ ಬಿಕ್ಕಳಿಸಿದ. ಚಿಕ್ಕ ಮಗುವಿನಂತೆ ಅಳತೊಡಗಿದ. ಈಗಾಗಲೇ ಅಕಿಓನ ತಾಯಿಯೇ ತಾನಾಗಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದ ಅಕರಿ ಆತನನ್ನು ಬಿಗಿದಪ್ಪಿ ಸಮಾಧಾನ ಹೇಳತೊಡಗಿದಳು. ಕಳೆದುಹೋದ ಮಗನ ನೆನಪು ಆಕೆಯ ಕಣ್ಣುಗಳಲ್ಲಿಯೂ ನೀರಿನ ಹನಿಗಳನ್ನು ಮೂಡಿಸಿತು.

ಅಕರಿಯ ಸಂತೈಸುವಿಕೆಯಿಂದ ಒಂದಿಷ್ಟು ಸಮಾಧಾನಗೊಂಡ ಅಕಿಓ ಮತ್ತೇನನ್ನೋ ಹೇಳತೊಡಗಿದ- “ನನ್ನ ತಾಯಿ ಬರೆದಿಟ್ಟಿದ್ದ ಡೈರಿಯೊಂದು ಕಳೆದ ವಾರವಷ್ಟೇ ಸಿಕ್ಕಿತು. ಅದರ ಪುಟವೊಂದನ್ನು ಓದಿ ನನಗೆ ಆಶ್ಚರ್ಯವಾಯ್ತು. ಆ ಆಶ್ಚರ್ಯದ ಭಾವದಲ್ಲೇ, ನೀವಾಗ ಕುತೂಹಲದಿಂದ ನೋಡುತ್ತಿದ್ದ ಪೇಂಟಿಂಗ್ ಇದೆಯಲ್ಲಾ, ಗುಹೆಯೊಳಗಿನಿಂದ ಹೊರಬಂದ ಕರುಳಬಳ್ಳಿ, ಅದನ್ನು ನಾನು ಬಿಡಿಸಿದ್ದು…” ಮೊಬೈಲ್ ರಿಂಗಣಿಸಿದ್ದರಿಂದಾಗಿ ಆತನ ಮಾತು ಮುಂದುವರಿಯಲಿಲ್ಲ. ಅಯ್ಮಿ ಕರೆ ಮಾಡಿದ್ದಳು. ತಾನೂ, ತನ್ನ ಮನೆಯವರೂ ಹೊರಟಿರುವುದಾಗಿ ಅವಳು ತಿಳಿಸಿದ ತಕ್ಷಣವೇ ಅಕಿಓ “ಹ್ಞಾ, ಬೇಗ ಬನ್ನಿ ಬೇಗ ಬನ್ನಿ. ನಾನೂ ನನ್ನ ತಾಯಿಯೂ ಕಾಯುತ್ತಿದ್ದೇವೆ” ಎಂದು ಅಕರಿಯ ಕಡೆಗೆ ತಿರುಗಿ ನೋಡಿ ನಗುತ್ತಾ ಹೇಳಿ ಫೋನಿಟ್ಟ.

“ನಾನಿನ್ನೂ ರೆಡಿ ಆಗಿಲ್ಲ ಅಂತ ಗೊತ್ತಾದರೆ ಮದುವೆ ಕುರಿತು ನಾನು ಸೀರಿಯಸ್ ಆಗಿಲ್ಲ ಅಂತ ವಿಪರೀತ ಬೇಸರ ಮಾಡಿಕೊಳ್ಳುತ್ತಾಳೆ. ಅವಳಿಗೆ ಮೊದಲಿನಿಂದಲೂ ಹಾಗೆ, ಮದುವೆಯ ಬಗ್ಗೆ ವಿಪರೀತ ಕನಸು. ಶಿಂಟೋ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ಆಗಬೇಕೆಂಬ ಆಸೆಯೇ ಅವಳಿಗಿದ್ದದ್ದು. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯ ಇಲ್ಲ ಎಂದು ನಾನು ಅಂದದ್ದಕ್ಕೆ ನನ್ನ ಮೇಲಿನ ಪ್ರೀತಿಗೆ ಈ ಸರಳ ವಿವಾಹಕ್ಕೆ ಒಪ್ಪಿಕೊಂಡಿದ್ದಾಳೆ ಅಷ್ಟೇ. ಅವಳೂ, ಅವಳ ಮನೆಯವರೂ ಬರುವ ಮೊದಲು ನಾನು ಡ್ರೆಸ್ ಮಾಡಿಕೊಂಡು ಬರುತ್ತೇನೆ” ಎಂದು ಮೊಬೈಲನ್ನು ಚಾರ್ಜಿಗಿಡುತ್ತಲೇ ಆತುರಾತುರವಾಗಿ ನುಡಿದ ಅಕಿಓ ಮೆಟ್ಟಿಲು ಹತ್ತಿ, ಮೇಲಿನ ಕೋಣೆಗೆ ಹೋದ. ಅವನ ಕಾತುರತೆ, ಸಂತಸವನ್ನು ಕಂಡು ಅಕರಿಯೂ ಸಂತಸಪಡುತ್ತಾ, ಕ್ಯಾಟರಿಂಗ್‍ನವರು ತಂದಿರಿಸಿದ್ದ ಅಡುಗೆ ಪದಾರ್ಥಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಲು ಅಡುಗೆಕೋಣೆಯೊಳಕ್ಕೆ ನಡೆದಳು.

*****

‘ಕಝೊಕೊ ನೊ ರೊಮಾನ್ಸು’ ಸಂಸ್ಥೆಗೆ ಬಂದ ಅಕರಿ, ಸಂಸ್ಥೆಯ ಮುಖ್ಯಸ್ಥರಲ್ಲಿ ಮಾತನಾಡಿದಳು. “ಇದೊಂದು ವಿಶಿಷ್ಟ ಬಗೆಯ ಪರಿಕಲ್ಪನೆಗಳನ್ನು ಇಟ್ಟುಕೊಂಡು, ಸ್ಥಾಪಿತವಾದ ಸಂಸ್ಥೆ. ಜನರಿಗೆ ಅವಶ್ಯಕವಾದ ಮನುಷ್ಯ ಸಂಬಂಧಗಳನ್ನು ನಿಗದಿತ ಹಣಕ್ಕೆ ಒದಗಿಸಿಕೊಡುವುದು ನಮ್ಮ ಈ ಸಂಸ್ಥೆಯ ಕಾರ್ಯಚಟುವಟಿಕೆ. ಅಂದರೆ, ಸೋದರಿ ಇಲ್ಲದಿರುವ ಯಾರೋ ಒಬ್ಬ ವ್ಯಕ್ತಿಗೆ ಸೋದರಿ ಬೇಕು ಎನಿಸಿದರೆ ಆತ ನಮ್ಮ ಸಂಸ್ಥೆಯನ್ನು ಸಂಪರ್ಕಿಸುತ್ತಾನೆ. ನಿಗದಿಪಡಿಸಲಾದ ಸಂಭಾವನೆಗೆ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ನಟಿ ಆ ವ್ಯಕ್ತಿಯ ಸೋದರಿಯಾಗಿ ನಟಿಸುತ್ತಾಳೆ. ತನ್ನ ನಟನೆಗೆ ತಕ್ಕುದಾದ ಸಂಭಾವನೆಯನ್ನೂ ಪಡೆಯುತ್ತಾಳೆ. ಮದುವೆ ಮೊದಲಾದ ಸಮಾರಂಭಗಳು ನಡೆದಾಗ ನಮ್ಮ ಸಂಸ್ಥೆಯ ಒಂದಷ್ಟು ಜನ ನಟ- ನಟಿಯರನ್ನು ಒಟ್ಟಾಗಿ ಬಾಡಿಗೆ ಆಧಾರದಲ್ಲಿ ಬುಕ್ ಮಾಡಲಾಗುತ್ತದೆ. ಸಂಬಂಧಿಕರಂತೆ ನಟಿಸುವುದಕ್ಕೆ ಒಪ್ಪಿಕೊಂಡ ನಟ- ನಟಿಯರು ಮದುವೆಯ ಸಂಪೂರ್ಣ ವಿಧಿವಿಧಾನಗಳಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಾಗುತ್ತದೆ. ನೈಜ ಸಂಬಂಧಗಳನ್ನು ಕಳೆದುಕೊಂಡು ಅಶಾಶ್ವತ ಸಂಬಂಧಗಳಿಗಾಗಿ ಬಯಸುವ ಆಧುನಿಕ ಕಾಲಘಟ್ಟದಲ್ಲಂತೂ ನಮ್ಮ ಸಂಸ್ಥೆಗೆ ವಿಪರೀತವಾದ ಬೇಡಿಕೆ ಸದಾ ಇದ್ದೇ ಇದೆ. ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಿ, ನಮ್ಮ ಗ್ರಾಹಕರು ಬಾಡಿಗೆಗೆ ಪಡೆದ ಕುಟುಂಬಿಕರ ಜೊತೆಗೆ ದೈಹಿಕ ಸಂಬಂಧವನ್ನು ಬೆಳೆಸುವಂತಿಲ್ಲ ಎಂಬ ಕರಾರು ಇರುವುದರಿಂದ ನಿಮ್ಮ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯಗಳು ನಡೆಯದಂತೆ ನಮ್ಮ ಸಂಸ್ಥೆ ಕಾಳಜಿ ವಹಿಸುತ್ತದೆ” ಸಂಸ್ಥೆಯ ಮುಖ್ಯಸ್ಥರು ನೀಡಿದ ವಿವರಣೆಗಳಿಂದ ತನ್ನ ಕೆಲಸದ ವಿಧಾನದ ಕುರಿತು ಅಕರಿಗೆ ಕುತೂಹಲ ಹುಟ್ಟಿಕೊಂಡಿತ್ತು. ತಾನು ಬಹಳ ದಿನಗಳಿಂದ ಬಯಸುತ್ತಿದ್ದ ಸಹಜಾಭಿನಯಕ್ಕೆ ಇದರಲ್ಲಿ ಅವಕಾಶವಿದೆ ಎಂದು ಆಕೆಗೆ ಅನಿಸಿತ್ತು. ಅದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದಳು.

ಕೆಲಸಕ್ಕೆ ಸೇರಿಕೊಂಡ ಅಕರಿಗೆ ಮೊದಲು ಸಿಕ್ಕಿದ ಅವಕಾಶ- ಅಕಿಓ ಎನ್ನುವ ಯುವಕನ ಮದುವೆಯಲ್ಲಿ ಆತನ ತಾಯಿಯಾಗಿ ನಟಿಸುವುದು. ಮನೆ ವಿಳಾಸ ತಿಳಿದುಕೊಂಡು, ಅಕಿಓನ ತಾಯಿಯಾಗಿ ನಟಿಸಲು ಬಂದವಳು ಈಗ ಅಕಿಓನ ಮನೆಯಲ್ಲಿಯೇ ಇದ್ದಾಳೆ. ಆತನ ತಾಯಿಯಾಗಿ ನಟಿಸುತ್ತಿದ್ದಾಳೆ…

*****

ಕಾಲಿಂಗ್ ಬೆಲ್ ಸದ್ದಾಯಿತು. ಅಕಿಓ ಇನ್ನೂ ರೂಮಿನಿಂದ ಹೊರಗೆ ಬಂದಿರಲಿಲ್ಲ. ಅಕರಿ ತಾನೇ ಹೋಗಿ ಬಾಗಿಲು ತೆರೆದಳು. ಅಯ್ಮಿ ತನ್ನ ತಂದೆ- ತಾಯಿಯರ ಜೊತೆಗೆ ನಗುತ್ತಾ ನಿಂತಿದ್ದಳು. ಆಧುನಿಕ ಶೈಲಿಯ ಬಟ್ಟೆ ತೊಟ್ಟಿದ್ದಳು. ಕಣ್ಣಿನ ಹೊಳಪು ನೋಡುವಾಗಲೇ ತುಂಟಿ ಎನ್ನುವುದು ಗೊತ್ತಾಗುತ್ತಿತ್ತು. ಅಕಿಓ ಎಲ್ಲವನ್ನೂ ಹೇಳಿರಬೇಕು, ಅಕರಿಯನ್ನು ಹೊಸದಾಗಿ ಕಾಣುತ್ತಿರುವ ಅಚ್ಚರಿ ಅಯ್ಮಿಯಲ್ಲಿ ಇರಲಿಲ್ಲ. ಖುಷಿಯಿಂದ ಅವರನ್ನು ಸ್ವಾಗತಿಸಿದ ಅಕರಿ, ಉಪಚರಿಸಿ, ಮಾತನಾಡಿಸುತ್ತಿರುವಷ್ಟರಲ್ಲಿ ಅಕಿಓ ಬಂದ. ಒಂದಷ್ಟು ತಮಾಷೆ, ನಗು ಎಲ್ಲವುಗಳ ಮಧ್ಯೆ ಶಿಂಟೋ ಸಂಪ್ರದಾಯದ ಹಂಗಿಲ್ಲದೇ ಅವರ ಮದುವೆ ನಡೆಯಿತು. ಒಟ್ಟಾಗಿ ಕುಳಿತು, ಸಂತಸದಿಂದ ಊಟವನ್ನು ಮಾಡಿ ಮುಗಿಸಿದರು.

ತನ್ನ ಕೆಲಸ ಮುಗಿಯಿತೆಂದುಕೊಂಡ ಅಕರಿ ತಾನು ಹೊರಡುತ್ತಿರುವುದಾಗಿ ಅಕಿಓನಿಗೆ ತಿಳಿಸಿದಳು. “ಒಂದು ನಿಮಿಷ” ಎಂದ ಆತ ತನ್ನ ಕೋಣೆಯ ಒಳಹೋಗಿ ನೋಟಿನ ಕಟ್ಟನ್ನು ತಂದು, ಅಕರಿಯ ಕೈಯ್ಯಲ್ಲಿಟ್ಟ. “ಇಲ್ಲ, ನನಗೆ ನಾನು ಕೆಲಸ ಮಾಡುವ ಸಂಸ್ಥೆ ಸಂಬಳ ಕೊಡುತ್ತದೆ” ಎಂದು ಅಕರಿ ಅಂದದ್ದಕ್ಕೆ “ಇದು ಸಂಬಳವೆಂದು ನಾನು ಕೊಡುತ್ತಿಲ್ಲ. ನನ್ನ ಖುಷಿಗೆ ಕೊಡುತ್ತಿದ್ದೇನೆ. ತೆಗೆದುಕೊಳ್ಳಲೇಬೇಕು” ಎಂದ. ಗಂಡನ ಸಮೀಪದಲ್ಲಿಯೇ ನಿಂತಿದ್ದ ಅಯ್ಮಿಯೂ ಕೂಡಾ ಹಣವನ್ನು ತೆಗೆದುಕೊಳ್ಳುವಂತೆ ಮುಖಭಾವ ಮಾಡಿದಳು. ಕಣ್ಣಿನಲ್ಲಿ ನೀರು ತುಂಬಿಕೊಂಡು ಹಣ ತೆಗೆದುಕೊಂಡ ಅಕರಿ, ಭಾರದ ಹೃದಯದೊಂದಿಗೆ ಆ ಮನೆಯಿಂದ ಹೊರಟಳು.

ಮನೆಯ ಗೇಟನ್ನು ದಾಟಿ ಸ್ವಲ್ಪ ಮುಂದೆ ಬಂದ ಮೇಲೆ ಅಕಿಓ ಕೊಟ್ಟ ನೋಟಿನ ಕಂತೆಯನ್ನು ಬಿಡಿಸಿ, ನೋಟುಗಳನ್ನು ಎಣಿಸಿದ ಅಕರಿಗೆ ಆಶ್ಚರ್ಯವಾಯಿತು. ಭರ್ತಿ ಹತ್ತು ಸಾವಿರ ಯೆನ್‌ಗಳು! ಹೊಸ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ ಸಂತೃಪ್ತಿ ಅವಳ ಹೃದಯವನ್ನು ತುಂಬಿಕೊಂಡಿತ್ತು.

ಅಕರಿ ಸಾಗಿಹೋದ ದಾರಿಯನ್ನೇ ನೋಡುತ್ತಿದ್ದ ಅಕಿಓನಿಗೆ, ತನ್ನನ್ನು ಮಗುವಾಗಿದ್ದಾಗ ನಾಟಕ ನಡೆಯುತ್ತಿದ್ದ ವೇದಿಕೆಯ ಹಿಂಭಾಗದಿಂದ ಕದ್ದುಕೊಂಡು ಬಂದಿರುವುದರ ಕುರಿತು ತನ್ನ ಸಾಕುತಾಯಿ ಪಶ್ಚಾತಾಪದಿಂದ ಡೈರಿಯಲ್ಲಿ ಬರೆದುಕೊಂಡಿದ್ದ ವಿಚಾರವನ್ನು ತಾನು ಅಕರಿಗೆ ತಿಳಿಸಿಯೇ ಇಲ್ಲ. ತಾನು ಅಕರಿಯಲ್ಲಿ ಪ್ರಸ್ತಾಪಿಸಿದ ಡೈರಿಯ ವಿಷಯ ಅರ್ಧಕ್ಕೇ ನಿಂತಿದೆ ಎನ್ನುವುದು ಈಗ ನೆನಪಾಯಿತು. ಅಕರಿ ಸಾಗಿಹೋದ ದಾರಿಯನ್ನೇ ನೋಡತೊಡಗಿದ……

*****

ಸೂಚನೆ: ಜಪಾನಿನಲ್ಲಿ ‘Family Romance’ ಎನ್ನುವ ಸಂಸ್ಥೆಯಿದ್ದು, ಇಶಿ ಯುಚಿ ಎನ್ನುವವರು ಇದರ ಸಂಸ್ಥಾಪಕರಾಗಿದ್ದಾರೆ. ಸಾವಿರದಿನ್ನೂರು ಜನ ನಟ- ನಟಿಯರು ಇವರ ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕುಟುಂಬವನ್ನು, ಕುಟುಂಬಿಕರನ್ನು ಬಾಡಿಗೆಗೆ ಪಡೆದುಕೊಳ್ಳುವ ಸೇವೆಯನ್ನು ಈ ಸಂಸ್ಥೆ ಒದಗಿಸಿಕೊಡುತ್ತಿದೆ. ಇದೇ ವಸ್ತುವನ್ನು ಮೂಲವಾಗಿರಿಸಿಕೊಂಡು ಈ ಕಥೆಯನ್ನು ಹೆಣೆದಿದ್ದೇನೆ.