ಮೇ ತಿಂಗಳ ಹದಿನೇಳನೇ ತಾರೀಖು ನನ್ನ ಬಹುಕಾಲದ ಕನಸು ನನಸಾದ ದಿನ. ಪಿಎಚ್.ಡಿ. ವಿದ್ಯಾರ್ಥಿ ಎಂದೆನಿಸಿಕೊಂಡು ಅದಾಗಲೇ ಏಳು ವರ್ಷ ಕಳೆದಿತ್ತು. ಮಹಾಪ್ರಬಂಧ ಸಿದ್ಧಪಡಿಸಿ, ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವರ್ಷ ಒಂದಾಗಿತ್ತು. ನನ್ನ ಸಂಶೋಧನೆಗೆ ಅರ್ಥಪೂರ್ಣ ಮುಕ್ತಾಯವೊಂದು ದೊರಕುವುದಿಲ್ಲವೋ ಏನೋ ಎಂಬ ಆತಂಕ ಹೃದಯವನ್ನೊತ್ತಿ ನಿಂತಿತ್ತು. ಆ ಕ್ಷಣದಲ್ಲಿಯೇ ಮುಕ್ತ ಮೌಖಿಕ ಪರೀಕ್ಷೆಗೆ ಕರೆಬಂದದ್ದು. ಮೇ ಹದಿನೇಳರಂದು ನಾನು ಮೌಖಿಕ ಪರೀಕ್ಷೆಯನ್ನು ಎದುರಿಸಬೇಕಿತ್ತು. ಅದಕ್ಕೂ ಎರಡು ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟು ಬೆಳ್ಳಂಬೆಳಗ್ಗೆಯೇ ಆಸ್ಪತ್ರೆ ಸೇರಿಕೊಳ್ಳುವಂತಾಯಿತು. ಒಂದು ವಾರ ಆಸ್ಪತ್ರೆಯಲ್ಲಿಯೇ ಇರದೆ ಬೇರೆ ದಾರಿಯಿರಲಿಲ್ಲ.
ಹೊಸ ವರ್ಷಕ್ಕೆ ಹಳೆಯ ನೆನಕೆಗಳೊಂದಿಗೆ ಡಾ. ವಿಶ್ವನಾಥ ನೇರಳಕಟ್ಟೆ ಬರಹ
ವ್ಯಕ್ತಮಧ್ಯ ಎಂದರೆ ಬದುಕು. ಹುಟ್ಟಿನ ಮೊದಲಿನ ಸ್ಥಿತಿ, ಅದು ಅವ್ಯಕ್ತ. ಕಣ್ಣಿಗೆ ಗೋಚರವಾಗುವಂಥದ್ದಲ್ಲ. ಸಾವಿನ ನಂತರದ ಗತಿಯೂ ಸಹ ಅವ್ಯಕ್ತ. ಅದನ್ನೂ ದರ್ಶಿಸಲು ಸಾಧ್ಯವಿಲ್ಲ. ಆದರೆ ಹುಟ್ಟು ಸಾವಿನ ಮಧ್ಯದ ಬದುಕು ಎನ್ನುವುದು ವ್ಯಕ್ತವಾಗುವಂಥದ್ದು. ಈ ಕಾರಣಕ್ಕೇ ಬದುಕು ಎನ್ನುವುದು ವ್ಯಕ್ತಮಧ್ಯ. ಬದುಕೆನ್ನುವುದು ಆದಿಬಿಂದುವಿನಿಂದ ಅಂತ್ಯಬಿಂದುವಿನ ಕಡೆಗಿನ ಪಯಣ. ನಡುವೆ ಅಲ್ಲಲ್ಲಿ ಅದೆಷ್ಟೋ ಬಿಂದುಗಳು. ಹಿಂದಿನ ಬಿಂದುವಿನ ಜೊತೆಗೆ ಮುಂದಿನ ಬಿಂದುವನ್ನು ಬೆಸೆಯುತ್ತಾ, ಎರಡು ಬಿಂದುಗಳ ಮಧ್ಯೆ ಸಾಂಗತ್ಯ ಹೊಸೆಯುತ್ತಾ, ಪರಸ್ಪರ ಕೂಡಿಕೊಳ್ಳುವಂಥ ಹೊಣೆಯನ್ನು ಎರಡು ಬಿಂದುಗಳಿಗೆ ಬೆಸೆಯುತ್ತಾ ಸಾಗುವುದರಲ್ಲಿಯೇ ಮನುಷ್ಯ ಬದುಕಿನ ಸಾರ್ಥಕತೆ ಇರುವುದು. ಅಂತ್ಯಬಿಂದುವೆಂದರೆ ಅದು ಮನುಜ ಜೀವನ ಗತಿಯ ಪೂರ್ಣವಿರಾಮ. ಒಂದು ಧನ್ಯತೆಯ ಪೂರ್ಣವಿರಾಮ ಸಿದ್ಧಿಸಬೇಕಾದರೆ ಹಲವಾರು ಬಿಂದುಗಳು ಅರ್ಥಪೂರ್ಣವಾಗಿ ಸಂಗತಗೊಳ್ಳಬೇಕು. 2024ನೇ ವರ್ಷ ಎನ್ನುವುದು ನನ್ನ ಪಾಲಿಗೆ ಇಂಥ ಬಿಂದುಗಳಲ್ಲೊಂದು.
ನಡೆದು ಬಂದ ದಾರಿಯ ಕಡೆಗೆ ಸಿಂಹಸದೃಶ ನೋಟವೊಂದನ್ನು ಹರಿಸಿದಾಗ, ಎದೆಯಲ್ಲಿ ಸಂತೃಪ್ತಿಯ ಭಾವವನ್ನು ಅರಳಿಸಿ ನಿಲ್ಲಿಸಬಲ್ಲಂತಹ ಅನೇಕ ಸಂಗತಿಗಳು ಈ ವರ್ಷದಲ್ಲಿವೆ. ಒಂದಷ್ಟು ನೋಟುಗಳು ಈ ವರ್ಷದಲ್ಲಿ ನನ್ನ ಕಿಸೆಯ ಮೇಲೆ ಕೆರಳಿನಿಂತಿವೆ. ಹೊಸ ವರ್ಷ ಶುರುವಾಗುವ ಮುಹೂರ್ತದಲ್ಲಿ ಹೊಸದೊಂದು ಕಾರು ನಮ್ಮ ಮನೆಯಂಗಳದಲ್ಲಿ ಬಂದುನಿಲ್ಲುವುದಕ್ಕೆ ಸನ್ನದ್ಧವಾಗಿದೆ. ಬರೋಬ್ಬರಿ ಕೃಷಿ ಭೂಮಿಯೊಂದು ನನ್ನ ಒಡೆತನ ಗಳಿಸಿಕೊಳ್ಳುವ ಗಳಿಗೆ ಸನ್ನಿಹಿತವಾಗಿದೆ. ಆದರೆ ಇದೆಲ್ಲದಕ್ಕಿಂತಲೂ ನನಗೆ ಹೆಚ್ಚು ಸಂತಸ ಕೊಡುತ್ತಿರುವುದು ನನ್ನ ಸೃಜನಶೀಲ ಬರವಣಿಗೆಯಲ್ಲಿ ಆಗುತ್ತಿರುವ ಬೆಳವಣಿಗೆ. ನನ್ನೆದೆಯಿಂದ ಜಿಗಿದ ಅಕ್ಷರಗಳ ತೂಕವೇ ನನ್ನ ಪಾಲಿಗೆ ನನ್ನ ಸಾಧನೆಯ ಅಳತೆಗೋಲು. ನಾನು ಓದಿದ ಪುಸ್ತಕಗಳೇ ನನ್ನ ಹಿರಿಮೆಯ ಮಾನದಂಡ. ಈ ವರ್ಷ ನಾನು ಬರೆದ ಹದಿನೈದು ಕಥೆಗಳು, ಹದಿನಾಲ್ಕು ಲೇಖನಗಳು ಮತ್ತು ಇಪ್ಪತ್ತು ಕವನಗಳು ಪ್ರಕಟಗೊಂಡಿವೆ. ಇದುವರೆಗೆ ನನ್ನ ಬರಹ ಪ್ರಕಟವಾಗದೇ ಇದ್ದ ವಿಕ್ರಮ ವಾರಪತ್ರಿಕೆ, ಹೊಸತು ಮಾಸಪತ್ರಿಕೆ, ತುಷಾರ ಮಾಸಪತ್ರಿಕೆ, ಪಂಜು- ಚಿಲುಮೆ- ಹೊನಲು ಎಂಬ ಜಾಲತಾಣಗಳಲ್ಲಿಯೂ ನನ್ನೊಳಗಿನ ಅಕ್ಕರೆಯ ಅಕ್ಕರಗಳು ಮುದ್ರಣಗೊಂಡಿವೆ. ಇದು ನನ್ನ ಪಾಲಿಗೆ ಸಂತಸದ ಸಂಗತಿ. ಎರಡು ವಿಮರ್ಶಾ ಲೇಖನಗಳನ್ನು ಬರೆಯುವುದಕ್ಕೆ ಪ್ರೇರಣೆಯಾದದ್ದು ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳಾದ ಶ್ರೀಯುತ ರಾಧಾಕೃಷ್ಣ ಕಲ್ಚಾರ್ ಅವರು ಬರೆದ ‘ಕವಚ’ ಹೆಸರಿನ ಕಾದಂಬರಿ. ಈ ವರ್ಷ ನಾನು ಓದಿದ ಪುಸ್ತಕಗಳಲ್ಲಿ ನನಗೆ ಅತೀ ಖುಷಿ ಕೊಟ್ಟ ಪುಸ್ತಕವಿದು. ಕೆಂಡಸಂಪಿಗೆ ಬ್ಲಾಗ್‌ನಲ್ಲಿ ‘ವಿಶ್ವ ಪರ್ಯಟನೆ’ ಹೆಸರಿನ ಸರಣಿಯನ್ನು ಆರಂಭಿಸಿದ್ದೇನೆ. ಈಗಾಗಲೇ ಈ ಸರಣಿಯ ಹನ್ನೊಂದು ಬರಹಗಳು ಪ್ರಕಟಗೊಂಡಿವೆ.

ಈ ಸಲದ ದೀಪಾವಳಿ ಹಬ್ಬ ನನ್ನ ಪಾಲಿಗಂತೂ ತೀರಾ ವಿಶಿಷ್ಟವಾದದ್ದು. ನಾಲ್ಕು ಪತ್ರಿಕೆಗಳ ವಿಶೇಷಾಂಕಗಳಲ್ಲಿ ನನ್ನ ಸಾಹಿತ್ಯ ರಚನೆಗಳು ಪ್ರಕಟಗೊಂಡಿವೆ. ಪ್ರಕಟಿಸುವ ಸಹೃದಯತೆ ತೋರಿದವರು ಶ್ರೀಯುತ ಜೋಗಿ, ಶ್ರೀಯುತ ದಿನಕರ ಇಂದಾಜೆ ಹಾಗೂ ಶ್ರೀಯುತ ರಾಜು ಹೆಗಡೆ ಇವರು. ಕಳೆದ ವರ್ಷ ಪ್ರಕಟವಾಗಿದ್ದ ನನ್ನ ರಚನೆಯ ‘ವೇಷ’ ಕಥಾ ಸಂಕಲನದ ಬಗೆಗೆ ವಿಶ್ವವಾಣಿ ಪತ್ರಿಕೆಯಲ್ಲಿ ಚಂದದ ವಿಮರ್ಶೆಯೊಂದು ಪ್ರಕಟವಾದದ್ದು ನಾನು ಈ ವರ್ಷ ಎದುರಿಸಿದ ಅನಿರೀಕ್ಷಿತ ಅಚ್ಚರಿ. ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಸ್ಪರ್ಧಾರ್ಥಿಗಳಿಗೆ ಇದೇ ಪುಸ್ತಕವನ್ನು ಆಗಾಗ ಕೊಡುತ್ತಿರುವುದು ಹೃದಯದೊಳಗೆ ಸಂತಸದ ಸೆಲೆಯನ್ನು ಹುಟ್ಟಿಸುತ್ತಲೇ ಇರುವ ನಿಯತಕಾಲಿಕ ವಿದ್ಯಮಾನ. ನನ್ನೊಳಗಿನ ಸ್ಫೂರ್ತಿ ಸ್ವಾಮಿ ವಿವೇಕಾನಂದರ ಬಗೆಗೆ ಬರೆದಿದ್ದ ‘ವೀರ ಸಂನ್ಯಾಸಿ’ ನೃತ್ಯರೂಪಕ ಬೆಂಗಳೂರಿನಲ್ಲಿ ಪ್ರದರ್ಶನ ಕಂಡು ಯಶಸ್ಸು ಗಳಿಸಿದೆ.
ಶ್ರೀಕೃಷ್ಣನ ವ್ಯಕ್ತಿತ್ವವನ್ನು ಬಹು ಆಯಾಮಗಳಲ್ಲಿ ದರ್ಶಿಸಿದ ‘ವಿಶ್ವರೂಪಿ ಶ್ರೀಕೃಷ್ಣ’ ರಾಯಚೂರಿನ ಒಂದಷ್ಟು ಜನರ ಹೃದಯದೊಳಗೆ ಇಳಿದಿದೆ. ಮೇ ತಿಂಗಳ ಹದಿನೇಳನೇ ತಾರೀಖು ನನ್ನ ಬಹುಕಾಲದ ಕನಸು ನನಸಾದ ದಿನ. ಪಿಎಚ್.ಡಿ. ವಿದ್ಯಾರ್ಥಿ ಎಂದೆನಿಸಿಕೊಂಡು ಅದಾಗಲೇ ಏಳು ವರ್ಷ ಕಳೆದಿತ್ತು. ಮಹಾಪ್ರಬಂಧ ಸಿದ್ಧಪಡಿಸಿ, ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವರ್ಷ ಒಂದಾಗಿತ್ತು. ನನ್ನ ಸಂಶೋಧನೆಗೆ ಅರ್ಥಪೂರ್ಣ ಮುಕ್ತಾಯವೊಂದು ದೊರಕುವುದಿಲ್ಲವೋ ಏನೋ ಎಂಬ ಆತಂಕ ಹೃದಯವನ್ನೊತ್ತಿ ನಿಂತಿತ್ತು. ಆ ಕ್ಷಣದಲ್ಲಿಯೇ ಮುಕ್ತ ಮೌಖಿಕ ಪರೀಕ್ಷೆಗೆ ಕರೆಬಂದದ್ದು. ಮೇ ಹದಿನೇಳರಂದು ನಾನು ಮೌಖಿಕ ಪರೀಕ್ಷೆಯನ್ನು ಎದುರಿಸಬೇಕಿತ್ತು. ಅದಕ್ಕೂ ಎರಡು ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟು ಬೆಳ್ಳಂಬೆಳಗ್ಗೆಯೇ ಆಸ್ಪತ್ರೆ ಸೇರಿಕೊಳ್ಳುವಂತಾಯಿತು. ಒಂದು ವಾರ ಆಸ್ಪತ್ರೆಯಲ್ಲಿಯೇ ಇರದೆ ಬೇರೆ ದಾರಿಯಿರಲಿಲ್ಲ. “ಅಮ್ಮನ ಆನು ನೋಡಿಗೊಳ್ತೆ. ನೀನು ಚಿಂತೆ ಮಾಡಿಗೊಳ್ಳದ್ದೆ ಹೋಗಿ ಓಪನ್ ವೈವಾ ಮುಗ್ಶಿಗೊಂಡು ಬಾ” (ಅಮ್ಮನನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಚಿಂತೆ ಮಾಡಿಕೊಳ್ಳದೆ ಹೋಗಿ ಓಪನ್ ವೈವಾ ಮುಗಿಸಿಕೊಂಡು ಬಾ) ಎಂದು ಅಣ್ಣ ಧೈರ್ಯದಿಂದ ಹೇಳಿದಾಗ ನೂರಾನೆಯ ಬಲ. ಅವನು ಭರತನಾಟ್ಯ ಕಾರ್ಯಕ್ರಮಕ್ಕೆಂದು ಪೂನಾಕ್ಕೆ ಹೋಗಬೇಕಾಗಿತ್ತು. ಆದರೆ ನನಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಆ ಕಾರ್ಯಕ್ರಮವನ್ನೂ ತೊರೆದು ಅವನು ಅಮ್ಮನ ಜೊತೆ ಉಳಿದ ಪರಿ ನಿಜಕ್ಕೂ ಸ್ಮರಣೀಯ. ಮೌಖಿಕ ಪರೀಕ್ಷೆಯ ದಿನ ಬೆಳಗ್ಗೆ ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಹೋಗಿ ತಿಂಡಿ ತಿನ್ನಲೆಂದು ಕುಳಿತವನಿಗೆ ನೆನಪಾದದ್ದು ಶ್ರೀಯುತ ಜಯಂತ ಕಾಯ್ಕಿಣಿಯವರ ‘ಟ್ರಿಣ್ ಟ್ರಿಣ್ ಗೆಳೆಯ’ ಕಥೆ. ಆಸ್ಪತ್ರೆ ಕ್ಯಾಂಟೀನಿನಲ್ಲಿ ತಿಂಡಿ ತಿನ್ನುವ ಸನ್ನಿವೇಶವನ್ನು ಬಹಳ ಪರಿಣಾಮಕಾರಿಯಾಗಿ, ಭಾವನಾತ್ಮಕವಾಗಿ ಕಥೆಯಲ್ಲಿ ತರಲಾಗಿದೆ. ತಿಂಡಿ ಮುಗಿಸಿದಾಗ ಹೃದಯ ಭಾರವಾಗಿತ್ತು. ಆ ಭಾರ ಇಳಿದದ್ದು ಒಳ್ಳೆಯ ಅಭಿಪ್ರಾಯವೊಂದು ಪರೀಕ್ಷಕರಿಂದ ವ್ಯಕ್ತಗೊಂಡಾಗಲೇ. ಚೆನ್ನಾಗಿ ವಿಚಾರ ಮಂಡಿಸಿದ್ದೇನೆ, ಬಂದ ಪ್ರಶ್ನೆಗಳೆಲ್ಲದಕ್ಕೂ ಸಮರ್ಪಕವಾಗಿ ಉತ್ತರಿಸಿದ್ದೇನೆ ಎಂಬ ಅನಿಸಿಕೆ ಎಲ್ಲರಿಂದಲೂ ಬಂತು. ಇದಾಗಿ ಒಂದು ತಿಂಗಳಿಗೆ ಘಟಿಕೋತ್ಸವ. ಸೇರಿದ್ದ ಅಷ್ಟೂ ಮಂದಿಯ ಮುಂದೆ ಡಾಕ್ಟರೇಟ್ ಪದವಿ ಪಡೆದುಕೊಂಡಾಗ ಎದೆಯೊಳಗಿದ್ದದ್ದು ಧನ್ಯತಾ ಭಾವ.

ಅಮ್ಮನ ಆರೋಗ್ಯ ಸರಿಹೋಗುತ್ತಿದೆ. ಇನ್ನೇನು ಸಂಪೂರ್ಣ ಗುಣಮುಖವಾಗುವ ಲಕ್ಷಣ ಕಾಣಿಸುತ್ತಿದೆ. ನಿಯಮಿತ ಬರವಣಿಗೆಯ ಹೊಣೆ ಹೆಗಲೇರಿ ಕುಳಿತಿದೆ. ಬದುಕು ಖುಷಿ ಖುಷಿಯಾಗಿಯೇ ಸಾಗುತ್ತಿದೆ. ಅಂದುಕೊಂಡದ್ದೆಲ್ಲವೂ ನಿಧನಿಧಾನಕ್ಕೆ ನಡೆಯುತ್ತಿದೆ. ಆಟವಾಡಿಸುತ್ತಿರುವುದು ಒಂದೇ ಒಂದು, ಸರ್ಕಾರಿ ಉದ್ಯೋಗ. ಹೊಸ ವರ್ಷದಲ್ಲಿ ಅದೂ ಆದೀತು ಎಂಬ ನಿರೀಕ್ಷೆ ನನ್ನಲ್ಲಿದೆ. ಕಾಲದ ಕಾಲುಗಳು ತಡೆಯಿಲ್ಲದೆ ಓಡುತ್ತಿವೆ…ಓಡುತ್ತಿವೆ…ಓಡುತ್ತಲೇ ಇವೆ…

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
