ಚುಮ್ಮಿಗೆ ನಾನು “ಕರ್ನಾಟಕ” ಕೊಡಿಸಲ್ಲ ಅಂತ ಖಾತ್ರಿಯಾದದ್ದೇ, ಅವಳೂ ಓಡಾಟವನ್ನು ನಿಲ್ಲಿಸಿ, ಬಂದು ನನ್ನ ಪಕ್ಕದಲ್ಲಿ ಕುಳಿತಿದ್ದಳು. ನಮ್ಮೆದುರಿಗೇ ಬಿಲ್ಲಿಂಗ್ ಕೌಂಟರ್ ಇತ್ತು. ಅಂಗಡಿಯ ಹೊರಗೆ-ಒಳಗೆಲ್ಲ ಆಫರ್ ಬೋರ್ಡುಗಳ ಸುರಿಮಳೆ. ಆಫರ್ ಅಂದಮೇಲೆ ಗೊತ್ತಲ್ಲ. 900 ವಸ್ತುವಿಗೆ 1500 ರೂ ಬೆಲೆ ಹಾಕಿ, ಮತ್ತದರ ಮೇಲೆ ಗೀಟು ಎಳೆದು 300 ರೂ ಆಫರ್ ಅಂತ ಹಾಕಿರೋದನ್ನೂ ಕಣ್ಣುಮುಚ್ಚಿ ತೆಗೆದುಕೊಳ್ತಾರೆ. ಅವರು ಬಟ್ಟೆ ಕೊಳ್ಳುವ ಹಪಾಹಪಿ ಹೇಗೆ ಕಾಣುತ್ತಿತ್ತೆಂದರೆ, ಬಟ್ಟೆಯಿಲ್ಲದೇ ಬರಗೆಟ್ಟವರಿಗಿಂತ ಕಡಿಮೆಯಿರಲಿಲ್ಲ. ನೋಡಿದಷ್ಟೂ ನನ್ನ ಕಣ್ಣುಗಳು ನೋಯತೊಡಗಿದವಷ್ಟೇ.
ರೂಪಶ್ರೀ ಕಲ್ಲಿಗನೂರ್ ಅಂಕಣ.

 

ಚುಮ್ಮಿಯದ್ದು ಅವತ್ತು ಒಂದೇ ಹಠ. “ಚಿಕ್ಕಿ… ನಂಗೆ ಆ ಕರ್ನಾಟಕ ಬೇಕು…” ಚುಮ್ಮಿ ಈ ಮಾತನ್ನ ಅದಾಗಲೇ ಹತ್ತು ಸಾರಿ ಹೇಳಿದ್ದಳು. ಮತ್ತೆ ನಾನದಕ್ಕೆ ಇಪ್ಪತ್ತು ಸಲ “ಬೇಡ, ಇವತ್ತು ಕೊಡ್ಸಲ್ಲ” ಅಂತ ಹೇಳಿಯೂ ಆಗಿತ್ತು. ಹಾಗಾಗಿ ಈ ಬಾರಿ ಅವಳು ಹಾಗೆ ಕೇಳುವಾಗ, ಅವಳ ಪುಟ್ಟ ಪುಟ್ಟ ಕೈಗಳು, ಅವಳ ಪುಟಾಣಿ ಸೊಂಟವನ್ನೇರಿ, ಗತ್ತಿನಿಂದ ಕೇಳಿದ್ದವು, ಕೊನೆಯಬಾರಿ ಕೇಳ್ತಿರೋದು ಎಂಬಂತೆ! “ಚಿಕ್ಕಿ… ನಂಗೆ ಕರ್ನಾಟಕ ಬೇಕು…ಕೊಡ್ಸು” ಅಂದವಳ ದನಿ ಸ್ವಲ್ಪ ಮೇಲಕ್ಕೇರಿತ್ತು. ಹಾಗಾಗಿ ಅವಳು ಹೇಳಿದ್ದನ್ನ ಕೇಳಿ, ಸುತ್ತಲಿನ ಜನ “ಏನಪ್ಪಾ ಈ ಹುಡ್ಗಿ ಕರ್ನಾಟಕ ಕೊಡ್ಸು ಅಂತಿದ್ದಾಳಲ್ಲ” ಅಂದುಕೊಂಡರೋ ಏನೋ. ಮುಗುಳ್ನಗುತ್ತ ಮುಂದೆ ಹೋದರು. ನಾನೀಗ ಏನನ್ನೂ ಹೇಳಲಿಲ್ಲ. ಸುಮ್ಮನೇ ಒಂದಿಷ್ಟು ಗಂಭೀರವಾಗಿ ಅವಳ ಮುಖ ನೋಡಿದೆನಷ್ಟೇ. ಅಷ್ಟಕ್ಕೆ “ಚರಿ, ಇನ್ನೊಂದ್ಸಲಾ ಬಂದಾಗ ಕೊಡ್ಸಬೇಕು ಆಯ್ತ” ಅನ್ನುವಹೊತ್ತಿಗೆ ಅವಳ ದನಿ ಮೆತ್ತಗಾಗಿತ್ತು. ಜೊತೆಗೆ ಇನ್ನು ಕೇಳಿ ಪ್ರಯೋಜನ ಇಲ್ಲ ಅನ್ನೋ ವಿಷಯ ಗೊತ್ತಾಗಿ, “ಕರ್ನಾಟಕಾನೂ ಬೇಡಾ, ಚಿಕ್ಕೀನೂ ಬೇಡ” ಅಂತ ನಿರ್ಧರಿಸಿಕೊಂಡುಬಿಟ್ಟಿದ್ದಳು. ಅದಾಗಿ ಅಲ್ಲಿಂದ ಹೊರಬಂದು ಮುಕ್ಕಾಲು ಗಂಟೆ ಬಜಾರು ತುಂಬ ಓಡಾಡಿದ್ವಿ. ಮಾರುಕಟ್ಟೆಯ ತುಂಬ ತರಾವರಿ ವಿಪರೀತ ಗೊಂಬೆಗಳು. ಅವಳ ಕಣ್ಣುಗಳು ಅವುಗಳತ್ತ ಅನಾಯಾಸವಾಗಿ ಓಡುತ್ತಿದ್ದರೂ ಅವಳು ಮತ್ತೆ ಏನನ್ನೂ ಕೇಳಲು ಹೋಗಲಿಲ್ಲ. ಅವಳು ಯಾವಾಗಲೂ ಹಾಗೆಯೇ. ಕಂಡದಕ್ಕೆಲ್ಲ ಕೈ ಚಾಚಲ್ಲ. ಯಾಕಂದ್ರೆ ಹಾಗೆ ಕೇಳಿದ್ದನ್ನೆಲ್ಲ ಕೊಡಿಸುವ ರೂಢಿಯನ್ನು ನಾವು ಮಾಡಿಯೇ ಇಲ್ಲ.

ವಿನಾಯಕ್ ರಾವ್ ಗೆ ದುಡ್ಡಿನ ಮೇಲೆ ಎಲ್ಲಿಲ್ಲದ ಮೋಹ. ಅದರಲ್ಲೂ ತಾನು ಬಾಲ್ಯ ಕಳೆದಿದ್ದ ‘ತುಂಬಾಡ್’ ನ ಮನೆಯಲ್ಲಿರುವ ಚಿನ್ನದ ನಾಣ್ಯದ ಗಣಿಯ ಬಗ್ಗೆ ತಿಳಿಯುವ ತೀವ್ರ ಬಯಕೆ. ಅದನ್ನರಿತೇ ಅವನ ವಿಧವೆ ತಾಯಿ, ತಾವಿದ್ದ ಊರಲ್ಲಿ ಇರಲಾರದೇ, ಬೇರೊಂದು ಊರಿಗೆ, ಮಗನನ್ನು ಕರೆದುಕೊಂಡು ಹೊರಟುಬಿಡುತ್ತಾಳೆ. ಆಸೆಬುರುಕ ಮಗನಿಗೆ ವಿಧಿಯಿಲ್ಲ. ವಯಸ್ಸಿನ್ನೂ ಸಣ್ಣದು. ಹಾಗಾಗಿ ಮನಸ್ಸಿಲ್ಲದಿದ್ದರೂ ಅಮ್ಮನ ಹಿಂದೆ ಹೋಗಲೇಬೇಕಾಯ್ತು. ಆದರೆ ಅಂದು ಆ ತಾಯಿಯೊಟ್ಟಿಗೆ ಊರು ತೊರೆದದ್ದು ಅವನ ದೇಹವಷ್ಟೇ ಹೊರತು, ಮನಸ್ಸಲ್ಲ.


ಹಾಗವರು ತಮ್ಮ ಊರು ಬಿಟ್ಟು ಬೇರೊಂದು ಊರಿನ ನಿವಾಸಿಯಾಗಿ ಹದಿನೈದು ವರ್ಷಗಳೆ ಕಳೆದಿವೆ. ಈಗವನು ವಾಪಾಸ್ಸು ತನ್ನೂರಿಗೆ, ತನ್ನ ಮನೆಗೆ ಬಂದಿದ್ದಾನೆ. ಅಲ್ಲಿನ ಕತ್ತಲ ಕೋಣೆಯೊಂದರಲ್ಲಿ ನೂರಾರು ವರ್ಷಗಳಿಂದ ಅರೆ- ಬದುಕಿರುವ ಮುದುಕಿಯೊಬ್ಬಳಿದ್ದಾಳೆ. ಅವಳ ಸಹಾಯದಿಂದ ವಿನಾಯಕ್ ರಾವ್ ಚಿನ್ನದ ನಾಣ್ಯಗಳ ಗಣಿಯನ್ನು ಪತ್ತೆಹಚ್ಚಿಯೇ ಬಿಡುತ್ತಾನೆ. ತಿಂಗಳಿಗೋ, ಅಥವಾ ಎರಡು ತಿಂಗಳಿಗೊಮ್ಮೆ ಅಲ್ಲಿಗೆ ಭೇಟಿಯಿತ್ತು, ಬೇಕಾದಷ್ಟು ನಾಣ್ಯಗಳನ್ನು ತರುವುದಕ್ಕೆ ಶುರುಮಾಡುತ್ತಾನೆ. ಹೀಗೆ ಶ್ರೀಮಂತನಾಗುವ ವಿನಾಯಕ್ ಗೆ ದುಡಿಮೆಯ ಪ್ರಮೇಯವೇ ಬೀಳುವುದಿಲ್ಲ. ಬೆವರು ಸುರಿಸದೇ ಬಂದ ಸಿರಿತನದ ಸುಪ್ಪತ್ತಿಗೆಯಲ್ಲಿ ಮೆರೆಯಲಾರಂಭಿಸುವ ಅವನಿಗೆ ಕೌಟುಂಬಿಕ ಮೌಲ್ಯಗಳೂ ಕಾಣುವುದಿಲ್ಲ.

ಅವನ ಕಾಲು ಊನವಾಗಿರುವ ಮಗನಿಗೂ, ನಾಣ್ಯಗಳನ್ನು ತರುವ ಬಗ್ಗೆ ತರಬೇತಿ ಕೊಡುತ್ತಾನೆ. ಹಾಗೆ ಅವನು ತರಬೇತಿಯಲ್ಲಿ ತೇರ್ಗಡೆ ಹೊಂದಿದ್ದೇ, ಅಪ್ಪ ಮತ್ತು ಮಗ “ಮತ್ತೆ ಮತ್ತೆ ಯಾಕೆ ಕಷ್ಟ ಪಡಬೇಕು? ಒಮ್ಮೆಲೇ ಅಲ್ಲಿನ ಚಿನ್ನವನ್ನೆಲ್ಲ ಕಿತ್ತುಕೊಂಡು ಬಂದರಾಯ್ತು” ಅಂತ, ಅದರ ಕುರಿತು ಯೋಜನೆ ಹೂಡುತ್ತಾರೆ. ಇಷ್ಟು ದಿನ ಬಂದಿದ್ದರಲ್ಲಿ ಸಂತೋಷದಿಂದಿದ್ದಿದ್ದರೂ ಆಗುತ್ತಿತ್ತು. ಆದರೆ ಮನುಷ್ಯನ ದುರಾಸೆಗೆ ಮಿತಿಯ ಗೆರೆ ಕೊರೆಯಲಾದೀತೆ? ಅದಕ್ಕೆ ಹಾಗೆ ಹೋದ ವಿನಾಯಕ್, ಮತ್ತೆ ಮನೆ ಸೇರುವುದೇ ಇಲ್ಲ. ಅತಿಯಾಸೆ ಗತಿಗೇಡು ಎನ್ನುವ ಪಾಠವನ್ನ ಅವನ ಮಗ, ಅಪ್ಪನ ಅಂತಿಮ ಕ್ಷಣದಲ್ಲಿ ಕಲಿತುಬಿಡುತ್ತಾನೆ.

ಈ ಕಥೆ ಮೊನ್ನೆ ಮೆಗಾಮಾರ್ಟಿಗೆ ಹೋದಾಗ ನೆನಪಾಗಿತ್ತು. ವಿಪಿನ್ ಗೆ ಆಫೀಸ್ ಗೆ ಹಾಕಿಕೊಳ್ಳುವ ಫಾರ್ಮಲ್ಸ್ ಬಟ್ಟೆ ಹುಡುಕಿಕೊಂಡು ನಾವು ಅಲ್ಲಿಗೆ ಹೋಗಿದ್ದೆವು. ಈಗಾಗಲೇ ಎರಡು ಅಂಗಡಿಗಳಲ್ಲಿ ಸೀದಾಸಾದಾ ಸಿಂಪಲ್ ಬಟ್ಟೆಗಳನ್ನು ಹುಡುಕಿ, ಮತ್ತವು ಸಿಗದೇ ಅಲ್ಲಿಗೆ ಹೋಗಿದ್ದೆವು. ನನಗೆ ಅವತ್ತು ಅಷ್ಟು ಹುಷಾರಿರಲಿಲ್ಲವಾದರೂ ಅವರಿಗೆ ಬಟ್ಟೆಯ ಅವಶ್ಯಕತೆ ಇದ್ದುದರಿಂದ ನಾನೂ ಅವರ ಜೊತೆಗೆ ಹೋಗಿದ್ದೆ. ಯಾಕಂದ್ರೆ ವಿಪಿನ್ ಬಟ್ಟೆ ಕೊಳ್ಳೋದು ತೀರಾ ಕಡಿಮೆಯೇ. ಆಫೀಸ್ ಗೆ ಹಾಕಿಕೊಳ್ಳಲು ನಾಲ್ಕು ಷರ್ಟುಗಳನ್ನಷ್ಟೇ ಇಟ್ಟುಕೊಂಡಿದ್ದಾರೆ. ಅದರ ಮೇಲೆ ಇನ್ನೊಂದು ಷರ್ಟು ಕೊಳ್ಳಬೇಕು ಅಂದ್ರೆ ಇದ್ದದ್ದರಲ್ಲಿ ಒಂದು ಹರಿದಿರಬೇಕಷ್ಟೇ. ಇಲ್ಲವಾದ್ರೆ ಅದು ತೂತು ಬೀಳುವವರೆಗೂ ಅದೇ ಷರ್ಟನ್ನೇ ಅವರು ಬಳಸುತ್ತಾರೆ. ಹಾಗೇ ಮೊನ್ನೆ ಬಸ್ಸಿನ ಬಾಗಿಲಿಗೆ ಸಿಲುಕಿ ಅವರ ಷರ್ಟ್ ಹರಿದು ಹೋಗಿದ್ದರಿಂದಲೇ ಇನ್ನೊಂದನ್ನು ಕೊಳ್ಳಲು ಹೋದದ್ದು.

ತಿಂಗಳಿಗೋ, ಅಥವಾ ಎರಡು ತಿಂಗಳಿಗೊಮ್ಮೆ ಅಲ್ಲಿಗೆ ಭೇಟಿಯಿತ್ತು, ಬೇಕಾದಷ್ಟು ನಾಣ್ಯಗಳನ್ನು ತರುವುದಕ್ಕೆ ಶುರುಮಾಡುತ್ತಾನೆ. ಹೀಗೆ ಶ್ರೀಮಂತನಾಗುವ ವಿನಾಯಕ್ ಗೆ ದುಡಿಮೆಯ ಪ್ರಮೇಯವೇ ಬೀಳುವುದಿಲ್ಲ. ಬೆವರು ಸುರಿಸದೇ ಬಂದ ಸಿರಿತನದ ಸುಪ್ಪತ್ತಿಗೆಯಲ್ಲಿ ಮೆರೆಯಲಾರಂಭಿಸುವ ಅವನಿಗೆ ಕೌಟುಂಬಿಕ ಮೌಲ್ಯಗಳೂ ಕಾಣುವುದಿಲ್ಲ.

ಅವತ್ತು ನಮ್ಮ ಜೊತೆ ಚುಮ್ಮಿಯೂ ಬಂದಿದ್ದಳು. ಒಂದಷ್ಟು ಓಡಾಟದಿಂದ ಬಳಲಿದ್ದ ನಾನು, ಸಿಕ್ಕ ಖುರ್ಚಿಯಲ್ಲಿ ಕೂತು ಸುಧಾರಿಸಿಕೊಳ್ಳುತ್ತಿದ್ದೆ. ಚಿಕ್ಕಪ್ಪನ ಹಿಂದೆ ಚುಮ್ಮಿ ಪುಟುಪುಟು ಅಂತ ಓಡಾಡುತ್ತಿದ್ದಳು. ಚಿಕ್ಕಪ್ಪ ಒಂದು ಷರ್ಟ್ ಹಿಡಿದರೆ, ಇವಳೂ ಒಂದು ಷರ್ಟು ಹಿಡಿದು ನೋಡುವಳು. ಮತ್ತೆ ಚಿಕ್ಕಪ್ಪನಿಗೆ ತೋರಿಸಿ “ಚಿಕ್ಕಪ್ಪ ಇದು ಚನ್ನಾಗಿದ್ಯಾ, ಅದೂ ಚನ್ನಾಗಿದ್ಯ” ಅಂತ ತಾನೂ ಚಿಕ್ಕಪ್ಪನಿಗೆ ಸಹಾಯ ಮಾಡುತ್ತಿದ್ದಳು. ಹೀಗೆ ಚಿಕ್ಕಪ್ಪನ ಹಿಂದೆ ಹೋಗುವಾಗಲೇ, ಅವಳಿಗೆ, ಮಕ್ಕಳ ವಿಭಾಗ ಕಂಡಿದ್ದು. ಅಲ್ಲಿನ ಬಣ್ಣಬಣ್ಣದ ವಸ್ತುಗಳು, ಅವಳನ್ನು ಕೈಬೀಸಿ ಕರೆಯುತ್ತಿದ್ದವು. ಹೋಗದೇ ಹೇಗೆ ಉಳಿದಾಳು. ಚಿಕ್ಕಪ್ಪನ ಬಾಲ ಕೈಬಿಟ್ಟು, ಮಕ್ಕಳ ವಿಭಾಗದತ್ತ ಓಡಿಹೋದವಳು, ಎರಡೇ ನಿಮಿಷಕ್ಕೆ ನನ್ನತ್ತ ಬಂದಿದ್ದಳು. ಅವಳ ಕೈಯಲ್ಲೊಂದು ಮಕ್ಕಳು ಹಾಕುವಂಥ ಕನ್ನಡಕವಿತ್ತು. ಅದನ್ನೇ ಅವಳು “ಕರ್ನಾಟಕ ಬೇಕು, ಕರ್ನಾಟಕ ಬೇಕು” ಅಂತ ಕೇಳಿದ್ದು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಲ್ವ. ಕೇಳಿದ್ದನ್ನೆಲ್ಲ ಕೊಡಿಸುವ ರೂಢಿಯನ್ನಿಟ್ಟುಕೊಂಡರೆ ಮುಗೀತು, ಇಂದು ಕರ್ನಾಟಕ ಕೇಳುವವರು ನಾಳೆ ಭಾರತವನ್ನೇ ಕೇಳಿಬಿಡುತ್ತಾರೆ. ಮುದ್ದಿನಿಂದ ಬೆಳೆಸಿದ ಮಕ್ಕಳು ಏನು ಕೇಳಿದರೂ ಕೊಡಿಸಿಬಿಡೋ ಅಪ್ಪ-ಅಮ್ಮಂದಿರಿದ್ದಾರೆ ಇಲ್ಲಿ. ಅದಕ್ಕೆ ಪೋಷಕರು ಕೊಂಚ ಜಾಗರೂಕವಾಗಿ, ಅವಶ್ಯವಿದ್ದದ್ದನ್ನಷ್ಟೇ ಕೊಡಿಸುವ ರೂಢಿ ಮಾಡಿಕೊಳ್ಳಬೇಕಿದೆ.

ಚುಮ್ಮಿಗೆ ನಾನು “ಕರ್ನಾಟಕ” ಕೊಡಿಸಲ್ಲ ಅಂತ ಖಾತ್ರಿಯಾದದ್ದೇ, ಅವಳೂ ಓಡಾಟವನ್ನು ನಿಲ್ಲಿಸಿ, ಬಂದು ನನ್ನ ಪಕ್ಕದಲ್ಲಿ ಕುಳಿತಿದ್ದಳು. ನಮ್ಮೆದುರಿಗೇ ಬಿಲ್ಲಿಂಗ್ ಕೌಂಟರ್ ಇತ್ತು. ಅಂಗಡಿಯ ಹೊರಗೆ-ಒಳಗೆಲ್ಲ ಆಫರ್ ಬೋರ್ಡುಗಳ ಸುರಿಮಳೆ. ಆಫರ್ ಅಂದಮೇಲೆ ಗೊತ್ತಲ್ಲ. 900 ವಸ್ತುವಿಗೆ 1500 ರೂ ಬೆಲೆ ಹಾಕಿ, ಮತ್ತದರ ಮೇಲೆ ಗೀಟು ಎಳೆದು 300 ರೂ ಆಫರ್ ಅಂತ ಹಾಕಿರೋದನ್ನೂ ಕಣ್ಣುಮುಚ್ಚಿ ತೆಗೆದುಕೊಳ್ತಾರೆ. (ಇದು ನಾನು ಕೊಂಡಿದ್ದ ಬ್ಲೂಟೂತ್ ಸ್ಪೀಕರ್ ಒಂದರ ಬೆಲೆಯೇ ಬೇರೆ, ಅಮೇಜಾನ್ ನಲ್ಲಿದ್ದ ಬೆಲೆಯೇ ಬೇರೆ ಎಂಬುದರ ಬಗ್ಗೆ ಗಮನಕ್ಕೆ ಬಂದಾಗ ತಿಳಿದದ್ದು) ಹಾಗೇ ಆಫರ್ ಗಳಿಗೆ ಮಾರುಹೋಗಿ, ಬಟ್ಟೆ ಕೊಳ್ಳಲು ಬಂದ ಜನರನ್ನು ನೋಡಿ ಪಿಚ್ಚೆನಿಸಿತು. ಎಲ್ಲರ ಕೈಯಲ್ಲೂ ಕನಿಷ್ಟ ಐದಾರು ಬಟ್ಟೆ. ಜೊತೆಗೆರಡೆರಡು ಜೋಡಿ ಚಪ್ಪಲಿ. ಅವರು ಬಟ್ಟೆ ಕೊಳ್ಳುವ ಹಪಾಹಪಿ ಹೇಗೆ ಕಾಣುತ್ತಿತ್ತೆಂದರೆ, ಬಟ್ಟೆಯಿಲ್ಲದೇ ಬರಗೆಟ್ಟವರಿಗಿಂತ ಕಡಿಮೆಯಿರಲಿಲ್ಲ. ನೋಡಿದಷ್ಟೂ ನನ್ನ ಕಣ್ಣುಗಳು ನೋಯತೊಡಗಿದವಷ್ಟೇ.

ಅಷ್ಟರಲ್ಲಿ ಸುಮಾರು ಆರೇಳು ವರ್ಷದ ಹುಡುಗಿಯೊಬ್ಬಳು ಬಿಲ್ಲಿಂಗ್ ಕೌಂಟರ್ ನತ್ತ ಬಂದಳು. ಅವಳ ಕೈಯಲ್ಲೊಂದು ಬ್ಯಾಗ್ ಸಹ ಇತ್ತು. ಎತ್ತಲಾರದೇ ಅವಳದನ್ನು ಎಳೆದೆಳೆದುಕೊಂಡು ಬಂದಳು. ಮುಖದಲ್ಲಿ ವಿಚಿತ್ರ ಪ್ರೌಢಿಮೆ. ಮಗುವಿನ ಹಿಂದೆ “ಬೇಬಿ… ಬೇಬಿ.. ವೇಯ್ಟ್..” ಅಂತ ಒಮ್ಮೆ ಮಗುವನ್ನೂ, ಇನ್ನೊಮ್ಮೆ ಮೊಬೈಲನ್ನೂ ನೋಡಿಕೊಂಡು ಅದರಪ್ಪ ಬರುತ್ತಿದ್ದ. ಮಗುವಿನಮ್ಮ ಮಾತ್ರ ಎರಡು ನಿಮಿಷಗಳಿಂದ, ತನ್ನ ಬಟ್ಟೆಗಳ ಬಿಲ್ ಮಾಡಿಸುತ್ತಲೇ ಇದ್ದಳು. ಈಗ ಮಗು ಅಮ್ಮನತ್ತ ಹೋಗಿ, ದೀಸ್ ಆರ್ ಮೈನ್ (ಇವು ನನ್ನವು) ಅಂತ ಕೊಟ್ಟದ್ದೇ, ಲೆಟ್ ದೆಮ್ ಫಿನಿಷ್ ಮೈನ್ ಬೇಬಿ (ಮೊದಲು ನನ್ನದನ್ನ ಮುಗಿಸಲಿ ಮಗೂ)ಅಂತ ಅವಳಮ್ಮ ಅಂದರು. ಆ ಮಗೂ ಅಮ್ಮನ ಮಾತಿಗೆ ಸುಮ್ಮನೇ ನಿಂತಿತು. ಅದರ ಕಣ್ಣುಗಳು ಮಾತ್ರ ಬಿಲ್ಲಿಂಗ್ ಕೌಂಟರ್ ಬಳಿಯಿದ್ದ, ಮಕ್ಕಳ ವಸ್ತುಗಳ ಮೇಲೆ ಇತ್ತು. ಅಲ್ಲಿದ್ದ ಎಲ್ಲಾ ವಸ್ತುಗಳ ಮೇಲೆ ಹಾಯುತ್ತಿದ್ದ ಅವಳ ಕಣ್ಣುಗಳು ಒಂದು ಕ್ಷಣ, ತಮ್ಮ ಚಲನೆಯನ್ನು ನಿಲ್ಲಿಸಿದವು. ಮರುಕ್ಷಣ ಆ ಮಗು ಓಡಿಹೋಗಿ, ಚುಮ್ಮಿ ಹಿಡಿದಿದ್ದ ಕನ್ನಡಕವನ್ನೇ ಹಿಡಿಯಬೇಕೇ? ಇಷ್ಟುಹೊತ್ತೂ ಅವರ ಕೊಳ್ಳುಬಾಕತನವನ್ನು ನೋಡುತ್ತಿದ್ದ ನಾನು ಒಮ್ಮೆ ಚುಮ್ಮಿಯತ್ತ ತಿರುಗಿ ನೋಡಿದೆ. ಅವಳೂ ಆ ಹುಡುಗಿಯನ್ನೇ ನೋಡುತ್ತಿದ್ದರೂ ಸುಮ್ಮನೇ ಇದ್ದಳು.

ಹಾಗೆ ಆ ಕನ್ನಡಕವನ್ನು ತೆಗೆದುಕೊಂಡು ಹೋಗುವಷ್ಟರಲ್ಲಿ ಅವರಮ್ಮ, ಅವಳ ಬ್ಯಾಗ್ ಎತ್ತಿ, ಅವಳ ಸಾಮಾನುಗಳನ್ನೂ ಕೌಂಟರ್ ಮೇಲೆ ಇಡಲಾರಂಭಿಸಿದ್ದರು. ಅವುಗಳಲ್ಲಿ ಅದಾಗಲೇ ಎರಡು ಕನ್ನಡಕಗಳಿದ್ದವು. ಅದರ ಬಗ್ಗೆ ಅವಳಮ್ಮ ಕೇಳಿದ್ದೇ, ಆ ಮಗೂ, ತನ್ನ ಬಟ್ಟೆಗಳ ಬಣ್ಣವನ್ನು ಅವರಮ್ಮನಿಗೆ ನೆನಪಿಸಿದ್ದೇ, “ಓಹ್ ಯೆಸ್ ಹೌದಲ್ವ!” ಅಂದದ್ದೇ, ಅವುಗಳ ಜೊತೆ, ಆ ಬ್ಯಾಗಿನಲ್ಲಿದ್ದ ತರಾವರಿ ಬಟ್ಟೆಗಳಿಗೆಲ್ಲ ಸೇರಿ ಬಿಲ್ ಆಗಿಯೇ ಬಿಟ್ಟಿತು! ಅಕ್ಷರಶಃ ನಾನೇ ಮೂಕಪ್ರೇಕ್ಷಕಳಾಗಿದ್ದೆ, ಅಮ್ಮ-ಮಗುವಿನ ಶಾಪಿಂಗ್ ರೀತಿಗೆ. ಅಷ್ಟರಲ್ಲಿ ಚುಮ್ಮಿ ಸಿಟ್ಟಿನಿಂದ “ಚಿಕ್ಕಿ ನೋಡಲ್ಲಿ ಅವಳು ಆಗ್ಲೇ ಎರಡು ತಗೊಂಡಿದ್ಲು ಮತ್ತೆ, ಈಗ ನಂದೂ ತಗೊಂಡು ಹೋಗ್ತಿದಾಳೆ” ಅಂತ ಆಕ್ಷೇಪ ಎತ್ತಿದಳು. ನಾನದಕ್ಕೆ “ಇಲ್ಲ ಬಂಗಾರಿ, ಒಂದು ಅವಳಿಗೆ ಮತ್ತಿನ್ನೆರಡು ಅವಳ ಅಕ್ಕಂದಿರಿಗೆ” ಅಂದೆ. ಅದಕ್ಕವಳು, ನನ್ನ ಮಾತಿನಮೇಲೆ ನಂಬಿಕೆಯಿಲ್ಲದ ಧ್ವನಿಯಲ್ಲೇ “ಹೌದಾ” ಅಂದಳು. ನಾನೂ ಹೂಂ ಅಂದು ಸುಮ್ಮನಾಗಿಬಿಟ್ಟೆ. ಆದರೆ ಮನಸ್ಸಲ್ಲಿನ ಪ್ರಶ್ನೋತ್ತರಗಳ ಬಡಿದಾಟ ನಡೆಯುತ್ತಲೇ ಇತ್ತು.

ಯಾಕಂದ್ರೆ ಹಾಗೆ ಬಟ್ಟೆ ಕೊಂಡದ್ದು ಒಬ್ಬಿಬ್ಬರಲ್ಲ. ಬಂದವರೆಲ್ಲ ಬ್ಯಾಗುತುಂಬ ಬಟ್ಟೆ ತುಂಬಿಸಿಕೊಂಡು ಹೋಗುವವರೆ. ನಿಜಕ್ಕೂ ಮನುಷ್ಯನಿಗೆ ಅಷ್ಟು ಬಟ್ಟೆಯ ಅವಶ್ಯಕತೆಯೇ ಇಲ್ಲ ಅಲ್ಲವಾ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಆದರೂ ಆ ಒಂದು ಶಾಪ್ ನ ಮೂರಂತಸ್ತಿನ ಕಟ್ಟಡದ ತುಂಬ ಬಟ್ಟೆಗಳೇ ತುಂಬಿಹೋಗಿದ್ದವು. ಹಿಂದೆ ಹೆಣ್ಣುಮಕ್ಕಳ ಬಟ್ಟೆಗಳಲ್ಲಷ್ಟೇ ವೈವಿದ್ಯತೆಗಳಿತ್ತು. ಈಗ ಗಂಡುಮಕ್ಕಳ ಜಗತ್ತಿಗೂ ಆ ವೈವಿಧ್ಯತೆಯ ಲೋಕ ಕಾಲಿಟ್ಟಿದೆ. ಮಕ್ಕಳಿಗಂತೂ ಕೇಳುವಹಾಗೇ ಇಲ್ಲ. ಬಹುತೇಕ ಎಲ್ಲವೂ ಸಿಂಥಟಿಕ್ ಬಟ್ಟೆಗಳೇ. ನಾವು ಬಳಸಿ ಬಿಸಾಕೋ, ಸಿಂಥಟಿಕ್ ಬಟ್ಟೆಗಳು, ಪ್ರಕೃತಿಯ ಆರೋಗ್ಯಕ್ಕೆ, ಭೂಮಿಯ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದಲ್ಲ. ಮೊದಲೇ ಕಾಟನ್ ಬಟ್ಟೆಯನ್ನೇ ಹೆಚ್ಚು ಬಳಸುತ್ತಿದ್ದ ನಾನು, ಈಗ ಮೂರುವರ್ಷದಿಂದಂತೂ ಒಂದೂ ಸಿಂಥೆಟಿಕ್ ಬಟ್ಟೆಯನ್ನ ಕೊಂಡಿಲ್ಲ. ಮತ್ತೆ ಚಂದವಿದೆ, ಆಫರ್ ಇದೆ ಅನ್ನುವ ಕಾರಣಕ್ಕಂತೂ ಎಂದೂ ಬಟ್ಟೆಯನ್ನು ಖರೀದಿಸಿಲ್ಲ. ಯಾಕಂದ್ರೆ ಒಂದು ಬಟ್ಟೆಯ ತಯಾರಿಕೆಯಲ್ಲಿ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಎಷ್ಟಾಗುತ್ತದೆ? ಒಂದು ಬಟ್ಟೆ ತಯಾರಿಕೆಗೆ, ಎಷ್ಟು ನೀರು, ಎಷ್ಟು ಹತ್ತಿ ಬೇಕಾಗಬಹುದು? ಮತ್ತೆ ಹೀಗೆ ಕೋಟ್ಯಂತರ ಜನ ಬಟ್ಟೆ, ಚಪ್ಪಲಿ, ಅದೂ ಮತ್ತಿದೂ ಅಂತ ಕೊಳ್ಳುತ್ತಲೇ ಹೋದರೆ ಭೂಮಿಯ ಸತ್ವ ಎಷ್ಟರಮಟ್ಟಿಗೆ ಉಳಿಯಬಲ್ಲದು? ಇವೆಲ್ಲ ನಾವು ಈ ಹೊತ್ತಿಗೆ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳು.

ಹೌದು, ನಮಗೀಗ ಎಲ್ಲರ ಕೈಯಲ್ಲೂ ದುಡ್ಡಿದೆ. ಇಷ್ಟವಾದದ್ದನ್ನು, ಚಂದ ಕಂಡದ್ದನ್ನೆ ಕೊಳ್ಳುತ್ತಾ ಹೋಗುತ್ತೇವೆ. ಮತ್ತೆ ಅದರ ತ್ಯಾಜ್ಯವನ್ನ ಸುರಿದೂ ಸುರಿದೂ, ಇಡೀ ಭೂಮಿಯನ್ನೇ ಒಂದು ಕಸದ ಬುಟ್ಟಿಯನ್ನಾಗಿ ಮಾಡಿಬಿಡುತ್ತೇವೆ. ಮತ್ತೆ ನಮ್ಮ ಮುಂದಿನ ತಲೆಮಾರುಗಳ ಗತಿಯೇನು ಹೀಗಾದರೆ? ಅವರಿಗೆ, ಸ್ವಚ್ಛ ನೆಲ, ಸ್ವಚ್ಛ ಗಾಳಿ, ಸುಂದರ ಭೂಮಿ ಬಿಟ್ಟುಹೋಗಬೇಕಾದುದು ನಮ್ಮ ಧರ್ಮವಲ್ಲದೇ ಮತ್ತಿನ್ಯಾರದ್ದು?