‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ ಒಡಲ ಸಂಕಟವನ್ನು ಕಲೆಯಾಗಿಸುವುದು ಸಾಧ್ಯವಾಗಿರುವುದರಿಂದಲೇ, ಈ ಕಥೆಗಳು ಓದುಗರೊಳಗೆ ತಮ್ಮ ಕಂಪನಗಳನ್ನು ವಿಸ್ತರಿಸಿಕೊಳ್ಳುವ ಕಸುವು ಹೊಂದಿವೆ. ಸಹೃದಯನನ್ನು ಅವನಿಗರಿವಿಲ್ಲದಂತೆಯೇ ಆತ್ಮಾವಲೋಕನಕ್ಕೆ ಒತ್ತಾಯಿಸುವ ಗುಣ ಒಳ್ಳೆಯ ಸಾಹಿತ್ಯದ ಮುಖ್ಯ ಲಕ್ಷಣವೆನ್ನುವ ನಂಬಿಕೆ, ಗೋವಿಂದರಾಜು ಅವರ ಕಥೆಗಳನ್ನು ಓದುವಾಗ ಮತ್ತಷ್ಟು ಗಟ್ಟಿಯಾಗಿದೆ.
ಗೋವಿಂದರಾಜು ಎಂ ಕಲ್ಲೂರು ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ

ವರ್ತಮಾನವನ್ನು ಎದುರುಗೊಳ್ಳುವ ಸವಾಲಿನಲ್ಲಿ ಬರಹಗಾರನೊಬ್ಬ ಆಯ್ದುಕೊಳ್ಳುವ ದಾರಿ, ಬರವಣಿಗೆಯ ಧ್ಯಾನದ ಬಗ್ಗೆ ಆ ಬರಹಗಾರ ಎಷ್ಟು ಗಂಭೀರವಾಗಿದ್ದಾನೆ ಎನ್ನುವುದನ್ನೂ ಸೂಚಿಸುತ್ತಿರುತ್ತದೆ. ತಾನು ಬದುಕುತ್ತಿರುವ ಕಾಲದ ವಿರೋಧಾಭಾಸಗಳನ್ನು ಕೃತಿಯಲ್ಲಿ ತರುವ ಹುಮ್ಮಸ್ಸಿನಲ್ಲಿ ಹೆಚ್ಚಿನ ಬರಹಗಾರರು ವಾಚಾಳಿಗಳಾಗುತ್ತಾರೆ ಹಾಗೂ ಮಾತಿನ ಹುಮ್ಮಸ್ಸಿನಲ್ಲಿ ಕಲೆಯ ಸಾಧ್ಯತೆಗಳನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವು ಬರಹಗಾರರು ಕಲೆಯ ಧ್ಯಾನದಲ್ಲಿ ಮುಳುಗಿ, ತಮ್ಮ ಕಾಲದ ಕಂಪನಗಳನ್ನು ಬರವಣಿಗೆಯ ಅಂತರಂಗವಾಗಿಸುವುದರಲ್ಲಿ ಸೋಲುಕಾಣುತ್ತಾರೆ. ಸದ್ಯದ ಮಾತುಗಳು ವಾಚ್ಯವಾಗದಂತೆಯೂ, ಕಲೆಯಾಗಿಯೂ ಅವು ಜಡವಾಗದಂತೆ ಬರವಣಿಗೆಯನ್ನು ನಿರ್ವಹಿಸುವಲ್ಲಿ ಕೆಲವು ಬರಹಗಾರರಷ್ಟೇ ಯಶಸ್ವಿಯಾಗುತ್ತಾರೆ. ಅಂಥ ಯಶಸ್ಸಿನ ಮಾದರಿಯ ರೂಪದಲ್ಲಿ ಗೋವಿಂದರಾಜು ಎಂ. ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ಕಾಣಿಸುತ್ತಿವೆ.

(ಗೋವಿಂದರಾಜು ಎಂ ಕಲ್ಲೂರು)

ವರ್ತಮಾನದ ತವಕ ತಲ್ಲಣಗಳ ಶೋಧಕ್ಕೆ ಪುರಾಣಗಳನ್ನು ಆಶ್ರಯಿಸುವ ಕನ್ನಡ ಸಾಹಿತ್ಯ ಪರಂಪರೆಗೆ ಆದಿಕವಿ ಪಂಪನೇ ಮೂಲಪುರುಷ. ಈ ಪರಂಪರೆಯ ಕವಲುರೂಪದಲ್ಲಿ ಕೆಲವು ಬರಹಗಾರರು, ಹೊಸ ಪುರಾಣಗಳನ್ನು ಸೃಷ್ಟಿಸುವ ಮೂಲಕವೂ ಕಥೆ ಹೇಳುವುದಿದೆ. ಗೋವಿಂದರಾಜು ಆರಿಸಿಕೊಂಡಿರುವುದು ಹಳೆಯ ಕಥನಗಳನ್ನು ಹೊಸತಾಗಿಸುತ್ತ, ವರ್ತಮಾನದಲ್ಲಿ ಪುರಾಣ-ಜಾನಪದಗಳ ಹಂದರ ಕಟ್ಟುವ ರೂಪಕಗಳ ದಾರಿಯನ್ನು. ಅಪಾರ ಸಾವಧಾನವನ್ನೂ ಕಲ್ಪನಾಶಕ್ತಿಯನ್ನೂ ಕಸುಬುದಾರಿಕೆಯನ್ನೂ ಬೇಡುವ ಈ ದಾರಿಯೇ ಗೋವಿಂದರಾಜು ಅವರನ್ನು ಅವರ ಓರಗೆಯ ಕಥೆಗಾರರಿಗಿಂತ ಭಿನ್ನವಾಗಿಸಿದೆ. ಮೇಲ್ನೋಟಕ್ಕೆ ಇದು ಮೋಹಕ ತಂತ್ರವಾಗಿ ಕಾಣಿಸಿದರೂ, ತನ್ನ ಸುತ್ತಲೇ ಗೂಡು ಕಟ್ಟಿಕೊಳ್ಳುವ ರೇಷಿಮೆಹುಳುವಿನಂತೆ ತನ್ನ ಸೃಷ್ಟಿಯ ಮೋಹಕತೆಯಲ್ಲಿ ಬರಹಗಾರ ಹುದುಗಿಹೋಗಿ, ಅವನ ಕಾಳಜಿ ಕನವರಿಕೆಗಳು ಮಬ್ಬಾಗಿಬಿಡುವ ಸಾಧ್ಯತೆಗಳೂ ಇವೆ. ಈ ಎಚ್ಚರದೊಂದಿಗೇ ಗೋವಿಂದರಾಜು ಕಥೆಗಳನ್ನು ಕಟ್ಟಿದ್ದಾರೆ ಹಾಗೂ ಮೋಹಕ ಆವರಣದೊಳಗೂ ಸುಡುಕೆಂಡದಂಥ ಕಾಳಜಿಗಳು ಮುಕ್ಕಾಗದಂತೆ ಬರವಣಿಗೆಯನ್ನು ನಿರ್ವಹಿಸಿದ್ದಾರೆ.

‘ಮೆಚ್ಚನಾ ಪರಮಾತ್ಮನು’ ಹಾಗೂ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥೆಗಳನ್ನು ಗೋವಿಂದರಾಜು ಅವರ ಭಿನ್ನದಾರಿಯ ಮುಖ್ಯ ಕಥೆಗಳಾಗಿ ಗುರ್ತಿಸಬಹುದು. ಗಾಂಧಿಯೂ ಕೇಳಿ ಮೆಚ್ಚಿದ್ದರೆನ್ನಲಾದ, ಪುಣ್ಯಕೋಟಿಯೆಂಬ ಹಸುವಿನ ಸತ್ಯನಿಷ್ಠೆಗೆ ಸೋತು ಅರ್ಬುದನೆಂಬ ಹುಲಿ ತನ್ನನ್ನು ತಾನು ಕೊಂದುಕೊಳ್ಳುವ ‘ಗೋವಿನ ಹಾಡು’ ಕಥೆಯನ್ನು ಸಾಕಷ್ಟು ಹಿಂಜಿ, ಪುಣ್ಯಕೋಟಿಯನ್ನು ಶೋಷಕ ಸಮುದಾಯದ ರೂಪದಲ್ಲೂ, ಅರ್ಬುದನನ್ನು ಶೋಷಿತ ವರ್ಗದ ಪ್ರತಿನಿಧಿಯಾಗಿಯೂ ನೋಡಿದ್ದೇವಷ್ಟೇ. ಸಹೃದಯಿ ಓದುಗನನ್ನು ಯಾವ ದಡಕ್ಕೂ ತಲುಪಿಸದ, ಬೌದ್ಧಿಕ ಕಸರತ್ತೇ ಮುಖ್ಯವಾದ ಚರ್ಚೆಗಳಿಂದಾಗಿ ಪುಟ್ಯಕೋಟಿ ಕಥೆ ಶಾಪಗ್ರಸ್ತವಾದಂತಿದೆ. ಆ ಶಾಪವಿಮೋಚನೆಯ ಪ್ರಯತ್ನವಾಗಿ ನೋಡಬಹುದಾದ ಕಥೆ ‘ಮೆಚ್ಚನಾ ಪರಮಾತ್ಮನು.’

ಪುಟ್ಯಕೋಟಿಯಂತೆ ಅರ್ಬುದನಿಗೂ ಒಂದು ಕುಟುಂಬವಿರುವುದು ಗೋವಿಂದರಾಜು ಅವರಿಗೆ ಹೊಳೆದಿರುವುದು ಈ ಕಥೆಯ ಹೊಳಪನ್ನು ಹೆಚ್ಚಿಸಿದೆ. ಈ ಅರ್ಬುದ ಮೂರು ಮರಿಗಳ ತಂದೆ. ಆ ಮರಿಗಳ ಅಳಲು ಕೇಳಿ: ‘ಮಾಂಸ ತರುತ್ತೇನೆಂದು ಹೋದೆಯಲ್ಲಪ್ಪಾ… ನಿಮಗಿನ್ನೂ ಬೇಟೆ ತಿಳಿಯದು ಎಂದಿದ್ದೆ… ಅಮ್ಮ ಇಷ್ಟು ಬೇಗ ಕರೆದಳೇ ನಿನ್ನ? ಎದ್ದೇಳಪ್ಪಾ… ನಾವಿನ್ನು ಎಂದೂ ಮಾಂಸ ಕೇಳೆವು… ಹಸಿವೆಯೆಂದು ಎಂದೂ ಹೇಳೆವು…’ ಪುಣ್ಯಕೋಟಿಯ ಕರುವಿನ ‘ಆರ ಮೊಲೆಯನು ಕುಡಿಯಲಮ್ಮ’ ಎನ್ನುವ ಅಳಲನ್ನೇ ವ್ಯಾಘ್ರದ ಮರಿಗಳು ಬೇರೆ ರೂಪದಲ್ಲಿ ಆಡುತ್ತಿವೆ. ಅರ್ಬುದನಿಂದ ಉಳಿದುಬಂದ ಪುಣ್ಯಕೋಟಿ ಸುಖವಾಗಿಯೇನೂ ಇಲ್ಲ. ಅರ್ಬುದನ ಸ್ವ-ಹತ್ಯೆಯನ್ನು ತಡೆಯುವ ಅವಕಾಶವಿದ್ದೂ ತಡೆಯದೆ ಸ್ವಾರ್ಥಿಯಾದೆ ಎನ್ನುವುದವಳ ಸಂಕಟ. ‘ನಾನು ಪಾಪಿ, ಪರರ ಆಹಾರವ ಕಿತ್ತುಕೊಂಡು ಬಿಟ್ಟೆ. ಅರ್ಬುದನ ಕೊಂದುಬಿಟ್ಟೆ’ ಎಂದು ಕೊರಗಿ, ಆ ಕೊರಗಿನಲ್ಲೇ ಜೀವಬಿಟ್ಟಿದ್ದಾಳೆ. ನಂತರದ್ದು ಹೊಸ ತಲೆಮಾರಿನ ಕಥನ. ಪುಣ್ಯಕೋಟಿಯ ಕರು ದೊಡ್ಡದಾಗಿದೆ. ಅರ್ಬುದನ ಮರಿಯೂ ದೊಡ್ಡದಾಗಿದೆ. ಪರಸ್ಪರ ಎದುರಾಗಿವೆ. ‘ಉಂಡು ಸಂತಸದಿಂದಿರು’ ಎಂದ ಪುಣ್ಯಕೋಟಿಯಂತೆಯೇ ಮಗಳೂ ಎದುರಾದಾಗ, ಅಂದದ ಮಾಟಗಾತಿ ಗೋವು ಇದೆಂದು ಹುಲಿ ಅಳುಕುತ್ತದೆ. ತಾಯಿಯ ಕೊರಗಿಗೆ ಸಮಾಧಾನವೆಂದು ಹಸು ತನ್ನನ್ನು ತಾನು ತೆತ್ತುಕೊಳ್ಳಲು ಸಿದ್ಧವಾಗಿದೆ. ಈ ಪುಣ್ಯಮೂರ್ತಿಯನ್ನು ಹೇಗೆ ಕೊಂದು ತಿನ್ನಲಿ ಎಂದು ಹಸುವಿನೆದುರು ಹುಲಿ ಮಂಡಿಯೂರುತ್ತದೆ. ಪರಸ್ಪರ ಶರಣಾಗತಿ. ತಂದೆಯಂತೆ ಅರ್ಬುದನೂ ಪ್ರಾಣಾರ್ಪಣೆಗೆ ಮುಂದಾದಾಗ, ‘ಅಣ್ಣಾ ಸಾಯದಿರು’ ಎಂದು ಹಸು ತಡೆಯುತ್ತದೆ. ಈ ಸಂಘರ್ಷದಲ್ಲಿ – ಅರ್ಬುದ ಪ್ರತ್ಯಕ್ಷನಾಗುತ್ತಾನೆ, ಪುಣ್ಯಕೋಟಿಯೂ ಕಾಣಿಸಿಕೊಳ್ಳುತ್ತದೆ. ತಿನ್ನು ಎನ್ನುವ ಅವಳು; ತಿನ್ನಲಾರೆ ಎನ್ನುವ ಇವನು. ಇಬ್ಬರನ್ನೂ ಪುಣ್ಯಕೋಟಿ ಮತ್ತು ಅರ್ಬುದ ಸಮಾಧಾನಿಸುತ್ತಿರುವಾಗ, ಗೋಪಾಲಕನೊಬ್ಬ ‘ಹುಲಿಯು ಪುಣ್ಯವತಿಯನ್ನು ಹಿಡಿದಿದೆ’ ಎಂದು ಕೂಗುತ್ತಾನೆ. ದೊಣ್ಣೆ, ಕೊಡಲಿಯೊಂದಿಗೆ ಜನರು ಆವೇಶದಿಂದ ಓಡಿಬರುವುದರೊಂದಿಗೆ ಕಥೆ ಮುಗಿಯುತ್ತದೆ. ಪುಣ್ಯಕೋಟಿ ಮತ್ತು ಹುಲಿ ಎರಡನ್ನೂ ಸಮಾನ ಪಾತಳಿಯಲ್ಲುಳಿಸುವ ಕಥೆಗಾರ, ನಿಜವಾದ ಕೇಡು ಯಾವುದೆನ್ನುವುದನ್ನು ಸೂಚಿಸಿರುವುದು ಮಾರ್ಮಿಕವಾಗಿದೆ.

ನಿಜದ ಕೇಡು ಯಾವುದು ಎನ್ನುವುದರ ಶೋಧ ಹಾಗೂ ಶಾಪ ವಿಮೋಚನೆಯ ಹಂಬಲ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥೆಯಲ್ಲೂ ಇದೆ. ಕೊಕ್ಕರಕ್ಕಿಗಳ ಮಾತುಕತೆಯೊಂದಿಗೆ ಆರಂಭವಾಗುವ ಈ ಕಥೆ, ನಾಶದ ಅಂಚಿನಲ್ಲಿರುವ ಕರುಕ್ಲುಗುಡ್ಡ ಎನ್ನುವ ಊರು, ತನಗೊದಗಿರುವ ಕೇಡನ್ನು ನೀಗಿಕೊಳ್ಳಲು ನಡೆಸುವ ಪ್ರಯತ್ನಗಳನ್ನು ಚಿತ್ರಿಸುತ್ತದೆ. ಸಂಕೂರ ಇಲ್ಲಿನ ಕಥಾನಾಯಕ. ಒಬ್ಬಂಟಿ ಮುದುಕ. ಕರುಕ್ಲುಗುಡ್ಡದ ಸುತ್ತಮುತ್ತಲಿನ ಎಲ್ಲ ಮನುಸರಿಗಿಂತಲೂ ಹಿರಿಯ. ದನದ ವ್ಯಾಪಾರ ಮಾಡುವ ಹಂದಿಮಳ್ಳಪ್ಪನಿಗೆ ಸಹಾಯಕನಾದ ಸಂಕೂರ ಮೂಳೆ ವ್ಯಾಪಾರದಿಂದ ಹೊಟ್ಟೆ ಹೊರೆದುಕೊಳ್ಳುವವ. ಆಕಾಶದಲ್ಲಿನ ನಕ್ಷತ್ರಗಳೆಲ್ಲ ಸೇರಿಕೊಂಡು ಯಮಧರ್ಮನ ರೂಪು ಪಡೆದು – ‘ಈ ಲೋಕದ ಅನ್ನ ತೀರುತ್ತಾ ಬಂದದೆ. ಬರಾಕೆ ಸಿದ್ವಾಗು’ ಎಂದು ಹೇಳಿದಂತೆ ಭಾಸವಾಗುವುದರೊಂದಿಗೆ ಸಂಕೂರನಿಗೆ ಜೀವಭಯ ಶುರುವಾಗುತ್ತದೆ. ಊರೂ ಕೇಡಿನ ಅಂಚಿನಲ್ಲಿ ನಿಂತಿದೆ. ಮಾಟಗಾತಿ ಚಿಂತ್ರಾಣಿ, ‘ಎಲ್ಲಾ ಸತ್ತೋಗ್ತೀರಾ, ಊರೇ ಸುಟ್ಟೋಗುತ್ತೆ. ಯಾರೊಬ್ಬರೂ ಉಳಿಯಲ್ಲ. ಊರು ಬಿಟ್ಟು ಹೋಗೋಕೂ ಆಗೊಲ್ಲ’ ಎಂದು ಭವಿಷ್ಯವಾಣಿ ನುಡಿದಿದ್ದಾಳೆ. ಊರ ಮೇಟಿ ಲಕ್ಷ್ಮಣಪ್ಪನ ಹಿರೀಮಗಳು ಬಿಮ್ಮನಸಿಯಾಗಿದ್ದು, ದಿನ ತುಂಬಿದ ಅವಳಿಗೆ ಹುಟ್ಟೋ ಕೂಸನ್ನು, ಹುಟ್ಟಿದ ತಕ್ಷಣ ಕೊಂದು ಊರ ತಲೆಬಾಗಿಲಲ್ಲಿ ಹೂಳಿದರೆ ಊರಿಗೆ ಅಪಾಯ ಕಳೆಯುತ್ತದೆ ಎಂದು ಪರಿಹಾರವನ್ನೂ ಹೇಳಿದ್ದಾಳೆ.

ಜನಪದ ಗರತಿಯರಂತೆ ಲಕ್ಷ್ಮಣಪ್ಪನ ಮಗಳೂ, ‘ನಾನೊಬ್ಬಳು ಸತ್ತು ಊರು ಉಳಿಸುವುದೇ ಸರಿ’ಯೆಂದು ಬಗೆದು ಮಾರಿಗುಡಿಗೆ ಧಾವಿಸಿದ್ದಾಳೆ. ತನ್ನ ಗುಂಡಿಯನ್ನು ತಾನೇ ತೋಡಿಕೊಂಡ ಸಂಕೂರ, ಸಾಯುವ ಮುನ್ನ ದೇವಿಯ ತೀರ್ಥ ಕುಡಿಯುವ ಆಸೆಯಿಂದ ಗುಡಿಯ ಹೊರಗೆ ನಿಂತಿದ್ದಾನೆ. ‘ಅವ್ವೋ… ತೀರ್ಥದ ಬಟ್ಟಲು, ಒಂದು ಸೀರೆನಾ ಕೊಡು ತಾಯೆ. ದ್ಯಾವೀ ತೀರ್ಥವ ಕುಡುದು, ಅವ್ವನ ಸೀರೆಯ ಹೊದ್ದು ಗುಂಡಿ ಒಳಗೆ ಮಲಗಾದೆ ನನ್ನ ಸಾಯಕಡೇ ಆಸೆ’ ಎನ್ನುವುದು ಅವನ ಬೇಡಿಕೆ. ಆ ಬಿಮ್ಮನಸಿ ಸೀರೆ-ತೀರ್ಥದ ಬಟ್ಟಲು ತರುವಾಗ ಪ್ರಸವದ ನೋವು ಆರಂಭವಾಗಿ, ಕುಸಿದುಬಿದ್ದು ಒದ್ದಾಡತೊಡಗುತ್ತಾಳೆ. ಅದೇ ವೇಳೆಗೆ, ಊರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಸವದ ಹೆಣ್ಣಿನ ಸಂಕಟ ನೋಡಲಾಗದೆ ರೂಢಿಯನ್ನು ಮೀರುವ ಸಂಕೂರ ಗುಡಿಯೊಳಗೆ ಹೋಗಿ, ಮಗಳೇ ಎಂದು ಮೇಟಿಯ ಕೂಸನ್ನು ಅಪ್ಪುತ್ತಾನೆ. ಅವಳ ಕೈ ತಾಗಿ ಬಿಂದಿಗೆ ಉರುಳಿ, ಅವಳನ್ನೂ ಸಂಕೂರನನ್ನೂ ನೆನೆಸಿ ಗರ್ಭಗುಡಿಯತ್ತ ನೀರು ಹರಿಯುತ್ತದೆ. ತಂದೆಯಾಗಿ ನೆರವಿಗೆ ನಿಂತ ಸಂಕೂರನ ಕೈಯಲ್ಲಿ ಅಳದ, ಕಣ್ಣುಬಿಡದ ಮಗು. ಮಾರಿಗುಡಿಯ ಹಿಂಭಾಗದ ಬೇವಿನಗಿಡಕ್ಕೆ ಬಡಿದ ಸಿಡಿಲಿನ ಆ ಶಬ್ದಕ್ಕೆ ಸಂಕೂರನ ಕೈಯಲ್ಲಿದ್ದ ಕೂಸು ಚಿಟಾರನೆ ಚೀರುತ್ತದೆ. ಅದು ಶಾಪವಿಮೋಚನೆಯ ಕ್ಷಣ. ಅಪಾಯದಿಂದ ಪಾರಾದ ಊರಿಗೆ ಜೀವದಾನ. ಪ್ರಸವದ ರಕ್ತ ದೇವಿಯ ಪಾದವ ತೋಯಿಸುವುದು ಹಾಗೂ ಗುಡಿಯ ಹೊರಗಿದ್ದ ಸಂಕೂರ ಒಳಗೆ ಬರುವುದು – ಅಪವಿತ್ರವೆಂದು ಊರು ನಡೆಸುತ್ತಿದ್ದ ಆಚರಣೆಗಳು ಭಂಗಗೊಳ್ಳುವುದರೊಂದಿಗೆ ಕೇಡು ನಿವಾರಣೆಯಾಗುತ್ತದೆ; ಊರಿನ ಶಾಪ ವಿಮೋಚನೆಯಾಗುತ್ತದೆ. ಕೇಡಿನ ನಿಜಸ್ವರೂಪ-ನೆಲೆ ಯಾವುದೆನ್ನುವುದರ ಬಗ್ಗೆ ಯೋಚಿಸಲು ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥೆ ಪ್ರೇರೇಪಿಸುತ್ತದೆ.

‘ಮೆಚ್ಚನಾ ಪರಮಾತ್ಮನು’ ಹಾಗೂ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥೆಗಳಲ್ಲಿ ಗೋವಿಂದರಾಜು ಜನಪದ ಅಥವಾ ಪುರಾಣದ ಎಳೆಗಳನ್ನು ಬಳಸಿಕೊಂಡಿರುವ ಕ್ರಮ ಬಹು ಸೊಗಸಾದುದು, ಸೃಜನಶೀಲವಾದುದು. ಕನ್ನಡ ಕಥನಗಳ ಆಶಯಗಳ ಮುಂದುವರಿಕೆ ಹಾಗೂ ಆ ಆಶಯಗಳಲ್ಲಿನ ಸಿಕ್ಕುಗಳ ತಿಳಿಗೊಳಿಸುವಂತೆ ಈ ಕಥೆಗಳು ರೂಪುಗೊಂಡಿವೆ.

ಗೋವಿಂದರಾಜು ಆರಿಸಿಕೊಂಡಿರುವುದು ಹಳೆಯ ಕಥನಗಳನ್ನು ಹೊಸತಾಗಿಸುತ್ತ, ವರ್ತಮಾನದಲ್ಲಿ ಪುರಾಣ-ಜಾನಪದಗಳ ಹಂದರ ಕಟ್ಟುವ ರೂಪಕಗಳ ದಾರಿಯನ್ನು. ಅಪಾರ ಸಾವಧಾನವನ್ನೂ ಕಲ್ಪನಾಶಕ್ತಿಯನ್ನೂ ಕಸುಬುದಾರಿಕೆಯನ್ನೂ ಬೇಡುವ ಈ ದಾರಿಯೇ ಗೋವಿಂದರಾಜು ಅವರನ್ನು ಅವರ ಓರಗೆಯ ಕಥೆಗಾರರಿಗಿಂತ ಭಿನ್ನವಾಗಿಸಿದೆ.

‘ಯಾಕಾಶಿ ಮಣೇವು’ ಕಥೆಯಲ್ಲೂ ಊರು-ಕೇರಿಗಳ ರೂಢಿಗತ ಕೇಡುಗಳ ತಿಳಿಗೊಳಿಸುವ ಪ್ರಯತ್ನವಿದೆ. ಮಣೇವು ಆಡುವ ಉತ್ಸಾಹದಲ್ಲಿ ಕೇರಿಯ ಹುಡುಗನೊಬ್ಬ ಓಡಿಬರುತ್ತ, ಅದೇ ದಾರಿಯಲ್ಲಿ ಸಂಜೆ ಪೂಜೆಗೆಂದು ಮಡಿ ಬಟ್ಟೆಯಲ್ಲಿ ಹೋಗುತ್ತಿದ್ದ ಪದ್ಮನಾಭಪ್ಪನವರ ತೊಡೆ ಹಿಡಿದು ನಿಲ್ಲುತ್ತಾನೆ. ಅಯ್ಯನೋರ ತಬ್ಬಿ ಮೈಲಿಗೆ ಮಾಡಿದ್ದಕ್ಕಾಗಿ ಆ ಹುಡುಗನ ತಂದೆ ಚಿಕ್ಕಕೆಂಪನಿಗೆ ಕಾಣಿಕೆಹುಂಡಿಗೆ ೧೦೧ ರೂಪಾಯಿ ತಪ್ದಂಡ ಹಾಕುವ ಶಿಕ್ಷೆಯನ್ನು ಊರು ವಿಧಿಸುತ್ತದೆ. ಆಗ ಅವನ ನೆರವಿಗೆ ಬರುವ ಮುತ್ಯಾಲ, ಸಂಕಷ್ಟದಿಂದ ಪಾರಾಗಲು ತಂತ್ರ ಹೂಡುತ್ತಾನೆ. ಬೋಟಿಯನ್ನು ತೆಗೆದುಕೊಂಡು ಹಾಕಿ ಪದ್ಮನಾಭಪ್ಪನವರ ಮನೆ ಬಾಗಿಲಲ್ಲಿಡುತ್ತಾನೆ. ಅದನ್ನು ತೆಗೆಯುವ ಕೆಲಸ ಅವನಿಗೇ ಬಂದು, ಅದಕ್ಕಾಗಿ ಹಣ ಪಡೆಯುತ್ತಾನೆ. ಆ ಹಣ ಹಾಗೂ ಕದ್ದು ತಂದ ಹೋತದ ಬಾಡನ್ನು ಮಾರಿಬಂದ ದುಡ್ಡಿನಲ್ಲಿ ತಪ್ದಂಡ ಕಟ್ಟುತ್ತಾನೆ. ಈ ಕಥೆಯ ಇನ್ನೊಂದು ಭಾಗದಲ್ಲಿ, ಏಕಾಶಿ ಮಣೇವಿನ ದಿನ ಕೇರಿಯ ಜನರ ಹೊಚ್ಚ ಹೊಸ ದೇವರ ಮೆರವಣಿಗೆ ಊರಿಗೆ ಪ್ರವೇಶಿಸಿದೆ. ಕೇರಿಯ ದೇವರನ್ನೇ ಮೇನ್ ಬ್ರಾಂಚಿನ ದೇವರೆಂದು ಬಗೆದು ಪದ್ಮನಾಭಪ್ಪನವರ ಹೊಸ ಸೊಸೆ ದೇವರಿಗೆ ಪೂಜೆ ಸಲ್ಲಿಸಿ, ಕೇರಿಯವರು ಬೇಡ ಬೇಡ ಅಂದರೂ ಅವರ ಕಾಲಿಗೆ ನೀರು ಹಾಕುತ್ತಾಳೆ. ಈ ಘಟನೆಗಳಿಂದ ಪದ್ಮನಾಭಪ್ಪನ ಕರ್ಮಟ ಮನೋಭಾವ ಬದಲಾಗದಿದ್ದರೂ, ಬದಲಾವಣೆಯ ಸೂಚನೆಗಳು ಕಥೆಯಲ್ಲಿ ಸ್ಪಷ್ಟವಾಗಿವೆ. ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥೆಯಲ್ಲಿ ರೂಪಕದ ನೆಲೆಗಟ್ಟಿನಲ್ಲಿ ಸಾಧ್ಯವಾಗುವ ಕೇಡು ಕಳೆಯುವ ಕ್ರಿಯೆ, ‘ಯಾಕಾಶಿ ಮಣೇವು’ನಲ್ಲಿ ಪ್ರಜ್ಞಾಪೂರ್ವಕ ಪ್ರಯತ್ನವಾಗಿದೆ. ದೇವರ ಗುಜ್ಜೆ ಕೋಲನ್ನು ಬಾಲಕನೊಬ್ಬ ಮುಟ್ಟಿದ ಕಾರಣಕ್ಕಾಗಿ, ಇಡೀ ಕುಟುಂಬ ಬಹಿಷ್ಕಾರಕ್ಕೆ ಒಳಗಾದ ಘಟನೆ ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಈ ಘಟನೆಯನ್ನು ನೆನಪಿಸುವ ‘ಯಾಕಾಶಿ ಮಣೇವು’ ಸಮಾಜವನ್ನು ತಿಳಿಗೊಳಿಸುವ ನಿರಂತರ ಪ್ರಯತ್ನಗಳ ನಡುವೆಯೂ ಉಳಿದಿರುವ ಕೇಡಿನ ರಾಡಿಯನ್ನು ಸೂಚಿಸುವಂತಿದೆ.

‘ಯಾಕಾಶಿ ಮಣೇವು’ ಕಥೆಯಲ್ಲಿ ಪರೋಕ್ಷವಾಗಿಯಾದರೂ ಪ್ರಜ್ಞಾಪೂರ್ವಕವಾಗಿ ಕೇಡಿನ ವಿರುದ್ಧ ಕಾಣಿಸುವ ಪ್ರತಿಭಟನೆ, ಇನ್ನಷ್ಟು ತೀವ್ರತೆ ಪಡೆದುಕೊಳ್ಳುವುದು ‘ಸ್ವರ್ಗದ ಹೂಗಳು’ ಕಥೆಯಲ್ಲಿ. ಮಗಳು ಲಕುಮಿ ಮತ್ತು ಅರವಿಂದನ ಅನುರಾಗದಿಂದ ಕ್ರುದ್ಧನಾಗುವ ಅಣ್ಣಯ್ಯಪ್ಪ, ಮಗಳನ್ನು ಕೊಲ್ಲಲು ಹೋದಾಗ, ಭೈರ ಅದನ್ನು ತಡೆಯುತ್ತಾನೆ. ಆವರೆಗೆ ಒಡೆಯನಿಗೆ ಎದುರು ನುಡಿಯದ ಭೈರ ಒಮ್ಮಿಂದೊಮ್ಮೆಗೇ ಒಡೆಯನ ವಿರುದ್ಧ ನಿಲ್ಲಲು ಕಾರಣವಿದೆ. ಅವನ ತಂದೆ ರೊಡ್ಡ ಹಾಗೂ ತಾಯಿ ಪಾರ್ವತಿ, ಜಾತಿವಿಷಕ್ಕೆ ಬಲಿಯಾದವರೇ ಆಗಿದ್ದಾರೆ. ‘ಜಾತಿ ಕೆಡಿಸಿದ’ ಎಂದು ರೊಡ್ಡನನ್ನು ಕೊಲ್ಲುವ ಪಾರ್ವತಿಯ ಮನೆಯವರು, ತವರಕುಡಿಯನ್ನೂ ಹೊಸಕಿ ಹಾಕಿದ್ದಾರೆ. ಅಮ್ಮ-ಅಪ್ಪನ ಸಾವುಗಳನ್ನು ಕಣ್ಣಾರೆ ಕಂಡಿರುವ ಭೈರ, ಕತ್ತಲಲ್ಲಿ ನಕ್ಷತ್ರದ ಹಾದಿ ಹಿಡಿದು ಅಪ್ಪನ ಕನಸುಗಳೊಂದಿಗೆ ಮತ್ತೊಂದು ಊರು ಸೇರಿ ಅಣ್ಣಯ್ಯಪ್ಪನ ಆಶ್ರಯ ಪಡೆದಿದ್ದಾನೆ. ಸ್ವಂತಿಕೆಯೇ ಇಲ್ಲದ ಬದುಕಿನ ಭೈರ, ಅಮಾಯಕ ಪ್ರೇಮಿಗಳ ವಿರುದ್ಧ ಜಾತಿಸರ್ಪ ಫೂತ್ಕರಿಸಿದಾಗ ಜಾಗೃತಗೊಳ್ಳುವುದು ವಿಶೇಷವಾಗಿದೆ.

ಈ ಸಂಕಲನದ ಕಥೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಸಂಗತಿ ಆಹಾರ ರಾಜಕಾರಣದ್ದು. ಸಮುದಾಯಗಳ ವಿಭಜನೆ ಮತ್ತು ಹೀಗಳೆಯುವಿಕೆಗೆ ಬಳಕೆಯಾಗುತ್ತಿರುವ ‘ಗೋ ರಾಜಕಾರಣ’ಕ್ಕೆ ಸೃಜನಶೀಲ ಪ್ರತಿಕ್ರಿಯೆ ಈ ಸಂಕಲನದ ಕಥೆಗಳಲ್ಲಿದೆ. ‘ಮೆಚ್ಚನಾ ಪರಮಾತ್ಮನು’ ಕಥೆಯಲ್ಲಿ, ಮಕ್ಕಳ ಜೀವನ್ಮರಣದ ಸಂವಾದದ ಸಂದರ್ಭದಲ್ಲಿ ಪುಣ್ಯಕೋಟಿ-ಅರ್ಬುದ ಮತ್ತೆ ಎದುರುಬದುರಾದಾಗ, ‘ನನ್ನನ್ನೇಕೆ ನೀನಂದು ತಿನ್ನಲಿಲ್ಲ?’ ಎಂದು ಹಸು ಪ್ರಶ್ನಿಸುತ್ತದೆ. ‘ನೀನು ಹಾಲುಣಿಸಲು ಹೋದ ಮೇಲೆ ಮರಕಡಿವ ಜನರಾಡುವುದನ್ನು ಕೇಳಿದೆ, ನೀನು ದೇವತೆಯಂತೆ, ನಿನ್ನಲ್ಲಿ ಕೋಟಿ ಕೋಟಿ ದೇವರಿವೆಯಂತೆ’ ಎಂದು ಹುಲಿ ಪ್ರತಿಕ್ರಿಯಿಸಿದಾಗ, ‘ನನ್ನ ದೇಹ ನನ್ನದು. ನನ್ನ ದೇಹದಲ್ಲಿರುವುದು ನಾನೇ ಹೊರತು ಬೇರೆಯವರಲ್ಲ. ಎಷ್ಟಾದರೂ ನಾನು ಹೆಣ್ಣಲ್ಲವೇ… ನನ್ನ ದೇಹ ನನ್ನದು ಎಂದು ಆಗಾಗ ಗಟ್ಟಿಯಾಗಿ ಹೇಳಲೇಬೇಕು!’ ಎಂದು ಹೇಳುವ ಪುಣ್ಯಕೋಟಿ, ‘ನಾ ಕಂಡ ದೇವನೊಬ್ಬ ಇದ್ದರೆ ಅದು ನೀನೊಬ್ಬನೇ! ಹಸಿದ ವೇಳೆಯಲ್ಲಿ ಸಿಕ್ಕ ಅನ್ನವನ್ನೂ ಬಿಟ್ಟ ಪರಮ ವೈರಾಗ್ಯಮೂರ್ತಿ, ನನ್ನ ಕಂದನಿಗೆ ತಾಯಿಯನ್ನು ತಿರುಗಿಸಿಕೊಟ್ಟ ನನ್ನ ಪಾಲಿನ ನಿಜ ದೈವ ನೀನು ಮಾತ್ರ. ಗೋವೊಂದೇ ದೈವ ಎನ್ನುವ ಹುಲುಮಾನವರ ಮೂಢನಂಬಿಕೆಯಿಂದ ಹೊರ ಬಾ ಅರ್ಬುದ’ ಎಂದು ಹೇಳುತ್ತದೆ. ಪುಣ್ಯಕೋಟಿಯ ಈ ಮಾತನ್ನು ವಿವರಿಸುವ ಅಗತ್ಯವಿಲ್ಲ.

‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯಲ್ಲೂ ಬಾಡಿನ ಗಮಲಿದೆ. ‘ನಿತ್ಯ ಕರುವನ್ನು ಅಡ್ಡಾಡಿಸಿ ಮೇಯಿಸಿ ದೇವರುಗಳನ್ನು ಹೊರಗಿಡುವುದಕ್ಕಿಂತ ಅದನ್ನು ಅನ್ನವಾಗಿಸಿ ತಿಂದು ದೇವಾನುದೇವತೆಗಳನ್ನು ತನ್ನ ದೇಹದೊಳಕ್ಕೆ ಇಳಿಸಿಕೊಂಡು ತಾನೇ ದೇವರಾಗುವುದು ಉತ್ತಮ’ ಎನ್ನುವ ತಾತ್ವಿಕತೆ ಕಥಾನಾಯಕ ಪಿಂಗಾಣಿಯದು. ದೇವರಿಗೆ ಬಿಟ್ಟ ಬಸವನನ್ನು ಕೊಂದು, ಬಾಡು ಮಾರಿದ್ದಾರೆ ಎನ್ನುವ ಆರೋಪವನ್ನು ಎದುರಿಸಬೇಕಾದ ಗಡ್ಡದಯ್ಯ ಮತ್ತು ಪಿಂಗಾಣಿಯ ಈ ಕಥೆಯಲ್ಲಿ, ಭೂಕಬಳಿಕೆಯ ಹುನ್ನಾರದ ಎಳೆಯೂ ಇದೆ. ಪಿಂಗಾಣಿ ಬಂಧನಕ್ಕೆ ಕಾರಣನಾಗುವ ಗುರಪ್ಪ ಗೌಡ, ತನ್ನ ತೋಟದ ಬಾವಿಯಲ್ಲಿ ಬಸವನ ಕಳೇಬರ ಕಂಡು ಕಂಗಾಲಾಗುತ್ತಾನೆ. ಬಸವನ ಮೇಲೆ ಗುರಪ್ಪ ಗೌಡ ಮಣ್ಣು ಎಳೆಯುವುದನ್ನು ಪಿಂಗಾಣಿಯ ಮಗ ಜಕ್ಕು ನೋಡುವುದರೊಂದಿಗೆ, ಕಥೆಗೆ ಬೇರೊಂದು ತಿರುವು ದೊರೆಯುತ್ತದೆ. ‘ನಮ್ಮಂಥ ಅನಾಥರಿಗೆ ನ್ಯಾಯ ಬೇಕು ಅಂದ್ರೆ ಈ ತಾತನ ಪಟ ಹಿಡಿದುಕೊಂಡು ನ್ಯಾಯ ಕೇಳಬೇಕು’ ಎಂದು ಕುಡಿದಾಗ ಅಪ್ಪ ಹೇಳುತ್ತಿದ್ದ ಮಾತು ನೆನಪಿಸಿಕೊಂಡು, ಗಾಂಧಿಯ ಪಟದೊಂದಿಗೆ ಜಕ್ಕು ಬಾವಿಗೆ ಜಿಗಿಯುತ್ತಾನೆ. ಜಕ್ಕುವಿನ ದೇಹದ ಮೇಲೂ ಮಣ್ಣೆಳೆಯುವ ಗುರಪ್ಪ ಗೌಡ, ಗಾಂಧಿ- ಅಂಬೇಡ್ಕರ್ ಪಟಗಳೊಂದಿಗೆ ಮನೆಗೆ ಮರಳುತ್ತಾನೆ. ಅವನ ಪಾಪಪ್ರಜ್ಞೆ ಹೆಂಡತಿಯ ಅರಿವಿಗೂ ಬಂದು, ಅವಳು ಗಂಡನನ್ನು ವಿರೋಧಿಸುತ್ತಾಳೆ.

(ರಘುನಾಥ ಚ.ಹ.)

ಪಿಂಗಾಣಿಯನ್ನು ಬಿಡಿಸಿ ಕರ್ಮ ಕೊಂಚ ಕಡಿಮೆ ಮಾಡಿಕೊಳ್ಳಲು ಒತ್ತಾಯಿಸುತ್ತಾಳೆ. ಸೆರೆಯಿಂದ ಹೊರಗೆ ಬಂದ ಪಿಂಗಾಣಿಗೆ ಗೌಡರ ನಡುಮನೆಗೆ ಪ್ರವೇಶ ದೊರೆಯುತ್ತದೆ. ಚಾಪೆಯ ಮೇಲೆ ಕೂತು ಇಷ್ಟದ ಗಿಣ್ಣು ಸವಿಯುವ ಅವಕಾಶವೂ ದೊರೆತಿದೆ. ಆದರೆ, ಮಗನನ್ನು ಬಿಟ್ಟು ಗಿಣ್ಣು ತಿನ್ನುವುದು ಸಾಧ್ಯವೆ? ದುರಂತದ ವಿಷಯ ತಿಳಿದು, ಬೆಳಗಾದಾಗ ಪಿಂಗಾಣಿ ಕಣ್ಮರೆಯಾಗಿರುತ್ತಾನೆ, ಗಾಂಧೀಪಟವೂ… ಸಾಕ್ಷಿಪ್ರಜ್ಞೆಯಂತೆ ಗಾಂಧಿಯನ್ನು ಚಿತ್ರಿಸುವ ಈ ಕಥೆ, ಶೋಷಕ ವರ್ಗದ ಪಾಪಪ್ರಜ್ಞೆಯನ್ನು ಆರೋಪಿಸುವ ಪ್ರಯತ್ನವನ್ನೂ ಮಾಡಿದೆ. ಇಂಥ ಪಾಪಪ್ರಜ್ಞೆ ಎಷ್ಟು ಸಹಜವಾದುದು ಎನ್ನುವ ಪ್ರಶ್ನೆಯ ನಡುವೆಯೂ, ಇದು ಈ ಹೊತ್ತಿಗೆ ಅಗತ್ಯವಾದುದು ಹಾಗೂ ಶೋಷಕ ವರ್ಗಕ್ಕೆ ಪಾಪಪ್ರಜ್ಞೆ ಅಗತ್ಯವೆನ್ನುವ ಗಾಂಧಿ ಪ್ರತಿಪಾದನೆಯ ಹಿನ್ನೆಲೆಯಲ್ಲಿ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆ ಹೊಸ ಸಾಧ್ಯತೆಗಳು ಹೊಳೆಯುತ್ತವೆ. ಕಥೆಯಲ್ಲಿ ಬರುವ ಗಾಂಧಿಯ ಚಿತ್ರಪಟಕ್ಕೂ ಗುರಪ್ಪ ಗೌಡ ದಂಪತಿಯ ಪಾಪಪ್ರಜ್ಞೆಗೂ ಸಂಬಂಧವಿದೆ.
ಸ್ತ್ರೀ ಅಸ್ಮಿತೆಯ ಧ್ವನಿಯೊಂದು ಗೋವಿಂದರಾಜು ಅವರ ಕಥೆಗಳಲ್ಲಿ ಅಲ್ಲಲ್ಲಿ ಮಿಡಿಯುವುದು ಕುತೂಹಲಕರ. ‘ಮೆಚ್ಚನಾ ಪರಮಾತ್ಮನು’ ಕಥೆಯಲ್ಲಿನ, ‘ಎಷ್ಟಾದರೂ ನಾನು ಹೆಣ್ಣಲ್ಲವೇ… ನನ್ನದೇಹ ನನ್ನದು ಎಂದು ಆಗಾಗ ಗಟ್ಟಿಯಾಗಿ ಹೇಳಲೇಬೇಕು!’ ಎನ್ನುವ ಪುಣ್ಯಕೋಟಿಯ ಉದ್ಗಾರದಲ್ಲಿ ಲೋಕದ ಕಣ್ಣಿನಲ್ಲಿನ ಹೆಣ್ಣಿನ ರೂಢಿಗತ ಬಿಂಬಗಳ ಕುರಿತು ನೋವು-ಆಕ್ಷೇಪ ಇರುವಂತಿದೆ. ‘ಮಡಿಲೊಳಗಣ ಕಳೇಬರವು’ ಕಥೆಯಲ್ಲಿ, ತನ್ನನ್ನು ಶಂಕಿಸುವ ಗಂಡ ನೀಲಯ್ಯನಿಗೆ ‘ನಾನು ಕುಲಟೆಯಲ್ಲ’ ಎಂದು ಗಟ್ಟಿದನಿಯಲ್ಲಿ ಹೇಳುವ ಸಂಕವ್ವೆ, ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯ ಗುರಪ್ಪ ಗೌಡನ ಪತ್ನಿ, ‘ಉಸಿರಿನ ಪರಿಮಳವಿರಲು’ ಕಥೆಯ ಅಮೃತಮತಿ ಮತ್ತು ದೂತಿ ಹೆಣ್ಣಿನ ವಿವಿಧ ಮುಖಗಳ ಪ್ರತಿನಿಧಿಗಳಾಗಿದ್ದಾರೆ ಹಾಗೂ ಗಂಡಿನ ಟೊಳ್ಳನ್ನು ಬಯಲುಮಾಡುವ ನೈತಿಕಶಕ್ತಿಗಳಾಗಿದ್ದಾರೆ. ಈ ಮಹಿಳಾದನಿಗೆ ಗೋವಿಂದರಾಜು ತಮ್ಮ ಮುಂದಿನ ಕಥೆಗಳಲ್ಲಿ ಮತ್ತಷ್ಟು ಓಗೊಡಬಹುದೇನೊ?

‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ ಒಡಲ ಸಂಕಟವನ್ನು ಕಲೆಯಾಗಿಸುವುದು ಸಾಧ್ಯವಾಗಿರುವುದರಿಂದಲೇ, ಈ ಕಥೆಗಳು ಓದುಗರೊಳಗೆ ತಮ್ಮ ಕಂಪನಗಳನ್ನು ವಿಸ್ತರಿಸಿಕೊಳ್ಳುವ ಕಸುವು ಹೊಂದಿವೆ. ಸಹೃದಯನನ್ನು ಅವನಿಗರಿವಿಲ್ಲದಂತೆಯೇ ಆತ್ಮಾವಲೋಕನಕ್ಕೆ ಒತ್ತಾಯಿಸುವ ಗುಣ ಒಳ್ಳೆಯ ಸಾಹಿತ್ಯದ ಮುಖ್ಯ ಲಕ್ಷಣವೆನ್ನುವ ನಂಬಿಕೆ, ಗೋವಿಂದರಾಜು ಅವರ ಕಥೆಗಳನ್ನು ಓದುವಾಗ ಮತ್ತಷ್ಟು ಗಟ್ಟಿಯಾಗಿದೆ.

ಮಾತುಗಳಿಗಿಂತಲೂ ಬರವಣಿಗೆಯ ಮೂಲಕವೇ ಹೆಚ್ಚು ಪರಿಚಿತರೂ ಪ್ರಿಯರೂ ಆದ ಗೋವಿಂದರಾಜು ಅವರ ಚೊಚ್ಚಿಲ ಸಂಕಲನಕ್ಕೆ ಪ್ರತಿಕ್ರಿಯಿಸುವ ನೆಪದಲ್ಲಿನ ಓದು ಕೊಟ್ಟ ಸಂತೋಷ ದೊಡ್ಡದು. ಈ ಸಂತೋಷ ಎಲ್ಲ ಓದುಗರಿಗೂ ದೊರೆಯುತ್ತದೆಂದು ನಂಬುವೆ. ಹಾಗೆಯೇ, ಹೀಗೆ ಸಂತೋಷ ಹಂಚುವ ಕೆಲಸವನ್ನು ಗೋವಿಂದರಾಜು ನಿರಂತರವಾಗಿ ಮಾಡುತ್ತಲಿರಲಿ, ಅವರ ಬರವಣಿಗೆಗೆ ಅಗತ್ಯವಾದ ಒತ್ತಾಸೆಗಳು ಅವರಿಗೆ ದೊರಕಲಿ ಎಂದು ಆಶಿಸುವೆ.

(ಕೃತಿ: ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ (ಕಥಾ ಸಂಕಲನ), ಲೇಖಕರು: ಗೋವಿಂದರಾಜು ಎಂ ಕಲ್ಲೂರು, ಪ್ರಕಾಶಕರು: ರೂಹು ಪುಸ್ತಕ, ಬೆಲೆ:130/-)