ಶೂದ್ರರಾಗ

ಹೊರಡಿಹಿದು ಶೂದ್ರರಾಗ
ಕೆಂಪನೆಯ ದನಿಯಲಿ
ಮರಳುತಿಹಿದು ಎದೆಯ ಯೋಗ
ತಂಪನೆಯ ಜಗದಲಿ

ಸಾಲು ಸಾಲು ಪಂಜುಗಳಲಿ
ಕಪ್ಪನೆಯ ನೆರಳು
ಕೀಳು ಎಂದ ಎದೆಯಲಿ
ಸಪ್ಪಳದ ಉರುಳು

ಹಿಡಿದಿಹಿದು ತನ್ನ ಹಾದಿ
ಒಂಟಿಯಾದ ತಮಟೆ
ತುಂಬಿಹಿದು ಎಲ್ಲ ಬೀದಿ
ಮನವ ಒಡೆದ ಕಟ್ಟೆ

ತುಳಿದಿರುವ ಹೃದಯ ಅರಳಿ
ಹೊಸತು ಭಾವ ತುಂಬಿದೆ
ಕಳೆದಿರುವ ದಿನವು ಉರುಳಿ
ಕಸುವು ಈಗ ಬಂದಿದೆ

ಎತ್ತಿ ಹಿಡಿದ ಕಹಳೆಯಲಿ
ಜಗದ ನೋವು ಮೊಳಗಿದೆ
ಸುತ್ತುವರೆದ ಕೋಟೆಯಲಿ
ರಾಗ ಹೂವು ಅರಳಿದೆ

ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ
ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ.
ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), “ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು.
“ಲಾಸ್ಟ್ ಲೈಫ್” ಕಥನ ಕವನ ಮತ್ತು “ದ್ವಂದ್ವ” ಕವನ ಸಂಕಲನ ಅಚ್ಚಿನಲ್ಲಿವೆ