ಇಲ್ಲಿ ಈ ಕ್ಷಣದಲ್ಲಿ
ಒಣಗಿದ ಕೈಯಲ್ಲಿ
ತುಂಬಿದ ತಟ್ಟೆಯಲಿ
ಒಲವೆಲ್ಲಿ ಎನುವಲ್ಲಿ
ಆಕೆ ತಟ್ಟಿದ ರೊಟ್ಟಿಯ
ಬಲವೇ ರಟ್ಟೆ ತುಂಬಿರಲು
ಕೈ ತುತ್ತಿನ ನೆನಪಿನಲ್ಲೇ
ಹಸಿವು ನೀಗಿದೆ
ಶಹರದ ಗದ್ದಲದ ಮಧ್ಯೆ ಕೂಡ
ಉಸಿರ ಏರಿಳಿತದ ಸದ್ದು,
ಆಕೆಗೆ ಕೇಳಿಸಿ, ಕಳವಳದಿ
ಕೇಳುವಳು ಏನಾಗಿದೆ ಎಂದು
ದೂರದಲ್ಲಿದ್ದರೂ
ಸಂತೆಯ ಸುಡುಗಾಡಿನಲ್ಲೂ
ಚಿಂತೆಯ ಚಿತಾಗಾರದಲ್ಲೂ
ರಾತ್ರಿಯ ಕತ್ತಲೆಯಲ್ಲಿ
ತಲೆಯ ನೇವರಿಸಿದ ಕೈ,
ತಿಳಿಹೇಳಿದ ದನಿ
ಆ
ಅಭಯಹಸ್ತ ಆಕೆಯದೆ
ತಿರಸ್ಕಾರ ಪುರಸ್ಕಾರಗಳಾಚೆ
ಅಹಂಕಾರ ಅಬ್ಬರಗಳೀಚೆ
ಹರಿಯುತಿದೆ ಒಲವ ನದಿ
ಅಮ್ಮನ ಎದೆ ಕಡಲಿನೆಡೆಗೆ
ಆ ಕಡಲ ನಡುವಲ್ಲಿ
ಧ್ರುವ ತಾರೆ ನಭದಲ್ಲಿ
ಉಂಟು ಶಾಶ್ವತ ಜಾಗ
ಈ ಜೀವಕೆ
ಅದುವೇ ನೆಚ್ಚಿನ ತಾಣ
ಆ ಜೀವಕೆ
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

