ಕುಟುಂಬಕ್ಕೆ ಆಗಮಿಸಿದ ಹೊಸ ಸದಸ್ಯೆಯ ಆಗಮನದ ಸಂತೋಷ ಬರಿಯ ಹದಿನೈದು ದಿನಗಳಲ್ಲಿ ಕಮರಿಹೋಯಿತು. ಆಸ್ಪತ್ರೆಯಿಂದ ಹೊರಬರುವ ಮೊದಲೇ ಮೊದಲ ಬಾರಿಗೆ ದಪ್ಪ ಸೂಜಿಯಿಂದ ಚುಚ್ಚಿಸಿಕೊಂಡು ರಕ್ತವನ್ನು ದೇಹದ ಒಳಗೆ ದಾಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಳುತ್ತಿದ್ದ ಮಗುವನ್ನು ನೋಡಲಾಗದ ರಮ್ಯಾ ಕೋಣೆಯಿಂದ ಹೊರಗೆ ಓಡಿಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ಆಕೆಯನ್ನು ಸಂತೈಸಲು ಸಾಧ್ಯವಾಗದ ವಿಚಾರನಿಗೆ ತನ್ನ ಮುಂದಿರುವ ಜೀವನದ ಕಿರುನೋಟ ಅಂದು ಕಾಣಿಸಿತು.
ಶ್ರೀಲೋಲ ಸೋಮಯಾಜಿ ಬರೆದ “ಮೊನಾಲಿಸಾಳ ನಗು” ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ವಿಚಾರ ಅಂದು ಮನೆಗೆ ಬರುವಾಗಲೇ ಸಾಕಷ್ಟು ಹೊತ್ತಾಗಿತ್ತು. ಸಂಜೆ ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ ತಮ್ಮ ಕಂಪೆನಿ ಮಾರಿಹೋದ ವಿಷಯ, ಅದರ ಸಾಧಕ ಬಾಧಕಗಳನ್ನು ತಿಳಿಸಿ ಹೇಳಿ ಅವರೆಲ್ಲರ ಒಪ್ಪಿಗೆ ಪಡೆದು ಆಫೀಸಿನಿಂದ ಹೊರಗೆ ಬರುವಾಗಲೇ ಆಕಾಶ ಕಪ್ಪಾಗಿತ್ತು. ಕಾರನ್ನು ಆಫೀಸಿನ ಬೇಸ್‌ಮೆಂಟಿನಿಂದ ತೆಗೆದು ಮುಖ್ಯರಸ್ತೆಗೆ ಬರುವಾಗ ಶುರುವಾದ ಜಿಟಿಜಿಟಿ ಮಳೆ ಕ್ರಮೇಣ ಜೋರಾಗಿ ರಸ್ತೆಯೆನ್ನುವುದು ಚಿಕ್ಕ ಹೊಳೆಯಂತಾಗಿತ್ತು. ಅದರಿಂದಾಗಿ ವಾಹನಗಳು ಚಲಿಸದಂತಾಗಿ ಅರ್ಧಗಂಟೆಯಲ್ಲಿ ಮನೆಸೇರಬೇಕಾಗಿದ್ದ ವಿಚಾರ ಎರಡು ತಾಸು ತಡವಾಗಿ ಸೇರಿದ. ಆದರೂ ಆತನ ಮನಸ್ಸು ಲಹರಿಯಲ್ಲಿಯೇ ಇತ್ತು. ತಾನು ಕಟ್ಟಿಬೆಳೆಸಿದ ಕಂಪೆನಿ ಇನ್ನೊಬ್ಬರ ಪಾಲಾಗುವುದು ಅಂತಹ ಸಂತೋಷದ ವಿಷಯವಲ್ಲವಾದರೂ ಸಹ ಒಂದು ಕಂಪೆನಿ ಇನ್ನೊಂದನ್ನು ಖರೀದಿಸಿವುದು ಕಾರ್ಪೊರೇಟ್ ಜಗತ್ತಿನಲ್ಲಿ ಮಾಮೂಲು. ಆದರೆ ಕಂಪೆನಿಯನ್ನು ಮಾರಿದುದರಿಂದ ಬಂದ ತನ್ನ ಪಾಲಿನ ಶೇರಿನ ಹಣ ಮಗಳ ಚಿಕಿತ್ಸೆಗೆ ಒಂದು ದಾರಿಯಾಯಿತಲ್ಲ ಎನ್ನುವ ಆಲೋಚನೆ ಮಾರುಮಾರಿನಲ್ಲಿ ಇದ್ದ ಟ್ರಾಫಿಕ್ ಜಾಮ್‌ಅನ್ನು ಸಹಿಸಿಕೊಂಡಿರುವಂತೆ ಮಾಡಿತು. ಬೇಸ್‌ಮೆಂಟಿನಲ್ಲಿ ಕಾರನ್ನು ನಿಲ್ಲಿಸಿ ಮನೆಗೆ ಬರುವಾಗ ಆತನ ಪತ್ನಿ ರಮ್ಯಾ ಮನೆಯ ಹೊರಗೆ ನಿಂತು ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ನಿಂತಿದ್ದಳು.
*****
ವಿಚಾರ ಹಾಗು ರಮ್ಯಾ ತಮ್ಮ ಮೊದಲ ಕೆಲಸದ ನಿಮಿತ್ತ ಅಮೇರಿಕಕ್ಕೆ ಹೋದಾಗ ಅಲ್ಲಿ ಪ್ರೀತಿಸಿ, ಮತ್ತೆ ಮದುವೆಯಾದವರು. ಅಮೇರಿಕಕ್ಕೆ ಅಪರಿಚಿತರಾಗಿಯೇ ಹೋಗಿ, ಅಲ್ಲಿ ವಾರಾಂತ್ಯಗಳಲ್ಲಿ ಸ್ಕೇಟಿಂಗ್ ಕ್ಲಾಸಿನಲ್ಲಿ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ ಮತ್ತೆ ಮದುವೆಯಾದವರು. ಅವರಿಬ್ಬರು ಲಹರಿಯಲ್ಲಿರುವಾಗ ತಮ್ಮ ಅಮೇರಿಕದ ದಿನಗಳನ್ನು ಮೆಲುಕು ಹಾಕುತ್ತಾ, ಇಲ್ಲಿಂದ ಹೋಗುವಾಗ ಒಂಟಿ ಬರುವಾಗ ಜಂಟಿ ಎಂದು ಹೇಳಿಕೊಂಡು ನಗುತ್ತಿದ್ದರು. ಮದುವೆಗಿಂತ ಮೊದಲು ಪರಸ್ಪರ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರೂ ಅವರಿಗೆ ತಿಳಿಯದ ವಿಷಯವೆಂದರೆ ಇಬ್ಬರೂ ಸಹ ಜೀನ್ ಮೂಲಕ ವಂಶದಲ್ಲಿ ಹರಿದು ಬರುವ ತಲಸ್ಸೆಮಿಯಾ ಎನ್ನುವ ಖಾಯಿಲೆಯ ವಾಹಕರಾಗಿದ್ದುದು. ಅವರು ಮದುವೆಯಾಗಿ ಎರಡುವರ್ಷಕ್ಕೆ ಹುಟ್ಟಿದ ಮಗು ತಾರಿಣಿ, ಮುದ್ದಾಗಿದ್ದರೂ ಹುಟ್ಟಿ ಹದಿನೈದು ದಿನಕ್ಕೆ ಶಕ್ತಿಹೀನಳಂತೆ ಬಿಳಿಚಿಕೊಳ್ಳತೊಡಗಿದಳು. ತಾಯಿಯಾದ ರಮ್ಯಾಳಿಗೆ ಇದು ಅರಿವಿಗೆ ಬಂದು ಮಗುವನ್ನು ವಿಚಾರನ ಜೊತೆಯಲ್ಲಿ ಮಕ್ಕಳ ತಜ್ಞರಲ್ಲಿ ಕರೆದುಕೊಂಡು ಹೋದಳು. ವೈದರು ಹೇಳಿದ ನಾಲ್ಕಾರು ಪರೀಕ್ಷೆಯ ನಂತರ ತಿಳಿದದ್ದು, ತನ್ನ ತಂದೆ ಹಾಗು ತಾಯಿಯಿಬ್ಬರೂ ತಲಸ್ಸೆಮಿಯಾದ ವಾಹಕರಾಗಿದ್ದುದರಿಂದ, ಮಗುವು ಬೀಟಾತಲಸ್ಸೆಮಿಯಾ ಮೇಜರ್ ಎನ್ನುವ ಖಾಯಿಲೆಗೆ ತುತ್ತಾಗಿದೆಯೆಂದು. ಮಗುವಿನ ದೇಹ ತನಗೆ ಬೇಕಾದಷ್ಟು ಕೆಂಪುರಕ್ತಕಣವನ್ನು ಉತ್ಪಾದಿಸಲು ಸಾಧ್ಯವಾಗದೇ ಹೋಗುವುದರಿಂದ ತನ್ನ ಜೀವಿತಾವಧಿಯುದ್ದಕ್ಕೂ ಪ್ರತೀ ಮೂರುವಾರಕ್ಕೊಮ್ಮೆ ಆರೋಗ್ಯವಂತ ವ್ಯಕ್ತಿಯಿಂದ ರಕ್ತವನ್ನು ಪಡೆಯುತ್ತಾ ಇರಬೇಕು ಎನ್ನುವ ಮಾತೇ ದಂಪತಿಗಳಿಬ್ಬರಿಗೆ ತಮ್ಮ ಮುಂದಿರುವ ಬದುಕು ನಿರಾಶೆಯ ಮಡು ಎಂದು ಅನ್ನಿಸತೊಡಗಿತು. ಕುಟುಂಬಕ್ಕೆ ಆಗಮಿಸಿದ ಹೊಸ ಸದಸ್ಯೆಯ ಆಗಮನದ ಸಂತೋಷ ಬರಿಯ ಹದಿನೈದು ದಿನಗಳಲ್ಲಿ ಕಮರಿಹೋಯಿತು. ಆಸ್ಪತ್ರೆಯಿಂದ ಹೊರಬರುವ ಮೊದಲೇ ಮೊದಲ ಬಾರಿಗೆ ದಪ್ಪ ಸೂಜಿಯಿಂದ ಚುಚ್ಚಿಸಿಕೊಂಡು ರಕ್ತವನ್ನು ದೇಹದ ಒಳಗೆ ದಾಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಳುತ್ತಿದ್ದ ಮಗುವನ್ನು ನೋಡಲಾಗದ ರಮ್ಯಾ ಕೋಣೆಯಿಂದ ಹೊರಗೆ ಓಡಿಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ಆಕೆಯನ್ನು ಸಂತೈಸಲು ಸಾಧ್ಯವಾಗದ ವಿಚಾರನಿಗೆ ತನ್ನ ಮುಂದಿರುವ ಜೀವನದ ಕಿರುನೋಟ ಅಂದು ಕಾಣಿಸಿತು. ಅವರಲ್ಲಿ ಓರ್ವರು ಈ ಖಾಯಿಲೆಯ ವಾಹಕರಾಗಿರದಿದ್ದರೂ ತಾರಿಣಿ ಖಾಯಿಲೆಯ ಜೊತೆಯಲ್ಲಿ ಹುಟ್ಟುತ್ತಿರಲಿಲ್ಲ. ತಾರಿಣಿಯು ಬೆಳೆಯುತ್ತಾ ಮೂರುವಾರಕ್ಕೊಮ್ಮೆ ಆಸ್ಪತ್ರೆಗೆ ಹೋಗಿ ಅಲ್ಲಿ ಎರಡು-ಮೂರುಗಂಟೆ ಉಳಿದು ಆರೋಗ್ಯವಂತ ರಕ್ತವನ್ನು ಪಡೆದುಕೊಂಡು ಮುಂಚಿನಂತೆ ಆಟವಾಡುತ್ತ, ಶಾಲೆಗೆ ಹೋಗುತ್ತ ಬೆಳೆಯುವಾಗ ಬದುಕು ತಹಬಂದಿಗೆ ಬಂತು ಎಂದು ದಂಪತಿಗಳಿಗೆ ಅನ್ನಿಸಿತು. ಆದರೆ ವರ್ಷಗಳು ಕಳೆದಂತೆ ತಾರಿಣಿಯು ಆಸ್ಪತ್ರೆಗೆ ಹೋಗುವ ದಿನ ಸಪ್ಪಗಾಗುವುದನ್ನು ಕಾಣುತ್ತಿದ್ದ ಆಕೆಯ ತಂದೆತಾಯಿಯರಿಗೆ ಕರುಳು ಚುರುಕ್ ಎನ್ನಿಸುತ್ತಿರುವುದು ಸುಳ್ಳಲ್ಲ. ಇದಕ್ಕೆ ಪರಿಹಾರ ಸಧ್ಯಕ್ಕಂತೂ ಕಾಣುತ್ತಿಲ್ಲ ಆದರೆ ಏನಾದರೂ ಜಾದು ನಡೆದು ತಾರಿಣಿ ಬೇರೆ ಮಕ್ಕಳಂತೆ ಆಡುತ್ತಾ ನಲಿಯುತ್ತಾ ಸದಾ ಇರಲಿ ಎಂದು ಆಶಿಸುತ್ತಿದ್ದರು.
ತನ್ನ ಮಗುವಿನ ಈ ಪರಿಸ್ಥಿತಿಯಿಂದ ದುಃಖಿತಳಾದ ರಮ್ಯಾ, ತಾನು ಸಹ ಧೈರ್ಯ ಕಳೆದುಕೊಂಡರೆ ಈಗಾಗಲೇ ದೈಹಿಕವಾಗಿ ಕುಗ್ಗಿರುವ ಮಗುವು ಭವಿಷ್ಯದಲ್ಲಿ ಮಾನಸಿಕವಾಗಿಯೂ ಕುಗ್ಗಬಹುದು ಎಂದು ಸರಿಯಾಗಿಯೇ ಊಹಿಸಿ, ತಾರಿಣಿಗೆ ಆದಷ್ಟು ಜಗತ್ತಿನ ವಾಸ್ತವದ ಬಗೆಯನ್ನು, ಜೀವನವನ್ನು ಎದುರಿಸುವ ಬಗೆಯನ್ನು ಕತೆಯ ಮೂಲಕವೋ, ಹಾಡುಗಳ ಮೂಲಕವೋ ಹೇಳುತ್ತಾ ಇದ್ದಳು. ಈ ಕಾರಣದಿಂದಲೋ ಅಥವಾ ತಾರಿಣಿಯ ಗಮನಿಸುವ ಗುಣದ ಕಾರಣದಿಂದಲೋ, ತನ್ನ ದೈಹಿಕ ಗುಣ ತನ್ನ ತಂದೆತಾಯಿಯವರ ರೀತಿಯಾಗಲಿ ಅಥವಾ ತನ್ನ ಜೊತೆಯಲ್ಲಿ ಆಟವಾಡುವ ಓರಗೆಯ ಮಕ್ಕಳಂತೆ ಇಲ್ಲ, ಏನೋ ಎಡವಟ್ಟಿದೆ ಎಂಬುದನ್ನು ಅರಿತ ಆಕೆಯ ಚರ್ಯೆಯಲ್ಲಿ, ನಗುವಿನಲ್ಲಿ, ನಡವಳಿಕೆಯಲ್ಲಿ, ಮಾತಿನಲ್ಲಿ, ಆಕೆಯ ಪ್ರಾಯಕ್ಕೆ ಮೀರಿದ ಗಾಂಭೀರ್ಯ ಕಾಣಿಸತೊಡಗಿತು.
ಈ ಕಾಯಿಲೆಗೆ ಔಷಧಿಯ ಚಿಕಿತ್ಸೆಯಿಲ್ಲದೇ ಇದ್ದರೂ, ಆರೋಗ್ಯವಂತ ದಾನಿಯ ಹ್ಯೂಮನ್ ಲ್ಯೂಕೋಸೈಟ್ ಆಂಟಿಜನ್ (ಎಚ್.ಎಲ್.ಎ) ಎನ್ನುವ ಅಂಗಾಂಶವು ರೋಗಿಯ ಅಂಗಾಂಶಕ್ಕೆ ಹೊಂದಿಕೆಯಾದರೆ ಆ ದಾನಿಯ ಅಸ್ಥಿಮಜ್ಜೆಯ ಭಾಗವನ್ನು ತೆಗೆದು ರೋಗಿಯ ದೇಹಕ್ಕೆ ಸೇರಿಸುವ ಚಿಕಿತ್ಸೆ, ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನಿಂದ ರೋಗಿಯು ಗುಣಮುಖನಾಗುವ ಸಾಧ್ಯತೆ ಬಹಳಷ್ಟು ಇರುತ್ತದೆ. ಕುಟುಂಬದವರ ಎಚ್.ಎಲ್.ಎ ಅಂಗಾಂಶ ರೋಗಿಯ ಅಂಗಾಂಶವನ್ನು ಹೋಲುವ ಸಾಧ್ಯತೆ ಜಾಸ್ತಿಯಿದ್ದರೂ ತಾರಿಣಿಯ ಆ ವಿಷಯದಲ್ಲಿ ನತದೃಷ್ಟಳು. ಆದರೆ ಆಶ್ಚರ್ಯಕರವಾಗಿ ತಮ್ಮ ಮಗಳಿಗೆ ಸ್ಟೆಮ್‌ಸೆಲ್‌ನ್ನು ಕೊಡಬಲ್ಲ ಓರ್ವ ದಾನಿಯು ಫ್ರಾನ್ಸಿನಲ್ಲಿ ಇದ್ದು, ಆ ವ್ಯಕ್ತಿಯು ಸ್ಟೆಮ್‌ಸೆಲ್‍ನ್ನು ನೀಡಲು ಒಪ್ಪಿರುವರು ಎಂಬ ವಿಷಯದ ಇ-ಮೇಲು ಅವರೆಲ್ಲರ ಬದುಕಿನಲ್ಲಿ ಹೊಸ ಆಸೆಯನ್ನು ಹುಟ್ಟಿಸಿತು. ಅದೇ ಸಮಯದಲ್ಲಿ ತಾನು ಪ್ರಾರಂಭಿಸಿ ಬೆಳೆಸಿದ ಕಂಪೆನಿಗೂ ಉತ್ತಮ ಮೌಲ್ಯ ಬಂದು ಇವೆರಡು ಒಟ್ಟಿಗೆ ಆದದ್ದು ಅದೃಷ್ಟವೇ ಸರಿ ಎಂದು ವಿಚಾರ ಅಂದುಕೊಂಡ.
*****
ಕಾರನ್ನು ನಿಲ್ಲಿಸಿ ತಲೆಯ ಮೇಲೆ ಕರ್ಚಿಫ್‍ನ್ನು ಇಟ್ಟುಕೊಂಡು ಮನೆಯತ್ತ ಓಡಿಬರುವಾಗಲೇ ಅರ್ಧ ಒದ್ದೆಯಾಗಿದ್ದ ವಿಚಾರ. ಶೂಸ್‌ನ್ನು ಬಿಚ್ಚಿ ಮನೆಯ ಒಳಗೆ ಬಂದು ಮಗಳನ್ನು ಹುಡುಕತೊಡಗಿದ.
‘ತಾರಿಣಿ ಮಲಗಿರುವಳು’ ಎಂದಳು ರಮ್ಯಾ.
‘ಓ ಇಷ್ಟು ಬೇಗ? ಇರಲಿ, ನಾವು ಅಂದುಕೊಂಡಂತೆ ಆಯಿತು ರಮ್ಯಾ. ನಮ್ಮ ಪ್ರಾಜೆಕ್ಟ್‌ಯಶಸ್ವಿಯಾಯಿತು. ಆಲ್ಫಾ ಟೆಕ್ನಾಲಾಜೀಸ್‌ನವರು ಮುಂಚೆ ಹೇಳಿದಂತೆ ನಮ್ಮ ಕಂಪೆನಿಯನ್ನು ಖರೀದಿ ಮಾಡುತ್ತಾರಂತೆ. ಕಂಪೆನಿ ಮಾರಿದುದರಿಂದ ನನ್ನ ಪಾಲಿನ ಹಣವೂ ಇನ್ನೊಂದು ತಿಂಗಳಲ್ಲಿ ಬರುತ್ತದೆ. ನಾಳೆ ನಾವು ಡಾಕ್ಟರ್ ನೇಹಾರನ್ನು ಮಾತನಾಡಿಸೋಣ. ಅವರಿಗೂ ಸ್ಟೆಮ್‍ಸೆಲ್ ತರಿಸಲು ಸಮಯ ಬೇಕಾಗುತ್ತೆ. ಎಲ್ಲವೂ ಸರಿಯಾದರೆ ಇನ್ನೊಂದು ಮೂರು ನಾಲ್ಕು ತಿಂಗಳಲ್ಲಿ ತಾರಿಣಿಯ ಚಿಕಿತ್ಸೆ ಮುಗಿದು ಎಲ್ಲರಂತೆ ಆಗುತ್ತಾಳೆ.’ ಹಾಗೆ ಹೇಳುವಾಗ ಅವನ ಮುಖದಲ್ಲಿ ಸಂತಸವಿತ್ತು.
‘ವಿಚಾರ..’
‘ಏನು?’
‘ನಾವು ಈ ಚಿಕಿತ್ಸೆ ಮಾಡಿಸಲೇ ಬೇಕೆ?’
‘ಏನು ಹೇಳುತ್ತಿರುವಿ, ರಮ್ಯಾ?’ ಆಶ್ಚರ್ಯದಿಂದ ನುಡಿದ ವಿಚಾರ.
‘ಡಾಕ್ಟರ್ ಚಿಕಿತ್ಸೆಯ ಬಗ್ಗೆ ಹೇಳುವಾಗ ಅದು ಒಂದು ವೇಳೆ ಯಶಸ್ವಿಯಾಗದಿದ್ದರೆ ಏನಾಗುತ್ತದೆ ಎಂದು ಹೇಳಿದ್ದಾರಲ್ಲ. ಒಂದು ವೇಳೆ ಹಾಗೆ ಆದರೆ…?’
‘ರಮ್ಯಾ. ಈಗ ತಾರಿಣಿಯ ವಯಸ್ಸು ಈ ಚಿಕಿತ್ಸೆಗೆ ಸರಿಯಾದ ವಯಸ್ಸು. ಈಗ ಸಿಕ್ಕಿರುವ ಸ್ಯಾಂಪಲ್ ಸಹ ಬಹುಮಟ್ಟಿಗೆ ಹೊಂದಾಣಿಕೆಯಾಗುತ್ತಿದೆ. ಅದೂ ಅಲ್ಲದೆ ಡಾಕ್ಟರ್ ಈ ಹಿಂದೆಯೂ ಇಂತಹ ಚಿಕಿತ್ಸೆಗಳನ್ನು ಮಾಡಿದ್ದಾರೆ. ಅವರೂ ಕೂಡ ಚಿಕಿತ್ಸೆಯ ಬಗ್ಗೆ ವಿಶ್ವಾಸದಿಂದ ಇದ್ದಾರೆ. ಅವರ ವಿಶ್ವಾಸದಲ್ಲೂ ನಾವು ನಂಬಿಕೆ ಇಡಬೇಕಲ್ವ. ಸ್ಯಾಂಪಲ್ ಹೊಂದಿಕೆಯಾದದ್ದು, ಅದಕ್ಕೆ ಸರಿಯಾಗಿ ಚಿಕಿತ್ಸೆಗೆ ಬೇಕಾದ ಹಣದ ವ್ಯವಸ್ಥೆ, ಎಲ್ಲವೂ ಸರಿಯಾಗಿ ತಾಳೆಯಾಗುವುದು ನೋಡಿದರೆ ಚಿಕಿತ್ಸೆ ಯಶಸ್ವಿಯಾಗುತ್ತದೆ ಎಂದು ನಾನು ನಂಬಿರುವೆ.’ ಎಂದನು ವಿಚಾರ. ಏನೂ ಪ್ರತಿಕ್ರಿಯಿಸದ ರಮ್ಯಾಳನ್ನು ನೋಡುತ್ತಾ ಆತನು ಮುಂದುವರಿಸಿದ.
‘ಅದೂ ಅಲ್ಲದೆ ರಮ್ಯಾ, ಇಂತಹ ವಿಷಯಗಳಲ್ಲಿ ನೀನು ನನಗಿಂತ ಗಟ್ಟಿಗಳೆಂದುಕೊಂಡಿದ್ದೆ. ನೀನೆಯೇ ಎಷ್ಟು ಬಾರಿ ಡಾಕ್ಟರ್ ನೇಹಾರ ಹತ್ತಿರ ಈ ವಿಷಯದ ಬಗ್ಗೆ ಮಾತನಾಡಲಿಲ್ಲ? ಇಂತಹ ಚಿಕಿತ್ಸೆಯನ್ನು ಪಡೆದವರನ್ನು ಸಹ ಭೇಟಿಯಾಗಿ ಅವರ ಅನುಭವಗಳನ್ನೆಲ್ಲ ಬರೆದು ಇಟ್ಟಿದ್ದಿ. ಯಾವುದಾದರೂ ಸ್ಯಾಂಪಲ್ ಹೊಂದಿಕೆಯಾಗಲಿ ಎಂದು ನೀನು ಹೇಳಿಕೊಂಡಿರುವ ಹರಕೆಗಳಿಗೆ ಲೆಕ್ಕವಿಲ್ಲ. ಕಾಣದ ದೇವರಿಗೆ ಎಲ್ಲವನ್ನು ಹೇಳಿಕೊಂಡು ಕೊನೆಗೆ ನನ್ನ ತಲೆಕೂದಲನ್ನೂ ಸಹ ಯಾವುದೋ ದೇವರಿಗೆ ಹೇಳಿಕೊಂಡಿದ್ದಿ. ಇಷ್ಟೆಲ್ಲ ಆದ ಮೇಲೂ ಸಹ ನೀನು ಈ ರೀತಿ ವಿಶ್ವಾಸ ಕಳೆದುಕೊಳ್ಳಬಾರದು, ರಮ್ಯಾ. ಒಂದು ಮಾತು. ಇಷ್ಟೆಲ್ಲಾ ಆದ ಮೇಲೂ ಏನಾದರೂ ಆದರೆ ನಾವೇನೂ ಮಾಡಲು ಆಗುವುದಿಲ್ಲ, ನೀನು ತಾರಿಣಿ ಮಲಗುವಾಗ ಹೇಳುತ್ತಿದ್ದ ಫ್ರೆಂಚ್ ಹಾಡು ಉಂಟಲ್ಲ – ‘ಕೆ ಸೆರಾ ಸೆರಾ.. ’ ಎಂದು. ಅದರ ಅರ್ಥವೇನು? ಆಗುವುದು ಆಗಿಯೇ ಆಗುತ್ತದೆ, ಅಂತ ಅಲ್ಲವಾ?’
ಅನಿಶ್ಚಿತ ಭವಿಷ್ಯದ ಬಗೆಗಿನ ಹೆದರಿಕೆ ರಮ್ಯಾಳನ್ನು ಬಾಧಿಸುತ್ತಿತ್ತು.
‘ಆ ಹಾಡಿನ ಸಾಲು ಫ್ರೆಂಚ್ ಭಾಷೆಯದಲ್ಲ, ಬದಲಿಗೆ ಸ್ಪ್ಯಾನಿಷ್‌ನಲ್ಲಿದೆ. ವಿಚಾರ, ನಾನು ಆ ಮಗುವಿನ ಅಮ್ಮ. ಇರುವ ಮಗುವನ್ನು ಕಳೆದುಕೊಂಡು ನಾನು ಹೇಗೆ ಬದುಕಲಿ?’ ಆ ಆಲೋಚನೆಯೇ ಮನಸ್ಸಿನಲ್ಲಿ ಬರಬಾರದಿತ್ತು ಎಂದು ಅನ್ನಿಸಿ ಆಕೆಯ ಕಣ್ಣೀರುಗರೆಯತೊಡಗಿದಳು. ಸ್ವಲ್ಪ ಸುಧಾರಿಸಿಕೊಂಡು,
‘ಡಾಕ್ಟರ್ ಹೇಳುತ್ತಾರೆ ಸರಿ. ಅವರ ಮಾತಿನಲ್ಲಿರುವ ವಿಶ್ವಾಸ ಅವರ ಅನುಭವದಿಂದ ಬಂದದ್ದು ಅಲ್ಲವೆ. ಪ್ರತಿಯೊಂದು ಕೇಸೂ ಸಹ ಅನನ್ಯ ಎಂದು ಅವರೇ ಹೇಳಿದ್ದಾರಲ್ಲ. ಒಂದು ವೇಳೆ ಏನಾದರೂ ಆಗಿ ಇರುವ ಒಬ್ಬ ಮಗಳು ಕೈತಪ್ಪಿದರೆ? ಚಿಕಿತ್ಸೆಯಿಂದ ಒಂದಕ್ಕೆರಡಾಗುವ ಬದಲು ಈಗ ಇರುವ ರೀತಿಯಲ್ಲಿಯೇ ಮುಂದುವರಿಸಿಕೊಂಡು ಹೋದರೆ. ಮಗಳಾದರೂ ನಮ್ಮ ಕಣ್ಣಿನ ಮುಂದೆ ಇರುತ್ತಾಳಲ್ಲ’
ಅಲ್ಲಿಯವರೆಗೆ ಭರವಸೆಯಲ್ಲಿದ್ದ ವಿಚಾರನಿಗೆ ರಮ್ಯಾಳ ಮಾತನ್ನು ಕೇಳಿ ಏನು ಹೇಳಬೇಕೆಂದು ತೋಚಲಿಲ್ಲ. ಎರಡು ನಿಮಿಷ ಯೋಚಿಸಿದ. ನಂತರ ನುಡಿದ.
‘ರಮ್ಯಾ, ಎಂತಹ ದುಃಸ್ಥಿತಿ ನಮ್ಮದು. ಮಲಗಿರುವ ಮಗಳ ಎದುರು ಆಕೆಯ ಸಾವಿನ ಬಗ್ಗೆ ಯೋಚಿಸುವ ಸ್ಥಿತಿ ಬಂತಲ್ಲ. ಅವಳಿಲ್ಲದ ಬದುಕನ್ನು ಊಹಿಸಲು ನನಗೂ ಸಾಧ್ಯವಿಲ್ಲ. ಅವಳು ಹುಟ್ಟಿದಾಗ ನಾನೆಷ್ಟು ಸಂಭ್ರಮಿಸಿದ್ದೆ. ಮಗು ಹುಟ್ಟಿದಾಗ ಅದರ ಜೊತೆಯಲ್ಲಿ ಒಬ್ಬ ತಂದೆ ಸಹ ಹುಟ್ಟುತ್ತಾನೆ ಎನ್ನುವುದು ಮೊದಲು ತಿಳಿದಿದ್ದರೂ, ಅದನ್ನು ಅನುಭವಿಸಿದಾಗಲೇ ಆ ಮಾತಿನ ಅರ್ಥ ಅರಿವಾದದ್ದು. ಈಗ ಮಗಳನ್ನು ಉಳಿಸಿಕೊಳ್ಳಬೇಕೆಂಬ ಜವಾಬ್ದಾರಿ ತಂದೆಯ ನೆಲೆಯಿಂದಲೇ ಬಂದದ್ದಲ್ಲವೆ. ಈ ನಿರಂತರ ಬ್ಲಡ್ ಟ್ರಾನ್ಸ್‌ಫ್ಯೂಶನ್ ಕಳೆದ ಹತ್ತು ವರ್ಷಗಳಿಂದ ನಮ್ಮ ಜೀವನದ ಭಾಗವಾದ ಕಾರಣ ಇಂದು ನಿನಗೆ ಅದು ಸಹ್ಯವೆನ್ನಿಸುತ್ತಿದೆ. ಆದರೆ ತಾರಿಣಿಯ ಮುಂದಿನ ಬದುಕಿನ ಬಗ್ಗೆ ಯೋಚಿಸು, ರಮ್ಯಾ. ಜೀವನ ಪರ್ಯಂತ ಬ್ಲಡ್‌ಬ್ಯಾಂಕಿಗೆ ಹೋಗಿ ರಕ್ತವನ್ನು ಟ್ರಾನ್ಸ್‌ಫ್ಯೂಸ್ ಮಾಡಿಕೊಳ್ಳುವುದು ಎಂದರೆ ತನ್ನ ಜೀವಿತದ ಅವಧಿಯನ್ನು ಇನ್ನೊಮ್ಮೆ ಬ್ಲಡ್‌ಬ್ಯಾಂಕಿಗೆ ಹೋಗುವವರೆಗೆ ದೂಡುವುದು ಎಂದು ನಿನಗೆ ಅನ್ನಿಸುವುದಿಲ್ಲವೆ. ಈಗ ಮಗಳು ಚಿಕ್ಕವಳು, ಸರಿ. ನಮ್ಮ ಜೊತೆಯಲ್ಲಿ ಇದ್ದಾಳೆ. ನಾಳೆ ಅವಳು ಓದಲೋ ಅಥವಾ ದುಡಿಯಲೋ ಬೇರೆ ಊರಿಗೆ ಹೋಗುವ ಸಾಧ್ಯತೆಯಿದ್ದರೆ ನಾವು ಆ ಊರಿನಲ್ಲಿ ಇರುವ ಬ್ಲಡ್‌ಬ್ಯಾಂಕಿನ ಬಗ್ಗೆ ಮೊದಲು ಆಲೋಚಿಸಬೇಕು. ಅವಳ ಎದುರಿಗಿರುವ ಅನೇಕ ಸಾಧ್ಯತೆಗಳನ್ನು ಈ ಊನ ಅವಳಿಗೆ ಸಾಕಷ್ಟು ಅಡ್ಡಿಯನ್ನುಂಟುಮಾಡುವುದಂತೂ ಸತ್ಯ. ಅವಳಿಗೆ ಬಾಳಸಂಗಾತಿಯೋರ್ವನ ಅಗತ್ಯವಿದ್ದರೆ ಆತನೂ ಸಹ ಈ ವಿಷಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ವಿಶಾಲ ಹೃದಯದವನಾಗಿರಬೇಕಲ್ಲ. ಅದು ಸಾಧ್ಯವೆನ್ನಿಸುವುದೆ? ಅಷ್ಟಾದ ಮೇಲೆ ನಿರಂತರವಾಗಿ ಬ್ಲಡ್ ಟ್ರಾನ್ಸ್‌ಫ್ಯೂಶನ್‌ನ ಬಗ್ಗೆಯೂ ನೀನು ತಿಳಿದಿದ್ದೀಯಲ್ಲ. ಅದು ಸಹ ಒಳ್ಳೆಯದಲ್ಲವಲ್ಲ.’
‘ಕೆಲವು ತಿಂಗಳುಗಳ ಹಿಂದೆ ತಾರಿಣಿಯನ್ನು ಬ್ಲಡ್‌ಬ್ಯಾಂಕಿನಿಂದ ಕರೆತರುವಾಗ ಎಂದೂ ಅವಳ ವ್ಯಾಧಿಯ ಬಗ್ಗೆ ಮಾತನಾಡದ ಹುಡುಗಿ ನನ್ನಲ್ಲಿ ಏನು ಕೇಳಿದಳು ಗೊತ್ತೆ?- ‘ಅಪ್ಪ, ಇದು ನನಗೆ ಮಾತ್ರ ಏಕೆ ಬಂತು?’ ಅನಿರೀಕ್ಷಿತವಾಗಿ ಬಂದ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಅವಳ ಮನಸ್ಸಿನ ವ್ಯಥೆಯನ್ನು ಅರಿಯಲು ಇದಕ್ಕಿಂತ ಹೆಚ್ಚಿನ ಶಬ್ದಗಳು ಬೇಕೆ ಎಂದುಕೊಂಡು ನನ್ನ ಕಣ್ಣು ಮಂಜಾಯಿತು. ಕೊನೆಗೆ ಆಕೆಗೇ ಏನೋ ಅನ್ನಿಸಿ ಮಾತನ್ನು ಬದಲಾಯಿಸಿದಳು. ಮನೆಗೆ ವಾಪಾಸು ಬರುವವರೆಗೆ ಅವಳ ಮುಖವನ್ನು ಕಾಣಲು ನನಗೆ ಸಾಧ್ಯವಾಗಲಿಲ್ಲ. ನನ್ನ ಮನಸ್ಸು ಅಂದು ಎಷ್ಟು ಅಸಹಾಯಕ ಸ್ಥಿತಿಯಲ್ಲಿ ಇತ್ತು ಅಂದರೆ ಯಾರಾದರೂ, ಹೇಗಾದರೂ, ಈ ಮಗುವಿನ ನೋವನ್ನು ನಿವಾರಿಸಿದರೆ ಸಾಕು ಎಂದು ಅಂದುಕೊಳ್ಳುತ್ತಿತ್ತು.’
ಒಂದು ನಿರ್ಧಾರಕ್ಕೆ ಬಂದವನಂತೆ ವಿಚಾರ ಮುಂದುವರಿದ,
‘ನಾವು ತೆಗೆದುಕೊಳ್ಳುವ ಇವತ್ತಿನ ನಿರ್ಧಾರಕ್ಕೆ ನಮ್ಮ ಅನುಭವ ಹಾಗು ನಮ್ಮ ಹಿತೈಷಿಗಳು ಹೇಳುವ ಮಾತುಗಳು ಮುಖ್ಯವಾಗುತ್ತವೆಯೇ ವಿನಃ ಭವಿಷ್ಯದ ಬಗೆಗಿನ ಹೆದರಿಕೆಯಲ್ಲ. ಹಾಗಾದರೆ ನಾವು ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಈ ನಿರ್ಧಾರ ನಮ್ಮೆಲ್ಲರ ಒಳ್ಳೆಯದಕ್ಕೆ ಎಂದು ಅಂದುಕೊಳ್ಳುವೆ. ಒಂದುವೇಳೆ ಹಾಗಾಗದೆ ಹೋದರೆ ನಾವೆಲ್ಲರೂ ಜೀವನ ಪೂರ್ತಿ ಅದರ ಪರಿಣಾಮವನ್ನು ಅನುಭವಿಸುತ್ತೇವೆ. ಹಾಗಾಗಿ ಈ ನಿರ್ಧಾರದಲ್ಲಿ ನಿನ್ನ ಒಪ್ಪಿಗೆಯೂ ಬೇಕು. ಒಂದುವೇಳೆ ನಾನೊಬ್ಬನೆ ನಿರ್ಧರಿಸಿದರೆ ಹಾಗು ನಾವು ಅಂದುಕೊಂಡಂತೆ ಚಿಕಿತ್ಸೆ ಯಶಸ್ಸು ಕಾಣದೆ ಹೋದರೆ ನನ್ನನ್ನು ನಾನು ಕ್ಷಮಿಸಿಕೊಳ್ಳಲಾರೆ. ಆದ್ದರಿಂದ ನಿರ್ಧಾರವನ್ನು ಒಟ್ಟಿಗೆ ತೆಗೆದುಕೊಳ್ಳಬೇಕು. ಒಳ್ಳೆಯದೋ ಕೆಟ್ಟದ್ದೋ ಒಟ್ಟಿಗೇ ಅನುಭವಿಸಬೇಕು. ಇಲ್ಲವೇ ನೀನು ಹೇಳಿದಂತೆ ತಾರಿಣಿಯನ್ನು ಇದೇ ಪರಿಸ್ಥಿತಿಯಲ್ಲಿರಲು ಬಿಡಬೇಕು’ ಎಂದನು.
‘ನನಗೇನೂ ತೋಚುತ್ತಿಲ್ಲ, ವಿಚಾರ. ತಾಯಿಯಾಗಿ ನಾನು ಮಗಳ ಒಳ್ಳೆಯದನ್ನು ಮಾತ್ರ ಬಯಸುವೆ, ಅಷ್ಟೆ. ನೀನು ಸಹ ಅದನ್ನೇ ಬಯಸುವೆ ಎಂದು ನನಗೂ ಗೊತ್ತು. ಹಾಗಿರುವಾಗ ನಿನ್ನ ಹಾಗು ನನ್ನ ನಿರ್ಧಾರ ಬೇರೆಯಾಗಲು ಸಾಧ್ಯವೆ? ಸರಿಯೋ, ತಪ್ಪೋ, ನಿನ್ನ ಜೊತೆಯಲ್ಲಿ, ನಿನ್ನ ನಿರ್ಧಾರಗಳಲ್ಲಿ ನಾನಿರುವೆ.’
ವಿಚಾರ ರಮ್ಯಾಳ ಕೈಗಳನ್ನು ಹಿಡಿದುಕೊಂಡು ನಿಧಾನವಾಗಿ ಅಮುಕಿದ. ಇಂದು ತೆಗೆದುಕೊಳ್ಳುವ ನಿರ್ಧಾರ ನಮ್ಮ ಮುಂದಿನ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುವ ಕಾರಣ ಯಾವುದೇ ತಪ್ಪು ನಿರ್ಣಯ ತಮ್ಮಿಂದ ಆಗದೇ ಇರಲಿ ಎಂದು ದೇವರಲ್ಲಿ ಮನಸ್ಸಿನಲ್ಲಿಯೇ ಪ್ರಾರ್ಥಿಸಿದ.
ತಾರಿಣಿಯ ಸ್ಟೆಮ್‌ಥೆರಪಿ ಮುಗಿದು ಮೂರು ತಿಂಗಳಾಗಿದ್ದವು. ಮೊದಲಿಗೆ ಕೀಮೊಥೆರಪಿ ಮಾಡಿ ಆಕೆಯ ಅಸ್ಥಿಮಜ್ಜೆಯ ಜೀವಕೋಶಗಳನ್ನು ನಾಶಮಾಡಿದ್ದಾಯಿತು. ಅನಂತರ ದಾನಿಯ ಸ್ಟೆಮ್‍ಸೆಲ್‍ಗಳನ್ನು ಆಕೆಯ ದೇಹಕ್ಕೆ ಸೇರಿಸಲಾಯಿತು. ಬೇರೆ ಬೇರೆ ದೇಹದ ಜೀವಕೋಶಗಳು ಒಟ್ಟಾದಾಗ ಅವುಗಳ ನಡುವೆ ನಡೆಯಬಹುದಾದ ಘರ್ಷಣೆಯನ್ನು ತಡೆಯುವುದಕ್ಕೆ ಅವಳ ದೇಹದ ಜೀವನಿರೋಧಕ ಶಕ್ತಿಯನ್ನು ಬಹುವಾಗಿ ಕಡಿಮೆಮಾಡಲಾಯಿತು. ಆಗ ಹೊರಗಿನ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸದೆ ಇರಲು ಆಕೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಡಲಾಯಿತು. ಅದನ್ನೆಲ್ಲಾ ರಮ್ಯಾ ಮುತುವರ್ಜಿಯಿಂದ ಮಾಡಿದಳು. ಮೊದಮೊದಲು ದಿನನಿತ್ಯ, ಕ್ರಮೇಣ ವಾರಕ್ಕೊಮ್ಮೆ ಅವಳ ದೇಹವನ್ನು ತಪಾಸಣೆ ಮಾಡುತ್ತ, ಆಕೆಯ ದೇಹದಲ್ಲಿ ಹಿಮೋಗ್ಲೋಬಿನ್‍ನ ಪ್ರಮಾಣ ಜಾಸ್ತಿಯಾಗುವುದನ್ನು ಅಳೆಯಲಾಯಿತು. ಬ್ಲಡ್ ಟ್ರಾನ್ಸ್‌ಫ್ಯೂಶನ್ನನ್ನೂ ಕ್ರಮೇಣ ನಿಲ್ಲಿಸಲಾಯಿತು. ಆರು ತಿಂಗಳ ನಂತರ ನಡೆದ ತಪಾಸಣೆಯ ರಿಪೋರ್ಟನ್ನು ನೋಡಿದ ಡಾಕ್ಟರ್,
‘ಅಭಿನಂದನೆಗಳು. ನಿಮ್ಮ ಮಗಳು ಸಂಪೂರ್ಣ ಆರೋಗ್ಯವಾಗಿರುವಳು. ಅವಳಿಗೆ ಈಗ ಹೊರಗಿನ ಯಾವುದೇ ಔಷಧಿಯ ಅಗತ್ಯವಿಲ್ಲ. ಇವಳು ಎಲ್ಲರಂತೆ ಸಾಮಾನ್ಯವಾಗಿ ಜೀವನವನ್ನು ನಡೆಸಬಹುದು’ ಎಂದರು.
ಕೇಳಿದ ರಮ್ಯಾಳ ಕಣ್ಣುಗಳು ಮಂಜಾದವು. ಪಕ್ಕದಲ್ಲಿದ್ದ ವಿಚಾರನ ಕೈಯನ್ನು ನಿಧಾನವಾಗಿ ಅಮುಕಿ, ‘ಥ್ಯಾಂಕ್ಸ್’ ಎಂದಳು. ಉಬ್ಬಿದ ಗಂಟಲಿನಿಂದ ಹೊರಟ ಶಬ್ದವು ಆಕೆಯ ಕಿವಿಯನ್ನು ಸಹ ಮುಟ್ಟಿರಲಿಕ್ಕಿಲ್ಲ. ವಿಚಾರ ಡಾಕ್ಟರ್‌ರಲ್ಲಿ,
‘ಥ್ಯಾಂಕ್ಸ್ ಡಾಕ್ಟರ್. ನಿಮ್ಮಿಂದ ಬಹು ಉಪಕಾರವಾಯಿತು. ತಮ್ಮಿಂದ ಇನ್ನೊಂದು ಉಪಕಾರವಾಗಬೇಕಿತ್ತು. ಈಕೆಗೆ ಸ್ಟೆಮ್‍ಸೆಲ್ ಕೊಟ್ಟವರ ವಿವರ ನೀವು ಈವರೆಗೆ ನೀಡಲಿಲ್ಲ. ಬಹುಶಃ ಅದನ್ನು ಕೊಟ್ಟವರಿಗೂ ತಾವು ಮಾಡಿದ ದಾನ ಉಪಯೋಗವಾಗಿದೆಯೇ ಇಲ್ಲವೆ ಎಂದು ತಿಳಿಯುವ ಆಸೆಯಿದ್ದರೂ ಇರಬಹುದು. ದಯವಿಟ್ಟು ನಮಗೆ ಅವರ ಜೊತೆ ಮಾತನಾಡಲು ಅವಕಾಶ ಮಾಡಿಕೊಡುತ್ತಿರಾ, ಪ್ಲೀಸ್’
‘ಇಂತಹ ಕೇಸುಗಳಲ್ಲಿ ಚಿಕಿತ್ಸೆ ಸಂಪೂರ್ಣವಾಗಿ ಸಫಲವಾಯಿತು ಎಂದ ಮೇಲೆಯೇ ನಾವು ದಾನಿಗಳಿಗೆ ಪೇಶೆಂಟಿನ ಬಗ್ಗೆ ತಿಳಿಸುತ್ತೇವೆ. ಒಂದು ವೇಳೆ ಪರಿಚಯವಾದ ಮೇಲೆ ಪೇಶಂಟಿನಲ್ಲಿ ಏನಾದರು ತೊಂದರೆಯಾದಲ್ಲಿ ದಾನಿಗೆ ತನ್ನಿಂದಾಗಿ ಹಾಗಾಯಿತು ಎಂಬ ಘಾಸಿ ಮನಸ್ಸಿನಲ್ಲಿ ಮೂಡಬಾರದು ಎಂಬ ದೃಷ್ಟಿಯಿಂದ ಹೀಗೆ ಮಾಡುತ್ತೇವೆ. ತಾರಿಣಿಯ ಕೇಸಿನಲ್ಲಿ ಈ ಚಿಕಿತ್ಸೆಯು ವಿಫಲವಾಗಲೇ ಇಲ್ಲ. ಹೀಗಾಗಿ ನೀವು ದಾನಿಯ ಜೊತೆಯಲ್ಲಿ ಅಗತ್ಯವಾಗಿ ಮಾತನಾಡಬಹುದು. ಆದಷ್ಟು ಬೇಗ’ ಎಂದರು.
*****
ಅಂದು ಭಾನುವಾರ ಮಧ್ಯಾಹ್ನದ ಸಮಯ. ಸೂರ್ಯ ನೆತ್ತಿಯ ಮೇಲೆ ಬಂದಿದ್ದರೂ ಚಳಿಗಾಲದ ಕಾರಣವಾಗಿ ವಾತಾವರಣ ಆಹ್ಲಾದಕರವಾಗಿತ್ತು. ನೀಲಿ ಆಕಾಶದಲ್ಲಿದ್ದ ಶುಭ್ರ ಬಿಳಿ ಮೋಡಗಳು ಹತ್ತಿ ಹಿಂಜಿದಂತಿದ್ದವು. ಅಲ್ಲಲ್ಲಿ ಹಕ್ಕಿಗಳ ಉಲಿ ಕೇಳಿಬರುತ್ತಿತ್ತು. ಹಿಂದಿನ ರೀತಿಯಂತಾಗಿದ್ದರೆ ಈ ಹೊತ್ತಿಗೆ ವಿಚಾರ, ತಾರಿಣಿಯನ್ನು ಕರೆದುಕೊಂಡು ಬ್ಲಡ್‍ಬ್ಯಾಂಕಿನಲ್ಲಿ ಹೋಗುತ್ತಿದ್ದ. ಆದರೆ ಇಂದು ತಾರಿಣಿ, ರಮ್ಯಾ ಹಾಗು ವಿಚಾರ ಲ್ಯಾಪ್‍ಟಾಪಿನ ಎದುರು ವಿಡಿಯೋ ಆನ್ ಮಾಡಿಕೊಂಡು ಕುಳಿತಿದ್ದರು. ತಾರಿಣಿಗೆ ಸ್ಟೆಮ್‍ಸೆಲ್ ದಾನ ಮಾಡಿದಾಕೆ ಫ್ಲೋರಾ ಸೊಫಿಯಾ ಎಂಬ ಇಪ್ಪತ್ತೆಂಟು ವಯಸ್ಸಿನ ಯುವತಿ. ಆಕೆ ಪ್ಯಾರಿಸಿನ ವಸ್ತುಸಂಗ್ರಹಾಲಯ ಒಂದರಲ್ಲಿ ಕ್ಯುರೇಟರ್ ಆಗಿ ಕೆಲಸಮಾಡುತ್ತಿರುವವಳು. ಪ್ರಾಚ್ಯವಸ್ತು, ಇತಿಹಾಸ ಶಾಸ್ತ್ರದಲ್ಲಿ ಆಸಕ್ತಿ, ಬಿಡುವಿನ ವೇಳೆಯಲ್ಲಿ ಚಾರಣ, ಸೈಕ್ಲಿಂಗ್ ಆಕೆಯ ಹವ್ಯಾಸ, ಮೊಬೈಲ್ ನಂಬರ್… ಎಂಬ ಇತ್ಯಾದಿ ವಿಷಯಗಳನ್ನೊಳಗೊಂಡ ಮೈಲ್ ಸ್ಟೆಮ್‍ಸೆಲ್ ಬ್ಯಾಂಕಿನಿಂದ ಬಂದಿತ್ತು. ಅಲ್ಲಿ ಸಿಕ್ಕ ನಂಬರನ್ನು ಸಂಪರ್ಕಿಸಿ ಇಂದು ವಿಡಿಯೋ ಕಾಲ್ ಮಾಡಿ ಆಕೆಯನ್ನು ಪ್ರಥಮ ಬಾರಿ ನೋಡಿ ತಮ್ಮ ಕೃತಜ್ಞತೆಯನ್ನು ಹೇಳಬೇಕೆಂದು ಆಕೆಗೆ ಫೋನಾಯಿಸಿದ್ದರು.
ಮೊದಲೇ ಮಾತನಾಡಿ ಒಪ್ಪಿದಂತೆ ಹನ್ನೆರೆಡು ಗಂಟೆಗೆ ಸರಿಯಾಗಿ ಲ್ಯಾಪ್‍ಟಾಪಿನಲ್ಲಿ ಫ್ಲೋರಾಳ ವಿಡಿಯೋ ಕಾಲ್ ಬಂದಿತು.
‘ನಮಸ್ಕಾರ, ನಾನು ಫ್ಲೋರಾ.’ ಎಂದು ಮಂದಹಾಸದಲ್ಲಿ ಫ್ರೆಂಚ್ ಉಚ್ಚಾರಣೆಯ ಇಂಗ್ಲಿಷಿನಲ್ಲಿ ಫ್ಲೋರಾ ನುಡಿದಳು.
ತಮ್ಮ ಬದುಕನ್ನು ಬದಲಿಸಿದ ವ್ಯಕ್ತಿಯು ನಗುತ್ತಾ ತಮ್ಮ ಎದುರಿಗೆ ಇರುವುದನ್ನು ಕಂಡ ರಮ್ಯಾಳಿಗೆ ಏನು ಹೇಳುವುದೆಂದು ತಿಳಿಯಲಿಲ್ಲ. ವಿಚಾರ ತನ್ನ ಪರಿಚಯ ಹೇಳಿ, ರಮ್ಯಾಳನ್ನು ಆಕೆಗೆ ಪರಿಚಯಿಸಿದ. ಫ್ಲೋರಾ ತನ್ನ ಬಗ್ಗೆ, ತನ್ನ ಕುಟುಂಬದವರ ಬಗ್ಗೆ ಹೇಳತೊಡಗಿದಳು. ಪ್ಯಾರಿಸಿನ ಪ್ರಸಿದ್ಧ ವಸ್ತುಸಂಗ್ರಹಾಲಯವಾದ ಲೂವ್ರ್ ಮ್ಯೂಸಿಯಮ್‍ನಲ್ಲಿ ಕ್ಯೂರೇಟರ್ ಆಗಿ ಕೆಲಸಮಾಡುತ್ತಿದ್ದ ಆಕೆ ತಾನು ಯಾಕೆ ತನ್ನ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿರುವೆ ಎಂಬುದನ್ನು ಗಂಭೀರವಾಗಿ ವಿವರಿಸುತ್ತಿದ್ದಳು. ಸಂಪಾದನೆಗಾಗಿ ಕೆಲಸಮಾಡುತ್ತಿದ್ದ ವಿಚಾರ, ತನ್ನ ಮನೋಭಾವವನ್ನು ನೆನೆದು ಮನದಲ್ಲಿಯೇ ನಕ್ಕನು. ಅದರ ಮಧ್ಯದಲ್ಲಿ ತಾರಿಣಿಯ ವಿದ್ಯಾಭ್ಯಾಸದ ಬಗ್ಗೆ ಒಂದಿಷ್ಟು ಮಾತುಕತೆ ನಡೆದವು. ಇದೆಲ್ಲವನ್ನು ಅರ್ಧಂಬರ್ಧ ಕೇಳುತ್ತಿದ್ದ ರಮ್ಯಾಳ ಮನಸ್ಸಿನಲ್ಲಿ ತಮ್ಮ ಹಿಂದಿನ ಜೀವನ ಮತ್ತು ಅದು ಬದಲಾದ ರೀತಿ ಅವಳ ಅಕ್ಷಿಪಟಲದಲ್ಲಿ ಸರಣಿಯ ರೀತಿಯಲ್ಲಿ ಮೂಡಿ ಹೋದವು.
ಫ್ಲೋರಾ ರಮ್ಯಾಳನ್ನು ಉದ್ದೇಶಿಸಿ,
‘ನೀವು ಯಾಕೆ ಮಾತನಾಡುತ್ತಿಲ್ಲ. ನಾನು ಸ್ವಲ್ಪ ವಾಚಾಳಿ. ಬಹುಶಃ ನಾನು ನಿಮಗೆ ಬೋರು ಹೊಡೆಸಿದೆನೆ?’ ಎಂದು ಕೇಳಿದಳು.
‘ಛೆ..ಛೆ ಹಾಗೇನೂ ಇಲ್ಲ. ನಿಮ್ಮ ಭಾಷೆಯಲ್ಲಿ ಫ್ಲೋರಾ ಎಂದರೆ ಹೂವು ಎಂದು ಅರ್ಥ ತಾನೆ. ಹೂವು ಸುತ್ತಮುತ್ತಲು ಪರಿಮಳವನ್ನು ಪಸರಿಸುವಂತೆ, ನೀವು ನಿಮ್ಮ ಸುತ್ತಮುತ್ತಲು ಸಂತೋಷವನ್ನು ಹರಡುತ್ತಿರುವಿರಿ. ಅದನ್ನು ನಾನು ಅನುಭವಿಸುತ್ತಾ ಇರುವೆ. ಮಧ್ಯದಲ್ಲಿ ಮಾತನಾಡಿ ಆ ಗುಂಗಿನಿಂದ ಹೊರಗೆ ಬರಲು ನನಗೆ ಇಷ್ಟವಾಗಲಿಲ್ಲ’ ಎಂದು ಕ್ಷಮೆ ಕೇಳುವ ದನಿಯಲ್ಲಿ.
ಹಾಗೆಯೇ ಮುಂದುವರಿದು,
‘ನಮ್ಮ ಪುರಾಣದ ಕತೆಗಳಲ್ಲಿ ದೇವರನ್ನು ಕಾಣಬೇಕೆಂದು ತಪಸ್ಸು ಮಾಡಿದ ಕೆಲವರ ಎದುರು ಅವರು ಅಪೇಕ್ಷಿಸಿದ ದೇವರು ಬಂದಾಗ ಏನು ಕೇಳುವುದು ಎಂದು ತೋಚದೆ ತಬ್ಬಿಬ್ಬಾಗಿ ನಿಂತದ್ದು ಉಂಟಂತೆ. ನನಗೂ ಈಗ ಹಾಗೆಯೇ ಆಗುತ್ತಾ ಇದೆ. ನಮಗ್ಯಾರಿಗೂ ದೇವರನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಆದರೆ ಆತ ತನ್ನ ಮಹಿಮೆಯನ್ನು ತೋರಿಸಲು ನಿಮ್ಮಂತವರನ್ನು ಸೃಷ್ಟಿಸುತ್ತಾನೆ ಎಂದು ಈಗ ನಿಮ್ಮನ್ನು ನೋಡಿದಾಗ ನನಗೆ ಅನ್ನಿಸುತ್ತಿದೆ. ನಿಮಗೆ ನಾವು ಹೇಗೆ ಧನ್ಯವಾದ ಹೇಳುವುದು ಎಂದು ನಮಗೆ ತಿಳಿದಿಲ್ಲ. ಆದರೆ ನಿಮಗೆ ಒಂದು ಜೀವಿಯ ಪ್ರಾಣವನ್ನು ಉಳಿಸಿದ ಜೊತೆಯಲ್ಲಿ ಆ ಜೀವಿಯನ್ನೇ ತಮ್ಮ ಪ್ರಾಣವೆಂದು ನಂಬಿರುವ ಇನ್ನೆರಡು ಜೀವಿಯ ಉಸಿರನ್ನೂ ಕಾದ ಪುಣ್ಯ ನಿಮಗೆ ಸಿಕ್ಕಿದೆ. ಆ ಪುಣ್ಯ ನಿಮ್ಮ ವಂಶವನ್ನೂ ಕಾಯಲಿ’ ಎಂದು ಗದ್ಗದ ಕಂಠದಿಂದ ಕೈಮುಗಿದು ಗಂಭೀರವಾಗಿ ನುಡಿದಳು.
ಅವಳ ಮಾತಿನಿಂದ ಸ್ವಲ್ಪ ಮುಜುಗರಕ್ಕೆ ಒಳಗಾದಂತಾದ ಫ್ಲೋರಾ,
‘ನಾನು ಅಂತಹ ವಿಶೇಷವಾದ ಕೆಲಸವೇನೂ ಮಾಡಲಿಲ್ಲ. ಒಮ್ಮೆ ನಮ್ಮ ವಸ್ತುಸಂಗ್ರಹಾಲಯದ ಹತ್ತಿರ ಸ್ಟೆಮ್‍ಸೆಲ್ ದಾಖಲಾತಿ ಮಾಡಿಕೊಳ್ಳಲು ಒಂದು ಎನ್‌ಜಿಓವಿನ ವ್ಯಾನ್ ಬಂದು ನಿಂತಿತ್ತು. ನನ್ನ ಹಾಗೆಯೇ ನಾಲ್ಕಾರು ಜನ ಅಲ್ಲಿಗೆ ಹೋಗಿ ಸ್ಯಾಂಪಲ್ ನೀಡಿ, ಹೆಸರನ್ನು ನೋಂದಾಯಿಸಿದ್ದೆವು. ಆ ಘಟನೆಯನ್ನು ಮರೆತಿದ್ದೆ ಕೂಡ. ಸ್ವಲ್ಪ ಸಮಯದ ಹಿಂದೆ ನನ್ನ ಸ್ಯಾಂಪಲ್ ಓರ್ವ ತಲಸ್ಸೆಮಿಯಾ ರೋಗಿಗೆ ಮ್ಯಾಚ್ ಆಗುತ್ತಿದೆ, ನಾನು ಒಪ್ಪಿದರೆ ನನ್ನ ಸ್ಟೆಮ್‌ಸೆಲ್‌ನ್ನು ಕಳುಹಿಸಿಕೊಡುತ್ತೇವೆ ಎಂದು ಆ ಎನ್‌ಜಿಓದಿಂದ ಕಾಲ್ ಬಂದಿತ್ತು. ಯಾರಿಗಾದರೂ ಸಹಾಯವಾಗುವುದಾದರೆ ‘ವೈ ನಾಟ್’ ಎಂದುಕೊಂಡು ಸ್ಟೆಮ್‌ಸೆಲ್‌ಗಳನ್ನು ನೀಡಿದೆ. ಅಂದು ಮಾಡಿದ ಹತ್ತು ನಿಮಿಷದ ಕೆಲಸ ಇಂದು ಭೂಮಿಯ ಇನ್ನೊಂದು ಕಡೆಯಿರುವ ನಿಮಗೆ ಉಪಯೋಗವಾಯಿತಲ್ಲ ಎಂಬ ಸಂತೃಪ್ತಿಯೇ ನನಗೆ ಈ ಜೀವನಕ್ಕೆ ಸಾಕು.’ ಅಂದಳು.
‘ಈಕೆ ತಾರಿಣಿ.’ ಎಂದು ವಿಚಾರ ತಾರಿಣಿಯನ್ನು ಫ್ಲೋರಾಗೆ ಪರಿಚಯ ಮಾಡಿಕೊಟ್ಟನು. ತಾರಿಣಿ ಫ್ಲೋರಾಳಿಗೆ ‘ನಮಸ್ತೆ’ ಎಂದು ಹೇಳಿ ಕೈಮುಗಿದಳು.
‘ಹಲೊ ತಾರಿಣಿ. ನಿನ್ನನ್ನು ಈ ರೀತಿಯಲ್ಲಿ ನೋಡಲು ತುಂಬ ಖುಷಿಯಾಗುತ್ತದೆ. ಒಮ್ಮೆ ನೀನು ನಿನ್ನ ಹೆತ್ತವರ ಜೊತೆಯಲ್ಲಿ ಪ್ಯಾರಿಸಿಗೆ ಬರಬೇಕು. ಇಲ್ಲಿ ನಿನಗೆ ನೋಡಲು ಬಹಳ ಸ್ಥಳಗಳಿವೆ. ನಾವಿಬ್ಬರು ಇಲ್ಲಿ ತಿರುಗಾಡೋಣ. ನಮ್ಮ ಮ್ಯೂಸಿಯಮ್‌ನ್ನು ನೋಡಲು ಎರಡು ದಿನ ಬೇಕು. ಅದಾದ ನಂತರ ವರ್ಸಾಲಿಸ್ ಪ್ಯಾಲೆಸ್ ನೋಡೋಣ, ನಂತರ ಶಾಂಪ್ಸ್ ಎಲಿಸಿಸ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡೋಣ, ರಿವರ್ ಸೀನ್‍ನಲ್ಲಿ ರಾತ್ರಿ ಬೋಟಿಂಗ್ ಚೆನ್ನಾಗಿರುತ್ತದೆ, ನೋತ್ರೆ ಡಾಮ್ ಚರ್ಚ್‌ಗೂ ಹೋಗೋಣ. ರಾತ್ರಿ ಐಫೆಲ್ ಟವರಿನ ಮೇಲಿನಿಂದ ಇಡೀ ಪ್ಯಾರಿಸ್ ನೋಡಲಿಕ್ಕೆ ಸ್ವರ್ಗದ ತರಹ ಇರುತ್ತದೆ. ಅಂದ ಹಾಗೆ ನಮ್ಮ ಮ್ಯೂಸಿಯಂನಲ್ಲಿ ನಿನ್ನಂತೆ ನಗುವ ಒಂದು ಸುಂದರ ಕಲಾಕೃತಿ ಇದೆ ಗೊತ್ತೆ. ಲಿಯೊನಾರ್ಡೊ ವಿನ್ಸಿ ಬಿಡಿಸಿದ, ಮೊನಲಿಸಾ. ಇಷ್ಟೆಲ್ಲಾ ನೋಡಲು ಕನಿಷ್ಟ ಎರಡು ವಾರವಾದರೂ ಬೇಕು. ಅದಾದ ನಂತರ ಪ್ಯಾರಿಸಿನ ಹೊರವಲಯದಲ್ಲಿ ….’
ಹೊಸದಾಗಿ ಪರಿಚಯವಾದ ಫ್ಲೋರಾಳು ಹೇಳುತ್ತಿದ್ದ ವಿವರಗಳನ್ನು ಬೆರಗುಗಣ್ಣಿನಿಂದ ಕೇಳುತ್ತಿದ್ದರು, ದಂಪತಿಗಳು.
ಫ್ಲೋರಾ ನುಡಿಯುತ್ತಾ ಇದ್ದಳು. ಜೀವನೋತ್ಸಾಹ ತುಂಬಿತುಳುಕುತ್ತಿದ್ದ ಅವಳ ಮಾತುಗಳನ್ನು ಏಕಾಗ್ರಚಿತ್ತದಿಂದ ಕೇಳುತ್ತಿದ್ದ ತಾರಿಣಿ, ಮಾನಿಟರನ್ನು ನೋಡುತ್ತಾ ಮೆಲುವಾಗಿ ನಕ್ಕರೂ ನಗದಂತೆ ಇದ್ದಳು, ಮೊನಲಿಸಾಳಂತೆ.

ಶ್ರೀಲೋಲ ಸೋಮಯಾಜಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸೀನಿಯರ್ ಪ್ರಿನ್ಸಿಪಲ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಾಥಮಿಕ, ಪ್ರೌಢ ಹಾಗು ಪದವಿಪೂರ್ವ ವಿದ್ಯಾಭ್ಯಾಸಗಳನ್ನು ತಮ್ಮ ಹುಟ್ಟೂರಾದ ಉಡುಪಿ ಜಿಲ್ಲೆಯ ಕೋಟದಲ್ಲಿ ಮುಗಿಸಿ ನಂತರ ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇವರ ಕತೆಗಳು ಕನ್ನಡ ದಿನಪತ್ರಿಕೆ ಹಾಗು ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ನ ಪ್ರಮದಿತವ್ಯಮ್’ (ಕಥಾಸಂಕಲನ, ಇದಕ್ಕೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ-2022 ದೊರೆತಿದೆ), ಟಿ.ಎ. ಪೈಯವರ ಪರಿಚಯ, ಇವರ ಪ್ರಕಟಿತ ಕೃತಿಗಳು.
ಕತೆ ಚೆನ್ನಾಗಿದೆ. ಧನಾತ್ಮಕ ಸೌಗಂಧವನ್ನು ಸೂಸುವಷ್ಟು ಪರಿಣಾಮಕಾರಿ.