Advertisement
ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

ಪ್ರವೇಶ

ಚಳಿಯನ್ನೇ ದೇಹವಾಗಿಸಿಕೊಂಡ
ಗಾಳಿಯಿಲ್ಲಿ ಸುಳಿದಾಡುತಿದೆ
ನನ್ನ ಜೀವದ ಶಾಖವ
ಪರಿಚಯಿಸಬೇಕದಕೆ
ಕೆನ್ನೆ ಮೇಲಣ ಧೂಳ
ತುಟಿ ಎರಡರ ದಡಕೊಮ್ಮೆ
ತಂದು ನಿಲ್ಲಿಸಬೇಕು, ಬಾ ಇಲ್ಲಿ

ಹೆರಳಿನಂಥ ಮೋಡವೊಂದು
ಕುಂಟುತ್ತ ಕುಂಟುತ್ತ
ನಡೆವಂತಿದೆ ನಕ್ಷತ್ರಗಳ
ಹಿಂದೆ ಹಿಂದೆ
ಫಲಿಸಬಹುದು ಅದರಾಸೆ
ಆಗಾಗ ಭೂಮಿಯೊಂದಿಗೆ
ಕೂಡುವುದಂತೆ, ಚೂರೇ ಚೂರು
ನಿನ್ನ ರೋಮಗಳ ಪುಳಕ
ಅದಕೂ ಹಸ್ತಾಂತರಿಸಬೇಕು, ಬಾ ಇಲ್ಲಿ

ಒಂದಾದ‌ ಮೇಲೊಂದು ಊರು
ನಡೆಯುತ್ತಲೇ‌ ಇರುತ್ತಾನವನು
ದೇಹವೆಲ್ಲಾ ಸುಕ್ಕು ಸುಕ್ಕು
ಸುಸ್ತಿನ ಉಸ್ಸಪ್ಪಕ್ಕೆ ತೀವ್ರ ಶಾಖ
ತನ್ನನ್ನೇ ಸುಟ್ಟಿಕೊಳ್ಳುವ ಅವನ ಧಗೆಗೆ
ನಿನ್ನ ಮಡಿಲಿನ ತಂಪು
ಈ ರಾತ್ರಿ ಹೊದೆಸಿ
ಮಲಗಿಸಬೇಕು, ಬಾ ಇಲ್ಲಿ

ಅಲ್ಲೊಂದು ಹಳೇ ಕಪಾಟಿನಲ್ಲಿ
ಹಿಂದೆ ಎಂದೋ ಅರ್ಧ ಓದಿದ್ದ
ಸಣ್ಣ ಪುಸ್ತಕವುಂಟು ನೋಡು
ಗೆದ್ದಲು ತಿನ್ನದೇ ಉಳಿದ,
ಪುಟಗಳ ನಡುವೆ ಹಾದುಹೋದ
ಸಾಲುಗಳ ನಡುವಿನ
ಖಾಲಿ ಜಾಗದಲಿ ನಿನ್ನ ದೇಹದ
ಗಂಧ ಟಂಕಿಸಬೇಕು, ಬಾ ಇಲ್ಲಿ

ಉಬ್ಬಿದ ನರಗಳ
ಒಳಗೊಳಗೆ ಪ್ರವಹಿಸುವ
‘ಆಹ್ಞ್’ ಎಂಬ
ದೀರ್ಘ ನರಳುವಿಕೆಗೆ
ನೋವಾಗದಂತೆ
ನಿನ್ನ ಸ್ವರದ ಪಲುಕುಗಳ
ಹೊಲಿಯಬೇಕು, ಬಾ ಇಲ್ಲಿ

ಬೇಡ ಬಿಡು, ನಾನೇ ಬರುವೆನು..
ಸುಖದ ವಾಂಛೆ ನಿನಗೆ,
ಅಧಿಕಾರವಾಣಿಗೆ ವಸ್ತುವೇನು?
ಎಂಬೆಲ್ಲಾ ಪ್ರಶ್ನೆಗಳಿಗೆ
ಉತ್ತರಿಸಬೇಕಾದೀತು ಅಂತೇನಲ್ಲ;
ಕಡಲಿಗೆ ಬಾಗಿಲುಗಳಿರುವುದ
ಮೊದಲ ಬಾರಿಗೆ ಕಂಡಿದ್ದೇನೆ…

About The Author

ಶ್ರೀ ತಲಗೇರಿ

ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು. ಸದ್ಯಕ್ಕೆ ಬೆಂಗಳೂರಿನ ನಿವಾಸಿ. ಸಾಫ್ಟ್‌ವೇರ್‌ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

4 Comments

  1. ಕೊಟ್ರೇಶ್ ಅರಸೀಕೆರೆ ಮಾಡಿ

    ಇಷ್ಟವಾಯಿತು

    Reply
    • ಶ್ರೀ ತಲಗೇರಿ

      ಧನ್ಯವಾದಗಳು ತುಂಬಾ ?

      Reply
  2. chinmay bhat

    ಚಂದ 🙂

    Reply
    • ಶ್ರೀ ತಲಗೇರಿ

      ರಾಶೀ ಧನ್ಯವಾದ ?

      Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ