ಗೆರೆ..
ಈ ತೂತಲ್ಲಿ
ಅದೆಷ್ಟು ಆಕಾಶ..
ಅಲ್ಲೇ ಉಳಿದ
ಅರ್ಧ ರೊಟ್ಟಿ
ಈ ರಾತ್ರಿಯಾದರೂ
ಕೊಡು,
ಗೊಣಗುವಳು ಪುಟ್ಟಿ..
ಕಿಸೆಯ ತೂತಿಂದ
ಮಲ್ಲಿಗೆಯ ಪರಿಮಳ
ಸೋರುತಿದೆ..
ಆರಾಧಿಸಬಹುದೇ
ಭಕ್ತಿಯಿಂದ
ಈ ರಾತ್ರಿಯಾದರೂ
ಕುತ್ತಿಗೆಯ ಮೇಲೆ
ಯಾವ ಗೀರಿಲ್ಲದೇ..
ಅಳುಕುವಳು ಅಮ್ಮ..
ಗುಡಿಸಲಿನ ಇತಿಹಾಸದಲಿ
ರೇಖೆ ದಾಟಿದರೆ ಸೀತೆಗೆ
ಅಪಹರಣದ ಭೀತಿ..
ರಾವಣ ಮಾರುವೇಷದಲ್ಲಿದ್ದಾನೆ..
ಮುಕ್ತಿ…
ಕೊನೆಗೌಡ ಬಂದಿಲ್ಲ
ಪುಟ್ಟಿ
ಗೆ
ನಕ್ಷತ್ರಗಳ ಗೊಂಚಲು
ಬೇಕಂತೆ
ಏಣಿ ತರುವವರು
ಯಾರು?
ನಾನು..
ಆಸೆಗಳ ಹತ್ತಿ
ಬಂದವನಷ್ಟೇ…
ಸಗಣಿ ನೀರು ಒಣಗಿದ
ನೆಲ
ದ ಮೇಲೆ ಮಲಗಿ
ಆಕಾಶದ ಮೈ
ಅಗಲದಷ್ಟು ಚಿತ್ರ
ಬರೆಯುತ್ತಾಳೆ ಹುಡುಗಿ..
ಬೊಗಸೆ ಚೆಲ್ಲುವಾಗ
ಪಿಳಿ ಪಿಳಿ ನೋಡುತ್ತಾಳೆ
ಕನಸುಗಳ ಹೆಕ್ಕಿ..
ಈ ರಾತ್ರಿ
ಕಳೆದರೆ
ಅಹಲ್ಯೆ ಮಾತಾಗುತ್ತಾಳೆ
ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು.
ಸದ್ಯಕ್ಕೆ ಬೆಂಗಳೂರಿನ ನಿವಾಸಿ
ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ