“ಏಳು ಬಣ್ಣದ ಏಳು ಬೀಳಿನ ಪಯಣ”
ಸುಡುವ ಬೆಂಕಿಯ ಮುಂದೆ ಮೈಯೊಡ್ಡಿ ನಿಲ್ಲುವ ನಾನು
ಈಗೀಗ ಸುಟ್ಟ ಬೂದಿಯ ಹಾಗೆ ಹಿಂಜರಿಕೆಯಿಲ್ಲದೆ ಹಾದು ಹೋಗುತ್ತೇನೆ.
ಒಲವು ಕೊಟ್ಟು ಪಡೆಯಬೇಕೆಂದು ಕೇಳಿದ್ದ ನಾನು
ಈ ಹಾದಿಯಲ್ಲಿ ಅನೇಕ ಕೈಗಳೊಟ್ಟಿಗೆ ಮುಕ್ತವಾಗೇ ಹಾಯುತ್ತೇನೆ.
ಎಷ್ಟೋ ಕನಸುಗಳನ್ನು ಒಟ್ಟೊಟ್ಟಿಗೆ ಕಂಡ ನಾನು
ಇಲ್ಲಿನ ವಾಸ್ತವನ್ನು ಕಂಡು ಒಮ್ಮೊಮ್ಮೆ ಬಂಡೆಯಂತೆ ಚದುರುತಿದ್ದೇನೆ.
ಮುಂದೆ ಚಲಿಸಬೇಕೆಂಬ ಛಲ ಹೊತ್ತು ಹೊರಡುವ ನಾನು
ಯಾರೋ ಬಂದು ಬಲವಂತ ಮಾಡುವರೆಂದು ಹೆದರುತ್ತಿದ್ದೇನೆ.
ಎಲ್ಲರಿಗೂ ಮುಂದುವರಿಯುವ ಹಕ್ಕಿದೆ ಎಂದು ತಿಳಿದ ನಾನು
ಕೆಲವೊಮ್ಮೆ ಏಕಾಂಗಿಯಾಗೇ ಕನಸು ಕಂಡಾಗ ಬದುಕಿ ಸಾಯುತ್ತಿದ್ದೇನೆ.
ಬಾಯಾರಿಕೆ ಎಲ್ಲರಿಗೂ ಇದೆ ತಣಿಸಬಹುದೇ ನಾನು
ದೇಹ ಉಜ್ಜಿ ಮನಸ್ಸು ಪುಡಿಪುಡಿಯಾಗಿಸಿಕೊಂಡ ನೆನಪಲ್ಲೇ ಮೂಲೆಸೇರುತ್ತಿದ್ದೇನೆ.
ಕೈ ಕೈ ಹಿಡಿದದ್ದು ಬೆಳಕಿನಲ್ಲಲ್ಲ ರಾತ್ರಿಯಲ್ಲಷ್ಟೇ ಎಂದು ತಿಳಿದ ನಾನು
ಒಲಿಸಿ ಓಲೈಸಿ ಮುದ್ದಾಡಿದರು ನಿದ್ದೆ ಬಾರದೆ ಏನೇನೋ ಯೋಚಿಸುತ್ತ ಹೊರಳಾಡುತ್ತಿದ್ದೇನೆ.
ನಮ್ಮ ನೆನಪಲ್ಲಿ ಭಾವನೆಗಿಂತ ಮುಳ್ಳುಗಳೇ ಹೆಚ್ಚೆಂದು ತಿಳಿದ ನಾನು
ಮಾತನಾಡುವ ಮೊದಲೇ ಆರಂಭದಂತೆ ಮೌನಿಯಾಗಿ ತಲೆತಗ್ಗಿಸಿಬಿಡುತ್ತಿದ್ದೇನೆ.
ಪ್ರಣಯವೋ ಪ್ರಯಾಣವೋ ಎಡವಿ ಬೀಳುವುದು ಸಹಜ
ಇತಿಯೋ ಮಿತಿಯೊ ಈ ಪ್ರೀತಿ ಮಾತ್ರವೇ ನಮಗೆ ಗತಿಯೆಂದು ಹೇಳುತ್ತಿರುತ್ತೇನೆ.
ಮೂಲತಃ ಕಲಬುರ್ಗಿಯವರಾದ ಸಂಗಮೇಶ ಸಜ್ಜನ ಸಧ್ಯ ಬೆಂಗಳೂರು ವಾಸಿ
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ
ಮರಾಠಿಯ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ಆಸಕ್ತಿ
ಪುಸ್ತಕ ಓದುವುದು, ಕತೆ ಕವನ ಇವರ ಬರೆಯುವುದು ಹವ್ಯಾಸ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ