Advertisement
ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

ಸತ್ತ ಮೇಲೆ ಇಟ್ಟ ಹೂವು

ಹತಾಷೆಯ ದಬ್ಬಾಳಿಕೆಗೆ ನನ್ನ ಪ್ರತಿರೋಧವಿದೆ
ಜ಼್ಯೂಯಸನ ಶಾಪಕ್ಕೆ ಬೆದರುವುದಿಲ್ಲ
ಒಪ್ಪಿಕೊಂಡ ಮೇಲೆ ಮುಗಿಯಿತು
ಸಿಸಿಫಸನ ಸಂತತಿ ನನ್ನದು
ಎತ್ತರದ ಇಮಾರತುಗಳಿರಲಿ, ದುರ್ಗಮ ಪರ್ವತವಿರಲಿ
ಅಸಂಬದ್ಧತೆಯ ಭಾರವನು ಹೊತ್ತು ಸಾಗುತ್ತಲೇ ಇರುವೆ
ದಾರಿಯುದ್ದಕೂ ಪ್ರೀತಿ ಕೊಟ್ಟವರೆಷ್ಟೋ,
ನೀಚ ನಿಕೃಷ್ಟನೆಂದವರೆಷ್ಟೋ
ಈ ರಸ್ತೆಗೆ ಅಂತ್ಯವೇ ಇಲ್ಲ
ಮೈಲಿಗಟ್ಟಲೆ ಪಯಣಿಸಿದ ಮೇಲೆ
ಮತ್ತೆ ಪ್ರಾರಂಭಿಸಿದಲ್ಲಿಗೇ ಬಂದು ಸೇರುವೆನೆಂದು ಗೊತ್ತಿದೆ
ಕಾಲಕ್ಕೆ ಚಕ್ರವಿಲ್ಲ, ಎಲ್ಲವೂ ಭ್ರಮೆ
ದೇಹಕೆ ಋತುಮಾನವಿದೆ!
ಆದರೆ ಇದು ಎಲೆಯುದುರಿ ಚಿಗುರುವ
ಹೊಂಗೆಯ ಮರದಂತಲ್ಲ,
ನೂರಾರು ವರುಷ ಜೀವನದಿಯ ಒಡಲಲಿದ್ದರೂ
ಹೂಬಿಟ್ಟ ಮೇಲೆ ಸಾಯುವ ಬಿದಿರಿನ ಹಾಗೆ!
ಆದರೆ ನಿಮಗೆ ಗೊತ್ತಿರಲಿ ಜ಼್ಯೂಯಸನ ದಲ್ಲಾಳಿಗಳೇ
ಆ ನಿರ್ಜೀವ ಟೊಂಗೆಯ ತುದಿಯಲಿ
ಬೆಳ್ಳಕ್ಕಿಗಳು ಕೂತಾಗ ಮತ್ತೆ
ಜೀವಸಂಕುಲವು ಸೃಷ್ಟಿಯಾಗುವುವು
ಹರಿವ ನೀರಲಿ ಬೆರೆತ ಬಿದಿರಿನ ಅವಶೇಷ
ಸಾವಿರಾರು ಮೈಲಿಗಳಾಚೆ ಮತ್ತೆ
ಹೂವೊಂದನು ಚಿಗುರಿಸುವುದು
ಪರಂಪರೆಯೊಳಗೆ ಅಂತರ್ಗತರಾದ
ಮಹಾತ್ಮರೆಷ್ಟೋ ಇರಬಹುದು
ಮೂರು ತಲೆಮಾರಿನಾಚೆಗಿನ ವಂಶವೃಕ್ಷ ಗ್ರಾಮ ಲೆಕ್ಕಿಗನ
ಬಳಿಯೂ ಸಿಗದೆ ನಾಮಾವಶೇಷವಾಗಿರುವಾಗ
ಅಸೂಯೆ, ಲಂಪಟತನ, ಮೈಥುನಗಳೆಲ್ಲವನೂ
ಅನುಭವಿಸಿ ಸಾಯುವ ಈ ಸಂಸಾರಿಯ
ದೇಹದ ಮೇಲೆ ಇಟ್ಟ ಹೂವುಗಳೂ
ಪರಿಮಳ ಬೀರುವುದು ನಿಸರ್ಗದ ಸಹಜ ನಿಯಮ!

ಡಾ. ಸತ್ಯಪ್ರಕಾಶ್ ಎಂ ಆರ್ ಮೂಲತಃ ಬೆಂಗಳೂರಿನವರು.
ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿ ನಂತರ ಅಧ್ಯಾಪನ ವೃತ್ತಿಯನ್ನು ಆರಿಸಿಕೊಂಡವರು.
ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮಾಧ್ಯಮ ಉದ್ಯಮ, ದಲಿತ ವೀರನಾರಿಯರ ಸಂಕಥನ, ಸಂಸತ್ತಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಭಾಷಣಗಳು ಇವರ ಈ ಪ್ರಕಟಿತ ಕೃತಿಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ