ದಯವಿಟ್ಟು ಅವಮಾನಿಸು..
ಅವನು –
ಅವಳು ಜಗಳ ಶುರುವಿಡುತ್ತಿದ್ದಳು
ಸರಿಯಾಗಿ ಇಪ್ಪತ್ತೇಳನೆ
ದಿನಕ್ಕೆ..
ನಾನೂ ಏರಿಸುತ್ತಿದ್ದೆ ದನಿ
ಅವಳೂ ಇಳಿಸುತ್ತಿದ್ದಳು ಮಾತು
ಮುಟ್ಟು
ಇಪ್ಪತ್ತೆಂಟನೆ ದಿನಕ್ಕೆ..
ಜಗಳ ಉಳಿದಿರುತ್ತದೆ
ಯಾವುದೂ ಅಳಿದಿರುವುದಿಲ್ಲ
ಏಳುವಾಗ ಕಾಫಿ
ಮೀಯುವಾಗ ಹಾಡು
ಹಸಿ ಹೆರಳಿಗೆ ಧೂಪ
ನಾನು ಹೊಸೆಯುವ ಬತ್ತಿ, ಅವಳು ಹಚ್ಚುವ ದೀಪ
ನನ್ನದು ಕಾದ ಎಣ್ಣೆಗೆ ಸಾಸಿವೆ
ಅವಳದು ರುಚಿಗೆ ತಕ್ಕಷ್ಟು ಉಪ್ಪು
ದಿಂಬಿನ ಬದಲು ಅವಳಿಗೆ ನನ್ನ ಎದೆ
ಹೇಳಲು ಇವೆ ನನಗೂ ನೂರೆಂಟು ಕಥೆ
ಅವಳು ಉಡುವ ಸೀರೆ
ನಾನು ಎಣಿಸಿ ಕೊಡುವ ನೆರಿಗೆ
ಅವಳು –
ನಾನು ಜಗಳ ಶುರುವಿಡುತ್ತಿದ್ದೆ
ಸರಿಯಾಗಿ ಇಪ್ಪತ್ತೇಳನೆ ದಿನಕ್ಕೆ
ಈ ಬಾರಿಯಾದರೂ ನೀನು
ಮೂರು ದಿನ ಆಚೆ ಕೂರಿಸಲಿ
ಅಡುಗೆ ಮನೆಯ ಬಾಗಿಲಿಕ್ಕಲಿ
ಹಚ್ಚುವ ದೀಪ ಸೊರಗಲಿ
ಎಂದು ಬೇಡುತ್ತಿದ್ದೆ..
ದಯವಿಟ್ಟು ಈ ಮುಟ್ಟಿಗೊಂದು
ಅವಮಾನವಾದರೂ
ಆಗಲಿ
ಮುಖ ಬಾಡಿಸಿಕೊಂಡು ಹೋದ
ಮುಟ್ಟು
ಮುಂದಿನ ಬಾರಿ ಬರದೆ ನಿಲ್ಲಲಿ
ಗರ್ಭದೊಳಗೊಂದು ಚಿಗುರು ಮೂಡಲಿ
ಅತೀಯಾಯ್ತು ನಿನ್ನ ಸಲಿಗೆ
ಈ ಮುಟ್ಟಿನೊಂದಿಗೆ,
ನೀ ಪ್ರೀತಿಸುವುದು ನನ್ನನ್ನೊ
ಮುಟ್ಟನ್ನೊ
ಹುಡುಕಿಕೊಂಡು ಬರುತ್ತದೆ ನಿನ್ನ ಮುದ್ದಿಗೆ
ಪ್ರತಿ ತಿಂಗಳು ತಪ್ಪದೆ
ದಯವಿಟ್ಟು ಅವಮಾನಿಸು
ಒಮ್ಮೆಯಾದರೂ!
ನಾನೂ ತಾಯಿಯಾಗುವೆ ಲೋಕಕ್ಕೆ!

ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ (ಕವನ ಸಂಕಲನ) ಹಾಗೂ ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.
