‘‘ಅಮ್ಮನ ಕಾಟನ್ ಸೀರೆಯೊಂದು ಗಪ್ಪೆಂದು ಅಮ್ಮನ ಸಿಟ್ಟಿನ ಹಾಗೇ ಕೂತಿದೆ. ಮಗಳು ಕೊಡಿಸಿದ ಬಣ್ಣಬಣ್ಣದ ಸೀರೆಗಳು ಹರಡಿ ಕಿಲಕಿಲ ನಗುತ್ತಿವೆ. ಅದರಲ್ಲೇ ಒಂದನ್ನು ಎತ್ತಿಕೊಂಡು ಹೊರಬಂದರೆ ಮಾಗಿಯಲ್ಲಿ ಮೈಯೆಲ್ಲಾ ಕಜ್ಜಿಯಾಗಿದ್ದ ಮರವೊಂದು ಈಗ ಚೈತ್ರದಲ್ಲಿ ಅರಳಿ ನಳನಳಿಸುತ್ತಾ ನರ್ತಿಸುವುದು ಮನೆಯ ಕಿಟಕಿಯಿಂದ ಕಂಡು ಪುಳಕ ಹುಟ್ಟಿಸುತ್ತದೆ.ನಾನೇನೋ ಹಕ್ಕಿಗಿಂತ ಹಗುರಾದಂತೆನಿಸಿ ಸಂಜೆಗೆ ಹೋಗಲಿರುವ ಸ್ನೇಹಿತೆಯ ಮನೆಯ ಆರತಕ್ಷತೆಗೆ ಯಾವ ಸೀರೆ ಉಡುವುದು? ಎಂಬ ಚಿಂತೆ ಕಾಡುತ್ತದೆ”
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಕೊನೆಯ ಕಂತು.
ವರುಷಗಳು ಅದು ಹೇಗೆ ಅರಿವಿಲ್ಲದೇ ಉರುಳಿದವೋ.. ಕಷ್ಟ ಸುಖ, ತಿನ್ನಲು ಇದ್ದದ್ದು ಇಲ್ಲದ್ದು , ಆರೈಕೆ, ಮುನಿಸು, ನಿತ್ಯಾಸಕ್ತಿಗಳು ಎಲ್ಲವೂ ನಿರಂತರ ಹರಿದವು. ಕೂಸು ಬೆಳೆದು ಬಾಲೆಯಾಗಿತ್ತು. ನಾನು ಬೆಳೆದು ಹಿರಿಯಕ್ಕನಾಗಿದ್ದೆ. ನಾಲ್ಕು ಗೋಡೆಗಳ ಮಧ್ಯೆ ಯಾವ ಹಸಿಯಿಲ್ಲದ ಶೃತಿಗೆಟ್ಟ ರಾಗವೊಂದು ನಿಲ್ಲದೇ ಸುಮ್ಮನೇ ಬೊಗಳಿಕೊಳ್ಳುತ್ತಿತ್ತು. ಆ ಬೊಗಳಿಗೆ ಕಿವಿಗೊಡದ ನಾನೂ ನನ್ನ ಹೆಣ್ಣೂ ಕಡಲಿನ ತಡಿಯಲ್ಲಿ ವಿಹರಿಸುವ ಧ್ಯಾನಾಸಕ್ತ ಮತ್ಸ್ಯ ದೇವತೆಗಳಂತೆ ನಮ್ಮದೇ ತಾನದಲ್ಲಿ ಮುಳುಗಿ ಈಜುತ್ತಿದ್ದೆವು. ಯಾರೋ ನಮ್ಮನ್ನು ಕಡೆಗಾಣಿಸಿದ್ದಾಗಲೀ ನೋಯಿಸಿದ್ದಾಗಲೀ ಅಂದಿದ್ದಾಗಲೀ ಆಡಿದ್ದಾಗಲೀ ಎಲ್ಲವೂ ಗಾಳಿಯಲ್ಲಿ ಲೀನವಾಗುವ ಹಾಗೆ ತೂರಿ ಬಿಟ್ಟುಬಿಟ್ಟೆವು. ಕೂಸು ಹುಟ್ಟುವ ಮೊದಲು ಹಲವು ಬಾರಿ ಅವನ ದೌರ್ಜನ್ಯಕ್ಕೆ ತಲೆಬಾಗಿದ್ದೆನಾದರೂ ಯಾಕೋ ಇವಳು ಜೊತೆಗಿದ್ದಾಗ ಅವನು ಹೊಡೆಯಲು ಕೈಯೆತ್ತಿದರೆ ತಿರುಗಿ ದುರುಗುಟ್ಟುವಷ್ಟು ಬದಲಾಗಿದ್ದೆ. ಒಂದೆರಡು ಬಾರಿ ಹೊಡೆಯುವ ಪ್ರಯತ್ನ ಮಾಡಿದವನು ಮತ್ತೆ ಆ ಸಾಹಸಕ್ಕೆ ಕೈಹಾಕಲಿಲ್ಲ. ಕೆಲವು ಗೆಳತಿಯರಿದ್ದರು, ಬದುಕುವ ರೀತಿಯನ್ನೂ ಛಾತಿಯನ್ನೂ ಅಕ್ಷರಶಃ ಪ್ರಭಾವಿಸಿಬಿಟ್ಟರು. ತಪ್ಪಿಲ್ಲದೇ ಯಾರಿಗೂ ಬಗ್ಗದ ನನ್ನ ಸ್ವಭಾವಕ್ಕೆ ಅವರ ಸ್ನೇಹ ಒರೆಯಿಟ್ಟಂತಾಗಿತ್ತು. ಅವಳ ಸ್ಕೂಲು, ನನ್ನ ಕೆಲಸ, ಮನೆ ಇವೆಲ್ಲಾ ನಿತ್ಯದ ಬದುಕಿನ ಬೇಕಾದಷ್ಟು ಸಮಯ ಹಾಗೂ ಕಸುವನ್ನು ಹೀರಿಬಿಡುತ್ತಿದ್ದವು. ರೇಸಿಗೆ ಕಟ್ಟಿದ ಕುದುರೆಗಳಂತೆ ಆದಷ್ಟೂ ವೇಗವಾಗಿ ಓಡುವುದೇ ಕಾಯಕವಾಗಿತ್ತಲ್ಲಾ.. ಸುತ್ತಲ ಪ್ರಪಂಚವೇ ಗಮನದಲ್ಲಿರಲಿಲ್ಲ.. ಆ ದಿನದವರೆಗೂ..!
* * *
ನಮ್ಮನೆಯ ಗಂಡಿಗೆ ಒಮ್ಮೆ ಹೃದಯಾಘಾತವಾಯಿತು. ಅವನ ಮನೆಯವರು ನಾನೇ ಅವನಿಗೆ ವಿಷವಿಕ್ಕಿದಷ್ಟು ಹುಯಿಲು ಮಾಡಿಟ್ಟರು. ಮೊದಲ ಅಪಶಕುನವೇ ಹೆಣ್ಣು ಹೆತ್ತದ್ದು ಅಂತ ಮತ್ತೆ ಮತ್ತೆ ಅವರವರೇ ನುಡಿದುಕೊಂಡರು. ಅವನ ಹೊಲಸು ದಿನಚರಿಯನ್ನು ಕೇಳುವ ಒಂದು ಕಿವಿಯೂ ಅಲ್ಲಿ ಇರದಿದ್ದರಿಂದ ನಾನೂ ಮೂಕಳಾಗೇ ಮುಂದುವರಿದೆ. ಮಾತಾಡಿಯಾದರೂ ಗೆಲ್ಲುವುದು ಏನೂ ಇರಲಿಲ್ಲ. ಮಾತಿಲ್ಲದಿದ್ದರೆ ಕಳೆದುಹೋಗುವುದೂ ಇರಲಿಲ್ಲ. ಈತ ತಿಂಗಳುಗಳು ಕಳೆದು ಸ್ವಲ್ಪ ತೇಲಿಕೊಂಡಿದ್ದ. ಒಂದು ದಿನಕ್ಕೆ ಎಷ್ಟು ಸಾಧ್ಯವಾಗಬಹುದೋ ಅಷ್ಟೂ ತಂಬಾಕನ್ನೂ ಬಳಸಿ ಬಿಸಾಡುವ ಶೋಕಿಯು ಅವನು ಇನ್ನು ಮಾಮೂಲು ಮನುಷ್ಯನಾಗಲಾರದಷ್ಟು ಎತ್ತರಕ್ಕೆ ಬೆಳೆದುಬಿಟ್ಟಿತ್ತು. ಇನ್ನು ಇತರೇ ಚಟಗಳೂ ಸೇರಿ ಲೆಕ್ಕವಿಲ್ಲದಷ್ಟು ಮೈ ಹೊಕ್ಕು ಖಾಲೀ ಉಸಿರಾಡಿಕೊಂಡಿರುವಷ್ಟು ತಾತ್ಪರ್ಯದ ದೇಹ ಉಳಿದಿತ್ತು ಅಷ್ಟೇ..
ಬಗ್ಗದ ಎತ್ತಿಗೆ ಬಗ್ಗಾಲು ಬರೆ ಎಂಬಂತೆ ಏನೇ ಆದರೂ ಏನೂ ಆಗದವರಂತೆ ಸುಮ್ಮನೇ ನಡೆಯುತ್ತಿದ್ದವಳಿಗೆ ಸರಿಯಾದ ಬರೆ ಏನಾಗಬಹುದೆಂದು ಮೇಲಿನವನಿಗಿಂತ ಚೆಂದ ಯಾರು ಬಲ್ಲರು! ಮಾವನೂ ಅಪ್ಪನೂ ಚಿಕ್ಕಪ್ಪನೂ ತಿಂಗಳುಗಳ ಅಂತರದಲ್ಲಿ ಇಹದ ಗೂಡು ಕೆಡಿಸಿ ಪರದ ಅರಮನೆ ಸೇರಿಕೊಂಡರು. ರಕ್ತಬಂಧುತ್ವವನ್ನು ಮೀರಿದ ಗೆಳೆಯನಂತಿದ್ದ ಚಿಕ್ಕಪ್ಪನು ತೀರಿಹೋದದ್ದು ಕಣ್ಣಾರ ಕಂಡು ಯಾಕೋ ಬದುಕು ಇಷ್ಟು ನಿಷ್ಕರುಣಿಯಾ… ಅನ್ನಿಸಿ ಖೇದವೇ ಮನಸು ತುಂಬಿತ್ತು. ಆದರೂ ಅವನ ಸಾವು ನೆನೆದಾಗ ಅವನು ಇಹದ ಸಮಸ್ತ ಜಂಜಡಗಳಿಂದ ಮುಕ್ತನಾಗಿರಬಹುದು. ದೇಹವೆಂಬ ಕೊಳಕು ವಸ್ತ್ರವನ್ನು ತ್ಯಜಿಸಿ ಸುಂದರವಾದ ಪರಲೋಕ ಸೇರಿರಬಹುದು ಅನಿಸುತ್ತಿತ್ತು. ಅವನು ಎಂದೂ ಈ ಲೋಕದವರಂತೆ ಬಾಳಲಿಲ್ಲ. ಎಂದೂ ಇಹದ ಹೊಲಸುಗಳಲ್ಲಿ ತೊಡಗಿದವನಂತೆ ಕಾಣಲಿಲ್ಲ. ಎಲ್ಲರಿಗೂ ಪಿತೃಹೃದಯಿಯಾಗಿ ಕರಗಿದವನು ಇಂದು ತಾನೇ ಕರಗಿ ಧೂಪವಾದನು.
ಇನ್ನು ವರುಷಗಳು ಉರುಳಿದರೆ ಅವನ ನೆನಪಿನ ಘಮಲಷ್ಟೇ ಚಿತ್ತವನ್ನು ಕಲಕಿ ಬಂಧಿಸೀತು. ಅವನ ತೊಡೆ ಮೇಲೆ ಆಡುತ್ತಾ ಹಾಡುತ್ತಾ ಇದ್ದದ್ದು.. ಅವನ ಒಗಟುಗಳಿಗೆ ಉತ್ತರ ಸಿಗದೇ ಇಡೀ ದಿನ ಪೇಚಾಡಿದ್ದು.. ಏನಾದರೂ ಕೊಡಿಸೆಂದು ದುಂಬಾಲು ಬಿದ್ದು ಕೊಡಿಸಿಕೊಂಡದ್ದು… ತುಂಬಾ ನೋವಾದಾಗ ಅವನ ತೊಡೆಯ ಮೇಲೆ ತಲೆಯಿಟ್ಟು ಅತ್ತು ಹಾಗೇ ನಿದ್ದೆ ಮಾಡಿದ್ದು… ಪ್ರತಿ ಹುಟ್ಟುಹಬ್ಬಕ್ಕೂ ತಪ್ಪದೇ ಕೊಡುವ ಅವನ ಉಡುಗೊರೆಗಾಗಿ ಹಗಲೂ ರಾತ್ರಿ ಕಾಯುತ್ತಿದ್ದ ಕುತೂಹಲ… ಅವನು ಆಫೀಸಿಗೆ ಹೊರಟನೆಂದರೆ ನಾವೂ ಓಡಿ ಜೀಪು ಹತ್ತಿ ಕಾಡುತ್ತಿದ್ದ ಪರಿ.. ಸಾಹೇಬರ ಮನೆ ಮಕ್ಕಳೆಂದು ಆಫೀಸಲ್ಲಿ ದಕ್ಕುತ್ತಿದ್ದ ಗೌರವ ಹಾಗೂ ಉಪಚಾರದ ಕುರುಹಾದ ಚಾಕಲೇಟುಗಳು… ಯಾವಾಗಲೂ ಅಡಕೆಲೆ ಜಗಿಯುತ್ತಿದ್ದ ಅವನ ಬ್ಯಾಗಿನಿಂದ ಹೊಮ್ಮುತ್ತಿದ್ದ ಅಡಕೆಲೆ ಡಬ್ಬಿಯ ಪರಿಮಳ.. ತಾಂಬೂಲ ಹಾಕಲು ಕೂತಾಗ ಎಲೆತೊಟ್ಟನ್ನು ಜೇನಿಗೆ ಅದ್ದಿ ಬಾಯಿಗಿಡುತ್ತಿದ್ದ ಅವನ ಮಮತೆ…
ಒಂದಾದರೂ ಎಲೆ ಕೊಡು ಎಂದು ಹಟ ಮಾಡಿದರೆ ಮಕ್ಕಳ ನಾಲಗೆ ಸೇದಿಹೋಗುವುದೆಂದು ಹೆದರಿಸುತ್ತಿದ್ದ ಅವನ ಪರಿ… ಆದರೂ ಅವನ ಹೆಂಗರುಳಲ್ಲಿ ಜಿನುಗುತ್ತಿದ್ದ ಮಮತೆ.. ಎಲ್ಲರದ್ದೂ ಊಟವಾದ ಮೇಲೆ ಗುಡ್ಡೆ ಅನ್ನ ತಟ್ಟೆಗೆ ಹಾಕಿಕೊಂಡು ಗಟ್ಟಿ ಮೊಸರು ಕಲೆಸಿ ಮುದ್ದೆ ಗಾತ್ರದ ತುತ್ತನ್ನು ಮಕ್ಕಳಿಗೆಲ್ಲಾ ಉಣಿಸುತ್ತಿದ್ದ ಅವನ ತಾಯಿ ಹೃದಯ.. ನನಗಾಗಿ ಮಿಡಿಯುತ್ತಿದ್ದ ಅವನ ಮೃದುಮನಸು… ತಾಯಂತೆ ಹಣೆಗೂದಲು ಸವರಿ ಮೃದುವಾಗಿ ತಟ್ಟಿ ಮಲಗಿಸುತ್ತಿದ್ದ ಅವನ ದರಗು ಅಂಗೈ… ಅಡಕೆಲೆಗೆ ಕರೆಗಟ್ಟಿದರೂ ಪೋಣಿಸಿದ ದಾಳಿಂಬೆಯಂಥಾ ಅವನ ದಂತಪಂಕ್ತಿ… ಪುಟ್ಟ ಹಾಸ್ಯಕ್ಕೂ ಮನಸು ಬಿಚ್ಚಿ ನಗುತ್ತಿದ್ದ ಅವನ ಮಗುತನ.. ಯಾರನ್ನೂ ಎಂದೂ ಏಕವಚನದಲ್ಲಿ ಮಾತಾಡಿಸದ ಅವನ ದೊಡ್ಡತನ… ಏನೇನೆಂದು ಪಟ್ಟಿ ಮಾಡಲಿ..? ಪ್ರಕೃತಿಯ ಸೋಜಿಗವೊಂದು ಅವನ ರೂಪದಲ್ಲಿ ಹುಟ್ಟಿ ನಲಿನಲಿದಾಡಿ ಅಸ್ತಂಗತವಾಯಿತು.
ಬಗ್ಗದ ಎತ್ತಿಗೆ ಬಗ್ಗಾಲು ಬರೆ ಎಂಬಂತೆ ಏನೇ ಆದರೂ ಏನೂ ಆಗದವರಂತೆ ಸುಮ್ಮನೇ ನಡೆಯುತ್ತಿದ್ದವಳಿಗೆ ಸರಿಯಾದ ಬರೆ ಏನಾಗಬಹುದೆಂದು ಮೇಲಿನವನಿಗಿಂತ ಚೆಂದ ಯಾರು ಬಲ್ಲರು! ಮಾವನೂ ಅಪ್ಪನೂ ಚಿಕ್ಕಪ್ಪನೂ ತಿಂಗಳುಗಳ ಅಂತರದಲ್ಲಿ ಇಹದ ಗೂಡು ಕೆಡಿಸಿ ಪರದ ಅರಮನೆ ಸೇರಿಕೊಂಡರು.
ಆಪಾಟಿ ಪ್ರೇಮವನ್ನೇ ಹೊತ್ತು ಹಂಚಿದ ಜೀವವೊಂದು ತಟಸ್ಥವಾಗಿ ಇನ್ನು ನೀವು ಮಾತಾಡಿ ಎಂಬಂತೆ ನಮ್ಮನ್ನು ಖಾಲಿಯಾಗಿಸಿ ಹೊರಟೇ ಹೋಯಿತು. ತಂಪಿನ ಚಂದ್ರನಂಥಾ ಸೊಗಸಿನವನೊಬ್ಬ ಕೇವಲ ಆತ್ಮವಾಗಿ ಉಳಿದುಹೋದ. ಈ ಬದುಕು ಎಂಥಾ ಕ್ರೂರಿ. ಎಗ್ಗುಮುಗ್ಗಿಲ್ಲದೇ ನಮ್ಮದೆಂಬುವ ವಸ್ತುವನ್ನು ನಮ್ಮಿಂದಲೇ ಕಸಿದು ನಾವೇ ಅದನ್ನು ಮರೆಯುವಂತೆ ಮಾಡಿಬಿಡುತ್ತದೆ. ಅಥವಾ ಎಂದೂ ಪಡೆಯದಂತೆ ಕಸಿದುಕೊಂಡು ಕುಹುಕವಾಡುತ್ತದೆ. ಅವನ ಹೋಗುವಿಕೆ ನನಗೆ ಬದುಕಿನ ಬಗೆಗಿದ್ದ ಎಲ್ಲ ಅಕ್ಕರಾಸ್ಥೆ ಮುದ್ದು ಹಾಗೂ ವ್ಯಾಮೋಹಗಳನ್ನು ಸುಳ್ಳಾಗಿಸಿಬಿಟ್ಟಿತು. ‘ನಾನು’ ಎಂಬುವುದೊಂದು ಖಾಲಿಯಾಗಿತ್ತು.
ಹೀಗೇ ನನ್ನ ಆಪ್ತರನ್ನೆಲ್ಲಾ ಸದ್ದಿಲ್ಲದೇ ಕಸಿದ ಈ ಬದುಕಿನ ಅಖಾಡವು ಅದೇಕೋ ನನ್ನೊಬ್ಬಳನ್ನು ಮಾತ್ರ ಏಕಾಂತ ಹೋರಾಡಲು ನೂಕಿ ಸದ್ದು ಮಾಡಿ ಹೇಳಲಾಗದ ನೂರು ಸಂಕಟಗಳನ್ನು ನನ್ನ ಮಡಿಲಿಗೆ ತುರುಕಿತ್ತು. ಕೂಸು ಒಂದಿರದಿದ್ದರೆ ನಾನು ಎಂದೋ ಹೆಣವಾಗಿರುತ್ತಿದ್ದೆ ಅನ್ನುವದು ನಿಜ.
* * *
ಉಳಿಯಬಹುದಾದ ಬಂಧಗಳಲ್ಲಿ ಕೆಲವು ಗಾಳಿಗೆ ತೂರಿಹೋಗುವಷ್ಟು ಹಗುರಾದವು. ಹಲವು ನನ್ನೊಂದಿಗೆ ಈಜಲಾಗದೇ ಭಾರವಾಗಿ ತಳ ಸೇರಿದವು. ಶ್ರೀಧರನಿಗೆ ಮದುವೆಯಾಯಿತು. ಹೆಂಡತಿ ಬಹಳ ಅಚ್ಚುಕಟ್ಟಿನ ಹುಡುಗಿ ಬಂದಳು. ಎಷ್ಟು ಅಚ್ಚುಕಟ್ಟೆಂದರೆ ತಾನಾಯಿತು ತನ್ನ ಗಂಡನಾಯಿತು ಎಂಬಷ್ಟು! ಗೌರೀ ಪೂಜೆಯ ದಿನಕ್ಕಾದರೂ ನಾನು ನೆನಪಾಗುವೆನೆಂಬುದೇ ದೊಡ್ಡ ಪುಣ್ಯದ ಸಂಗತಿಯಾಗಿತ್ತು. ಶಶಾಂಕನೊಬ್ಬ ಕೆಲವೊಮ್ಮೆ ‘ಹೇಗಿದೀಯಮ್ಮಾ..?’ ಎಂದು ಫೋನಾದರೂ ಮಾಡುವಷ್ಟು ನೆನಪಿಟ್ಟಿದ್ದನು. ಆದರೆ ಅವನ ಹೆಂಡಿರು ಅಚ್ಚುಕಟ್ಟಿನಲ್ಲಿ ಶ್ರೀಧರನ ಹೆಂಡಿರ ಮೀರುವಷ್ಟು ಇದ್ದುದರಿಂದ ಅವನ ಮಮತೆಯೂ ಅಷ್ಟಕ್ಕೇ ತೀರಿತು. ಯಾಕೋ ಅಮ್ಮನೆಂಬುವವಳು ನನ್ನವಳೋ ಪರಕೀಯಳೋ ಅರಿಯದಷ್ಟು ಗೋಜಲಾದಳು. ಶ್ರೀಧರನ ಹೆಂಡತಿ ರಾಗಿಣಿಯೇ ಅವಳ ಮಗಳೆಂದೂ ನಾನು ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದೂ’ ವರುಷಗಟ್ಟಲೇ ಮಾವನ ಮನೆಯಲ್ಲೇ ಬೇರೂರಿದ್ದ ಅವಳೇ ಹೇಳಿಕೊಂಡು ತಿರುಗುವಳು. ಇದರಿಂದ ಪ್ರಸನ್ನಳೇನೂ ಆಗದ ರಾಗಿಣಿಯು ಗೊಣಗದೇ ಎರಡು ಹಿಡಿ ಅನ್ನವನ್ನು ಹಾಕದವಳೆಂದು ನನಗೂ ತಿಳಿದಿತ್ತು. ಆದರೆ ಮನೆತನದ ಮರ್ಯಾದೆಯ ಮುಂದೆ ಇವ್ಯಾವೂ ಹೆಚ್ಚಾಗಿ ಕಾಣದ ಅಮ್ಮ ರಾಗಿಣಿಯಂತಹ ಸೊಸೆ ಸಿಗಲು ತಾನು ಪುಣ್ಯ ಮಾಡಿದ್ದೆನೆಂದು ಹೇಳುವಳಂತೆ. ನನ್ನೆದುರು ಮನಬಿಚ್ಚಿ ಅಮ್ಮ ಮಾತಾಡಿದ ನೆನಪೇ ಇಲ್ಲದ ನನಗೆ ಇವಳ ನಾಟಕದ ಬದುಕು ರೋಸಿಗೆ ತಂದಿತ್ತು.
* * *
ನಾನು ಮತ್ತು ನನ್ನ ಕೂಸು ನೆಮ್ಮದಿಯ ದಿನಗಳ ಕಡೆ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಬಹುಕಾಲ ಬಂದಾಗಿದೆ. ‘ನಾನು ಸಂಪಾದಿಸಿ ತಂದರೂ ಕೆಲಸಕ್ಕೆ ಹೋಗಲೇಬೇಕೆಂದು ಹಟ ಮಾಡ್ತೀಯಲ್ಲೇ.. ಮನೇಲಿ ನೆಮ್ಮದಿಯಾಗಿ ರಂಗೋಲೆ ಡಿಸೈನು ಮಾಡ್ತಾ ಇರಬಾರದಾ? ಅದೇನು ದುಡಿಮೆ ಖಯಾಲಿಯೋ..’ ಅಂತ ಬೈಯುವ ಅವಳ ಮುದ್ದು ಮುಖ ನೋಡುವುದೇ ನನ್ನ ಪ್ರತಿದಿನದ ಹಬ್ಬ ಹೋಳಿಗೆ. ಅವಳಿಗೆ ಮದುವೆ ಮಾಡಬೇಕಾಗಿತ್ತಾ ಎಂದು ಕೊರಗುವ ನನ್ನನ್ನು ನೋಡಿ ಕಿಚಾಯಿಸುವ ಅವಳ ನಗು ಹೀಗೇ ಇರಲೆಂದು ಇದ್ದಾನೋ ಇಲ್ಲವೋ ತಿಳಿಯದ ದೇವರಿಗೆ ಕಣ್ಣು ಮಿಟುಕಿಸಿ ಸುಮ್ಮನಾಗುತ್ತೇನೆ. ನೆಮ್ಮದಿಗೆ ಹಲವು ಆಯಾಮಗಳನ್ನು ದಾಖಲಿಸಿ ಕೊಟ್ಟಿರುವ ಈ ದಿನಗಳನ್ನು ಕಳೆದುಕೊಳ್ಳುವ ಧೈರ್ಯವಿಲ್ಲದೇ ಮತ್ತೆ ಇಂದು ಯಾವ ಸೀರೆ ಉಡುವುದೆಂಬ ಯೋಚನೆಯಲ್ಲಿ ಮುಳುಗುತ್ತೇನೆ. ಶ್ರೀಧರನ ಮನೆಯ ಬಾಗಿನದ ಸೀರೆ ಮೂಲೆಯಲ್ಲಿ ನಗುತ್ತದೆ.
ಅಮ್ಮನ ಕಾಟನ್ ಸೀರೆಯೊಂದು ಗಪ್ಪೆಂದು ಅಮ್ಮನ ಸಿಟ್ಟಿನ ಹಾಗೇ ಕೂತಿದೆ. ಮಗಳು ಕೊಡಿಸಿದ ಬಣ್ಣಬಣ್ಣದ ಸೀರೆಗಳು ಹರಡಿ ಕಿಲಕಿಲ ನಗುತ್ತಿವೆ. ಅದರಲ್ಲೇ ಒಂದನ್ನು ಎತ್ತಿಕೊಂಡು ಹೊರಬಂದರೆ ಮಾಗಿಯಲ್ಲಿ ಮೈಯೆಲ್ಲಾ ಕಜ್ಜಿಯಾಗಿದ್ದ ಮರವೊಂದು ಈಗ ಚೈತ್ರದಲ್ಲಿ ಅರಳಿ ನಳನಳಿಸುತ್ತಾ ನರ್ತಿಸುವುದು ಮನೆಯ ಕಿಟಕಿಯಿಂದ ಕಂಡು ಪುಳಕ ಹುಟ್ಟಿಸುತ್ತದೆ. ನಾನೇನೋ ಹಕ್ಕಿಗಿಂತ ಹಗುರಾದಂತೆನಿಸಿ ಸಂಜೆಗೆ ಹೋಗಲಿರುವ ಸ್ನೇಹಿತೆಯ ಮನೆಯ ಆರತಕ್ಷತೆಗೆ ಯಾವ ಸೀರೆ ಉಡುವುದು? ಎಂಬ ಚಿಂತೆ ಕಾಡುತ್ತದೆ.
ಒಂದೊಮ್ಮೆ ಸದ್ದೇ ಇಲ್ಲದೇ ಸತ್ತಂತಿದ್ದ ಬದುಕೊಂದು ಈಗ ಬರೀ ಸಂತಸದ ಕಿಂಕಿಣಿಯೇ ತುಂಬಿ ಸದ್ದು ಮಾಡುತ್ತಿರೋದು ಕಂಡು ಸುತ್ತಲಿನ ಇರುವೂ ಉನ್ಮತ್ತವಾದಂತೆ ಭಾಸವಾಗುತ್ತದೆ.
ಇನ್ನೂ ಏನೆಲ್ಲ ಹೇಳುವುದು ಉಳಿದುಹೋದಂತೆನಿಸಿದರೂ ಬಚ್ಚಿಟ್ಟಿದ್ದು ನಡುವೆ ಬಂದುಹೋದ ಮಿಂಚಿನಂಥಾ ಅವನ ನಗುವನ್ನೇ ತಾನೇ ಎಂದು ನೆನಪಾಗಿ ಮಾತುಗಳು ಹೊರಲಾರದ ಆ ಸುಖದ ಭಾವವನ್ನು ಮೌನವೇ ಸಮರ್ಥವಾಗಿ ಲಾಲಿಸುವುದು ಅನಿಸಿ ಮತ್ತೆ ಆ ದಿವ್ಯ ಮೌನಕ್ಕೆ ಶರಣಾಗುತ್ತೇನೆ. ಬುವಿಯು ಒಣಗಿ ಚಕ್ಕಳೆದ್ದಾಗ ಬಿರುಸು ಮಳೆಯೊಂದು ಜನುಮಕ್ಕಾಗುವಷ್ಟು ನೀರಿಕ್ಕಿ ತೆರೆ ಸರಿದು ಹೋದಂತೆ ಮರೆಯಾಗುವುದು ಪ್ರಕೃತಿ ಸಹಜ. ಆ ಕ್ಷಣಗಳು ನಾನು ಹಸಿರಾದದ್ದು ಹಾಗೂ ಜಗದ ಎಲ್ಲ ಸಂಕೋಲೆಗಳನ್ನು ಕಳಚಿ ಬಿಡುಗಡೆಗೊಂಡದ್ದು ಮಾತಿನಲ್ಲಿ ಹೇಳದೆಯೂ ವಿದಿತಗೊಳ್ಳುವ ದೈವ ನಿಯಾಮಕ ಮಳೆಯಂತೆ!!
ಚಲಿಸುತ್ತಲೇ ಇರುವ ಕಾಲಕ್ಕೂ ಚಲನೆಯೇ ಬದುಕಾಗಿರುವ ಮೋಡಕ್ಕೂ ಅಲುಗದ ಭೂಮಿ ಹಾಗೂ ಆಕಾಶಗಳೇ ಸಾಕ್ಷಿ. ನೆನೆದು ತಂಪಾಗಿ ಓಲಾಡುವ ಭೂಮಿಯಂತೆ ನಾನು ತಣ್ಣಗಿನ ಹಿತವೊಂದರ ಪರಿಮಳವನ್ನು ಆಘ್ರಾಣಿಸುತ್ತಲೇ ಹೀಗೆ ನೂರಾರು ಕಾಲ ಜೀವಿಸಬಲ್ಲೆನೆಂಬ ನಂಬಿಕೆಯಿದೆ. ಕಾಲದೊಳಗೆ ಐಕ್ಯವಾಗಿ ತನ್ನ ಇರುವನ್ನೂ ಮರೆತು ವಿಹರಿಸುವ ದೇವಿಯೊಬ್ಬಳಂತೆ….
ಧನ್ಯವಾದಳು.
ಮತ್ತೆ ಸಿಗೋಣ.
(ಮುಗಿಯಿತು)
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.