ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ. ದೇಶವನ್ನು ಮುಂದೆ ತಂದವರನ್ನ ಮತ್ತು ಅವರ ನೆನಪಿಗಾಗಿ ಏನೂ ಮಾಡದಿರುವುದು ನಮ್ಮ ರಕ್ತದಲ್ಲಿ ಬಂದಿದೆ, ಒಂದು ರೀತಿ ಕೃತಘ್ನರು ನಾವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ
ಬೆಂಗಳೂರಿನ ಕತೆ ಬಿಟ್ಟು ರಾಜಕೀಯಕ್ಕೆ ಹಾರಿದ್ದೀಯಲ್ಲಾ ಯಾಕೆ? ಅಂತ ನನ್ನ ಕೆಲವು ಗೆಳೆಯರು ಕಣ್ಣು ಕೆಂಪು ಕೆಂಪಗೆ ಮಾಡಿಕೊಂಡಿದ್ದಾರೆ ಅಂತ ಗೊತ್ತಾಯ್ತು! ನೆನಪು ಆ ಕಡೆ ಎಳೆದಿತ್ತು ಅದರಿಂದ ಮರೆಯುವ ಮುನ್ನ ಅದನ್ನ ಹೇಳಿದ್ದೆ, ಅಷ್ಟೇ. ಮತ್ತೆ ಬೆಂಗಳೂರು ಕತೆಗೆ ಹೊರಳುವ ಮುನ್ನ ಕಳೆದ ಸಂಚಿಕೆಯಲ್ಲಿ ಹೇಳದೇ ಉಳಿಸಿಕೊಂಡಿದ್ದ ಕಟ್ಟ ಕೊನೆ ಕೊನೇ ತುತ್ತು(ಮೊಸರನ್ನದ ಕೊನೇ ತುತ್ತು ತುಂಬಾ ರುಚಿ ಇರುತ್ತೆ ಬಿಡಬಾರದು, ಅದನ್ನ ತಿನ್ಲೇ ಬೇಕು ಊಟ ಮುಗಿಸಿ ಏಳುವ ಮೊದಲು ಅಂತ ನಮ್ಮಜ್ಜಿ ನಿಮ್ಮಜ್ಜೀ ಸಹ ಹೇಳ್ತಾ ಇದ್ರು, ನೆನಪಿದೆ ತಾನೇ)ಉಂಡು ನಂತರ ನಮ್ಮ ಹಾದಿಗೆ ಬರ್ತೀನಿ, ಸರಿ ತಾನೇ?
ಹಿಂದಿನ ಸಂಚಿಕೆ ಕೊನೆಗೆ ಹೇಳಿದ್ದರ ಸಾರಾಂಶ ಇದು…
ಚೇಂಬರ್ ಆಫ್ ಕಾಮರ್ಸ್ ಬಿಲ್ಡಿಂಗ್‌ನಲ್ಲಿ ಪೋಸ್ಟರ್ ಬರೆಯೋಕ್ಕೆ ಹೋಗಿದ್ದು, ನಾನು ಮತ್ತು ನಾಗರಾಜ. ನಾಗರಾಜ ಬ್ಯಾಂಕ್ ಉದ್ಯೋಗಿ ಮತ್ತು ಇಂದಿರಾಗಾಂಧಿ ಅವರ ಬಗ್ಗೆ ತುಂಬಾ ಸಾಫ್ಟ್ ಕಾರ್ನರ್ (ಮೃದು ಭಾವ)ಇದ್ದವನು. ಅಂದರೆ ಅವರ ಭಕ್ತ, ಫ್ಯಾನ್. ಅವರ ಇಪ್ಪತ್ತು ಅಂಶ ನಂತರದ ಐದು ಅಂಶ ಅವನಿಗೆ ಬಾಯಿ ಪಾಠ ಆಗಿತ್ತು. ನಡುರಾತ್ರಿ ಗಾಢ ನಿದ್ರೆಯಲ್ಲಿ ಆರನೇ ಪಾಯಿಂಟ್ ಯಾವುದು ಎಂದು ಕೇಳಿದರೂ ಥಟ್ಟನೆ ಹೇಳುತ್ತಿದ್ದ. ಬಹುಶಃ ಅವನಿಂದಲೇ ಥಟ್ ಅಂತ ಹೇಳಿ ಕಾರ್ಯಕ್ರಮ ಶುರು ಆಯಿತು ಅಂತ ನನ್ನ ಗುಮಾನಿ. ನಾನು ಸುಮ್ನೆ ನಿಂಜೊತೆ ಬರ್ತೀನಿ ಅಷ್ಟೇ ನನಗೆ ಪೋಸ್ಟರ್ ಬರೆಯೋಕ್ಕೆ ಬರಲ್ಲ… ಅಂತ ಹೇಳಿದ. ಜತೆಗೆ ಬಂದಿದ್ದ ನನಗೂ ಪೋಸ್ಟರ್ ಬರೆಯೋದು ಗೊತ್ತಿರಲಿಲ್ಲ. ಆದರೂ ಅದೇನೋ ಹುಮ್ಮಸ್ಸು ಮತ್ತು ಉತ್ಸಾಹ. ಬರೆಯದೇ ಇದ್ದರೆ, ಕಲಿಯದೇ ಇದ್ದರೆ ಯಾವ ವಿದ್ಯೆ ಆದರೂ ಅದು ಹೇಗೆ ಬರುತ್ತೆ, ಕಳ್ಳತನ ಒಂದು ಬಿಟ್ಟು? ಬರೆದೂ ಬರೆದೂ ಕಲಿಬೇಕು ಅನ್ನುವ ಸ್ಕೂಲ್ ಆಫ್ ಥಿಂಕಿಂಗ್ ನನ್ನದು. ಈ ಥಿಂಕಿಂಗ್ ನನ್ನನ್ನು ಎಷ್ಟೋ ಕೆಲಸಗಳಿಗೆ ನೂಕಿದೆ. ಅವತ್ತೂ ಸಹ ಇದೇ ನೂಕಿದ್ದು ಅಲ್ಲಿಗೆ. ಡಿಕ್ಟೇಟರ್‌ನ ಸೋಲಿಸಬೇಕು ಅನ್ನುವ ಇಚ್ಛೆ! ಇಂದಿರಾಗಾಂಧಿ ಅವರನ್ನು ಡಿಕ್ಟೇಟರ್ ಎಂದು ವಿರೋಧ ಪಕ್ಷಗಳು ಬಿಂಬಿಸಿದ್ದವು. ಇಂದಿರಾ ಗಾಂಧಿ ಅಂದರೆ ಲೇಡಿ ಹಿಟ್ಲರ್ ಎಂದೇ ಆಗಿನ ಯುವಕರ ಭಾವನೆ…!
ಚೇಂಬರ್ ಆಫ್ ಕಾಮರ್ಸ್ ಬಿಲ್ಡಿಂಗ್‌ನ ಒಳ ಹೊಕ್ಕೆವು. ಆಗಲೇ ಸುಮಾರು ಯುವಕರು, ಮಧ್ಯ ವಯಸ್ಕರು ಮುದುಕರು ಎಂಬತ್ತು ವಯಸ್ಸಿನವರು ಸಹ ಸೇರಿದ್ದರು. ಪೇಂಟಿಂಗ್ ಮಾಡುವ ಉದ್ದನೆ ಬೋರ್ಡುಗಳು ಸ್ಟ್ಯಾಂಡ್ ಮೇಲೆ ಇರಿಸಿದ್ದರು. ಪಕ್ಕದ ಟೇಬಲ್ಲಿನ ಮೇಲೆ ನ್ಯೂಸ್ ಪ್ರಿಂಟ್ ಪೇಪರ್ ರಾಶಿ ರಾಶಿ ಬಿದ್ದಿದ್ದವು. ಅದರ ಪಕ್ಕ ಹಲವಾರು ಬಣ್ಣ ಬಣ್ಣಗಳ ದೊಡ್ಡ ಪೈಂಟು ಡಬ್ಬ.
ಆಗತಾನೇ ಅಡಿಗರ ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಶುರು ಮಾಡಿದ್ದೆ. ಅವರ ಮತ್ತು ಇತರ ಕವಿಗಳ ಹಲವು ಪದ್ಯಗಳ ಆರಂಭಿಕ ಸಾಲು ನೆನಪಿನಲ್ಲಿ ಇತ್ತು. ಕಟ್ಟುವೆವು ನಾವು ಹೊಸ ನಾಡೊಂದನು…., ನಾನು ಮಾಯವಾದಿಯಾಗಿ ಬಂದೆ, ಇದು ನಮ್ಮ ಮನೆಯ ಕಥೆ, ಕಾಲವ ನಾನು ನಿಂತೆ, ಮರಳಿನಿಂದ ಎಣ್ಣೆ ಹಿಂಡುವ ಗಾಣ ಮೊದಲಾದ ಸಾಲುಗಳು ತಲೆಯಲ್ಲಿ ಆಳವಾಗಿ ಹುದುಗಿತ್ತು…… ಇವು ಅಲ್ಪ ಸಲ್ಪ ಬದಲಾವಣೆ ಒಂದಿಗೆ ಪೇಪರಿನ ಮೇಲೆ ಮೂಡಿದವು…
ಮುಂದೆ…
ಸುಮಾರು ಎರಡು ಗಂಟೆಯಲ್ಲಿ ಹದಿನೈದು ಕನ್ನಡ ಪೋಸ್ಟರ್ ಬರೆದೆ. ಗಣ್ಯರು ಮಂತ್ರಿಗಳು ಚಿಕ್ಕಪುಟ್ಟ ಪುಢಾರಿಗಳು ಬಂದಾಗ ಅಲ್ಲೇ ಇದ್ದ ಪೇಯ್ಡ್ ಫೋಟೋಗ್ರಾಫರು ಓಡಿ ಹೋಗಿ ಪೋಟೋ ತೆಗೀತಿದ್ದ. ಆಗಿನ್ನೂ ಸೆಲ್ ಪೋನ್ ಹೆಸರು ಗೊತ್ತಿರಲಿಲ್ಲ, ಇಂತಹ ಒಂದು ಫೋನು ಮುಂದೆ ನಮ್ಮ ಕೈಲಿ ಇರುತ್ತೆ ಅನ್ನುವ ಕಲ್ಪನೆ ಸಹ ಇರಲಿಲ್ಲ. ಸೆಲ್ ಫೋನ್ ಆಗ ಇದ್ದಿದ್ದರೆ ಆಗ ತೆಗೆದ ಫೋಟೋಗಳು ಎಂತಹ ಖಜಾನೆ ಆಗ್ತಾ ಇತ್ತು ಅಂತ ಎಷ್ಟೋ ಸಲ ಅನಿಸಿದೆ. ಪೇಯ್ಡ್ ಫೋಟೋಗ್ರಾಫರು ಓಡಿ ಹೋಗಿ ಫೋಟೋ ತೆಗೀತಿದ್ದ ಅಂದೇನಲ್ಲಾ, ನಮ್ಮ ಯಾವ ಪೋಟೋ ಸಹ ಅವನು ತೆಗೀಲಿಲ್ಲ. ಪೋಸ್ಟರ್ ಬರೆದು ಆಚೆ ಬಂದರೆ ಗೊತ್ತಿದ್ದ ಒಬ್ಬ ಮರಿ ಲೀಡರು ಸಿಕ್ಕಿದ. ಹೀಗೆ ನಮ್ಮ ಫೋಟೋ ಯಾರೂ ತೆಗಿಲಿಲ್ಲ , ದೊಡ್ಡ ದೊಡ್ಡವರು, ಮಂತ್ರಿಗಳು ಛೋಟಾ ಲೀಡರ್ ಗಳ ಫೋಟೋ ತೆಗೆದ… ಅಂತ ದುಃಖ ತೋಡಿಕೊಂಡೆ. ಕಣ್ಣಂಚಿನಲ್ಲಿ ಒಂದೆರೆಡು ಹನಿ ಇದ್ದಿರಬಹುದು. ಲೀಡರು ಬೆನ್ನ ಮೇಲೆ ಕೈ ಹಾಕಿ ಸಮಾಧಾನ ಮಾಡಿದ ಹೀಗೆ “ಅಯ್ಯೋ ಒಳ್ಳೇದೇ ಆಯ್ತು. blessing in disguise ಇದು. ಅಕಸ್ಮಾತ್ ಈ ರಾಕ್ಷಸಿ ಮುಂದೆ ಗೆದ್ದು ಗವರ್ಮೆಂಟ್ ಫಾರ್ಮ್ ಮಾಡಿ ಮತ್ತೆ ಎಮರ್ಜೆನ್ಸಿ ಹಾಕಿದರೆ ಫೋಟೋದಲ್ಲಿ ಇದ್ದವರು ಜೈಲಿಗೆ ಹೋಗ್ತಾರೆ, ಅದರಿಂದ ತಪ್ಪಿಸಿಕೊಂಡೆ ತಾನೇ….! ಎಂತಹ ಒಳ್ಳೇ ಬ್ಲೆಸಿಂಗ್ ಇದು ಅಲ್ವಾ…..” ಅಂತ.
ರಾಕ್ಷಸಿ ಅಂದರೆ ಇಂದಿರಾಗಾಂಧಿ. ಖಾಸಗಿಯಾಗಿ ಮಾತುಕತೆ ಆಡಬೇಕಾದರೇ ಇಂದಿರಾಗಾಂಧಿ ಅವರನ್ನು ರಾಕ್ಷಸಿ ಅಂತ ಸರಿ ಸುಮಾರು ಎಲ್ಲರೂ ಐಡೆಂಟಿ ಫೈ ಮಾಡೋರು ಭಯದಿಂದಲೇ. ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾಗಾಂಧಿ ಗೆದ್ದರು. ಅವರೆದುರು ನಿಂತು ಸೋತಿದ್ದ ವೀರೇಂದ್ರ ಪಾಟೀಲ್ ಕೆಲ ತಿಂಗಳ ನಂತರ ಇಂದಿರಾಗಾಂಧಿ ಪಾರ್ಟಿ ಸೇರಿದರು. ಇಲ್ಲಿಗೆ ರಾಜಕೀಯದ ಒಂದು ಮಜಲು ಮುಗೀತು.
ಈಗ ಮುಂದಕ್ಕೆ…
ಮಲ್ಲೇಶ್ವರದ ಸಂಗತಿ ಬರೆಯಬೇಕಾದರೆ ರಾಜಾಜಿನಗರದ ಮುಖ್ಯ ರಸ್ತೆಯಲ್ಲಿ ಕೊನೆತನಕ ಬಂದರೆ ನಿಮಗೆ ಸೋಪ್ ಫ್ಯಾಕ್ಟರಿ ಸಿಗುತ್ತೆ, ಅಲ್ಲಿಂದ ಕೊಂಚ ಮುಂದೆ ಬಂದರೆ ರಸ್ತೆ ಕವಲು ಆಗುತ್ತೆ ಎಡಕ್ಕೆ ಹೋದರೆ ತುಮಕೂರು ರಸ್ತೆ, ಬಲಕ್ಕೆ ಹೋದರೆ ಬೆಂಗಳೂರು ಪುರ ಪ್ರವೇಶ. (ಎಡಕ್ಕೆ ಹೋದರೆ ಅಲ್ಲಿಯೂ ಸಹ ಕವಲು. ಒಂದು ಕವಲು ಯಶವಂತಪುರ ಮಾರುಕಟ್ಟೆ, ರೈಲ್ವೆ ಸ್ಟೇಶನ್ ಇತ್ತ ಹೋಗುತ್ತೆ. ಮತ್ತೊಂದು ಕವಲು ಗೊರಗುಂಟೇ ಪಾಳ್ಯ ಸೇರುತ್ತೆ.) ಆ ರಸ್ತೆ ಮಲ್ಲೇಶ್ವರಕ್ಕೆ ಒಯ್ಯುತ್ತೆ ಅಂತ ವಿವರಿಸಿ ಮಲ್ಲೇಶ್ವರ ಹೊಕ್ಕು ಅಲ್ಲಿ ಸುತ್ತಾಡಿದ್ದೆ ತಾನೇ.
ಸೀದಾ ಮಲ್ಲೇಶ್ವರದ ರಸ್ತೆಗೆ ನೀವು ನುಗ್ತೀರಿ. ಕಾಲುಭಾಗ ಬಂದರೆ ಒಂದು ರಸ್ತೆ ಎಡಕ್ಕೆ, ಇದು ನೇರ ಮತ್ತಿಕೆರೆಗೆ. ಇದರ ಟೊಪೊಗ್ರಫಿ ಮುಂದೆ ವಿವರವಾಗಿ ಹೇಳುತ್ತೇನೆ. ರಸ್ತೆಯ ಮುಂದೆ ಸಾಗುತ್ತಾ ಸುಮಾರು ಮಧ್ಯದಲ್ಲಿ ನಿಮಗೆ ಒಂದು ಬಸ್ಸು ಹೋಗಬಹುದಾದ ರಸ್ತೆ ಎಡಕ್ಕೆ ತಿರುಗುತ್ತೆ. ರಸ್ತೆ ತಿರುವಿಗೆ ಬೆನ್ನು ಮಾಡಿ ನಿಂತರೆ ಅದರ ಎದುರು ನಿಮಗೆ ಸುಮಾರು ದೊಡ್ಡ ಮೈದಾನ ಕಾಣಿಸುತ್ತೆ. ಎಡಕ್ಕೆ ತಿರುಗದೆ ಒಂದು ಹತ್ತು ಹದಿನೈದು ಹೆಜ್ಜೆ ಮುಂದೆ ನಡೆದರೆ ಅಲ್ಲೊಂದು ಜಿಂಕ್ ಶೀಟ್ ಹೊದಿಸಿದ ಚಿಕ್ಕ ಶೆಡ್ಡು. ಅದು ಚೆಕ್ ಪೋಸ್ಟ್ ಅಂತ ಆಗ ಹೆಸರು ಮಾಡಿತ್ತು. ಇದು ಬೆಂಗಳೂರಿನ ಎಂಟ್ರಿ ಪಾಯಿಂಟ್‌ಗಳಲ್ಲಿ ಇವೆ ಎಂದು ಕೇಳಿದ್ದೆ. ಹೊರ ಊರುಗಳಿಂದ ಬರುವ ಸರಕು ಸಾಮಗ್ರಿಗಳು ಕಾನೂನಿನ ಪ್ರಕಾರ ನಗರ ಪ್ರವೇಶಿಸುತ್ತಿದೆ ಎಂದು ಖಾತ್ರಿ ಪಡಿಸಿಕೊಳ್ಳಲು ಈ ಚೆಕ್ ಪೋಸ್ಟ್‌ಗಳು ಇದ್ದವು. ಸುಮಾರು ಎಂಬತ್ತರ ದಶಕದವರೆಗೆ ಈ ಚೆಕ್ ಪೋಸ್ಟ್‌ಗಳು ಇದ್ದವು ಮತ್ತು ಕೊನೆಯ ಕೆಲವು ವರ್ಷ ಬರೇ ಶೆಡ್ ಮಾತ್ರ ಇದ್ದವು. ಅರವತ್ತರ ದಶಕದಲ್ಲಿ ಈ ಚೆಕ್ ಪೋಸ್ಟ್‌ಗಳು ಮುಂದೆ ಭರ್ತಿ ತುಂಬಿದ ಲಾರಿಗಳು ಸರದಿ ನಿಂತು ಕಾಯುತ್ತಿದ್ದವು. ನಮ್ಮ ತೆರಿಗೆ ನೀತಿ ಬದಲಾದ ಹಾಗೆ ಈ ಚೆಕ್ ಪೋಸ್ಟ್‌ಗಳು ನಿಧಾನಕ್ಕೆ ಕಣ್ಮರೆಯಾದವು. ಅಂದ ಹಾಗೆ ಈ ಚೆಕ್ ಪೋಸ್ಟ್‌ಗಳು ಕನ್ನಡದಲ್ಲಿ ಉಕ್ಕಡ ಎನ್ನುವ ಹೆಸರಿನಲ್ಲಿ ಪರಿಚಯವಾಗಿತ್ತು. ಮಡಿವಾಳದ ಬಳಿ ಒಂದು ಚೆಕ್ ಪೋಸ್ಟ್ ಅನ್ನು ಎಂಬತ್ತರ ದಶಕದಲ್ಲಿ ನೋಡಿದ್ದೆ. ಹಳೇ ಮದ್ರಾಸ್ ರಸ್ತೆಯಲ್ಲಿ ಒಂದು ಚೆಕ್ ಪೋಸ್ಟ್ ಇದ್ದ ಮಸಕು ಮಸಕು ನೆನಪು. ಈಗ ಚೆಕ್ ಪೋಸ್ಟ್ ಅಂದರೆ, ಅದು ಒಂದು ನಾನ್ ವೆಜ್ ಹೋಟೆಲಿನ ಹೆಸರು, ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯಲ್ಲಿ ಇದರ ಮುಖ್ಯ ಶಾಖೆ ಇದೆ! ಅಂದ ಹಾಗೆ ಇನ್ನೊಂದು ಸಂಗತಿ ಈ ಸಂಗತಿಗೆ ಏನೂ ನೇರ ಸಂಪರ್ಕವೇ ಇಲ್ಲದ್ದು ನೆನಪಾಗುತ್ತಿದೆ. ಏನೋ ಮರೆತೆ ಅನಿಸಿದಾಗ ಮತ್ತೇನೋ ಜಗತ್ತೇ ಮರೆತದ್ದು ತಲೆಯೊಳಗೆ ಧುತ್ತೆಂದು ಧುಮ್ಮಿಕ್ಕಿ ಹರಿಯುತ್ತದೆ! (ನಮ್ಮ ಜೋಗ ಧುಮ್ಮಿಕ್ಕಿ ಹರಿಯುತ್ತಾಳೆ ಎಂದು ಎಲ್ಲೋ ಓದಿದ ನೆನಪು).
ಜಗತ್ತು ಈಗ ಮರೆತ ಒಂದು ಇಂಜಿನಿಯರಿಂಗ್ ಉಪಕರಣದ ನೆನಪು ಬಂತು. ನಮ್ಮ ಕಾಲೇಜು ದಿವಸಗಳಲ್ಲಿ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಲೈಡ್ ರೂಲ್ ಎನ್ನುವ ಒಂದು ಪುಟ್ಟ ಪೆಟ್ಟಿಗೆ ಇಟ್ಟುಕೊಂಡಿರುತ್ತಿದ್ದರು. ಅದರಲ್ಲಿ ಕೆಲವು ಸ್ಕೇಲ್‌ಗಳು ಇರುತ್ತಿದ್ದವು ಮತ್ತು ಆ ಸ್ಕೇಲ್‌ಗಳು ನಾವು ಉಪಯೋಗಿಸುತ್ತಿದ್ದ ಇಂಚು ಸೆಂಟಿಮೀಟರ್ ಸ್ಕೇಲ್‌ಗಳಿಗಿಂತ ಭಿನ್ನವಾಗಿತ್ತು. ಅದರ ಮೇಲೆ ಅದೇನೋ ಅಂಕಿಗಳು, ಸೈನ್‌ಗಳು ಹೀಗೆ. ನನ್ನ ಕಾಲೇಜು ಜೀವನದಲ್ಲಿ ಈ ಸ್ಲೈಡ್ ರೂಲ್ ನಾನು ಉಪಯೋಗಿಸಿರಲಿಲ್ಲ, ಕಾರಣ ನಾನು ಓದಿದ್ದು ಬಿಎಸ್ಸಿ. ಆಗ ಬಿಎಸ್ಸಿಗೆ ಸ್ಲೈಡ್ ರೂಲ್ ಪಾಠ ಇರಲಿಲ್ಲ.
ಕಾಲೇಜು ಮುಗಿಸಿ ಅದೆಷ್ಟೋ ವರ್ಷಗಳ ನಂತರ ಸ್ಲೈಡ್ ರೂಲ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹುಟ್ಟಿತು. ಬೆಂಗಳೂರು ಬುಕ್ ಬ್ಯೂರೋಗೆ ಹೋಗಿ learn your self Slide Rule ಎನ್ನುವ ಸುಮಾರು ನೂರು ಪುಟದ ಪುಸ್ತಕ ಕೊಂಡಿದ್ದೆ, ಆಗ ಅದಕ್ಕೆ ಒಂದೂವರೆ ರುಪಾಯಿ. ಹಾಗೇ ಅವೆನ್ಯೂ ರಸ್ತೆಗೆ ನಡೆದು ಅಲ್ಲಿನ ಸುಭಾಷ್ ಬುಕ್ ಸ್ಟೋರ್ಸ್‌ನಿಂದ ಒಂದು ಸ್ಲೈಡ್ ರೂಲ್ ಬಾಕ್ಸ್ ತಂದಿದ್ದೆ. ಅದಕ್ಕೆ ಇಪ್ಪತ್ತು ಕೊಟ್ಟ ನೆನಪು. ಎರಡು ತಿಂಗಳು ಕಷ್ಟಪಟ್ಟು ಪುಸ್ತಕ ಓದಿ ಸ್ವಯಂ ಓದಿನ ಮೂಲಕ ಸ್ಲೈಡ್ ರೂಲ್ ಉಪಯೋಗಿಸುವ abcd ತಿಳಿದುಕೊಂಡಿದ್ದೆ. ಅದು ನಂತರ ಅಷ್ಟು ಉಪಯೋಗಿಸದೆ ಇದ್ದ ಕಾರಣ ಎಲ್ಲವೂ ಮರೆ ಆಯಿತು. ಮೊನ್ನೆ ಅಟ್ಟದ ಮೇಲಿನ ಪುಸ್ತಕ ಕೆಳಗೆ ಇಳಿಸಿ ಲಿಸ್ಟ್ ಮಾಡಬೇಕಾದರೆ ಈ ಸ್ಲೈಡ್ ರೂಲ್ ಪುಸ್ತಕ ಸಿಗಬೇಕೇ?(ಅಟ್ಟದ ಮೇಲಿನ ಪುಸ್ತಕದ ವಿಲೇವಾರಿ ಬಗ್ಗೆ ಒಂದು ದೊಡ್ಡ ಕಥಾನಕ ಇದೆ. ಮುಂದೆ ಯಾವಾಗಲಾದರೂ ತಿಳಿಸುತ್ತೇನೆ) ಪುಸ್ತಕ ತೆಗೆದು ತಿರುವಿ ಹಾಕಿದೆ…
ಮಾರನೇ ದಿವಸ ನನಗಿಂತ ವಯಸ್ಸಿನಲ್ಲಿ ಸುಮಾರು ಚಿಕ್ಕವರಾದ ಸ್ನೇಹಿತರ ಬಳಿ ಈ ಸ್ಲೈಡ್ ರೂಲ್ ವಿಷಯ ತೆಗೆದೆ. ಅವರಿಗೆ ಹೀಗೊಂದು ಉಪಕರಣ ಇತ್ತು ಅಥವಾ ಇದೆ ಎಂದೇ ಗೊತ್ತಿಲ್ಲ ಎಂದರು! ನಾವು ಓದಬೇಕಾದರೆ ಹೊಸಹೊಸ ಕ್ಯಾಲ್ಕುಲೇಟರ್ ಇದ್ದವು, ಅದರ ಮೂಲಕ ಕ್ಲಿಷ್ಟ ಲೆಕ್ಕದ ಸಮಸ್ಯೆ ಪರಿಹಾರ ಸಿಕ್ಕುತ್ತಿತ್ತು. ಅದರಿಂದ ಸ್ಲೈಡ್ ರೂಲ್ ನಮಗೆ ಗೊತ್ತೇ ಇಲ್ಲ ಅಂದರು. ಹೊಸಹೊಸ ಆವಿಷ್ಕಾರಗಳಿಂದ ಮೂಲೆ ಸೇರಿದ ಅಸಂಖ್ಯಾತ ಉಪಕರಣಗಳಲ್ಲಿ ಇದೂ ಒಂದು. ಅದೆಷ್ಟೋ ಸಲಕರಣೆಗಳು ಒಂದು ಕಾಲದಲ್ಲಿ ಅವು ಇಲ್ಲದೇ ಜೀವನ ಸಾಧ್ಯವೇ ಇಲ್ಲ ಎಂದು ತಿಳಿದವು ಈಗ ಕಾಲಗರ್ಭದಲ್ಲಿ ಹೂತು ಹೋಗಿವೆ!
ಚೆಕ್ ಪೋಸ್ಟ್ ಬಗ್ಗೆ ಹೇಳುತ್ತಿದ್ದೆ. ಚೆಕ್ ಪೋಸ್ಟ್ ಪಕ್ಕದ ರಸ್ತೆಗೆ ಬೆನ್ನು ಮಾಡಿ ಎದುರು ನೋಡಿದರೆ ಒಂದು ದೊಡ್ಡ ಮೈದಾನ ಇತ್ತು. ಈ ಮೈದಾನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ (IISc ಐಐಎಸ್ಸಿ ಗೆ) ಸೇರಿದ್ದು. ಅರವತ್ತರ ದಶಕದಲ್ಲಿ ಅದು ದೊಡ್ಡ ಬಯಲು ಮತ್ತು ತುಮಕೂರು ರಸ್ತೆಗೆ ಅಂಟಿಕೊಂಡ ಹಾಗೇ ಇದ್ದದ್ದು. ಈಗ ಅದು IISc ಜಮಖಾನ ಮೈದಾನ ಎಂದು ಹೆಸರು ಪಡೆದಿದೆ.
ಈಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕತೆಯನ್ನು ತುಂಬಾ ಪುಟ್ಟದಾಗಿ ಹೇಳಿಬಿಡುತ್ತೇನೆ. IISC ಸ್ಥಾಪನೆಗೆ ಸಂಬಂಧಿಸಿದ ಒಂದು ಲೇಖನ ಕಳೆದ ವರ್ಷ ಓದಿದ್ದೆ. ಲೇಖನದ ಕೆಲವು ಅಂಶಗಳು ಇವು.
ರಾಷ್ಟ್ರಕ್ಕಾಗಿ ಸಂಸ್ಥೆ: ಐಐಎಸ್‌ಸಿ ತಯಾರಿಕೆಯಲ್ಲಿ ವಿವೇಕಾನಂದ ಮತ್ತು ನಿವೇದಿತಾ ಪಾತ್ರ
1893 ರ ಬೇಸಿಗೆಯಲ್ಲಿ ಇಬ್ಬರು ಭಾರತೀಯರು ಜಪಾನ್‌ನ ಯೊಕೊಹಾಮಾದಿಂದ ಕೆನಡಾದ ವ್ಯಾಂಕೋವರ್‌ಗೆ ಹಡಗಿನಲ್ಲಿ ಒಟ್ಟಿಗೆ ಪ್ರಯಾಣಿಸಿದರು. ಅವರಲ್ಲಿ ಒಬ್ಬರು 30 ವರ್ಷದ ಯುವ ಅಪರಿಚಿತ ಸನ್ಯಾಸಿ ಮತ್ತು ಇನ್ನೊಬ್ಬರು ಅತ್ಯಂತ ಯಶಸ್ವಿ ವ್ಯಾಪಾರಿ-ಕೈಗಾರಿಕೋದ್ಯಮಿ.. ಅವರಿಬ್ಬರೂ ಭಾರತೀಯರಿಗೆ ಕೇವಲ ವಿಜ್ಞಾನದಲ್ಲಿ ಮಾತ್ರವಲ್ಲದೆ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ಬಗ್ಗೆ ಮಾತನಾಡಿದರು, ಇದರಿಂದಾಗಿ ದೇಶದ ಅಗತ್ಯತೆಗಳನ್ನು ಅದರ ದೇಶೀಯ ಉತ್ಪಾದನೆಯಿಂದ ಗಣನೀಯವಾಗಿ ಪೂರೈಸಬಹುದು ಎನ್ನುವುದು ಅವರ ಯೋಚನೆ. ಆದರೆ ಆಗಿನ ಪ್ರತಿಕೂಲ ಆಡಳಿತದ ದಿನಗಳಲ್ಲಿ ಇದು ಸುಲಭದ ಕೆಲಸವಲ್ಲ ಎಂದು ಇಬ್ಬರಿಗೂ ತಿಳಿದಿತ್ತು.
ಹಡಗು ದಡ ಸೇರಿತು. ಇಳಿದು ಒಬ್ಬರಿಗೊಬ್ಬರು ವಿದಾಯ ಹೇಳಿದರು. ಮತ್ತೆ ಭೇಟಿ ಮಾಡುವ ಯಾವುದೇ ಯೋಚನೆ ಇಬ್ಬರಿಗೂ ಇರಲಿಲ್ಲ. ಕೈಗಾರಿಕೋದ್ಯಮಿಯು ಸನ್ಯಾಸಿಯ ಹೆಸರನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅಲ್ಲಿಯವರೆಗೆ, ತನ್ನನ್ನು ಹೆಸರಿಲ್ಲದೆ ಕೇವಲ ಸನ್ಯಾಸಿನ್ ಎಂದು ಪರಿಚಯಿಸಿಕೊಳ್ಳುವ ಪ್ರವೃತ್ತಿಯನ್ನು ಸನ್ಯಾಸಿ ಹೊಂದಿದ್ದರು.
ಐದು ವರ್ಷಗಳು ಕಳೆದವು. ಸನ್ಯಾಸಿ ನಾಲ್ಕು ವರ್ಷಗಳ ನಂತರ ಪಶ್ಚಿಮದಿಂದ ಮರಳಿದರು. ಉಪಖಂಡದಾದ್ಯಂತ ಹಲವಾರು ಪಟ್ಟಣಗಳು ಮತ್ತು ನಗರಗಳಲ್ಲಿ ಅವರಿಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಪತ್ರಿಕೆಗಳಲ್ಲಿಯೂ ವರದಿ ಪ್ರಕಟ ಆಯಿತು. ವರದಿ ಓದಿದ ಕೈಗಾರಿಕೋದ್ಯಮಿಗೆ ಹಡಗಿನಲ್ಲಿ ಸಿಕ್ಕ ಸನ್ಯಾಸಿ ಸ್ವಾಮಿ ವಿವೇಕಾನಂದ ಎಂದು ಅರಿವಾಯಿತು. ಜಮ್ಶೆಡ್ ಜಿ ಟಾಟಾ, ಇದು ಕೈಗಾರಿಕೋದ್ಯಮಿ ಹೆಸರು. ಅವರು ಸ್ವಾಮಿ ವಿವೇಕಾನಂದರಿಗೆ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ತಮ್ಮ ಮಾತುಕತೆಯನ್ನು ನೆನಪಿಸಿ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಯೋಜನೆಗೆ ಸಂಬಂಧಿಸಿದಂತೆ ಸ್ವಾಮಿಗಳ ಯೋಚನೆಗೆ ಸಹಮತ ಇದೆ ಎಂದು ತಿಳಿಸುತ್ತಾರೆ.
ಟಾಟಾ ಅವರ ಪತ್ರದಲ್ಲಿನ ಪ್ರಸ್ತಾಪ
………200,000 ಪೌಂಡ್ ಸ್ಟರ್ಲಿಂಗ್ (ಅಂದು ಸುಮಾರು 30 ಲಕ್ಷ ರೂ.) ಉಡುಗೊರೆಯಾಗಿ ನೀಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ, “ದೇಶದ ಸಮಸ್ಯೆಗಳ ಕುರಿತು ಸಂಶೋಧನೆಗಳನ್ನು ಕೈಗೊಳ್ಳಲು ಈ ದೇಶದ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ರಾಷ್ಟ್ರೀಯವಾಗಿ ವ್ಯಾಪಕವಾಗಿ ವರದಿಯಾಗಿದೆ. ಉಷ್ಣವಲಯದ ಕಾಯಿಲೆಗಳು ಅಥವಾ ಉಷ್ಣವಲಯದ ರಸಾಯನಶಾಸ್ತ್ರ, ನಮ್ಮ ರಾಷ್ಟ್ರೀಯ ಇತಿಹಾಸ ಮತ್ತು ಭಾರತೀಯ ಭಾಷಾಶಾಸ್ತ್ರದ ವಿಶಾಲವಾದ ಮತ್ತು ನಿರ್ಲಕ್ಷಿಸಲ್ಪಟ್ಟ ವಸ್ತುಗಳನ್ನು ತನಿಖೆ ಮಾಡಲು ಮತ್ತು “ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳನ್ನು ಪತ್ತೆಹಚ್ಚಲು, ಅಲ್ಲಿ ವಿದ್ಯಾರ್ಥಿಗಳು ಶ್ರೇಷ್ಠ ಶಿಕ್ಷಕರ ನಿರ್ದೇಶನದಲ್ಲಿ ಕೆಲಸ ಮಾಡಬಹುದು.”
ಸ್ವಾಮಿ ವಿವೇಕಾನಂದರು ಈ ಕಾರ್ಯವನ್ನು ಸಹಜವಾಗಿ ಈ ಸಾಹಸದ ನಾಯಕತ್ವವನ್ನು ನೇರವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಯೋಜನೆಗೆ ಶುಭ ಹಾರೈಸಿದ ಅವರು ಯೋಜನೆಯ ಬಗ್ಗೆ ತಮ್ಮ ಯೋಚನೆಗಳನ್ನು ತಮ್ಮ ಕೆಲವು ಶಿಷ್ಯರ ಸಂಗಡ ಹಂಚಿಕೊಂಡರು. ಹೀಗೆ ವಿಷಯ ತಿಳಿದವರಲ್ಲಿ ಸಿಸ್ಟರ್ ನಿವೇದಿತಾ ಸಹ ಒಬ್ಬರು.
ಈ ಮಧ್ಯೆ ಟಾಟಾ ಅವರು ವೈಸರಾಯ್ ಲಾರ್ಡ್ ಕರ್ಜನ್ ಅವರನ್ನು ಭೇಟಿಯಾದರು. ವೈಸರಾಯ್ ಈ ಕಲ್ಪನೆಯನ್ನು ಅಪ್ರಾಯೋಗಿಕವೆಂದು ತಳ್ಳಿಹಾಕಿದರು. ಭಾರತೀಯರಿಗೆ ವಿಜ್ಞಾನದಲ್ಲಿ ಸಂಶೋಧನೆಯಲ್ಲಿ ತೊಡಗುವ ಮನೋಧರ್ಮವಿಲ್ಲ ಎಂದು ಅವರು ಭಾವಿಸಿದ್ದರು, ಸಂಸ್ಥೆಗೆ ಸಾಕಷ್ಟು ಸಮರ್ಥ ಅಭ್ಯರ್ಥಿಗಳು ಸಿಗುವುದಿಲ್ಲ ಎಂದು ಅವರು ಭಾವಿಸಿದರು ಮತ್ತು ಅಂತಹ ತರಬೇತಿಯ ನಂತರ ವಿದ್ಯಾರ್ಥಿಗಳ ಉದ್ಯೋಗಾವಕಾಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಇದನ್ನು ಅನುಸರಿಸಿ, ಸ್ವಾಮಿಗಳ ಶ್ರೇಷ್ಠ ಶಿಷ್ಯೆ, ಸೋದರಿ ನಿವೇದಿತಾ, ಈ ಮಹಾನ್ ದೇಶಪ್ರೇಮಿ-ಕೈಗಾರಿಕೋದ್ಯಮಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಕ್ರಿಯವಾಗಿ ಪ್ರಚಾರ ಮಾಡಲು ಪ್ರಾರಂಭಿಸಿದರು ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದರು. ಸರ್ಕಾರವು 1900 ರಲ್ಲಿ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಸರ್ ವಿಲಿಯಂ ರಾಮ್ಸೆ ಅವರಿಗೆ ಈ ಪ್ರಸ್ತಾಪದ ಬಗ್ಗೆ ವರದಿಯನ್ನು ಕೇಳಿತು. ತನ್ನ ವರದಿಯಲ್ಲಿ ರಾಂಸೆ ಅವರು ಪ್ರಸ್ತಾಪವನ್ನು ತಿರಸ್ಕರಿಸಿದರು. ಅಷ್ಟು ದೊಡ್ಡ ಮೊತ್ತದ ದೇಣಿಗೆ ಬಗ್ಗೆ ಆಕರ್ಷಿತರಾಗಿದ್ದ ವೈಸರಾಯ್ ಮತ್ತು ಇತರರು ಟಾಟಾ ಅವರು ತಮ್ಮ ದೇಣಿಗೆ ನೀಡಲಿ ಮತ್ತು ಸರ್ಕಾರ ಈ ಬಗ್ಗೆ ತೀರ್ಮಾನಿಸುತ್ತದೆ ಎನ್ನುವ ನಿಲುವಿಗೆ ಬರುತ್ತಾರೆ.. ಟಾಟಾ ಅವರು ದೇಣಿಗೆ ಕೊಟ್ಟು ಸುಮ್ಮನೆ ಕೂದಲು ಸಿದ್ಧರಿಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ.
ಹೀಗಾಗಿ ವಿಷಯ ಬಿಕ್ಕಟ್ಟಿನಲ್ಲಿಯೇ ಉಳಿಯಿತು. ನಿವೇದಿತಾ ಅವರ ಪ್ರಯತ್ನ ಮುಂದುವರಿದೆ ಇತ್ತು ಮತ್ತು ಬ್ರಿಟಿಷ್ ಸರ್ಕಾರ ಒಂದಲ್ಲ ಒಂದು ನೆವದಿಂದ ಈ ಯೋಜನೆಗೆ ಸಮ್ಮತಿ ಕೊಟ್ಟಿರಲಿಲ್ಲ.
ಈ ಸಮಯದಲ್ಲಿ ನಿವೇದಿತಾ ಅವರು ಈ ವಿಷಯದ ಬಗ್ಗೆ ವ್ಯಾಪಕವಾದ ಸಾರ್ವಜನಿಕ ಅಭಿಪ್ರಾಯವನ್ನು ಒಟ್ಟುಗೂಡಿಸಲು ಯೋಚಿಸಿದರು ಮತ್ತು ಹಲವಾರು ಪ್ರಮುಖ ವಿಶ್ವ-ಚಿಂತಕರಿಗೆ ಪತ್ರ ಬರೆದರು, ಅವರಲ್ಲಿ ಅನೇಕರು ವೈಯಕ್ತಿಕವಾಗಿ ಅವರ ಸಂಪರ್ಕದಲ್ಲಿದ್ದರು, ಅಂತಹ ಸಂಸ್ಥೆಯ ಅಗತ್ಯ ಮತ್ತು ಅಪೇಕ್ಷಣೀಯತೆಯ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ವಿನಂತಿಸಿದರು.
ಅಮೇರಿಕನ್ ಮನಶ್ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಹಾರ್ವರ್ಡ್‌ನ ವಿಲಿಯಂ ಜೇಮ್ಸ್ ಅವರ ಬೆಂಬಲ ಪಡೆದರು. ವಿಲಿಯಂ ಜೇಮ್ಸ್ ಬರೆದಿದ್ದಾರೆ, “ಭಾರತದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಶ್ರೀ ಟಾಟಾ ಅವರ ಯೋಜನೆಗೆ ಸಂಬಂಧಿಸಿದಂತೆ, ಅವರ ಉದ್ದೇಶವನ್ನು ಸಾಧಿಸಲು ಇಂತಹ ನಿರ್ವಹಣೆಯನ್ನು ಸಂಪೂರ್ಣವಾಗಿ ರಾಷ್ಟ್ರೀಯ ಮಾರ್ಗಗಳಲ್ಲಿ ನಡೆಸಬೇಕು ಎಂದು ನಾನು ಭಾವಿಸುತ್ತೇನೆ.” ಅವರು ಈ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಭಾರತದ ಎಲ್ಲಾ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯವನ್ನು ಮತ್ತು ಸರ್ಕಾರದ ನಿಯಂತ್ರಣದಿಂದ ಸ್ವಾತಂತ್ರ್ಯವನ್ನು ಸೂಚಿಸಿದರು. ಅಂದರೆ ಅಟನಾಮಸ್ ಸ್ಥಾನ.
ಈ ನಡುವೆ ವಿವೇಕಾನಂದರು ಮತ್ತು ಟಾಟಾ ನಿಧನರಾದರು. ಅವರ ಜೀವಿತಾವಧಿಯಲ್ಲಿ ಅವರ ಕನಸು ಬೆಳಗಲಿಲ್ಲ. ಆದರೆ ಈ ಪ್ರಸ್ತಾಪವನ್ನು ಅಂತಿಮವಾಗಿ ಲಾರ್ಡ್ ಮಿಂಟೋ ಅವರು 1909 ರಲ್ಲಿ ಅನುಮೋದಿಸಿದರು, ಅವರು ಲಾರ್ಡ್ ಕರ್ಜನ್ ನಂತರ ವೈಸರಾಯ್ ಆಗಿ ಬಂದರು. ಇನ್ಸ್ಟಿಟ್ಯೂಟ್‌ನ ಸ್ಥಳಕ್ಕಾಗಿ ಟಾಟಾ ಅವರ ಆಯ್ಕೆಯು ಅವರ ಸ್ವಂತ ನಗರವಾದ ಬಾಂಬೆಯಾಗಿದ್ದರೂ, ನಂತರದ ಪರಿಸ್ಥಿತಿಗಳು ಅದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಕಾರಣವಾಯಿತು, ಮೈಸೂರು ರಾಜ್ಯದ ಆಡಳಿತಗಾರ ಮಹಾರಾಜ ಕೃಷ್ಣರಾಜ್ ಒಡೆಯರ್ ಅವರು 370 ಎಕರೆಗಳನ್ನು ಉಡುಗೊರೆಯಾಗಿ ನೀಡಿದರು. ಮಹಾರಾಜರ ತಂದೆ ಎಚ್.ಎಚ್.ಚಾಮರಾಜ ಒಡೆಯರ್ ಅವರು ವಿವೇಕಾನಂದರ ನಿಷ್ಠಾವಂತ ಶಿಷ್ಯರಾಗಿದ್ದರು ಮತ್ತು ಅವರನ್ನು ಪಶ್ಚಿಮಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದಕ್ಕೆ ಪೂರಕವಾಗಿ ಹಲವು ನೆರವನ್ನೂ ನೀಡಿದ್ದರು.
ಅದರ ಅಂತಿಮ ರೂಪವು ನಿಖರವಾಗಿ ಟಾಟಾ ಬಯಸಿದ ರೂಪದಲ್ಲಿಲ್ಲದಿದ್ದರೂ (ವಿಜ್ಞಾನ ಮತ್ತು ಮಾನವಿಕ ವಿಜ್ಞಾನ ಎರಡನ್ನೂ ಅದರ ಕೇಂದ್ರೀಕೃತ ಕ್ಷೇತ್ರಗಳಾಗಿ ಹೊಂದಿದೆ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು (ಟಾಟಾ ಇನ್‌ಸ್ಟಿಟ್ಯೂಟ್‌ಗೆ ನಂತರ ಈ ಹೆಸರಾಯಿತು) ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಸಾಕಷ್ಟು ಮಟ್ಟಿಗೆ, ಭಾರತೀಯ ವಿಜ್ಞಾನ ಸಂಸ್ಥೆಗಳು ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಂತಹ ವಿಶೇಷ ಸಂಸ್ಥೆಗಳ ಹೋಸ್ಟ್‌ಗಳ ಜ್ಞಾನ-ಇನ್ಕ್ಯುಬೇಟರ್ ಆಗಿ ಕಾರ್ಯನಿರ್ವಹಿಸಿದೆ.
ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ. ದೇಶವನ್ನು ಮುಂದೆ ತಂದವರನ್ನ ಮತ್ತು ಅವರ ನೆನಪಿಗಾಗಿ ಏನೂ ಮಾಡದಿರುವುದು ನಮ್ಮ ರಕ್ತದಲ್ಲಿ ಬಂದಿದೆ, ಒಂದು ರೀತಿ ಕೃತಘ್ನರು ನಾವು.
ಇದು ಮೂಲ ಲೇಖನದ ಸಂಕ್ಷಿಪ್ತ ರೂಪ. ಸಂಸ್ಥೆ ಸ್ಥಾಪನೆಗೊಳ್ಳಲು ಭೇಟಿ ಮಾಡಿದ ಬ್ರಿಟಿಷ ಸಾಮ್ರಾಜ್ಯದ ಆಡಳಿತ ನಡೆಸುತ್ತಿದ್ದ ಹಲವರ ಹೆಸರುಗಳು, ಪಟ್ಟ ಶ್ರಮ, ಹಾಕಿದ ಒತ್ತಡ… ಮುಂತಾದ ಸಂಪೂರ್ಣ ವಿವರಗಳು ಲೇಖನದ ತುಂಬಾ ಇದೆ. ಇಂತಹ ಒಂದು ಸಂಸ್ಥೆಯನ್ನು ನಡೆಸಲು ಭಾರತೀಯರು ಅಸಮರ್ಥರು ಎಂದು ಕೆಲವು ಬ್ರಿಟಿಷ್ ಅಧಿಕಾರಿಗಳು ಅಭಿಪ್ರಾಯ ಪಟ್ಟರೆ ಯೋಜನೆಯ ಹೆಸರು ವಿವರ ಕೇಳಿದ ಹಲವಾರು ವಿಜ್ಞಾನಿಗಳು ಕೊಂಕು ನಗೆ ಬೀರುತ್ತಾರೆ, ಹೊಸಾ ಯೋಜನೆ ಯಾರೆಷ್ಟು ಪಾಲು ಪಡೆಯುತ್ತೀರಿ ಎಂದು ಕುಹಕ ವಾಡುತ್ತಾರೆ.
ಇಷ್ಟೆಲ್ಲಾ ಅಡೆತಡೆಗಳ ನಡುವೆ ಮುಂಬೈಯಲ್ಲಿ ಸ್ಥಾಪಿತವಾಗಬೇಕಿದ್ದ ಸಂಸ್ಥೆ ನಮ್ಮಲ್ಲಿಗೆ, ನಮ್ಮ ರಾಜ್ಯಕ್ಕೆ, ರಾಜ್ಯದ ರಾಜಧಾನಿ ಬೆಂಗಳೂರಿಗೆ ಬರುತ್ತದೆ ಮತ್ತು ವಿಶ್ವದ ಅತ್ಯಂತ ವಿಶ್ವಾಸಾರ್ಹ ವಿದ್ಯಾ ಸಂಸ್ಥೆಯಾಗಿ ಹೆಸರು ಮಾಡುತ್ತದೆ. ದೇಶ ವಿದೇಶಗಳಿಂದ (ಇಲ್ಲಿನ ಜನಕ್ಕೆ ಇಂತಹ ಸಂಸ್ಥೆಯ ಅಗತ್ಯವಿಲ್ಲ ಎಂದು ಹೇಳಿದ್ದ ಬ್ರಿಟನ್ ಸೇರಿದಂತೆ) ವಿಜ್ಞಾನಿಗಳು ಇಲ್ಲಿ ಅಧ್ಯಯನಕ್ಕಾಗಿ ಬರುತ್ತಾರೆ. ಇಂದು IISc ವಿಶ್ವದ ಅತಿ ಶ್ರೇಷ್ಠ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ಮುಂಚೂಣಿಯಲ್ಲಿ ಕಾಣಿಸುವ ಹೆಸರು.
ಯಶವಂತಪುರದ ಒಳಭಾಗಕ್ಕೆ ಚೆಕ್ ಪೋಸ್ಟ್ ಪಕ್ಕದ ದಾರಿಯಲ್ಲಿ ಬಂದರೆ ಈ IISc ಕಟ್ಟಡದ ಹಿಂಭಾಗಕ್ಕೆ ಬರುತ್ತೇವೆ. ಬೆಳಿಗ್ಗೆ ಸಂಜೆ ಸುತ್ತಮುತ್ತಲಿನ ಹಲವಾರು ನಾಗರಿಕರು ಇಲ್ಲಿನ ಉದ್ಯಾವನಕ್ಕೆ ವಾಯುವಿಹಾರಕ್ಕೆ ಬರುತ್ತಾರೆ. IISc ಕಟ್ಟಡದ ಮುಂಭಾಗ ಚೆಕ್ ಪೋಸ್ಟ್ ಹಾದಿಯಲ್ಲಿ ಮುಂದುವರೆದರೆ ಅಲ್ಲೇ ಎಡಭಾಗದಲ್ಲಿದೆ. ಅದರಲ್ಲಿ ಒಂದು ಎತ್ತರದ ಕಟ್ಟಡಕ್ಕೆ ಗೋಪುರದ ವಿನ್ಯಾಸ ಮಾಡಲಾಗಿತ್ತು. ಅದರ ತುದಿಯಲ್ಲಿ ಒಂದು ಗಡಿಯಾರ ಸಹ ಇತ್ತು. ಗೋಪುರದ ಗಡಿಯಾರ ಅಂದಿನ ಫ್ಯಾಶನ್. ಈ ಗೋಪುರ ರಾಜಾಜಿನಗರದ ನಮ್ಮ ಮನೆ ಮುಂದೆ ನಿಂತರೆ ಕಾಣುತ್ತಿತ್ತು, ಇದು ಸುಮಾರು ಎಪ್ಪತ್ತರ ದಶಕದಲ್ಲಿ. ಯಶವಂತ ಪುರದ ಚೆಕ್ ಪೋಸ್ಟ್ ಒಳ ಹೊಕ್ಕರೆ ಆಗ ಎಡಭಾಗವೂ ಸಹ ಮೈದಾನ ಇತ್ತು. ನಂತರ ಅಲ್ಲಿ ಒಂದು ವಿದ್ಯಾಶಾಲೆ ಶುರುವಾಯಿತು.
IISc ಹಿಂಭಾಗದ ಪಕ್ಕದಲ್ಲಿ ಒಂದು ರುದ್ರಭೂಮಿ ಸುಮಾರು ವರ್ಷ ಇತ್ತು. ಈಗ ಸುತ್ತ ಮುತ್ತ ಬಹು ಮಹಡಿ ಕಟ್ಟಡಗಳು ತಲೆ ಎತ್ತಿವೆ ಮತ್ತು ರುದ್ರಭೂಮಿ ಜಾಗ ಕಿರಿದು ಆಗುತ್ತಾ ಬಂದಿದೆ. ಈಗಲೂ ಆಗಾಗ್ಗೆ ರಸ್ತೆ ತುಂಬಾ ಕಿತ್ತ ಹೂವಿನ ಹಾರದ ತುಂಡುಗಳು ಬಿದ್ದಿರುವುದು ನೋಡಿದರೆ ಸ್ಮಶಾನದ ಅವಶೇಷ ಇನ್ನೂ ಇದೆ ಅನಿಸುತ್ತದೆ. ಕೊಂಚ ಮುಂದೆ ಹೋದರೆ ಅಲ್ಲೊಂದು BTS ಬಸ್ ಸ್ಟಾಪ್ ತೊಂಬತ್ತರ ಕೊನೆಗೆ ಶುರು ಆಯಿತು.
ಅಂದಹಾಗೆ ನಿಮಗೆ ಯಶವಂತಪುರ ಅನ್ನುವ ಹೆಸರು ಹೇಗೆ ಬಂದಿತು ಎಂದು ಹೇಳಬೇಕು. ಅದೇ ಯಶವಂತಪುರದ ನಿವಾಸಿ ಆಗಿದ್ದ ಗೆಳೆಯ ನಾರಾಯಣ ಮೂರ್ತಿ ಅವರನ್ನು ಮೊನ್ನೆ ಈ ಬಗ್ಗೆ ವಿಚಾರಿಸಿದೆ. ಮಹಾರಾಷ್ಟ್ರದ ಕಡೆಯಿಂದ ಕೆಲವು ಜನ ಗುಂಪು ಗುಂಪಾಗಿ ಬಂದು ಇಲ್ಲಿ ನೆಲೆಸಿದರು ಗುಂಪಿನ ನಾಯಕ ಯಶವಂತ ಪಾಟೀಲ್ ಎಂದೋ ಏನೋ. ಅದೇ ಹೆಸರು ಮುಂದುವರೆಯಿತು ಎಂದರು. ಜತೆಗೆ ಅಲ್ಲಿಗೆ ಸಂಬಂಧಪಟ್ಟ ಎಲ್ಲೂ ದಾಖಲಾಗಿರದ ಹಲವು ಸಂಗತಿಗಳನ್ನೂ ಹೇಳಿದರು. ಮುಂದೆ ಅದನ್ನೇ ಸೇರಿಸುತ್ತಾ ಹೋಗುತ್ತೇನೆ. ಈಗ ಯಶವಂತಪುರ ಹೆಸರಿನ ಬಗ್ಗೆ…
ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಯಶವಂತ ರಾಯ ಎನ್ನುವವರು ಯಶವಂತಪುರದ ಪಾಳೆಗಾರರಾಗಿದ್ದರು. ಆಗ ಒಂದು ಪುಟ್ಟ ಹಳ್ಳಿ. ಪಾಳೆಗಾರರ ಹೆಸರೇ ಪುಟ್ಟ ಹಳ್ಳಿಗೆ ಬಂದದ್ದು. ಇನ್ನೊಂದು ಕತೆ ನನ್ನ ಸ್ನೇಹಿತ ಹಾಸ್ಯ ಬರೆಹಗಾರ ಹೇಳಿದ್ದು. ಯಶವಂತ ರಾವ್ ಬಲವಂತ ರಾವ್ ಚವಾಣ್ ಎನ್ನುವವರು ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಮಂತ್ರಿಯಾಗಿ ಹಲವಾರು ಪ್ರತಿಷ್ಠಿತ ಹುದ್ದೆ ನಿರ್ವಹಿಸಿದ್ದರು. ಇಲ್ಲಿನ ಲೋಕಲ್ ಕಾಂಗ್ರೆಸ್ ನಾಯಕರು ಅವರ ಫ್ಯಾನ್ಸ್ ಆಗಿದ್ದರು. ಅವರ ಹೆಸರಲ್ಲಿ ಈ ಯಶವಂತಪುರ ಹುಟ್ಟಿತು ಅಂತ. ಹಿಂದೆ ಕುಮಾರಸ್ವಾಮಿ ಲೇಔಟ್ ಬಗ್ಗೆ ಆ ಹೆಸರು ಬಂದಿದ್ದ ರೀತಿ ಹೇಳಿದ್ದರು. ಹೇಳಿ ಕೇಳಿ ಹಾಸ್ಯ ಪಾಸ್ಯ ಬರೆಯೋದು ಅವರ ಚಟ. ಅವರ ಸ್ಥಳ ಪುರಾಣ ನಗೆ ಹುಟ್ಟಿಸಿತು. ಇನ್ನೊಂದು ನೂರು ವರ್ಷದ ನಂತರ ಇದೇ ಸತ್ಯ ಆದರೂ ಆಶ್ಚರ್ಯ ಇಲ್ಲ. ಈ ಕತೆ ಸತ್ಯ ಆಗುವ ಹಾಗಿದ್ದರೆ ನನ್ನದೂ ಒಂದು ಪುರಾವೆ ಇರಲಿ ಎಂದು ಒಂದು ಕತೆ ಹುಟ್ಟು ಹಾಕಿ, ಮುಂದಿನ ಚರಿತ್ರೆ ಬರೆಯುವವರಿಗೆ ಕೊಂಚ ತ್ರಾಸು ಕೊಟ್ಟಿದ್ದೇನೆ. ಆ ಕತೆ ಯಾವುದು ಅಂದಿರಾ? ಕನ್ನಡದ ಖ್ಯಾತ ಗಾಯಕ ಯಶವಂತ ಹಳಿಬಂಡಿ ಅವರ ಹೆಸರಿನಲ್ಲಿ ಸ್ಥಳೀಯ ಕನ್ನಡಿಗರು ಈ ಪ್ರದೇಶಕ್ಕೆ ಯಶವಂತ ಅವರ ಹೆಸರು ಇಟ್ಟರು. ಮುಂದೆ ಇದಕ್ಕೆ ಪುರ ಎನ್ನುವ ಪದ ಸೇರ್ಪಡೆಗೊಂಡಿತು…! ಚರಿತ್ರೆ ಆಗಾಗ ಪುನರ್ ವಿಮರ್ಶೆ ಆಗಬೇಕಂತೆ. ಆಗಲಿ ಮತ್ತು ಹೀಗೆ ಆಗದಿರಲಿ ಇವತ್ತಿನ ಯಶವಂತಪುರದ ಬಗ್ಗೆ AI ಹೇಳೋದು ಏನು ಗೊತ್ತಾ…..
“………..Today, Yeshwantpur is a bustling neighbourhood with a mix of residential, commercial, and industrial areas, and it’s also home to the Yeshwantpur Railway Station, one of the major railway terminals in Bangalore.”
ಇವತ್ತಿನ ಯಶವಂತಪುರ ಅಂದರೆ ಎಲ್ಲಾ ರೀತಿಯ ವಾಣಿಜ್ಯ, ವ್ಯವಹಾರ, ವಹಿವಾಟು ಮತ್ತು ಕೈಗಾರಿಕೆ ಹೊಂದಿರುವ ಜನ ಸಾಮಾನ್ಯರ ವಾಸಸ್ಥಳ ಸೇರಿದ ಪ್ರದೇಶ. ಇಲ್ಲಿನ ರೈಲ್ವೆ ಸ್ಟೇಶನ್ ನಗರದ ಒಂದು ದೊಡ್ಡ ರೈಲ್ವೆ ಟರ್ಮಿನಲ್. ಇನ್ನು ಕೆಲವೇ ವರ್ಷದಲ್ಲಿ ಇಲ್ಲಿನ ರೈಲ್ವೆ ಸ್ಟೇಶನ್ ದೇಶದ ಪ್ರಮುಖ ನಿಲ್ದಾಣ ಆಗುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಬಿರುಸಿನ ಕಾಮಗಾರಿ ನಡೆಯುತ್ತಿದೆ.
ಇದೇ ರಸ್ತೆಯಲ್ಲಿ ಒಂದು ನೂರೈವತ್ತು ಮೀಟರ್ ಮುಂದೆ ಹೋಗಿ.ಇಲ್ಲೊಂದು ಸೈನಿಕರ ನೆಲೆ ಇದ್ದ ಸ್ಥಳ ಉಂಟು. ಅದೇ ಸುಬೇದಾರ್ ಪಾಳ್ಯ. ಸುಬೇದಾರ್ ಹೆಸರಿಗೆ ಲಿಂಕ್ ಇರುವ ಮತ್ತೊಂದು ಬೆಂಗಳೂರಿನ ಸ್ಥಳ ಮೆಜೆಸ್ಟಿಕ್ ಏರಿಯಾದ ಸುಬೇದಾರ್ ಛತ್ರ…. ಯಶವಂತಪುರದ ಈ ಜಾಗ ನನಗೆ ಹೆಚ್ಚು ಆಪ್ತವಾಗಿದ್ದು ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗೆ ಒಂದೈದು ಸಲ ಇಲ್ಲಿಗೆ ಬಂದಿರ ಬಹುದೇನೋ..
ಇದರ ಕತೆಗೆ ಮುಂದಕ್ಕೆ ಬರುತ್ತೇನೆ.
(ಇನ್ನೂ ಇದೆ…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
Well narrated nostalgic memories pictured vividly Thank you for taking me to 70’s.
ಧನ್ಯವಾದಗಳು, ಪ್ರಸನ್ನ
Nimma baraha onedu chennagi sequence nalli baruttide. Nimma nenupu adakke huridubista ide. Innu aneka gnanada vichar lekhan galu prapti agalendu haraisuve.
ಹರಿ,ಧನ್ಯವಾದಗಳು ದೊರೆ
You have an unimaginable memory. Very interesting article. I was excited to read all about IISc. There are many informations which we did not know. Well written. Will wait for your next one.
ಶ್ರೀಮತಿ ಚಂದ್ರಿಕಾ ಶ್ರೀಧರ್ ಅವರೇ
ಉಬ್ಬಿದೆ ಉಬ್ಬಿದೆ …..ಧನ್ಯವಾದಗಳು