ಒಂದು ಸಮಾಜವನ್ನು ಕಟ್ಟಲು ದೇಶವನ್ನು ಬೆಳೆಸಲು ಕಚೇರಿಗಳಲ್ಲೊ ಅನೂಕೂಲಸ್ಥ ಉದ್ಯೋಗಗಳಲ್ಲೋ ಇರುವವರ ಕೊಡುಗೆ ಮಾತ್ರವಲ್ಲದೆ ಸಮುದಾಯದ ಮೂಲೆ ಮೂಲೆಯಲ್ಲಿರುವವರ ದುಡಿಮೆ ಶ್ರಮಗಳೂ ಇರುತ್ತವೆ ಎಂದು ನಂಬಿದ್ದ. ಗಣಿಕಾರ್ಮಿಕರ ಮನೆಯಲ್ಲಿ ಹುಟ್ಟಿ ಯೌವ್ವನ ಕಾಲದಲ್ಲಿ ಗಣಿಯಲ್ಲಿ ಕೆಲಸ ಮಾಡಿದ್ದ ಬೆವನ್ ನಿಗೆ ಆ ಕಾಲದ ಆರೋಗ್ಯ ವ್ಯವಸ್ಥೆಯಿಂದ ತನ್ನ ಆಸುಪಾಸಿನಲ್ಲಿರುವವರು ಸೂಕ್ತ ಸೇವೆ ಸೌಲಭ್ಯಗಳನ್ನು ಸುಲಭದಲ್ಲಿ ಪಡೆಯಲಾಗದಿರುವುದು, ಕಾಯಿಲೆ ಬಂದು ಅಕಾಲಿಕವಾಗಿ ಸಾಯುವುದು ಹತ್ತಿರದ ಅನುಭವಗಳು ಆಗಿದ್ದವು. ಇನ್ನು ಎರಡನೆಯ ಮಹಾಯುದ್ಧದಲ್ಲಿ ವಿಜಯಿಯಾಗಿ ಮರಳಿದ ಗಾಯಗೊಂಡ ಸಾವಿರಗಟ್ಟಲೆ ಸೈನಿಕರನ್ನು ಆತ್ಮೀಯವಾಗಿ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿತ್ತು.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್
ಬದುಕಿಗೆ ಅವಶ್ಯಕತೆಗಳು ಯಾವುವು ಎಂದು ನಮ್ಮೊಳಗೇ ಪ್ರಶ್ನೆ ಹುಟ್ಟಿದರೆ ತರಾತುರಿಯಲ್ಲಿ, ಆಹಾರ, ನೀರು, ವಸತಿ, ಉದ್ಯೋಗ, ನಿದ್ರೆ, ಸಂಸಾರ, ಸುಖ, ಭೋಗ, ಇತ್ಯಾದಿಗಳು ತಮ್ಮ ತಮ್ಮ ಹಿರಿಮೆಯ ಜಿಜ್ಞಾಸೆಯಲ್ಲಿ ತೊಡಗಿಕೊಳ್ಳುತ್ತವೇನೊ. ಆಗ ಅವೆಲ್ಲವುಗಳ ಹಿನ್ನೆಲೆಯಲ್ಲಿ “ಆರೋಗ್ಯ” ಕೈಕಟ್ಟಿ ನಿಂತು ಕಣ್ಣು ಮಿಟುಕಿಸಿ ನಗುತ್ತಿರುತ್ತದೇನೊ.
ಬದುಕಿನ ಓಟದಲ್ಲಿ ಅಥವಾ ಓಡುವ ಬದುಕಿನಲ್ಲಿ ಆಯಾ ಕಾಲಕ್ಕೆ ಹಂತಕ್ಕೆ ಹೊಸ ಹೊಸ ಅವಶ್ಯಕತೆಗಳು ಹುಟ್ಟಿ ಸಾಯುತ್ತಲೇ ಇದ್ದರೂ ಅಗತ್ಯಗಳು ಪಲ್ಲಟಗೊಳ್ಳುತ್ತಲೇ ಹೋದರೂ ಉಸಿರು ಇರುವವರೆಗೂ ಬದುಕನ್ನು ತನ್ನ ಹೆಗಲಿನಲ್ಲಿ ಆಧರಿಸಿ ಸುಧಾರಿಸುವ ಗುರುತರ ಹೊಣೆ ಇರುವುದು ನಮ್ಮನಮ್ಮ ದೈಹಿಕ ಮಾನಸಿಕ ಸ್ವಾಸ್ಥ್ಯಗಳಿಗೆ. ಆರೋಗ್ಯದ ಬಗೆಗಿನ ಪಾರಂಪರಿಕ ಸಾರ್ವತ್ರಿಕ ತಿಳುವಳಿಕೆಯಿಂದಲೇ ಅದನ್ನು ಯೋಗ, ಭಾಗ್ಯ, ಐಶ್ವರ್ಯ ಎಂದು ಕೊಂಡಾಡುವ ಸಾಲುಗಳು ಎಲ್ಲ ಭಾಷೆಗಳಲ್ಲೂ ಎಲ್ಲ ಊರುಗಳಲ್ಲೂ ಓಡಾಡಿಕೊಂಡಿವೆ. ಇವು ಬರೇ ಪುಸ್ತಕದ ಹಾಳೆಗಳಲ್ಲಿ ನಮೂದಾಗಿ ಮಾಸಿರುವ ಆಡುಮಾತಿನಲ್ಲಿ ಉರುಳಿಹೊರಳಿ ಸವಕಲಾಗಿರುವ ಶಬ್ಧಜೋಡಣೆ ನಾಣ್ಣುಡಿ ಗಾದೆ ಬುದ್ಧಿಮಾತುಗಳಲ್ಲ, ನಿತ್ಯವೂ ತಮ್ಮ ಪ್ರಾಮುಖ್ಯತೆಯನ್ನು ನಿಚ್ಚಳವಾಗಿ ಅನುಭವದ ಕನ್ನಡಿಯಲ್ಲಿ ತೋರುತ್ತಲೇ ಇರುವ ಸಂಗತಿಗಳು.
ಮನುಷ್ಯ ಸಂಕುಲ ಹುಟ್ಟಿ ವಿಕಾಸಗೊಂಡ ಬೆಳವಣಿಗೆ ಕಂಡ ಈ ಎರಡೋ ಮೂರೋ ಲಕ್ಷ ವರ್ಷಗಳ ಇತಿಹಾಸದಲ್ಲಿ ಬಹುಷಃ ಯಾರೂ ಅಲ್ಲಗಳೆಯದ ಎಲ್ಲರೂ ಒಪ್ಪುವ ಸಿದ್ಧಾಂತ ಸತ್ಯಗಳಲ್ಲಿ ಆರೋಗ್ಯದ ಮಹತ್ವವೂ ಒಂದು ಇರಬೇಕು. ನಮ್ಮ ನಮ್ಮ ಅಗತ್ಯ ಅನಿವಾರ್ಯತೆ ಆಕಾಂಕ್ಷೆ ಮಹತ್ವಾಕಾಂಕ್ಷೆಗಳ ಜಾಡು ಹಿಡಿದು ನಾವು ರಭಸದಲ್ಲಿ ಸಾಗುವಾಗ ನಮ್ಮ ಸೌಖ್ಯ ಹಿಂದೆಲ್ಲೋ ಮೆತ್ತಗೆ ನಡೆದು ಬರುವುದುಂಟು; ಅದನ್ನು ಕೈಹಿಡಿದು ನಮ್ಮೊಡನೆಯೇ ನಡೆಸುವ ಪ್ರಯತ್ನ ಮಾಡುವುದು ಅಥವಾ ಅದರ ಹೆಜ್ಜೆಗತಿಗೆ ನಮ್ಮ ಲಯವನ್ನು ಹೊಂದಿಸಲು ಯತ್ನಿಸುವುದು ನಮ್ಮ ವೈಯಕ್ತಿಕ ಹಾಗು ಸುತ್ತಲಿನ ವ್ಯವಸ್ಥೆಗಳ ಹೊಣೆ ಹಾಗು ಸವಾಲು.
ಮೂಲಭೂತ ಅವಶ್ಯಕತೆ ಎಂದು ಗುರುತಿಸಲ್ಪಡುವ ಆರೋಗ್ಯದ ಪ್ರಾಥಮಿಕ ಆರೈಕೆಯ ಹೊಣೆ ವೈಯಕ್ತಿಕವಾದುದಾದರೂ ಅನಾರೋಗ್ಯದ ಸಂದರ್ಭದಲ್ಲಿ ಅಗತ್ಯ ಬೀಳುವ ಸೌಕರ್ಯ ಸೌಲಭ್ಯ ಸೇವೆಗಳಿಗೆ ಇನ್ನೊಬ್ಬ ವ್ಯಕ್ತಿಯನ್ನು ಇನ್ನೊಂದು ವ್ಯವಸ್ಥೆಯನ್ನು ಅವಲಂಬಿಸಬೇಕಾಗುತ್ತದೆ. ಕಣ್ಣಿಗೆ ತೀರ ಆಸುಪಾಸಿನಲ್ಲಿ ಇರುವ ಸಮಾಜದಿಂದ ಹಿಡಿದು ಸ್ವಲ್ಪ ದೂರದ ಪರಿಕಲ್ಪನೆಯಾದ ರಾಷ್ಟ್ರದ ತನಕ ಕಟ್ಟುವುದು ಉಳಿಸುವುದು ಬೆಳೆಸುವುದರಲ್ಲಿ ಎಲ್ಲರ ಯಾವುದೊ ಒಂದು ಕೊಡುಗೆ ಇರುತ್ತದೆ. ಹುಟ್ಟಿನಿಂದಲೇ ಭವಿಷ್ಯದ ಹಲವು ವಿಚಾರಗಳು ನಿರ್ಧರಿತಗೊಳ್ಳುವ ವಾಸ್ತವದಲ್ಲಿ ಆರೋಗ್ಯದಂತಹ ಮೂಲಭೂತ ಅಗತ್ಯತೆಯನ್ನು ನೋಡಿಕೊಳ್ಳಲು ಬೇಕಾಗುವ ಸವಲತ್ತು ಸಮಯ ಎಲ್ಲರಿಗೂ ಇರುವುದಿಲ್ಲ. ಅನುಕೂಲ ಇದ್ದೂ ಅಲಕ್ಷಿಸುವ ಪಂಗಡವೂ ನಮ್ಮ ನಡುವಿದೆ ಬಿಡಿ.
ಹೀಗೆ ರಾಜ್ಯ ದೇಶ ಎಂದುಕೊಂಡು ಸಮುದಾಯ ಸಮೂಹಗಳಾಗಿ ಬದುಕುವಾಗ ಅಲ್ಲಿನ ಆರೋಗ್ಯ ಸಂಬಂಧಿ ಸೇವೆ ಸೌಲಭ್ಯಗಳನ್ನು ತಲುಪಿಸುವ ಅಥವಾ ಅಂತಹ ವ್ಯವಸ್ಥೆಯನ್ನು ರೂಪಿಸುವ ಹೊಣೆ ಅಲ್ಲಲ್ಲಿನ ಆಡಳಿತ ಅಧಿಕಾರಿಗಳದ್ದಾಗಿರುತ್ತದೆ. ಮತ್ತೆ ಇಂತಹ ಯೋಜನೆಗಳನ್ನು ಯಶಸ್ವಿಯಾಗಿ ಮುಟ್ಟಿಸುವಲ್ಲಿ ಮುಂದುವರಿಸುವಲ್ಲಿ ಆಡಳಿತದ ಕೈಗಳನ್ನು ಬಲಪಡಿಸುವ ಸಾಮಾಜಿಕ ಜವಾಬ್ದಾರಿ ಪ್ರಾಮಾಣಿಕ ಯತ್ನಗಳು ಸಾಮಾನ್ಯ ಪ್ರಜೆಗಳದಾಗಿರುತ್ತದೆ. ಆಡಳಿತ ಮತ್ತು ಪ್ರಜೆಗಳ ನಡುವಿನ ಇಂತಹ ಒಂದು ಹೊಂದಾಣಿಕೆ ತಕ್ಕಮಟ್ಟಿಗಾದರೂ ಇದ್ದರೆ ಆ ಊರು ದೇಶ ಪ್ರಗತಿಯ ಸರಿಯಾದ ಪಥದಲ್ಲಿ ಇದೆ ಎನ್ನಬಹುದೇನೋ.
ಯಾವುದೇ ದೇಶದ ಅಭಿವೃದ್ಧಿಯ ಉತ್ಥಾನದ ಒಂದು ಮುಖ್ಯ ಸೂಚಕ ಅಲ್ಲಿನ ರಸ್ತೆಯ ಹೊಳಪು ಹಾಗು ಕಟ್ಟಡಗಳ ಎತ್ತರ ವಿಸ್ತಾರಗಳಲ್ಲ, ಅಲ್ಲಿನ ಜನರ ಬ್ಯಾಂಕ್ ಖಾತೆಯ ಉಳಿತಾಯವೂ ಅಲ್ಲ, ಬದಲಿಗೆ ಅಲ್ಲಿನ ಆರೋಗ್ಯ ಸುರಕ್ಷೆ ಎಷ್ಟು ಸುವ್ಯವಸ್ಥಿತವಾಗಿದೆ ಹಾಗು ಅವು ಜನಸಾಮಾನ್ಯರ ಕೈಗೆ ಎಷ್ಟು ಸುಲಭವಾಗಿ ಎಟುಕುತ್ತದೆ ಎನ್ನುವುದೇ ಆಗಿದೆ. ಆರೋಗ್ಯವೇ ಐಶ್ವರ್ಯ ಎನ್ನುವುದನ್ನು ಎಲ್ಲರೂ ಒಪ್ಪಿದರೂ ಐಶ್ವರ್ಯ ಇದ್ದವರಿಗೆ ಮಾತ್ರ ಆರೋಗ್ಯ ಸೌಲಭ್ಯ ಸುಲಭವಾಗಿ ದಕ್ಕುವುದು, ವಾಸ್ತವದಲ್ಲಿ ಕಾಣುವ ವೈರುಧ್ಯ.
ಎಲ್ಲೆಲ್ಲಿನ ವಿಷಯ ಬಿಡುವ, 1948ರ ಜುಲೈ ನಾಲ್ಕರ ತನಕವೂ ಬ್ರಿಟನ್ನಿನಲ್ಲಿನ ಆರೋಗ್ಯ ವ್ಯವಸ್ಥೆಯೂ ಅನುಕೂಲಸ್ಥರ ಸೊತ್ತಾಗಿಯೇ ಇತ್ತು. ಸಿರಿವಂತರಿಗೆ ಪ್ರಭಾವಶಾಲಿಗಳಿಗೆ ಉದ್ಯೋಗ ಇರುವವರಿಗೆ ಮಾತ್ರ ಸಲೀಸಾಗಿ ಲಭ್ಯ ಆಗುತ್ತಿದ್ದ ಅರೋಗ್ಯ ಸೇವೆಗಳು ಜನಸಾಮಾನ್ಯರ ಕಾರ್ಮಿಕರ ಪಾಲಿಗೆ ದುಬಾರಿ ಸರಕಾಗಿದ್ದವು. ಆಗಷ್ಟೇ ಹುಟ್ಟಿದ ಹಸುಳೆಯಿಂದ ಹಿಡಿದು ಅನಾರೋಗ್ಯದ ಯುವಕರೋ ಮುದುಕರೊ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಆರ್ಥಿಕ ಸಾಮರ್ಥ್ಯ ಇರದೇ ಅಕಾಲಿಕವಾಗಿ ಸಾಯುವುದು ಅಂದು ಆಶ್ಚರ್ಯದ ವಿಷಯವಾಗಿರಲಿಲ್ಲ. ವೈದ್ಯಕೀಯ ವ್ಯವಸ್ಥೆಗಳು ಖಾಸಗಿ ಒಡೆತನದಲ್ಲಿದ್ದು ಸಮಾಜದ ಆಂಗ್ಲ ಶ್ರೇಣೀಕೃತ ಸಮಾಜದ ಮೇಲುಸ್ತರದವರಿಗೆ ಹೆಚ್ಚು ಸಮೀಪದಲ್ಲಿದ್ದವು. ಉದ್ಯೋಗಿಗಳಿಗೆ ತಿಂಗಳ ಸಂಬಳದಲ್ಲಿ ಒಂದು ಭಾಗವನ್ನು “ನ್ಯಾಷನಲ್ ಇನ್ಷೂರೆನ್ಸ್” ಹೆಸರಲ್ಲಿ ಸರಕಾರ ಸಂಗ್ರಹಿಸಿ ಅಂತಹ ಉದ್ಯೋಗಿಗಳ ಆರೋಗ್ಯ ಸೇವೆಯಲ್ಲಿ ಮತ್ತೆ ಆ ಉದ್ಯೋಗಿಗಳು ನಿವೃತ್ತರಾದ ಮೇಲೆ ನೀಡಬೇಕಾದ ಪಿಂಚಣಿಗಾಗಿ ಬಳಸುತ್ತಿತ್ತು.
ಒಂದು ಮನೆಯಲ್ಲಿ ಒಬ್ಬ ಮಾತ್ರ ದುಡಿಯುತ್ತಿದ್ದರೆ ಆತನ ಅಥವಾ ಆಕೆಯ ಅರೋಗ್ಯ ಸೇವೆಯ ಬಿಲ್ ಚುಕ್ತಾ ಮಾಡಲು ಆತ ಕಟ್ಟುತ್ತಾ ಬಂದ ನ್ಯಾಷನಲ್ ಇನ್ಷೂರೆನ್ಸ್ ಸಹಾಯ ಮಾಡುತ್ತಿತ್ತು. ಮನೆಯಲ್ಲಿ ಇನ್ನುಳಿದವರು ಅಶಕ್ತರು ಮಕ್ಕಳು ವೃದ್ಧರು ಅಥವಾ ಯಾವ ನೌಕರಿಯೇ ಇಲ್ಲದವರು ಇದ್ದರೆ ಅಂತಹವರೆಲ್ಲ ಹಣಕೊಟ್ಟು ವೈದ್ಯಕೀಯ ಸೇವೆ ಪಡೆಯಬೇಕಿತ್ತು. ಅಂದಿನ ಬ್ರಿಟಿಷ್ ಸಮಾಜದಲ್ಲಿ ಆರೋಗ್ಯ ಸೇವೆಯನ್ನು ಪಡೆಯಲು ಹಣದ ಅಡಚಣೆ ಇರುವವರೇ ಹೆಚ್ಚಿದ್ದುದರಿಂದ ದೀರ್ಘ ಕಾಲೀನ ಅಸೌಖ್ಯ, ಅಕಾಲಿಕ ಸಾವುಗಳು ವಿಶೇಷ ವರ್ತಮಾನ ಎನಿಸುತ್ತಿರಲಿಲ್ಲ.
ವರ್ಷದ ನಾಲ್ಕೈದು ತಿಂಗಳುಗಳ ಕಾಲ ಆವರಿಸುವ ತೀವ್ರವಾದ ಚಳಿಯನ್ನು ಮನೆಯಲ್ಲಿ ಯಾವುದೇ ಶಾಖೋತ್ಪನ್ನ ಉಪಕರಣ ಇಲ್ಲದೇ ಕಳೆಯಬೇಕಾದವರು ಮನೆಯ ಹೊರಗೆ ನಡುಗುತ್ತ ಅಲ್ಪ ವೇತನಕ್ಕಾಗಿ ದುಡಿಯಬೇಕಾದವರು ಫ್ಲೂ ನಂತಹ ಮಾಮೂಲಿ ಜ್ವರದಲ್ಲಿಯೇ ಅಸುನೀಗಿದ ಉದಾಹರಣೆಗಳು ಬಹಳ ಇರುತ್ತಿದ್ದವು. ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ಗಣಿಗಳಲ್ಲಿ ಕೆಲಸ ಮಾಡುವವರು ಶ್ವಾಸಕೋಶದಲ್ಲಿ ಧೂಳು ತುಂಬಿಸಿಕೊಂಡು ಮುಂಜಾಗರೂಕತೆಯ ಸರಿಯಾದ ವ್ಯವಸ್ಥೆ ಮಾಹಿತಿ ಮತ್ತೆ ಚಿಕಿತ್ಸೆ ಇರದೇ ಸಾಯುತ್ತಿದ್ದರು. ಇಂತಹ ಸಾವನ್ನು ಅತ್ಯಂತ ಹತ್ತಿರದಿಂದ ಕಂಡ ನೈ ಬೆವನ್ ಎನ್ನುವಾತ ಬ್ರಿಟನ್ನಿನ ಆರೋಗ್ಯ ಸಚಿವನಾಗುವ ತನಕವೂ ಬ್ರಿಟನ್ನಿನಲ್ಲಿ ನೆಲೆಸಿದ್ದ ಹಲವು ಅಸಮಾನತೆಗಳಲ್ಲಿ ಆರೋಗ್ಯದ ಅಸಮಾನತೆಯೂ ಒಂದಾಗಿತ್ತು.
ಆರೋಗ್ಯ ಸುರಕ್ಷೆಯ ಕ್ರಮವನ್ನು ಸಂಪೂರ್ಣ ಬದಲಿಸುವ ಮಹತ್ವಪೂರ್ಣ ಹಾಗು ಚಾರಿತ್ರಿಕ ಹೆಜ್ಜೆ ಇಟ್ಟದ್ದು ಬೆವನ್ ನ ಅಧಿಕಾರವಧಿಯಲ್ಲಿಯೇ. ಎರಡನೆಯ ಮಹಾಯುದ್ಧವನ್ನು ವಿನ್ಸ್ಟನ್ ಚರ್ಚಿಲ್ ನ ನಾಯಕತ್ವದಲ್ಲಿ ಗೆದ್ದ ಹಾಗು ಕನ್ಸರ್ವೇಟಿವ್ ಪಕ್ಷದ ಅಧಿಕಾರಾವಧಿಯಲ್ಲಿ ಕಳೆದ ಬ್ರಿಟನ್, ಯುದ್ಧಾನಂತರ ಆರ್ಥಿಕವಾಗಿ ಅತ್ಯಂತ ಸಂಕಷ್ಟದಲ್ಲಿರುವಾಗ ನಡೆದ ಚುನಾವಣೆಯಲ್ಲಿ ಸಾಮಾನ್ಯರ ಪರವಾದ ಆಡಳಿತ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಲೇಬರ್ ಪಕ್ಷಕ್ಕೆ ಬಹುಮತ ನೀಡಿತ್ತು. ಆ ಸರಕಾರದ ಆರೋಗ್ಯ ಸಚಿವನಾಗಿದ್ದ ಬೆವನ್ ಆರೋಗ್ಯ ವ್ಯವಸ್ಥೆ ಸಮಾಜದ ಎಲ್ಲ ವರ್ಗದವರ ಹಕ್ಕು ಮತ್ತು ಅವಶ್ಯಕತೆ ಎಂದು ತಿಳಿದು, ಅಲ್ಲಿಯತನಕ ಇದ್ದ ವ್ಯವಸ್ಥೆಯನ್ನು ಶಾಶ್ವತವಾಗಿ ಬದಲಾಯಿಸುವ ಪ್ರಯತ್ನ ಆರಂಭಿಸಿದ.
ಒಂದು ಸಮಾಜವನ್ನು ಕಟ್ಟಲು ದೇಶವನ್ನು ಬೆಳೆಸಲು ಕಚೇರಿಗಳಲ್ಲೊ ಅನೂಕೂಲಸ್ಥ ಉದ್ಯೋಗಗಳಲ್ಲೋ ಇರುವವರ ಕೊಡುಗೆ ಮಾತ್ರವಲ್ಲದೆ ಸಮುದಾಯದ ಮೂಲೆ ಮೂಲೆಯಲ್ಲಿರುವವರ ದುಡಿಮೆ ಶ್ರಮಗಳೂ ಇರುತ್ತವೆ ಎಂದು ನಂಬಿದ್ದ. ಗಣಿಕಾರ್ಮಿಕರ ಮನೆಯಲ್ಲಿ ಹುಟ್ಟಿ ಯೌವ್ವನ ಕಾಲದಲ್ಲಿ ಗಣಿಯಲ್ಲಿ ಕೆಲಸ ಮಾಡಿದ್ದ ಬೆವನ್ ನಿಗೆ ಆ ಕಾಲದ ಆರೋಗ್ಯ ವ್ಯವಸ್ಥೆಯಿಂದ ತನ್ನ ಆಸುಪಾಸಿನಲ್ಲಿರುವವರು ಸೂಕ್ತ ಸೇವೆ ಸೌಲಭ್ಯಗಳನ್ನು ಸುಲಭದಲ್ಲಿ ಪಡೆಯಲಾಗದಿರುವುದು, ಕಾಯಿಲೆ ಬಂದು ಅಕಾಲಿಕವಾಗಿ ಸಾಯುವುದು ಹತ್ತಿರದ ಅನುಭವಗಳು ಆಗಿದ್ದವು.
ಇನ್ನು ಎರಡನೆಯ ಮಹಾಯುದ್ಧದಲ್ಲಿ ವಿಜಯಿಯಾಗಿ ಮರಳಿದ ಗಾಯಗೊಂಡ ಸಾವಿರಗಟ್ಟಲೆ ಸೈನಿಕರನ್ನು ಆತ್ಮೀಯವಾಗಿ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿತ್ತು. ಇವೆಲ್ಲವನ್ನೂ ಉದ್ದೇಶವಾಗಿಟ್ಟುಕೊಂಡು 1948ರ ಜನವರಿಯಲ್ಲಿ ಇಡೀ ಬ್ರಿಟನ್ನಿಗೆ ಒಂದೇ ತರಹದ ಆರೋಗ್ಯ ವ್ಯವಸ್ಥೆಯನ್ನು ಮುಂದಿನ ಆರು ತಿಂಗಳುಗಳಲ್ಲಿ ಸೃಷ್ಟಿಸುವ ಘೋಷಣೆ ಮಾಡಿದ. ಉದ್ಯೋಗಿಗಳಿಂದ ಉದ್ಯಮಗಳಿಂದ ಅಥವಾ ಮೂಲಭೂತವಾಗಿ ಆದಾಯ ಇರುವವರಿಂದ ನಿಯಮಿತವಾಗಿ ತೆರಿಗೆ ಸಂಗ್ರಹ ಮಾಡಿ ಇಡೀ ದೇಶಕ್ಕೆ ಉಚಿತ ಸ್ವಾಸ್ಥ್ಯ ಸೇವೆಯನ್ನು ನೀಡುವುದಾಗಿ ಹೇಳಿದ. ನೂರಾರು ವರ್ಷಗಳಿಂದ ನಡೆದು ಬಂದ ವ್ಯವಸ್ಥೆಯನ್ನು ಬದಲಿಸ ಹೊರಟಾಗ ತನ್ನದೇ ಲೇಬರ್ ಪಕ್ಷದವರಿಂದ ವಿರೋಧ ಪಕ್ಷವಾದ ಕನ್ಸರ್ವೇಟಿವ್ ನವರಿಂದ ಹಾಗು ಆ ಕಾಲಕ್ಕೆ ಸ್ವತಂತ್ರರಾಗಿ ತಮ್ಮ ತಮ್ಮ ಚಿಕಿತ್ಸಾಲಯ ಆಸ್ಪತ್ರೆ ನಡೆಸುತ್ತಿದ್ದ ವೈದ್ಯರುಗಳಿಂದ ತೀವ್ರ ಪ್ರತಿರೋಧ ಇತ್ತು.
ಆರೋಗ್ಯ ಸಚಿವನಾಗಿದ್ದ ಬೆವನ್ ಆರೋಗ್ಯ ವ್ಯವಸ್ಥೆ ಸಮಾಜದ ಎಲ್ಲ ವರ್ಗದವರ ಹಕ್ಕು ಮತ್ತು ಅವಶ್ಯಕತೆ ಎಂದು ತಿಳಿದು, ಅಲ್ಲಿಯತನಕ ಇದ್ದ ವ್ಯವಸ್ಥೆಯನ್ನು ಶಾಶ್ವತವಾಗಿ ಬದಲಾಯಿಸುವ ಪ್ರಯತ್ನ ಆರಂಭಿಸಿದ.
ಹೀಗೆ ಹಲವು ಅಡೆತಡೆಗಳು ಎದುರಾದರೂ ನಿಲುವನ್ನು ಬದಲಿಸದೆ ಆರೋಗ್ಯ ಸೇವೆಯ ಕಾನೂನನ್ನು ಅನುಮೋದಿಸಲಾಯಿತು. ಸುಮಾರು 2500 ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು; 1948ರ ಜುಲೈ ಐದರಂದು ರಾಷ್ಟ್ರೀಯ ಆರೋಗ್ಯ ಸೇವೆ ಅಥವಾ ನ್ಯಾಷನಲ್ ಹೆಲ್ತ್ ಸರ್ವಿಸಸ್ (NHS) ಹೆಸರಿನ ಸಂಸ್ಥೆಯ ವ್ಯವಸ್ಥೆಯ ಉದಯವಾಯಿತು. ಇಡೀ ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಏಕರೂಪಕ್ಕೆ ಹೊಂದಿಸುವ ಕೆಲಸ ಶುರು ಆಯಿತು.
ಇಲ್ಲಿಗೆ ವಲಸೆ ಬಂದವರಿಗೆ ಈ ಬಗೆಯ ಆರೋಗ್ಯ ವ್ಯವಸ್ಥೆಗೆ ಅಪರಿಚಿತರಾದವರಿಗೆ ದೇಶದಾದ್ಯಂತ ಚಾಲ್ತಿಯಲ್ಲಿರುವ ಉಚಿತ ಆರೋಗ್ಯ ಸೇವೆ, ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುವ ಸ್ವಾಸ್ತ್ಯದ ಏಕೀಕರಣ ವ್ಯವಸ್ಥೆ ಅಚ್ಚರಿ ಹುಟ್ಟಿಸಬಹುದು. ಇಲ್ಲಿನ ಪ್ರಜೆಗಳು ಮಾತ್ರವಲ್ಲದೆ ಎಲ್ಲಿಂದಲೋ ಇಲ್ಲಿಗೆ ಬಂದವರಿದ್ದರೂ ನಮ್ಮನಮ್ಮ ಮನೆಯ ಹತ್ತಿರದ ಚಿಕಿತ್ಸಾಲಯದಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ಇದೆ. ಯಾವ ಚಿಕಿತ್ಸಾಲಯದಲ್ಲಿ ನಮ್ಮ ಮೊದಲ ಸಂಪರ್ಕದ ವೈದ್ಯರು ಅಥವಾ ಪ್ರಾಥಮಿಕ ವೈದ್ಯರು (General Practitioner) ಇರುತ್ತಾರೆ? ಯಾವ ಶಾಲೆಗೇ ನಮ್ಮ ಮಕ್ಕಳು ಹೋಗಬಹುದು? ಎನ್ನುವುದನ್ನು ನಮ್ಮ ಮನೆಯ ವಿಳಾಸ ಅಥವಾ ಸ್ಥಳಗಳೇ ನಿರ್ಧಾರ ಮಾಡುತ್ತವೆ.
ಕೇರಿಗೊಂದು ಶಾಲೆ ಹಾಗು ತಪಾಸಣಾ ಕೇಂದ್ರ ಅಥವಾ ಚಿಕಿತ್ಸಾಲಯ ಇರುತ್ತದೆ. ಸಣ್ಣ ಆರೋಗ್ಯ ಸಮಸ್ಯೆಯಿಂದ ಹಿಡಿದು ಹೃದ್ರೋಗ, ಕ್ಯಾನ್ಸರ್ ಗಳಂತಹ ಯಾವುದೇ ಕಾಯಿಲೆಗಳ ಶುಶ್ರೂಷೆಗಳನ್ನೂ ಪ್ರಾಥಮಿಕ ವೈದ್ಯರ ಸಲಹೆ ಸೂಚನೆಗಳ ಮೇರೆಗೆ ಉಚಿತವಾಗಿ ಪಡೆಯಬಹುದು. ಆರೋಗ್ಯದ ಗಂಭೀರ ಸಮಸ್ಯೆಗಳಿದ್ದರೆ ಬರೇ ಔಷಧ ಸೇವನೆಗಿಂತ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಪರಿಣಿತ ವೈದ್ಯರಲ್ಲಿಗೋ ದೊಡ್ಡ ಆಸ್ಪತ್ರೆಗೋ ಶಿಫಾರಸು ಕೂಡ ನಾವು ನೋಂದಾಯಿಸಿಕೊಂಡ ವೈದ್ಯರ ಮೂಲಕವೇ ಆಗುತ್ತದೆ. ತುರ್ತು ಚಿಕಿತ್ಸೆಯ ಅಗತ್ಯ ಬಿದ್ದರೆ ಸಂಬಂಧಿತ ಸಹಾಯವಾಣಿಗೆ ಕರೆ ಮಾಡಿದರೆ ನಿಮಿಷಗಳಲ್ಲಿ ಆಂಬುಲೆನ್ಸ್ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತದೆ. ಇಂತಹ ಎಲ್ಲ ಬಗೆಯ ವೈದ್ಯಕೀಯ ಸೇವೆಗಳು ಉಚಿತವಾದರೂ ಬರೆದು ಕೊಟ್ಟ ಔಷಧಗಳನ್ನು ಹಣ ಕೊಟ್ಟು ಖರೀದಿ ಮಾಡಬೇಕು. ಇನ್ನು ಮಕ್ಕಳಿಗೆ ವೃದ್ಧರಿಗೆ ಗರ್ಭಿಣಿಯರಿಗೆ ಅಥವಾ ದುಡಿಮೆಯೇ ಇಲ್ಲದೇ ಸರಕಾರದ ಆರೈಕೆಯಲ್ಲಿ ಬದುಕುವವರಿಗೂ ಸಹ ಔಷಧಗಳು ಉಚಿತ. ಇಲ್ಲಿನ ಎಲ್ಲ ಪ್ರಜೆಗಳು ಮಾತ್ರ ಅಲ್ಲದೇ ಇಲ್ಲಿ ಉಳಿಯುವ ಕೆಲಸ ಮಾಡುವ ಅನುಮತಿ ಇರುವವರೆಲ್ಲರಿಗೂ ಇಂತಹ ಆರೋಗ್ಯ ಸೇವೆ ಲಭ್ಯ ಆಗುತ್ತದೆ.
ಇಂತಹ ವ್ಯವಸ್ಥೆಯ ಹುಟ್ಟಿನ ನೆನಪಿಗೆ ಪ್ರತಿವರ್ಷದ ಜುಲೈ ಐದನ್ನು ಚಾರಿತ್ರಿಕ ದಿನವಾಗಿ ಇಲ್ಲಿ ನೆನಪಿಡಲಾಗುತ್ತದೆ, ಜನಸಾಮಾನ್ಯರ ಬದುಕನ್ನು ಬದಲಿಸಿದ ಸಂಸ್ಥೆಯ ಹುಟ್ಟುಹಬ್ಬದ ಆಚರಣೆ ನೆನಕೆಗಳು ನಡೆಯುತ್ತವೆ. ೨೦೧೮ರಲ್ಲಿ, ರಾಷ್ಟ್ರೀಯ ಆರೋಗ್ಯ ಸೇವೆಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ 1948ರ ಮೊದಲೂ ನಂತರವೂ ಕೆಲಸ ಮಾಡಿದ ಹಿರಿಯ ವೈದ್ಯರು ಟಿವಿಯ ಮುಂದೆ ತಮ್ಮ ಅನುಭವ ಹಂಚಿಕೊಂಡಿದ್ದರು. ಎಪ್ಪತ್ತು ವರ್ಷಗಳ ಹಿಂದಿನ ಜುಲೈ ತಿಂಗಳ ಆ ದಿನ ಅವರವರ ಸಂಪತ್ತು ಅವರವರ ಆರೋಗ್ಯವನ್ನು ನಿರ್ಧರಿಸುವುದು ಅಚಾನಕ್ ಆಗಿ ನಿಲ್ಲಿಸಿದ ದಿನ ಎಂದೂ ಬಣ್ಣಿಸಿದ್ದರು.
ಅಂದಾಜು ಹದಿನಾಲ್ಕುಲಕ್ಷ ಉದ್ಯೋಗಿಗಳನ್ನು ಹೊಂದಿರುವ, ಸರಕಾರದಿಂದ ವರ್ಷಕ್ಕೆ ನೂರು ಬಿಲಿಯನ್ ಪೌಂಡ್ ಗಳಿಗಿಂತ ಹೆಚ್ಚಿನ ಬಜೆಟ್ ಪಡೆಯುವ ಇಲ್ಲಿನ ಆರೋಗ್ಯ ವ್ಯವಸ್ಥೆ ಜಗತ್ತಿನ ದೊಡ್ಡ ಸರಕಾರಿ ಉದ್ಯೋಗದಾತರಲ್ಲಿ ಒಂದು. ಶುರು ಆದಾಗಿನಿಂದಲೂ ವ್ಯವಸ್ಥೆಯ ಭಾಗವಾಗಿರುವ ಸದ್ಯಕ್ಕೆ ಹಲವು ಸಾವಿರ ಸಂಖ್ಯೆಯಲ್ಲಿರುವ ಭಾರತೀಯ ಮೂಲದ ವೈದ್ಯ ನರ್ಸ್ ಇತರ ಸಿಬ್ಬಂದಿಗಳು ಕೂಡ ಸಂಸ್ಥೆಯ ಯಶಸ್ಸಿನ ಪಾಲುದಾರರು.
ಇದೇ ತಿಂಗಳ ತಿಂಗಳ ಐದನೆಯ ತಾರೀಕಿಗೆ ಎಪ್ಪತ್ತೆರಡು ವರ್ಷಗಳನ್ನು ಪೂರೈಸಿದ ಆರೋಗ್ಯ ವ್ಯವಸ್ಥೆಗೆ ದೇಶದ ನಾನಾ ಮೂಲೆಗಳಿಂದ ವಿಶೇಷ ಕೃತಜ್ಞತೆಯ ಅರ್ಪಣೆ ಆಯಿತು. ಎಪ್ಪತ್ತೆರಡು ವರ್ಷಗಳ ಹಿಂದಿನ ಹಾಗು ಇಂದಿನ ವ್ಯವಸ್ಥೆಗಳ ನಡುವೆ ಆದ ಬದಲಾವಣೆಗಳ, ಇಲ್ಲಿಯತನಕದ ಸಾಧನೆಗಳ ನೆನಪೂ ಮಾಡಿಕೊಳ್ಳಲಾಯಿತು. ಎಪ್ಪತ್ತೆರಡು ವರ್ಷಗಳ ಹಿಂದೆ, ಸಾವಿರ ಶಿಶುಗಳಲ್ಲಿ ಮೂವತ್ನಾಲ್ಕು ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದರೆ (ಒಂದು ವರ್ಷದ ಒಳಗಿನವು) ಈಗಿನ ಅಂಕಿಅಂಶ ಸಾವಿರಕ್ಕೆ ಮೂರು ಅಥವಾ ನಾಲ್ಕು ಮಕ್ಕಳು ಸಾವನ್ನು ದಾಖಲಿಸುತ್ತದೆ. ಜನರ ಸರಾಸರಿ ಆಯುಷ್ಯವೂ ಎಪ್ಪತ್ತು ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಈಗ ಹದಿಮೂರು ವರ್ಷಗಳಷ್ಟು ದೀರ್ಘವಾಗಿದೆ.
ಏಳು ದಶಕಗಳ ಇತಿಹಾಸದ ಜನಪರ ಆರೋಗ್ಯ ವ್ಯವಸ್ಥೆ ತನ್ನ ನಡಿಗೆಯಲ್ಲಿ ಯಶಸ್ಸನ್ನೂ ಕಂಡಿದೆ ಹಾಗು ನಿರಂತರ ಸವಾಲುಗಳನ್ನೂ ಎದುರಿಸಿದೆ; ಮತ್ತೆ ವ್ಯವಸ್ಥೆಯ ಬಳಕೆದಾರರಿಂದ ಟೀಕೆಯನ್ನೂ ಕೇಳಿದೆ. ಉಚಿತ ಆರೋಗ್ಯ ಸೇವೆಗೆ ಬೇಕಾದ ಹಣಕಾಸು ಪ್ರಮುಖವಾಗಿ ದುಡಿಯುವವರ ಮೇಲೆ ವಿಧಿಸುವ ತೆರಿಗೆಯಿಂದ ಬರುತ್ತದೆ. ಆರೋಗ್ಯ ಸೇವೆಯನ್ನು ಬಳಸುವ ಎಲ್ಲರೂ ಒಂದೇ ಪ್ರಮಾಣದ ತೆರಿಗೆ ನೀಡುವವರಲ್ಲ, ಅವರವರ ದುಡಿಮೆಗೆ ಹೊಂದಿಕೊಂಡು ತೆರಿಗೆ ನೀಡುವವರು ಅಥವಾ ದುಡಿಯುವ ಸಾಧ್ಯತೆ ಇಲ್ಲದಿರುವವರೂ ಆ ಕಾರಣಕ್ಕೆ ಯಾವುದೇ ತೆರಿಗೆ ನೀಡದವರೂ ಎಲ್ಲರೂ ಉಚಿತ ಅರೋಗ್ಯ ಸೇವೆ ಪಡೆಯುತ್ತಾರೆ.
ವರ್ಷದಿಂದ ವರ್ಷಕ್ಕೆ ವಲಸಿಗರ ಸಂಖ್ಯೆ, ಆರೋಗ್ಯ ಸೇವೆಯನ್ನು ಪಡೆಯುವವರ ಸಂಖ್ಯೆ ಸೇವೆಯನ್ನು ಒದಗಿಸುವ ನಿಭಾಯಿಸುವ ವೆಚ್ಚ ಎಲ್ಲವೂ ಹೆಚ್ಚುತ್ತಿವೆ. ಪ್ರಾಣಾಂತಿಕ ಕಾಯಿಲೆಗಳಿಗೆ ಅಥವಾ ಗಂಭೀರ ಅಪಘಾತಗಳಿಗೆ ತುರ್ತಾಗಿ ಚಿಕಿತ್ಸೆ ಸಿಕ್ಕರೂ ಲಘು ಸ್ವರೂಪದ ಅಥವಾ ದೀರ್ಘಕಾಲೀನ ಶುಶ್ರೂಷೆಯ ಮಾರಣಾಂತಿಕವಲ್ಲದ ಕಾಯಿಲೆಗಳಿಗೆ ತಕ್ಷಣಕ್ಕೆ ಚಿಕಿತ್ಸೆ ಸಿಗದಿರುವುದು, ಬೇಡಿಕೆಗೆ ತಕ್ಕಷ್ಟು ಹಾಸಿಗೆಗಳು ಆಸ್ಪತ್ರೆಗಳಲ್ಲಿ ಇಲ್ಲದಿರುವುದು, ರೋಗಿಗಳು ಕೆಲವು ಸೇವೆಗಳನ್ನು ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗುವುದು… ಇವೆಲ್ಲ ಸೇರಿ ಆರೋಗ್ಯ ವ್ಯವಸ್ಥೆಯ ಮಿತಿಯನ್ನು ಸಂಸ್ಥೆಯ ಮೇಲಿರುವ ಒತ್ತಡವನ್ನು ಸೂಚಿಸುತ್ತವೆ. ಇಡೀ ದೇಶಕ್ಕೆ ಉಚಿತ ಸೇವೆ ನೀಡುವ ಜವಾಬ್ದಾರಿಯನ್ನು ಹೊತ್ತ ಒಂದು ಮಾದರಿ ಸಂಸ್ಥೆ ತನ್ನ ಹುಟ್ಟಿಗೆ ಕಾರಣವಾದ ಸಮಾಜವಾದೀ ಆದರ್ಶ ಹಾಗು ಕಾಲಕ್ರಮೇಣ ಹೆಚ್ಚುತ್ತಿರುವ ಹೊಣೆಗಾರಿಕೆಯ ಹೊರೆಯಲ್ಲಿ ಕೆಲವರನ್ನು ಕಾಯಿಸುವುದೂ ನಿರಾಶೆಗೊಳಿಸುವುದೂ ಅನಿವಾರ್ಯ ಇರಬಹುದು. ಮತ್ತೆ ಎಂತಹ ಸುವ್ಯವಸ್ಥೆಯೂ ಅದರ ಒಳಗಿರುವವರಿಗೆ ಮಾಮೂಲಿ ಅನಿಸಲು ಶುರು ಆದಾಗ ದೋಷ ತಪ್ಪುಗಳು ಕಾಣುವುದೂ ಸ್ವಾಭಾವಿಕ ಇರಬಹುದು. ಇನ್ನು ಪ್ರತಿ ವರ್ಷ ಆರೋಗ್ಯ ವ್ಯವಸ್ಥೆಗೆ ತೆಗೆದಿಡಬೇಕಾದ ಬಜೆಟ್ ನ ಬಗೆಗೆ ಸಂಸತ್ತಿನಲ್ಲೂ ಪರವಿರೋಧಗಳ ಬಿಸಿ ಚರ್ಚೆಗಳು ನಡೆಯುತ್ತದೆ. ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಭವಿಷ್ಯ ಸುಭದ್ರವೇ ಅಸುರಕ್ಷಿತವೇ ಎನ್ನುವ ಬಗೆಗೆ ಸುದ್ದಿ ಮಾಧ್ಯಮಗಳೂ ತಮ್ಮ ನಿಲುವು ಊಹೆಗಳನ್ನು ಬರೆಯುತ್ತವೆ. ಆರೋಗ್ಯ ವ್ಯವಸ್ಥೆ ಸದ್ಯದಲ್ಲೇ ಮುರಿದು ಬೀಳುವ ಹಂತದಲ್ಲಿದೆ ಎನ್ನುವ ಪುಕಾರುಗಳೂ ದಿಗಿಲಿನಲ್ಲಿ ಓಡಾಡುತ್ತವೆ.
ದಂತವೈದ್ಯಕೀಯ ಚಿಕಿತ್ಸೆಯನ್ನು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಶುರು ಆದ ಕೆಲವು ವರ್ಷಗಳಲ್ಲಿಯೇ ಉಚಿತ ಸೇವೆಗಳ ಪಟ್ಟಿಯಿಂದ ತೆಗೆದಂದಿನಿಂದ ಇತ್ತೀಚೆಗೆ ಕೆಲವು ಬಗೆಯ ವೀಸಾ ಪಡೆದು ಕೆಲಸಕ್ಕೆ ಬರುವವರಿಗೆ ಆರೋಗ್ಯ ಸೇವೆಯ ಶುಲ್ಕವನ್ನೂ ವಿಧಿಸಿದ ತನಕ ಆರೋಗ್ಯ ವ್ಯವಸ್ಥೆಯ ಸ್ವರೂಪ ಸೇವೆಯಲ್ಲಿ ಹಲವು ಬದಲಾವಣೆಗಳು ಆಗಿವೆ, ಇನ್ನೂ ಆಗಲಿಕ್ಕಿವೆ. ಮತ್ತೆ ಅಂತಹ ಬದಲಾವಣೆಗಳ ನಡುವೆಯೇ ಸಮಾನತೆಯ ಬೀಜವನ್ನು ಆರೋಗ್ಯ ಸೇವೆಯಲ್ಲಿ ಬಿತ್ತಿದ “ನ್ಯಾಷನಲ್ ಹೆಲ್ತ್ ಸರ್ವಿಸಸ್” ಈಗ ಎಪ್ಪತ್ತೆರಡು ಸಂವತ್ಸರಗಳನ್ನು ಕಳೆದ ಸಾರ್ಥಕ ಘಳಿಗೆಯಲ್ಲಿದೆ.
ಒಂದು ದೇಶ ತನ್ನ ಜನರ ಆರೋಗ್ಯವನ್ನು ನೋಡುವ ನಿಭಾಯಿಸುವ ರೀತಿಗೆ ಕ್ರಾಂತಿಕಾರಕ ಮಾರ್ಪಾಟನ್ನು ಕೊಟ್ಟ ವ್ಯವಸ್ಥೆ ಇಲ್ಲಿಯ ತನಕದ ಸಫಲತೆ ಸವಿಮೆಲುಕುಗಳ ಜೊತೆಗೆ ಮುಂದಿರುವ ನಿರೀಕ್ಷೆ ಸವಾಲುಗಳ ಸಂಧಿಕಾಲದಲ್ಲಿ ಇದೆ.
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.
Thank you for this research and write up! Yes, NHS is a humane service, where every citizen has access to health related issues. I have come across hundreds of people without any private insurance and solely rely on the system.
Beven’s empathy and foresightedness is humbling and commendable! These are the qualities in a leaders the world needs to make it a better place I guess!